CONNECT WITH US  

ಸವಾಲುಗಳ ಸುಳಿಯಲ್ಲಿ ಬ್ಯಾಂಕಿಂಗ್‌ ಕ್ಷೇತ್ರ

ಈ ದೇಶದಲ್ಲಿ ಎಲ್ಲಾ ಬ್ಯಾಂಕುಗಳು ಸೇರಿ ಸುಮಾರು 114000 ಬ್ಯಾಂಕ್‌ ಶಾಖೆಗಳು ಇವೆ. ದೇಶದ ಬಹುತೇಕ ಪ್ರದೇಶಗಳಲ್ಲಿ ಬ್ಯಾಂಕ್‌ ಶಾಖೆಗಳನ್ನು ಕಾಣಬಹುದು. ಕೆಲವು ನಗರ ಪ್ರದೇಶಗಳಲ್ಲಂತೂ ಶಾಖೆಗಳ ದಟ್ಟಣೆಯನ್ನು ನೋಡಬಹುದು. ಆದರೆ ಇಂದಿಗೂ ಸುಮಾರು 3 ಲಕ್ಷ ಹಳ್ಳಿಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ ಅಥವಾ ಖಾಸಗಿ ಬ್ಯಾಂಕುಗಳ ಶಾಖೆಗಳಿಲ್ಲ. ಪ್ರತಿಯೊಬ್ಬ ಭಾರತೀಯನೂ ಬ್ಯಾಂಕಿಂಗ್‌ ಸೇವೆಗೆ ಒಳಪಡಬೇಕು ಎನ್ನುವ ಪ್ರಧಾನ ಮಂತ್ರಿ ಜನಧನ ಯೋಜನೆಯಡಿಯಲ್ಲಿ ಬ್ಯಾಂಕುಗಳ ಅವಿರತ ಶ್ರಮದಿಂದಾಗಿ, ಸುಮಾರು 25 ಕೋಟಿಗಿಂತಲೂ ಹೆಚ್ಚು ಜನರು ಬ್ಯಾಂಕ್‌ ಖಾತೆಗಳನ್ನು ಪಡೆದಿದ್ದಾರೆ. ಹಣದ ಉಳಿತಾಯ ಮತ್ತು ಹಣಕಾಸಿನ ವ್ಯವಹಾರವನ್ನು ಮಾಡುವುದರೊಂದಿಗೆ ಸಬ್ಸಿಡಿಯಂಥ ಸರ್ಕಾರದ ಸೌಲಭ್ಯಗಳನ್ನು ಈ ಖಾತೆಗಳ ಮೂಲಕವೇ ಪಡೆಯುತ್ತಿದ್ದಾರೆ. 

ಆದರೂ ದೇಶದ ಬಹಳಷ್ಟು ಜನರಿಗೆ ಇನ್ನೂ ಬ್ಯಾಂಕ್‌ ಖಾತೆಗಳಿಲ್ಲ. ದೇಶದ ಅರ್ಥಿಕ ವ್ಯವಸ್ಥೆಯಲ್ಲಿ ಕಪ್ಪು ಹಣದ ಅವಾಂತರವನ್ನು ನಿಯಂತ್ರಿಸಲು ಮತ್ತು ದಿನನಿತ್ಯದ ಹಣಕಾಸು ವ್ಯವಹಾರದಲ್ಲಿ ನಗದು ಪ್ರಮಾಣವನ್ನು ತಗ್ಗಿಸಲು ಪ್ರಧಾನ ಮಂತ್ರಿಯವರು ಜಾರಿಗೆ ತಂದ ಮಹತ್ವಾಕಾಂಕ್ಷಿ ಅನಾಣ್ಯೀಕರಣ ಯೋಜನೆ ಇದನ್ನು ಇನ್ನೊಮ್ಮೆ ದೃಢೀಕರಿಸಿದೆ. ಹಾಗೆಯೇ ಸರ್ಕಾರದ ಈ ಕ್ರಮದಿಂದ ಜನತೆಗೆ ಬ್ಯಾಂಕ್‌ ಖಾತೆಗಳನ್ನು ಹೊಂದುವ ಅರಿವು ಈಗ ಜಾಗೃತವಾಗುತ್ತಿದೆ.

