CONNECT WITH US  

ಚುನಾವಣಾ ಆಯೋಗ ಎಷ್ಟು ತಟಸ್ಥ? ಎಷ್ಟು ಸ್ವತಂತ್ರ?

ನಮ್ಮ ಚುನಾವಣಾ ಆಯುಕ್ತರ ಪಕ್ಷ ರಹಿತ ಅಥವಾ ನಿಷ್ಪಕ್ಷಪಾತಿ ನಿಲುವಿನ ಬಗ್ಗೆ ಸಂದೇಹಗಳು ಏಳುವುದಕ್ಕೆ ಒಂದು ಕಾರಣವೆಂದರೆ ಚುನಾವಣಾ ಆಯುಕ್ತರಾದವರು ತಮ್ಮ ಹುದ್ದೆಯಿಂದ ನಿವೃತ್ತರಾದ ಬಳಿಕ ಸಾರ್ವಜನಿಕ ಹುದ್ದೆಯೊಂದಕ್ಕೆ ನೇಮಕಗೊಳ್ಳುವುದಕ್ಕೆ ನಮ್ಮ ಸಂವಿಧಾನದಲ್ಲಿ ನಿಷೇಧ ಹೇರಲಾಗಿಲ್ಲವೆನ್ನುವುದು.

ಭಾರತದ ಚುನಾವಣಾ ಆಯೋಗ ತಾಟಸ್ಥ ಧೋರಣೆ ಹೊಂದಿಲ್ಲ ಎಂಬ ಕೂಗು ಮತ್ತೂಮ್ಮೆ ಏಳುವ ಪ್ರಸಂಗ ಎದುರಾಗಿದೆ. ಛತ್ತೀಸ್‌ಗಢ, ಮಧ್ಯಪ್ರದೇಶ, ಮಿಜೊರಾಂ, ರಾಜಸ್ಥಾನ ಹಾಗೂ ತೆಲಂಗಾಣ ರಾಜ್ಯಗಳ ವಿಧಾನಸಭಾ ಚುನಾವಣೆಗಳ ದಿನಾಂಕಗಳನ್ನು ಚುನಾವಣಾ ಆಯೋಗ ಘೋಷಿಸಿದ ಬೆನ್ನಿಗೇ ಈ ಕೂಗು ಎದ್ದಿದೆ. "ಈ ಐದು ರಾಜ್ಯಗಳ ಚುನಾವಣಾ ದಿನಾಂಕಗಳ ಘೋಷಣೆ ಮಾಡುವಲ್ಲಿ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್‌ ರಾವತ್‌ ಬೇಕೆಂದೇ ವಿಳಂಬ ಮಾಡಿದ್ದಾರೆ; ಅಜ್ಮ್ರ್‌ (ರಾಜಸ್ಥಾನ)ನಲ್ಲಿ ರ್ಯಾಲಿ ನಡೆಸಿ ಹೊಸ ಯೋಜನೆಗಳನ್ನು ಘೋಷಿಸಲು ತನ್ಮೂಲಕ ಚುನಾವಣೆಯ ಮೇಲೆ ಪ್ರಭಾವ ಬೀರಲು ಪ್ರಧಾನಿ ನರೇಂದ್ರ ಮೋದಿಯವರಿಗೆ ನೆರವಾಗುವುದೇ ಚುನಾವಣಾ ಆಯೋಗದ ವಿಳಂಬ ಸೂತ್ರದ ಉದ್ದೇಶ' ಎಂದು ಕಾಂಗ್ರೆಸ್‌ ಪಕ್ಷ ಆರೋಪಿಸಿದೆ. ಆದರೆ ಪ್ರಧಾನಿ ಮೋದಿ ಅವರು ಅಜೆ¾àರ್‌ ರ್ಯಾಲಿಯಲ್ಲಿ ಯಾವುದೇ ಹೊಸ ಯೋಜನೆಗಳನ್ನು ಘೋಷಿಸಿಲ್ಲ ಅಥವಾ ಈ ಬಗ್ಗೆ ಯಾವುದೇ ವಾಗ್ಧಾನಗಳನ್ನು ಮಾಡಿಲ್ಲ. ಈ ಮೂಲಕ ಕಾಂಗ್ರೆಸ್‌ನ ಆರೋಪ ಹುಸಿಗೊಂಡಂತಾಗಿದೆ.

