CONNECT WITH US  

ಜಿಪಂ ಸಿಇಒ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ರಾಮನಗರ: ಅಂಚೆ ಪೇಮೆಂಟ್‌ ಬ್ಯಾಂಕ್‌ ಉದ್ಘಾಟನೆ ದಿನ ಪ್ರಧಾನ ಮಂತ್ರಿಗಳ ಭಾಷಣವನ್ನುಧಿಕ್ಕರಿಸಿ ಹೊರ ನಡೆದ ಜಿಪಂ ಸಿಇಒ ಅವರನ್ನು ಪ್ರಶ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಜೈಲಿಗೆ ಕಳುಹಿಸುವೆ ಎಂದು ಬೆದರಿಸಿದ್ದಾರೆ ಎಂದು ಆರೋಪಿಸಿ ಸಿಇಒ ಧೋರಣೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ಜಿಲ್ಲಾ ಪಂಚಾಯ್ತಿ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು.

ಸೆ.1ರಂದು ಜಿಪಂ ಭವನದಲ್ಲಿ ನಡೆದ ಪೋಸ್ಟಲ್‌ ಪೇಮಂಟ್ಸ್‌ ಬ್ಯಾಂಕ್‌ನ ರಾಮನಗರ ಶಾಖೆಯನ್ನು ಉದ್ಘಾಟಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್‌ ಮುಖಾಂತರ ದೇಶವನ್ನು ಉದ್ದೇಶಿಸಿ ಮಾತನಾಡುವ ಸಮಯಕ್ಕೆ ಸರಿಯಾಗಿ ಸಿಇಒ ಮತ್ತು ಎಸ್ಪಿ ಸಭೆಯಿಂದ ಹೊರನಡೆದರು. ಉದ್ಘಾಟನೆಗೆ ಸಂಸದ ಡಿ.ಕೆ.ಸುರೇಶ್‌ ಮತ್ತು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ಗೈರಾಗಿದ್ದರು. 

ಇಡೀ ಕಾರ್ಯಕ್ರಮ ಕಾಟಾಚಾರಕ್ಕೆ ಮಾಡಿದಂತಿತ್ತು. ಹೀಗಾಗಿ ಸಭೆಯಲ್ಲಿ ಹಾಜರಿದ್ದ ಬಿಜಪಿ ಕಾರ್ಯಕರ್ತರು ಬೇಸರದಿಂದ ಧಿಕ್ಕಾರ ಕೂಗಿದ್ದರು. ಇದನ್ನು ಸಹಿಸದ ಸಿಇಒ ಮುಲ್ಲೆ ಮುಹಿಲನ್‌ ಮತ್ತೆ ಸಭೆಗೆ ಆಗಮಿಸಿ ಬಿಜೆಪಿ ಕಾರ್ಯಕರ್ತರನ್ನು ಜೈಲಿಗೆ ಕಳುಹಿಸುವ ಬೆದರಿಕೆ ಒಡ್ಡಿದ್ದರು ಎಂದು ಪ್ರತಿಭಟನಾಕಾರರು ಹರಿ ಹಾಯ್ದರು.

 ನರೇಗಾ ಹಗರಣ ತಡೆಯದ ಸಿಇಒ: ಈ ವೇಳೆ ಮಾತನಾಡಿದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರುಳಿ, ಜಿಲ್ಲೆಯಲ್ಲಿ ನರೇಗಾ ಕಾಮಗಾರಿಗಳಲ್ಲಿ ಆಗುತ್ತಿರುವ ಭ್ರಷ್ಟಾಚಾರ ತಡೆಗೆ ಸಿಇಒ ಏನೊಂದು ಕ್ರಮ ಕೈಗೊಂಡಿಲ್ಲ. ಆದರೆ ಬಿಜೆಪಿ ಕಾರ್ಯಕರ್ತರ ಮೇಲೆ ಕೂಗಾಡುವುದು, ಜೈಲಿಗೆ ಕಳುಹಿಸುವ ಬೆದರಿಕೆ ಒಡ್ಡುವುದಾಗಿ ಹೇಳಿದ್ದಾರೆ.
ಇಂತಹ ಅಧಿಕಾರಿಯಿಂದ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುವುದು ಅನುಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ಸಮ್ಮಿಶ್ರ ಸರ್ಕಾರದ ಕೈಗೊಂಬೆಗಳಾಗಿದ್ದಾರೆ. ಈ ಅಧಿಕಾರಿಯ ವಿರುದ್ಧ ರಾಜ್ಯ ಪಾಲರಿಗೆ ಮನವಿ ಸಲ್ಲಿಸುವುದಾಗಿ, ಪೇಮೆಂಟ್ಸ್‌ ಬ್ಯಾಂಕ್‌ನ ಉದ್ಘಾಟನೆ ವೇಳೆ ನಡೆದ ಪ್ರಕರಣದ ನಿರ್ಲಕ್ಷ್ಯ ಖಂಡಿಸಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಮಾಡುವುದಾಗಿ ತಿಳಿಸಿದರು. 

 ಕೇಂದ್ರದ ಯೋಜನೆಗಳು ಜಾರಿ ಆಗ್ತಿಲ್ಲ: ಬಿಜೆಪಿ ಮುಖಂಡ ಜಿ.ವಿ.ಪದ್ಮನಾಭ ಮಾತನಾಡಿ, ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗುತ್ತಿಲ್ಲ ಎಂದು ದೂರಿದರು. ಜಿಲ್ಲಾಡಳಿತ ಮತ್ತು ಜಿಪಂ ಅಧಿಕಾರಿಗಳು ಈ ಬಗ್ಗೆ ಕಾಳಜಿವಹಿಸುತ್ತಿಲ್ಲ ಎಂದು ಆರೋಪಿಸಿದರು.

ಹಿರಿಯ ಬಿಜೆಪಿ ಮುಖಂಡ ಎಸ್‌.ನಾಗರಾಜು ಅಧಿಕಾರಿಗಳ ಧೋರಣೆಯನ್ನು ಖಂಡಿಸಿದರು. ಮುಖಂಡರಾದ ಪ್ರವೀಣ್‌ ಗೌಡ, ಮಂಜು, ಚಂದ್ರಶೇಖರ ರೆಡ್ಡಿ, ಚನ್ನಪ್ಪ, ವಿ.ರಾಜು, ಸಾವಿತ್ರಮ್ಮ, ಚಂದ್ರಪ್ರಭಾ, ಹೇಮಾವತಿ, ಕಾಳಯ್ಯ, ಚಂದ್ರಕಲಾ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನಾಕಾರರು ರಾಜ್ಯಪಾಲರಿಗೆ ಮಾಡಿ ಕೊಂಡ ಮನವಿಯನ್ನು ಅಪರ ಜಿಲ್ಲಾಧಿಕಾರಿ ಡಾ.ಪ್ರಶಾಂತ್‌ ಸ್ವೀಕರಿಸಿದರು. 


Trending videos

Back to Top