CONNECT WITH US  

ಇನ್ನೀಗ ಸಾರ್ಕ್‌ನಲ್ಲೂ ಮೊಳಗಬಹುದೇ ಬ್ರೆಕ್ಸಿಟ್‌ನಂಥ ರಾಗ?

ಪಾಕಿಸ್ಥಾನದೊಂದಿಗೆ ಭಾರತದ ಸಂಬಂಧ ತಟಸ್ಥವಾಗಿದೆ. ಈ ನೆಲೆಯಲ್ಲಿ ನಮಗಿನ್ನು ಸಾರ್ಕ್‌ನ ಅಗತ್ಯವಿಲ್ಲ. ಹಾಗೆ ನೋಡಿದರೆ ಸಾರ್ಕ್‌ ಒಕ್ಕೂಟದ ಸ್ಥಾಪಕ ಭಾರತವೇ ಎನ್ನುವ ಹಾಗಿಲ್ಲ. ಇದರ ಕಲ್ಪನೆ ಹೊಳೆದಿದ್ದುದು ಬಾಂಗ್ಲದೇಶಕ್ಕೆ, ವಾಸ್ತವವಾಗಿ ಇದರಲ್ಲಿ ಪಾಲ್ಗೊಳ್ಳಲು ಭಾರತ ಹಿಂಜರಿದಿತ್ತು. 

ಐರೋಪ್ಯ ಒಕ್ಕೂಟದಿಂದ ಹೊರಬೀಳುವ ಪ್ರಸ್ತಾವಕ್ಕೆ  ಬ್ರಿಟನಿನ ಬಹುತೇಕ ಮಂದಿ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಈ ಒಕ್ಕೂಟದಲ್ಲಿ ಅಭೂತಪೂರ್ವ ಸಂಚಲನ ಮೂಡುವಂತಾಗಿದೆಯಷ್ಟೆ? ಇದನ್ನು ನೋಡಿದರೆ ನಮ್ಮ "ಸಾರ್ಕ್‌' (ಸೌತ್‌ ಏಶ್ಯನ್‌ ಅಸೋಸಿಯೇಶನ್‌ ಫಾರ್‌ ರೀಜನಲ್‌ ಕೋ ಆಪರೇಶನ್‌) ಒಕ್ಕೂಟದ ಬಗೆಗೂ ಒಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಸಾರ್ಕ್‌ ಒಕ್ಕೂಟದಿಂದ ಭಾರತಕ್ಕಾಗುವ ಪ್ರಯೋಜನವೇನು?

ಪಾಕಿಸ್ತಾನದೊಂದಿಗೆ ಭಾರತದ ಸಂಬಂಧ ಸದ್ಯ "ಯುದ್ಧವೂ ಬೇಡ, ಶಾಂತಿಯೂ ಬೇಡ' ಎಂಬ ರೀತಿಯಲ್ಲಿ  ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ನಮಗೆ ಇನ್ನು ಸಾರ್ಕ್‌ನ ಅಗತ್ಯವಿಲ್ಲ. ನಮ್ಮ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕಾರ ಗ್ರಹಣ ಸಮಾರಂಭಕ್ಕೆ ಸಾರ್ಕ್‌ ರಾಷ್ಟ್ರಗಳ ಎಲ್ಲ ನಾಯಕರನ್ನೂ ಆಹ್ವಾನಿಸಿದ್ದರೇನೋ ನಿಜ. ಇದು ಅವರು ಸಾರ್ಕ್‌ ಮೇಲಿಟ್ಟ ನಂಬಿಕೆಯನ್ನು ತೋರಿಸುತ್ತದೆ. 1986ರಲ್ಲಿ ಸಾರ್ಕ್‌ನ ಶೃಂಗ ಸಭೆ ನಮ್ಮ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದಿತ್ತು.