ಚುನಾವಣಾ ಆಯೋಗದ ಆಲಿಪ್ತ/ತಾಟಸ್ಥ é ಧೋರಣೆ ಕುರಿತಂತೆ ಸಂದೇಹವೆದ್ದಿರುವುದು ಇದೇ ಮೊದಲ ಸಲವೇನಲ್ಲ. ಕಳೆದ ವರ್ಷವಷ್ಟೇ ಆಗಿನ ಮುಖ್ಯ ಚುನಾವಣಾ ಆಯುಕ್ತ ಎ.ಕೆ. ಜ್ಯೋತಿ ಅವರು ಗುಜರಾತ್‌ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಹಿಮಾಚಲ ಪ್ರದೇಶದ ಚುನಾವಣೆಯ ದಿನಾಂಕದ ಘೋಷಣೆಯ ಹೊತ್ತಿಗೆ ಪ್ರಕಟಿಸದೆ ಇರುವ ಮೂಲಕ ಗುಜರಾತ್‌ ಪರವಾಗಿ ಪಕ್ಷಪಾತ ಧೋರಣೆ ತೋರಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಮುಖ್ಯ ಚುನಾವಣಾ ಆಯುಕ್ತರು ಹೀಗೆ ಮಾಡಿದ್ದರಿಂದ ಗುಜರಾತಿಗಾಗಿ ಕೆಲ ಹೊಸ ಯೋಜನೆಗಳನ್ನು ಘೋಷಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ನೆರವು ದೊರೆತಂತಾಗಿತ್ತು. 1.1 ಲಕ್ಷ ಕೋ. ರೂ. ವೆಚ್ಚದ ಮುಂಬೈ - ಅಹ್ಮದಾಬಾದ್‌ ಬುಲೆಟ್‌ ಟ್ರೈನ್‌ ಯೋಜನೆಯೂ ಈ ಹೊಸ ಯೋಜನೆಗಳಲ್ಲಿ ಸೇರಿತ್ತು. ಜ್ಯೋತಿ ಅವರು ಚುನಾವಣಾ ಆಯೋಗಕ್ಕೆ ಸೇರ್ಪಡೆಗೊಳ್ಳುವ ಮೊದಲು ಪ್ರಧಾನಿಯವರ ಕೈಕೆಳಗೆ ಗುಜರಾತ್‌ನ ಮುಖ್ಯಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು; ಇದರ ಋಣ ತೀರಿಸಲಿಕ್ಕಾಗಿ ಜ್ಯೋತಿ ಅವರು ಹೀಗೆ ಮಾಡಿದ್ದಾರೆ ಎಂಬುದು ಆಗಿನ ಆರೋಪವಾಗಿತ್ತು. ಮೋದಿ ಅವರ ಅಂದಿನ ಘೋಷಣೆ ಗುಜರಾತ್‌ ಚುನಾವಣೆಯ ಮೇಲೆ ಪ್ರಭಾವ ಬೀರಿದ್ದಿರಬಹುದೇನೋ ಹೌದು; ಬಿಜೆಪಿ ಕಡಿಮೆ ಪ್ರಮಾಣದ ಬಹುಮತದೊಂದಿಗಾದರೂ ತನ್ನ ಅಧಿಕಾರವನ್ನು ಉಳಿಸಿಕೊಂಡಿತ್ತು.

