CONNECT WITH US  

ಗೆಲ್ಲಲು ಅಭ್ಯರ್ಥಿಗಳ ನಾನಾ ತಂತ್ರ

ಹಟ್ಟಿ ಚಿನ್ನದ ಗಣಿ: ಹಟ್ಟಿ ಗ್ರಾಮ ಪಂಚಾಯ್ತಿಯಿಂದ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದ ನಂತರ ಪ್ರಥಮ ಬಾರಿಗೆ ನಡೆಯುತ್ತಿರುವ ಪಪಂ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಅಭಿವೃದ್ಧಿಗಳು ಮತದಾರರನ್ನು ಸೆಳೆಯಲು ವಿವಿಧ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.

ಕೆಲ ವಾರ್ಡ್‌ಗಳಲ್ಲಿ ತಮ್ಮ ಕೈಯಿಂದಲೇ ಹಣ ಹಾಕಿ ರಸ್ತೆಗೆ ಮರಂ ಹಾಕಿಸುವುದು, ಬೀದಿ ದೀಪಗಳ ಅಳವಡಿಕೆ,
ಕೊಳವೆಬಾವಿ ದುರಸ್ತಿ ಸೇರಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಿ ಮತದಾರರನ್ನು ಸೆಳೆಯುತ್ತಿದ್ದರೆ ಮತ್ತೆ ಕೆಲವೆಡೆ ಮತದಾರರಿಗೆ ವಿವಿಧ ಆಮಿಷವೊಡ್ಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. 

ಎಲ್ಲೆಲ್ಲಿ ಯಾವ ಕೆಲಸ: ಪಟ್ಟಣದ 10ನೇ ವಾರ್ಡ್‌ನಲ್ಲಿ ಕೆಟ್ಟ ಕೊಳವೆಬಾವಿಗೆ ಮೋಟಾರ್‌ ಅಳವಡಿಸಿ, ನೀರು ಸಂಗ್ರಹ ಗುಮ್ಮಿ ಅಳವಡಿಸಲಾಗಿದೆ. ಇದೇ ವಾರ್ಡ್‌ನ ಪಾಮನಕಲ್ಲೂರು ಕ್ರಾಸ್‌ ಬಳಿ ಹೊಸ ಕೊಳವೆಬಾವಿ ಕೊರೆಸಲಾಗಿದೆ. 6ನೇ ವಾರ್ಡ್‌ನ ಜಾಮೀಯಾ ಮಸೀದಿ ಹಿಂದುಗಡೆ ರಸ್ತೆಗೆ 30 ಟ್ರಿಪ್‌ ಮರಂ ಹಾಕಿದ್ದು, ಬೀದಿ ದೀಪ ಕೂಡ ಅಳವಡಿಸಲಾಗಿದೆ. 8ನೇ ವಾರ್ಡಿನ ಹಟ್ಟಿ ಹೊಸೂರಿನಲ್ಲಿ 50 ಟ್ರಿಪ್‌ ಮರಂ ಹಾಕಿಸಿದ್ದಾರೆ.

ಸಿದ್ಧಾರೂಢ ಮಠದ ಹಿಂದುಗಡೆ ಮತದಾರರಿಗೆ ಅಕ್ಕಿ ಚೀಲ ವಿತರಿಸಲಾಗಿದೆ, 17ನೇ ವಾರ್ಡ್‌ನಲ್ಲಿ ಮಹಿಳಾ ಮತದಾರರಿಗೆ ಮಾಂಗಲ್ಯದಲ್ಲಿನ ಮುತ್ತುಗಳನ್ನು ವಿತರಿಸಲಾಗಿದೆ ಎಂಬ ಮಾತು ಸಾರ್ವಜನಿಕರಿಂದ ಕೇಳಿಬರುತ್ತಿವೆ. 

