CONNECT WITH US  

ಶೋಷಿತರಿಗೆ ದನಿಯಾಗಿದ್ದ ಅರಸು 

ಮಾಗಡಿ: ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸು ಅವರು ದನಿ ಇಲ್ಲದವರಿಗೆ ಧ್ವನಿಯಾದವರು, ನಿರಂತರ ಚಿಂತನೆಯಿಂದ ಆಡಳಿತದಲ್ಲಿ ಸುಧಾರಣೆ ತರುವ ಮೂಲಕ ಕ್ರಾಂತಿಕಾರಿ ಬದಲಾವಣೆ ತಂದಿದ್ದ ಧೀಮಂತ ನಾಯಕ ಎಂದು ಶಾಸಕ ಎ.ಮಂಜುನಾಥ್‌ ಹೇಳಿದರು. 

ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ತಾಲೂಕು ಆಡಳಿತ ಏರ್ಪಡಿಸಿದ್ದ 103ನೇ ಡಿ.ದೇವರಾಜು ಅರಸು ಜನ್ಮ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದು ಅವರು, ಮೇಲ್ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶೋಷಿತ ವರ್ಗಗಳಿಗೆ ಆತ್ಮಸ್ತೆçರ್ಯ ತುಂಬುವ ಮೂಲಕ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಅರಸು ಯಶಸ್ವಿಯಾದವರು. 

ಉಳುವವನೇ ಭೂ ಒಡೆಯ, ಮಕ್ಕಳಿಗೆ ಶಿಕ್ಷಣ ಸೇರಿದಂತೆ 20 ಅಂಶ ಕಾರ್ಯಕ್ರಮಗಳನ್ನು ನೀಡುವ ಮೂಲಕ ಕರ್ನಾಟಕದ ಪ್ರಗತಿಗೆ ಮುನ್ನುಡಿ ಬರೆದವರು ಎಂದು ಹೇಳಿದರು.  

ಅರಸು ಭವನ: ಮಾಗಡಿ ಪಟ್ಟಣದಲ್ಲಿ  ಡಿ.ದೇವರಾಜ ಅರಸು ಭವನ ನಿರ್ಮಾಣಕ್ಕಾಗಿ ಸರ್ಕಾರ 1.50 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಸೂಕ್ತ ಸ್ಥಳ ಗುರುತಿಸದೆ ಇರುವುದರಿಂದ ಭವನ ನಿರ್ಮಾಣವಾಗಿಲ್ಲ. ಈಗಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಭವನ ಸಹ ಶಿಥಿಲಗೊಂಡಿದ್ದು, ಭವನ ದುರಸ್ತಿಗೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಶಾಸಕರು ತಿಳಿಸಿದರು. 

ನಿರ್ಲಕ್ಷ್ಯ ಸಲ್ಲದು: ನೋಂದಣಿಯಾಗಿರುವ ಡಿ.ದೇವರಾಜ ಅರಸು ಸಾಂಸ್ಕೃತಿಕ ವಿಚಾರ ವೇದಿಕೆ ಪದಾಧಿಕಾರಿಗಳನ್ನು ತಾಲೂಕು ಆಡಳಿತ ಒಗ್ಗೂಡಿಸಿಕೊಂಡು ಕಾರ್ಯಕ್ರಮ ಅದ್ದೂರಿಯಾಗಿ ರೂಪಿಸಬೇಕಿತ್ತು. ಅಧಿಕಾರಿಗಳು ಕಾಟಚಾರಕ್ಕೆ ಕಾರ್ಯಕ್ರಮ ಆಯೋಜಿಸಬಾರದು. ತಾಲೂಕು ಆಡಳಿತ ವೇದಿಕೆಯನ್ನು ನಿರ್ಲಕ್ಷಿಸಿದ್ದರಿಂದ ಪದಾಧಿಕಾರಿಗಳಿಲ್ಲಿ ಕ್ಷಮೆಯಾಚಿಸುತ್ತೇನೆ ಎಂದರು.

ಅರ್ಹರಿಗೆ ಸಾಗುವಳಿ ಚೀಟಿ: ಎಚ್‌.ಎಂ.ರೇವಣ್ಣ ಸಚಿವರಾಗಿದ್ದಾಗ ತಾಲೂಕಿನಲ್ಲಿ ಅರ್ಹರಿಗೆ ಬಗರ್‌ಹುಕುಂ ಸಾಗುವಳಿ ಚೀಟಿ ನೀಡಿದ್ದು ಬಿಟ್ಟರೆ ಇಲ್ಲಿಯವರೆಗೂ ರೈತರಿಗೆ ಒಂದಡಿ ಭೂಮಿಯ ಹಕ್ಕುಪತ್ರ ವಿತರಿಸಿಲ್ಲ. 13 ವರ್ಷಗಳ ನಂತರ ಕೆಲವು ನಿಬಂಧಗಳೊಂದಿಗೆ ಹಿಂದಿನ ಸರ್ಕಾರದ ಸಚಿವ ಸಂಪುಟ ಬಗರ್‌ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ತೀರ್ಮಾನ ಕೈಗೊಂಡಿದೆ. ಶೀಘ್ರವೇ ಕಮಿಟಿ ರಚಿಸಿ ಅರ್ಹ ಸಾಗುವಳಿದಾರರಿಗೆ ಭೂ ಸಾಗುವಳಿ ಹಕ್ಕು ಪತ್ರ ನೀಡಲು ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು.

ತಹಶೀಲ್ದಾರ್‌ ಎನ್‌.ಶಿವಕುಮಾರ್‌ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಸಿ.ಲಿಂ.ನಾಗರಾಜು, ಪುರಸಭಾ ಸದಸ್ಯ ಎಂ.ಎನ್‌.ಮಂಜುನಾಥ್‌, ತಾಪಂ ಮಾಜಿ ಸದಸ್ಯ ಸಿ.ಜಯರಾಂ, ಕಲ್ಕರೆ ಶಿವಣ್ಣ ಅರಸು ವಿಚಾರಧಾರೆ ಕುರಿತು ಮಾತನಾಡಿದರು.

ಪುರಸಭಾ ಸದಸ್ಯ ಕೆ.ವಿ.ಬಾಲು, ಜೆಡಿಎಸ್‌ ಅಧ್ಯಕ್ಷ ಪೊಲೀಸ್‌ ರಾಮಣ್ಣ, ಬಿ.ಆರ್‌.ಗುಡ್ಡೇಗೌಡ, ವಾಟರ್‌ ಬೋರ್ಡ್‌ ರಾಮಣ್ಣ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಸಿದ್ದೇಗೌಡ, ಗ್ರಾಪಂ ಸದಸ್ಯ ಅಶೋಕ್‌, ವೆಂಕಟೇಶ್‌, ಮೂರ್ತಿ, ಗುಡೇಮಾರನಹಳ್ಳಿ ನಾಗರಾಜು, ಬೋರ್‌ವೆಲ್‌ ನರಸಿಂಹಯ್ಯ, ತಾಪಂ ಇಒ ಚಂದ್ರು, ಬಿಇಒ ಎಸ್‌.ಸಿದ್ದೇಶ್ವರ್‌, ಪುರಸಭಾ ಮುಖ್ಯಾಧಿಕಾರಿ ಮುತ್ತಪ್ಪ, ಬಿಸಿಎಂ ಅಧಿಕಾರಿ ಜಿ.ವಿ.ನಾಗರಾಜು ಇದ್ದರು. 

Trending videos

Back to Top