CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕೋಚಿಂಗ್‌ ಸೆಂಟರ್‌ಗಳ್ಳೋ? ಕೋಚಿಂಗ್‌ ಕಂಪೆನಿಗಳ್ಳೋ?

ಕೋಚಿಂಗ್‌ ಕಂಪೆನಿಗಳು ಇಂದು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿವೆ. ಆದಾಯಕರ ವಿಭಾಗದ ಲಕ್ಷ್ಯ ಇವುಗಳ ಮೇಲೆ ಯಾಕೆ ಹರಿದಿಲ್ಲ ಎನ್ನುವುದೇ ಆಶ್ಚರ್ಯ. ಇವುಗಳನ್ನು ಸಂಪೂರ್ಣ ಗುಡಿಸಿ ಹಾಕುವುದು ಸಾಧ್ಯವಿಲ್ಲವಾದರೂ ಅವುಗಳ ಮೇಲೆ ಸರಕಾರದ ನಿಯಂತ್ರಣವಿರಬೇಕು ಎನ್ನುವ ಸುಪ್ರೀಂ ಕೋರ್ಟ್‌ ನಿರ್ದೇಶನ ಸ್ವಾಗತಾರ್ಹವಾದುದು.

ಇತ್ತೀಚೆಗೆ ವಿಶ್ವಬ್ಯಾಂಕ್‌ ಕುರಿತ ಗ್ರಂಥವೊಂದರ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ನಡೆದ ಘಟನೆ ಇದು. ಕಾರ್ಯಕ್ರಮದ ನಿರೂಪಕಿ ಒಬ್ಬ ಯುವ ಪತ್ರಕರ್ತೆ. ಮಾತಿನ ನಡುವೆ ಆಕೆ ಒಂದು ಪ್ರಶ್ನೆಯನ್ನು ಸಭಾಸದರ ಮುಂದಿಟ್ಟರು. ಬ್ರೆಟನ್‌ವುಡ್‌ನ‌ ಅವಳಿ ಸಂಸ್ಥೆಗಳಲ್ಲಿ ಒಂದಾದ ವಿಶ್ವಬ್ಯಾಂಕ್‌ನ ಬಗ್ಗೆ ಏನಾದರೂ ಗೊತ್ತೆ ನಿಮಗೆ - ಇದು ಆಕೆ ಕೇಳಿದ ಪ್ರಶ್ನೆ. 'ನನ್ನ ಈ ಪ್ರಶ್ನೆಗೆ 'ಹೌದು' ಅಥವಾ 'ಇಲ್ಲ' - ಈ ಎರಡರಲ್ಲೊಂದನ್ನು ಹೇಳಿ' ಎಂದರು ಆಕೆ. 'ಯಸ್‌' ಅಥವಾ 'ನೋ' ಉತ್ತರ ನೀಡುವ 'ಆಬ್ಜೆಕ್ಟಿವ್‌ ಟೈಪ್‌ ಕ್ವೆಶ್ಚನ್‌'ಗಳು ನಮ್ಮ ಪರೀಕ್ಷಾ ವ್ಯವಸ್ಥೆಯ ಭಾಗವೇ ಆಗಿಬಿಟ್ಟಿವೆ. ವಿಷಯವನ್ನು ಗ್ರಹಿಸಿಕೊಂಡು ನೀಡುವ ಉತ್ತರಗಳಿಗೆ ಜಾಗವಿಲ್ಲ ಎಂಬಂತಾಗಿದೆ. ಇಂಥವು, ನಮ್ಮ ಟಿವಿ ಚಾನೆಲ್‌ಗ‌ಳಲ್ಲಿ ಪ್ರಸಾರವಾಗುವ ಕ್ವಿಝ್ಕಾ ರ್ಯಕ್ರಮಗಳಂತೆ. ಇವುಗಳನ್ನು ಸಾಮಾನ್ಯವಾಗಿ ಸಿನಿಮಾ ತಾರೆಯರು ನಡೆಸಿಕೊಡುತ್ತಾರೆ. ಬಹುತೇಕ ಈ ತಾರೆಯರಲ್ಲಿರುವುದು ಎರವಲು ಪಡೆದ ಜ್ಞಾನ.