ಅಂದ ಹಾಗೆ, ನಮ್ಮ ಚುನಾವಣಾ ಆಯೋಗ ಎಷ್ಟರಮಟ್ಟಿಗೆ ನಿರ್ಲಿಪ್ತ ಹಾಗೂ "ಸ್ವತಂತ್ರ'? ಇದೇ ಇಂದಿನ ಮುಖ್ಯಪ್ರಶ್ನೆ. ಈ ಪ್ರಶ್ನೆಗೆ ಉತ್ತರವೆಂದರೆ - ನಮ್ಮ ಮೂವರು ಚುನಾವಣಾ ಆಯುಕ್ತರಲ್ಲಿ (ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇಬ್ಬರು ಆಯುಕ್ತರು) ಕಟ್ಟುನಿಟ್ಟಾದ ತಾಟಸ್ಥ್ಯ/ ನಿರ್ಲಿಪ್ತ ಧೋರಣೆ ಅಥವಾ ನಿಷ್ಪಕ್ಷಪಾತಿ ನಿಲುವನ್ನು ನಿರೀಕ್ಷಿಸುವುದೇ ಕಷ್ಟ ಎಂಬಂತಾಗಿದೆ. ಎಲ್ಲಕ್ಕಿಂತ ಮೊದಲಾಗಿ ಗಮನಿಸಬೇಕಾದ ಅಂಶವೆಂದರೆ ನಮ್ಮ ಎಲ್ಲ ಚುನಾವಣಾ ಆಯುಕ್ತರುಗಳೂ ರಾಜಕೀಯ ಪಕ್ಷಗಳು ರೂಪಿಸಿರುವ ಐಎಎಸ್‌ ಅಧಿಕಾರಿಗಳೇ. ಪ್ರಧಾನಿ ಅಥವಾ ಇತರ ಸಚಿವರೊಂದಿಗಿನ ಅವರ ಸಾಮೀಪ್ಯ - ಸಂಬಂಧದ ಆಧಾರದ ಮೇಲಷ್ಟೆ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ. ಇತರ ಕೆಲ ಮುಖ್ಯ ಚುನಾವಣಾ ಆಯುಕ್ತರು, ಉದಾ - ಸುಕುಮಾರ್‌ ಸೇನ್‌ (1950-58), ಕೆ.ವಿ. ಸುಂದರಂ (1958-67), ಡಾ| ನಾಗೇಂದ್ರ ಸಿಂಗ್‌ ಹಾಗೂ ಆರ್‌. ಕೆ. ತ್ರಿವೇದಿ ಮುಂತಾದವರು ಐಸಿಎಸ್‌ ಅಧಿಕಾರಿಗಳಾಗಿದ್ದವರು; ಇವರ ಸೇವಾ ವೈಖರಿ ಎಂದೂ ಪ್ರಶ್ನಾರ್ಹವಾಗಿರಲಿಲ್ಲ. ಅಥವಾ ಆಕ್ಷೇಪಾರ್ಹವಾಗಿರಲಿಲ್ಲ. ನಮ್ಮ ಭೂತಪೂರ್ವ ಮುಖ್ಯ ಚುನಾವಣಾ ಆಯುಕ್ತರಲ್ಲೊಬ್ಬರಾದ ಟಿ.ಎಸ್‌. ಕೃಷ್ಣಮೂರ್ತಿ ಭಾರತೀಯ ಕಂದಾಯ ಸೇವೆ (ಇಂಡಿಯನ್‌ ರೆವೆನ್ಯೂ ಸರ್ವೀಸ್‌)ಯಲ್ಲಿದ್ದವರು, ಇನ್ನಿಬ್ಬರು - ಪೆರಿಶಾಸ್ತ್ರಿ ಹಾಗೂ ವಿ.ಎಸ್‌. ರಮಾದೇವಿ ಭಾರತ ಸರಕಾರದ ಕಾನೂನು ಕಾರ್ಯದರ್ಶಿಗಳಾಗಿದ್ದವರು.

ನಮ್ಮ ಇನ್ನೋರ್ವ ಭೂತಪೂರ್ವ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್‌. ಶೇಷನ್‌ ಅವರ ಹೆಸರು ಬಹುತೇಕ ಸುಪರಿಚಿತವೇ ಆಗಿದೆ. ಅವರಂತೆಯೇ ನಮ್ಮ ಪ್ರಪ್ರಥಮ ಮುಖ್ಯ ಚುನಾವಣಾ ಆಯುಕ್ತ ಸುಕುಮಾರ್‌ ಸೇನ್‌ ಅವರೂ ಕೂಡ, ಕೋಟ್ಯಂತರ ಮತದಾರರನ್ನೊಳಗೊಂಡ ಭಾರತದಂಥ ದೇಶದಲ್ಲಿ ಚುನಾವಣಾ ವ್ಯವಸ್ಥೆಯನ್ನು ನಿರ್ವಹಿಸಿದ ರೀತಿಗಾಗಿ ಶ್ಲಾಘನೆಗೆ ಪಾತ್ರರಾದವರು. 1952ರವರೆಗೂ ಭಾರತಕ್ಕೆ ವಯಸ್ಕ ಮತದಾನ ಪದ್ಧತಿಯೆಂಬುದು ತೀರಾ ಅಪರಿಚಿತವಾಗಿತ್ತು. ಉದಾಹರಣೆ ಪ್ರಪ್ರಥಮ ಬಾರಿಗೆ ರಾಜಕೀಯ ಪಕ್ಷಗಳಿಗೆ ನಿರ್ದಿಷ್ಟ ಚಿಹ್ನೆ ನಿಗದಿಪಡಿಸುವ ಕ್ರಮವನ್ನು ಜಾರಿಗೆ ತಂದವರೇ ಸುಕುಮಾರ್‌ ಸೇನ್‌.

