CONNECT WITH US  

ಶಾಸಕರ ಮೌಲ್ಯಮಾಪನಕ್ಕೆ  ಯಾವುದು ಮಾನದಂಡ?

ರಾಜ್ಯ ವಿಧಾನಸಭೆಗೆ ಮೇ 12ರಂದು ನಡೆಯುವ ಚುನಾವಣೆಗೆ "ಸಮರಗಡಿ ರೇಖೆ'ಗಳನ್ನು ಈಗಾಗಲೇ ಬಹುತೇಕ ಗುರುತಿಸಲಾಗಿದೆ; ಇದೀಗ ಕೆಲ ಸಂಘಟನೆಗಳು 14ನೆಯ ವಿಧಾನಸಭೆಯ ಶಾಸಕರುಗಳ ಪೈಕಿ ಕೆಲವರ ಸಾಧನೆಯ ಬಗೆಗಿನ ಸಮೀಕ್ಷಾ ಕಾರ್ಯ ಅರ್ಥಾತ್‌ ಮೌಲ್ಯಮಾಪನ ಕಾರ್ಯವನ್ನು ಕೈಗೆತ್ತಿಕೊಂಡಿರುವುದು ಒಂದು ಆರೋಗ್ಯಕಾರಿ ಬೆಳವಣಿಗೆ. 

ಆದರೆ ಬೆಂಗಳೂರು ನಗರ ಕ್ಷೇತ್ರಗಳ 27 ಶಾಸಕರ ಸಾಧನೆಗಳ ಮೌಲ್ಯಮಾಪನದ ರೀತಿಯನ್ನು ಗಮನಿಸಿದರೆ ಒಂದು ಕೊರತೆ ಎದ್ದು ತೋರುತ್ತದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಕೆಲ ಶಾಸಕರು ಸಂಪಾದಿಸಿದ ಆಸ್ತಿಪಾಸ್ತಿಗಳಿಗೆ ಹಾಗೂ ಚುನಾವಣಾ ಹೋರಾಟಕ್ಕಾಗಿ ಬಳಸುತ್ತಿರುವ ಹಣದ ಮೂಲ ಯಾವುದೆಂಬ ವಿಷಯಕ್ಕೆ ಸಂಬಂಧಪಟ್ಟಂತೆ ಮಾಡಲಾಗಿರುವ ಸಮೀಕ್ಷೆ ಯಲ್ಲಿ ಏನೋ ದೋಷವಿರುವಂತಿದೆ. ನಮ್ಮ ಶಾಸಕರು ಪ್ರತಿವರ್ಷವೂ ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕಾಗಿರುವು ದರಿಂದ ಇಂಥ ಮೌಲ್ಯಮಾಪನ ಕಾರ್ಯ ಕಷ್ಟಕರ ಕೆಲಸವೇನಲ್ಲ. ಗಮನಿಸಬೇಕಾದ್ದೇನೆಂದರೆ, ಈ ಮೌಲ್ಯಮಾಪನವು ಶಾಸಕರು ತೋರಿ ರುವ ಪ್ರಾಮಾಣಿಕತೆ ಹಾಗೂ ಮಾಡಿರುವ ಕೆಲಸದ ಗುಣಮಟ್ಟದ ಸೂಚಕ ಅಲ್ಲ ಎಂಬ ಎಚ್ಚರಿಕೆಯ ಮಾತನ್ನು ಈ ಸಮೀಕ್ಷೆ ನಡೆಸಿದ ಸಂಘಟನೆಯಾದ "ಬೆಂಗಳೂರು ಪೊಲಿಟಿಕಲ್‌ ಆ್ಯಕ್ಷನ್‌ ಕಮಿಟಿ' ತನ್ನ ಈ ವರದಿಯೊಂದಿಗೆ ಸ್ಪಷ್ಟವಾಗಿ ಉಲ್ಲೇಖೀಸಿದೆ.

