CONNECT WITH US  

ಮದ್ಯ ನಿಷೇಧದ ರಾಜಕಾರಣ

ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ 2005ರಿಂದ ಭಾರತದಲ್ಲಿ ಮದ್ಯದ ಮಾರಾಟ ಮತ್ತು ಸೇವನೆಯ ಪ್ರಮಾಣ ಹೆಚ್ಚಾಗುತ್ತಲೇ ಇದೆ. ವಿಶ್ವದ ಯಾವ ರಾಷ್ಟ್ರದಲ್ಲಿಯೂ ನಮ್ಮಲ್ಲಿಯಷ್ಟು ದುಬಾರಿ ಬೆಲೆ ತೆತ್ತು ಮದ್ಯ ಸೇವಿಸುವುದಿಲ್ಲ. ಅಮೆರಿಕ, ರಷ್ಯಾದಂತಹ ರಾಷ್ಟ್ರಗಳು ಕೂಡ ಮದ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡು ಅದನ್ನು ನಿಷೇಧಿಸಲು ನೋಡಿ ಸೋತುಹೋಗಿವೆ.

ಬಿಹಾರದ ಚುನಾವಣೆಯಲ್ಲಿ ಗೆದ್ದು ಬಂದು ಮುಖ್ಯಮಂತ್ರಿದ ನಿತೀಶ ಕುಮಾರ್‌ ತಮ್ಮ ಪಕ್ಷ ಗೆದ್ದರೆ ರಾಜ್ಯದಲ್ಲಿ ಎಲ್ಲಾ ರೀತಿಯ ಮದ್ಯ ನಿಷೇಧಿಸುತ್ತದೆ ಎನ್ನುವ ಮಾತನ್ನು ಹೇಳಿ ಹೆಂಗಳೆಯರ ಮನಸ್ಸನ್ನು ಗೆದ್ದಿದ್ದರು. ನಂತರ ನುಡಿದಂತೆ ನಡೆಯದಿದ್ದರೆ ಬಿಹಾರದ ಮಹಿಳೆಯರು ಮುತ್ತಿಗೆ ಹಾಕುವ ಸನ್ನಿವೇಶವನ್ನು ಗ್ರಹಿಸಿ, ಏಪ್ರಿಲ್‌ 2016ರಿಂದ ಬಿಹಾರದಲ್ಲಿ ಮದ್ಯ ನಿಷೇಧಿಸಲಾಗಿದೆ. ಬಿಹಾರ ಸುಮಾರು ಹತ್ತು ಕೋಟಿ ಜನಸಂಖ್ಯೆ ಹೊಂದಿರುವ ದೊಡ್ಡ ರಾಜ್ಯ. ಭಾರತದ ಬಡ ರಾಜ್ಯಗಳಲ್ಲೊಂದು ಎಂದೇ ಗುರುತಿಸಿಕೊಳ್ಳುತ್ತಾ ಬಂದಿದೆ. ಅಪಾರ ಪ್ರಮಾಣದ ಬಿಹಾರಿಗಳು ಬಡತನ ಮತ್ತು ನಿರುದ್ಯೋಗದ ಹಿನ್ನೆಲೆಯಲ್ಲಿ ವಲಸೆ ಹೋಗಿದ್ದಾರೆ. ಬಿಹಾರದಂತಹ ರಾಜ್ಯದಲ್ಲಿ ಮದ್ಯವನ್ನು ನಿಷೇಧಿಸುವುದು ಸಾಧಾರಣ ಮಾತಲ್ಲ. ಹಾಗೆ ಮಾಡುವದರಿಂದ ಆಗಬಹುದಾದ ಅನೇಕ ಬಗೆಯ ಅಡ್ಡ ಪರಿಣಾಮಗಳ ಜತೆಯಲ್ಲಿ ಸುಮಾರು 3,000 ಕೋಟಿ ರೂ.ಗಿಂತಲೂ ಅಧಿಕ ಪ್ರಮಾಣದ ವರಮಾನಕ್ಕೆ ಕತ್ತರಿ ಬೀಳುವ ಜತೆಗೆ, ಅಡ್ಡ ಕಸುಬುಗಳು ಹೆಚ್ಚುವ ಬಗ್ಗೆಯೂ ಮುಖ್ಯಮಂತ್ರಿ ನಿತೀಶ ಕುಮಾರ್‌ ಅವರಿಗೆ ತಿಳಿದಿದೆ. ಚುನಾವಣೆಯ ಸಂದರ್ಭದಲ್ಲಿ ಮಹಿಳೆಯರು ಅದರಲ್ಲೂ ದಲಿತ ಮಹಿಳೆಯರು ನಿತೀಶ ಕುಮಾರ್‌ ಮುಂದೆ ಮದ್ಯ ನಿಷೇಧಿಸುವಂತೆ ಅಂಗಲಾಚಿ ಬೇಡಿಕೊಂಡಿದ್ದರು. 