ಸಿಬ್ಬಂದಿ ಕೊರತೆ ನೀಗಬೇಕು
ಬ್ಯಾಂಕಿಂಗ್‌ ಕ್ಷೇತ್ರದಲ್ಲಿ 2000ನೇ ಸಾಲಿನಲ್ಲಿ ಜಾರಿಗೆ ತಂದ ಸ್ವಯಂ ನಿವೃತ್ತಿ ಯೋಜನೆ ಅಡಿ ಒಂದುವರೆ ಲಕ್ಷಕ್ಕೂ ಮಿಕ್ಕಿ ಸಿಬ್ಬಂದಿ ಮತ್ತು ಅಧಿಕಾರಿಗಳು ನಿವೃತ್ತಿಯಾದರು. ಈ ಅವಕಾಶವನ್ನು ಉಪಯೋಗಿಸಿಕೊಂಡು ಸಾಕಷ್ಟು ಪ್ರತಿಭಾ ಫ‌ಲಾಯನವಾಯಿತು. ಇತ್ತೀಚೆಗಿನ ವರ್ಷಗಳಲ್ಲಿ 70-80ರ ದಶಕದಲ್ಲಿ ಬ್ಯಾಂಕಿಗೆ ಸೇರಿದವರು ಲಕ್ಷದಲ್ಲಿ ನಿವೃತ್ತಿಯಾಗುತ್ತಿದ್ದಾರೆ. ಆದರೆ ನಿವೃತ್ತಿಯ ಪ್ರಮಾಣದಂತೆ ಹೊಸ ನೇಮಕಾತಿಯಾಗುತ್ತಿಲ್ಲ. ಹಾಗೆಯೇ ಬ್ಯಾಂಕ್‌ ಬಿಡುವವರ ಸಂಖ್ಯೆ (Attrition rate) ಸುಮಾರು ಶೇ.18 ಇದೆ ಎಂದು ಹೇಳಲಾಗುತ್ತಿದ್ದು, ಹಲವು ಶಾಖೆಗಳಲ್ಲಿ ಸಾಕಷ್ಟು ಸಿಬ್ಬಂದಿ ಇಲ್ಲದೆ ದಿನನಿತ್ಯದ ವ್ಯವಹಾರವನ್ನು ಸುಗಮವಾಗಿ ಮಾಡಲು ಬ್ಯಾಂಕುಗಳು ಹರಸಾಹಸ ಪಡುತ್ತಿವೆ. ಇಂದಿಗೂ ಸುಮಾರು ಒಂದೂವರೆ ಲಕ್ಷ ಬ್ಯಾಂಕ್‌ ಅಧಿಕಾರಿ ಮತ್ತು ಸಿಬ್ಬಂದಿಗಳ ಕೊರತೆ ಬ್ಯಾಂಕ್‌ಗಳನ್ನು ಕಾಡುತ್ತಿದೆ. ಆದರೆ, ಕಂಪ್ಯೂಟರೀಕರಣಕ್ಕೆ ತಕ್ಕಂತೆ ಬ್ಯಾಂಕುಗಳಲ್ಲಿ ನೌಕರರು ಮಾಡುವ ಕೆಲಸಗಳೇನೂ ಕಮ್ಮಿಯಾಗಿಲ್ಲ. ಏಕೆಂದರೆ, ಬ್ಯಾಂಕುಗಳು ಮೊದಲಿನಂತೆ ಕೇವಲ ಠೇವಣಿ ಸ್ವೀಕಾರ ಮತ್ತು ಸಾಲ ನೀಡಿಕೆಗೆ ಸೀಮಿತವಾಗಿರದೇ ಸುಮಾರು 30ಕ್ಕೂ ಮಿಕ್ಕಿ ವಿವಿಧ ರೀತಿಯ ಕಾರ್ಯಗಳನ್ನು ಇಂದು ಮಾಡುತ್ತಿವೆ. 