ನಮ್ಮ ರಾಜಕೀಯ ವ್ಯವಸ್ಥೆ ಹಾಗೂ ಚುನಾವಣಾ ವ್ಯವಸ್ಥೆಗಳೆ ರಡೂ ವ್ಯಾಪಾರೀಕರಣಗೊಂಡಿವೆ. ಹೀಗೆಂದೇ, ಕನಿಷ್ಠ ಕೆಲವೊಂದು ಮತದಾನ ಕ್ಷೇತ್ರಗಳಲ್ಲಾದರೂ ವಿವಿಧ ಪಕ್ಷಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ದುಡ್ಡೆಂಬುದು ಬಹುದೊಡ್ಡ ಪಾತ್ರವನ್ನು ನಿರ್ವಹಿಸುತ್ತಿ ದೆಯೆಂದು ಯಾರಾದರೂ ಭಾವಿಸಿದಲ್ಲಿ ಇದನ್ನು ತಪ್ಪೆನ್ನಲಾಗದು. ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗದಿರುವ ನಾಯಕರ ಬೆಂಬಲಿಗರು ಇಂಥ ಆರೋಪವನ್ನು ಬಹಿರಂಗವಾಗಿಯೇ ಮಾಡುತ್ತಿಲ್ಲವೆ? ಇಂದು ಸಾಕಷ್ಟು ಅನುಕೂಲವಂತರಾಗಿರು ವವರು ಕೂಡ ಗ್ರಾಮ ಪಂಚಾಯತ್‌ ಚುನಾವಣೆಗೆ ಕೂಡ ನಿಲ್ಲಲು ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೂವರೆ ಲಕ್ಷ ರೂ.ಗಳಷ್ಟು ಕಿರು ಗಾತ್ರದ ವಾರ್ಷಿಕ ಬಜೆಟ್‌ ಇರುವ ಪಂಚಾಯತ್‌ ಚುನಾವಣೆಗಳಿಗೂ ಲಕ್ಷಗಟ್ಟಲೆ ಖರ್ಚು ಮಾಡುವವರಿದ್ದಾರೆಂಬ ಮಾತನ್ನು ಜೆ.ಎಚ್‌. ಪಟೇಲರು ಹೇಳುತ್ತಿದ್ದರು.

ಅದೃಷ್ಟವಶಾತ್‌ ಇಂದು ಪ್ರಜಾಸತ್ತಾತ್ಮಕ ಹಕ್ಕುಗಳ ಸಂಘಟನೆ (ಅಸೋಸಿಯೇಶನ್‌ ಆಫ್ ಡೆಮಾಕ್ರಟಿಕ್‌ ರೈಟ್ಸ್‌) ಕರ್ನಾಟಕ ಮತ್ತಿತರ ಕಡೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಹೊಂದಿರುವ ಆಸ್ತಿಪಾಸ್ತಿ ವಿವರವನ್ನು ನಿಯತವಾಗಿ ಪ್ರಕಟಿಸುತ್ತಿದೆ. ಸ್ಪರ್ಧಾಕಾಂಕ್ಷಿ ಸಂಸದರು ಹಾಗೂ ಶಾಸಕರು ತಮ್ಮ ಸದಸ್ಯತ್ವದ ಅವಧಿಯಲ್ಲಿ ಪಡೆದ ಹಣದ ಹಾಗೂ ಗಳಿಸಿದ ಸಂಪತ್ತಿನ ವಿವರವನ್ನು ಘೋಷಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಈ ವರ್ಷದ ಫೆಬ್ರವರಿಯಲ್ಲಿ ಆದೇಶಿಸಿತ್ತು. ಅಭ್ಯರ್ಥಿಗಳು ಚುನಾವಣೆಗಾಗಿ ಬಳಸುವ ಹಣ ಹಾಗೂ ಹೊಂದಿರುವ ಆಸ್ತಿಪಾಸ್ತಿ ಕುರಿತ ವಿಷಯವನ್ನು ಪರಿಶೀಲಿಸಬೇಕಾಗಿರುವುದು ಈ ತೀರ್ಪಿನ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪು ಕೇವಲ ಅಭ್ಯರ್ಥಿಗಳಿಗಷ್ಟೆ ಅಲ್ಲ ಅವರ ಪತಿ/ಪತ್ನಿ, ಸಂಗಡಿಗರು ಹಾಗೂ ಬಳಗದವರಿಗೂ ಅನ್ವಯವಾಗುತ್ತದೆ. 

