CONNECT WITH US  

ಕಲ್ಲು ಗಣಿಗಾರಿಕೆಗೆ ಅವಕಾಶ ಬೇಡ

ರಾಮನಗರ: ತಾಲೂಕಿನ ಚಿಕ್ಕಸೂಲಿಕೆರೆ ಗ್ರಾಮದ ಸರ್ವೆ ನಂ.55ರಲ್ಲಿರುವ ಸುಮಾರು 43 ಎಕರೆ ಗೋಮಾಳದ ಜಮೀನಿನಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅವಕಾಶ ನೀಡುವ ಸಾಧ್ಯತೆ ಹಿನ್ನೆಲೆಯಲ್ಲಿ ಪರವಾನಗಿ ನೀಡದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ. ಪರವಾನಗಿ ನೀಡಿದ್ದೇ ಆದಲ್ಲಿ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.

ಚಿಕ್ಕಸೂಲಿಕೆರೆ ಗ್ರಾಮದ ಸರ್ವೆ ನಂ.55ರಲ್ಲಿರುವ ಭೂಮಿ ಕಲ್ಲು ಬಂಡೆಗಳಿಂದ ಕೂಡಿದೆ. ಕೃಷಿಗೆ ಯೋಗ್ಯವಲ್ಲದ ಈ ಭೂಮಿಯನ್ನು ಕಲ್ಲು ಗಣಿಗಾರಿಕೆಗೆ ಅನುಮತಿ ನೀಡುವಂತೆ ಕೆಲವು ಪ್ರಭಾವಿ ವ್ಯಕ್ತಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ ನಿಯಮ ಉಲ್ಲಂಘಿಸಿ ಅನುಮತಿ ನೀಡಲು ಮುಂದಾಗಿದೆ ಎಂದು ವಿಷಯ ಗೊತ್ತಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಗೋಮಾಳವಾಗಿಯೇ ಇರಲಿ: ಸದರಿ ಭೂಮಿಯ ಮೇಲೆ  2015ರಿಂದಲೇ ಕೆಲವರ ಕಣ್ಣು ಬಿದ್ದಿದೆ. ಅದೇ ಸಾಲಿನಲ್ಲಿ ನಡೆದ ಟಾಸ್ಕ್ಫೋರ್ಸ್‌ ಸಭೆಗಳಲ್ಲಿ ಈ ವಿಷಯ ಪ್ರಸ್ತಾಪವೂ ಆಗಿದೆ. ಇದು ಆನೆಪಥವಾಗಿದ್ದು, ಅನುಮತಿ ಬೇಡ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸಹ ಜಿಲ್ಲಾಡಳಿತದ ಗಮನ ಸೆಳೆದಿದ್ದಾರೆ. ಗೋಮಾಳವನ್ನಾಗಿಯೇ ಮುಂದುವರೆಸುವಂತೆ ಅಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಧಾರ್ಮಿಕ ಕ್ಷೇತ್ರ: ಸದರಿ ಭೂಮಿಯಲ್ಲಿ ಶತಮಾನಕ್ಕೂ ಹಳೆಯದಾದ ಮಹದೇಶ್ವರ ಸ್ವಾಮಿ ದೇವಸ್ಥಾನವಿದೆ. ಸುತ್ತಮುತ್ತಲಿನ ಗ್ರಾಮದ ನಿವಾಸಿಗಳು ಈ ದೇವರ ಮೇಲೆ ಅಪಾರ ಭಕ್ತಿ ಹೊಂದಿದ್ದು, ಆರಾಧ್ಯ ದೈವ ಇರುವ ಬೆಟ್ಟದಲ್ಲಿ ಗಣಿಗಾರಿಕೆಗೆ ಅವಕಾಶ ಬೇಡ ಎಂದು ದನಿ ಎತ್ತಿದ್ದಾರೆ. 

ಎತ್ತ ನೋಡಿದರು ಹಸಿರಿನ ಸಿರಿಯೇ ಇರುವ ಈ ಪ್ರದೇಶದಲ್ಲಿ ಅಪರೂಪದ ಜೀವವೈವಿದ್ಯತೆಯೂ ಇದೆ. ಕಾಡುಪ್ರಾಣಿಗಳು, ಪಕ್ಷಿಗಳ ಸಂತಾನೋತ್ಪತ್ತಿ ಈ ಪ್ರದೇಶ ಅತ್ಯಂತ ಸುರಕ್ಷಿತವಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ. 

ಕೃಷಿ ಚಟುವಟಿಕೆಗೆ ತೊಂದರೆ: ಚಿಕ್ಕಸೂಲಿಕೆರೆ ಗ್ರಾಮದ ಸರ್ವೆ ನಂ.55ಕ್ಕೆ ಹೊಂದಿಕೊಂಡಂತೆ ಚಿಕ್ಕಸೂಲಿಕೆರೆ, ರಾಂಪುರ, ಹಾಗಲಹಳ್ಳಿ, ದೇವಿಸಿದ್ದಯ್ಯನೊಡ್ಡಿ ಗ್ರಾಮಗಳ ರೈತರ ಜಮೀನುಗಳಿವೆ. ರೇಷ್ಮೆ ಸೇರಿದಂತೆ ತೋಟಗಾರಿಕೆ ಹಾಗೂ ಕೃಷಿ ಬೆಳೆ ಬೆಳೆಯಲಾಗುತ್ತಿದೆ. ಕಲ್ಲು ಗಣಿಗಾರಿಕೆಯಿಂದ ಹೊರಹೊಮ್ಮುವ ಧೂಳಿನಿಂದಾಗಿ ಕೃಷಿ ಚಟುವಟಿಕೆಗೆ ತೊಂದರೆಯಾಗಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ವಾಯು, ಶಬ್ದ ಮಾಲಿನ್ಯದಿಂದಾಗಿ ಇಡೀ ಪರಿಸರವೇ ಹಾಳಾಗಲಿರುವುದರಿಂದ ಗಣಿಗಾರಿಕೆಗೆ ಅವಕಾಶ ಕೊಡಬಾರದು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದು, ಸ್ಥಳೀಯ ಗ್ರಾಮ ಪಂಚಾಯ್ತಿ ನಿರಪೇಕ್ಷಣಾ ಪತ್ರ ನೀಡಬಾರದು ಎಂದು ಆಗ್ರಹಿಸಿರುವ ಗ್ರಾಮಸ್ಥರು, ಒಂದು ವೇಳೆ ನೀಡಿದ್ದೆ ಆದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನಾವು ಸಣ್ಣ ಹಿಡುವಳಿದಾರರಾಗಿದ್ದು, ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದೇನೆ. ಒಂದು ವೇಳೆ ಚಿಕ್ಕಸೂಲಿಕೆರೆ ಗ್ರಾಮದ ಸರ್ವೆ ನಂ.55ರಲ್ಲಿ ಕಲ್ಲುಗಣಿಗಾರಿಕೆ ಆರಂಭಗೊಂಡರೆ ನಾವು ಬೀದಿಗೆ ಬರುತ್ತೇವೆ. ಅದಕ್ಕೂ ಮುನ್ನ ಜಿಲ್ಲಾಡಳಿತ ನಮಗೆ ವಿಷ ಕೊಟ್ಟು ನಮ್ಮ ಹೆಣಗಳ ಮೇಲೆ ಗಣಿಗಾರಿಕೆಗೆ ಅನುಮತಿ ನೀಡಲಿ
-ಮುನಿತಿಮ್ಮಯ್ಯ, ರೈತ   

Trending videos

Back to Top