CONNECT WITH US  

ಸಾವನದುರ್ಗ ಪ್ರವಾಸಿ ತಾಣವಾಗಿಸುವ ಗುರಿ

ಮಾಗಡಿ: ತಾಲೂಕಿನ ಸಾವನದುರ್ಗವನ್ನು ಪ್ರಸಿದ್ಧ ಪ್ರವಾಸಿ ತಾಣವನ್ನಾಗಿ ಮಾಡುವ ಗುರಿ ಹೊಂದಿರುವುದಾಗಿ ಶಾಸಕ ಎ.ಮಂಜು ತಿಳಿಸಿದರು.

ಸಾವನದುರ್ಗದಲ್ಲಿ  ಶನಿವಾರ ಕೋಟಿ ರೂ. ವೆಚ್ಚದ ಕಾಂಕ್ರಿಟ್‌ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಪುರಾತನವಾದ ಶ್ರೀ ವೀರಭದ್ರಸ್ವಾಮಿ ಹಾಗೂ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅದರೆ ಈ ರಸ್ತೆ ಹದಗೆಟ್ಟಿದ್ದು, ಭಕ್ತರು ಓಡಾಡಲು ಹಾಗೂ ಉತ್ಸವಾದಿಗಳನ್ನು ನಡೆಸಲು ತೊಂದರೆಯಾಗುತ್ತಿತ್ತು. 

ಪ್ರಾಂಗಣಕ್ಕೆ ನೀರು: ಮಳೆ ಬಂದರೆ ನೀರು ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಪ್ರಾಂಗಣಕ್ಕೆ ಹರಿದು ಬರುತ್ತಿದ್ದರಿಂದ, ಇದೀಗ 1 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರಿಟ್‌ ರಸ್ತೆ, ಚರಂಡಿ ನಿರ್ಮಿಸಿ ಭಕ್ತರಿಗೆ ಹಾಗೂ ದೇವರ ಉತ್ಸವ ನಡೆಸಲು ಅನುಕೂಲವಾಗಲೆಂದು ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಬಡವರಿಗೆ ಮನೆಗಳ ಕಾಯಂ: ಸಾವನದುರ್ಗದಲ್ಲಿ ಅನಾದಿ ಕಾಲದಿಂದಲೂ ಬಡವರು ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಆದರೆ ಅವರಿಗೆ ಇಲ್ಲಿಯವರೆಗೂ ಅರಣ್ಯ ಇಲಾಖೆಯಾಗಲಿ, ಸ್ಥಳೀಯ ಗ್ರಾಮ ಪಂಚಾಯ್ತಿಯಾಗಲಿ ಅವರ ವಾಸದ ಮನೆಗಳಿಗೆ ಖಾತೆ ವಗೈರೆಗಳನ್ನು ಇಲ್ಲಿಯವರೆಗೂ ಮಾಡಿ ಕೊಟ್ಟಿಲ್ಲ. ಈ ಸಂಬಂಧ ಸಚಿವರಲ್ಲಿ ಚರ್ಚಿಸುತ್ತೇನೆ ಎಂದು ಹೇಳಿದರು. ನಿವಾಸಿಗಳಿಗೆ ಮನೆಗಳ ಖಾಯಂ ಖಾತೆ ವೈಗೆರೆಗಳನ್ನು ಮಾಡಿಸಿಕೊಡಲು ಸಂಬಂಧಪಟ್ಟ ಪಂಚಾಯ್ತಿ ಪಿಡಿಒಗೆ ನಿವಾಸಿಗಳ ಪಟ್ಟಿ ಮಾಡುವಂತೆ ಸ್ಥಳದಲ್ಲಿಯೇ ಸೂಚನೆ ನೀಡಿದರು.

ಸಾವನದುರ್ಗಕ್ಕೆ ಪೊಲೀಸ್‌ ಚೌಕ: ಸಾವನದುರ್ಗಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಪರಿಸರ ಪ್ರೇುಗಳು, ಚಾರಣಿಗರು, ಭಕ್ತರು ಆಗಮಿಸುತ್ತಾರೆ. ಅವರಿಗೆ ಇಲ್ಲಿ ಸೂಕ್ತ ಭದ್ರತೆ ಇಲ್ಲದ ಕಾರಣ ಸಾವು, ನೋವು, ಕಳ್ಳತನ, ಸುಲಿಗೆ ಮುಂತಾದವು ನಡೆಯುತ್ತಿರುವುದು ಸಾಮಾನ್ಯವಾಗಿದೆ. ಅಪರಾಧ ಕೃತ್ಯಗಳನ್ನು ತಡೆಯುವ ಉದ್ದೇಶದಿಂದ ನಾಯಕನಪಾಳ್ಯ ಗೇಟ್‌ ಬಳಿ ಪೊಲೀಸ್‌ ಚೌಕಿ ತೆರೆದು ಸಾವನದುರ್ಗಕ್ಕೆ ತೆರಳುವವರ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಅವರಿಗೆ ರಕ್ಷಣೆ ಒದಗಿಸಲಾಗುವುದು ಎಂದು ತಿಳಿಸಿದರು.

ತಾಪಂ ಸದಸ್ಯ ಶಂಕರ್‌, ಗುಲ್ಜಾರ್‌, ಪುಟ್ಟಸ್ವಾಮಿ, ರಂಗಸ್ವಾಮಿ, ಲೋಕೇಶ್‌, ಪ್ರಕಾಶ್‌, ದೇವರಾಜ್‌ ಮೂರ್ತಿ, ಎನ್‌.ನಾಗರಾಜ್‌, ನರಸಿಂಹಮೂರ್ತಿ, ರೇವಣ್ಣ, ಶಿವಣ್ಣ, ಅನಿಲ್‌, ಸೋಮಶೇಖರ್‌, ಎಂ.ಆರ್‌.ಚಂದ್ರಶೇಖರ್‌,  ವೆಂಕಟೇಶ್‌, ಬಾಲಾಜಿ, ರಾಜಣ್ಣ  ಇದ್ದರು.

ಶೌಚಾಲಯ ಸಮಿತಿಯ ಸುಪರ್ದಿಗೆ: ಸಾವನದುರ್ಗದಲ್ಲಿ ಈಗಾಗಲೇ ಸಾರ್ವಜನಿಕರ ಶೌಚಾಲಯವಿದ್ದು, ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ಇಲ್ಲಿಗೆ ಬರುವವರಿಗೆ ತೊಂದರೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿರುವ ಶೌಚಾಲಯವನ್ನು ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ವಹಿಸಿ ಕೊಡಬೇಕೆಂದು ಸಮಿತಿಯವರು ಮನವಿ ಮಾಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Trending videos

Back to Top