CONNECT WITH US  

ಹೈ-ಫೈ ವಂಚಕರ ಕತೆ ಮತ್ತು ಭಾರತದ ಜೈಲುಗಳ ಭಧ್ರತೆ

ಸಾಂದರ್ಭಿಕ ಚಿತ್ರ

ಬ್ರಿಟನಿನ ಜೈಲುಗಳ "ವಾತಾವರಣ' ಹೇಗಿದೆ ಗೊತ್ತೆ? ಬ್ರಿಟಿಷ್‌ ಸೆರೆಮನೆ ಸಚಿವ ರೋರಿ ಸ್ಟೀವರ್ಟ್‌ ಅಲ್ಲಿನ "ಕೆಲ ಜೈಲುಗಳ ಸ್ಥಿತಿ ಸಂಕಟ ಹುಟ್ಟಿಸುವ ರೀತಿಯಲ್ಲಿದೆ' ಎಂಬುದನ್ನು ಹೇಳಿಕೆಯೊಂದರಲ್ಲಿ ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ. ಬ್ರಿಟನ್‌ನಲ್ಲಿರುವ 215 ಜೈಲುಗಳ ಪೈಕಿ 150 ಸೆರೆಮನೆಗಳ ಸ್ಥಿತಿ ತೃಪ್ತಿದಾಯಕವಾಗಿಲ್ಲ! 

ಭಾರತದಿಂದ ಲಂಡನ್‌ಗೆ ಹೋಗಿ ನೆಲೆಸಿರುವ ಬ್ಯಾಂಕ್‌ ವಂಚನೆ ಪ್ರಕರಣದ ಆರೋಪಿ ಉದ್ಯಮಿ ವಿಜಯ್‌ ಮಲ್ಯ ಗಡೀಪಾರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಲಂಡನ್‌ನ ವೆಸ್ಟ್‌ ಮಿನಿಸ್ಟರ್‌ನಲ್ಲಿರುವ ಮ್ಯಾಜಿಸ್ಟ್ರೇಟ್‌ ಕೋರ್ಟಿನ ನ್ಯಾಯಾಧೀಶರು ವಿಚಿತ್ರ ಆದೇಶವೊಂದನ್ನು ಹೊರಡಿಸಿದ್ದಾರೆ. ತಾನೊಂದು ವೇಳೆ ಭಾರತಕ್ಕೆ ಮರಳಿದರೆ ಜೈಲೇ ಗತಿಯಾದೀತು ಎಂದು ಮಲ್ಯ ತನ್ನ ವಕೀಲರ ಮೂಲಕ ಭೀತಿ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಿರುವ ವೆಸ್ಟ್‌ ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ "ಭಾರತದ ಜೈಲುಗಳ ಸ್ಥಿತಿ ಹೇಗಿದೆಯೆಂಬುದನ್ನು ಪರಿಶೀಲಿಸಬೇಕಿದೆ; ಮುಂಬಯಿಯ ಆರ್ಥರ್‌ ರೋಡಿನ ಜೈಲಿನ ಕೊಠಡಿಯ ವಿಡಿಯೋ ಚಿತ್ರಿಕರಣ ಮಾಡಿ ತನಗೆ ಸಲ್ಲಿಸಿ' ಎಂದು ಭಾರತೀಯ ತನಿಖಾ ಸಂಸ್ಥೆಗಳಿಗೆ ಆದೇಶಿಸಿದ್ದಾರೆ. 