ಇಂಥ ಸಂಕ್ಷಿಪ್ತ, ಸಿದ್ಧರೂಪದ ಅಥವಾ ರೆಡಿಮೇಡ್‌ ಉತ್ತರಗಳೇ ವಿಶೇಷವಾಗಿ ನಮ್ಮ ಪ್ರವೇಶ ಪರೀಕ್ಷೆಗಳಲ್ಲಿ ಮೇಲುಗೈ ಸಾಧಿಸಿವೆ. ಇದು ನಮ್ಮಲ್ಲಿನ ಕೋಚಿಂಗ್‌ ಸಂಸ್ಥೆಗಳು ಪಡೆದಿರುವ ಪ್ರಾಧಾನ್ಯದ ಮೇಲೂ ಗಮನಹರಿಸುವಂತೆ ಪ್ರೇರಿಸುವಂತಿವೆ. ವಾಸ್ತವವಾಗಿ ಇವು ಕೋಚಿಂಗ್‌ ಕಾಲೇಜುಗಳ್ಳೋ ಕೋಚಿಂಗ್‌ ಸ್ಕೂಲ್‌ಗ‌ಳ್ಳೋ ಆಗಿರದೆ ಕೋಚಿಂಗ್‌ ಕಂಪೆನಿಗಳಂತೆಯೇ ಕಾಣಿಸುತ್ತಿವೆ. ಕಾರಣ, ಈ ಸಂಸ್ಥೆಗಳು ವಿಪರೀತ ವ್ಯಾಪಾರೀಕೃತವಾಗಿರುವುದು.  

ಕರ್ನಾಟಕ ಮತ್ತು ಐಎಎಸ್‌
ಈಚಿನ ವರ್ಷಗಳಲ್ಲಿ ಕರ್ನಾಟಕ ಮೂಲದ ಅಭ್ಯರ್ಥಿಗಳು ಐಎಎಸ್‌ ಪರೀಕ್ಷೆಗಳಲ್ಲಿ ಒಳ್ಳೆಯ ಸಾಧನೆ ತೋರಿಸುತ್ತಿದ್ದಾರೆ; ಇದಕ್ಕೆ ಕಾರಣ, ಕೋಚಿಂಗ್‌ ಸಂಸ್ಥೆಗಳು ಆರಂಭವಾಗಿರುವುದೇ. ಹಿಂದೆಲ್ಲ ಕೇವಲ ದಿಲ್ಲಿ ಅಥವಾ ಕೋಲ್ಕತದಲ್ಲಿ ಮಾತ್ರ ಐಎಎಸ್‌ ಕೋಚಿಂಗ್‌ ಸಂಸ್ಥೆಗಳು ಇದ್ದವು. ಕರ್ನಾಟಕ ಮೂಲದ ಅಭ್ಯರ್ಥಿಗಳ ಉತ್ತಮ ಸಾಧನೆಗೆ ಇನ್ನೊಂದು ಕಾರಣವೆಂದರೆ, ಪಿ.ವಿ. ನರಸಿಂಹ ರಾವ್‌ ನೇತೃತ್ವದ ಸರಕಾರ ಹಿಂದುಳಿದ ವರ್ಗಗಳಿಗಾಗಿ ಜಾರಿಗೆ ತಂದ ಮೀಸಲಾತಿ ಕ್ರಮ. ನಮ್ಮ ರಾಜ್ಯದಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಕೂರುವ ಅಭ್ಯರ್ಥಿಗಳ ಸಂಖ್ಯೆ ಇತರ ರಾಜ್ಯಗಳಿಗಿಂತ ಹೆಚ್ಚು.ಇನ್ನು ನಮ್ಮ ಶಾಸಕರಿಗೆ ಕೋಚಿಂಗ್‌ ಅಥವಾ ಓರಿಯಂಟೇಶನ್‌ ಪ್ರೋಗ್ರಾಮ್‌ಗಳನ್ನು ಏರ್ಪಡಿಸುವ ಕೆಲಸವೂ ನಡೆಯುತ್ತದೆ. ಹೊಸದಾಗಿ ಚುನಾಯಿತರಾದ ಶಾಸಕರಿಗೆ ಸಂಸದೀಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪಾಠ ಹೇಳುವ ಕೆಲಸ ಇದು. ನಮಗಿಂದು ರಾಜಕಾರಣಿಗಳಿಗಿಂತಲೂ ಉತ್ತಮ ಸಂಸದೀಯ ಪಟುಗಳ ಅಗತ್ಯವಿರುವುದರಿಂದ ಇದು ನಿಜಕ್ಕೂ ಸ್ವಾಗತಾರ್ಹ.