ಹಾಗೆ ನೋಡಿದರೆ ಸಾರ್ಕ್‌ ಒಕ್ಕೂಟದ ಸ್ಥಾಪಕ ಭಾರತವೇ ಎನ್ನುವ ಹಾಗಿಲ್ಲ. ಇಂಥ ಒಕ್ಕೂಟವೊಂದನ್ನು ಅಸ್ತಿತ್ವಕ್ಕೆ ತರುವ ಕಲ್ಪನೆ ಹೊಳೆದಿದ್ದುದು ಬಾಂಗ್ಲದೇಶಕ್ಕೆ, ವಾಸ್ತವವಾಗಿ ಇದರಲ್ಲಿ ಪಾಲ್ಗೊಳ್ಳಲು ಭಾರತ ಹಿಂಜರಿದಿತ್ತು. ಪಾಕಿಸ್ತಾನವನ್ನು ಪ್ರತ್ಯೇಕಿಸುವ ಸಾಧ್ಯತೆಗೆ ಸಾರ್ಕ್‌ ಒಕ್ಕೂಟವನ್ನು ಬಳಸಿಕೊಳ್ಳುವ ಉದ್ದೇಶ ಸೇರ್ಪಡೆಗೊಂಡ ರಾಷ್ಟ್ರಗಳಲ್ಲಿತ್ತೆಂಬ ವಾದವೂ ಇದೆ. ಸಾರ್ಕ್‌ನಲ್ಲಿ ಮೊದಲಿಗೆ ಇದ್ದ ಏಳು ರಾಷ್ಟ್ರಗಳ ಜತೆಗೆ ಅಘಾ^ನಿಸ್ತಾನವೂ 2007ರಲ್ಲಿ ಸೇರಿಕೊಂಡಿತು. ಒಂದು ವೇಳೆ ಭಾರತ ಈ ಒಕ್ಕೂಟದಿಂದ ಹೊರಬಿದ್ದರೆ ನಮ್ಮ ನೆರೆಯ ಚಿಕ್ಕಪುಟ್ಟ ರಾಷ್ಟ್ರಗಳಿಗೆ ದ್ರೋಹವೆಸಗಿದಂತಾಗುತ್ತದೆ. ಸರಿಯಾಗಿ ಗಮನಿಸಿದರೆ ಪ್ರಾದೇಶಿಕ ಒಗ್ಗಟ್ಟು ಹಾಗೂ "ಪರಮ ರಾಷ್ಟ್ರೀಯತೆ' (ರಾಷ್ಟ್ರೀಯ ಗಡಿಗಳನ್ನು ಮೀರಿದ ಭಾವೈಕ್ಯ)ಯ ಅಂಶವನ್ನು ಪರಿಗಣಿಸಿದರೆ ಸಾರ್ಕ್‌ ಒಕ್ಕೂಟವನ್ನು ಐರೋಪ್ಯ ಒಕ್ಕೂಟಕ್ಕೆ ಹೋಲಿಸುವ ಹಾಗಿಲ್ಲ. ಮುಕ್ತ ವ್ಯಾಪಾರ ಅಥವಾ ಸಮಾನ ಕರೆನ್ಸಿವಲಯ ಸ್ಥಾಪನೆಯಂಥ ಉದ್ದೇಶಗಳು ಸಾರ್ಕ್‌ಗೆ ಇಲ್ಲ. ನಮ್ಮ ಸೆಕ್ಯುಲರಿಸ್ಟ್‌ಗಳು ಈ ಮಾತನ್ನು ಮೆಚ್ಚಲಿ ಅಥವಾ ಬಿಡಲಿ - ಭಾರತವನ್ನು ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಿಂದ ಪ್ರತ್ಯೇಕಿಸಿಟ್ಟಿರುವುದು ಧರ್ಮವೇ ಹೊರತು ಬೇರೇನಲ್ಲ.