ದೇಶದ ಸುದ್ದಿ ಚಾನೆಲ್‌ಗ‌ಳು ಹಾಗೂ ವಾರ್ತಾ ಪತ್ರಿಕೆಗಳ ಪೈಕಿ ಕೆಲವೊಂದರ ಪಾಲಿಗೆ ಮಲ್ಯ ಅಕ್ಷರಶಃ ಒಬ್ಬ ಹೀರೋ ಆಗಿದ್ದರೆನ್ನುವುದು; ಆತ ನಮ್ಮಲ್ಲಿನ ಹಲವಾರು ಬ್ಯಾಂಕುಗಳಿಗೆ 9000 ಕೋ.ರೂ.ಗಳಷ್ಟು ದೊಡ್ಡ ಮೊತ್ತವನ್ನು ವಂಚಿಸಿರುವುದು ಬಹುತೇಕ ಎಲ್ಲರಿಗೂ ಚೆನ್ನಾಗಿ ತಿಳಿದಿರುವ ಸಂಗತಿಯೇ. ಅತ್ಯಂತ ಪ್ರಖ್ಯಾತವಾಗಿದ್ದ ಮಲ್ಯ ಒಡೆತನದ ಕಿಂಗ್‌ಫಿಶರ್‌ ವಿಮಾನ ಸಂಸ್ಥೆ ನೆಲಕಚ್ಚಿದ್ದರಿಂದ ನೂರಾರು ಮಂದಿ ಕೆಲಸ ಕಳೆದು ಕೊಳ್ಳಬೇಕಾಯಿತು. ಬಂಧನವಾದೀತೆಂಬ ಭೀತಿಯಿಂದ ಮಲ್ಯ ಸಾಹೇಬರು 2016ರ ಮಾರ್ಚ್‌ 26ರಂದು ಇಂಗ್ಲೆಂಡ್‌ಗೆ ಪಲಾಯನಗೈದರು. ಎರಡು ತಿಂಗಳ ಬಳಿಕ, ರಾಜ್ಯಸಭಾ ಸದಸ್ಯತ್ವದಿಂದ ತನ್ನನ್ನು ವಜಾಗೊಳಿಸಬಹುದೆಂಬ ಭೀತಿಯಿಂದ ಈ ಸ್ಥಾನಕ್ಕೆ ರಾಜಿನಾಮೆ ಕೊಟ್ಟದ್ದೂ ಆಯಿತು. ಆತನನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳಿಸಿದ್ದವರು, ನಮ್ಮ ಕರ್ನಾಟಕದ ಹಿಂದಿನ ವಿಧಾನಸಭೆಯ "ಗೌರವಾನ್ವಿತ' ಸದಸ್ಯರು. 

ಕಳೆದ ವರ್ಷ ನಮ್ಮ ಸುಪ್ರೀಂಕೋರ್ಟ್‌ ವಿಜಯ್‌ ಮಲ್ಯ ಓರ್ವ "ನ್ಯಾಯಾಲಯ ನಿಂದನೆಗೈದ ಅಪರಾಧಿ'ಯೆಂದು ಘೋಷಿಸಿ, 2017ರ ಜುಲೈಯೊಳಗೆ ಆತ ತನ್ನೆದುರು ಹಾಜರಾಗಬೇಕೆಂದು ಆದೇಶಿಸಿತು. ಇದಕ್ಕೆ ಮುನ್ನವೇ ಆತನನ್ನು ಸ್ಕಾಟ್ಲೆಂಡ್‌ ಯಾರ್ಡ್‌ ಪೊಲೀಸರು ಬಂಧಿಸಿದ್ದರು.
ಭಾರತಕ್ಕೆ ಮರಳಿದರೆ ತನ್ನ ಜೀವಕ್ಕೆ ಅಪಾಯವಿದೆ. ಅಲ್ಲಿನ ಜೈಲಿನಲ್ಲೇ ಸಾಯಬೇಕಾದೀತು ಎಂದು ಮಲ್ಯ ತನ್ನ ವಕೀಲರ ಮೂಲಕ ಲಂಡನ್‌ ಮ್ಯಾಜಿಸ್ಟ್ರೇಟ್‌ ಕೋರ್ಟಿನೆದುರು ಭಿನ್ನವಿಸಿ ಕೊಂಡಿದ್ದರು. "ಭಾರತದ ಜೈಲುಗಳ ಸ್ಥಿತಿ ಕಳಪೆಯಾಗಿದೆ; ಮಲ್ಯರ ಗಡೀಪಾರು ಪ್ರಸ್ತಾವವನ್ನು ತಾನು ವಿರೋಧಿಸುವುದಕ್ಕೆ ಇದೇ ನಿಜವಾದ ಕಾರಣ' ಎಂದು ಮಲ್ಯ ಸಾಹೇಬರ ವಕೀಲರು ಮ್ಯಾಜಿಸ್ಟ್ರೇಟರಿಗೆ ವಿವರಿಸಿದ್ದಾರೆ. 