ಕೋಚಿಂಗ್‌ ಕಂಪೆನಿಗಳು ತಮಗೆ ತಾವೇ ಪ್ರಭುಗಳೆಂಬ ರೀತಿಯಲ್ಲಿ, ತಮಗೆ ತಮ್ಮದೇ ಕಾನೂನು ಎಂಬ ರೀತಿಯಲ್ಲಿ ಕಾರ್ಯವೆಸಗುತ್ತಿವೆ. ಐಎಎಸ್‌ ಹಾಗೂ ಎಂಜಿನಿಯರಿಂಗ್‌ ಕೋಚಿಂಗ್‌ ಸಂಸ್ಥೆಗಳನ್ನು ಒತ್ತಟ್ಟಿಗಿಟ್ಟು ನೋಡುವುದಾದರೆ, ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಇರುವ ಕೋಚಿಂಗ್‌ ಸಂಸ್ಥೆಗಳು ಮುಖ್ಯವಾಗಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ ಹಾಗೂ ಸ್ವಲ್ಪ ಮಟ್ಟಿಗೆ ವಾಣಿಜ್ಯ ವಿಷಯಗಳನ್ನು ಕಲಿಸಿಕೊಡುತ್ತವೆ. ಕೆಲ ವಿದ್ಯಾರ್ಥಿಗಳು ತಮಗೆ ಕಷ್ಟ ಎನಿಸುವ ಪಾಠಗಳಿಗಾಗಿ ಇಂಥ ಸಂಸ್ಥೆಗಳ ಮೊರೆ ಹೋಗುತ್ತಾರೆ. ಆದರೆ ಚರಿತ್ರೆ, ಸಮಾಜಶಾಸ್ತ್ರ, ಇಂಗ್ಲಿಷ್‌ ಅಥವಾ ಕನ್ನಡ ವಿಷಯಗಳಿಗೆ ಕೋಚಿಂಗ್‌ ಪಡೆಯುವ ವಿದ್ಯಾರ್ಥಿಗಳು ಇಲ್ಲ ಎನ್ನಬಹುದೇನೋ. ಹಾಗಾಗಿ ಕೋಚಿಂಗ್‌ ಸೆಂಟರ್‌ಗಳು ಪಿಸಿಎಂ ಅಥವಾ ಪಿಸಿಎಂಬಿ ಕಲಿಸುವ ಕೆಲವರ ಪಾಲಿಗೆ ಆಕರ್ಷಕ ವ್ಯಾಪಾರೋದ್ಯಮ ಸಾಧ್ಯತೆಯ ಕಣಗಳಾಗಿ ಮಾರ್ಪಟ್ಟಿವೆ. ಹೀಗಿರುತ್ತ, ನಮ್ಮ ಕೆಲ ಕೋಚಿಂಗ್‌ ಸಂಸ್ಥೆಗಳು ಕಾಲೇಜುಗಳಿಗಿಂತಲೂ ಹೆಚ್ಚು ಜನಪ್ರಿಯವಾಗಿವೆ. ಕೋಚಿಂಗ್‌ ಸೆಂಟರ್‌ಗಳಲ್ಲಿ ಪಾಠ ಮಾಡುವುದೆಂದರೆ ಅದು ಸರಕಾರಿ ವೈದ್ಯರು ನಡೆಸುವ ಖಾಸಗಿ ಕ್ಲಿನಿಕ್‌ಗಳಲ್ಲಿನ ಸೇವೆಯಂತಾಗಿಬಿಟ್ಟಿದೆ. 