ಮುಂದೆ, ಮತದಾರರ ಗುರುತು ಚೀಟಿಯ ಪರಿಕಲ್ಪನೆಯನ್ನು ಮುಂದಿಟ್ಟವರು ಆರ್‌.ಕೆ. ತ್ರಿವೇದಿಯವರು. ಮತದಾರರು ಗುರುತುಚೀಟಿ ನೀಡಿಕೆ ಕ್ರಮವನ್ನು ಆರಂಭಿಸಿದ ಕೀರ್ತಿ ಟಿ.ಎನ್‌. ಶೇಷನ್‌ ಅವರಿಗೆ ಸಂದಿದೆಯೇನೋ ಹೌದು. ಸುಕುಮಾರ್‌ ಸೇನ್‌ ಹಾಗೂ ಸುಂದರಂ ಚುನಾವಣೆಯ ಪ್ರಕ್ರಿಯೆಯನ್ನು ನಿಭಾಯಿಸಿದ ಕಾಲದಲ್ಲಿ ದೇಶದಲ್ಲಿ ವಸ್ತುತಃ ಇದ್ದುದು ಒಂದೇ ಒಂದು ಪಕ್ಷ, ಅರ್ಥಾತ್‌ ಕಾಂಗ್ರೆಸ್‌ ಪಕ್ಷ. ವಿರೋಧ ಪಕ್ಷವೆಂಬುದು ಇದ್ದಿರಲೇ ಇಲ್ಲ ಎಂದರೂ ತಪ್ಪಲ್ಲ! ಹೀಗಾಗಿ ಈ ಇಬ್ಬರೂ ಮುಖ್ಯ ಆಯುಕ್ತರು ಟೀಕೆ-ಟಿಪ್ಪಣಿಗಳಿಂದ ಬಚಾವಾದರು! ಚುನಾವಣಾ ಆಯೋಗ ಟೀಕಾ ಪ್ರಹಾರಗಳಿಗೆ ಬಲಿಯಾದುದು 1971ರ ಬಳಿಕ. ಆ ವರ್ಷ ಇಂದಿರಾಗಾಂಧಿಯವರು ಅಧಿಕಾರಾವಧಿ ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಲೋಕಸಭೆಯನ್ನು ಬರ್ಖಾಸ್ತುಗೊಳಿಸಿದ್ದರು. 

 ಆದ್ದರಿಂದ ನಮ್ಮ ಚುನಾವಣಾ ಆಯುಕ್ತರಲ್ಲಿ ಯಾರೂ (ರಾಜಕೀಯ ವ್ಯವಸ್ಥೆಗೆ ಋಣಿಗಳಲ್ಲದ) ನಿವೃತ್ತ ನ್ಯಾಯಾಧೀಶರಾಗಿದ್ದವರು ಇಲ್ಲ; ಅವರು ನಿರ್ಲಿಪ್ತ ಧೋರಣೆಯ ವ್ಯಕ್ತಿಗಳಾಗಲಿ, ಸಾರ್ವಜನಿಕವಾಗಿ ಖ್ಯಾತಿಗಳಿಸಿರುವ ಆಡ್ಯ ವ್ಯಕ್ತಿಗಳಾಗಲಿ ಅಲ್ಲ. ಆದರೆ ಈ ಮಾತಿನ ಅರ್ಥ, ನಮ್ಮಲ್ಲಿ ನಿಷ್ಪಕ್ಷಪಾತ ಧೋರಣೆಯ, ಸಾರ್ವಜನಿಕ ಮನ್ನಣೆ, ಗಳಿಸಿದ ವ್ಯಕ್ತಿಗಳು ಇಲ್ಲವೇ ಇಲ್ಲ ಎಂದಲ್ಲ.

