CONNECT WITH US  

ಶೌಚಾಲಯ ನಿರ್ಮಾಣಕ್ಕೆ ಅನುದಾನ

ಚನ್ನಪಟ್ಟಣ: ಗ್ರಾಮೀಣ ಜನತೆಗೆ ಸ್ವತ್ಛತೆಯ ಮಹತ್ವವನ್ನು ತಿಳಿಸಿಕೊಡಲು ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಜಾಗೃತಿ ಮೂಡಿಸುತ್ತಿದೆ. ಶೌಚಾಲಯಗಳ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತಿದ್ದು, ಸಾರ್ವಜನಿಕರು ಸದ್ಬಳಕೆ ಮಾಡಿಕೊಂಡು ಸ್ವತ್ಛ ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಗ್ರಾಪಂ ಪಿಡಿಒ ಶಿವಲಿಂಗಯ್ಯ ಮನವಿ ಮಾಡಿದರು.

ತಾಲೂಕಿನ ಕೋಡಂಬಹಳ್ಳಿ ಗ್ರಾಮದಲ್ಲಿ ಜಿಪಂ ಹಾಗೂ ಕೋಡಂಬಹಳ್ಳಿ ಗ್ರಾಪಂ ವತಿಯಿಂದ ಹಮ್ಮಿಕೊಂಡಿದ್ದ ಸ್ವತ್ಛತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವತ್ಛತೆಯೆಂದರೆ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುದ್ಧವಾಗಿಟ್ಟುಕೊಳ್ಳುವುದು. ಜನ ವಸತಿಯ ಪ್ರದೇಶವನ್ನು ಕೊಳಕು ಮುಕ್ತ ಮಾಡುವುದರಿಂದ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಗಟ್ಟಬಹುದು ಎಂದರು.

ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಅನುಸೂಯಮ್ಮ ಮಾತನಾಡಿ, ಸ್ವತ್ಛತಾ ಕಾರ್ಯ ಎಲ್ಲರ ಹೊಣೆಗಾರಿಕೆ. ದೇಹ, ಧರಿಸುವ ಬಟ್ಟೆ, ಮನೆ, ಕೆಲಸ ಮಾಡುವ ಕಚೇರಿ ಸ್ಥಳಗಳಲ್ಲಿ ಶುಚಿಯಾಗಿಟ್ಟುಕೊಳ್ಳುವುದು ನಮ್ಮ ಕರ್ತವ್ಯ ಎಂದರು.

ಸ್ವತ್ಛ ಭಾರತ ಅಭಿಯಾನ ಕೇವಲ ಸರ್ಕಾರದ ಯೋಜನೆಯಾಗದೇ, ದೊಡ್ಡ ಮಟ್ಟದ ಆಂದೋಲನವಾಗಬೇಕು. ಸ್ವತ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಇದನ್ನು ನಮ್ಮ ಮೂಲಭೂತ ಕರ್ತವ್ಯ ಎಂಬುದನ್ನು ಮನಗಾಣಬೇಕು ಎಂದು ಹೇಳಿದರು. 

ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಗ್ರಾಮದಾದ್ಯಂತ ಸಂಚರಿಸಿ ಸ್ವತ್ಛತೆಯಿಂದಾಗುವ ಪ್ರಯೋಜನಗಳು ಹಾಗೂ ಅಶುಚಿತ್ವದಿಂದಾಗುವ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಮುಖ್ಯಶಿಕ್ಷಕ ಗುರೂಜಿ, ಶಿಕ್ಷಕರಾದ ಶ್ರೀಕಾಂತ್‌, ಸಿದ್ದರಾಮು, ನಾಗೇಶ್‌, ಗ್ರಾಪಂ ಕಸ ವಸೂಲಿಗಾರ ವೆಂಕಟೇಶ್‌, ಗ್ರಾಮದ ಮುಖಂಡ ಕೆ.ಎಸ್‌.ನಾಗರಾಜು ಇದ್ದರು.

Trending videos

Back to Top