CONNECT WITH US  

ದೇಶ ಒಗ್ಗೂಡಿಸಿದ್ದು ಶ್ರೇಷ್ಠ ಸಂವಿಧಾನ

ರಾಯಚೂರು: ದೇಶದಲ್ಲಿ ಆಗಿ ಹೋದ ಅನೇಕ ಸಂತರು, ಶರಣರು, ಧರ್ಮ ಸಂಸ್ಥಾಪಕರಿಂದ ಆಗದ ಕೆಲಸ ಭಾರತ ಸಂವಿಧಾನ ಮಾಡಿತು. ಎಲ್ಲ ಧರ್ಮ, ಜಾತಿ ಜನರನ್ನು ಒಗ್ಗೂಡಿಸುವ ಕೆಲಸ ಮಾಡಿದ ಸಂವಿಧಾನ ಶ್ರೇಷ್ಠ ಗ್ರಂಥ ಎಂದು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ| ತೋಂಟದ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸರ್ವಜ್ಞ, ಜಸ್ಟಿಸ್‌ ಶಿವರಾಜ ಪಾಟೀಲ ಕಾಲೇಜುಗಳ ಸಹಯೋಗದಲ್ಲಿ ಬುಧವಾರ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ನ್ಯಾ| ಶಿವರಾಜ ಪಾಟೀಲ ಪ್ರತಿಷ್ಠಾನದ ಉದ್ಘಾಟನೆ,  "ಗುಡ್‌ ಮಾರ್ನಿಂಗ್‌ 365' ಪುಸ್ತಕ ಬಿಡುಗಡೆ, ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯ ವಹಿಸಿ ಪೂಜ್ಯರು ಆಶೀರ್ವಚನ ನೀಡಿದರು. 

ಇಲ್ಲಿ ಸಿಗುವಂಥ ಮುಕ್ತ ವಾತಾವರಣ ಬೇರೆ ಯಾವ ದೇಶದಲ್ಲೂ ಇಲ್ಲ. ಬಹುಜನ ಸಂಸ್ಕೃತಿಯನ್ನು ಹೊಂದಿರುವ ದೇಶ ಭಾರತ. ದೇಶದಲ್ಲಿ ಪ್ರಜಾಪ್ರಭತ್ವ ಇರುವ ಕಾರಣಕ್ಕೆ ಯಾವುದೇ ಧರ್ಮ, ಜಾತಿಯವರು ದೇಶದ ಅತ್ಯುನ್ನತ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದರು.

ಪ್ರಪಂಚದ ಇತರ ದೇಶಗಳಲ್ಲಿ ಅಲಿಖೀತ ಸಂವಿಧಾನಗಳಿವೆ. ಅಲ್ಲಿ ಹೆಚ್ಚು ಜನಸಂಖ್ಯೆ ಉಳ್ಳವರೇ ಅಧಿಕಾರ ಹಿಡಿಯಬೇಕು
ಎಂಬ ನಿಯಮಗಳಿವೆ. ಆದರೆ, ನಮ್ಮಲ್ಲಿ ಅತಿ ಕಡಿಮೆ ಜನಸಂಖ್ಯೆ ಇರುವ ಸಿಖ್‌ ಸಮುದಾಯದವರು ಪ್ರಧಾನಿಯಾಗಿದ್ದರು. ಅಲ್ಪಸಂಖ್ಯಾತರು ರಾಷ್ಟ್ರಪತಿಗಳಾಗಿದ್ದರು. ಅದಕ್ಕೆ ಸಂವಿಧಾನವೇ ಕಾರಣ. ದೇಶದಲ್ಲಿ ನಾಯಾಂಗ ವ್ಯವಸ್ಥೆಗೆ ಹೆಚ್ಚಿನ ಮಹತ್ವವಿದೆ.
ಕಾರ್ಯಾಂಗ, ಶಾಸಕಾಂಗ ತಪ್ಪು ಮಾಡಿದಾಗ ನ್ಯಾಯಾಂಗ ತಿದ್ದಿ ಸರಿಪಡಿಸುವ ಗುರುತರ ಹೊಣೆ ಹೊತ್ತಿದೆ ಎಂದರು.