ನೀತಿ ಸಂಹಿತೆ ಉಲ್ಲಂಘನೆ: ಗೆಲ್ಲುವ ಭರದಲ್ಲಿ ಅಭ್ಯರ್ಥಿಗಳು ಮತದಾರರಿಗೆ ಆಮಿಷವೊಡ್ಡುವುದು, ಅಭಿವೃದ್ಧಿ ಕಾರ್ಯ
ಮಾಡಿಸುವ ಮೂಲಕ ನಿತ್ಯ ಸಂಹಿತೆ ಉಲ್ಲಂಘಿಸುತ್ತಿದ್ದರೂ ಚುನಾವಣಾಧಿಕಾರಿಗಳು ನಿರ್ಲಕ್ಷ್ಯಾ ವಹಿಸಿದ್ದಾರೆ ಎಂಬ
ಆರೋಪಗಳು ಕೇಳಿಬರುತ್ತಿವೆ.

ಪಪಂ ಅನುದಾನದಲ್ಲಿ ಮಾಡಿಲ್ಲ: ಈ ಕುರಿತು ಪಪಂ ಮುಖ್ಯಾಧಿಕಾರಿ ಮಲ್ಲೇಶ ಜೆ. ಅಕ್ಕರಕಿ ಅವರಿಗೆ ಸಂಪರ್ಕಿಸಿದರೆ ಪಂಚಾಯ್ತಿ ಅನುದಾನದಿಂದ ಯಾವುದೇ ಕಾಮಗಾರಿ ಮಾಡಿಸಿಲ್ಲ. ಅಭ್ಯರ್ಥಿಗಳು ಮಾಡಿಸಿದರೆ ನಾವೇನು ಮಾಡಲಾಗುವುದಿಲ್ಲ. ಅದನ್ನು ಚುನಾವಣಾ ವೀಕ್ಷಕರು ಗಮನಿಸಬೇಕು ಎಂದು ತಿಳಿಸುತ್ತಾರೆ.

ಇನ್ನು ಚುನಾವಣಾಧಿಕಾರಿ ಲೋಕೋಪಯೋಗಿ ಇಲಾಖೆಯ ಎಇಇ ಆಂಜನೇಯ, ತಹಶೀಲ್ದಾರ್‌, ತಾಪಂ ಇಒರನ್ನು ಸಂಪರ್ಕಿಸಿದರೆ ಈ ಬಗ್ಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಒಟ್ಟಾರೆ ಚುನಾವಣಾಧಿಕಾರಿಗಳ ನಿರ್ಲಕ್ಷ್ಯ ಪಪಂ ಚುನಾವಣೆ ಅಭ್ಯರ್ಥಿಗಳಿಗೆ ವರವಾಗಿದೆ. ಚುನಾವಣೆಗೆ ಇನ್ನು ಐದು ದಿನ
ಬಾಕಿ ಇದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮತದಾರರಿಗೆ ಆಮಿಷ ಒಡ್ಡುವ ಸಂಭವಗಳೂ ಇವೆ.

ನೀತಿ ಸಂಹಿತೆ ಮೀರಿ ಅಭ್ಯರ್ಥಿಗಳು ಆಮಿಷವೊಡ್ಡುವುದು, ಅಭಿವೃದ್ಧಿ ಕಾರ್ಯ ನಡೆಸುತ್ತಿರುವುದರ ಬಗ್ಗೆ ನಿರ್ಲಕ್ಷ್ಯ ರಿಟರ್ನಿಂಗ್‌ ಅಧಿಕಾರಿಗಳು ಹಾಗೂ ಮುಖ್ಯಾ ಧಿಕಾರಿಗಳ ವಿರುದ್ಧ ಲಿಖೀತವಾಗಿ ದೂರು ನೀಡಿದರೆ ನಿರ್ದಾಕ್ಷಿಣ್ಯವಾಗಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.
  ಡಾ| ಬಗಾದಿ ಗೌತಮ್‌,  ಜಿಲ್ಲಾಧಿಕಾರಿ, ರಾಯಚೂರು.

Trending videos

Back to Top