CONNECT WITH US  

ನಾಲೆಗಳ ಆಧುನೀಕರಣ ಅಗತ್ಯ

ಲಿಂಗಸುಗೂರು: ಎನ್‌ಆರ್‌ಬಿಸಿ ಹಾಗೂ ರಾಂಪುರ ನಾಲೆಗಳು ಸಂಪೂರ್ಣ ಹದಗೆಟ್ಟಿದ್ದು, ಆಧುನೀಕರಣಗೊಳಿಸುವುದು ಅಗತ್ಯವಾಗಿದೆ ಎಂದು ಕಾಶಿ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು. 

ತಾಲೂಕಿನ ಯರಡೋಣ ಗ್ರಾಮದ ಹತ್ತಿರ ರಾಂಪುರ ಏತ ನೀರಾವರಿ ಕಾಲುವೆ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ
ಮಾತನಾಡಿದ ಸ್ವಾಮೀಜಿ, ಜಿಲ್ಲೆಯ ಎರಡೂ ಬದಿ ಕೃಷ್ಣೆ ಮತ್ತು ತುಂಗಭದ್ರಾ ನದಿಗಳು ಹರಿಯುತ್ತಿವೆ. ನಾರಾಯಣಪುರ ಬಲದಂಡೆ, ರಾಂಪುರ ಏತ ನೀರಾವರಿ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳು ಅನುಷ್ಠಾನಗೊಂಡಿದ್ದರೂ ಸಮಗ್ರ ನೀರಾವರಿಗೆ ಒಳಪಡದಿರುವುದು ನೋವಿನ ಸಂಗತಿ.

ಅವೈಜ್ಞಾನಿಕ ಕಾಲುವೆಗಳ ನಿರ್ಮಾಣದಿಂದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ದೊರೆಯದೆ ವ್ಯರ್ಥ ಪೋಲಾಗುತ್ತಿದೆ. ಕಾಲುವೆ, ಹೊಲಗಾಲುವೆಗಳಲ್ಲಿ ಹೂಳು ತುಂಬಿದ್ದು, ಕಾಲುವೆ ವೀಕ್ಷಣಾ ರಸ್ತೆಗಳು ಹದಗೆಟ್ಟಿವೆ.
ಮುಳ್ಳು ಕಂಟಿಗಳು ಬೆಳೆದು ನಿಂತಿವೆ. ಭೂಮಿ ಕಳೆದುಕೊಂಡ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. 

ಬಲದಂಡೆ ಕಾಲುವೆ 95 ಕಿಮೀದಿಂದ 155 ಕಿಮೀ ವರೆಗೆ ಕಾಲುವೆ ವಿಸ್ತರಣೆ ಮಾಡುವ ಮುನ್ನ 0 ದಿಂದ 95 ಕಿಮೀ ವರೆಗೆ ನಿರ್ಮಾಣಗೊಂಡ ಎಲ್ಲ ಕಾಲುವೆಗಳ ಸಮಗ್ರ ಆಧುನೀಕರಣವಾಗಬೇಕು. ಅಂದಾಗ ಮಾತ್ರ ರೈತರ ಜಮೀನುಗಳಿಗೆ ಸಮರ್ಪಕ ನೀರು ದೊರೆಯಲು ಸಾಧ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ರೈತರ ಸಂಕಷ್ಟ ಪರಿಹಾರ ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.  ಅಮರೇಶ್ವರ ಗುರುಗಜದಂಡ ಶಿವಾಚಾರ್ಯರು, ರೈತ ಸಂಘದ ರಾಜ್ಯ ಮುಖಂಡ ಅಮರಣ್ಣ ಗುಡಿಹಾಳ, ಮಲ್ಲಣ್ಣ ಕೋಳೂರು ಇದ್ದರು. 


Trending videos

Back to Top