ಹಾಗೆಯೇ ಬ್ಯಾಂಕುಗಳ ಕಾರ್ಯದ ಅವಧಿ 10ರಿಂದ 5 ಆಗಿರದೇ ಅನಧಿಕೃತವಾಗಿ ಮುಂಜಾನೆ 10ರಿಂದ ರಾತ್ರಿ 9ರವರೆಗೂ (ಕೆಲಸ ಮುಗಿಯುವವರೆಗೂ) ವಿಸ್ತರಿಸಲ್ಪಟ್ಟಿದೆ. ಬ್ಯಾಂಕುಗಳಲ್ಲಿ ಅನುಭವಿಗಳಿಗೆ ಮತ್ತು ಹಳಬರಿಗೆ ಕಂಪ್ಯೂಟರ್‌ ತಿಳಿಯದು ಮತ್ತು ಕಂಪ್ಯೂಟರ್‌ ತಿಳಿದ ಹೊಸಬರಿಗೆ ಬ್ಯಾಂಕಿಂಗ್‌ ತಿಳಿಯದೆ ದಿನನಿತ್ಯದ ಬ್ಯಾಂಕಿಂಗ್‌ ವ್ಯವಹಾರದಲ್ಲಿ ಗೊಂದಲ ಉಂಟು ಮಾಡುತ್ತಿದೆ. ಇದಕ್ಕೂ ಮಿಗಿಲಾಗಿ ಬ್ಯಾಂಕಿಂಗ್‌ ಕೆಲಸದಲ್ಲಿ ಇರುವ ರಿಸ್ಕ್ ಮತ್ತು ಈ ಉದ್ಯೋಗದಲ್ಲಿರುವ ದೇಶಾದ್ಯಂತದ ವರ್ಗಾವಣೆಯಿಂದಾಗಿ ಇಂದಿನ ಯುವಕರು ಬ್ಯಾಂಕ್‌ ಉದ್ಯೋಗವನ್ನು ಅಷ್ಟಾಗಿ ಇಚ್ಛೆಪಡುವುದಿಲ್ಲ ಎನ್ನುವ ಅಭಿಪ್ರಾಯ ಬ್ಯಾಂಕಿಂಗ್‌ ವಲಯದಲ್ಲಿ ಕೇಳಿ ಬರುತ್ತಿದೆ. ಇನ್ನಿತರ ಕೆಲವು ವಲಯಗಳಿಗೆ ಹೋಲಿಸಿದರೆ ಸಂಬಳ ಸೌಲಭ್ಯವೂ ಅಷ್ಟು ಆಕರ್ಷಕವಾಗಿಲ್ಲ. ಈ ಎಲ್ಲಾ ಕೊರತೆಗಳ ನಡುವೆಯೂ ಬ್ಯಾಂಕ್‌ ಸಿಬ್ಬಂದಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟು ಜನಧನ ಯೋಜನೆಯನ್ನು ಇಡೀ ದೇಶವೇ ಬೆರಗಾಗುವಂತೆ ಯಶಸ್ವಿಗೊಳಿಸಿದರು. 

ಸಾಮಾನ್ಯ ಕೆಲಸವಲ್ಲ
ಕೇವಲ ನಗರಗಳಲ್ಲಿ ಮಾತ್ರವಲ್ಲ, ಹಳ್ಳಿ-ಹಳ್ಳಿಗೆ ನೌಕರರು, ಅಧಿಕಾರಿಗಳು ಹಗಲು ರಾತ್ರಿ ಎನ್ನದೆ ಸ್ವತಃ ಭೇಟಿ ನೀಡಿ, ಬ್ಯಾಂಕ್‌ ಖಾತೆಗಳ ಸಾಧಕ- ಬಾಧಕಗಳ ಬಗೆಗೆ ತಿಳಿವಳಿಕೆ ನೀಡಿ, ನಿಮ್ಮ ಗ್ರಾಹಕರನ್ನು ಅರಿತುಕೊಳ್ಳಿ ಎಂಬುದನ್ನು ವಿವರಿಸಿ, ಓದು ಬರಹ ಬಾರದ ಲಕ್ಷಗಟ್ಟಲೆ ಜನರ ಮನಗೆದ್ದು ಬ್ಯಾಂಕ್‌ ಖಾತೆ ತೆರೆಸಿದ್ದು ಸಾಮಾನ್ಯ ಕೆಲಸವಲ್ಲ. ಇವರ ಈ ಕಾರ್ಯವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಶ್ಲಾ ಸಿದ್ದಾರೆ. ಜನಧನ ಯೋಜನೆಯ ಸಫ‌ಲತೆಯನ್ನು ಜನತೆ ಮತ್ತು ಸರ್ಕಾರ ಇನ್ನೂ ಮೆಲುಕು ಹಾಕುತ್ತಿರುವಂತೆ ಇನ್ನೊಮ್ಮೆ ಜನಧನ ಯೋಜನೆಯ ವಿಸ್ತರಣೆ ಪ್ರಬಲವಾಗಿ ಪ್ರಾರಂಭವಾಗಿದೆ.