ಸರಕಾರೇತರ ಸಂಸ್ಥೆಯಾದ "ಲೋಕ್‌ಪ್ರಹರಿ' ದಾಖಲಿಸಿದ್ದ ಪ್ರಕರಣದಲ್ಲಿ ಈ ತೀರ್ಪನ್ನು ನೀಡಿದ್ದ ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್‌ ಹಾಗೂ ಅಬ್ದುಲ್‌ ನಜೀರ್‌ ಭಾರತ ಸರಕಾರಕ್ಕೆ ವಿಶೇಷ ಸೂಚನೆಯೊಂದನ್ನೂ ನೀಡಿತ್ತು. ಸಂಸದರು ಹಾಗೂ ಶಾಸಕರ ಸಂಪತ್ತಿನ ಗಳಿಕೆಯ ಮೇಲೆ ಗಮನವಿಡಲು ಖಾಯಂ ಕಣ್ಗಾವಲು ಘಟಕವೊಂದನ್ನು ಸ್ಥಾಪಿಸಬೇಕೆಂಬುದೇ ನ್ಯಾಯಾಲಯವು ಸರಕಾರಕ್ಕೆ ನೀಡಿದ್ದ ಸೂಚನೆ. ಕಾನೂನು ನಿರ್ಮಾತೃಗಳೇ ಲೆಕ್ಕಕ್ಕೆ ಸಿಕ್ಕದಂಥ ಸಂಪತ್ತನ್ನು ಕಲೆಹಾಕುತ್ತಾರೆಂದರೆ ಇದು ಪ್ರಜಾಸತ್ತೆಯ ವೈಫ‌ಲ್ಯದ ದ್ಯೋತಕ; ಇದು ಪ್ರಜಾಪ್ರಭುತ್ವದ ಕುಸಿತಕ್ಕೆ , ಮಾಫಿಯಾದ ಅಬ್ಬರ ತಾಳಕ್ಕೆ ಹಾದಿ ಮಾಡಿಕೊಡುವಂಥ ವಿದ್ಯಮಾನ ಎಂದೂ ಕೋರ್ಟು ಎಚ್ಚರಿಸಿತ್ತು. ಸಿದ್ದರಾಮಯ್ಯ ಸರಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ತೀರ್ಪಿಗೆ ಸಂಬಂಧಿಸಿದಂತೆ ಈಗಾಗಲೇ ಕಾರ್ಯೋನ್ಮುಖರಾಗಬೇಕಿತ್ತು.

ಚುನಾವಣಾ ಆಯೋಗ ಈ ತೀರ್ಪಿಗೆ ಸಂಬಂಧಿಸಿದಂತೆ ಅಗತ್ಯದ ಆದೇಶವನ್ನು ಹೊರಡಿಸಿದ್ದಿದ್ದರೆ ಇಂಥ ಆದೇಶ ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆಯ ಮೇಲೆ ಪ್ರಭಾವ ಬೀರಿಯೇ ಬೀರಿರುತ್ತಿತ್ತು. 2002ರಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ್ದ ಇನ್ನೊಂದು ಐತಿಹಾಸಿಕ ತೀರ್ಪಿನ ಪ್ರಕಾರ ಅಭ್ಯರ್ಥಿಗಳು ತಮ್ಮ ಶಿಕ್ಷಣ, ತಾವು ಎದುರಿಸುತ್ತಿರುವ ಕ್ರಿಮಿನಲ್‌ ಕೇಸುಗಳು ಇತ್ಯಾದಿ ಗಳ ವಿವರಗಳನ್ನು ಘೋಷಿಸಬೇಕೆಂಬುದನ್ನು ಕಡ್ಡಾಯಗೊಳಿಸಲು ಚುನಾವಣಾ ಕಾಯ್ದೆಗೆ ಸೂಕ್ತ ತಿದ್ದುಪಡಿಯನ್ನು ಮಾಡಲಾಗಿತ್ತು. ಈ ಎರಡೂ ತೀರ್ಪುಗಳು ನ್ಯಾಯಾಂಗ ತಂದ ಚುನಾವಣಾ ಸುಧಾರಣಾ ಕ್ರಮಗಳಲ್ಲಿ ಮುಖ್ಯವಾದವು ಕಾನೂನಿನ ಮೂಲಕ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಂಸತ್ತು ವಿಫ‌ಲಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯಗಳು ಈ ವಿಷಯದಲ್ಲಿ ಗಂಭೀರ ಕ್ರಮ ತೆಗೆದುಕೊಳ್ಳಬೇಕಾಯಿತು.

