CONNECT WITH US  

ನಕ್ಸಲ್‌ಪರರ ದಸ್ತಗಿರಿ ಹಾಗೂ ಬುದ್ಧಿಜೀವಿಗಳ ವಶೀಲಿಗಿರಿ

ಸಾಂದರ್ಭಿಕ ಚಿತ್ರ

ಬಂಧಿತ ನಕ್ಸಲ್‌ ಪರ ಧೋರಣೆಯ ವ್ಯಕ್ತಿಗಳನ್ನು ವಹಿಸಿಕೊಂಡು ಮಾತನಾಡುವ ಮಂದಿ ಒಂದು ಮಾತನ್ನು ನೆನಪಿಡಬೇಕು. ಅದೆಂದರೆ, ದೇಶದಲ್ಲಿ ನಡೆಯುತ್ತಿರುವ ನಕ್ಸಲೀಯ ಆಂದೋಲನ, ಸರಕಾರವನ್ನು ಹಿಂಸೆಯ ಮೂಲಕ ಕಿತ್ತೆಸೆಯಬೇಕೆಂಬ ಗುರಿಯನ್ನು ಇರಿಸಿಕೊಂಡಿದೆ. ಅದಕ್ಕೆ ಸಂವಿಧಾನದ ಮೇಲಾಗಲಿ, ಕಾನೂನಿನ ಮೇಲಾಗಲಿ, ಪ್ರಜಾಪ್ರಭುತ್ವದ ಮೇಲಾಗಲಿ ನಂಬಿಕೆಯಿಲ್ಲ. ಕಾನೂನು ಶಿಸ್ತಿನ ಗೊಡವೆ ಬೇಕಿಲ್ಲ, ಮುಗ್ಧರನ್ನು ಮುಗಿಸು, ಅರಾಜಕತೆಯನ್ನು ಹುಟ್ಟುಹಾಕು- ಇಂಥದರಲ್ಲೇ ಅದಕ್ಕೆ ನಂಬಿಕೆ.

ನಕ್ಸಲೀಯ ಅಥವಾ ಮಾವೋವಾದಿಗಳ ಪರ ಧೋರಣೆ ಹೊಂದಿರುವ ವ್ಯಕ್ತಿಗಳನ್ನು ಬಂಧಿಸಲಾಗಿರುವ ಕ್ರಮವನ್ನು ವಿರೋಧಿಸಿರುವ ಕೆಲ ವಿಪಕ್ಷೀಯ ಸದಸ್ಯರು, ವಾಮಪಂಥೀಯ ಬುದ್ಧಿಜೀವಿಗಳು ಮತ್ತಿತರರು, "ಇದು ನರೇಂದ್ರ ಮೋದಿ ಸರಕಾರ ತನ್ನ ಬಗ್ಗೆ ಭಿನ್ನಾಭಿಪ್ರಾಯ ಹೊಂದಿರುವವರ ಮೇಲೆ ನಡೆಸಿರುವ ದಾಳಿ' ಎಂದು ಬಣ್ಣಿಸಿರುವುದು ತೀರಾ ತಮಾಷೆಯ ಸಂಗತಿಯಾಗಿದೆ. 

