CONNECT WITH US  

ಪರಿಸರ ಉಳಿಸಿ ಬೆಳೆಸಲು ಶ್ರಮಿಸಿ

ರಾಮನಗರ: ಹಸಿರು ಕರ್ನಾಟಕ ಯೋಜನೆಯಡಿ ಸರ್ಕಾರ ಉಚಿತವಾಗಿ ನೀಡುತ್ತಿರುವ ಸಸಿಗಳನ್ನು  ನೆಟ್ಟು, ಬೆಳೆಸಿ ಪರಿಸರದ ಉಳಿವಿಗೆ ಪ್ರತಿಯೊಬ್ಬ ನಾಗರಿಕರು ಕೊಡುಗೆ ನೀಡಬೇಕು ಎಂದು ತಾಲೂಕು ಪಂಚಾಯ್ತಿ ಸದಸ್ಯ ಲಕ್ಷ್ಮೀಕಾಂತ್‌ ಸಲಹೆ ನೀಡಿದರು.

ತಾಲೂಕಿನ ಕೈಲಾಂಚ ಹೋಬಳಿ ಹುಣಸನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ವಲಯ ಅರಣ್ಯ ವಿಭಾಗದಿಂದ ಹಸಿರು ಕರ್ನಾಟಕ ಯೋಜನೆಯಡಿ ಹಮ್ಮಿಕೊಂಡಿದ್ದ "ಕುಟುಂಬಕ್ಕೊಂದು ಸಸಿ' ಆಂದೋಲನದಲ್ಲಿ ಸಸಿ ವಿತರಿಸಿ ಅವರು ಮಾತನಾಡಿದರು. 

ಸಹಕರಿಸಿ: ಇತ್ತೀಚಿನ ದಿನಗಳಲ್ಲಿ ಪರಿಸರ ನಾಶವಾಗುತ್ತಿದೆ. ಸಸಿ ನೆಟ್ಟು ಪೋಷಿಸುವುದರ ಮೂಲಕ ಪರಿಸರ ಉಳಿವಿಗೆ ಪ್ರತಿಯೊಬ್ಬರು ಶ್ರಮಿಸಬೇಕೆಂದು ಹೇಳಿದರು. ಖಾಲಿ ಇರುವ ಸ್ಥಳ, ಸರ್ಕಾರಿ ಜಾಗವಾಗಿರಬಹುದು, ಗುಂಡು ತೋಪು, ಶಾಲಾ-ಕಾಲೇಜು ಆವರಣಗಳಲ್ಲಿ ಸಸಿ ನೆಟ್ಟು ಪೋಷಿಸಬೇಕು.

ಸರ್ಕಾರದ ಈ ಯೋಜನೆಗೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಹೇಳಿದರು. ಹುಣಸನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮರಿಲಿಂಗಯ್ಯ ಮಾತನಾಡಿ, ರೈತರು ತಮ್ಮ ಜಮೀನಿನ ಬದು, ಖಾಲಿ ಜಾಗಗಳಲ್ಲಿ ಸಸಿ ಬೆಳೆಸಿ ಎಂದು ಸಲಹೆ ನೀಡಿದರು. 

24 ಗ್ರಾಮ ಆಯ್ಕೆ: ವಲಯ ಅರಣ್ಯಾಧಿಕಾರಿ ಧಾಳೇಶ್‌ ಮಾತನಾಡಿ, ಮನೆಗೊಂದು ಮರ, ಊರಿಗೊಂದು ವನ, ತಾಲೂಕಿಗೊಂದು ಕಿರು ಅರಣ್ಯ, ಜಿಲ್ಲೆಗೊಂದು ಕಾಡು ಎಂಬ ಧ್ಯೇಯದಲ್ಲಿ ಸರ್ಕಾರ ಹಸಿರು ಕರ್ನಾಟಕ ಆಂದೋಲನ ಜಾರಿಗೆ ತಂದಿದೆ.

ಸರ್ಕಾರ ಸುಮಾರು 1000 ಗ್ರಾಮ ಆಯ್ಕೆ ಮಾಡಿದ್ದು, ಪ್ರತಿ ಕುಟುಂಬಕ್ಕೆ ಒಂದೊಂದು ಸಸಿ ಕೊಡುವ ಯೋಜನೆ ಜಾರಿಯಾಗಿದೆ. ಜಿಲ್ಲೆಯಲ್ಲಿ 24 ಗ್ರಾಮ ಆಯ್ಕೆ ಮಾಡಿಕೊಳ್ಳಲಾಗಿದೆ. ತಾಲೂಕಿನಲ್ಲಿ 5, ಕೈಲಾಂಚ ಹೋಬಳಿಯಲ್ಲಿ ಹುಣಸನಹಳ್ಳಿ ಮತ್ತು ಕೈಲಾಂಚ ಗ್ರಾಮ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಹಸಿರು ಸಿರಿ ಹೆಚ್ಚಲಿ: ಕ್ಷೇತ್ರ ಶಿಕ್ಷಣಾಧಿಕಾರಿ ಮರೀಗೌಡ ಮಾತನಾಡಿ, ರಾಜ್ಯದ ಒಟ್ಟು ಪ್ರದೇಶದಲ್ಲಿ ಶೇ.22 ಭಾಗ ಅರಣ್ಯ ಪ್ರದೇಶದಿಂದ ಕೂಡಿದೆ. ಆದರೆ, ಪ್ರಕೃತಿಯ ಸಮತೋಲನಕ್ಕೆ ಸಾಕಾಗುತ್ತಿಲ್ಲ. ಹೀಗಾಗಿ ಹಸಿರು ಸಿರಿ ಹೆಚ್ಚಬೇಕಾಗಿದೆ ಎಂದರು. 

ಗ್ರಾಪಂ ಉಪಾಧ್ಯಕ್ಷೆ ರೇಣುಕಮ್ಮ, ಸದಸ್ಯರಾದ ಶಿವರಾಜು, ದಾಸೇಗೌಡನದೊಡ್ಡಿ ಶಿವಣ್ಣ, ಪದ್ಮ ವೆಂಕಟೇಶ್‌, ಮುಖ್ಯಶಿಕ್ಷಕಿ ಇಂದುಮತಿ ಹೋಳ್ಕರ್‌, ಶಿಕ್ಷಕರಾದ ಶಿವಪ್ರಕಾಶ್‌, ಮಂಜುನಾಯಕ್‌, ಅನುಸೂಯ, ಉಪವಲಯ ಅರಣ್ಯಾಧಿಕಾರಿ ರಾಜು, ಅರಣ್ಯ ರಕ್ಷಕರಾದ ರವಿ, ಕಿರಣ್‌, ಮಂಜುನಾಥ್‌ ಗ್ರಾಮದ ಮುಖಂಡ ಮಹದೇವಯ್ಯ ಉಪಸ್ಥಿತರಿದ್ದರು.


Trending videos

Back to Top