CONNECT WITH US  

ಉತ್ತಮ ಜೀವನ ಶೈಲಿ ರೂಪಿಸಿಕೊಳ್ಳಿ 

ಕನಕಪುರ: ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಉತ್ತಮ ಜೀವನ ಶೈಲಿಯನ್ನು ರೂಪಿಸಿಕೊಳ್ಳಬೇಕು ಎಂದು 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ  ಶಂಕರಪ್ಪ ನಿಂಬಣ್ಣಕಲ್ಕಣೆ ಸಲಹೆ ನೀಡಿದರು. 

ನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಶಿಶು ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಪೌಷ್ಟಿಕ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಮಹಿಳೆಯರು ಮತ್ತು ಮಕ್ಕಳು ಆರೋಗ್ಯವಾಗಿದ್ದರೆ ಸಮಾಜ ಆರೋಗ್ಯವಾಗಿರುತ್ತದೆ. ಆದರೆ ನಾಗರಿಕತೆ ಬೆಳೆದಂತೆ ಇಂದು ಎಲ್ಲರಲ್ಲೂ ಒತ್ತಡದಿಂದ ಮಾನಸಿಕ ಖನ್ನತೆಗೆ ಒಳಗಾಗುತ್ತಿದ್ದಾರೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಾಧೆಗೆ ಒಳಗಾಗುತ್ತಿದ್ದಾರೆ. 

ಜನಸಾಮಾನ್ಯರ ಆರೋಗ್ಯ ರಕ್ಷಣೆಗೆ ಸರಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಯಾವೊಂದು ಸರಿಯಾಗಿ ಅನುಷ್ಠಾನಕ್ಕೆ ಬರುತ್ತಿಲ್ಲ. ಗರ್ಭಿಣಿಯರು ಮತ್ತು ಬಾಣಂತಿಯರು ಆರೋಗ್ಯವಂತರಾಗಿದ್ದರೆ ಜನಿಸುವ ಮಕ್ಕಳು ಆರೋಗ್ಯಯುತವಾಗಿರುತ್ತವೆ ಎಂದರು. 

ವಕೀಲರ ಸಂಘದ ಅಧ್ಯಕ್ಷ ಗಿರಿಧರ್‌, ಹಿರಿಯ ವಕೀಲ ಪುಟ್ಟಮಾದಯ್ಯ, ತಾಲೂಕು ಆರೋಗ್ಯಾಧಿಕಾರಿ ಎಂ.ಟಿ.ಕುಮಾರ್‌ ಪೌಷ್ಟಿಕ ಆರೋಗ್ಯದ ಬಗ್ಗೆ ಮಾತನಾಡಿದರು. ಹಿರಿಯ ಸಿವಿಲ್‌ ನ್ಯಾ.  ಡಿ.ವೇಣುಗೋಪಾಲ, ಪ್ರಧಾನ ಸಿವಿಲ್‌ ನ್ಯಾ.ಜಿ.ಹೆಚ್‌. ಹನುಮಂತ, ವಕೀಲರ ಸಂಘದ ಕಾರ್ಯದರ್ಶಿ ಇ.ಸ್ವಾಮಿಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಲಕ್ಷೀಪತಿ, ಜಿಲ್ಲಾ ಆರೋಗ್ಯ ಪರಿವೀಕ್ಷಣೆ ಅಧಿಕಾರಿ ಬಿ.ಎಸ್‌.ಗಂಗಾಧರ್‌, ಎನ್‌.ಸಿ.ರಾಜು, ಸರಕಾರಿ ಅಭಿಯೋಜಕ ನಾರಾಯಣಸ್ವಾಮಿ, ಹಿರಿಯ ವಕೀಲ ರಾಮಚಂದ್ರು ಇದ್ದರು. 


Trending videos

Back to Top