CONNECT WITH US  

ಉಳ್ಳಾಗಡ್ಡಿ ಬೆಳೆದ ರೈತರ ಕಣ್ಣಲ್ಲಿ ನೀರು

ಮುದಗಲ್ಲ: ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೊಳವೆಬಾವಿ ಆಶ್ರಯಿಸಿ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದ ಈರುಳ್ಳಿಯನ್ನು ರೈತರು ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕುಸಿದ ಪರಿಣಾಮ ರೈತರು ಕಂಗಾಲಾಗಿದ್ದಾರೆ.

ಈರುಳ್ಳಿ ಬೆಳೆದ ರೈತರಿಗೆ ಮಾಡಿದ ಖರ್ಚು ಕೂಡ ಬಾರದ ರೀತಿಯಲ್ಲಿ ಬೆಲೆ ಕುಸಿದಿದ್ದು, ರೈತರು ಪರದಾಡುವಂತಾಗಿದೆ. ಭೀಕರ ಬರದಿಂದ ಬೆಳೆ ಹಾನಿ ಒಂದೆಡೆಯಾದರೆ ಇನ್ನೊಂದಡೆ ಬೆಲೆ ಕುಸಿತದಿಂದ ರೈತರು ನಷ್ಟ ಅನುಭವಿಸುವಂತಾಗಿದೆ.

ಆಮದಿಹಾಳ, ಕಿಲಾರಹಟ್ಟಿ, ಉಪ್ಪಾರ ನಂದಿಹಾಳ, ಹಡಗಲಿ, ಹಡಗಲಿ ತಾಂಡಾ, ನಾಗಲಾಪುರ, ಪಿಕಳಿಹಾಳ, ವ್ಯಾಕರನಾಳ, ಉಳಮೇಶ್ವರ, ಛತ್ತರ, ಹೆಗ್ಗಾಪುರ, ಹೆಗ್ಗಾಪುರ ತಾಂಡಾ, ಮರಳಿ, ಕನ್ನಾಳ ಸೇರಿ ಅನೇಕ ಗ್ರಾಮಗಳ ರೈತರು ಸಾವಿರಾರು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದಾರೆ. ಜಮೀನುಗಳಲ್ಲಿ ಈರುಳ್ಳಿ ರಾಶಿ ರಾಶಿ ಕಂಡುಬರುತ್ತಿದ್ದು, ರೈತರು ಚೀಲಗಳಲ್ಲಿ ತುಂಬಿ ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ.

ಕಳೆದ ತಿಂಗಳು ಕ್ವಿಂಟಾಲ್‌ಗೆ 1000 ರೂ.ದಿಂದ 1200 ರೂ.ವರೆಗೆ ಇದ್ದ ಬೆಲೆ ಈಗ 700 ರಿಂದ 800 ರೂ.ಗೆ ಕುಸಿದಿದೆ. ಈರುಳ್ಳಿ ನಾಟಿ ಮಾಡಿದಾಗಿನಿಂದ ರಾಶಿ ಮಾಡುವವರೆಗಿನ ಖರ್ಚು ಲೆಕ್ಕ ಹಾಕಿದರೆ ರೈತರಿಗೆ ಲಾಭಕ್ಕಿಂತ ಖರ್ಚು ಮೂರು ಪಟ್ಟು ಹೆಚ್ಚಾಗುತ್ತಿದೆ. ಪ್ರತಿ ಎಕರೆ ಈರುಳ್ಳಿ ಬೆಳೆಯಲು 25 ರಿಂದ 30 ಸಾವಿರ ರೂ. ವರೆಗೆ ಖರ್ಚಾಗಿದ್ದು, ಈಗ ಬೆಲೆ ಕುಸಿದಿದ್ದರಿಂದ ಬೆಳೆಗೆ ಸಾಲ ಮಾಡಿ ಹಾಕಿದ ಹಣ ಸಿಗದ ಸ್ಥಿತಿ ಬಂದಿದೆ ಎಂದು ನಾಗಲಾಪುರ ಗ್ರಾಮದ ರೈತ ಶಿವಗ್ಯಾನಪ್ಪ ಅಳಲು ತೋಡಿಕೊಂಡಿದ್ದಾರೆ.

ದುಬಾರಿ: ಈ ಭಾಗದಲ್ಲಿ ಕಡಿಮೆ ಪ್ರಮಾಣದಲ್ಲಿ ಈರುಳ್ಳಿ ಬೆಳೆದ ಸಣ್ಣ ರೈತರು ಸ್ಥಳೀಯ ಮಾರುಕಟ್ಟೆಗೆ ಈರುಳ್ಳಿ ಸಾಗಿಸಿದರೆ, ಬೃಹತ್‌ ಪ್ರಮಾಣದಲ್ಲಿ ಬೆಳೆದ ರೈತರು ಲಾರಿಯಲ್ಲಿ ಹುಬ್ಬಳ್ಳಿ, ಬೆಂಗಳೂರು, ಹೈದ್ರಾಬಾದ್‌ ಮಾರುಕಟ್ಟೆಗೆ ಸಾಗಿಸಿ ಮಾರುತ್ತಿದ್ದಾರೆ. ಆದರೆ ಅಲ್ಲೂ ಬೆಲೆ ಕುಸಿದಿದ್ದರಿಂದ ರೈತರಿಗೆ ಲಾರಿ ಬಾಡಿಗೆ ಖರ್ಚು ಕೂಡ ತಲೆಮೇಲೆ ಬರುವಂತಾಗಿದೆ. ಇನ್ನು ಕೆಲವೆಡೆ ಖರೀದಿದಾರರೇ ನೇರವಾಗಿ ರೈತರ ಹೊಲಕ್ಕೆ ಬಂದು ಈರುಳ್ಳಿ ಖರೀದಿಸುತ್ತಿದ್ದಾರೆ. ಲಾರಿ ಬಾಡಿಗೆ ಹೊರೆ ಬೇಡ ಎಂಬ ರೈತರು ತಮ್ಮಲ್ಲಿಗೆ ಬರುವ ಖರೀದಿದಾರರಿಗೆ ಸಿಕ್ಕಷ್ಟು ದರಕ್ಕೆ ಈರುಳ್ಳಿ ಮಾರಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಸರ್ಕಾರ ಈರುಳ್ಳಿಗೆ ಬೆಂಬಲ ಬೆಲೆ ನೀಡಿ ಖರೀದಿಸಿ ಹಾನಿ ತಪ್ಪಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.

ಮಳೆ ಅಭಾವದಿಂದ ಈ ಬಾರಿ ಈರುಳ್ಳಿ ಇಳುವರಿ ಕುಂಠಿತವಾಗಿದೆ. ಕೊಳವೆಬಾವಿ ಹೊಂದಿದ ರೈತರು ಸುಮಾರು 550 ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದಾರೆ. 
 ರಾಜಶೇಖರ, ತೋಟಗಾರಿಕೆ ಇಲಾಖೆ ಅಧಿಕಾರಿ ಲಿಂಗಸುಗೂರ

„ದೇವಪ್ಪ ರಾಠೊಡ


Trending videos

Back to Top