ಕಪ್ಪು ಹಣ ನಿಯಂತ್ರಿಸುವ ಮಹತ್ವಾಕಾಂಕ್ಷಿ ಯೋಜನೆ ಅಡಿ ಜಾರಿಗೆ ತಂದ 500 ಮತ್ತು 1000 ಮುಖ ಬೆಲೆಯ ನೋಟುಗಳ ರದ್ದತಿ ಮತ್ತು ಬದಲೀಕರಣದ ಹೆಚ್ಚಿನ ಹೊಣೆಯನ್ನು ಪ್ರಧಾನಿಯವರು ಬ್ಯಾಂಕ್‌ ಸಿಬ್ಬಂದಿಯ ಮೇಲೆ ಹೇರಿದರು. ಈ ಯೋಜನೆಯ ಯಶಸ್ಸಿಗೆ ತಿಂಗಳಿನಿಂದ ಸಿಬ್ಬಂದಿ ಅಹೋರಾತ್ರಿ ದುಡಿಯುತ್ತಿದ್ದಾರೆ. ಇದನ್ನು ಸವಾಲಾಗಿ ಸ್ವೀಕರಿಸಿದ ಸಿಬ್ಬಂದಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಹಲವಾರು ಅಡ್ಡಿ ಆತಂಕಗಳು ಬಂದೊದಗಿದರೂ, ಅವುಗಳನ್ನು ಬದಿಗೊತ್ತಿ ತಮ್ಮ ಸ್ವಂತ ಸಮಸ್ಯೆ ಮತ್ತು ತೊಂದರೆಗಳನ್ನೂ ಲೆಕ್ಕಿಸದೇ, ಇದ್ದ ರಜೆಗಳನ್ನು ಅನುಭವಿಸದೇ ಎಲ್ಲವನ್ನೂ ಮರೆತು ದೇಶದ ಹಿತಕ್ಕಾಗಿ ಸರ್ಕಾರದ ಕರೆಗೆ ಸ್ಪಂದಿಸಿದ್ದಾರೆ. ಇಷ್ಟಾಗಿಯೂ ತೊಂದರೆಗೆ ಒಳಗಾದ ಸಾಮಾನ್ಯ ಜನರಿಂದ ಮುಂದುವರೆದ ಫ‌ರ್ಲಾಂಗ್‌ ಉದ್ದದ ಸಾಲು, ಸಹನೆ ಮೀರಿದ ಗ್ರಾಹಕರು, ರಿಸರ್ವ್‌ ಬ್ಯಾಂಕಿನಿಂದ ಸಮಯದಲ್ಲಿ ದೊರಕದ ಅತ್ಯಂತ ಬೇಡಿಕೆಯಲ್ಲಿರುವ 500 ಮತ್ತು 100 ಮುಖಬೆಲೆಯ ನೋಟುಗಳು, ಸಹನೆ ಕಳೆದುಕೊಂಡ ಮತ್ತು ರೊಚ್ಚಿಗೆದ್ದ ಗ್ರಾಹಕರ ಆಕ್ರೋಶ, ಸಿಡಿಮಿಡಿ, ಚುಚ್ಚು ಮಾತುಗಳು, ಸಮಯಕ್ಕೆ ದೊರಕದ ಮೇಲಿನ ಅಧಿಕಾರಿಗಳ ಸಹಾಯ, ಪ್ರತಿಕೂಲವಾದ ಕೆಲವು ಮಾಧ್ಯಮಗಳ ಪ್ರತಿಕ್ರಿಯೆ ಹೀಗೆ ಹಲವಾರು ಅಡೆತಡೆಗಳು ಬ್ಯಾಂಕ್‌ ಸಿಬ್ಬಂದಿಯನ್ನು ಕಾಡುತ್ತಿವೆ. ಆದರೂ ತಮ್ಮ ಆರೋಗ್ಯ, ಸಾಮಾಜಿಕ ಮತ್ತು ಕುಟುಂಬ ಜೀವನವನ್ನು ಲೆಕ್ಕಿಸದೆ ಬ್ಯಾಂಕ್‌ ನೌಕರರು ಈ ದುಡಿತಕ್ಕೆ ಯಾವ ಪ್ರತಿಫ‌ಲವೂ ದೊರಕದು ಎನ್ನುವ ಗ್ಯಾರಂಟಿ ಇದ್ದರೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮಿಗಿಲಾಗಿ ನಿವೃತ್ತ ಬ್ಯಾಂಕ್‌ ಸಿಬ್ಬಂದಿಗಳೂ ಈ ಕಾರ್ಯದಲ್ಲಿ ಬ್ಯಾಂಕಿನ ಸೇವೆಗೆ ಮುಂದಾಗಿದ್ದು ಹಲವರನ್ನು ಚಕಿತಗೊಳಿಸಿದೆ. ಈ ಬಾರಿಯೂ ಪ್ರಧಾನಿ ಮೋದಿಯವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವಾಗ ನಿವೃತ್ತ ಹಾಗೂ ಬ್ಯಾಂಕ್‌ ಸಿಬ್ಬಂದಿಗಳ ಪಾತ್ರವನ್ನು ಶ್ಲಾಘಿಸಿದ್ದಾರೆ.

