CONNECT WITH US  

ಎಚ್‌ಕೆಆರ್‌ಡಿಬಿ ಅನುದಾನ ಕ್ಷೇತ್ರವಾರು ಹಂಚಿ: ದದ್ದಲ್‌

ರಾಯಚೂರು: ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಬರುವ ಅನುದಾನವನ್ನು ತಾಲೂಕುವಾರು
ಹಂಚಿಕೆ ಮಾಡಿದ ಪರಿಣಾಮ ಗ್ರಾಮೀಣ ಕ್ಷೇತ್ರಕ್ಕೆ ಕನಿಷ್ಠ ಅನುದಾನವೂ ಬಂದಿಲ್ಲ ಎಂದು ಗ್ರಾಮೀಣ ಶಾಸಕ ದದ್ದಲ್‌
ಬಸನಗೌಡ ದೂರಿದರು.

ನಗರದ ಶಾಸಕರ ನೂತನ ಕಚೇರಿಯಲ್ಲಿ ಗುರುವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರು
ತಾಲೂಕಿನಲ್ಲಿ ನಗರ ಮತ್ತು ಗ್ರಾಮೀಣ ಕ್ಷೇತ್ರಗಳಿದ್ದು, ಬಂದ ಅನುದಾನವೆಲ್ಲ ನಗರ ಕ್ಷೇತ್ರಕ್ಕೇ ಹೆಚ್ಚಾಗಿ ಬಳೆಕೆಯಾಗಿದೆ. ಗ್ರಾಮೀಣ ಕ್ಷೇತ್ರ ಸಂಪೂರ್ಣ ಕಡೆಗಣನೆಗೆ ಒಳಪಟ್ಟಿದೆ. ಹೀಗಾಗಿ ತಾಲೂಕುವಾರು ಬದಲು ಕ್ಷೇತ್ರವಾರು ಅನುದಾನ ನೀಡಬೇಕು ಎಂದು ಪ್ರಾದೇಶಿಕ ಆಯುಕ್ತರಿಗೆ ಪತ್ರ ಮುಖೇನ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.

ನಂಜುಂಡಪ್ಪ ವರದಿಯ ಸಿಐಡಿ ಇಂಡೆಕ್ಸ್‌ ಆಧಾರದಡಿ 2018-19ನೇ ಸಾಲಿನಲ್ಲಿ ಮೈಕ್ರೊ ಯೋಜನೆಯಡಿ ಕ್ಷೇತ್ರವಾರು ಹಂಚಿಕೆಯಾದ ಅನುದಾನದಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ಕೇವಲ 7.86 ಕೋಟಿ ಮಾತ್ರ ಬಂದಿದೆ. ಆದರೆ, 1999-2002 ಅವಧಿಯ ಅಭಿವೃದ್ಧಿ ಮಾನದಂಡ ಆಧರಿಸಿ ಸಿಐಡಿ ಇಂಡೆಕ್ಸ್‌ ಸಿದ್ಧಪಡಿಸಿರುತ್ತಾರೆ. ಈ 18 ವರ್ಷಗಳಲ್ಲಿ ತಾಲೂಕು ಜನಸಂಖ್ಯೆ, ಸೌಲಭ್ಯಗಳ ವಿಚಾರದಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದೆ. ಆದರೆ, ಹಿಂದಿನ ಮಾದರಿಯಲ್ಲಿಯೇ ಅನುದಾನ ಬರುತ್ತಿದ್ದು, ಅಭಿವೃದ್ಧಿಗೊಂಡ ಕ್ಷೇತ್ರಗಳಿಗೆ ಹೆಚ್ಚು ಅನುದಾನ ಹಂಚಿಕೆಯಾಗುತ್ತಿದೆ ಎಂದು ದೂರಿದರು.

ರಾಯಚೂರು ಗ್ರಾಮೀಣ ಕ್ಷೇತ್ರ 164 ಹಳ್ಳಿಗಳಿಂದ ಕೂಡಿದ್ದು, 1,800 ಕಿಮೀ ರಸ್ತೆ ಇದೆ. ಸಾಕಷ್ಟು ಹಳ್ಳಿಗಳಿಗೆ ಇಂದಿಗೂ ಸುಸಜ್ಜಿತ ರಸ್ತೆಗಳಿಲ್ಲ. 250 ಶಾಲೆಗಳಿದ್ದು ಸಾಕಷ್ಟು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಎರಡು ನದಿ, 140 ಕೆರೆಗಳಿದ್ದರೂ ಶುದ್ಧ ಕುಡಿಯುವ ನೀರು ಪೂರೈಕೆ ಸಾಧ್ಯವಾಗಿಲ್ಲ. ಆದರೆ, ಈಗ ಬಿಡುಗಡೆಯಾಗುವ ಅನುದಾನದಲ್ಲಿ ಯಾವುದೇ ಮಹತ್ವದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಆಗುವುದಿಲ್ಲ. ಹೀಗಾಗಿ 2018-19ನೇ ಮ್ಯಾಕ್ರೋ ಯೋಜನೆಯಡಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕಲ್ಪಿಸಬೇಕು ಎಂದು ಒತ್ತಾಯಿಸಿರುವುದಾಗಿ ಅವರು ಹೇಳಿದರು.