ಈ ನಡುವೆ, ಇತಿಹಾಸತಜ್ಞೆ ರೋಮಿಲಾ ಥಾಪರ್‌ ಮತ್ತಿತರರು ಸಲ್ಲಿಸಿರುವ ದೂರೊಂದರ ವಿಚಾರಣೆಯ ವೇಳೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ್‌ ಅವರು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಯಾರಾದರೂ ಒಪ್ಪಿಕೊಳ್ಳಲೇಬೇಕು. "ಅಭಿಪ್ರಾಯಭೇದಕ್ಕೆ (ಭಿನ್ನಮತಕ್ಕೆ) ಅವಕಾಶವಿಲ್ಲವೆಂದಾದರೆ, ಪ್ರಜಾಪ್ರಭುತ್ವ ವ್ಯವಸ್ಥೆ ತನ್ನ ಒಳಗೇ ಪ್ರಕಟವಾಗುವ ಒತ್ತಡದಿಂದ ಸ್ಫೋಟಗೊಂಡೀತು' ಎಂದಿದ್ದಾರೆ ನ್ಯಾ| ಧನಂಜಯ ಚಂದ್ರಚೂಡ್‌. ಅಂದ ಹಾಗೆ, ಧನಂಜಯ್‌ ಚಂದ್ರಚೂಡ್‌, ನ್ಯಾಯಾಂಗೀಯ ವ್ಯವಸ್ಥೆಯಲ್ಲಿ ಓರ್ವ ಹೋರಾಟಗಾರನ ಪಾತ್ರವನ್ನು ನಿರ್ವಹಿಸುತ್ತಿರುವವರು; 1976ರಲ್ಲಿ ಸುಪ್ರೀಂಕೋರ್ಟ್‌ "ಎಡಿಎಂ ಜಬಲ್ಪುರ್‌ ಅಥವಾ ಹೇಬಿಯಸ್‌ ಕಾರ್ಪಸ್‌ ಕೇಸ್‌'ಗೆ ಸಂಬಂಧಿಸಿ ಹೊರಡಿಸಿದ್ದ ಕುಖ್ಯಾತ ತೀರ್ಪಿಗೆ ಸಂಬಂಧಿಸಿದಂತೆ ತಮ್ಮ ತಂದೆ, ಭಾರತದ ಶ್ರೇಷ್ಠ ನ್ಯಾಯಮೂರ್ತಿ ವೈ. ವಿ. ಚಂದ್ರಚೂಡ್‌ ಅವರ ಮಾತನ್ನೇ ಉಲ್ಲಂ ಸಿದವರು. ಇಂದಿರಾಗಾಂಧಿ ಘೋಷಿಸಿದ್ದ ತುರ್ತು ಪರಿಸ್ಥಿತಿಯ ದಿನಗಳಲ್ಲಿ ನಡೆದಿದ್ದ ಈ ಕೇಸಿನ ವಿಚಾರಣೆಯನ್ನು ಆಲಿಸಿದ್ದರು ಪಂಚಸದಸ್ಯ ನ್ಯಾಯಪೀಠದ ಸದಸ್ಯರಲ್ಲೊಬ್ಬರಾಗಿದ್ದ ನ್ಯಾ| ಧನಂಜಯ ಅವರ ತಂದೆ ನ್ಯಾ| ವೈ. ವಿ. ಚಂದ್ರಚೂಡ್‌. ಈ ನ್ಯಾಯಪೀಠದ ನೇತೃತ್ವ, ಆಗಿನ ಶ್ರೇಷ್ಠ ನ್ಯಾಯಮೂರ್ತಿ ಎಂ. ಎಚ್‌. ಬೇಗ್‌ ಅವರದಾಗಿತ್ತು. 

ನ್ಯಾ| ಎಚ್‌. ಆರ್‌. ಖನ್ನಾ ಅವರ ಭಿನ್ನಾಭಿಪ್ರಾಯದಿಂದಾಗಿ ಈ ತೀರ್ಪು ಇಡೀ ದೇಶದ ಗಮನ ಸೆಳೆದಿತ್ತು. "ಜೀವ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ'ಗೆ ಸಂಬಂಧಿಸಿದ ಸಂವಿಧಾನದ 21ನೆಯ ವಿಧಿಗೆ ಸಂಬಂಧಿಸಿದ್ದಾಗಿತ್ತು ಈ ಹೇಬಿಯಸ್‌ ಕಾರ್ಪಸ್‌ ಪ್ರಕರಣ. ಕಳೆದ ವರ್ಷ ಖಾಸಗಿತನದ ಹಕ್ಕಿನ ಪ್ರಕರಣವೊಂದರಲ್ಲಿ ತೀರ್ಪು ನೀಡಿದ್ದ ನ್ಯಾಯಪೀಠವೊಂದರ ಸದಸ್ಯರಾಗಿದ್ದ ಚಂದ್ರಚೂಡ್‌, ಈ ಮೂಲಕ ತಮ್ಮ ತಂದೆಯ ಅಭಿಪ್ರಾಯವನ್ನೇ ವಿರೋಧಿಸಿದಂತಾಗಿತ್ತು. 