ವಿಲೀನಕ್ಕಿಂತ ವಿಸ್ತಾರಕ್ಕೆ ಆದ್ಯತೆ ಬೇಕು
ಬ್ಯಾಂಕ್‌ ಶಾಖೆಗಳ ಸಂಖ್ಯೆ ದಿನದಿನವೂ ಹೆಚ್ಚುತ್ತಿದೆ. ವಿಷಾದವೆಂದರೆ, ಹೆಚ್ಚು ಹೆಚ್ಚು ಹಳ್ಳಿಗಳನ್ನು ಬ್ಯಾಂಕಿಂಗ್‌ಗೆ ಒಳಪಡಿಸಬೇಕು ಎನ್ನುವ ಉದ್ದೇಶಗಳ ಹೊರತಾಗಿಯೂ, ಗ್ರಾಮಾಂತರ ಪ್ರದೇಶ ಅಥವಾ ಬ್ಯಾಂಕುಗಳಿಲ್ಲದ ಪ್ರದೇಶದಲ್ಲಿ ಬ್ಯಾಂಕ್‌ ಶಾಖೆ ತೆರೆಯುವ ಕಾರ್ಯ ಆಮೆ ವೇಗದಲ್ಲಿ ನಡೆಯುತ್ತಿದೆ. ಇದಕ್ಕೆ ಬದಲಾಗಿ ಬ್ಯಾಂಕುಗಳ ವಿಲೀನ ಪ್ರಕ್ರಿಯೆಗೆ ಚಾಲನೆ ಕೊಡಲಾಗುತ್ತಿದೆ. ಇದು ಕಾರ್ಯಗತವಾದರೆ ಲಾಭ ಗಳಿಸದ ಅಥವಾ ಹೆಚ್ಚು ಲಾಭ ನೀಡದ ಗ್ರಾಮಾಂತರ ಮತ್ತು ಸಣ್ಣ ಪಟ್ಟಣಗಳಲ್ಲಿರುವ ಶಾಖೆಗಳನ್ನು ಮುಚ್ಚುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಬ್ಯಾಂಕುಗಳ ವಿಲೀನಕ್ಕಿಂತ ವಿಸ್ತಾರಕ್ಕೆ ಆದ್ಯತೆ ಕೊಡಬೇಕಾಗಿದೆ. ಲಾಭವೇ ಮುಖ್ಯವಾಗಿರುವ ನವಪೀಳಿಗೆ, ಖಾಸಗಿ ಬ್ಯಾಂಕುಗಳು ಹಳ್ಳಿಯತ್ತ ಮುಖ ಮಾಡುವುದು ಅಸಾಧ್ಯ. ಅಂತೆಯೇ ಸರ್ಕಾರ ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳನ್ನು ಈ ನಿಟ್ಟಿನಲ್ಲಿ ಒತ್ತಾಯಿಸಬೇಕಾಗಿದೆ. ಬ್ಯಾಂಕ್‌ ಸಿಬ್ಬಂದಿ ತಮ್ಮ ದುಡಿತ ಮತ್ತು ಸೇವೆಗಾಗಿ ಸರ್ಕಾರದಿಂದ ಹೆಚ್ಚಿನದನ್ನೇನೂ ನಿರೀಕ್ಷಿಸುತ್ತಿಲ್ಲ. ಅವರು ನಿರೀಕ್ಷಿಸುವುದು ಕೆಲಸದ ