CONNECT WITH US  

ಎಲ್ಲಾ ವೃತ್ತಿ, ಉದ್ಯೋಗಗಳು ಸಮಾನ

ರಾಮನಗರ: ಯಾವುದೇ ವೃತ್ತಿ, ಉದ್ಯೋಗದಲ್ಲಿರಿ ಪ್ರಾಮಾಣಿಕವಾಗಿ, ಅಭಿಮಾನದಿಂದ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ಸಲಹೆ ನೀಡಿದರು.

ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಜಿಲ್ಲಾಡಳಿತ ಹಾಗೂ ಕಾರ್ಮಿಕರ ಕಲ್ಯಾಣ ಮಂಡಳಿಯ ಸಹಯೋಗದಲ್ಲಿ, ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮ, ಕರ್ನಾಟಕ ರಾಜ್ಯ ನಿರ್ಮಾಣ ಕೇಂದ್ರಗಳು ತಾಲೂಕಿನ ಬಿಡದಿ ಹೋಬಳಿಯ ಜೋಗರದೊಡ್ಡಿಯಲ್ಲಿರುವ ಜಿಲ್ಲಾ ನಿರ್ಮಿತಿ ಕೇಂದ್ರದ ಆವರಣದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಉಪಕರಣ ಪೆಟ್ಟಿಗೆ (ಟೂಲ್‌ ಕಿಟ್‌) ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲಾ ಉದ್ಯೋಗ, ವೃತ್ತಿಗಳು ಸಮಾನ, ಇವುಗಳಲ್ಲಿ ಯಾವ ಭೇದಭಾವಗಳಲಿಲ್ಲ. ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕಷ್ಟೆ ಎಂದು ವಿವರಿಸಿದರು.

ಶ್ರಮ ಸಾಮರ್ಥ್ಯ ಯೋಜನೆಯಡಿಯಲ್ಲಿ ತರಬೇತಿ ಪಡೆದಿರುವ ಕಾರ್ಮಿಕರು ಅವಶ್ಯಕವಾದ ವೃತ್ತಿ ಕೌಶಲ್ಯ ಮತ್ತು ನೈಪುಣ್ಯತೆಯನ್ನು ಸಾಧಿಸಿದ್ದೀರಿ. ಇದೀಗ ಉಪಕರಣ ಪೆಟ್ಟಿಗೆ, ರಕ್ಷಣಾ ಪೆಟ್ಟಿಗೆ, ಪ್ರಮಾಣ ಪತ್ರ ಕೊಡಲಾಗಿದೆ. ಉದ್ಯೋಗಾವಕಾಶಗಳನ್ನು ಪಡೆಯಲಿದ್ದೀರಿ, ಸ್ವಯಂ ಉದ್ಯೋಗಗಳಾಗಲೂ ಸಹಕಾರಿಯಾಗಲಿದೆ. ಕಾರ್ಮಿಕರು ತಮಗಾಗಿ ಸರ್ಕಾರ ನೀಡುವ ಸೌಲಭ್ಯಗಳ ಬಗ್ಗೆ ಮಾಹಿತಿ ಇರಿಸಿಕೊಳ್ಳಿ ಎಂದು ವಿವರಿಸಿದರು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ನಿರ್ಮಾಣ ಕೇಂದ್ರದ ನಿರ್ದೇಶಕರಾದ ಎನ್‌.ಎಸ್‌.ಮಹದೇವ್‌ಪ್ರಸಾದ್‌ ಮಾತನಾಡಿ, ನೂತನವಾಗಿ ನಿರ್ಮಿಸುವ ಕಟ್ಟಡಕ್ಕೆ ಶೇ.1 ಸೆಸ್‌ ಅನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ಸಂಗ್ರಹಿಸುತ್ತಿದ್ದು, ಸಂಗ್ರಹವಾದ ನಿಧಿಯನ್ನು ಕಾರ್ಮಿಕರ ಆರೋಗ್ಯ ಸುಧಾರಣೆ, ಸಂರಕ್ಷಣೆ, ಕೌಶಲ್ಯ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲಾಗುತ್ತಿದೆ. ತರಬೇತಿ ಹೊಂದಿದ ಕಾರ್ಮಿಕರಿಗೆ ಉದ್ಯೋಗದಾತರೊಂದಿಗೆ ನೇರವಾದ ಸಂಪರ್ಕ ಹೊಂದುವಂತೆ ವೆಬ್‌ಪೋರ್ಟಲ್‌ ಅನ್ನು ವಿನ್ಯಾಸಗೊಳಿಸಿ ಕಾರ್ಮಿಕರ ವಿವರವನ್ನು ನಿರ್ವಹಿಸಲಾಗುತ್ತಿದೆ ಎಂದು ವಿವರಿಸಿದರು.