ಇಷ್ಟಕ್ಕೂ ನಮ್ಮ ದೇಶದ ಯಾವುದೇ ರಾಜ್ಯದಲ್ಲಿ ನೂರಕ್ಕೆ ನೂರು ಮದ್ಯ ನಿಷೇಧ ಸಾಧ್ಯವಿದೆಯೇ? ಖಂಡಿತ ಇಲ್ಲ. ಈಗಾಗಲೇ ಮದ್ಯ ನಿಷೇಧವಿರುವ ರಾಜ್ಯಗಳಲ್ಲಿ ಪರಿಸ್ಥಿತಿ ಏನಿದೆ ಎನ್ನುವುದನ್ನು ಕೂಡ ಗಮನಿಸಬೇಕಾಗುತ್ತದೆ. ಗುಜರಾತ್‌, ನಾಗಾಲ್ಯಾಂಡ್‌, ಮಿಜೊರಾಂನಂಥ ರಾಜ್ಯಗಳು ಮದ್ಯ ನಿಷೇಧಿಸಿದ ಮೇಲೆ ಅಲ್ಲಿಯ ಜನರು ಅದರಲ್ಲೂ ತಮಗೆ ಮದ್ಯ ಬೇಕೇ ಬೇಕು ಎನ್ನುವವರು ಗಡಿ ಭಾಗಗಳಿಂದ ತಂದಾದರೂ ಕುಡಿಯಲು ಆರಂಭಿಸಿದರು. ಇನ್ನು ಒಂದು ಬಾರಿ ಸರಕಾರ ಮದ್ಯವನ್ನು ನಿಷೇಧ ಮಾಡಿದ ಮೇಲೆ ಕಳ್ಳ ಬಟ್ಟಿ ವ್ಯವಹಾರ ತೀರಾ ಚುರುಕಾಗಿ ಚೇತರಿಸಿಕೊಳ್ಳುತ್ತದೆ. ಮಿಜೋರಾಂನಲ್ಲಿ ನನಗೊಬ್ಬ ಗೆಳೆಯನಿದ್ದಾನೆ. ಆತ ಅಲ್ಲಿ ಮದ್ಯ ಸೇವಿಸುವವರ ಕತೆಯನ್ನು ಹೇಳುತ್ತಿದ್ದ. ಆ ರಾಜ್ಯದಲ್ಲಿ ಮದ್ಯ ನಿಷೇಧ ಇರುವುದೇನೋ ನಿಜ, ಆದರೆ ಅಲ್ಲಿಯ ಕುಡುಕರು ಅಸ್ಸಾಮ್‌ ಗಡಿ ಭಾಗದಿಂದ ಅದನ್ನು ತಂದು ಮಾರುವ, ಕುಡಿಯುವ ಕ್ರಿಯೆ ನಿರಂತರವಾಗಿ ಇದ್ದೇ ಇದೆ ಎಂದಿದ್ದ. ಅದು ನಿಜ. ಮದ್ಯವನ್ನು ನಿಷೇಧ ಮಾಡುವುದು ಇನ್ನೊಂದು ಬದಿ ವಾಮ ಮಾರ್ಗದ ವ್ಯವಹಾರಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ.

