CONNECT WITH US  

ಅಡುಗೆ ಜತೆ ಪಾಠ ಮಾಡುವ ಹಾಸ್ಟೆಲ್‌ ಕೆಲಸಗಾರ!

ಹಟ್ಟಿ ಚಿನ್ನದ ಗಣಿ: ಸಮೀಪದ ಅನ್ವರಿ ಗ್ರಾಮದ ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ವಸತಿ ನಿಲಯದಲ್ಲಿ ಅಡುಗೆದಾರರಾಗಿ ನೇಮಕಗೊಂಡ ಯುವಕ ನಿತ್ಯ ಸಂಜೆ ನಿಲಯದ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ನೀಡುವ ಮೂಲಕ ಗ್ರಾಮಸ್ಥರ ಗಮನ ಸೆಳೆದಿದ್ದಾರೆ ಎರಡು ತಿಂಗಳ ಹಿಂದೆಯಷ್ಟೇ ಅನ್ವರಿ ಗ್ರಾಮದ ಹಿಂದುಳಿದ ವರ್ಗದ ಮೆಟ್ರಿಕ್‌ ಪೂರ್ವ ವಸತಿ ನಿಲಯಕ್ಕೆ ಅಡುಗೆದಾರರಾಗಿ ಚನ್ನಬಸವ ಕಮತರ ನೇರ ನೇಮಕಾತಿ ಮೂಲಕ ಆಯ್ಕೆಯಾಗಿದ್ದಾರೆ.

ಬಿಎ ಪದವಿವರೆಗೆ ಓದಿದ ಇವರು 10ನೇ ತರಗತಿ ಶಿಕ್ಷಣದ ಆಧಾರದ ಮೇಲೆ ನೇಮಕವಾಗಿದ್ದಾರೆ. ನಿಲಯದ ಮಕ್ಕಳಿಗೆ ಅಡುಗೆ ತಯಾರಿಸುವುದು ಇವರ ಜವಾಬ್ದಾರಿ. ಅಡುಗೆ ಕೆಲಸದ ಜತೆಗೆ ತಾವು ಪಡೆದ ಪದವಿ ಸದುಪಯೋಗ ಮಕ್ಕಳಿಗೆ ಆಗಲಿ ಎಂದು ವೈಯಕ್ತಿಕ ಆಸಕ್ತಿಯಿಂದ ನಿಲಯದ
ಮಕ್ಕಳಿಗೆ ನಿತ್ಯ ಸಂಜೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ನೀಡುತ್ತಿದ್ದಾರೆ. ನವೋದಯ, ಮೊರಾರ್ಜಿ ದೇಸಾಯಿ, ಆದರ್ಶ, ಸೈನಿಕ, ರಾಣಿ ಚೆನ್ನಮ್ಮ ಸೇರಿ ಇತರೆ ವಸತಿ ಶಾಲೆಗಳಿಗೆ ಮಕ್ಕಳು ಪ್ರವೇಶ ಗಿಟ್ಟಿಸಬೇಕಾದರೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕು.

ಇಂಥ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು, ಅದಕ್ಕಾಗಿ ಯಾವ ರೀತಿ ಸಜ್ಜುಗೊಳ್ಳಬೇಕು ಎಂಬುದರ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ಮಕ್ಕಳು ಸಹ ಉತ್ಸಾಹದಿಂದ ತರಬೇತಿ ಪಡೆಯುತ್ತಿದ್ದು, ವಸತಿ ನಿಲಯದ ಬಾಲಕರ ಜತೆ ಗ್ರಾಮದ ಪ್ರಾಥಮಿಕ ಶಾಲೆಗಳ ಬಾಲಕಿಯರೂ ತರಬೇತಿಗೆ ಹಾಜರಾಗುತ್ತಿದ್ದಾರೆ. ವಸತಿ ನಿಲಯಕ್ಕೆ ಆಗಮಿಸಿದಾಗಿನಿಂದ ಮಕ್ಕಳಿಗೆ ವಿಶೇಷ ತರಗತಿ ನಡೆಸುತ್ತಿರುವ ಚನ್ನಬಸವ ಕಮತರ ಸೇವೆಯನ್ನು ಗ್ರಾಮಸ್ಥರು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಅಡುಗೆದಾರ ಚನ್ನಬಸವ ಕಮತರ ಅವರು ಅಡುಗೆ ಕೆಲಸದ ಜತೆಗೆ ಮಕ್ಕಳಿಗೆ ತರಬೇತಿ ನೀಡುತ್ತಿರುವುದು ಖುಷಿ ವಿಚಾರ ಎನ್ನುತ್ತಾರೆ ಗ್ರಾಮಸ್ಥರು.

