CONNECT WITH US  

ಅಣಬೆ ಬೇಸಾಯ ಉತ್ತಮ ಕೃಷಿ ಉದ್ಯಮ 

ಕನಕಪುರ: ಅಣಬೆ ಬೇಸಾಯ ಉತ್ತಮ ಕೃಷಿ ಉದ್ಯಮವಾಗಿದ್ದು, ಹೆಚ್ಚಿನ ಆದಾಯ ಗಳಿಸುವಂತಹದ್ದಾಗಿದೆ. ಮೊದಲು ಗ್ರಾಮೀಣ ಪ್ರದೇಶದಲ್ಲಿ ಅಣಬೆ ಬೇಸಾಯದ ಬಗ್ಗೆ ಇರುವಂತಹ ಮೌಡ್ಯತೆಯನ್ನು ಹೋಗಲಾಡಿಸಬೇಕು ಎಂದು ಹುಳಿಮಾವು ಕೃಷಿ ಕೇಂದ್ರದ (ಬಯೋ ಸೆಂಟರ್‌) ಶಿವನಾಯಕ್‌ ಅಭಿಪ್ರಾಯಪಟ್ಟರು. 

ತಾಲೂಕಿನ ಹಾರೋಹಳ್ಳಿಯ ಕೆನರಾ ಬ್ಯಾಂಕ್‌ಗ್ರಾಮೀಣ ಮಹಿಳಾ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಅಣಬೆ ಬೇಸಾಯ ತರಬೇತಿ ಹಾಗೂ ಉದ್ಯಮಶೀಲತಾಭಿವೃದ್ಧಿ ತರಬೇತಿ ಶಿಬಿರದ ಶಿಬಿರಾರ್ಥಿಗಳಿಗೆ ನಡೆದ ಸಮಾರೋಪ ಸಮಾರಂಭ ಹಾಗೂ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. 

ಅಣಬೆ  ಸಸ್ಯಹಾರಿ ಆಹಾರವಾಗಿದ್ದು, ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತದೆ. ಅಣಬೆ ಉದ್ಯಮ ಮಾಡುವಂತಹವರು ಮೊದಲು ಅದರಿಂದಾಗುವಂತಹ ಉಪಯೋಗಗಳ ಬಗ್ಗೆ ಮಾಹಿತಿ ಪಡೆಯಬೇಕು. ಭೂಮಿಯ ಅವಶ್ಯಕತೆ  ಇಲ್ಲದೆ, ಕಡಿಮೆ ಬಂಡವಾಳದಲ್ಲಿ ಮನೆಯಲ್ಲಿಯೇ ಮಾಡಬಹುದಾಂತಹ ಉದ್ಯಮವಾಗಿದೆ ಎಂದರು. 

ಜಿಲ್ಲೆಯಲ್ಲಿ ಹೈನುಗಾರಿಕೆ, ರೇಷ್ಮೆ ಕೃಷಿ ಜತೆಗೆ ಅಣಬೆ ಬೇಸಾಯ  ಮಾಡಬಹುದಾಗಿದ್ದು, ಸಮಯ ನಿರ್ವಹಣೆಯು ಸುಲಭವಾಗುತ್ತದೆ. ಇರುವ ಸಮಯದಲ್ಲಿಯೇ ಹೆಚ್ಚಿನ ಆದಾಯ ಗಳಿಸಬಹುದು. ಅಣಬೆ ಬೆಳೆದ ನಂತರ  ಉತ್ತಮವಾಗಿ ಪ್ಯಾಕ್‌ ಮಾಡಿ ಅದರ ಬಳಕೆಯ ವಿಧಾನಗಳನ್ನು ತಿಳಿಸಬೇಕು. ಇದಕ್ಕಾಗಿಯೇ ಸರ್ಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕಿ ಸುಮ ಎನ್‌.ಗಾಂವಕರ್‌  ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕೃಷಿಯ ಜತೆಗೆ ಅಣಬೆ ಬೇಸಾಯ ಮಾಡುವುದರಿಂದ ಹೊಸದನ್ನು  ಪರಿಚಯಿಸಿದಂತಾಗುತ್ತದೆ. ಹಾಗೆಯೇ ನಿರುದ್ಯೋಗ ಸಮಸ್ಯೆ  ಹೋಗಲಾಡಿಸಬಹುದಾಗಿದೆ ಎಂದರು.  

ಸಮಾರಂಭದಲ್ಲಿ ಶಿಬಿರಾರ್ಥಿಗಳು ತರಬೇತಿ ಅವಧಿಯಲ್ಲಿನ ತಮ್ಮ ಅನುಭವಗಳನ್ನು ವ್ಯಕ್ತಪಡಿಸಿದರು. ಸಂಸ್ಥೆಯ ಉಪನ್ಯಾಸಕರಾದಂತಹ ದೇವೀಂದ್ರಪ್ಪ, ಗವಿರಾಜ್‌ ಹಾಗೂ ನೇತ್ರಾವತಿ ಇದ್ದರು. 

Trending videos

Back to Top