ಮೌಲ್ಯಮಾಪನ: ಕೆಲವು ಅನುಮಾನ
ಮುಂದಿನ ವಿಧಾನಸಭಾ ಸದಸ್ಯರಾಗಬಯಸುತ್ತಿರುವ ಅಭ್ಯರ್ಥಿಗಳ ಪೈಕಿ ಕೆಲವರು ಮೆರವಣಿಗೆಗಳಿಗಾಗಿ, ಮತದಾರರಿಗೆ ನೀಡುವ ಉಚಿತ ಕೊಡುಗೆಗಳಿಗಾಗಿ ಹಾಗೂ ಉಚಿತ ಭೋಜನ ಕೂಟಗಳಿಗಾಗಿ ಧಾರಾಳ ವೆಚ್ಚ ಮಾಡಿದ್ದಾರೆ; ಈ ಮೂಲಕ ಚುನಾವಣಾ ವೆಚ್ಚಕ್ಕೆಂದು ನಿಗದಿ ಪಡಿಸಲಾಗಿರುವ ಪರಿಮಿತಿಯನ್ನು ಮೀರಿ ಹೋಗಿದ್ದಾರೆ. ಚುನಾವಣಾ ಆಯೋಗದ ಆದೇಶದ ಮೇರೆಗೆ ಪೊಲೀಸರು ಚುನಾವಣಾ ವೆಚ್ಚಕ್ಕೆಂದು ಒಯ್ಯಲಾಗುತ್ತಿದ್ದ ದೊಡ್ಡ ದೊಡ್ಡ ಮೊತ್ತಗಳನ್ನು ವಶಪಡಿಸಿಕೊಂಡಿದ್ದಾರೆ.

ಮಹಾನಗರದ ಶಾಸಕರ ಸಾಧನೆಗಳ ಮೌಲ್ಯಮಾಪನದತ್ತ ಹೊರಳಿ ನೋಡುವುದಾದರೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಅವರಿಗೆ ಗರಿಷ್ಠ ಅಂಕ ನೀಡಲಾಗಿದೆ; ಇದೇಕೆ ಹೀಗೆ - ಎಂದು ಪ್ರಶ್ನಿಸುವಂತಾಗಿದೆ. ಡಿಎಸ್‌ಪಿ ಗಣಪತಿ ಅವರ ಆತ್ಮಹತ್ಯಾ ಪ್ರಕರಣದ ಹಿನ್ನೆಲೆಯಲ್ಲಿ ಗೃಹಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದವರು ಜಾರ್ಜ್‌. ಅವರು ತಮ್ಮ ಕ್ಷೇತ್ರದ ಪೋಷಣೆಗೆ ಸಾಕಷ್ಟು ದುಡಿದಿರಬಹುದು. ತಮ್ಮ ಮತದಾರರಿಗೆ ತೃಪ್ತಿ ಉಂಟಾ ಗುವಂತೆ ಕೆಲಸ ಮಾಡಿದ್ದಿರಬಹುದು; ಆದರೆ ಒಟ್ಟಾರೆಯಾಗಿ ಬೆಂಗಳೂರು ನಗರಕ್ಕೆ ಅವರು ಸೇವೆ ಸಲ್ಲಿಸಿದ ರೀತಿ ಯಾವುದು ಎನ್ನುವುದೇ ಪ್ರಶ್ನೆ. ಈ ಅಂಕಣಕಾರನಿಗೆ ದೊರೆತಿರುವ ಮಾಹಿತಿಯ ಪ್ರಕಾರ ಅವರು ವಿಧಾನಸೌಧ (ಸೆಕ್ರೆಟರಿಯೇಟ್‌) ದಲ್ಲಿರುವ ತಮ್ಮ ಕಚೇರಿಗೆ ಹಾಜರಾಗಿರುವುದೇ ಕಡಿಮೆ.