ಟಿ.ಎನ್‌. ಶೇಷನ್‌ ಅವರು ಒಬ್ಬ ಕಟ್ಟುನಿಟ್ಟಿನ ಹಾಗೂ ವಿವೇಚನಾಶೀಲ ಮುಖ್ಯ ಚುನಾವಣಾ ಆಯುಕ್ತರೆಂದು ಪರಿಗಣಿಸಲ್ಪಟ್ಟಿದ್ದರಾದರೂ, ಆಯುಕ್ತರಿಗೆ ಇರಬೇಕಾದ ನಿಷ್ಪಕ್ಷಪಾತಿ ನಿಲುವಿಗೆ ಸಂಬಂಧಿಸಿದಂತೆ ಟೀಕೆಗಳು ಇಲ್ಲದಿರಲಿಲ್ಲ. ಅವರೇ ಹೇಳಿಕೊಂಡಿದ್ದಂತೆ, ಅವರು ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರಿಗೆ ನಿಕಟರಾಗಿದ್ದರು. ರಾಜೀವ್‌ ಗಾಂಧಿಯವರ ಆಡಳಿತದ ಅವಧಿಯಲ್ಲಿ ಶೇಷನ್‌ ರಕ್ಷಣಾ ಕಾರ್ಯದರ್ಶಿಯಾಗಿದ್ದು, ಮುಂದೆ ಕೇಂದ್ರ ಸಂಪುಟ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದವರು. 1991ರ ಮೇ 21ರಂದು ರಾಜೀವ್‌ ಗಾಂಧಿಯವರ ಹತ್ಯೆಯಾದ 23 ದಿನಗಳ ಬಳಿಕ ಶೇಷನ್‌ ಅವರು ಆ ಬಾರಿಯ ಲೋಕಸಭಾ ಚುನಾವಣೆಯನ್ನು ಘೋಷಿಸಿದರು. ಅವರ ಈ ಕ್ರಮ ಭಾರೀ ಟೀಕೆಗೆ ಗುರಿಯಾಗಿತ್ತು. ಚುನಾವಣೆಯನ್ನು ತಡವಾಗಿ ಘೋಷಿಸಿದ್ದರಿಂದ ಕಾಂಗ್ರೆಸ್‌ಗೆ ಅನುಕೂಲವೇ ಆಗಿತ್ತು; ಆದರೆ ಗೆದ್ದು ಅಧಿಕಾರ ಹಿಡಿಯುವ ಬಗೆಗಿನ ಬಿಜೆಪಿಯ ಕನಸು ಭಗ್ನಗೊಂಡಿತ್ತು. ರಾಜೀವ್‌ ಹತ್ಯೆಗೀಡಾದ ವರ್ಷ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಅನಿರೀಕ್ಷಿತ ಹಿಂಸಾಘಟನೆಗಳು ಜರಗಿದ್ದರೂ, ರಾಜೀವ್‌ ಹತ್ಯೆಯ ಘಟನೆ ನಡೆಯುವವರೆಗೂ ಶೇಷನ್‌ ಅವರು ಚುನಾವಣೆಯನ್ನು ಮುಂದೂಡುವ ಬಗ್ಗೆ ಯೋಚಿಸಿರಲಿಲ್ಲ. ಶೇಷನ್‌ ಅವರು ನಿರಂಕುಶ ಧೋರಣೆಯ ಕಾರ್ಯವೈಖರಿಗೆ ಹೆಸರಾಗಿದ್ದವರು; ಚುನಾವಣಾ ಆಯೋಗವನ್ನು ಬಹು ಸದಸ್ಯ ಘಟಕವನ್ನಾಗಿಸುವ ಪ್ರಸ್ತಾವವನ್ನು ಪ್ರಶ್ನಿಸಿದ್ದವರು. 1995ರಲ್ಲಿ ಅವರು ಸರ್ವೋಚ್ಚ ನ್ಯಾಯಾಲಯಕ್ಕೂ ದೂರು ಸಲ್ಲಿಸಿದರು. ಆದರೆ ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಮುಖ್ಯ ಚುನಾವಣಾ ಆಯುಕ್ತರಿಗೆ ಉಳಿದಿಬ್ಬರು ಆಯುಕ್ತರಿಗಿಂತ ಹೆಚ್ಚಿನ ಅಧಿಕಾರವೇನೂ ಇಲ್ಲ ಎಂದು ಸುಪ್ರೀಂಕೋರ್ಟು ಅಭಿಪ್ರಾಯಪಟ್ಟಿತು. ತಮಗಿಂತ ಹಿಂದಿನ ಕೆಲ ಮುಖ್ಯ ಚುನಾವಣಾ ಆಯುಕ್ತರ ಬಗ್ಗೆ ಶೇಷನ್‌ ಅಣುಕು ಹೇಳಿಕೆ ನೀಡಿದ್ದನ್ನೂ ನಾನು ಕೇಳಿದ್ದೇನೆ. "ಟಿ.ಎಸ್‌. ರಮಾದೇವಿ ಕೂಡ ಮುಖ್ಯ ಚುನಾವಣಾ ಆಯುಕ್ತರ ಹುದ್ದೆಯನ್ನು ನಿರ್ವಹಿಸಿದ್ದಾರೆ' ಎಂದು ಅವರು ಅಣಕವಾಡಿದ್ದರು. ರಮಾದೇವಿ ಮುಂದೆ ಕರ್ನಾಟಕದ ರಾಜ್ಯಪಾಲೆಯಾಗಿ ಕಾರ್ಯನಿರ್ವಹಿಸಿದರು.