ಈ ಇಡೀ ಪ್ರಸಂಗವನ್ನು ಇನ್ನೊಂದು ದೃಷ್ಟಿಯಿಂದ ನೋಡುವುದಾದರೆ ಹೀಗೆ ಹೇಳಬಹುದು - ಎಮ್ಮಾ ಆರ್ಬತ್‌ನಾಟ್‌ ಎಂಬ ಈ ಮಹಿಳಾ ಮ್ಯಾಜಿಸ್ಟ್ರೇಟ್‌ ಬಹುಶಃ ಭಾರತವೆಂಬ ದೇಶ ಬ್ರಿಟಿಷ್‌ ವಸಾಹತುವಾಗಿಯೇ ಉಳಿದುಕೊಂಡಿದೆಯೆಂದೂ ತನ್ನ ಅಧಿಕಾರ ವ್ಯಾಪ್ತಿ ಭಾರತದವರೆಗೂ ವ್ಯಾಪಿಸಿದೆಯೆಂದೂ ಭಾವಿಸಿಕೊಂಡಂತಿದೆ. ಆದರೆ ಈ ವಿಷಯದಲ್ಲಿ ಅವರೊಬ್ಬರನ್ನೇ ದೂರುವಂತಿಲ್ಲ. ಕಾರಣ ವಿದ್ಯಾವಂತರನ್ನೂ ಒಳಗೊಂಡಂತೆ ಬ್ರಿಟಿಷ್‌ ಯುವಜನತೆಯ ಪೈಕಿ ಹೆಚ್ಚಿನವರಿಗೆ ಭಾರತದ ಬಗ್ಗೆ ಹೆಚ್ಚಿನ ತಿಳಿವಳಿಕೆಯಿಲ್ಲ; ಬ್ರಿಟಿಷ್‌ ಆಡಳಿತದ ಸಮಯದಲ್ಲಿ ಬ್ರಿಟಿಷರು ಭಾರತದಲ್ಲಿ ನಡೆಸಿದ್ದ ಶೋಷಣೆಯ ಬಗೆಗಾಗಲಿ, ಇಲ್ಲಿ ನಡೆದ ಸ್ವಾತಂತ್ರ್ಯ ಆಂದೋಲನವಾಗಲಿ ಇಂದಿನ ತಲೆ ಮಾರಿನ ಯುವ ಬ್ರಿಟಿಷ್‌ ಪ್ರಜೆಗಳಿಗೆ ಹೆಚ್ಚೇನೂ ಗೊತ್ತಿದ್ದಂತಿಲ್ಲ. ಆರ್ಥರ್‌ ರೋಡ್‌ ಜೈಲ್‌ ಅಥವಾ ಮುಂಬೈ ಸೆಂಟ್ರಲ್‌ ಜೈಲ್‌ ಸ್ಥಾಪನೆಯಾದುದು 1926ರಲ್ಲಿ; ಅದೂ ಬ್ರಿಟಿಷರಿಂದಲೇ. ಈ ಸೆರೆಮನೆ ಇರುವುದು ದಕ್ಷಿಣ ಮುಂಬೈಯಲ್ಲಿ, ಜೇಕಬ್ಸ್ ಸರ್ಕಲ್‌ನ ಬಳಿ. ಬ್ರಿಟಿಷ್‌ ಮ್ಯಾಜಿಸ್ಟ್ರೇಟ್‌ ಕೋರ್ಟಿನ ಈ ಆದೇಶಕ್ಕೆ ಉತ್ತರಿಸಿರುವ ಕೇಂದ್ರದ ಗೃಹ ಸಚಿವಾಲಯ, ಆರ್ಥರ್‌ ರೋಡ್‌ ಸೆರೆಮನೆ ಅತ್ಯಂತ ಗರಿಷ್ಠ ಭದ್ರತೆಯ ಜೈಲೆಂದೂ ದೇಶದಲ್ಲೇ ಅತ್ಯುತ್ತಮ ಹಾಗೂ ಸುಭದ್ರ ಸೆರೆಮನೆ ಇದೆಂದೂ ಒತ್ತಿ ಹೇಳಿದೆ. ನಮ್ಮ ಜೈಲುಗಳಲ್ಲಿ ಕೈದಿಗಳ ಹಕ್ಕುಗಳನ್ನು ಚೆನ್ನಾಗಿಯೇ ರಕ್ಷಿಸಲಾಗುತ್ತಿದೆಯೆಂದೂ ಅದು ತಿಳಿಸಿದೆ.