ಬೆಂಗಳೂರಿನ ಹಾಗೂ ಇಡೀ ಕರ್ನಾಟಕದ ಜನರ ಪಾಲಿಗೆ ಅವರೊಬ್ಬ ಅಲಭ್ಯ ವ್ಯಕ್ತಿಯಾಗಿದ್ದವರು. ಅವರು ಎಲ್ಲಿಂದ ಕಾರ್ಯನಿರ್ವಹಿಸುತ್ತಿದ್ದರೆಂಬುದು ಅವರ ಆಪ್ತ ಸಿಬಂದಿ ಹಾಗೂ ಬೆಂಬಲಿಗರ ಹೊರತು ಬೇರೆ ಯಾರಿಗೂ ತಿಳಿದಿರಲಿಲ್ಲ. ಅವರಿಗೊಂದು ಅಧಿಕೃತ ನಿವಾಸವನ್ನು ಒದಗಿಸಲಾಗಿದ್ದರೂ ಅವರು ಸ್ವಂತ ಮನೆಯಲ್ಲೇ ನೆಲೆಸಿದ್ದರು. ಕೆ.ಜೆ. ಜಾರ್ಜ್‌ ಅವರ ಬಗ್ಗೆ ಏನು ಹೇಳಲಾಗುತ್ತಿದೆಯೋ ಅದೇ ಮಾತನ್ನು ನಮ್ಮ ಉಳಿದ ಅನೇಕ ಮಂತ್ರಿಗಳಿಗೂ ಅನ್ವಯಿಸ ಬಹುದು. ಅವರು ತಮ್ಮ ಅಧಿಕೃತ ಚೇಂಬರ್‌ಗಳಿಗೆ ಅಪರೂಪದ ಅತಿಥಿಗಳು.

ಇನ್ನೂ ನಾಚಿಕೆಗೇಡಿನ ಅತ್ಯಂತ ಧಾಷ್ಟದ ಸಂಗತಿಯೆಂದರೆ ನಮ್ಮ ಕೆಲ ಸಚಿವರುಗಳು ತಮ್ಮ ಖಾಸಗಿ ಗೆಸ್ಟ್‌ಹೌಸ್‌ ಗಳಿಂದ ಕಾರ್ಯನಿರ್ವಹಿಸುತ್ತಿರುವುದು. ಮಾಜಿ ಮುಖ್ಯಮಂತ್ರಿಯೊಬ್ಬರು ಬಸ್ಸುಗಳ ಮಾಲೀಕರೊಬ್ಬರಿಗೆ ಸೇರಿದ ಅತಿಥಿಗೃಹದಲ್ಲಿದ್ದುಕೊಂಡೇ ಕರ್ತವ್ಯ ನಿರ್ವಹಿಸುತ್ತಿದ್ದರೆಂಬ ಮಾತೂ ಇದೆ. ಇಂಥ ವ್ಯಕ್ತಿಗಳು ಮುಖ್ಯಮಂತ್ರಿಯ ಅಥವಾ ಮಂತ್ರಿ ಪದವಿಯ ಘನತೆ ಗೌರವಗಳನ್ನು ಅಕ್ಷರಶಃ ಧೂಳೀಪಟಗೊಳಿಸಿದ್ದಾರೆ; ಜತೆಗೆ ತಮ್ಮ ಗೌರವಕ್ಕೂ ಕುಂದು ತಂದು ಕೊಂಡಿದ್ದಾರೆ. ಕಳೆದ ಕೆಲ ದಶಕಗಳ ಅವಧಿಯಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದವರು ಕೇವಲ ತಮ್ಮ ಶಾಸಕರಿಗೆ, ಪಕ್ಷದ ಹಿರಿಯ ನಾಯಕರಿಗೆ, ತಮ್ಮ ಆಪ್ತ ಮಿತ್ರರಿಗೆ ಹಾಗೂ ತಮ್ಮ ಮತಕ್ಷೇತ್ರದಿಂದ ಬಂದ ಜನರಿಗಷ್ಟೇ ಸುಲಭ ಲಭ್ಯರಾಗುತ್ತ ಬರುತ್ತಿರುವುದನ್ನು ಗಮನಿಸಬೇಕಾಗಿದೆ. ವಾರಕ್ಕೊಮ್ಮೆ ಮಂಗಳವಾರದಂದು "ಜನತಾದರ್ಶನ' ಏರ್ಪಡಿಸಿದರಷ್ಟೇ ಸಾಲದು, ನಮ್ಮ ಮುಖ್ಯಮಂತ್ರಿಗಳ ಪೈಕಿ ಜನರಿಗೆ ಬೇಕೆಂದಾಗ ಅತ್ಯಂತ ಸುಲಭವಾಗಿ ಸಿಗುತ್ತಿದ್ದವರೆಂದರೆ ವೀರಪ್ಪ ಮೊಯ್ಲಿಯವರು. ಜನರ ಭೇಟಿಗೆ ಅವಕಾಶ ನೀಡಿ ಅವರ ಅಹವಾಲು ಆಲಿಸುವ ವಿಷಯದಲ್ಲಿ ಅವರು ದಾಖಲೆಯನ್ನೇ ಸ್ಥಾಪಿಸಿದ್ದಾರೆ.