ಅವ್ಯವಹಾರಗಳಿಗೆ ಪ್ರೋತ್ಸಾಹ
ಮದ್ಯ ನಿಷೇಧವಿರುವ ಕೆಲ ರಾಜ್ಯಗಳಲ್ಲಿ ಪರ್ಮಿಟ್‌ ಶಾಪ್‌ಗ್ಳೂ ಇವೆ. ಇಲ್ಲಿ ಕೇವಲ ಕೌಂಟರ್‌ಗಳಲ್ಲಿ ವಿದೇಶಿ ಮದ್ಯವನ್ನು ಮಾತ್ರ ಮಾರಾಟ ಮಾಡಲಾಗುತ್ತದೆ. ಆದರೆ ಅದಕ್ಕಿಂತಲೂ ಹೆಚ್ಚು ಮದ್ಯ ಸೇವನೆ ಮತ್ತು ಮಾರಾಟ ಇದ್ದದ್ದು ಈ ದೇಶಿ ಮದ್ಯದ್ದು. ಹೀಗಾಗಿ ಧನದಾಹದ ಹಿನ್ನೆಲೆಯಲ್ಲಿ ಆ ಬಗೆಯ ಕೌಂಟರ್‌ಗಳಲ್ಲಿ ಅಗ್ಗದ ದರದ ದೇಶೀ ಮದ್ಯವನ್ನೂ ಮಾರಾಟ ಮಾಡುವುದಿದೆ. ಇನ್ನು ಕುಡಿಯುವುದರಿಂದ ದುಡಿಯುವ ಸಾಮರ್ಥ್ಯ ಹಾಳಾಗುವುದು ಸತ್ಯವೇ ಆದರೂ ಕುಡಿಯುವುದರಿಂದ ಮಾತ್ರ ತಮ್ಮಲ್ಲಿ ದುಡಿಯುವ ಚೈತನ್ಯ ಬರುತ್ತದೆ ಎಂದು ಭಾವಿಸಿದವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವನಿಗೆ ಕುಡಿಯದಿದ್ದರೆ ಆ ಕೆಲಸ ಮಾಡಲಾಗುವುದಿಲ್ಲ ಎನ್ನುವ ಮಾತು ಮದ್ಯದ ಮೇಲೆ ಅವನಿಗಿರುವ ಅವಲಂಬನೆಯನ್ನು ತೋರಿಸುತ್ತದೆ. ಯಾವುದೇ ಮದ್ಯ ಇರಲಿ, ಖಂಡಿತ ಅದರ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳಂತೂ ಇದ್ದೇ ಇವೆ. ಕೆಲವು ರಾಷ್ಟ್ರಗಳಲ್ಲಿ ವೈದ್ಯರಿಗೆ ಸಾಕಷ್ಟು ಹಣ ಕೊಟ್ಟು ಅವರ ಮೂಲಕವೇ ಸ್ವಲ್ಪವೇ ಕುಡಿಯುವುದು ಆರೋಗ್ಯಕ್ಕೆ ಉತ್ತಮ ಎನ್ನುವ ಲೇಖನಗಳನ್ನು ಬರೆಯಿಸಿ ಬೆಳೆದ ಮದ್ಯದ ಕಂಪನಿಗಳೂ ಇವೆ. ದುಡಿಯುವ ಜನರ ಅದರಲ್ಲೂ ದಿನಗೂಲಿ ಮಾಡಿ ಬದುಕುವವರ ಬಹುತೇಕ ಆದಾಯ ಮದ್ಯದಂಗಡಿಗಳಿಗೆ ಹೋಗುವುದಿದೆ. ಅದನ್ನು ಸಂಪೂರ್ಣವಾಗಿ ನಿಷೇಧಿಸಿದರೆ ಅವರು ಕಳ್ಳಬಟ್ಟಿ ಸಾರಾಯಿಯನ್ನು ಕುಡಿಯುವ ಮೂಲಕ ಇನ್ನಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಇಡೀ ಜಗತ್ತಿನಲ್ಲಿ ಯಾವುದೇ ರಾಷ್ಟ್ರಗಳಲ್ಲಿ, ಕೆಲವು ಮುಸ್ಲಿಂ ರಾಷ್ಟ್ರಗಳನ್ನು ಹೊರತುಪಡಿಸಿದರೆ, ಸಂಪೂರ್ಣವಾಗಿ ಮದ್ಯಪಾನದ ಮೇಲೆ ನಿಷೇಧವಿಲ್ಲ. ಹಾಗೆಯೇ ಎಲ್ಲೆಲ್ಲಿ ಮದ್ಯದ ನಿಷೇಧವಿದೆಯೋ ಅಲ್ಲಿ ಇನ್ನಷ್ಟು ಅವ್ಯವಹಾರಗಳು ಅದಕ್ಕೆ ಸಂಬಂಧಿಸಿ ತೆರೆಮರೆಯಲ್ಲಿ ಆರಂಭವಾಗುವುದೂ ಇದೆ. 