ನ್ಯಾ| ಶಿವರಾಜ ವಿ. ಪಾಟೀಲ ಅವರು ರಚಿಸಿರುವ ಗುಡ್‌ಮಾರ್ನಿಂಗ್‌ 365 ಪುಸ್ತಕವನ್ನು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಬಿಡುಗಡೆ ಮಾಡಿದರು.ಸಂಸ್ಕೃತಿ ಚಿಂತಕ ರಂಜಾನ ದರ್ಗಾ ಮಾತನಾಡಿ, ನ್ಯಾಯಾಂಗ ಕ್ಷೇತ್ರದಲ್ಲಿ ಉತ್ತಮ ಕಾರ್ಯನಿರ್ವಹಣೆ ಮಾಡಿದ ನ್ಯಾ| ಶಿವರಾಜ ಪಾಟೀಲ ಅವರು ಸಾಮಾಜಿಕ ಕಳಕಳಿ ಹೊಂದಿದ್ದಾರೆ. ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ ಸೇವೆಗೆ ಮುಂದಾಗಿರುವುದು ಉತ್ತಮ ಕಾರ್ಯ ಎಂದರು. 

ಅಧ್ಯಕ್ಷತೆ ವಹಿಸಿದ್ದ ಜಸ್ಟಿಸ್‌ ಶಿವರಾಜ ಪಾಟೀಲ ಮಾತನಾಡಿ, ಈ ಪ್ರತಿಷ್ಠಾನ ಎಲ್ಲ ಸಂಘ ಸಂಸ್ಥೆಯಂತಾಗಬಾರದು. ನಿಮ್ಮ
ಸೇವೆ ಮಾತಿನಲ್ಲಿ ಅಲ್ಲದೇ ಕೃತಿಯಲ್ಲಿ ತೋರಿಸಬೇಕು. 

ಹಸಿದವರಿಗೆ ಅನ್ನ, ಬಡವರಿಗೆ ಬಟ್ಟೆ, ಆಪತ್ತಿನಲ್ಲಿರುವವರಿಗೆ ರಕ್ತ ನೀಡುವಂಥ ಕೆಲಸವಾಗಬೇಕು. ನೇತ್ರದಾನದ ಬಗ್ಗೆ
ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು. ಪ್ರತಿಷ್ಠಾನದ ಅಧ್ಯಕ್ಷ ನಿವೃತ್ತ ಜಿಲ್ಲಾ ನ್ಯಾಯಾಧೀಶ ಶೇಖರಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

ದೂರದರ್ಶನ ನಿರ್ದೇಶಕ ಮಹೇಶ ಜೋಶಿ, ಅನ್ನಪೂರ್ಣ ಶಿವರಾಜ ಪಾಟೀಲ, ಸರ್ವಜ್ಞ ಹಾಗೂ ಜಸ್ಟಿಸ್‌ ಶಿವರಾಜ ಪಾಟೀಲ ಕಾಲೇಜಿನ ಸಂಸ್ಥಾಪಕ ಪ್ರೊ| ಚನ್ನಾರೆಡ್ಡಿ ಪಾಟೀಲ ಸೇರಿ ಇತರರು ಉಪಸ್ಥಿತರಿದ್ದರು.

ನ್ಯಾ| ಶಿವರಾಜ ಪಾಟೀಲರು ರಚಿಸಿದ "ಗುಡ್‌ ಮಾರ್ನಿಂಗ್‌ 365' ಕೃತಿಯು ನಿತ್ಯ ಜ್ಞಾನ ಕಿರಣ ಸೂಸುವ ಶಕ್ತಿ ಹೊಂದಿದೆ. ಲೇಖಕರು ತಮ್ಮ ಅನುಭವಗಳನ್ನು ಧಾರೆ ಎರೆದು ಜೀವನದ ಸವಿ ಸೌರಭ ತಿಳಿಸಿದ್ದಾರೆ. ನಿತ್ಯ ಒಂದು ನುಡಿಮುತ್ತಿನ ರೂಪದಲ್ಲಿ ವರ್ಷ ಪೂರ್ತಿ ಜ್ಞಾನ ನೀಡುವ ಪುಸ್ತಕ ಇದಾಗಿದ್ದು, ಇಂಥ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಇಡುವ ಬದಲು ಮಲಗುವ ಕೊಠಡಿಯಲ್ಲಿಟ್ಟುಕೊಳ್ಳಬೇಕು. 
 ಶ್ರೀ ಸಿದ್ಧೇಶ್ವರ ಸ್ವಾಮೀಜಿ, ವಿಜಯಪುರ ಜ್ಞಾನ ಯೋಗಾಶ್ರಮ


Trending videos

Back to Top