ಅವರಿಗಿಂತ ಪೂರ್ವದಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್‌.
ಬಂಗಾರಪ್ಪನವರಿಗೆ ಸೊರಬ ವಿಧಾನ ಸಭಾ ಕ್ಷೇತ್ರದಲ್ಲಿ ಹೇರಳ ಬೆಂಬಲಿಗರೇನೋ ಇದ್ದರು, ಆದರೆ ಜನರನ್ನು ಕಂಡು ಅವರ ಮಾತನ್ನು ಆಲಿಸುವ ವಿಚಾರದಲ್ಲಿ ಅವರು ಮೊಯ್ಲಿಯವರಂತಲ್ಲ. ಶಾಸಕರ ಸಾಧನೆಯನ್ನು ಪರಿಶೀಲಿಸುವಾಗ ಅವರು ವಿಧಾನಸಭಾ ಸದನದಲ್ಲಿ ನಡೆಯುವ ಚರ್ಚೆಗಳಲ್ಲಿ ಪಾಲ್ಗೊಳ್ಳುವ ರೀತಿ ಹೇಗಿರುತ್ತದೆಂಬುದನ್ನೂ (ಮೌಲ್ಯಾಂಕನದ ಮಾನದಂಡವ 
ನ್ನಾಗಿ) ಪರಿಗಣಿಸಬೇಕಾಗುತ್ತದೆ. ಶಾಸಕಾಂಗ ಸಮಿತಿಗಳಲ್ಲಿ ಅವರು ಏನು ಮಾಡುತ್ತಾರೆ ಅಥವಾ ಏನು ಮಾಡುವುದಿಲ್ಲ ಎಂಬುದನ್ನು ಲೆಕ್ಕ ಹಾಕುವುದು ತೀರಾ ಕಷ್ಟದ ಕೆಲಸ. ಇಂದಿನ ದಿನಗಳಲ್ಲಂತೂ ಶಾಸಕರ (ಸದನದಲ್ಲಿನ) ಕಾರ್ಯನಿರ್ವಹಣೆಯ ರೀತಿಗೂ ಇಂದಿನ ರಾಜಕೀಯಕ್ಕೂ ಇರಬೇಕಾದ ಸಂಬಂಧ ವೆಂಬುದು ತೀರಾ ಮಸುಕಾಗುತ್ತ ಬರುತ್ತಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ನಮ್ಮ ವಿಧಾನ ಮಂಡಲದ ಎರಡೂ ಸದನಗಳು ಕಲಾಪ ನಡೆಸಿದ್ದು ಕೇವಲ 216 ದಿನಗಳಷ್ಟೆ. ಶಾಸನ ಸಭೆಯಲ್ಲಿ
ಸಕ್ರಿಯರಾಗಿರುವವರು, ಚುನಾವಣೆಯಲ್ಲಿ ಸೋಲು ಕಾಣು 
ತ್ತಾರೆಂಬುದೂ ಒಂದು ಕಟು ವಾಸ್ತವವೇ ಆಗಿದೆ. ಮೌನ ಮುನಿಗಳಾಗಿ ಕುಳಿತುಕೊಂಡಿರುವವರು ಭಾರೀ ಬಹುಮತದಿಂದ ಪುನರಾಯ್ಕೆಯಾಗುತ್ತಿರುವುದೂ ಸುಳ್ಳಲ್ಲ.