ನಮ್ಮ ಚುನಾವಣಾ ಆಯುಕ್ತರ ಪಕ್ಷ ರಹಿತ ಅಥವಾ ನಿಷ್ಪಕ್ಷಪಾತಿ ನಿಲುವಿನ ಬಗ್ಗೆ ಸಂದೇಹಗಳು ಏಳುವುದಕ್ಕೆ ಒಂದು ಕಾರಣವೆಂದರೆ ಚುನಾವಣಾ ಆಯುಕ್ತರಾದವರು ತಮ್ಮ ಹುದ್ದೆಯಿಂದ ನಿವೃತ್ತರಾದ ಬಳಿಕ ಸಾರ್ವಜನಿಕ ಹುದ್ದೆಯೊಂದಕ್ಕೆ ನೇಮಕಗೊಳ್ಳುವುದಕ್ಕೆ ನಮ್ಮ ಸಂವಿಧಾನದಲ್ಲಿ ನಿಷೇಧ ಹೇರಲಾಗಿಲ್ಲವೆನ್ನುವುದು. ಇದಕ್ಕೆ ವ್ಯತಿರಿಕ್ತವಾಗಿ, ಭಾರತದ ಮಹಾ ಲೆಕ್ಕಪತ್ರ ತಪಾಸಣಾಧಿಕಾರಿಯಾಗಿ ಹಾಗೂ ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗದ ಅದ್ಯಕ್ಷರು ಮತ್ತು ಸದಸ್ಯರು ಯಾವುದೇ ಸರಕಾರಿ ಹುದ್ದೆಗೆ ಮರುನೇಮಕಗೊಳ್ಳಕೂಡದೆಂಬ ನಿಷೇಧವನ್ನು ಹೇರಲಾಗಿದೆ. ಆದರೆ ಈ ನಿಯಮವನ್ನು ಭಂಗಿಸಿರುವ ಒಂದೆರಡು ಪ್ರಸಂಗಗಳು ಕರ್ನಾಟಕದಲ್ಲೇ ಘಟಿಸಿವೆ! ನಿವೃತ್ತ ಚುನಾವಣಾ ಆಯುಕ್ತರನ್ನು ಸರಕಾರಿ ಹುದ್ದೆಗೆ ಅನರ್ಹರೆಂಬ ಕ್ರಮವನ್ನು ಜಾರಿಗೆ ತರಬೇಕೆಂದು ದಿನೇಶ್‌ ಗೋಸ್ವಾಮಿ ನೇತೃತ್ವದ ಚುನಾವಣಾ ಸುಧಾರಣಾ ಉದ್ದೇಶದ ಸಮಿತಿ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ; ಆದರೆ ಈ ವರದಿಗೆ ಬೀಗಮುದ್ರೆ ಬಿದ್ದಿದೆ.

ನಮ್ಮ ಮಾಜಿ ಮುಖ್ಯ ಚುನಾವಣಾ ಆಯುಕ್ತರಲ್ಲೊಬ್ಬರಾದ ಎಂ.ಎಸ್‌.ಗಿಲ್‌ ತಮ್ಮ ನಿವೃತ್ತಿಯ ಬಳಿಕ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು. ರಾಜ್ಯಸಭೆಗೆ ಆಯ್ಕೆಯಾಗಿ, ಕೇಂದ್ರದ ಸಹಾಯಕ ಸಚಿವರೂ ಆದರು. (ಕ್ರೀಡೆ ಹಾಗೂ ಯುವಜನ ವ್ಯವಹಾರ ಖಾತೆ). ಹೀಗೆ, ಯಾವ ಪಕ್ಷ ಇಂದು ಓ.ಪಿ. ರಾವತ್‌ ಅವರು ಚುನಾವಣಾ ದಿನಾಂಕಗಳನ್ನು ಘೋಷಿಸುವ ಉದ್ದೇಶದ ಪತ್ರಿಕಾಗೋಷ್ಠಿಯನ್ನು ಕೆಲ ತಾಸುಗಳವರೆಗೆ ಮುಂದೂಡಿ ರುವುದಕ್ಕಾಗಿ ಅವರನ್ನು ಟೀಕಿಸುತ್ತಿದೆಯೋ, ಅದೇ ಪಕ್ಷ (ಮೇಲಿನ ಉದಾಹರಣೆಯಲ್ಲಿ) ಚುನಾವಣಾ ಆಯೋಗದ ನಿಷ್ಪಕ್ಷಪಾತ/ಪಕ್ಷ ರಹಿತ ಧೋರಣೆಯನ್ನು ಉಲ್ಲಂ ಸಿತ್ತೆಂಬುದನ್ನು ಅಗತ್ಯವಾಗಿ ಗಮನಿಸಬೇಕಾಗಿದೆ. ಆದರೆ ಎಂ.ಎಸ್‌.ಗಿಲ್‌ ಅವರ ಸಾಧನೆಯ ಬಗ್ಗೆ ಹೇಳುವುದಾದರೆ; ನಮ್ಮ ಚುನಾವಣೆಗಳಲ್ಲಿ ಮತದಾನ ಯಂತ್ರಗಳ ಬಳಕೆಗೆ ಓನಾಮ ಹಾಕಿದವರೇ ಅವರು ಎಂಬುದನ್ನು ನಾವು ನೆನಪಿಡಬೇಕಾಗುತ್ತದೆ.

