CONNECT WITH US  

ರಾಮನಗರಕ್ಕೆ ಅಟಲ್‌ ಬಿಹಾರಿ ವಾಜಪೇಯಿ

ರಾಮನಗರ: ದಿವಂಗತ ಪ್ರಧಾನಿ ಅಟಪ್‌ ಬಿಹಾರಿ ವಾಜಪೇಯಿ 1994ರಲ್ಲಿ ರಾಮನಗರಕ್ಕೆ ಆಗಮಿಸಿ, ಬಿಜೆಪಿ ಅಭ್ಯರ್ಥಿ ಡಿ.ಗಿರೀಗೌಡರ ಪರ ಪ್ರಚಾರ ನಡೆಸಿದ್ದರು. 

ರಾಜ್ಯ ವಿಧಾನಸಭೆಗೆ 1994ರಲ್ಲಿ ನಡೆದ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಪ್ರಥಮ ಬಾರಿಗೆ ಜನತಾದಳ ಪಕ್ಷದಿಂದ ಎಚ್‌.ಡಿ.ದೇವೇಗೌಡ, ಕಾಂಗ್ರೆಸ್‌ನಿಂದ ಸಿ.ಎಂ.ಲಿಂಗಪ್ಪ ಮತ್ತು ಬಿಜೆಪಿಯಿಂದ ಡಿ.ಗಿರಿಗೌಡ ಸ್ಪರ್ಧಿಸಿದ್ದರು. ಬಿಜೆಪಿ ಅಭ್ಯರ್ಥಿ ಡಿ.ಗಿರಿಗೌಡರ ಪ್ರಚಾರಕ್ಕೆಂದು ಅವರು 1994ರ ನವೆಂಬರ್‌ 23ರಂದು ಮುರುಳಿ ಮನೋಹರ ಜೋಷಿ ಅವರೊಂದಿಗೆ ನಗರಕ್ಕೆ ಆಗಮಿಸಿದ್ದರು.

ಖಾಸಗಿ ಬಸ್‌ ನಿಲ್ದಾಣದ ಬಳಿ ಕಟ್ಟಡದ ಮೇಲಿಂದ ಮತದಾರರನ್ನುದ್ದೇಶಿಸಿ ಮಾತನಾಡಿದ ವಾಜಪೇಯಿ ಎಚ್‌.ಡಿ.ದೇವೇಗೌಡರು ನವದೆಹಲಿಗೆ ಬರಲಿ (ಸಂಸದರಾಗಿ) ಅಲ್ಲಿ ನಮಗೆ ಮಾರ್ಗದರ್ಶನ ನೀಡಲಿ, ಇಲ್ಲಿ ಯಂಗ್‌ ದೇವೇಗೌಡ  (ಡಿ.ಗಿರಿಗೌಡ) ಅವರನ್ನು ಆರಿಸಿ ವಿಧಾನಸಭೆಗೆ ಕಳುಹಿಸಿ ಎಂದು ಭಾಷಣ ಮಾಡಿದ್ದರು.

ಚುನಾವಣೆಯಲ್ಲಿ ಎಚ್‌.ಡಿ.ದೇವೇಗೌಡರು 47986 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಬಿಜೆಪಿಯ ಅಸ್ಥಿತ್ವವೇ ಇಲ್ಲದ ರಾಮನಗರದಲ್ಲಿ ವಾಜಪೇಯಿ ಅವರ ಮಾತಿನ ಮೋಡಿಗೆ ಮರಳಾದ ರಾಮನಗರದ ಮತದಾರರು ಬಿಜೆಪಿಗೆ 22664 ಮತಗಳನ್ನು ಕೊಟ್ಟಿದ್ದರು. ದೇವೇಗೌಡರು ಇಲ್ಲಿಂದ ಗೆದ್ದು ರಾಜ್ಯದ ಮುಖ್ಯಮಂತ್ರಿಗಳಾದರು. 

1982ರಲ್ಲೂ ಭೇಟಿ: ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎಸ್‌.ಆರ್‌.ನಾಗರಾಜು ಅವರ ಪ್ರಕಾರ 1980ರಲ್ಲಿ ಬಿಜೆಪಿ ಅಸ್ಥಿತ್ವಕ್ಕೆ ಬಂದ ನಂತರ ಪ್ರಥಮ ಅಧ್ಯಕ್ಷರಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ರಾಜ್ಯ ಪ್ರವಾಸ ಕೈಗೊಂಡಿದ್ದ ವೇಳೆ ಮಾಗಡಿಯಿಂದ ರಾಮನಗರಕ್ಕೆ ಬಂದು ಇಲ್ಲಿ ಹಾಲಿ ಸರ್ಕಾರಿ ಬಸ್‌ ನಿಲ್ದಾಣ ಇರುವ ಸ್ಥಳದಲ್ಲಿ ನಾಗರಿಕರನ್ನುದ್ದೇಶಿಸಿ ಮಾತನಾಡಿದ್ದರು.

ರಾಮನಗರದಿಂದ ಅವರು ಚನ್ನಪಟ್ಟಣಕ್ಕೂ ಭೇಟಿ ಕೊಟ್ಟಿದ್ದರು ಎಂದು ಸ್ಮರಿಸಿದರು. ಮಾಗಡಿಯಿಂದ ರಾಮನಗರ ಬರುವ ಮಾರ್ಗ ಮಧ್ಯೆ ಲಕ್ಷ್ಮೀಪುರದಲ್ಲಿ ವಾಜಪೇಯಿ ಅವರ ಕಾರಿನ ಚಕ್ರ ರಸ್ತೆಯಲ್ಲಿ ಹೂತು ಹೋಗಿತ್ತು. ಆ ಭಾಗದ ಮುಖಂಡ ಆರಾಧ್ಯ ಎಂಬುವರು ಕಾರಿನ ಚಕ್ರವನ್ನು ಬಿಡಿಸಲು ಸಹಾಯ ಮಾಡಿದ್ದರು ಎಂಬುದನ್ನು ಸ್ಮರಿಸಿದ್ದಾರೆ.

Trending videos

Back to Top