CONNECT WITH US  

ಬಾಡಿಗೆ ಮನೆ ನಿವಾಸಿಗಳ ಮಾಹಿತಿ ಸಂಗ್ರಹಕ್ಕೆ ಸಜ್ಜಾದ ಪೊಲೀಸರು

ರಾಮನಗರ: ನಗರದಲ್ಲಿ ಬಟ್ಟೆ ವ್ಯಾಪಾರಿಯ ಸೋಗಿನಲ್ಲಿ ವಾಸವಾಗಿದ್ದ ಜಮಾತ್‌ ಉಲ್‌ ಮುಜಾಹಿದಿನ್‌ ಬಾಂಗ್ಲದೇಶ ಸಂಘಟನೆಯ ಉಗ್ರ ಮುನೀರ್‌ನನ್ನು ಕೇಂದ್ರ ತನಿಖಾ ತಂಡ  ಬಂಧಿಸಿರುವ ಪ್ರಕರಣದ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಮನೆ ಕಟ್ಟಡದ ಮಾಲೀಕರು ತಮ್ಮ ಬಾಡಿಗೆದಾರರಿಂದ ಅಗತ್ಯ ದಾಖಲೆ, ಪುರಾವೆಗಳನ್ನು ಸಂಗ್ರಹಿಸಲು ಪೊಲೀಸ್‌ ಇಲಾಖೆ ಮುಂದಾಗಿದೆ.

ಜೆ.ಎಂ.ಬಿ.ಉಗ್ರನೊಬ್ಬ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಜಿಲ್ಲಾ ಪೊಲೀಸರು ಜಿಲ್ಲೆಯಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಮಾಹಿತಿ ಕಲೆ ಹಾಕುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಉಗ್ರ ಮುನಿರ್‌ ಸಿಕ್ಕಿಬಿದ್ದ ಬಡಾವಣೆ ಮತ್ತು ಸುತ್ತಮುತ್ತಲ ಬಡಾವಣೆಗಳ ಮೇಲೆ ತೀವ್ರ ನಿಗಾ ಇರಿಸಿರುವ ಪೊಲೀಸರು ಮಾಹಿತಿ ಸಂಗ್ರಹಿಸುವ ಕಾರ್ಯ ಆರಂಭಿಸಿಲಿದ್ದಾರೆ. ಜಿಲ್ಲೆಯ ಉಳಿದ ನಗರಗಳಾದ ಕನಕಪುರ, ಚನ್ನಪಟ್ಟಣ, ಮಾಗಡಿ, ಬಿಡದಿಯಲ್ಲೂ ಮಾಹಿತಿ ಸಂಗ್ರಹಣಾ ಕಾರ್ಯ ನಡೆಸುವಂತೆ ಎಸ್ಪಿ ರಮೇಶ್‌ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಮನೆಯ ಮಾಲೀಕರು ತಮ್ಮ ಮನೆಯಲ್ಲಿ ಬಾಡಿಗೆ ಇರುವವರ ಬಗ್ಗೆ  ಪೂರ್ಣ ಮಾಹಿತಿಯನ್ನು ತಮ್ಮ ಭಾಗದ ಪೊಲೀಸ್‌ ಠಾಣೆಗೆ ಕೊಡುವುದನ್ನು ಕಡ್ಡಾಯ ಮಾಡುವ ಬಗ್ಗೆಯೂ ಇಲಾಖೆ ಚಿಂತನೆ ನಡೆಸುತ್ತಿದೆ. 