ಶಾಸಕರೂ ಪಾವತಿ ಸುದ್ದಿಗಳೂ
ಬೆಂಗಳೂರು ನಗರದ ಶಾಸಕರು ಬೃಹತ್‌ ಬೆಂಗಳೂರು ಮಹಾ ನಗರಪಾಲಿಕೆಯ ಸದಸ್ಯರೊಡನೆ ಯಾವ ರೀತಿ ಸಂಬಂಧವಿರಿಸಿ ಕೊಂಡಿದ್ದಾರೆಂಬುದೂ ಮೌಲ್ಯಮಾಪನದ ಒಂದು ಮುಖ್ಯ ಮಾನದಂಡವಾಗಬೇಕು. ಅನೇಕ ಶಾಸಕರು ಪಾಲಿಕೆಯ ಸದಸ್ಯರ ಕಾರ್ಯನಿರ್ವಹಣೆಯಲ್ಲಿ ಮೂಗು ತೂರಿಸುತ್ತಾರೆ; ಅವರನ್ನು ತಮ್ಮ ಕೈಗೆಳಗಿನ ಅಧಿಕಾರಿಗಳಂತೆ ನಡೆಸಿಕೊಳ್ಳುತ್ತಾರೆ. ಇದಕ್ಕಿರುವ
ಹಲವು ಕಾರಣಗಳಲ್ಲಿ ಒಂದೆಂದರೆ ಪಾಲಿಕೆ ಸದಸ್ಯರಾಗಿ, ಅಷ್ಟೇಕೆ ಮೇಯರ್‌ಗಳಾಗಿಯೂ ಆಯ್ಕೆಯಾಗಿ ಬರುವವರು ಕೇವಲ "ಮಾಲಕ ಮಹಾಶಯ'ರಷ್ಟೆ! ಒಂದು ಕಾಲದಲ್ಲಿ ಪುರ -ನಗರಸಭೆಗಳ, ಪಾಲಿಕೆಗಳ ಸದಸ್ಯರು ಮೇರು ವ್ಯಕ್ತಿತ್ವದವರಾಗಿರುತ್ತಿದ್ದರು. ರಾಜೀವ್‌ ಗಾಂಧಿ ಸರಕಾರ ಆಡಳಿತದ ವಿವಿಧ ವಿಭಾಗಗಳಲ್ಲಿ ಮೀಸಲಾತಿ ನೀತಿಯ ಅಳವಡಿಕೆಗೆ ಒತ್ತು ನೀಡಿದ ಪರಿಣಾಮವಾಗಿ ಕ್ರಮೇಣ ನಗರಾಡಳಿತ ಸಂಸ್ಥೆಗಳ ಗುಣಮಟ್ಟ ಕುಸಿಯುತ್ತ ಬಂತು ಎಂಬ ಮಾತಿನಲ್ಲಿ ಅರ್ಥವಿಲ್ಲದೆ ಇಲ್ಲ .

ಇನ್ನು ಕೆಲ ಟಿವಿ ವಾಹಿನಿಗಳು ನಮ್ಮ ಶಾಸಕರ ಕಾರ್ಯ 
ನಿರ್ವಹಣೆಯ ಮೌಲ್ಯಮಾಪನಕ್ಕೆ ಇಳಿದಿರುವುದನ್ನು ನೋಡಿದರೆ, ಈ ಸುದ್ದಿವಾಹಿನಿಗಳ ಪ್ರಾಮಾಣಿಕತೆಯ ಬಗೆಗೆಯೇ ಅನುಮಾನ ಮೂಡುವಂತಾಗುತ್ತದೆ. ಕೆಲವಂತೂ ಶುದ್ಧಾಂಗ "ಪಾವತಿ ಸುದ್ದಿ'ಗಳು. ಇಂಥ ಅಕ್ರಮಗಳ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಕರ್ನಾಟಕ ತುಂಬಾ ಹಿಂದಿದೆ. ಅಪರಾಧವೆಸಗುವ ಯಾವನೇ ಶಾಸಕನ ವಿರುದ್ಧ ಕ್ರಮ ತೆಗೆದುಕೊಂಡ ಉದಾಹರಣೆ ಇಲ್ಲ. "ಪಾವತಿ ಸುದ್ದಿ'ಯ ವಿಷಯದಲ್ಲಿ ಪತ್ರಕರ್ತರ ಮೇಲೆ ಗೂಬೆ ಕೂರಿಸಲಾಗುತ್ತಿದೆ; ಆದರೆ ಅವರ ಹಿಂದಿರುವ ಮಾಧ್ಯಮ ಸಂಸ್ಥೆಗಳೇ ಕಾರಣ ಎಂಬುದನ್ನು ಅಗತ್ಯವಾಗಿ ಗಮನಿಸಬೇಕು.


Trending videos

Back to Top