ಅವರ ಅಭಿಪ್ರಾಯವನ್ನು ಒತ್ತಟ್ಟಿಗಿಟ್ಟು ಭಿನ್ನಾಭಿಪ್ರಾಯದ ರಕ್ಷಣೆ ಕುರಿತು ಹುಯಿಲೆಬ್ಬಿಸಿದವರತ್ತ ಗಮನಹರಿಸೋಣ. ಕಾಂಗ್ರೆಸ್‌ ಪಕ್ಷದ ನಾಯಕರು, ಸಿಪಿಐ(ಎಂ) ಹಾಗೂ ಇತರ ರಾಜಕೀಯ ಸಂಘಟನೆಗಳ ಬುದ್ಧಿಜೀವಿಗಳು ತಾವು ಅಧಿಕಾರ ದಲ್ಲಿದ್ದ ಕಾಲದಲ್ಲಿ ನಕ್ಸಲೀಯ ಆಂದೋಲನ ಹಾಗೂ ನಕ್ಸಲ್‌ ನಾಯಕರ ಬಗ್ಗೆ ಸಹಾನುಭೂತಿ ಹೊಂದಿದ್ದವರೆಂಬ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಗಮನಿಸಿ, ಈ ಬಾರಿ ಬಂಧನಕ್ಕೊಳಗಾಗಿರುವ ನಕ್ಸಲ್‌ ಪರ ಬರಹಗಾರ ವರವರ ರಾವ್‌ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಯಾವುದೇ ಸರಕಾರವಾಗಲಿ, ರಾಜಕೀಯ ಪಕ್ಷವಾಗಲಿ ಅವರ ಬಗ್ಗೆ ಅಥವಾ ಅವರ ಚಿಂತನೆಯ ಬಗ್ಗೆ ಸಹಾನುಭೂತಿ ಹೊಂದಿಲ್ಲ. ಪ್ರಧಾನಿಯವರ ಕೊಲೆ ಸಂಚಿಗೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಬಂಧನ ಕಾರ್ಯಾಚರಣೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಡೆಸ ಲಾಗಿರುವ ದಾಳಿ ಎಂದು ಸಿಪಿಐ-ಎಂ ನಾಯಕ ಸೀತಾರಾಂ ಯೆಚೂರಿ ಹೇಳಿದ್ದಾರೆ. 1967ರಲ್ಲಿ ನಕ್ಸಲೀಯರನ್ನು ಉಚ್ಛಾಟಿಸಿದ್ದು ಖುದ್ದು ಯೆಚೂರಿಯವರ ಪಕ್ಷವೇ ಎಂಬುದನ್ನು; ಹೀಗೆ ಉಚ್ಚಾಟಿಸಿದ್ದೇ ಭಾರತೀಯ ಕಮ್ಯೂನಿಸ್ಟ್‌ ಪಾರ್ಟಿ (ಮಾರ್ಕ್ಸಿಸ್ಟ್‌- ಲೆನಿನಿಸ್ಟ್‌)ನ ರಚನೆಗೆ ಹಾದಿ ಮಾಡಿಕೊಟ್ಟಿತೆಂಬುದನ್ನು ಯೆಚೂರಿಯವರಿಗೆ ನೆನಪಿಸಿಕೊಡಬೇಕಾಗಿದೆ. ಸಿಪಿಐ(ಎಂಎಲ್‌) ನೊಂದಿಗೆಯೇ ಹುಟ್ಟಿಕೊಂಡ ನಕ್ಸಲೀಯ ಆಂದೋಲನ ಹಲವಾರು ಬಾರಿ ವಿಘಟನೆಗಳನ್ನು ಕಂಡಿದೆ. ಪಶ್ಚಿಮ ಬಂಗಾಲದ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್‌ ಸರಕಾರ ನಕ್ಸಲೀಯರ ಬಗ್ಗೆ ಅನುಕಂಪ ಹೊಂದಿಲ್ಲ. ಈಗಾಗಲೇ ಶರಣಾಗಿರುವ ನಕ್ಸಲೀಯರನ್ನು ವಿಶೇಷ ಹೋಮ್‌ಗಾರ್ಡ್ಸ್‌ ಆಗಿ ನೇಮಕಮಾಡಿಕೊಳ್ಳುವ ಮೂಲಕ ಅವರಿಗೆ ಪುನರ್ವಸತಿ ಕಲ್ಪಿಸಲು ಮಮತಾ ಸರಕಾರ ಮುಂದಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದೊಂದಿಗಿನ ಮೈತ್ರಿಯನ್ನು ಕಡಿದುಕೊಂಡಿರುವ ಆಂಧ್ರದ ತೆಲುಗುದೇಶಂ ನಾಯಕ ಚಂದ್ರಬಾಬು ನಾಯ್ಡು ಅವರಂತೂ ತಮ್ಮ ರಾಜ್ಯದಲ್ಲಿ ನಕ್ಸಲೀಯರ "ಘೋಷಿತ ಶತ್ರು'ವಾಗಿದ್ದಾರೆ. ನಕ್ಸಲೀಯರನ್ನು ನಿರ್ನಾಮ ಮಾಡಲೆಂದೇ ಅವರು ಆಂಧ್ರಪ್ರದೇಶ ಪೊಲೀಸ್‌ ಇಲಾಖೆಯಲ್ಲಿ "ಗ್ರೇಹೌಂಡ್‌ ಕಮಾಂಡೊ' ಘಟಕವನ್ನು ಅಸ್ತಿತ್ವಕ್ಕೆ ತಂದಿದ್ದಾರೆ. 2003ರಲ್ಲಿ ತಿರುಪತಿಯಲ್ಲಿ ನಕ್ಸಲೀಯರು ಅವರನ್ನು ಹತ್ಯೆಗೈಯಲು ಪ್ರಯತ್ನಿಸಿದ್ದರಷ್ಟೆ? ಅಂದ ಮೇಲೆ ನಾಯ್ಡು ಅವರು ನಕ್ಸಲೀಯರನ್ನು ಹೇಗೆ ಕ್ಷಮಿಸಿಯಾರು?

