CONNECT WITH US  

ಅಧಿಕಾರಿಗಳಿಗೆ ಬದ್ಧತೆ ಇರಲಿ

ರಾಮನಗರ: ಮಕ್ಕಳು ಮತ್ತು ಮಹಿಳೆಯರ ಸಂರಕ್ಷಣೆಗೆ ಸಂಬಂಧಿಸಿದಂತೆ ಕರ್ತವ್ಯ ನಿರ್ವಹಿಸುತ್ತಿರುವ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಸ್ಥಳೀಯ ಆಡಳಿತದ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳೆಲ್ಲರು ಬದ್ಧತೆ ಮತ್ತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ್‌ ಎಲ್‌.ನಾಡಿಗೇರ್‌ ಸಲಹೆ ನೀಡಿದರು. 

ನಗರದ ಜಿಪಂ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳು ಹಾಗೂ ರಕ್ಷಣಾ ಕಾನೂನುಗಳು ಮತ್ತು ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ ಹಾಗೂ ಅಂಗವಿಕಲರ ಹಕ್ಕುಗಳ ಅಧಿನಿಯಮ 2016ರ ಕುರಿತು ಜಿಲ್ಲೆಯ ಪಿಡಿಒ ಹಾಗೂ ಕಂದಾಯ ಇಲಾಖೆಯ ಉಪತಹಸೀಲ್ದಾರರು, ರಾಜಸ್ವ ನಿರೀಕ್ಷಕರು, ಗ್ರಾಮಲೆಕ್ಕಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಅರಿವು ಮೂಡಿಸಲು ಕಾರ್ಯಾಗಾರ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ಮಾತನಾಡಿ, ಸಮಾಜದಲ್ಲಿ ಮಕ್ಕಳ ಮೇಲೆ ನಡೆಯುವ ಹಲ್ಲೆ, ಶೋಷಣೆ, ಇತ್ಯಾದಿ ಪ್ರಕರಣಗಳಲ್ಲಿ ಕಾನೂನಿನ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಶೋಷಣೆ ತಡೆಗಟ್ಟಲು ತಮಗಿರುವ ಅಧಿಕಾರ ವ್ಯಾಪ್ತಿಯನ್ನು ತಿಳಿಸಿಕೊಡಲು ಈ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದರು. 

ಜಿಲ್ಲಾ ಪಂಚಾಯತ್‌ ಸಿಇಒ ಎಂ.ಪಿ.ಮುಲ್ಲೆ ಮುಹಿಲನ್‌ ಮಾತನಾಡಿ, ಕಾರ್ಯಾಗಾರದಲ್ಲಿ ಭಾಗವಹಿಸಿರುವ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ ಅಧ್ಯಕ್ಷರು, ಸದಸ್ಯರು, ಉಪ ತಹಶೀಲ್ದಾರ್‌, ರಾಜಸ್ವ ನಿರೀಕ್ಷಕರು ಮಕ್ಕಳ ಹಾಗೂ ವಿಕಲಚೇತನರ ಹಕ್ಕುಗಳ ಸಂರಕ್ಷಣಾ ಕಾನೂನುಗಳ ಬಗ್ಗೆ ಮಾಹಿತಿ ಪಡೆದು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಕೊಪ್ಪಳ ಜಿಲ್ಲೆಯ ಮಕ್ಕಳ ಸಂರಕ್ಷಣಾ ಕಾರ್ಯಕ್ರಮಗಳ ಸಹಾಯಕ ಘಟಕದ ಪ್ರಾದೇಶಿಕ ಸಂಯೋಜಕ ಕೊಣಿಲ ರಾಘವೇಂದ್ರ ಭಟ್‌ ಉಪನ್ಯಾಸ ನೀಡಿದರು. ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಎಸ್‌.ಹೊನ್ನಸ್ವಾಮಿ, ಮಹಿಳಾ ಮತ್ತು ಹಿರಿಯ ನಾಗರಿಕರ ಹಾಗೂ ವಿಕಲಚೇತನರ ಕಲ್ಯಾಣಾಧಿಕಾರಿ ಹೇಮಾವತಿ ಇದ್ದರು. 

Trending videos

Back to Top