CONNECT WITH US  

ಹೆಲ್ತ್‌ ಕಾರ್ಡ್‌ ವಿತರಣೆ ಸಿದ್ಧತೆ

ರಾಮನಗರ: ರಾಜ್ಯ ಸರ್ಕಾರ ನೂತನವಾಗಿ ಜಾರಿಗೊಳಿಸಿರುವ ಆರೋಗ್ಯ ಕರ್ನಾಟಕ ಯೋಜನೆಯ ಯೂನಿವರ್ಸಲ್‌ ಹೆಲ್ತ್‌ ಕಾರ್ಡ್‌ ವಿತರಣೆಗೆ ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. 

ಹಾಲಿ ಇರುವ ವಾಜಪೇಯಿ, ರಾಜೀವ್‌ ಆರೋಗ್ಯ ಭಾಗ್ಯ, ಯಶಸ್ವಿನಿ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ, ರಾಷ್ಟ್ರೀಯ ಬಾಲ ಸ್ವಾಸ್ಥ, ಮುಖ್ಯಮಂತ್ರಿ ಸಾಂತ್ವನ ಹರೀಶ್‌ ಯೋಜನೆ, ಇಂದಿರಾ ಸುರಕ್ಷಾ ಯೋಜನೆಗಳನ್ನು ವಿಲೀನಗೊಳಿಸಲಾಗಿದ್ದು, ಬಿಪಿಎಲ್‌ ಸೇರಿ ಎಪಿಎಲ್‌ ಪಡಿತರ ಚೀಟಿದಾರರಿಗೂ ನೂತನ ಕಾರ್ಡು ವಿತರಣೆಯಾಗಲಿದೆ. 

ಜಿಲ್ಲಾಸ್ಪತ್ರೆಯಲ್ಲಿ ನೂತನ ಕಾರ್ಡು ವಿತರಣಗೆ ಕೌಂಟರ್‌ಗಳನ್ನು ಸ್ಥಾಪಿಸಲಾಗುತ್ತಿದ್ದು, ಕನಿಷ್ಠ 6 ಗಣಕಯಂತ್ರಗಳನ್ನು ಕೌಂಟರ್‌ಗಳಲ್ಲಿ ಸ್ಥಾಪಿಸಲಾಗುತ್ತಿದೆ. ದಿನವೊಂದಕ್ಕೆ ಸುಮಾರು 200 ರಿಂದ 250 ಕಾರ್ಡುಗಳನ್ನು ವಿತರಿಸುವ ಗುರಿಯನ್ನು ಜಿಲ್ಲಾಸ್ಪತ್ರೆಯ ಸಿಬ್ಬಂದಿ ಇರಿಸಿಕೊಂಡಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಜಾರಿ ಮಾಡಲಿರುವ ಈ ಯೋಜನೆಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಬಿಬಿಎಂಪಿ ಈ ಯೋಜನೆಯ ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸಲಿವೆ. 

ನೂತನ ಕಾರ್ಡಿನ ಉಪಯೋಗವೇನು?: ಆರೋಗ್ಯ ಕರ್ನಾಟಕ ಯೋಜನೆಯಡಿ ವಿತರಿಸಲಾಗುವ ಈ ಕಾರ್ಡು ಸಮಾಜದ ಎಲ್ಲಾ ವರ್ಗಗಳ ಕುಟುಂಬಗಳಿಗೆ ವಿತರಣೆಯಾಗುತ್ತದೆ. ಆದಾಯ ಕೂಡ ಪರಿಗಣಿಸುವುದಿಲ್ಲ. ಯಶಸ್ವಿನಿ ಮುಂತಾಗಿ ಮೊದಲು ನೀಡಿದ್ದ ಕಾರ್ಡುಗಳ ಬದಲಿಗೆ ಇದೊಂದೆ ಕಾರ್ಡು ಇನ್ನು ಮೇಲೆ ಮಾನ್ಯವಾಗಲಿದೆ.