ಬರೋಡಾ ಡೈನಮೈಟ್‌ ಪ್ರಕರಣ
ನಕ್ಸಲೀಯರೊಂದಿಗೆ ನಂಟು ಹೊಂದಿರುವ ವ್ಯಕ್ತಿಗಳ ಬಂಧನ ಕ್ರಮವನ್ನು ಮೋದಿ ಸರಕಾರ ಪ್ರಧಾನಿ ಹತ್ಯೆಯ ಸಂಚಿನೊಂದಿಗೆ ತಳುಕು ಹಾಕಿದೆಯೆಂದು ಖಂಡಿಸುತ್ತಿರುವ ಕಾಂಗ್ರೆಸಿಗರಿಗೆ ಬರೋಡಾ ಡೈನಮೈಟ್‌ ಪ್ರಕರಣವನ್ನು ನೆನಪಿಸಬೇಕಾಗಿದೆ. 1976ರಲ್ಲಿ ಇಂದಿರಾ ಗಾಂಧಿ ಸರಕಾರ, ಮಾಜಿ ರಕ್ಷಣಾ ಸಚಿವ ಜಾರ್ಜ್‌ ಫೆರ್ನಾಂಡಿಸ್‌ ಹಾಗೂ ಇತರ 24 ಮಂದಿಯ ಮೇಲೆ ಸರಕಾರವನ್ನು ಕಿತ್ತೆಸೆಯುವ ಪ್ರಯತ್ನಕ್ಕಿಳಿದರೆಂದು ಆರೋಪಿಸಿತು. ಇದಕ್ಕಾಗಿ ಅದು (ಇಂದಿರಾ ಸರಕಾರ) ಒಂದು ಸ್ಫೋಟಕವೆನ್ನಿಸುವ ಸಂಚಿನ ಕಥೆಯನ್ನು ಹೆಣೆಯಿತು. ಸರಕಾರಿ ಕಚೇರಿಗಳನ್ನು ಸ್ಫೋಟಿಸುವುದಕ್ಕಾಗಿ ಇವರುಗಳು ಬಾಂಬುಗಳನ್ನು ಇರಿಸಿದ್ದರೆಂಬುದೇ ಬಂಧಿತರ ಮೇಲಿನ ಆರೋಪವಾಗಿತ್ತು. ಆದರೆ ಆಪಾದಿತರಲ್ಲಿ ಕೇವಲ ಒಬ್ಬ ಮಾತ್ರ, ದಿನಪತ್ರಿಕೆಯೊಂದರ ಮ್ಯಾನೇಜರ್‌ ಆಗಿದ್ದ ಸಿ.ಜಿ.ರೆಡ್ಡಿ ಎಂಬಾತ (ಈಗ ಬದುಕಿಲ್ಲ) ಈ ಸಂಚಿನಲ್ಲಿ ತಾನು ಪಾಲ್ಗೊಂಡಿದ್ದನ್ನು ಸಮರ್ಥಿಸಿಕೊಂಡಿದ್ದ; ಬಂಡಾಯವೇಳುವುದು, ಸಂಚು ಮಾಡುವುದು ತನ್ನ ಹಕ್ಕೆಂದು ಸಾರಿದ್ದ. ಆರೋಪಿತರಲ್ಲಿ ಒಬ್ಟಾಕೆ, ಫೆರ್ನಾಂಡಿಸ್‌ ಅವರೊಂದಿಗೆ ನಿಕಟ ಸಂಪರ್ಕವಿರಿಸಿಕೊಂಡಿದ್ದರೆಂಬ ಕಾರಣಕ್ಕಾಗಿ ಬಂಧನ ಕ್ಕೊಳಗಾಗಿದ್ದ ಕರ್ನಾಟಕದ ಚಿತ್ರನಟಿ ಸ್ನೇಹಲತಾ. ಈ ಬರೋಡಾ ಸಂಚು, ಸರಕಾರವನ್ನು ಉರುಳಿಸಲು ನಡೆಸಲಾದ ವಿವೇಚನಾರಹಿತ'ವೆನ್ನಬಹುದಾದ ಸಾಹಸವಾಗಿತ್ತು. 

