CONNECT WITH US  

ನೀರು ಕಾಣದ ಕಾಲುವೆ

ಸಿರವಾರ: ತುಂಗಭದ್ರಾ ಎಡದಂಡೆ ನಾಲೆಯ ನಂ.4ನೇ ವಿಭಾಗಕ್ಕೆ ಎಂಜಿನಿಯರ್‌ ಮತ್ತು ಸಿಬ್ಬಂದಿ ಕೊರತೆಯಿಂದ ಉಪ ಕಾಲುವೆಗಳಿಗೆ ಸಮರ್ಪಕ ನೀರು ಹರಿಯದ ಪರಿಣಾಮ ಕಾಲುವೆ ವ್ಯಾಪ್ತಿಯ ರೈತರು ಪರದಾಡುವಂತಾಗಿದೆ.

ಪಟ್ಟಣದಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯ 4ನೇ ವಿಭಾಗದ ಮುಖ್ಯ ಕಚೇರಿಯಡಿ ನಾಲ್ಕು ಉಪ ವಿಭಾಗಗಳಿವೆ. ಇದರಲ್ಲಿ ಸಿರವಾರ, ಕವಿತಾಳ, ಕೊಕ್ಲೃಕಲ್‌ ಮತ್ತು ಮಾನ್ವಿಯಲ್ಲಿ ಉಪ ವಿಭಾಗ ಕಚೇರಿಗಳಿವೆ. ಒಟ್ಟು 4ನೇ ಮುಖ್ಯ ವಿಭಾಗ ಮತ್ತು ನಾಲ್ಕು ಉಪ ವಿಭಾಗಗಳು ಸೇರಿ 39 ಎಂಜಿನಿಯರ್‌ ಗಳ ಹುದ್ದೆಗಳಿವೆ. ಆದರೆ ಒಬ್ಬ ಮುಖ್ಯ ಕಾರ್ಯಪಾಲಕ ಎಂಜಿನಿಯರ್‌ ಇದ್ದು, ಮೂವರು ಸಹಾಯಕ ಎಂಜಿನಿಯರ್‌ಗಳು ಎರವಲು ಸೇವೆ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ.

ಇನ್ನುಳಿದ ಹಿರಿಯ, ಕಿರಿಯ, ಸಹಾಯಕ ಎಂಜಿನಿಯರ್‌ಗಳ 35 ಹುದ್ದೆಗಳು ಖಾಲಿ ಇವೆ. ಜೊತೆಗೆ ಕಚೇರಿಗಳ ಅಧೀಕ್ಷಕರು, ಲೆಕ್ಕ ಸಹಾಯಕ, ಕಂದಾಯ, ಬೆರಳಚ್ಚುಗಾರ, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ಸೇರಿ ಹಲವಾರು ಹುದ್ದೆಗಳು ಖಾಲಿ ಇವೆ. ಇದರಿಂದ ಕಾಲುವೆಗಳ ದುರಸ್ತಿ, ನಿರ್ವಹಣೆಯಲ್ಲಿ ನೀರಾವರಿ ಇಲಾಖೆ ವಿಫಲವಾಗಿದ್ದು, ಕಾಲುವೆಗೆ ನೀರು ಹರಿಸಿದರೂ ಕೊನೆ ಭಾಗಕ್ಕೆ ತಲುಪುತ್ತಿಲ್ಲ. ಇದರಿಂದ ರೈತರು ಅತ್ತ ಮಳೆಯೂ ಇಲ್ಲದೇ, ಇತ್ತ ಕಾಲುವೆ ನೀರು ನಿಲ್ಲದೇ ಕಣ್ಣೀರು ಸುರಿಸುವಂತಾಗಿದೆ.

ನಾಲೆಗಳಲ್ಲಿ ಹೂಳು: ಕೆಳ ಭಾಗದ ನಾಲೆಗಳಲ್ಲಿ ಹೂಳು ತುಂಬಿದೆ. ಜಾಲಿ ಮುಳ್ಳಿನ ಗಿಡ, ಕಸಕಡ್ಡಿ ಬೆಳೆದಿವೆ. ಕಾಲುವೆಗಳ ಗೋಡೆಗಳು ಕುಸಿದಿವೆ. ಕಾಲುವೆ ದುರಸ್ತಿ, ಜಂಗಲ್‌ ಕಟಿಂಗ್‌, ಕಾಲುವೆ ಹೂಳು ತೆರವುಗೊಳಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷé ವಹಿಸುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗಳಿಗೆ ನೀರು ಹರಿಸಲು ಆರಂಭಿಸಿ ತಿಂಗಳಾಗುತ್ತ ಬಂದರೂ ಕೆಳಭಾಗಕ್ಕೆ ಒಂದು ಹನಿ ನೀರೂ ತಲುಪಿಲ್ಲ. ಮಳೆ ಇಲ್ಲದೆ ಕಂಗಾಲಾಗಿರುವ ರೈತನಿಗೆ ನಾಲೆಗಳಿಗೆ ನೀರು ಮುಟ್ಟದಿರುವುದು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ನಾಲೆಯ ಮೇಲ್ಭಾಗದ ಪ್ರಭಾವಿ ರೈತರು, ರಾಜಕೀಯ ಮುಖಂಡರು ಮತ್ತು ಅಧಿಕಾರಿಗಳ ಮಿಲಾಪಿ, ಸ್ವಹಿತಾಸಕ್ತಿಯಿಂದಾಗಿ ಹೆಚ್ಚಿನ ಪ್ರಮಾಣದ ನೀರನ್ನು ಅಕ್ರಮವಾಗಿ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಕಾಲುವೆ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಈಗಾಗಲೇ ಕೆಳ ಭಾಗದ ರೈತರ ಹೊಲಗಳಿಗೆ ನೀರು ಹರಿಯಲು ಮುಖ್ಯ ನಾಲೆಯ 69ನೇ ಮೈಲಿನಲ್ಲಿ ಕನಿಷ್ಠ 8.5 ಅಡಿ ನೀರು ಹರಿಸಬೇಕು. ಆದರೆ ಈಗ 6 ಅಡಿಗೂ ಕಡಿಮೆ ನೀರು ಹರಿಸಲಾಗುತ್ತಿದೆ. ಇದಕ್ಕೆ ಮೇಲ್ಛಾಗದಲ್ಲಿ ಅಕ್ರಮವಾಗಿ ನೀರು ಬಳಕೆಯಾಗುತ್ತಿರುವುದೇ ಪ್ರಮುಖ ಕಾರಣವಾಗಿದೆ.

