CONNECT WITH US  

ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಕನ್ನಡಿಗರ ನಿರಾಸಕ್ತಿ

ರಾಮನಗರ: ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಉದ್ಯೋಗಕ್ಕಾಗಿ ಕನ್ನಡಿಗರು ಆಸಕ್ತಿ ತೋರಿಸುತ್ತಿಲ್ಲ ಎಂದು ಬ್ಯಾಂಕಿಂಗ್‌ ಪರೀಕ್ಷೆಗಳ ತರಬೇತುದಾರ ಆರ್‌.ಕೆ.ಬಾಲಚಂದ್ರ ವಿಷಾದಿಸಿದರು.

ಸದ್ಯದಲ್ಲೇ ನಡೆಯುವ ಐಬಿಪಿಎಸ್‌ ಬ್ಯಾಂಕ್‌ ಪರೀಕ್ಷೆ  ಹಿನ್ನೆಲೆಯಲ್ಲಿ  ನಿರುದ್ಯೋಗಿ ಪದವೀಧರರಿಗಾಗಿ ನಗರದ ಕನ್ನಿಕಾಮಹಲ್‌ನಲ್ಲಿ ರಾಮನಗರ ರೋಟರಿ ಸಿಲ್ಕ್ಸಿಟಿ, ಬೆಂಗಳೂರು ರಾಜರಾಜೇಶ್ವರಿ ಸೆಂಟಿನಲ್‌ ಕ್ಲಬ್‌ ಮತ್ತು ಶ್ರೀವಾಸವಿ ವಿದ್ಯಾನಿಕೇತನ ಟ್ರಸ್ಟ್‌ ಹಮ್ಮಿಕೊಂಡಿದ್ದ ಪರೀಕ್ಷಾ ಪೂರ್ವ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ತಮಿಳುನಾಡು, ಕೇರಳ, ಉತ್ತರ ಭಾಗದ ರಾಜ್ಯಗಳ ಅಭ್ಯರ್ಥಿಗಳು ಮುಗಿಬಿದ್ದು ಬ್ಯಾಂಕಿಂಗ್‌ ಕ್ಷೇತ್ರ ಪ್ರವೇಶಿಸುತ್ತಿದ್ದಾರೆ. ಆದರೆ, ಕನ್ನಡಿಗರಲ್ಲಿ ಈ ಆಸಕ್ತಿ ಇಲ್ಲ ಎಂದ ಅವರು, ಬದುಕುವ ಹಸಿವು ಕನ್ನಡಿಗರಿಗಿಲ್ಲವೇ ಎಂದರು ಪ್ರಶ್ನಿಸಿದರು. ತಾವು ಕಳೆದ  ಎರಡು ದಶಕಗಳಿಂದ ಬ್ಯಾಂಕಿಂಗ್‌ ಪರೀಕ್ಷೆಗಳ ತರಬೇತಿ ನೀಡುತ್ತಿದ್ದು, ಕನ್ನಡಿಗ ಯುವ ಸಮುದಾಯವನ್ನು ಪ್ರೋತ್ಸಾಹಿಸುತ್ತಿರುವುದಾಗಿ ತಿಳಿಸಿದರು. 

ಸಮಯ ಅರ್ಥಮಾಡಿಕೊಳ್ಳಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಹೇಗೆ ನಡೆಸಬೇಕು ಎಂಬ ವಿಚಾರದಲ್ಲಿ ಮಾತನಾಡಿದ ಅವರು ಸಮಯದ ಪಾತ್ರ ಅಭ್ಯರ್ಥಿಗಳಿಗೆ ಅರ್ಥವಾಗದಿದ್ದರೆ ಜೀವನದಲ್ಲಿ ಸಾಧನೆ ಸಾಧ್ಯವಿಲ್ಲ. ಬದುಕಿನ ಗುರಿ ಏನು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವಂತೆ ಸಲಹೆ ನೀಡಿದರು. 

ಹುಡುಕಾಟ ಇರಲಿ ಹುಡುಗಾಟ ಬೇಡ: ಬದುಕಿನ ಹುಡುಕಾಟ ಇರಲಿ ಹುಡುಗಾಟ ಬೇಡ ಎಂದು ಎಚ್ಚರಿಸಿದ ಅವರು, ಗೆದ್ದಾಗ ಎಲ್ಲರೂ, ಎಲ್ಲವೂ ನಿಮ್ಮ ಬೆನ್ನಿಗಿರುತ್ತದೆ, ಸೋಲಿನ ವೇಳೆ ನಿಲ್ಲುವುದು ತಂದೆ-ತಾಯಂದಿರು ಮಾತ್ರ, ಹೀಗಾಗಿ ತಂದೆ-ತಾಯಿಯರ ಬಗ್ಗೆ ಗೌರವ ಇರಲಿ ಎಂದರು. 