ತಮ್ಮ ನಡುವೆಯೇ ಉಗ್ರನೊಬ್ಬ ವಾಸಿಸುತ್ತಿದ್ದ ಮಾಹಿತಿ ನಾಗರಿಕರಲ್ಲಿ  ಗಾಬರಿ ಮೂಡಿಸಿದೆ. ಗುಪ್ತಚರ ಇಲಾಖೆ ಇನ್ನಷ್ಟು ಚುರುಕು ಗೊಳ್ಳಬೇಕಾಗಿದೆ, ಪೊಲೀಸ್‌ ಇಲಾಖೆ  ಕೆಲವು ತಿಂಗಳುಗಳ ಹಿಂದೆ ಜಾರಿ ಮಾಡಿದ ಸುಧಾರಿತ ಬೀಟ್‌ ವ್ಯವಸ್ಥೆಯನ್ನು ಬಲಗೊಳಿಸಬೇಕಾಗಿದೆ ಎಂಬ ಸಲಹೆಗಳು ನಾಗರಿಕರಿಂದ ವ್ಯಕ್ತವಾಗಿದೆ. 

ಸಿಎಂ ಕುಮಾರಸ್ವಾಮಿ, ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ರಂತಹ ಘಟಾನುಘಟಿಗಳು ಪ್ರತಿನಿಧಿಸುವ ಜಿಲ್ಲೆಯಲ್ಲಿ ಗುಪ್ತಚರ ಇಲಾಖೆ  ಚುರುಕಾಗಿರಬೇಕು ಎಂಬುದು ಶ್ರೀಸಾಮಾನ್ಯನ ಅಭಿಪ್ರಾಯ.

ದಶಕದ ಹಿಂದೆ ಚನ್ನಪಟ್ಟಣದಲ್ಲಿ ರಸ್ತೆ ಬದಿಯಲ್ಲೇ ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿತ್ತು.  ವಾರ್ಡುವಾರು, ಗ್ರಾಮವಾರು  ಜನಸಂಪರ್ಕ ಸಭೆಗಳನ್ನು ಆಯೋಜಿಸಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಪೊಲೀಸ್‌ ಅಧಿಕಾರಿಗಳು ಮಾಡಬೇಕಾಗಿದೆ ಎಂಬುದು ಸಾರ್ವಜನಿಕರ ಅನಿಸಿಕೆ. 

ಬಾಂಗ್ಲಾ ದೇಶಿಕರಿಗೆ ಸುರಕ್ಷಿತ ತಾಣ ರಾಮನಗರ !: 2014ರ ಡಿಸೆಂಬರ್‌ನಲ್ಲಿ ರಾಮನಗರ ಜಿಲ್ಲೆಯಲ್ಲಿಯೂ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವ ಕಾರ್ಯ ಆರಂಭವಾಗಿತ್ತು. ನಗರಕ್ಕೆ ಹೊಂದಿಕೊಂಡಂತಿರುವ ಗ್ರಾಮದಲ್ಲಿ 5 ಬಾಂಗ್ಲ ವಲಸಿಗರನ್ನು, ಕನಕಪುರದ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮೂವರು ಬಾಂಗ್ಲ ವಲಸಿಗರನ್ನು ಪತ್ತೆ ಹಚ್ಚಿದ್ದರು. 

2016ರಲ್ಲಿ ನಗರದ ಪ್ರಮುಖ ಚಿನ್ನದ ವ್ಯಾಪಾರಿ ಮಳಿಗೆಯ ದರೋಡೆ ಯತ್ನಕ್ಕೆ ಪ್ರಯತ್ನಿಸಿದ ವೇಳೆ ದರೋಡೆಕೋರರು ಬಂದೂಕು ಝಳಪಿಸಿ ಪರಾರಿಯಾದ ಘಟನೆಯ ಹಿಂದೆಯೂ ಅಕ್ರಮ ವಲಸಿಗರ ಕೈವಾಡದ ಶಂಕೆ ವ್ಯಕ್ತವಾಗಿತ್ತು.  ಈ ಎಲ್ಲಾ ಘಟನೆಗಳು ರಾಮನಗರ ಉಗ್ರರ, ಅಕ್ರಮ ವಲಸಿಗರ ಸುರಕ್ಷಿತ ತಾಣವಾಗುತ್ತಿದೆ ಎಂಬ ಅನುಮಾನ  ನಾಗರಿಕರನ್ನು ಕಾಡುತ್ತಿದೆ. 