ಕಳೆದ ಮಂಗಳವಾರ ಪುಣೆ ಪೊಲೀಸರು ವರವರ ರಾವ್‌ ಮತ್ತಿತರರನ್ನು ಬಂಧಿಸಿದ್ದು, ಕಳೆದ ಡಿ.31ರಂದು ಎಲ್ಗಾರ್‌ ಪರಿಷತ್‌ ಏರ್ಪಡಿಸಿದ್ದ ಭೀಮಾ- ಕೋರೆಗಾಂವ್‌ ಸಮರದ 200ನೆಯ ವರ್ಷದ ನೆನಪಿನ ಆಚರಣೆಯ ಸಮಾರಂಭದಲ್ಲಿ ಪಾಲ್ಗೊಂಡು, ಮಹಾರಾಷ್ಟ್ರದ ಮಹರ್‌(ದಲಿತ) ಸಮುದಾಯದವರಿಗೆ ಹಿಂಸಾತ್ಮಕ ಕೃತ್ಯವೆಸಗಲು ಪ್ರೇರಣೆ ನೀಡಿದರೆಂಬ ಆರೋಪದ ಹಿನ್ನೆಲೆಯಲ್ಲಿ. ಎಲ್ಗಾರ್‌ ಪರಿಷದ್‌ ಈ ಕಾರ್ಯಕ್ರಮವನ್ನು ನಡೆಸಿದ್ದು ಪುಣೆಯ ಐತಿಹಾಸಿಕ ಶನಿವಾರವಾಡಾ ಕೋಟೆಯಲ್ಲಿ.

200 ವರ್ಷಗಳ ಹಿಂದೆ, 1817ರ ಜನವರಿಯಲ್ಲಿ ನಡೆದಿದ್ದ ಐತಿಹಾಸಿಕ ಸಮರದಲ್ಲಿ ಮಹಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದ 834 (ಬ್ರಿಟಿಷ್‌ ಆಡಳಿತದಡಿಯ) ಸೈನಿಕರ ಸಣ್ಣ ತುಕಡಿಯೊಂದು ಇಮ್ಮಡಿ ಪೇಶ್ವ ಬಾಜೀರಾವ್‌ನ 28,000ದಷ್ಟು ಸೈನಿಕರಿದ್ದ ಬೃಹತ್‌ ಸೇನೆಯನ್ನು ಸೋಲಿಸಿತ್ತು; ಈ ವಿಜಯದ ನೆನಪಿಗಾಗಿ ಭೀಮಾ ಕೋರೆಗಾಂವ್‌ ಗ್ರಾಮದಲ್ಲಿ ವಿಜಯ ಸ್ತಂಭವೊಂದನ್ನು ಸ್ಥಾಪಿಸಲಾಗಿತ್ತು. ಈ ಸಮರದಲ್ಲಿ ಬ್ರಿಟಿಷರು ಗಳಿಸಿದ ವಿಜಯವನ್ನು ಇತರ ಹಿಂದೂ ವರ್ಗಗಳ ಮೇಲೆ ಮಹಾರರು ಪಡೆದ ವಿಜಯವೆಂದೇ ಮಹಾರಾಷ್ಟ್ರದ ದಲಿತರ ಕೆಲ ವರ್ಗಗಳು ಇಂದಿಗೂ ಭಾವಿಸಿವೆ.