ಈಗೊಂದು ಪ್ರಶ್ನೆ ಎದುರಾಗಬಹುದು - ಈ ಹಿಂದೆ ಹಿಂದೂ ರಾಷ್ಟ್ರವಾಗಿದ್ದ ನೇಪಾಲ ನಮ್ಮ ವಿರುದ್ಧ ತಿರುಗಿಬಿದ್ದದ್ದೇಕೆ? 1950ರ ದಶಕದಲ್ಲಿ ಅದು ನಮ್ಮ ನಿಕಟ ಸ್ನೇಹಿತನಾಗಿತ್ತು. ಅಲ್ಲಿನ ದೊರೆ ತ್ರಿಭುವನ ಅವರಿಗೆ ಸ್ಥಳೀಯ ರಾಣಾ (ನೇಪಾಲಿ ಶ್ರೀಮಂತ ವರ್ಗ)ಗಳಿಂದ ಬಂಡಾಯದ ಭಯ ಎದುರಾದಾಗ ಅವರು ತಮ್ಮ ರಾಷ್ಟ್ರವನ್ನು ಭಾರತದೊಂದಿಗೆ ವಿಲೀನಗೊಳಿಸುವ ಪ್ರಸ್ತಾವವನ್ನೂ ನಮ್ಮ ಮುಂದಿಟ್ಟಿದ್ದರು. ಆದರೆ ಆಗ ಪ್ರಧಾನಿಯಾಗಿದ್ದ ಜವಾಹರಲಾಲ್‌ ನೆಹರೂ ಈ ಕುರಿತ ಯಾವುದೇ ಮಾತುಕತೆಗೆ ಪ್ರೋತ್ಸಾಹ ನೀಡಲಿಲ್ಲ. ಮುಂದಿನ ವರ್ಷಗಳಲ್ಲಿ ಬಹುತೇಕ ಚೀನದ ಪ್ರೇರಣೆ, ರಾಜವಂಶೀಯ ಆಡಳಿತಕ್ಕೆ ನಿಷೇಧ ಹಾಗೂ ನೇಪಾಲ ಕಮ್ಯುನಿಷ್ಟರ ಪ್ರಾಬಲ್ಯದಂಥ ಕಾರಣಗಳಿಂದಾಗಿ ನಮ್ಮ ಉತ್ತರದ ಗಡಿಭಾಗದಲ್ಲಿ ಭಾರತ ವಿರೋಧಿ ಭಾವನೆ ಬೆಳೆದು ಬಂದಿದೆ.

ಇನ್ನೊಂದು ದೃಷ್ಟಿಯಿಂದ ನೋಡುವುದಾದರೆ ಐರೋಪ್ಯ ಒಕ್ಕೂಟಕ್ಕೂ ಸಾರ್ಕ್‌ಗೂ ಒಂದು ಸಾಮ್ಯವಿದೆ. ಎರಡೂ ಒಕ್ಕೂಟಗಳು ಮಾಜಿ ಕಡು ವಿರೋಧಿ ರಾಷ್ಟ್ರಗಳ ಸಂಘಟನೆಗಳು. ಇಂಗ್ಲೆಂಡ್‌ ಮತ್ತು ಫ್ರಾನ್ಸ್‌ ಪರಂಪರಾಗತ ಶತ್ರುಗಳಾಗಿದ್ದ ದೇಶಗಳು; 19ನೆಯ ಶತಮಾನದ ಮಧ್ಯಭಾಗದವರೆಗೂ ಪರಸ್ಪರ ಯುದ್ಧ ನಿರತವಾಗಿದ್ದಂಥವು. ಯುರೋಪ್‌ ಎರಡು ಜಾಗತಿಕ ಸಮರಗಳ ರಂಗಮಂಚ. ಇದೇ ರೀತಿ ಸಾರ್ಕ್‌ನ ವ್ಯಾಪ್ತಿಯಲ್ಲಿರುವ ರಾಷ್ಟ್ರಗಳ ಪೈಕಿ ಭಾರತ ಮತ್ತು ಪಾಕಿಸ್ತಾನಯುದ್ಧಗಳನ್ನು ನಡೆಸಿವೆ. ಎಲ್‌ಟಿಟಿಇ ಉಗ್ರರನ್ನು  ಮಟ್ಟಹಾಕಲು ನಾವು ಶ್ರೀಲಂಕೆಗೆ ನಮ್ಮ ಸೇನೆಯನ್ನು ಕಳಿಸಿದ್ದೆವು. ಕಿರುದೇಶವಾದ ಮಾಲ್ದೀವ್ಸ್‌ನಲ್ಲಿ ರಾಜಕೀಯ ಸಂಚು ನಡೆದಾಗಲೂ ನಾವು ನಮ್ಮ ಸೇನೆಯನ್ನು ಕಳಿಸಿಕೊಟ್ಟಿದ್ದೆವು.