ನಾನು ಹುಟ್ಟಿ ಬೆಳೆದಿದ್ದು ಗ್ರಾಮೀಣ ಪ್ರದೇಶದಲ್ಲಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಗ್ರಾಮೀಣದಲ್ಲಿ ಯಾವ ಸೌಲಭ್ಯಗಳೂ ಸಿಗುವುದಿಲ್ಲ. ನಾನು ಕಲಿತಿದ್ದನ್ನು ತಕ್ಕಮಟ್ಟಿಗಾದರೂ ಮಕ್ಕಳಿಗೆ ಹೇಳಿಕೊಟ್ಟರೆ ಅವರಿಗೆ ಅನುಕೂಲವಾಗಲಿದೆ ಎಂಬ ಉದ್ದೇಶದಿಂದ ನನ್ನ ಕೆಲಸದ ಜತೆಗೆ ಬೋಧನೆ ಶುರು ಮಾಡಿದ್ದೇನೆ. ವಾರ ಪೂರ್ತಿ ಪಾಠ ಮಾಡಿ ರವಿವಾರ ಕಿರು ಪರೀಕ್ಷೆ ನಡೆಸಿ ಮಕ್ಕಳ ಬೌದ್ಧಿಕ ಜ್ಞಾನ ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇನೆ.  ಚನ್ನಬಸವ ಕಮತರ, ಅಡುಗೆದಾರ, ಹಿಂದುಳಿದ ವರ್ಗ ಮೆಟ್ರಿಕ್‌ ಪೂರ್ವ ವಸತಿ ನಿಲಯ, ಅನ್ವರಿ

ಹಾಸ್ಟೆಲ್‌ನಲ್ಲಿ ಸರ್‌ ಪ್ರತಿ ದಿನ ಕ್ಲಾಸ್‌ ತೆಗೆದುಕೊಳ್ಳುತ್ತಾರೆ. ನಾವು ನಿಲಯಕ್ಕೆ ಸೇರದಿದ್ದರೂ ನಾವು ಬರುತ್ತೇವೆಂದಾಗ ಇಲ್ಲ ಎನ್ನದೆ ನಮ್ಮನ್ನು ಸೇರಿಸಿಕೊಂಡಿದ್ದಾರೆ. ಶಾಲೆ ಬಿಟ್ಟ ನಂತರ ಸುಮ್ಮನೆ ತಿರುಗಾಡುತ್ತಿದ್ದ ನಮಗೆ ಸರ್‌ ಕ್ಲಾಸ್‌ನಿಂದ ಅಭ್ಯಾಸಕ್ಕೆ ಅನುಕೂಲವಾಗಿದೆ. ನಮಗೆ ಗೊತ್ತಿರದ ವಿಷಯಗಳನ್ನು ಮನದಟ್ಟಾಗುವಂತೆ ಹೇಳಿಕೊಡುತ್ತಾರೆ.
 ರೇಣುಕಾ, ವಿದ್ಯಾರ್ಥಿನಿ, ಅನ್ವರಿ 

ವಸತಿ ನಿಲಯದ ಅಡುಗೆದಾರ ತಮ್ಮ ಕೆಲಸದ ಜತೆ ನಿಲಯದ ಮಕ್ಕಳಲ್ಲದೆ ಗ್ರಾಮದ ಇತರೆ ಮಕ್ಕಳಿಗೂ ಪರೀಕ್ಷೆ ಎದುರಿಸುವ ವಿಷಯಗಳನ್ನು ಬೋಧಿಸುತ್ತಿರುವುದು ಸಂತಸ ತಂದಿದೆ. ಇವರ ಕಾರ್ಯ ಗ್ರಾಮದ ಮಕ್ಕಳ ಓದಿಗೆ ಅನುಕೂಲವಾಗಲಿದೆ.  
ಅಯ್ಯನಗೌಡ, ಗ್ರಾಪಂ ಮಾಜಿ ಅಧ್ಯಕ್ಷ, ಅನ್ವರಿ.

„ಅಮರೇಶ ನಾಯಕ

Trending videos

Back to Top