ಪ್ರಧಾನಿ ಕೊಲೆಗೆ ಸಂಚು ನಡೆದಿತ್ತೆಂಬ ಮಹಾರಾಷ್ಟ್ರ ಸರಕಾರದ ಅಥವಾ ಪುಣೆ ಪೊಲೀಸರ ವಾದದ ಸಂಬಂಧದಲ್ಲಿ ಕೆಲವರಿಗೆ ಅನುಮಾನಗಳೇಳುವುದು ಸಹಜವೇ; ಆದರೂ ಮೂಲಭೂತ ಪ್ರಶ್ನೆಯೆಂದರೆ- ನಕ್ಸಲೀಯರು ತಮ್ಮ ಹಿಂಸಾತ್ಮಕ ಚಟುವಟಿಕೆಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆಯೇ ಎಂಬುದೇ ಆಗಿದೆ. ಇಲ್ಲೇ ಇನ್ನೊಂದು ಮಾತನ್ನೂ ಹೇಳಬೇಕಿದೆ, ಭಿನ್ನಾಭಿಪ್ರಾಯವನ್ನು ರಾಷ್ಟ್ರವಿರೋಧಿ ಧೋರಣೆಯೆಂದು ಯಾರೂ ಪರಿಗಣಿಸಲಾರರು. ಹಾಗೆ ನೋಡಿದರೆ, ಎಲ್ಲ ವಿರೋಧ ಪಕ್ಷಗಳ ಮಂದಿಯೂ ಭಿನ್ನಮತೀಯರೇ. ಈ ಅರ್ಥದಲ್ಲಿ ಬಿಜೆಪಿ ಸರಕಾರವನ್ನು ಟೀಕಿಸುವ ಎಲ್ಲರೂ ಭಿನ್ನಮತೀಯರೇ. ಅಷ್ಟೇ ಅಲ್ಲ, ಬಿಜೆಪಿ ಯೊಳಗೂ ಭಿನ್ನಮತೀಯರಿದ್ದಾರೆ; ಮಾಜಿ ಕೇಂದ್ರ ಸಚಿವ ಯಶವಂತ್‌ ಸಿನ್ಹಾ ಇಂಥ ಒಬ್ಬ ಭಿನ್ನಮತೀಯರು. ದೇಶದಲ್ಲಿ ವಾಕ್‌ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವೆಂಬ ಮೂಲಭೂತ ಹಕ್ಕುಗಳಿಗೆ ಅಪಾಯವಿದೆ ಎಂಬ ಬೊಬ್ಬೆಯೂ ಕೇಳಿಬರುತ್ತಿದೆ. ಸರಕಾರವನ್ನು ಟೀಕಿಸುವ ವ್ಯಕ್ತಿಗಳನ್ನು ಬಂಧಿಸಲಾಗಿರುವ ಪ್ರಕರಣಗಳು ದೇಶದಲ್ಲಿ ಘಟಿಸಿವೆಯೇ? ಪ್ರತಿದಿನವೂ ಪ್ರತಿ ಯೊಂದು ಕಡೆಯಲ್ಲೂ ಸರಕಾರದ ಮೇಲೆ ಟೀಕಾಪ್ರಹಾರ ನಡೆಸುವ ಪತ್ರಿಕಾಗೋಷ್ಠಿ, ವಿಚಾರಗೋಷ್ಠಿ, ಸಭೆ ಸಮಾರಂಭ ನಡೆಯುತ್ತಲೇ ಇರುತ್ತವೆ. ತುರ್ತುಸ್ಥಿತಿಯ ದಿನಗಳನ್ನು ಹೊರತು ಪಡಿಸಿದರೆ ನಮ್ಮ ನ್ಯಾಯಾಲಯಗಳು ಸ್ವತಂತ್ರವಾಗಿಯೇ ಕಾರ್ಯಾಚರಿಸುತ್ತ ಬಂದಿವೆ; (ಮೇಲೆ ಉಲ್ಲೇಖೀಸಲಾದ ಸುಪ್ರೀಂ ಕೋರ್ಟಿನ ಅಭಿಪ್ರಾಯ ಒಂದು ಉದಾಹರಣೆ); ನಮ್ಮ ಪತ್ರಿಕಾ ಮಾಧ್ಯಮವೂ ಸ್ವತಂತ್ರವಾಗಿಯೇ ಕಾರ್ಯನಿರ್ವಹಿಸುತ್ತಿದೆ. (ನಮ್ಮನ್ನು ರಾಜೀನಾಮೆ ನೀಡುವಂತೆ ಮಾಡಲಾಗಿದೆ ಎಂದು ಕೆಲ ಪತ್ರಕರ್ತರು ವೈಯಕ್ತಿಕ ನೆಲೆಯಲ್ಲಿ ದೂರಿಕೊಂಡಿರುವುದುಂಟು; ಆದರೆ ಹಿಂದೆಯೂ ಇಂಥ ಘಟನೆಗಳು ಅನೇಕ ಸಲ ನಡೆದಿವೆ). ಪರಿಸ್ಥಿತಿ ಹೀಗಿರುವಾಗ, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಯಿದೆ ಎಂಬ ವಾದ ಎಷ್ಟು ಸಮರ್ಥನೀಯ? ತುರ್ತುಪರಿಸ್ಥಿತಿಯ ದಿನಗಳನ್ನು ಬಿಟ್ಟರೆ, ಕಾಂಗ್ರೆಸ್‌ ಪಕ್ಷ ಕೂಡ ವಾಕ್‌ ಸ್ವಾತಂತ್ರ್ಯಕ್ಕೆ ಭಂಗ ಉಂಟು ಮಾಡಿಲ್ಲ. (ನ್ಯಾಯಾಂಗದ ಸ್ವಾತಂತ್ರ್ಯ ಹರಣಕ್ಕೆ ಅದು ಪ್ರಯತ್ನಿಸಬಹುದು, ಆ ಮಾತು ಬೇರೆ). 