ಜಗತ್ತಿನಲ್ಲೇ ಭಾರತ ನಂ.3
ನಮ್ಮಲ್ಲಿ ಬಣ್ಣ ಬಣ್ಣದ ಮದ್ಯಸೇವನೆ ಮತ್ತು ಮಾರಾಟದ ಆರಂಭಕ್ಕೆ ಬ್ರಿಟಿಷ್‌ ವಸಾಹತುಶಾಹಿ ಕಾರಣ. ಅಂದು ಆರಂಭವಾದ ವಿದೇಶಿ ಮದ್ಯದ ಉತ್ಪಾದನೆ ಮತ್ತು ಸೇವನೆಯಲ್ಲಿ ನಾವು ಹಿಂದೆ ಬಿದ್ದಿದ್ದೇ ಇಲ್ಲ. ಅದರಲ್ಲೂ ದಕ್ಷಿಣದ ರಾಜ್ಯಗಳಾದ ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶಗಳದ್ದೇ ಈ ವ್ಯವಹಾರದಲ್ಲಿ ಸಿಂಹಪಾಲು. ದೇಶದ ಒಟ್ಟು ಮದ್ಯ ಮಾರಾಟದ ಪಾಲಿನಲ್ಲಿ ಇವುಗಳದ್ದೇ ಸುಮಾರು 60 ಪ್ರತಿಶತದಷ್ಟಿದೆ. ಇನ್ನು ಇಡೀ ವಿಶ್ವದಲ್ಲಿ ಭಾರತ ಈ ಮದ್ಯ ಮಾರಾಟ ಮತ್ತು ಉತ್ಪಾದನೆಯ ಸಾಲಿನಲ್ಲಿ 3ನೇ ಸ್ಥಾನದಲ್ಲಿದೆ. ವರ್ಷಕ್ಕೆ ಸುಮಾರು 300 ಮಿಲಿಯನ್‌ ಕೇಸ್‌ ವಿಸ್ಕಿ ಮಾರಾಟ ನಮ್ಮಲ್ಲಾಗುತ್ತದೆ. ಭಾರತೀಯ ಸಂವಿಧಾನದ 47ನೆಯ ಕಲಮು ಜನತೆಯ ಆರೋಗ್ಯದ ಸುಧಾರಣೆಯಲ್ಲಿ ಸರಕಾರಗಳು ಕ್ರಮ ಕೈಗೊಳ್ಳಬೇಕು ಮತ್ತು ವೈದ್ಯಕೀಯ ಕಾರಣಗಳನ್ನು ಹೊರತುಪಡಿಸಿ ಇತರೆ ಕಾರಣಗಳಿಗಾಗಿ ಮದ್ಯ ಮಾರಾಟಕ್ಕೆ ಅವಕಾಶ ಕೊಡಬಾರದು ಎಂದು ಘೋಷಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ 2005ರಿಂದ ಭಾರತದಲ್ಲಿ ಮದ್ಯದ ಮಾರಾಟ ಮತ್ತು ಸೇವನೆಯ ಪ್ರಮಾಣ ಹೆಚ್ಚಾಗುತ್ತಲೇ ನಡೆದಿದೆ. ವಿಶ್ವದ ಯಾವ ರಾಷ್ಟ್ರದಲ್ಲಿಯೂ ನಮ್ಮಲ್ಲಿಯಷ್ಟು ದುಬಾರಿ ಬೆಲೆ ತೆತ್ತು ಮದ್ಯವನ್ನು ಸೇವಿಸುವುದಿಲ್ಲ. ದೊಡ್ಡ ದೊಡ್ಡ ಹೋಟೆಲ್‌ಗ‌ಳಂತೂ ಇರುವ ದರಕ್ಕಿಂತಲೂ ಹಲವು ಪಟ್ಟು ಹೆಚ್ಚಿಗೆ ಹಣವನ್ನು ಗ್ರಾಹಕನಿಂದ ಸುಲಿಗೆ ಮಾಡುತ್ತವೆ. 