ಕಟ್ಟಡ ಶಿಥಿಲ: ತುಂಗಭದ್ರಾ ಎಡದಂಡೆ ನಾಲೆಯ 4ನೇ ವಿಭಾಗದ ಮುಖ್ಯ ಕಚೇರಿ ಕಟ್ಟಡವು ಸಂಪೂರ್ಣ ಶಿಥಿಲಾವಸ್ಥೆ
ತಲುಪಿದ್ದು, ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಜೀವ ಭಯದಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ. ಹೀಗಾಗಿ ಅಧಿಕಾರಿಗಳು, ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ.

ಜಿಲ್ಲೆಯ ಜನಪ್ರತಿನಿಧಿಗಳು ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತ ಪರಸ್ಪರ ಕೆಸರೆರೆಚಾಟ ಮಾಡುತ್ತಿದ್ದಾರೆ ವಿನಃ ರೈತರ ಬಗ್ಗೆ ನೈಜ ಕಳಕಳಿ ತೋರುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ನೀರಾವರಿ ವಿಷಯವನ್ನೇ ಪ್ರಮುಖ ಅಸ್ತ್ರ ಮಾಡಿಕೊಂಡು ರೈತರನ್ನು ಭಾವನಾತ್ಮಕವಾಗಿ ಸೆಳೆಯುವ ಜಿಲ್ಲೆಯ ರಾಜಕಾರಣಿಗಳು ತಮ್ಮ ಗದ್ದುಗೆ ಭದ್ರಪಡಿಸಿಕೊಳ್ಳುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ರಾಜಕಾರಣಿಗಳು ತಮ್ಮ ವೈಯಕ್ತಿಕ ಹಿತಾಸಕ್ತಿ, ರಾಜಕೀಯ ಬದಿಗಿಟ್ಟು ಒಟ್ಟಾಗಿ ರೈತರ ಜಮೀನುಗಳಿಗೆ ಸಮರ್ಪಕ ನೀರು ಹರಿಯುವಂತಾಗಲು ಸರ್ಕಾರದ ಮೇಲೆ ಒತ್ತಡ ಹೇರಬೇಕು. ನೀರಾವರಿ ಇಲಾಖೆಯಲ್ಲಿ ಖಾಲಿ ಇರುವ ಎಂಜಿನಿಯರ್‌, ಸಿಬ್ಬಂದಿ ನೇಮಕಕ್ಕೆ ಮುಂದಾಗಬೇಕು. ನೂತನ ಕಟ್ಟಡ ಮಂಜೂರಾತಿಗೆ ಕ್ರಮ ವಹಿಸಬೇಕೆಂದು ರೈತರು ಆಗ್ರಹಿಸಿದ್ದಾರೆ. 

ನೀರಾವರಿ ವಿಭಾಗಕ್ಕೆ ಅಗತ್ಯ ಎಂಜಿನಿಯರ್‌ಗಳು ಇಲ್ಲದಿರುವುದರಿಂದ ಸಮರ್ಪಕ ನೀರು ಹರಿಯುತ್ತಿಲ್ಲ. ಪರಿಣಾಮ ಕಾಲುವೆ ಕೆಳ ಭಾಗದ ರೈತರು ಪ್ರತಿ ವರ್ಷ ರೈತರು ಪ್ರತಿಭಟನೆ ನಡೆಸಿ ನೀರು ಪಡೆಯುವ ಅನಿವಾರ್ಯತೆ ನಿರ್ಮಾಣವಾಗಿದೆ.
 ರಾಜಪ್ಪಗೌಡ, ಗಣದಿನ್ನಿ ರೈತ.

ಸರ್ಕಾರ, ರಾಜಕಾರಣಿಗಳು ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತಾರೆ. ಆದರೆ ರೈತರಿಗೆ ಅಗತ್ಯ ನೀರು, ಸೌಕರ್ಯ ಒದಗಿಸದೇ ರೈತ ಆತ್ಮಹತ್ಯೆ ಮಾಡಿಕೊಳ್ಳುವಂತ ಪರಿಸ್ಥಿತಿ ತಂದೊಡ್ಡಿದ್ದಾರೆ. ಇದರಿಂದ ಯುವಕರು ಕೃಷಿಯಿಂದ
ವಿಮುಖರಾಗುವಂತಾಗಿದೆ.
 ಅಮರೇಶಪ್ಪಗೌಡ, ಸಿರವಾರ ರೈತ

„ಪಿ. ಕೃಷ್ಣ

Trending videos

Back to Top