ಆದರೆ ಮುಖ್ಯ ಚುನಾವಣಾ ಆಯುಕ್ತರೊಬ್ಬರು ಪಕ್ಷಪಾತಿಯಾಗಿ ನಡೆದುಕೊಂಡ ಜೀವಂತ ಉದಾಹರಣೆಯೆಂದರೆ ಮಾಜಿ ಸಿಇಸಿ ನವೀನ್‌ ಚಾವ್ಲಾ (2009-2010). ಅವರ ಪೂರ್ವಾಧಿಕಾರಿ ಎನ್‌. ಗೋಪಾಲಸ್ವಾಮಿ ಅವರ ಪಾಲಿಗೆ ಚಾವ್ಲಾ ಅವರು ತಮ್ಮ ಕಾಂಗ್ರೆಸ್‌ ಪರ ನಿಲುವಿನಿಂದ ಎಷ್ಟೊಂದು ದೊಡ್ಡ ತಲೆನೋವು ತಂದಿದ್ದರೆಂದರೆ ಅವರನ್ನು ವಜಾಗೊಳಿಸುವಂತೆ ಗೋಪಾಲಸ್ವಾಮಿ ಆಗಿನ ರಾಷ್ಟ್ರಪತಿ ಹುದ್ದೆಯಲ್ಲಿದ್ದ ಪ್ರತಿಭಾ ಪಾಟೀಲರಿಗೆ ಶಿಫಾರಸು ಮಾಡಿದ್ದರು. ಆದರೆ ಆಕೆ ಈ ಶಿಫಾರಸನ್ನು ತಿರಸ್ಕರಿಸಿದರು. ನವೀನ್‌ ಚಾವ್ಲಾ ಅವರು ದಿಲ್ಲಿಯ ಉಪರಾಜ್ಯಪಾಲರ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ, ತುರ್ತು ಪರಿಸ್ಥಿತಿಯ ದಿನಗಳಲ್ಲಿ (1975-77) ದೌರ್ಜನ್ಯಗಳನ್ನು ಎಸಗಿದ್ದರೆಂಬ ಆರೋಪವಿದೆ. ಸರ್ವೋಚ್ಚ ನ್ಯಾಯಾಲಯದ ಭೂತಪೂರ್ವ ಶ್ರೇಷ್ಠ ನ್ಯಾಯಮೂರ್ತಿ ಜೆ.ಸಿ. ಶಾ ಅವರ ನೇತೃತ್ವದ ಶಾ ಆಯೋಗ, ರಾಷ್ಟ್ರಾದ್ಯಂತ ನಡೆದಿದ್ದ ದೌರ್ಜನ್ಯಗಳ ಪರಿಶೀಲನೆ ನಡೆಸಿ ನವೀನ್‌ ಚಾವ್ಲಾ ಮೇಲೆ ವಿದ್ಯುಕ್ತ ದೋಷಾರೋಪ ಹೊರಿಸಿತ್ತು. ಅವರು ನ್ಯಾಯಯುತ ಕರ್ತವ್ಯ ನಿರ್ವಹಣೆ ಹಾಗೂ ಇತರರ ಬಗ್ಗೆ ಅನುಕಂಪಯುತ ನಡವಳಿಕೆ ನಿರೀಕ್ಷಿಸುವ ಯಾವುದೇ ಹುದ್ದೆಗೆ ಅನರ್ಹರು ಎಂದು ಹೇಳಿತ್ತು. ಈ ದೋಷಾರೋಪವನ್ನು ಕಡೆಗಣಿಸಲಾಯಿತು. ನಯ-ನಾಜೂಕಿನ ಮಾತುಗಾರಿಕೆ ಬಲ್ಲವರಾಗಿದ್ದ ಹಾಗೂ ವ್ಯವಹಾರ ಕುಶಲಿಯಾಗಿದ್ದ ಚಾವ್ಲಾರನ್ನು ಗೋಪಾಲಸ್ವಾಮಿಯವರ ನಿವೃತ್ತಿಯ ಬಳಿಕ ಮುಖ್ಯ ಚುನಾವಣಾ ಆಯುಕ್ತರನ್ನಾಗಿಸಲಾಯಿತು. ಮುಂದೆ ಅವರು 2009ರ ಚುನಾವಣೆಯ ಪ್ರಕ್ರಿಯೆಯನ್ನು ನಿರ್ವಹಿಸಿದರು. ಬಹುಶಃ ಚಾವ್ಲಾ ಅವರ ಅರ್ಹತೆಗಳಲ್ಲಿ ಉಲ್ಲೇಖನೀಯವಾದುದೆಂದರೆ ಅವರು ಮದರ್‌ ತೆರೆಸಾ ಅವರ ಜೀವನ ಚರಿತ್ರೆಯನ್ನು ರಚಿಸಿದವರು; ರಾಜಸ್ಥಾನದಲ್ಲಿ ಕೆಲ ಸಮಾಜಸೇವಾ ಸಂಘಟನೆಗಳನ್ನು ನಿರ್ವಹಿಸುತ್ತಿರುವವರು.

ಒಂದಂತೂ ನಿಜ. ಚುನಾವಣಾ ಆಯುಕ್ತರು ಎಷ್ಟೇ ಸ್ವತಂತ್ರ ಮನೋಭಾವದವರಿರಲಿ ಅಥವಾ ಎಷ್ಟೇ ಕಾರ್ಯಕುಶಲಿ ಗಳಾಗಿರಲಿ, ಅವರು ಕೇಂದ್ರ ರಾಜ್ಯಗಳ ಆಡಳಿತ ಯಂತ್ರದ ಮೇಲೆ ಅವಲಂಬಿತರಾಗಿರಲೇಬೇಕು. ಮುಕ್ತ ಹಾಗೂ ನ್ಯಾಯಯುತ ಚುನಾವಣೆಗಳನ್ನು ಏರ್ಪಡಿಸಬೇಕೆಂದಿದ್ದರೆ! ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಹಾಗೂ ಪೊಲೀಸ್‌ ವ್ಯವಸ್ಥೆಯಲ್ಲಿ ಸೂಕ್ಷ್ಮತೆಯೆಂಬುದು ಎಳ್ಳಷ್ಟೂ ಇರದ ಅಸಡ್ಡಾಳಶಕ್ತಿಗಳು ವಿಜೃಂಭಿಸುತ್ತಿರುವುದು ಸುಳ್ಳಲ್ಲ. ಇತ್ತೀಚೆಗಷ್ಟೇ ಸರ್ವೋಚ್ಚ ನ್ಯಾಯಾಲಯ, ಚುನಾವಣೆಯಲ್ಲಿ ಕ್ರಿಮಿನಲ್‌ಗ‌ಳು ಸ್ಪರ್ಧಿಸುತ್ತಿರುವ ಬಗೆಗಿನ ತೀವ್ರ ಜಟಿಲವಾದ ಸಮಸ್ಯೆಯನ್ನು ಸಂಸತ್ತಿನಲ್ಲೇ ಬಗೆಹರಿಸಿಕೊಳ್ಳುವಂತೆ ಸೂಚಿಸಿದೆ! ಸರ್ವೋಚ್ಚ ನ್ಯಾಯಾಲಯವನ್ನು ಒಂದು ವಿಷಯದಲ್ಲಿ ಅಭಿನಂದಿಸಬೇಕು; ಅಭ್ಯರ್ಥಿಗಳು ತಮ್ಮ ವಿದ್ಯಾಭ್ಯಾಸ, ಆಸ್ತಿಪಾಸ್ತಿ ವಿವರ ಹಾಗೂ ಕ್ರಿಮಿನಲ್‌ ಹಿನ್ನೆಲೆ ಇತ್ಯಾದಿ ವಿವರಗಳನ್ನು ಘೋಷಿಸಬೇಕೆಂದು ಅದು ಹೇಳಿದೆ. ಆದರೆ ದೊಡ್ಡ ಸಮಸ್ಯೆಯೆಂದರೆ, ನಮ್ಮ ಚುನಾವಣೆಗಳಲ್ಲಿ ಹಣ ಹಾಗೂ ರಟ್ಟೆ ಬಲದ ಮೆರೆದಾಟ. ಇನ್ನು ಚುನಾವಣಾ ವೆಚ್ಚದ ಮೇಲೆ ಹೇರಲಾಗಿರುವ ಮಿತಿಯೆಂಬುದಂತೂ ಒಂದು ದೊಡ್ಡ ಜೋಕ್‌ ಎಂಬಂತಾಗಿದೆ; ಚುನಾವಣೆಗಳಿಗೆ ಸರಕಾರದ ಹಣ ಬೀಳಬೇಕು ಎಂಬಂಥ ಸಲಹೆಗಳು ಕೇಳಿಬರುತ್ತಿವೆ. 


Trending videos

Back to Top