ಬಂಧಿತ ನಕ್ಸಲ್‌ ಪರ ಧೋರಣೆಯ ವ್ಯಕ್ತಿಗಳನ್ನು ವಹಿಸಿಕೊಂಡು ಮಾತನಾಡುವ ಮಂದಿ ಒಂದು ಮಾತನ್ನು ನೆನಪಿಡಬೇಕು. ಅದೆಂದರೆ, ದೇಶದಲ್ಲಿ ನಡೆಯುತ್ತಿರುವ ನಕ್ಸಲೀಯ ಆಂದೋಲನ, ಸರಕಾರವನ್ನು ಹಿಂಸೆಯ ಮೂಲಕ ಕಿತ್ತೆಸೆಯ ಬೇಕೆಂಬ ಗುರಿಯನ್ನು ಇರಿಸಿಕೊಂಡಿದೆ. ಅದಕ್ಕೆ ಸಂವಿಧಾನದ ಮೇಲಾಗಲಿ, ಕಾನೂನಿನ ಮೇಲಾಗಲಿ, ಪ್ರಜಾಪ್ರಭುತ್ವದ ಮೇಲಾಗಲಿ ನಂಬಿಕೆಯಿಲ್ಲ. ಕಾನೂನು ಶಿಸ್ತಿನ ಗೊಡವೆ ಬೇಕಿಲ್ಲ, ಮುಗ್ಧರನ್ನು ಮುಗಿಸು, ಅರಾಜಕತೆಯನ್ನು ಹುಟ್ಟುಹಾಕು- ಇಂಥದರಲ್ಲೇ ಅದಕ್ಕೆ ನಂಬಿಕೆ. ಈಗ ಬಂಧನಕ್ಕೊಳಗಾಗಿರುವ ವಾಮಪಂಥೀಯ ಚಿಂತಕರು/ ಆಂದೋಲನಕಾರರು, ರಾಷ್ಟ್ರದ ಪಾಲಿಗೆ ಅಪಾಯಕಾರಿಗಳಾಗಿರುವ ವ್ಯಕ್ತಿಗಳನ್ನು ಬೆಂಬಲಿಸು ವಂಥವರು. ಈ ತಥಾಕಥಿತ ಬುದ್ಧಿಜೀವಿಗಳು, ನಾಗರಿಕ ವರ್ಗಕ್ಕೆಲ್ಲ ಅನ್ವಯವಾಗುವ ಕಾನೂನನ್ನು ಕೀಳುಗಳೆಯುವ ಮೂಲಕ ಅಪರಾಧವನ್ನು ಎಸಗಿದಂತಾಗಿದೆ; ನಿರಂಕುಶ ಧೋರಣೆಯ ರಾಷ್ಟ್ರವಿರೋಧಿ ಶಕ್ತಿಗಳನ್ನು ಪ್ರೋತ್ಸಾಹಿಸುವ ಕೆಲಸ ಇವರಿಂದ ಆಗಿದೆ. ಮೋದಿಯವರ ಭಾರತದಲ್ಲಿ, ನೆಹರೂರವರ ಭಾರತ ದಲ್ಲಿದ್ದಂತೆಯೇ ನ್ಯಾಯಾಂಗಕ್ಕೆ ಸ್ವತಂತ್ರವಾಗಿ ಕಾರ್ಯಾಚರಿಸುವ ಅವಕಾಶವಿದೆ. ಹೀಗಿರುತ್ತ, ಬಂಧಿತ ನಕ್ಸಲ್‌ ಒಲವಿನ ಆರೋಪಿಗಳು, ತಾವು ನಿರಪರಾಧಿಗಳೆಂದು ನ್ಯಾಯಾಲಯದಲ್ಲಿ ಸಾಬೀತುಪಡಿಸಿ, ದೋಷಮುಕ್ತರಾಗಿ ಹೊರಬರುವ ಅವಕಾಶ ಅವರ ಪಾಲಿಗೆ ಇದ್ದೇ ಇದೆ. 