ಆರ್ಥರ್‌ ರೋಡ್‌ ಜೈಲು: ಮಲ್ಯಗೆ ಭೀತಿ, ದಾವೂದ್‌ಗೆ ಪ್ರೀತಿ!
ವಿಜಯ ಮಲ್ಯರ ಭೀತಿಯ ಕತೆ ಇದಾದರೆ, ದೇಶದ ಅತ್ಯಂತ "ವಾಂಟೆಡ್‌' ಕ್ರಿಮಿನಲ್‌ಗ‌ಳಲ್ಲಿ ಓರ್ವನಾಗಿರುವ ದಾವೂದ್‌ ಇಬ್ರಾಹಿಂನ ಒಲವು ಇದಕ್ಕೆ ತೀರಾ ವಿರುದ್ಧ! ತನಗೆ ಜೈಲು ಶಿಕ್ಷೆ ವಿಧಿಸುವುದಾದರೆ ತನ್ನನ್ನು ಆರ್ಥರ್‌ ರೋಡ್‌ನ‌ ಜೈಲಲ್ಲೇ ಇರಿಸ ಬೇಕು. ಹಾಗಿದ್ದರೆ ಮಾತ್ರ ತಾನು ಭಾರತಕ್ಕೆ ಮರಳಿಯೇನು; ಕೋರ್ಟ್‌ ವಿಚಾರಣೆಯನ್ನು ಎದುರಿಸಿಯೇನು ಎಂಬ ಶರತ್ತನ್ನು ಆತ ನಮ್ಮ ಅಧಿಕಾರಿಗಳಿಗೆ ಹಾಕಿದ್ದಾನೆ. ದಾವೂದ್‌ಗೆ ಮುಂಬೈ ಮತ್ತು ಅಲ್ಲಿನ ಜೈಲುಗಳ ಸ್ಥಿತಿ ಚೆನ್ನಾಗಿ ಗೊತ್ತಿದೆ. ಜಾರ್ಜ್‌ ಡೇವಿಡ್‌ ರಾಬರ್ಟ್ಸ್ ಬರೆದಿರುವ "ಶಾಂತಾರಾಮ್‌' ಎಂಬ ಕಾದಂಬರಿ ಆರ್ಥರ್‌ ರೋಡ್‌ ಜೈಲನ್ನೇ ಹಿನ್ನೆಲೆಯಾಗಿಸಿಕೊಂಡಿದೆ. ಅಂದ ಹಾಗೆ, ಈ ಕಾದಂಬರಿಯ ಹೆಸರಿಗೂ, ಭಾರತದ ಸಿನಿಮಾ ರಂಗದ ದೊರೆಯಾದ ವಿ. ಶಾಂತಾರಾಮ್‌ ಅವರಿಗೂ ಸಂಬಂಧವಿಲ್ಲ. ಜೈಲಿನ ನೈಜ ಅನುಭವದ ದಾಖಲೆಯಾದ ದೋ ಆಂಖೇ, ಬಾರಹ್‌ ಹಾಥ್‌ ಚಿತ್ರವನ್ನು ಶಾಂತಾರಾಮ್‌ ನಿರ್ದೇಶಿಸಿದಷ್ಟೇ ಅಲ್ಲ, ತಾವೇ ಅಭಿನಯಿಸಿದ್ದರು ಕೂಡ. ಆರ್ಥರ್‌ ರೋಡ್‌ ಜೈಲಿನಲ್ಲಿ ಒಂದು ಇಂಗ್ಲಿಷ್‌ ಚಿತ್ರದ ಚಿತ್ರೀಕರಣಕ್ಕೂ ಅವಕಾಶ ನೀಡಲಾಗಿತ್ತು. 

ಒಂದು ವೇಳೆ ಮಲ್ಯ ಅವರನ್ನು ಲಂಡನ್‌ನಿಂದ ಗಡೀಪಾರು ಮಾಡಿದರೆ, ಇಲ್ಲಿ ಬಂದ ಕೂಡಲೇ ಅವರನ್ನು ಜೈಲಿಗಟ್ಟ ಲಾಗುವುದೆಂದು ಯಾರೂ ನಿರೀಕ್ಷಿಸುವ ಹಾಗಿಲ್ಲ. "ಜೈಲಲ್ಲ, ಬೈಲ್‌' (ಬೆಯಿಲ್‌) ಎಂಬುದೇ ನಮ್ಮ ಭಾರತದ ಕ್ರಿಮಿನಲ್‌ ನ್ಯಾಯಾ ಲಯಗಳ ಇಂದಿನ ಕಾನೂನು! ಬ್ಯಾಂಕುಗಳಿಗೆ ವಂಚನೆ ಗೈಯಬೇಕೆನ್ನುವುದು ಮಲ್ಯ ಇರಾದೆಯಾಗಿದ್ದಿರಲಾರದೆಂದೂ, ವಿಮಾನ ಸಂಚಾರ ವ್ಯವಹಾರದ ವಿಫ‌ಲತೆಯಿಂದಾಗಿ ಹಾಗೂ ಖಾಸಗಿ ವಿಮಾನಗಳ ಮೇಲೆ ವಿಮಾನಯಾನ ಸಚಿವಾಲಯ ದುಬಾರಿ ಬಳಕೆ ದರಗಳನ್ನು ಹೇರಿದ್ದರಿಂದಾಗಿ ಅವರಿಂದ ಇಂಥ ಪ್ರಮಾದವಾಗಿದೆಯೆಂದೂ ಮಲ್ಯರ ವಕೀಲರುಗಳು ವಾದಿಸುವ ಸಾಧ್ಯತೆಯಿದೆ. 

ಬ್ಯಾಂಕ್‌ ಸಾಲಗಳ ಮೊತ್ತವೆಷ್ಟಿದೆ, ಅಷ್ಟನ್ನೂ ತುಂಬಿಕೊಡುವಷ್ಟು ಮಲ್ಯರ ಆಸ್ತಿಪಾಸ್ತಿ ಭಾರತದಲ್ಲಿದೆ ಎಂಬ ವಾದವನ್ನು ಈ ವಕೀಲರುಗಳು ಮುಂದೊಡ್ಡಬಹುದು. ಭಾರತದಲ್ಲಿರುವ ತನ್ನ ಆಸ್ತಿಪಾಸ್ತಿಯೆಲ್ಲ ಪತ್ನಿಯ (ಅಥವಾ ಪತ್ನಿಯರ) ಮತ್ತು ಮಕ್ಕಳ ಹೆಸರಲ್ಲಿದೆ ಎಂಬ ಹೇಳಿಕೆಯನ್ನು ಮಲ್ಯರು ವಿಚಾರಣೆಯ ಒಂದು ಹಂತದಲ್ಲಿ ಬ್ರಿಟಿಷ್‌ ನ್ಯಾಯಾಲಯದೆದುರು ಮಂಡಿಸಿ ದ್ದುಂಟು. ವಿಜಯ್‌ ಮಲ್ಯ ಹಾಗೂ ನೀರವ್‌ ಮೋದಿಯಂಥವರು ಭಾರತದಿಂದ ಕಾಲ್ಕಿತ್ತು ಹೊರ ದೇಶಗಳಿಗೆ ಹಾರಿ ಹೋಗಿದ್ದರೆ, ಇದಕ್ಕೆ ಭಾರತದ "ಮೃದು ನಡವಳಿಕೆ'ಯೂ ಕಾರಣ. 

ಮಲ್ಯ ಒಂದೊಮ್ಮೆ ಗಡೀಪಾರಾಗಿ ಬಂದರೆ ನಮ್ಮ ಅಧಿಕಾರಿಗಳು ಅವರನ್ನು ಅದೇ ಮೃದು ಧೋರಣೆಯಿಂದ ನಡೆಸಿಕೊಳ್ಳಬಹುದೆಂಬ ಭೀತಿ ಇದ್ದೇ ಇದೆ. ವಾಸ್ತವವಾಗಿ ನಮ್ಮ ಶ್ರೀಮಂತರ ಪರ ಹಾಗೂ ವಶೀಲಿ - ಪ್ರಭಾವ ಪರ ಆಡಳಿತ ಧೋರಣೆಯ ಚರಿತ್ರೆಯೇ ಹೀಗಿದೆ. 1960ರ ದಶಕದಲ್ಲಿ ಜಯಂತಿ ಶಿಪ್ಪಿಂಗ್‌ ಕಾರ್ಪೊರೇಶನ್‌ನ ಮಾಲೀಕ, ಜಯಂತಿ ಧರ್ಮತೇಜ ಇಲ್ಲಿ ಸಾಕಷ್ಟು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿ ಕೊನೆಗೆ ದೇಶದಿಂದ ಪಲಾಯನಗೈದು ಕೋಸ್ಟಾರಿಕಾಗೆ ಹೋದರು. ಅಲ್ಲಿಂದ ಕೊನೆಗೂ ಆತನನ್ನು ಗಡಿಪಾರು ಮಾಡಲಾಯಿತು. ಮಲ್ಯ ರಂತೆಯೇ ತೇಜಾಗೆ ಕೂಡ ಬೆಂಗಳೂರಿನ ಸಂಪರ್ಕವಿತ್ತು. ಆತ ಇಲ್ಲಿನ ಸೆಂಟ್ರಲ್‌ ಕಾಲೇಜಿನಲ್ಲೇ ಓದಿ ವಿಜ್ಞಾನದಲ್ಲಿ ಪದವಿ ಪಡೆದವರು. ಆದರೆ "ಪ್ರದರ್ಶನ ಪ್ರೀತಿ, ಹೈ-ಫೈ ಜೀವನ ಶೈಲಿ, ಅಧಟುತನ, ಅಧಿಕಾರಸ್ಥರೊಂದಿಗೆ ಸಂಪರ್ಕ ಸಂಪಾದನೆಯ ಕಲೆ ಹಾಗೂ ಕೊನೆಗೊಮ್ಮೆ ಮಾಯವಾಗಿ ಬಿಡುವ ಜಾಣ್ಮೆ' ಮುಂತಾ ದವುಗಳಲ್ಲಿ ವಿಜಯ ಮಲ್ಯ ಅವರು ಪದವಿ ಪಡೆದ ಕಾಲೇಜು ಯಾವುದೆಂದು ಯಾರಿಗೂ ತಿಳಿಯದು. ಅವರಿಗೆ ನಮ್ಮ ರಾಜ್ಯ ಸರಕಾರದ ಮಂದಿಯೊಂದಿಗೆ ತೀರಾ ನಿಕಟ ಬಾಂಧವ್ಯವಿತ್ತು; 

ನಮ್ಮ ಮಾಜಿ ಮುಖ್ಯಮಂತ್ರಿಗಳೊಬ್ಬರು ಅವರ ಖಾಸಗಿ ವಿಮಾನವನ್ನು ಕನಿಷ್ಠ ಪಕ್ಷ ಒಮ್ಮೆಯಾದರೂ ಬಳಸಿಕೊಂಡದ್ದುಂಟು. ಭಾರತ ಸರಕಾರ ತನ್ನ ನ್ಯಾಯಾಲಯಗಳ ಮೂಲಕ ಮಲ್ಯ ಮಹಾಶಯರ ವಿರುದ್ಧ ಏನೇ ಕ್ರಮ ಕೈಗೊಳ್ಳಲಿ, ಇಂಗ್ಲೆಂಡ್‌ನ‌ಲ್ಲಿ ನೆಲೆಸಿರುವ ಕೆಲ ಭಾರತೀಯರಂತೂ ಮಲ್ಯರ ವಿರುದ್ಧ ಈಗಾಗಲೇ ತೀರ್ಪು ನೀಡಿಯಾಗಿದೆ. ಕಳೆದ ವರ್ಷ ಲಂಡನ್‌ನಲ್ಲಿ ನಡೆದ ಭಾರತ -ಇಂಗ್ಲೆಂಡ್‌ ನಡುವಿನ ಕ್ರಿಕೆಟ್‌ ಪಂದ್ಯವನ್ನು ವೀಕ್ಷಿಸಲು ಹೋಗಿದ್ದ ಮಲ್ಯರ ವಿರುದ್ಧ ಅಲ್ಲಿನ ಭಾರತೀಯರು ಗೇಲಿ ಮಾಡಿ, "ಚೋರ್‌' ಎಂದು ಬೊಬ್ಬಿಟ್ಟು ಅಲ್ಲಿಂದ ಕಾಲೆ¤ಗೆಯುವಂತೆ ಮಾಡಿದ್ದರು.

ಇನ್ನು, ನಮ್ಮ ಜೈಲುಗಳಲ್ಲಿ ಎಲ್ಲವೂ ಚೆನ್ನಾಗಿದೆ ಎನ್ನುವ ಹಾಗಿಲ್ಲ. ನಮ್ಮ ಆಸ್ಪತ್ರೆಗಳ ಪರಿಸ್ಥಿತಿಯೇ ರೋಗಗ್ರಸ್ತವಾಗಿದೆ; ಹೀಗಿರುತ್ತ ನಮ್ಮ ಕಾರಾಗೃಹಗಳು ಅವುಗಳಿಗಿಂತ ಉತ್ತಮ ಸ್ಥಿತಿಯಲ್ಲಿರಬೇಕು ಎಂದು ನಿರೀಕ್ಷಿಸುವಂತಿಲ್ಲ. ನಮ್ಮ ರಾಜ್ಯದಲ್ಲೇ ಇತ್ತೀಚೆಗೆ ಜೈಲು ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಪೊಲೀಸ್‌ ಮಹಾನಿರ್ದೇಶಕರು (ಈ ನಿವೃತ್ತರು) ಹಾಗೂ ಓರ್ವ ಪೊಲೀಸಧಿಕಾರಿಯ ನಡುವಣ ಜಗಳವೊಂದು ನಿಮಗೆ ನೆನಪಿರಬಹುದು. ಶ್ರೀಮಂತ ಹಾಗೂ ಪ್ರಭಾವೀ ವ್ಯಕ್ತಿಗಳಿಗೆ ನಮ್ಮ ಜೈಲುಗಳಲ್ಲಿ "ತಾರಾ ಉಪಚಾರ' (ಸ್ಟಾರ್‌ ಟ್ರೀಟ್‌ಮೆಂಟ್‌) ನೀಡಲಾಗುತ್ತಿದೆಯೆಂಬ ಸತ್ಯ ಈ ಜಗಳದಿಂದ ಬಟಾ ಬಯಲಾಯಿತು. ಆದರೆ ಬ್ರಿಟನಿನ ಜೈಲುಗಳ "ವಾತಾವರಣ' ಹೇಗಿದೆ ಗೊತ್ತೆ? ಬ್ರಿಟಿಷ್‌ ಸೆರೆಮನೆ ಸಚಿವ ರೋರಿ ಸ್ಟೀವರ್ಟ್‌ ಅಲ್ಲಿನ "ಕೆಲ ಜೈಲುಗಳ ಸ್ಥಿತಿ ಸಂಕಟ ಹುಟ್ಟಿಸುವ ರೀತಿಯಲ್ಲಿದೆ' ಎಂಬುದನ್ನು ಹೇಳಿಕೆಯೊಂದರಲ್ಲಿ ಒಪ್ಪಿಕೊಂಡಿರು ವುದಾಗಿ ವರದಿಯಾಗಿದೆ. ಬ್ರಿಟನ್‌ನಲ್ಲಿರುವ 215 ಜೈಲುಗಳ ಪೈಕಿ 150 ಸೆರೆಮನೆಗಳ ಸ್ಥಿತಿ ತೃಪ್ತಿದಾಯಕವಾಗಿಲ್ಲ! ಅಮೆರಿಕದಂಥ ರಾಷ್ಟ್ರ ಕೂಡ ಕುಖ್ಯಾತ ಗ್ವಾಂಟನಾಮೊ ಬೇ ಡಿಟೆನ್ಶನ್‌ ಕ್ಯಾಂಪ್‌ ಹೊಂದಿದೆ; ಅದು ಇರುವುದು ಕ್ಯೂಬಾದಲ್ಲಿ. ಅಸಾಮಾನ್ಯ ಅಪಾಯಕಾರಿ ಕ್ರಿಮಿನಲ್‌ಗ‌ಳನ್ನು ಇರಿಸಲೆಂದೇ ಇಂಥ ಕಠಿನ ಶಿಕ್ಷೆಯ ಉದ್ದೇಶದ ಕಾರಾಗೃಹವನ್ನು 2002ರಲ್ಲಿ ಸ್ಥಾಪಿಸಲಾಗಿತ್ತು. ಆಗಿನ ಅಧ್ಯಕ್ಷರಾಗಿದ್ದ ಜಾರ್ಜ್‌ ಬುಶ್‌ (ಜೂನಿಯರ್‌) ಇದನ್ನು ಉದ್ಘಾಟಿಸಿದ್ದರು. ಇಂದು ಈ ಕಾರಾಗೃಹದಲ್ಲಿ ಬಹುತೇಕ ಇಸ್ಲಾಮೀ ಭಯೋತ್ಪಾದಕರನ್ನು ಕೂಡಿಡಲಾಗಿದೆ. ಹಿಂದಿನ ಅಧ್ಯಕ್ಷ ಬರಾಕ್‌ ಒಬಾಮಾ ಈ ಜೈಲನ್ನು ಮುಚ್ಚಬೇಕೆಂದು ಬಯಸಿದ್ದರು. ಆದರೆ ಈಗಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದನ್ನು ಉಳಿಸಿಕೊಳ್ಳಲು ಬಯಸಿದ್ದಾರೆ. ಬ್ರಿಟಿಷ್‌ ಆಡಳಿತಕಾಲದಲ್ಲಿ ನಮ್ಮ ರಾಷ್ಟ್ರೀಯ ನಾಯಕರುಗಳನ್ನು ಅಂದಿನ ಜೈಲುಗಳಲ್ಲಿ ನಡೆಸಿಕೊಳ್ಳಲಾಗುತ್ತಿದ್ದ ರೀತಿಯನ್ನು ಮರೆಯಲು ಸಾಧ್ಯವೆ? ಲೋಕಮಾನ್ಯ ತಿಲಕರನ್ನು ರಾಜದ್ರೋಹ/ರಾಷ್ಟ್ರದ್ರೋಹದ ನಕಲಿ ಪ್ರಕರಣವೊಂದರಲ್ಲಿ ಬರ್ಮಾ (ಈಗಿನ ಮ್ಯಾನ್ಮಾರ್‌)ದ ಮಂಡಲೇಯ್‌ ಸೆರೆಮನೆಯಲ್ಲಿ ಆರು ವರ್ಷಗಳವರೆಗೆ (1908- 1914) ಇರಿಸಲಾಗಿತ್ತು. ಇನ್ನೋರ್ವ ಮಹಾನ್‌ ರಾಷ್ಟ್ರೀಯವಾದಿ ವಿನಾಯಕ್‌ ದಾಮೋದರ್‌ ಸಾರ್ವಕರ್‌ ಅವರನ್ನು ಕುಖ್ಯಾತ ಅಂಡಮಾನ್‌ ಜೈಲಿನಲ್ಲಿ ಇರಿಸಲಾಗಿತ್ತು. ಅವರ ಸಹೋದರ ಬಾಬೂರಾವ್‌ ಅವರಿಗೂ ಇದೇ ಶಿಕ್ಷೆ ವಿಧಿಸಲಾಗಿತ್ತು.

ಭಾರತದ ಜೈಲುಗಳ ಗತಿ-ಸ್ಥಿತಿ ಕುರಿತ ವಿಡಿಯೋ ವರದಿ ಯೊಪ್ಪಿಸುವಂತೆ ಆದೇಶಿಸಿರುವ ಮ್ಯಾಜಿಸ್ಟ್ರೇಟ್‌ ಎಮ್ಮಾ ಆರ್ಬತ್‌ನಾಟ್‌ ಅವರ ಹೆಸರು, ಸುಮಾರು 111 ವರ್ಷಗಳ ಹಿಂದೆ ದಕ್ಷಿಣ ಭಾರತವನ್ನು ಅಕ್ಷರಶಃ ನಡುಗಿಸಿದ್ದ ಬ್ಯಾಂಕ್‌ ವಂಚನೆಯ ಕೇಸೊಂದನ್ನು ನೆನಪಿಸಿಕೊಳ್ಳುವಂತೆ ಮಾಡಿದೆ. ಅದು ಮಲ್ಯರ ಪ್ರಕರಣಕ್ಕೆ ತೀರಾ ವ್ಯತಿರಿಕ್ತವಾದ ಪ್ರಕರಣ. ಆರ್ಬತ್‌ನಾಟ್‌ ಬ್ಯಾಂಕ್‌ ಎಂಬ ಬ್ರಿಟಿಷ್‌ ಮೂಲದ ಬ್ಯಾಂಕೊಂದು ಚೆನ್ನೈಯಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿತ್ತು; 1906ರ ಅಕ್ಟೋಬರ್‌ನಲ್ಲಿ ಅದು ದಿವಾಳಿಯಾಯಿತು. ದಕ್ಷಿಣ ಭಾರತದ ಅನೇಕ ಕುಟುಂಬ ಗಳು (ಇವುಗಳಲ್ಲಿ ಕೆಲವು ಇಂದೂ ಕರ್ನಾಟಕದಲ್ಲಿವೆ) ಈ ಬ್ಯಾಂಕ್‌ನಲ್ಲಿಟ್ಟಿದ್ದ ಠೇವಣಿಗಳನ್ನು ಕಳೆದುಕೊಳ್ಳಬೇಕಾಯಿತು. 

ಆರ್ಬತ್‌ನಾಟ್‌ ಬ್ಯಾಂಕು ದಿವಾಳಿಯಾಗಿದೆ ಎಂಬ ಸುದ್ದಿಯನ್ನು ಕೇಳಿದೊಡನೆ ಶ್ರೀರಂಗಪಟ್ಟಣದ ವ್ಯಕ್ತಿಯೊಬ್ಬರು ಹೃದಯಾಘಾತ ಕ್ಕೀಡಾಗಿ ತೀರಿಕೊಂಡರು. ಈ ಚೆನ್ನೈಯ ನ್ಯಾಯಾಲಯಗಳಲ್ಲಿ ಈ ಹಗರಣದ ವಿಚಾರಣೆ ನಡೆದು, ಬ್ಯಾಂಕಿನ ಭಾಗೀದಾರರಲ್ಲೊಬ್ಬ ರಾಗಿದ್ದ ಸರ್‌ ಜಾರ್ಜ್‌ ಆರ್ಬತ್‌ನಾಟ್‌ನನ್ನು ಶಿಕ್ಷಾರ್ಹ ಅಪರಾಧಿ ಎಂದು ಘೋಷಿಸಲಾಯಿತು. ಆತನಿಗೆ 18 ತಿಂಗಳ ಜೈಲು ಶಿಕ್ಷೆ ವಿಧಿಸಲಾಯಿತು. ಆದರೆ ಆರ್ಬತ್‌ನಾಟ್‌ ಜೈಲಿನಿಂದ ಪರಾರಿ ಯಾಗಿ ಇಂಗ್ಲೆಂಡ್‌ನ್ನು ಸೇರಿಕೊಂಡನೆಂದೂ ಹೇಳಲಾಗುತ್ತಿತ್ತು. ಇಂದು ಇದೇ, ಉಪನಾಮವನ್ನು ಹೊಂದಿರುವ ಮಹಿಳಾ ಜಡ್ಜ್ ಒಬ್ಬರು ನಮ್ಮ ಜೈಲುಗಳ ಭದ್ರತೆಯ ಬಗ್ಗೆ ಶಂಕೆ ವ್ಯಕ್ತಪಡಿಸಿ "ಹಾಗೆ ಮಾಡಿ,' "ಹೀಗೆ ಮಾಡಿ' ಎಂದು ಅಪ್ಪಣೆ ಕೊಡಿಸಿದ್ದಾರೆ!


Trending videos

Back to Top