ಯಶಸ್ಸಿನ ಭ್ರಮೆ ಬೇಡ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮೊದಲ ಪ್ರಯತ್ನದಲ್ಲೇ ಯಶಸ್ಸು ಕಾಣುವ ಭ್ರಮೆ ಬೇಡ, ಯಶಸ್ಸಿಗೆ ಶಾರ್ಟ್‌ ಇಲ್ಲ, ಏನಿದ್ದರು ಸ್ಮಾರ್ಟ್‌ ವರ್ಕ್‌  ಮಾತ್ರ ಬೇಕು,  ನಿರಂತರ ಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ ಎಂದು ನೆರೆದಿದ್ದ ಅಭ್ಯರ್ಥಿಗಳನ್ನು ಬೇಸರ ವ್ಯಕ್ತಪಡಿಸಿದರು. ಪದೇಪದೇ ಪ್ರಯತ್ನದ ಬಗ್ಗೆ ಅವರು ಜೇಡ ತನ್ನ ಬಲೆಯನ್ನು ಹೆಣೆಯುವ ವಿಚಾರದಲ್ಲಿ ಸಾವಿನ ಬಾರಿ ಸೋತರು ಬೇಸರ ಪಟ್ಟುಕೊಳ್ಳದೆ ತನ್ನ ಪ್ರಯತ್ನ ಸಾಗಿಸುತ್ತದೆ ಎಂದು ಉದಾಹರಣೆ ನೀಡಿದರು.

ನೋವಿನ ನಡುವೆ ಬದುಕುವ ಕಲೆಯನ್ನು ರೂಢಿಸಿಕೊಳ್ಳಿ ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ರೋಟರಿ ಸಿಲ್ಕ್ಸಿಟಿ  ಕಾರ್ಯದರ್ಶಿ ಅನುರಾಧ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ಎಂದರೆ ಕೇವಲ ಐಎಎಸ್‌, ಐಪಿಎಸ್‌ ಮಾತ್ರವಲ್ಲ ಬ್ಯಾಂಕಿಂಗ್‌, ರೈಲ್ವೆ ಪರೀಕ್ಷೆಗಳು ಇವೆ. ರಾಮನಗರ ಜಿಲ್ಲೆಯ ನಿರುದ್ಯೋಗಿ ಪದವೀಧರರಿಗೆ ರೋಟರಿ ಭರವಸೆಯ ಬೆಳಕಾಗಲು ಇಚ್ಛಿಸಿದ್ದರಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು. ಬ್ಯಾಂಕಿಂಗ್‌ ಬದುಕಿನ ಭಾಗವಾಗಿದ್ದು, ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಬೇಡಿಕೆ ಇದೆ ಎಂದರು.

ಕಾರ್ಯಕ್ರಮವನ್ನು ಶ್ರೀವಾಸವಿ ವಿದ್ಯಾನಿಕೇತನ ಟ್ರಸ್ಟ್‌ ಅಧ್ಯಕ್ಷ ಕೆ.ಎನ್‌.ಸುರೇಂದ್ರನಾಥ ಗುಪ್ತ ಉದ್ಘಾಟಿಸಿದರು. ರಾಜರಾಜೇಶ್ವರಿ ಸೆಂಟಿನಲ್‌ ಅಧ್ಯಕ್ಷ ಶ್ಯಾಂಪ್ರಸಾದ್‌, ಕಾರ್ಯದರ್ಶಿ ಜಯಶ್ರಿ, ಸಿಲ್ಕ್ಸಿಟಿ ನಿರ್ದೇಶಕ ಕುಮಾರ್‌, ಸೆಂಟಿನಲ್‌ ಕ್ಲಬ್‌ನ ಆಶಿತಾ, ಅರುಣ್‌ ಉಪಸ್ಥಿತರಿದ್ದರು. 
ಸೀಡ್‌ಬಾಲ್‌ಗ‌ಳನ್ನು ನೀಡುವುದರ ಮೂಲಕ ಗಣ್ಯರನ್ನು ಸ್ವಾಗತ ಕೋರಿದ್ದು ವಿಶೇಷವಾಗಿತ್ತು. 

Trending videos

Back to Top