ನಕ್ಸಲೀಯ ಆಂದೋಲನ ಆರಂಭವಾದುದು 1960ರ ದಶಕದಲ್ಲಿ; ಬಂಗಾಲದ ದಾರ್ಜಿಲಿಂಗ್‌ ಬೆಟ್ಟಗಳ ಪರಿಸರದಲ್ಲಿ; ಅಲ್ಲಿನ ಬಡ ಕಾರ್ಮಿಕರ ರಕ್ಷಣೆಗಾಗಿ. ಆದರೆ ನಮ್ಮ ಹೆಚ್ಚಿನ ರಾಜಕೀಯ ಪಕ್ಷಗಳಂತೆಯೇ ಈ ಆಂದೋಲನ ಕೂಡ ತನ್ನ ಮೂಲಕಸುವನ್ನು ಕಳೆದುಕೊಳ್ಳುತ್ತ ಬಂದಿದೆ. ಹಿಂದೆ ಇದ್ದಂತೆ ಇಂದು ಅದು ಸೈದ್ಧಾಂತಿಕ ಶ್ರದ್ಧೆಯ ನೇತಾರರನ್ನು ಹೊಂದಿಲ್ಲ; ಬರಬರುತ್ತ ಅದು ಶ್ರೀಮಂತಪರ, ಅರಣ್ಯ ಗುತ್ತಿಗೆದಾರರ ಪರ ಆಂದೋಲನ ವ್ಯವಸ್ಥೆಯಾಗಿ ಮಾರ್ಪಡುತ್ತಿದೆ. ನಮ್ಮ ಜನರನ್ನು , ಪೊಲೀಸ್‌ ಸಿಬಂದಿಯನ್ನು ಹತ್ಯೆಗೈಯುವುದಕ್ಕೆ, ಸಮಾನಾಂತರ (ಪರ್ಯಾಯ) ಸರಕಾರ ನಡೆಸುವ ಹೆಸರಿನಲ್ಲಿ ಹಣ ವಸೂಲು ಮಾಡುವುದಕ್ಕೆ ಈ ಆಂದೋಲನಕಾರರಿಗೇನು ಹಕ್ಕಿದೆ? ಇದುವರೆಗೆ ನಕ್ಸಲೀಯರು 7000 ಮುಗ್ಧ ನಾಗರಿಕರನ್ನು ಹತ್ಯೆ ಮಾಡಿರ ಬಹುದೆಂದು ಒಂದು ಅಂದಾಜು. ಈಗ ಸುಪ್ರೀಂಕೋರ್ಟಿನ ಮೆಟ್ಟಲೇರಿರುವ ರೋಮಿಲಾ ಥಾಪರ್‌ ಮತ್ತಿತರರು, ವಿವಿಧ ಪ್ರಕರಣ ಗಳಲ್ಲಿ (ಇವುಗಳಲ್ಲಿ ಕೆಲವು ಕೃತಕ ಪ್ರಕರಣಗಳು) ಬಂಧಿತರಾಗಿರುವ ತಥಾಕಥಿತ ಹಿಂದೂ ಹಕ್ಕುಗಳ ರಕ್ಷಣಾ ಸಂಘಟನೆಗಳ ಸದಸ್ಯರ ಸಮಸ್ಯೆಗಳನ್ನೂ ಗಮನಿಸಿ, ಅವರ ಪ್ರಕರಣ ಗಳನ್ನೂ, ಕೈಗೆತ್ತಿಕೊಳ್ಳಬೇಕಾಗಿದೆ. ಅವರಿಗೂ ಕಾನೂನಿನ ರಕ್ಷಣೆ ಯೆನ್ನುವುದುಬೇಕು. ನೈಜ ಬುದ್ಧಿಜೀವಿಗಳ ಸಹಾನುಭೂತಿ ಬೇಕು. 


Trending videos

Back to Top