18 ರಿಂದ 60 ವರ್ಷದೊಳಗಿನ ಕಾರ್ಮಿಕರು ನಮೂನೆ-5 ಮತ್ತು 6ರಲ್ಲಿ 90 ದಿನಗಳು ಕೆಲಸ ಮಾಡಿರುವ ಕುರಿತು ಪಡೆದಿರುವ ಉದ್ಯೋಗ ದೃಢೀಕರಣ ಪತ್ರದೊಂದಿಗೆ ಕಾರ್ಮಿಕ ಅಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಫ‌ಲಾನುಭಗಳಿಗೆ ವೈದ್ಯಕೀಯ ವೆಚ್ಚ ಧನ ಸಹಾಯವನ್ನು 2 ಲಕ್ಷದವರೆಗೆ, ಮಹಿಳಾ ಫ‌ಲಾನುಭವಿಗೆ ಮೊದಲು 2 ಹೆರಿಗೆಗಳಿಗೆ ತಲಾ 15 ಸಾವಿರ ರೂ., 5, 6 ಹಾಗೂ 7ನೇ ತರಗತಿಗಳಲ್ಲಿ ಓದುತ್ತಿರುವ ಕಾರ್ಮಿಕರ ಮಕ್ಕಳಿಗೆ ಪ್ರತಿ ವರ್ಷಕ್ಕೆ 3 ಸಾವಿರ ರೂ.,

ಎಸ್‌.ಎಸ್‌.ಎಲ್‌.ಸಿ ಓದುತ್ತಿರುವ ಮಕ್ಕಳಿಗೆ 6 ಸಾವಿರ ರೂ., ಪಿ.ಯು.ಸಿ ಉತ್ತೀರ್ಣರಾದವರಿಗೆ 8 ಸಾವಿರ ರೂ., ಸ್ನಾತ್ತಕೋತ್ತರ ಪದವಿ ಹಾಗೂ ಪಿ.ಎಚ್‌.ಡಿ. ಓದುತ್ತಿರುವವರಿಗೆ ಪ್ರತಿ ವರ್ಷಕ್ಕೆ 20 ಸಾವಿರ ರೂ., ಕಾರ್ಮಿಕರ 2 ಮಕ್ಕಳ ಮದುವೆಗೆ 20 ಸಾವಿರ ರೂ. ಧನಸಹಾಯ ಸೇರಿದಂತೆ ಪಿಂಚಣಿ, ಮನೆ ನಿರ್ಮಾಣಕ್ಕೆ ಧನ ಸಹಾಯ, ಉಪಕರಣ ಖರೀದಿಗೆ ಧನಸಹಾಯ ಇತ್ಯಾದಿ ಸೌಲಭ್ಯಗಳು ದೊರೆಯಲಿದೆ ಎಂದು ವಿವರಿಸಿದರು. 

ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್‌ ಕುಲಕರ್ಣಿ, ಡಾ.ಕುಮಾರ್‌, ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರು ವೇದಿಕೆಯಲ್ಲಿದ್ದರು.


Trending videos

Back to Top