ಬಿಪಿಎಲ್‌ ಕುಟುಂಬಗಳಿಗೆ ವಾರ್ಷಿಕ 1.5 ಲಕ್ಷ ರೂ.ವರೆಗೂ ಆರೋಗ್ಯ ಸೇವೆಗಳು ಲಭ್ಯವಾಗಲಿದೆ. ಎಪಿಎಲ್‌ ಕುಟುಂಬಗಳಿಗೆ ಬಿಲ್‌ನ ಒಟ್ಟು ಮೊತ್ತಕ್ಕೆ ಶೇ.30ರಿಯಾಯಿತಿ ದೊರೆಯಲಿದೆ. ಸರ್ಕಾರದ ಯಾವುದೇ ಆಸ್ಪತ್ರೆಗಳಲ್ಲಿ ಬಿಪಿಎಲ್‌ ಕಾರ್ಡುದಾರರು ನಗದು ರಹಿತ ಆರೋಗ್ಯ ಸೇವೆ ಪಡೆಯಬಹುದು. 

ಕಾರ್ಡ್‌ ಪಡೆಯೋದು ಹೇಗೆ?: ಆರೋಗ್ಯ ಕರ್ನಾಟಕ ಯೋಜನೆಯಡಿ ವಿತರಣೆಯಾಗುವ ಯೂನಿವರ್ಸಲ್‌ ಹೆಲ್ತ್‌ ಕಾರ್ಡು ಬಿಪಿಎಲ್‌ ಮತ್ತು ಎಪಿಎಲ್‌  ಕುಟುಂಬಗಳಿಗೆ ಪ್ರತ್ಯೇಕವಾಗಿ ಸಿಗಲಿದೆ. ಕಾರ್ಡು ಪಡೆಯಲು ಪಡಿತರ ಚೀಟಿ ಮತ್ತು ಆಧಾರ್‌ ಕಾರ್ಡು ಕಡ್ಡಾಯ. ಕುಟುಂಬದ ಎಲ್ಲಾ ಸದಸ್ಯರು ತಮ್ಮ ಬೆರಳಚ್ಚು ನೀಡಿ ನೋಂದಾಯಿಸಿಕೊಳ್ಳಬೇಕು. ನೋಂದಣಿಗೆ 10 ರೂ. ಪಾವತಿಸಬೇಕು. 

ನೇರವಾಗಿ ಖಾಸಗಿ ಆಸ್ಪತ್ರೆ ಹೋಗುವಂತಿಲ್ಲ!: ನೂತನ ಕಾರ್ಡು ಪಡೆದ ಕುಟುಂಬಗಳು ಗಂಭೀರ ಕಾಯಿಲೆಗಳಿದ್ದರೂ, ಸಾಮಾನ್ಯ ಕಾಯಿಲೆ ಇದ್ದರೂ ನೇರವಾಗಿ ಖಾಸಗಿ ಆಸ್ಪತ್ರೆಗೆ ಹೋಗುವಂತಿಲ್ಲ. ಮೊದಲು ಅವರು ಸರ್ಕಾರಿ ಆಸ್ಪತ್ರೆಗೆ ಹೋಗಬೇಕು. ಅಲ್ಲಿ ಚಿಕಿತ್ಸೆ ಲಭ್ಯವಾಗದಿದ್ದರೆ, ತಜ್ಞರ ಕೊರತೆ ಇದ್ದರೆ, ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಇಲ್ಲದಿದ್ದರೆ, ವೈದ್ಯರ ಶಿಫಾರಸ್ಸಿನ ಮೇರೆಗೆ ಯೋಜನೆಯಡಿ ನೋಂದಾಯಿಸಿ ಕೊಂಡಿರುವ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಗುತ್ತದೆ.

ಖಾಸಗಿ ಆಸ್ಪತ್ರೆಯಲ್ಲಿ ಸಿಗುವ ಚಿಕಿತ್ಸೆಗೆ ಸರ್ಕಾರ ಸ್ಥಾಪಿಸಿರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಮೂಲಕ ಹಣ ತಲುಪುತ್ತದೆ. ರಾಜ್ಯದಲ್ಲಿ ಯೋಜನೆ ಅನುಷ್ಠಾನವಾಗಿದ್ದು, ಗಂಭೀರ ಕಾಯಿಲೆ ಇರುವವರು ಕಾರ್ಡು ಸಿಗುವವರೆಗೂ ಕಾಯದೇ ಆಧಾರ್‌ ಕಾರ್ಡು ಮೂಲಕ ಚಿಕಿತ್ಸೆ ಪಡೆಯಲು ಅವಕಾಶವಿದೆ. 


Trending videos

Back to Top