ಬಿಹಾರದಲ್ಲಿ ಹಿಂದೆ ಏನಾಗಿತ್ತು?
ಬಿಹಾರದಲ್ಲಿ ಮದ್ಯ ನಿಷೇಧಿಸುತ್ತಿರುವುದು ಇದೇ ಮೊದಲಲ್ಲ. 1977-79ರ ಅವಧಿಯಲ್ಲಿ ಅಧಿಕಾರದಲ್ಲಿದ್ದ ಕರ್ಪೂರಿ ಠಾಕೂರ್‌ ಆ ಕೆಲಸ ಮಾಡಿದ್ದರು. ಆದರೆ ಅವರಿಗೆ ಅನಂತರ ಅದರ ಅಡ್ಡ ಪರಿಣಾಮಗಳ ಅರಿವಾಯಿತು. ಹೀಗೆ ಇಡೀ ದೇಶದಲ್ಲಿ ಅಲ್ಲಲ್ಲಿ ನಿಷೇಧದ ಪ್ರಕರಣಗಳು ಇವೆಯಾದರೂ ಅಲ್ಲಿ ಸಂಪೂರ್ಣವಾಗಿ ನಿಂತಿಲ್ಲ. ಹೇಗೆ ಮಕ್ಕಳ ಕೈಯಲ್ಲಿರುವ ಏನೋ ಒಂದನ್ನು ಕಸಿದುಕೊಂಡು ಅದು ಅಳಲು ಆರಂಭಿಸಿದಾಗ ಕಿತ್ತುಕೊಂಡದ್ದರ ಬದಲಿಗೆ ಇನ್ನೊಂದನ್ನು ಕೊಡಲೇಬೇಕೋ ಹಾಗೆ ಕುಡುಕರು ನಿಷೇಧದ ಬೆನ್ನಲ್ಲಿಯೇ ಇನ್ನೊಂದು ಪರ್ಯಾಯ ಮಾರ್ಗವನ್ನು ಹುಡುಕಿರುತ್ತಾರೆ. ಕೇವಲ ಬಾರ್‌ಗಳನ್ನು ಒಂದ ಗಂಟೆ ಬೇಗ ಮುಚ್ಚುವ ಆದೇಶ ಮಾಡಿದರೂ ಸಾಕಷ್ಟು ಚಡಪಡಿಸುವವರ ನಡುವೆ ನಿಷೇಧ ಸಂಪೂರ್ಣವಾಗಿ ಜಾರಿಯಾಗಬಹುದೇ?

