CONNECT WITH US  

ಏಳು ಸ್ಥಳೀಯ ಸಂಸ್ಥೆಗಳಲ್ಲಿ 716 ಅಭ್ಯರ್ಥಿಗಳು ಕಣದಲಿ

ರಾಯಚೂರು: ಸ್ಥಳೀಯ ಸಂಸ್ಥೆ ಚುನಾವಣೆಗೆ ಅಂತಿಮ ಹಣಾಹಣಿ ಏರ್ಪಟ್ಟಿದ್ದು, ರಾಯಚೂರು ನಗರಸಭೆ ಸೇರಿ ಜಿಲ್ಲೆಯ ಏಳು ಸ್ಥಳೀಯ ಸಂಸ್ಥೆಗಳಲ್ಲಿ 716 ಅಭ್ಯರ್ಥಿಗಳು ಅಖಾಡದಲ್ಲಿ ಉಳಿದಿದ್ದಾರೆ. ಸಿಂಧನೂರಿನಲ್ಲಿ ಇಬ್ಬರು, ದೇವದುರ್ಗದಲ್ಲಿ ಒಬ್ಬರು ಅವಿರೋಧ ಆಯ್ಕೆಯಾಗಿದ್ದಾರೆ.

ನಾಮಪತ್ರ ಹಿಂಪಡೆಯಲು ಗುರುವಾರ ಕೊನೆ ದಿನವಾದ್ದರಿಂದ 137 ಜನ ಆಕಾಂಕ್ಷಿಗಳು ಸ್ಪರ್ಧೆಯಿಂದ ಹಿಂದೆ ಸರಿದರು. ರಾಯಚೂರು ನಗರಸಭೆಯ 35 ವಾರ್ಡ್‌ಗಳಿಗೆ 295 ನಾಮಪತ್ರ ಸಲ್ಲಿಕೆಯಾಗಿದ್ದು, 72 ಜನ ಹಿಂಪಡೆದಿದ್ದು, 223 ಕಣದಲ್ಲಿ ಉಳಿದಿದ್ದಾರೆ. ಸಿಂಧನೂರಿನ 31 ವಾರ್ಡ್‌ಗೆ 123 ನಾಮಪತ್ರ ಸಲ್ಲಿಕೆಯಾಗಿದ್ದು, 18 ಜನ ಹಿಂಪಡೆದಿದ್ದಾರೆ. 105 ಜನ ಕಣದಲ್ಲಿ ಉಳಿದಿದ್ದಾರೆ. ಅದರಲ್ಲಿ ಕಾಂಗ್ರೆಸ್‌ನಿಂದ 27 ವಾರ್ಡ್‌ಗೆ ಸ್ಪರ್ಧಿಸಿದ್ದ ಕೆ.ರಾಜಶೇಖರ, 28ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಲಕ್ಷ್ಮೀಬಂಗಿ ತಿಮ್ಮಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾನ್ವಿ ಪುರಸಭೆಯ 27 ವಾರ್ಡ್‌ಗಳಿಗೆ 141 ಜನ ನಾಮಪತ್ರ ಸಲ್ಲಿಸಿದ್ದರು. ಅರದಲ್ಲಿ 16 ಜನ ಹಿಂಪಡೆದಿದ್ದು, 125 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಲ್ಲೂ ಕೂಡ ಪರಿಶಿಷ್ಟ ಪಂಗಡಕ್ಕೆ ಮೀಸಲಾದ 19ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಸಾಬಮ್ಮ ಅವಿರೋಧ ಆಯ್ಕೆಯಾಗಿದ್ದಾರೆ.

ಇನ್ನೂ ಲಿಂಗಸುಗೂರಿನ 23 ವಾರ್ಡ್‌ಗಳಿಗೆ 93 ಜನ ನಾಮಪತ್ರ ಸಲ್ಲಿಸಿದ್ದು, 16 ಜನ ಹಿಂಪಡೆದಿದ್ದಾರೆ. 77 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮುದಗಲ್ಲ ಪುರಸಭೆಯ 23 ವಾರ್ಡ್‌ಗಳಿಗೆ 59 ಜನ ನಾಮಪತ್ರ ಸಲ್ಲಿಸಿದ್ದು, ಯಾರು ಕಣದಿಂದ ಹಿಂದೆ ಸರಿದಿಲ್ಲ. ಹಟ್ಟಿ ಪಟ್ಟಣ ಪಂಚಾಯಿತಿಯ 13 ವಾರ್ಡ್‌ಗಳಿಗೆ 78 ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ 12 ಜನ ಹಿಂಪಡೆದಿದ್ದು, 66 ಜನ ಕಣದಲ್ಲಿ ಉಳಿದಿದ್ದಾರೆ. ಒಟ್ಟಾರೆ ಜಿಲ್ಲೆಯ ಏಳು ಸ್ಥಳೀಯ ಸಂಸ್ಥೆಗಳಿಗೆ 959 ನಾಮಪತ್ರ ಸಲ್ಲಿಕೆಯಾಗಿದ್ದವು. ಅದರಲ್ಲಿ 106 ನಾಮಪತ್ರ ತಿರಸ್ಕೃತವಾಗಿದ್ದರು. ಅಂತಿಮವಾಗಿ 853 ನಾಮಪತ್ರ ಅಂಗೀಕೃತವಾಗಿದ್ದವು. ಅವುಗಳಲ್ಲಿ 137 ನಾಮಪತ್ರ ಹಿಂಪಡೆದಿದ್ದು, 716 ಅಭ್ಯರ್ಥಿಗಳು ಅಂತಿಮ ಹಣಹಣಿಯಲ್ಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಅಚ್ಚರಿ ಎಂದರೆ ಪ್ರಮುಖ ಪಕ್ಷಗಳಾದ ಬಿಜೆಪಿ, ಜೆಡಿಎಸ್‌ ಸಾಕಷ್ಟು ಕಡೆ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿಲ್ಲ. 175 ವಾರ್ಡ್‌ಗಳಲ್ಲಿ ಬಿಜೆಪಿ 140 ಸ್ಥಾನದಲ್ಲಿ ಸ್ಪರ್ಧಿಸಿದರೆ, ಜೆಡಿಎಸ್‌ 155 ಸ್ಥಾನದಲ್ಲಿ ಮಾತ್ರ ಸ್ಪರ್ಧಿಸಿದೆ. ಟಿಕೆಟ್‌ ವಂಚಿತ ಅನೇಕ ಮುಖಂಡರು ಈಗಾಗಲೇ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದು, ಒಳ ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಿಂಧನೂರಿನಲ್ಲಿ ಜೆಡಿಎಸ್‌ನ ವೆಂಕಟರಾವ್‌ ನಾಡಗೌಡ ಸಚಿವರಿದ್ದಾಗ್ಯೂ, ಎರಡು ವಾರ್ಡ್‌ಗಳಲ್ಲಿ ಕಾಂಗ್ರೆಸ್‌ನ ಅವಿರೋಧವಾಗಿ ಆಯ್ಕೆಯಾದರೆ, ದೇವದುರ್ಗದಲ್ಲಿ ಬಿಜೆಪಿ ಶಾಸಕರಿದ್ದು, ಪಕ್ಷೇತರ ಅಭ್ಯರ್ಥಿ ಅವಿರೋಧ ಆಯ್ಕೆಯಾಗಿದೆ. ಆದರೆ, ಕಾಂಗ್ರೆಸ್‌ ಮಾತ್ರ 3 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ.


Trending videos

Back to Top