ಸ್ಪಷ್ಟವಾಗಿ ಹೇಳಬೇಕೆಂದರೆ ಈ ಹಿಂದೆ ಇದ್ದ ಐರೋಪ್ಯ ಆರ್ಥಿಕ ಸಮುದಾಯ ಅಥವಾ ಸಮಾನ ಮಾರುಕಟ್ಟೆ  (ಕಾಮನ್‌ ಮಾರ್ಕೆಟ್‌)ಗೆ ಬ್ರಿಟನ್‌ ಸೇರ್ಪಡೆಗೊಳ್ಳುವುದು ಫ್ರಾನ್ಸ್‌ಗೆ ಇಷ್ಟವಿರಲಿಲ್ಲ. ಆಗಿನ ಫ್ರಾನ್ಸ್‌ ಅಧ್ಯಕ್ಷ ಚಾರ್ಲ್ಸ್‌ ಡಿಗಾಲೆ ಅವರು ಎರಡು ಬಾರಿ ಬ್ರಿಟನ್‌ ಸೇರ್ಪಡೆಗೆ ಅಸಮ್ಮತಿ ಸೂಚಿಸಿದ್ದರು. ""ಬ್ರಿಟನನ್ನು ಹೊರಗಿರಿಸಿದ್ದು ಡಿಗಾಲೆಯ ಉದ್ದ ಮೂಗು'' ಎಂಬ ಹಾಸ್ಯೋಕ್ತಿ ಅಂದಿನ ದಿನಗಳಲ್ಲಿ ಎಲ್ಲೆಡೆ ಹರಡಿತ್ತು. ಇತರ ಐರೋಪ್ಯ ರಾಷ್ಟ್ರಗಳನ್ನು ""ನನ್ನನ್ನೂ ನಿಮ್ಮ ಸಂಘದಲ್ಲಿ ಸೇರಿಸಿಕೊಳ್ಳಿ'' ಎಂದು ಬ್ರಿಟನ್‌ ಬೇಡಿಕೊಳ್ಳುತ್ತಿದ್ದ ಕಾಲ ಅದು. ಇಂದು ನಾವು ನೋಡುತ್ತಿರುವುದು ತದ್ವಿರುದ್ಧ ಚಿತ್ರ. ಬ್ರಿಟನ್‌, ಅಮೆರಿಕದ ಹಾಗೂ ಕಾಮನ್‌ವೆಲ್ತ್‌ ಆರ್ಥಿಕ ವ್ಯವಸ್ಥೆಯ ಪರವಾಗಿರುವುದರಿಂದ ಅದಕ್ಕೆ ಐರೋಪ್ಯ ಮಾರುಕಟ್ಟೆಯ ಅಗತ್ಯವಿಲ್ಲ ಎಂಬುದು ಡಿಗಾಲೆ ಅವರ ವಾದವಾಗಿತ್ತು. ಸ್ವಾರಸ್ಯವೆಂದರೆ ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯ ವಿರುದ್ಧ ಕಾರ್ಯಾಚರಿಸಿದ್ದ ಫ್ರೆಂಚ್‌ ಸೈನ್ಯದ ನೇತೃತ್ವ ವಹಿಸಿದ್ದ ಡಿಗಾಲೆಯವರಿಗೆ ಜರ್ಮನಿಯೊಂದಿಗೆ ಯಾವ ತಗಾದೆಯೂ ಇರಲಿಲ್ಲ! ಬ್ರಿಟನ್‌ನೊಂದಿಗಿನ ವಿರೋಧದ ಮಟ್ಟಿಗೆ ಹೇಳುವುದಾದರೆ ಡಿಗಾಲೆಯವರ ಧೋರಣೆ ನೆಪೋಲಿಯನ್‌ ಬೊನೋಪಾರ್ಟ್‌ರಂತಿತ್ತು. 

ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ನಿರ್ಗಮಿಸಿರುವುದು, ಅಮೆರಿಕ ಸಂಯುಕ್ತ ರಾಷ್ಟ್ರದ ವಿರುದ್ಧ ಐರೋಪ್ಯ ಸಂಯುಕ್ತ ರಾಷ್ಟ್ರದ ನಿರ್ಮಾಣವಾಗಬೇಕೆನ್ನುವವರ ಪಾಲಿಗೆ ದೊಡ್ಡ ಮಟ್ಟಿನ ಹಿನ್ನಡೆ. ಬ್ರಿಟನ್‌ ವಿರೋಧಿ ನಿಲುವನ್ನು ತಳೆದಿದ್ದ ಡಿಗಾಲೆಯವರ ಮುಂಚಿನ ದಿನಗಳ ಫ್ರೆಂಚ್‌ ನಾಯಕರು "ಸಂಯುಕ್ತ ಐರೋಪ್ಯ ರಾಷ್ಟ್ರಗಳ' ಪರಿಕಲ್ಪನೆಯ ಬಗ್ಗೆ ಬಹುವಾದ ಉತ್ಸಾಹ ತಾಳಿದ್ದರು. ಅವರೆಲ್ಲ ಇದರ ಪ್ರಬಲ ಪ್ರತಿಪಾದಕರಾಗಿದ್ದವರು. 1929ರಷ್ಟು ಹಿಂದೆಯೇ ಫ್ರಾನ್ಸ್‌ನ ರಾಜಕೀಯ ಮುತ್ಸದ್ದಿ ಅರಿಸ್ಟೈಡ್‌ ಬ್ರಯಾನ್‌, ಲೀಗ್‌ ಆಫ್ ನೇಶನ್ಸ್‌ನ ಮಹಾಧಿವೇಶನದಲ್ಲಿ ಇದನ್ನು ಪ್ರತಿಪಾದಿಸಿದ್ದರು. ಯುದ್ಧವನ್ನೇ ಬಹಿಷ್ಕರಿಸುವ ಬಗ್ಗೆ ಇತರ ರಾಷ್ಟ್ರಗಳೊಂದಿಗೆ ಒಪ್ಪಂದವೊಂದು ಏರ್ಪಡಬೇಕೆಂದು ಪ್ರತಿಪಾದಿಸಿದ್ದಕ್ಕಾಗಿ ಅವರು 1927ರಲ್ಲಿ ನೊಬೆಲ್‌ ಪ್ರಶಸ್ತಿಗೂ ಪಾತ್ರರಾಗಿದ್ದರು. 1926ರಲ್ಲಿ ಅವರು ಅಮೆರಿಕದ ವಿದೇಶ ಸಚಿವರೊಂದಿಗೆ ಇದಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿಯನ್ನೂ ಹಾಕಿದ್ದರು. ದ್ವಿತೀಯ ಮಹಾಯುದ್ಧ ಅಂತ್ಯಗೊಂಡ ಬಳಿಕ ಬ್ರಿಟನ್‌ನ ವಿನ್‌ಸ್ಟನ್‌ ಚರ್ಚಿಲ್‌ ಅವರು "ಐರೋಪ್ಯ ಸಂಯುಕ್ತ ರಾಷ್ಟ್ರಗಳ' ಪ್ರಸ್ತಾವವನ್ನು ವಿರೋಧಿಸಿ ಹೇಳಿಕೆಯಿತ್ತರು. ಈ ಪರಿಕಲ್ಪನೆಯನ್ನು ತಾನು ಮೆಚ್ಚುತ್ತೇನಾದರೂ ಬ್ರಿಟನ್‌ಗೆ ತನ್ನದೇ ಕಾಮನ್‌ವೆಲ್ತ್‌ ರಾಷ್ಟ್ರಗಳ ಒಕ್ಕೂಟವಿದೆ (ಆಸ್ಟ್ರೇಲಿಯಾ ಹಾಗೂ ಕೆನಡಾದ ಭೂತಪೂರ್ವ ವಸಾಹತು ಪ್ರದೇಶಗಳ ಸಹಿತ) ಎಂದವರು ಬೆಟ್ಟು ಮಾಡಿ ಹೇಳಿದ್ದರು. 1950ರಲ್ಲಿ ಮತ್ತೆ ಇನ್ನೋರ್ವ ಫ್ರೆಂಚ್‌ ನಾಯಕರಾದ ರಾಬರ್ಟ್‌ ಫ‌ುಮನ್‌ ಅವರು ಐರೋಪ್ಯ ಆರ್ಥಿಕ ಹಾಗೂ ಮಿಲಿಟರಿ ಏಕತೆಯನ್ನು ಪ್ರಬಲಗೊಳಿಸುವ ಉದ್ದೇಶದ ಇನ್ನೊಂದು ಯೋಜನೆಯನ್ನು ರೂಪಿಸಿದರು. ಇನ್ನೊಂದು ಮಹಾಯುದ್ಧವನ್ನು ತಡೆಯುವ ಸಲುವಾಗಿ ಫ್ರಾನ್ಸ್‌ ಮತ್ತು ಜರ್ಮನಿಯ ನಡುವೆ ಶಾಂತಿ ಸ್ಥಾಪನೆಯಾಗಬೇಕೆಂಬ ಆಶಯ ಅವರದ್ದಾಗಿತ್ತು. ಐರೋಪ್ಯ ಒಕ್ಕೂಟ ಅಸ್ತಿತ್ವಕ್ಕೆ ಬಂದುದು 1993ರಲ್ಲಿ. ಇತರ ಐರೋಪ್ಯ ಸಂಘಟನೆಗಳಾದ ಸಮಾನ ಮಾರುಕಟ್ಟೆ (ಕಾಮನ್‌ ಮಾರ್ಕೆಟ್‌), ಐರೋಪ್ಯ ಇದ್ದಿಲು ಹಾಗೂ ಉಕ್ಕು ಒಕ್ಕೂಟ (ದಿ ಯುರೋಪಿಯನ್‌ ಕೋಲ್‌ ಆ್ಯಂಡ್‌ ಸ್ಟೀಲ್‌ ಕಮ್ಯುನಿಟಿ) ಹಾಗೂ ಐರೋಪ್ಯ ಅಣುಶಕ್ತಿ ಒಕ್ಕೂಟ (ದಿ ಯುರೋಪಿಯನ್‌ ಆ್ಯಟಮಿಕ್‌ ಎನರ್ಜಿ ಕಮ್ಯುನಿಟಿ)ಗಳ ವಿಲಯನದಿಂದ ಈ ಒಕ್ಕೂಟದ ಸೃಷ್ಟಿಯಾಯಿತು. 1991ರಲ್ಲಿ ಏರ್ಪಟ್ಟ ಮ್ಯಾಸ್ಟ್ರಿಚ್‌ ಒಪ್ಪಂದ ಐರೋಪ್ಯ ಒಕ್ಕೂಟದ ರಚನೆಗೆ ಹಾದಿಮಾಡಿಕೊಟ್ಟಿತು. ಆದರೂ ಒಕ್ಕೂಟ ದೃಢೀಕೃತ ರೂಪ ಪಡೆದುಕೊಂಡುದು 2009ರಲ್ಲಿ ಏರ್ಪಟ್ಟ ಲಿಸºನ್‌ ಒಪ್ಪಂದದ ಮೂಲಕ. 