ಸಂಪೂರ್ಣ ನಿಷೇಧ ಸಾಧ್ಯವೇ?
ಮದ್ಯವನ್ನು ನೂರಕ್ಕೆ ನೂರು ಪ್ರತಿಶತ ನಿಷೇಧಿಸಲು ಸಾಧ್ಯವಿಲ್ಲ. ಈಗಾಗಲೇ ನಿಷೇಧವಿರುವ ರಾಜ್ಯಗಳಲ್ಲಿರುವ ಸ್ಥಿತಿಯನ್ನು ಗಮನಿಸಿದರೆ ಈ ಸತ್ಯ ಮನದಟ್ಟಾಗುತ್ತದೆ. ಗುಜರಾತ್‌ನ ಕೆಲವು ಕಡೆಗಳಲ್ಲಿ ಕೌಂಟರ್‌ಗಳಲ್ಲಿ ಮದ್ಯ ದೊರೆಯುತ್ತದೆ. ಆದರೆ ಕರಾರು ಏನೆಂದರೆ ಮದ್ಯ ಖರೀದಿಸುವವನು ತಾನು ಅಲ್ಲಿಯ ವಾಸಿಯಲ್ಲ ಎನ್ನುವ ಬಗ್ಗೆ ಸಾಕಷ್ಟು ಆಧಾರಗಳನ್ನು ಕೊಡಬೇಕು. ಮಣಿಪುರದಲ್ಲಿರುವ ನಿಷೇಧ ಉಲ್ಟಾ ಕೆಲಸ ಮಾಡುತ್ತಿರುವ ಬಗ್ಗೆ ವರದಿಗಳಿವೆ. ಅಲ್ಲಿಯ ಜನ ಅಸ್ಸಾಂನಿಂದ ಮದ್ಯ ತಂದು ಸೇವಿಸುತ್ತಾರೆ. ಅಮೆರಿಕ, ರಷ್ಯಾದಂತಹ ರಾಷ್ಟ್ರಗಳು ಕೂಡ ಈ ಮದ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡು ಅದನ್ನು ನಿಷೇಧಿಸಲು ನೋಡಿ ಸೋತು ಹೋದವು. ಕೆಲ ಸರ್ವಾಧಿಕಾರಿಗಳಿಂದಲೂ ಅದು ಸಾಧ್ಯವಾಗಲಿಲ್ಲ. ಸಾರಾಸಾರ ವಿವೇಚನೆ, ತಿಳಿವಳಿಕೆ, ಸಲಹಾ ಕೇಂದ್ರಗಳ ಮೂಲಕ ಅದರ ಸೇವನೆಯ ಪ್ರಮಾಣವನ್ನು ನಿಯಂತ್ರಿಸುವ ರೀತಿಯಲ್ಲಿ ಕೆಲಸ ಮಾಡಬಹುದು. ಆದರೆ ಸಂಪೂರ್ಣ ನಿಷೇಧ ಕಷ್ಟವೇನೋ. ಅದರಲ್ಲೂ ಬಿಹಾರದಂತಹ ಜಂಗಲ್‌ ರಾಜ್‌ ವ್ಯವಸ್ಥೆಗೆ ಒಗ್ಗಿಕೊಂಡಿರುವ ಜನಸಮುದಾಯಗಳಿರುವಲ್ಲಿ, ಲಾಲೂ ಪ್ರಸಾದರೊಂದಿಗೆ ಮೈತ್ರಿ ಸರಕಾರ ಇರುವ ಹಿನ್ನೆಲೆಯಲ್ಲಿ ನಿತೀಶ ಕುಮಾರ್‌ಗೆ ಈ ಮದ್ಯ ನಿಷೇಧ ದುಬಾರಿಯಾಗಬಹುದು. ಅದೇ ವೇಳೆಗೆ ನಿಷೇಧದ ಅನಂತರದ ಅಡ್ಡಪರಿಣಾಮಗಳ ಬಗ್ಗೆಯೂ ಸಾಕಷ್ಟು ಪೂರ್ವಭಾವಿಯಾಗಿ ಯೋಚಿಸಬೇಕು. ಜತೆಗೆ ಈಗಾಗಲೇ ನಿಷೇಧವಿರುವ ರಾಜ್ಯಗಳ ಸ್ಥಿತಿಗಳನ್ನು ವಸ್ತುನಿಷ್ಠವಾಗಿ ಅಧ್ಯಯನ ಮಾಡುವ ಮೂಲಕ ಜಾಗ್ರತೆ ವಹಿಸಬೇಕು.

ಡಾ| ಎಸ್‌.ಬಿ.ಜೋಗುರ

Trending videos

Back to Top