ಕೋಚಿಂಗ್‌ ಸಂಸ್ಥೆ ನಿಯಂತ್ರಣ: ಸು. ಕೋರ್ಟ್‌ ಅಭಿಪ್ರಾಯ
ಈ ಹಿನ್ನೆಲೆಯಲ್ಲಿ ಸು. ಕೋರ್ಟ್‌ ಇತ್ತೀಚೆಗೆ ನೀಡಿರುವ ತೀರ್ಪೊಂದು ಗಮನಾರ್ಹವಾಗಿದೆ. ಖಾಸಗಿ ಕೋಚಿಂಗ್‌ ಸೆಂಟರ್‌ಗಳ ಮೇಲೆ ಹತೋಟಿ ಬೇಕೆಂದೂ ಅವುಗಳನ್ನು ಕೆಲವು ನಿಯಮಾವಳಿಗಳ ಕಟ್ಟಿಗೆ ಒಳಪಡಿಸಬೇಕೆಂದೂ ನ್ಯಾ| ಆದರ್ಶ್‌ ಕುಮಾರ್‌ ಗೋಯಲ್‌ ಹಾಗೂ ನ್ಯಾ| ಯು. ಯು. ಲಲಿತ್‌ ಇವರನ್ನೊಳಗೊಂಡ ನ್ಯಾಯಪೀಠ ಕೇಂದ್ರ ಸರಕಾರಕ್ಕೆ ಈ ತಿಂಗಳ ಆರಂಭದಲ್ಲಿ ಹೊರಡಿಸಿದ ತೀರ್ಪಿನಲ್ಲಿ ನಿರ್ದೇಶನವಿತ್ತಿದೆ. ಖಾಸಗಿ ಕೋಚಿಂಗ್‌ ಸೆಂಟರ್‌ಗಳಿಗೆ ಪ್ರತ್ಯೇಕ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವಂತೆಯೂ ಅದು ಹೇಳಿದೆ. ಇದೇ ವೇಳೆ ಇಂಥ ತರಬೇತಿ ಕೇಂದ್ರಗಳನ್ನು ನಮ್ಮ ಶಿಕ್ಷಣ ವ್ಯವಸ್ಥೆಯಿಂದ ಸಂಪೂರ್ಣವಾಗಿ ಗುಡಿಸಿ ಹಾಕುವಂತಿಲ್ಲ ಎಂದೂ ಕೋರ್ಟು ಅಭಿಪ್ರಾಯ ಪಟ್ಟಿದೆ. ಎಂಜಿನಿಯರಿಂಗ್‌ ಮತ್ತು ಇತರ ಕೋರ್ಸುಗಳಿಗಾಗಿ ನಡೆಯುವ ವಿವಿಧ ಪ್ರವೇಶ ಪರೀಕ್ಷೆಗಳಿಗೆ ಅವುಗಳ ಅಗತ್ಯವಿದ್ದೇ ಇದೆ. ಆದರೆ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಶಾಲಾ - ಕಾಲೇಜುಗಳ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಗಳಿಸುವ ಅಂಕಗಳಿಗೆ ಕೇಂದ್ರ ಸರಕಾರ ಹೆಚ್ಚು ಪ್ರಾಮುಖ್ಯ ನೀಡಬೇಕು ಎಂದು ನ್ಯಾಯಾಲಯ ಹೇಳಿರುವುದು. ಭಾರತೀಯ ವಿದ್ಯಾರ್ಥಿಗಳ ಮಹಾ ಒಕ್ಕೂಟ (ಸ್ಟೂಡೆಂಟ್ಸ್‌ ಫೆಡರೇಶನ್‌ ಆಫ್ ಇಂಡಿಯಾ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಸಂಬಂಧ ನ್ಯಾಯಾಲಯದ ತೀರ್ಪು ಇದು. "ಮಾನ್ಯತೆ ಪಡೆಯದ ಕೋಚಿಂಗ್‌ ಕಂಪೆನಿಗಳು' ಶಿಕ್ಷಣದ ಹಕ್ಕನ್ನು ಭಂಗಿಸುತ್ತಿವೆ ಎಂದು ಎಸ್‌ಎಫ್ಐ ದೂರಿಕೊಂಡಿತ್ತು. ಆದ್ದರಿಂದ ಕರ್ನಾಟಕದಂಥ ರಾಜ್ಯಗಳು ಕೋಚಿಂಗ್‌ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸಬೇಕಾದ ಅಗತ್ಯವಿದೆ. 