ಈ ಒಕ್ಕೂಟದಲ್ಲಿದ್ದ ಬ್ರಿಟನ್‌ ಯುರೋ ಕರೆನ್ಸಿಯನ್ನು ಅಳವಡಿಸಿಕೊಳ್ಳದೆ ತನ್ನದೇ ಕರೆನ್ಸಿಯಾದ ಪೌಂಡ್‌ ಸ್ಟರ್ಲಿಂಗ್‌ನ ಚಲಾವಣೆ ವ್ಯವಸ್ಥೆಯನ್ನು ಮುಂದುವರಿಸಿತು. ಈಗ ಒಕ್ಕೂಟದಿಂದ ನಿರ್ಗಮಿಸುವ ಇಚ್ಛೆ ಪ್ರಕಟಿಸಿರುವ ಅಲ್ಲಿನ ಮತದಾರರು "ಐರೋಪ್ಯ ಒಕ್ಕೂಟ ಕುರಿತ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಬ್ರಿಟಿಷ್‌ ಸರಕಾರ ತನ್ನ ಸಾರ್ವಭೌಮಾಧಿಕಾರವನ್ನು ಇತರ ರಾಷ್ಟ್ರಗಳಿಗೆ ಮಾರಿಕೊಂಡಂತಾಗಿದೆ; ಇದರಿಂದ ಬ್ರಿಟಿಷ್‌ ಅರ್ಥವ್ಯವಸ್ಥೆ ದಿವಾಳಿ ಸ್ಥಿತಿ ತಲುಪಲು ಅವಕಾಶವಾಯಿತು'ಎಂಬ ಅಭಿಪ್ರಾಯದವರು. ಪೂರ್ವ ಯುರೋಪಿನಿಂದ ಬರುತ್ತಿರುವ ವಲಸಿಗರಿಂದ ಇಂಗ್ಲೆಂಡ್‌ ತುಂಬಿ ಹೋದೀತೆಂಬ ಭೀತಿಯನ್ನೂ ಈ ನಿರ್ಗಮನಾಕಾಂಕ್ಷಿ ಮತದಾರರು ವ್ಯಕ್ತಪಡಿಸಿದ್ದಾರೆ. ಒಕ್ಕೂಟದ ಸದಸ್ಯತ್ವ ಬೇಕಿಲ್ಲ ಎಂಬ ಅಭಿಪ್ರಾಯ ತಿಳಿಸಿದವರು ಇಂಗ್ಲೆಂಡಿನ ನಿವಾಸಿಗಳೇ ಹೊರತು ಸ್ಕಾಟ್ಲೆಂಡ್‌ನ‌ವರಲ್ಲ, ಉತ್ತರ ಐರ್ಲೆಂಡಿನವರೂ ಅಲ್ಲ.