18 ವರ್ಷಗಳ ಸಿಐಡಿ ಇಂಡೆಕ್ಸ್‌ ಮಾನದಂಡ ಕೈಬಿಟ್ಟು ಪುನಃ ಸಮೀಕ್ಷೆ ನಡೆಸಿ ಹೊಸ ಇಂಡೆಕ್ಸ್‌ ಸಿದ್ಧಪಡಿಸಬೇಕು. ಆ ಮೂಲಕ ಕ್ಷೇತ್ರಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಸಿಎಸ್ಸಾರ್‌ ಫಂಡ್‌ ಬಳಕೆಗೆ ಒತ್ತು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿರುವ ಆರ್‌ಟಿಪಿಎಸ್‌ , ವೈಟಿಪಿಎಸ್‌ ಘಟಕಗಳಿಂದ
ಸಾಮಾಜಿಕ ಹೊಣೆಗಾರಿಕೆಯಡಿ ಮೀಸಲಿಟ್ಟ ಅನುದಾನ (ಸಿಎಸ್ಸಾರ್‌) ಇಲ್ಲಿಯೇ ಬಳಸಬೇಕು ಎಂದು ಇಂಧನ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಶಾಸಕ ದದ್ದಲ್‌ ಬಸನಗೌಡ ತಿಳಿಸಿದರು.

ಈ ಘಟಕಗಳು ಸುತ್ತಲಿನ ಗ್ರಾಮಗಳಿಗೆ ಮೂಲ ಸೌಲಭ್ಯ ಅರಣ್ಯೀಕರಣ ಸೇರಿ ಅಗತ್ಯ ಚಟುವಟಿಕೆ ಕೈಗೊಳ್ಳಬೇಕು. ಆದರೆ, ದತ್ತು ತೆಗೆದುಕೊಂಡ ಗ್ರಾಮಗಳಲ್ಲಿ ಯಾವೊಂದು ಕೆಲಸವನ್ನು ಮಾಡಿಸಿಲ್ಲ. ಹೀಗಾಗಿ ಕನಿಷ್ಠ ವರ್ಷಕ್ಕೆ ಪ್ರತಿ ಘಟಕದಿಂದ 10 ಕೋಟಿ ರೂ. ಅಭಿವೃದ್ಧಿಗೆ ವಿನಿಯೋಗಿಸಬೇಕು ಎಂದು ಮನವಿ ಮಾಡಲಾಗಿದೆ. ಇನ್ನೂ
ಎರಡು ಘಟಕಗಳಿರುವ ಕಾರಣ ತಾಲೂಕಿಗೆ ನಿರಂತರ ವಿದ್ಯುತ್‌ ನೀಡಬೇಕು ಎಂಬ ಕುರಿತು ಸದನದಲ್ಲಿ ಪ್ರಸ್ತಾಪಿಸಿದ್ದೇನೆ. ಈಗ ರೈತರಿಗೆ ನಿತ್ಯ 9 ಗಂಟೆ ತ್ರಿ ಪೇಸ್‌ ವಿದ್ಯುತ್‌ ನೀಡಲಾಗುತ್ತಿದೆ. ಆದರೆ, ನಿರಂತರವಾಗಿ ನೀಡುವಂತೆ ರೈತರು ಒತ್ತಾಯಿಸುತ್ತಿದ್ದು, ಪರಿಶೀಲಿಸಲಾಗುವುದು ಎಂದರು.

ಬರ ಘೋಷಣೆಯಲ್ಲಿ ರಾಯಚೂರು ತಾಲೂಕಿಗೆ ಮೊದಲ ಆದ್ಯತೆಯಡಿ ಪರಿಗಣಿಸುವಂತೆ ಮನವಿ ಮಾಡಲಾಗಿದೆ. ಈಗಾಗಲೇ ಸಮೀಕ್ಷೆ ಕಾರ್ಯ ಮುಗಿದಿದ್ದು, ಕೇಂದ್ರ ವಿಧಿಸಿದ ಎಲ್ಲ ಮಾನದಂಡಗಳಿಗೂ ನಮ್ಮ ತಾಲೂಕು ಅರ್ಹವಾಗಲಿದ್ದು, ಶೀಘ್ರದಲ್ಲೇ ಘೋಷಣೆ ಆಗಲಿದೆ ಎಂದರು.

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top