ತಾತ್ಪರ್ಯವಿಷ್ಟೆ: ಪರೀಕ್ಷೆಗೆ ಕೂರುವ ಮಗುವಿನ ಅದೃಷ್ಟವನ್ನು ಏಕಮಾತ್ರ ಪ್ರವೇಶ ಪರೀಕ್ಷೆಯ ಅಂಕದ ಆಟದ ತಕ್ಕಡಿಯಲ್ಲಿಡಲು ಅವಕಾಶ ಮಾಡಿಕೊಡದೆ, ಪರೀಕ್ಷಾ ಮಂಡಳಿಯ ಪರೀಕ್ಷೆಯಲ್ಲಿ ಗಳಿಸುವ ಅಂಕಗಳಿಗೆ ಪ್ರಾಧಾನ್ಯ ಸಿಗುವಂತೆ ಸರಕಾರ ನೋಡಿಕೊಳ್ಳಬೇಕೆಂಬುದು ಸು. ಕೋರ್ಟ್‌ ನಿರ್ದೇಶ ಹಾಗೂ ಮನವಿ. ಮಂಡಳಿ ಪರೀಕ್ಷೆಯಲ್ಲಿ 60 ಅಂಕ ಹಾಗೆಯೇ ಪ್ರವೇಶ ಪರೀಕ್ಷೆಯಲ್ಲಿ 40 ಅಂಕ -ಈ ರೀತಿಯ ಅಂಕ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಮಂಡಳಿ ಪರೀಕ್ಷೆಗಳಿಗೆ ಪ್ರಾಮುಖ್ಯ ಸಿಕ್ಕಂತಾಗುತ್ತದೆ ಎಂಬುದು ನ್ಯಾಯಾಲಯದ ಸಲಹೆ. ನಮ್ಮ ಪಿಯುಸಿ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮೇಲೆ ಈಗ ವಿವಿಧ ಪ್ರವೇಶ ಪರೀಕ್ಷೆಗಳು ಭಾರೀ ದಬ್ಟಾಳಿಕೆ ನಡೆಸುತ್ತಿವೆ. ವೃತ್ತಿಪರ ಕೋರ್ಸುಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಏರ್ಪಡಿಸುವ ಪ್ರಯತ್ನ ಸ್ವಾಗತಾರ್ಹ. ಕರ್ನಾಟಕದಲ್ಲಿ, ಪಿಯುಸಿ ವಿಜ್ಞಾನದ ವಿದ್ಯಾರ್ಥಿಗಳು ಸಿಇಟಿ, ಕಾಮೆಡ್‌ನ‌ಂಥ ಹಲವು ಪ್ರವೇಶ ಪರೀಕ್ಷೆಗಳಿಗೆ ಹಾಜರಾಗಲೇ ಬೇಕಾಗಿ ಬಂದಿದೆ.

ಈ ವಿದ್ಯಾರ್ಥಿಗಳ ಅವಸ್ಥೆ ನೋಡಿ - ಇವರಿಗೆ ಕ್ರೀಡೆ, ಸಂಗೀತ ಅಥವಾ ಇತರ ಚಟುವಟಿಕೆಗಳಿಗೆ ಸಮಯವೇ ಸಿಗುತ್ತಿಲ್ಲ. ಕರ್ನಾಟಕದಲ್ಲಿ ಶಾಲಾ ಮಟ್ಟದ ಕ್ರಿಕೆಟ್‌ಗಾಗಿ ಇರುವ ಬಿ.ಟಿ. ರಾಮಯ್ಯ ಫ‌ಲಕದ ಬಗ್ಗೆ ಇಂದು ಯಾರೂ ಸೊಲ್ಲೆತ್ತುತ್ತಿಲ್ಲವೆಂದಾದರೆ ಅಚ್ಚರಿಯೇನೂ ಇಲ್ಲ! ಇನ್ನು ಅಖೀಲಭಾರತ ವಿ.ವಿ. ಮಟ್ಟದ ಕ್ರಿಕೆಟ್‌ಗಾಗಿ ಇರುವ ರೋಹಿನrನ್‌ ಬಾರಿಯ ಟ್ರೋಫಿಯ ಬಗೆಗೂ ಇಂದು ಯಾರೂ ಮಾತನಾಡುತ್ತಿಲ್ಲ. ಸುನೀಲ್‌ ಗಾವಸ್ಕರ್‌ ಆಗಲಿ, ನಮ್ಮವರೇ ಆದ ಎಸ್‌.ಎಂ.ಎಚ್‌. ಕಿರ್ಮಾನಿಯವರಾಗಲಿ ಉನ್ನತ ಕ್ರಿಕೆಟಿಗರಾಗಿ ಬೆಳೆದು ನಿಂತುದು 1967ರಲ್ಲಿ ಇಂಡಿಯನ್‌ ಸ್ಕೂಲ್‌ ಬಾಯ್ಸ ತಂಡ ಇಂಗ್ಲೆಂಡ್‌ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಗುರುತಿಸಲ್ಪಟ್ಟ ಕಾರಣದಿಂದಲೇ.