ಹಾಗಂತ ಐರೋಪ್ಯ ಒಕ್ಕೂಟದಿಂದ ಯುದ್ಧದ ಸಾಧ್ಯತೆಗಳಿಗೆ ತೆರೆಬೀಳಲಿಲ್ಲ. ಹಿಂದೆ ಕಮ್ಯುನಿಸ್ಟ್‌ ರಾಷ್ಟ್ರವಾಗಿದ್ದ ಯುಗೋಸ್ಲಾವಿಯಾದಲ್ಲಿ ಭೀಕರ ಯುದ್ಧ ನಡೆದಿದೆ; ಮುಸ್ಲಿಂ ಮತ್ತಿತರ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರನ್ನು ಸರ್ಬಿಯನ್ನರು ನಿಷ್ಕರುಣೆಯಿಂದ ಕೊಂದು ಹಾಕಿದ್ದಾರೆ. ಇದು ನಡೆದುದು 20ನೆಯ ಶತಮಾನದಲ್ಲಿ ಎಂಬುದೇ ಅಚ್ಚರಿ ಮೂಡಿಸುವ ಸಂಗತಿ. ಬ್ರಿಟನ್‌ ಜನತೆಯ ಈ ಭಾವನೆಗೆ ಲೇಬರ್‌ ಪಕ್ಷದ ನಾಯಕ ಮಾಜಿ ಬ್ರಿಟಿಷ್‌ ಪ್ರಧಾನಿ ಟೋನಿ ಬ್ಲೇರ್‌ ಅವರೂ ಒಬ್ಬರೆಂದು ಈಗ ದೂರಲಾಗುತ್ತಿದೆ. ಸರ್ಬಿಯದ ಮೇಲಿನ ಸಮರ ಸಾರಿದ ಅವರು ಯುರೋಪಿನ ಇತರ ಭಾಗಗಳ ಜನರು ಇಂಗ್ಲೆಂಡಿಗೆ ವಲಸೆ ಬರಲು ಅವಕಾಶವಿತ್ತರು ಎಂಬುದು ಈ ಆಕ್ಷೇಪದ ಸಾರ.

ಅಂತಾರಾಷ್ಟ್ರೀಯ ಸಹಕಾರ ಹಾಗೂ ರಾಷ್ಟ್ರೀಯ ಗಡಿಗೆರೆಗಳ ಹಂಗು ಬೇಡದ ಮುಕ್ತ ಆರ್ಥಿಕ ವ್ಯವಸ್ಥೆಯ ಬಗ್ಗೆ ಅತೀವ ಆಶೆ ಇರಿಸಿಕೊಂಡಿರುವವರ ಪಾಲಿಗೆ ಬ್ರಿಟನ್‌ನ ಬ್ರೆಕ್ಸಿಟ್‌ (ನಿರ್ಗಮನ) ಮತದಾನ ಬಲವಾದ ಪ್ರಹಾರವಾಗಿ ಪರಿಣಮಿಸಿದೆ.  ತಮ್ಮನ್ನು "ಗ್ರೇಟ್‌ ಬ್ರಿಟನ್‌ ಹಾಗೂ ಯುನೈಟೆಡ್‌ ಕಿಂಗ್‌ಡಂ' ಎಂದು ಇನ್ನೂ ಕರೆದುಕೊಂಡು ಬೀಗುತ್ತಿರುವ ಇಂಗ್ಲೆಂಡಿಗರ ಪಾಲಿಗೆ ಇದೊಂದು ವಿಜಯವೇ ಹೌದು!

ಅರಕೆರೆ ಜಯರಾಮ್‌

Trending videos

Back to Top