ಪ್ರತಿಕ್ರಿಯೆ: ಮನೆ ಕಟ್ಟಡದ ಮಾಲೀಕರು ತಮ್ಮ ಬಾಡಿಗೆದಾರರಿಂದ ಅಗತ್ಯ ದಾಖಲೆ, ಪುರಾವೆಗಳನ್ನು ಸಂಗ್ರಹಿಸಿ ತಮ್ಮ ವ್ಯಾಪ್ತಿಯ ಪೊಲೀಸ್‌ ಠಾಣೆಗೆ ನೀಡಬೇಕು. ಹೀಗೆ ನೀಡಿದ ಮಾಹಿತಿಯನ್ನು ಇಲಾಖೆಯ ಉಪಯೋಗಕ್ಕೆ ಮಾತ್ರ ಬಳಸಿಕೊಳ್ಳಲಾಗುವುದು. ಸಮಾಜಘಾತುಕ ಚಟುವಟಿಕೆಯನ್ನು ನಿಯಂತ್ರಿಸುವ ವಿಚಾರದಲ್ಲಿ ಇಲಾಖೆಯೊಂದಿಗೆ ನಾಗರೀಕರು ಸಹಕರಿಸಬೇಕು. 
ರಮೇಶ್‌, ಎಸ್ಪಿ , ರಾಮನಗರ

ಪೊಲೀಸ್‌ ಔಟ್‌ ಪೋಸ್ಟ್‌ ನಿರ್ಮಿಸಲಿಲ್ಲ: ಟಿಪ್ಪುನಗರ, ಯಾರಬ್‌ ನಗರ, ಕೊತ್ತಿಪುರ, ಪೂಲ್‌ಬಾಗ್‌ ಹೀಗೆ ರೈಲು ನಿಲ್ದಾಣದ ಮತ್ತೂಂದು ಬದಿಗಿರುವ ವಾರ್ಡುಗಳಲ್ಲಿ ನಗರದ ಒಟ್ಟಾರೆ ಜನಸಂಖ್ಯೆಯ ಶೇ. 50ರಷ್ಟು ಜನ ವಾಸಿಸುತ್ತಿದ್ದಾರೆ. ಪೊಲೀಸ್‌ ಔಟ್‌ ಪೋಸ್ಟ್‌ ನಿರ್ಮಿಸುವಂತೆ ಆಗ್ರಹಿಸಿ ಈ ಭಾಗದ ಜನತೆಯ ಬೇಡಿಕೆ ಈಡೇರಲೇ ಇಲ್ಲ ಎಂದು ನಗರಸಭೆ ಸದಸ್ಯ ಆರಿಫ್ ಖುರೇಷಿ ತಿಳಿಸಿದರು. 

 ಔಟ್‌ ಪೋಸ್ಟ್‌ ನಿರ್ಮಿಸಲು ಸ್ಥಳವನ್ನು ಈ ಭಾಗದ ಜನರೇ ಗುರುತಿಸಿದ್ದಾರೆ. ಪೊಲೀಸ್‌ ಔಟ್‌ ಪೋಸ್ಟ್‌ ಜತೆಗೆ ಅಂಚೆ ಕಚೇರಿ, ನಗರಸಭೆ, ಬೆಸ್ಕಾಂ, ಹೀಗೆ ಜನರಿಗೆ ಹತ್ತಿರವಿರುವ ಇಲಾಖೆಗಳ ಶಾಖೆಗಳು ಈ ಭಾಗದಲ್ಲಿ ತೆರೆಯುವ ಅವಶ್ಯಕತೆ ಇದೆ ಎಂದು ಹೇಳಿದರು.  

* ಬಿ.ವಿ.ಸೂರ್ಯ ಪ್ರಕಾಶ್‌

Trending videos

Back to Top