ನಿಯಂತ್ರಣ ಯಾಕೆ ಅಸಾಧ್ಯ?
ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಶಾಲಾ ಕಾಲೇಜುಗಳಲ್ಲಿ ಕಂಡುಬರುವ ವಿದ್ಯಾರ್ಥಿಗಳಿಗಿಂತಲೂ ಕೋಚಿಂಗ್‌ ಕ್ಲಾಸ್‌ಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆಯೇ ದೊಡ್ಡ ಪ್ರಮಾಣದಲ್ಲಿರುವುದು. ವಿದ್ಯಾರ್ಥಿ ಬಾಹುಳ್ಯದ ಕಾರಣದಿಂದಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೇಲೆ ವೈಯಕ್ತಿಕ ಗಮನ ಕಷ್ಟಸಾಧ್ಯವೇ ಹೌದು. ನಮ್ಮಲ್ಲಿ ಬಂದು ರ್‍ಯಾಂಕ್‌ ಗಳಿಸಿದವರು ಅನೇಕರು ಎಂದು ಕೋಚಿಂಗ್‌ ಸಂಸ್ಥೆಗಳು ಎಷ್ಟೇ ಕೊಚ್ಚಿಕೊಂಡರೂ ಇವುಗಳ ಮೂಲೋದ್ದೇಶ ಹೆತ್ತವರಿಂದ ದೊಡ್ಡ ಮೊತ್ತದ ಶುಲ್ಕವನ್ನು ಕೀಳುವುದೇ ಆಗಿದೆ. ಕೋಚಿಂಗ್‌ ಕಂಪೆನಿಗಳು ಇಂದು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿವೆ. ಆದಾಯಕರ ವಿಭಾಗದ ಲಕ್ಷ್ಯ ಇವುಗಳ ಮೇಲೆ ಯಾಕೆ ಹರಿದಿಲ್ಲ ಎನ್ನುವುದೇ ಆಶ್ಚರ್ಯ. 

ಇವು ಕಪ್ಪುಹಣದ ಕೋಟೆಗಳಾಗಿಯೂ ಮಾರ್ಪಟ್ಟಿವೆ. ಕಾಲೇಜುಗಳ ಪ್ರವೇಶಾತಿ ಪ್ರಕ್ರಿಯೆಯ ಜತೆಜತೆಗೇ ಕೋಚಿಂಗ್‌ ಸೆಂಟರ್‌ಗಳ ಪ್ರವೇಶಾತಿ ಪ್ರಕ್ರಿಯೆಯೂ ನಡೆಯುತ್ತಿದೆ. ಇದುವರೆಗೂ "ಮಾನ್ಯತೆ ಪಡೆದ ಕೋಚಿಂಗ್‌ ಸಂಸ್ಥೆ'ಯೆಂದು ಇಂಥ ಯಾವುದೇ ಸಂಸ್ಥೆಯನ್ನು ಗುರುತಿಸಲಾಗಿಲ್ಲ. ಇವುಗಳ ಮೇಲೆ ಯಾವ ನಿಯಂತ್ರಣವನ್ನೂ ಸರಕಾರ ಇರಿಸಿಕೊಂಡಂತಿಲ್ಲ. ಇನ್ನು, ಈ ಕೋಚಿಂಗ್‌ ಕೇಂದ್ರಗಳ ಒಡೆಯರೋ; ಶಿಕ್ಷಕರನ್ನು ಶೋಷಿಸುವುದರಲ್ಲಿ ನಿಸ್ಸೀಮರು. ಖಾಸಗಿ ನರ್ಸಿಂಗ್‌ ಹೋಮ್‌ಹಾಗೂ ಆಸ್ಪತ್ರೆಗಳ ಮೇಲೆ ನಿಯಂತ್ರಣ ಸಾಧಿಸುವ ಅಧಿಕಾರ ಕರ್ನಾಟಕ ಸರಕಾರಕ್ಕೆ ಇದೆ ಎನ್ನುವುದಾದರೆ ಕೋಚಿಂಗ್‌ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸುವುದು ಯಾಕೆ ಸಾಧ್ಯವಿಲ್ಲ?

- ಅರಕೆರೆ ಜಯರಾಮ್‌

Back to Top