CONNECT WITH US  

ಭ್ರಷ್ಟಾಚಾರ ನಿರ್ಮೂಲನೆಗೆ ಸಹಕರಿಸಿ

ದೇವದುರ್ಗ: ಸರ್ಕಾರಿ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರ ನಿರ್ಮೂಲನೆಗೆ ವಿದ್ಯಾರ್ಥಿಗಳ ಸಹಕಾರ ಬಹಳ ಅವಶ್ಯವಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿ ಶ್ರೀಧರ ದೊಡ್ಡಿ ಹೇಳಿದರು.

ರಾಯಚೂರು ಭ್ರಷ್ಟಾಚಾರ ನಿಗ್ರಹ ದಳ ವತಿಯಿಂದ ಪಟ್ಟಣದ ಬಸವ ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆದ ಭ್ರಷ್ಟಾಚಾರ ನಿರ್ಮೂಲನಾ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿವಿಧ ಕೆಲಸ ಕಾರ್ಯಗಳ ನಿಮಿತ್ತ ಉಚಿತವಾಗಿ ಮಾಡುವ ಕೆಲಸಗಳಿಗೆ ಹಣದ ಬೇಡಿಕೆ ಇಡುವ ಸರ್ಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ, ದೂರು ನೀಡಿ ಅಥವಾ ದೂರವಾಣಿ ಮೂಲಕ ಮಾಹಿತಿ ನೀಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಈಗಾಗಲೇ ಜಿಲ್ಲಾದ್ಯಂತ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸಲಾಗಿದೆ. ರಾಯಚೂರು, ದೇವದುರ್ಗ, ಮಾನ್ವಿ, ಮಸ್ಕಿ, ಸಿಂಧನೂರು, ಲಿಂಗಸುಗೂರು ಸೇರಿ ಇತರೆ ತಾಲೂಕಿನಲ್ಲಿ ಹಲವು ಭ್ರಷ್ಟಾಚಾರ ಕುರಿತಾಗಿ ಅಧಿಕಾರಿಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು. 

ಬಡವರಿಗೆ ನ್ಯಾಯಬದ್ಧವಾಗಿ ಸೌಲಭ್ಯ ದೊರಕಿಸಲು ಮತ್ತು ಲಂಚ ಇತರೆ ಬೇಡಿಕೆಯಂತಹ ಭ್ರಷ್ಟಾಚಾರ ನಿಗ್ರಹಕ್ಕಾಗಿ ಸರಕಾರ ಭ್ರಷ್ಟಾಚಾರ ನಿಗ್ರಹ ದಳ ರಚಿಸಿದೆ. ಭ್ರಷ್ಟಾಚಾರ ತಡೆ ಕುರಿತು ಕರಪತ್ರಗಳನ್ನು ಹಂಚಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸರಕಾರಿ ನೌಕರರು ಹುದ್ದೆ, ಅಧಿಕಾರ ದುರ್ಬಳಕೆ ಮಾಡಿಕೊಂಡು ಹಣ ಗಳಿಕೆ ಮಾಡುವುದು, ಇನ್ನಿತರ ಅವ್ಯವಹಾರಗಳನ್ನು ಮಾಡುವುದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988 ಅನ್ವಯ ಅಪರಾಧವಾಗುತ್ತದೆ ಎಂದರು.

ವಿದ್ಯಾರ್ಥಿಗಳು ಪದವಿ ಮುಗಿದ ನಂತರ ಉನ್ನತ ಹುದ್ದೆ ಅಲಂಕರಿಸಿದರೆ ಭ್ರಷ್ಟಾಚಾರ ರಹಿತವಾಗಿ ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ಮೂಲಕ ಶಾಲಾ-ಕಾಲೇಜಿಗೆ ಕೀರ್ತಿ ತರಬೇಕು. ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ವಿದ್ಯಾರ್ಥಿಗಳು, ಸಾರ್ವಜನಿಕರು ಸಂಕಲ್ಪ ಮಾಡಬೇಕಾಗಿದೆ ಎಂದು ಹೇಳಿದರು. ಪ್ರಾಚಾರ್ಯ ಶಿವಗೇನಿ, ಉಪನ್ಯಾಸಕ ರಮೇಶ ರಾಮನಾಳ, ಗುಂಡಪ್ಪ, ನೂರಾರು ವಿದ್ಯಾರ್ಥಿಗಳು ಇದ್ದರು.


Trending videos

Back to Top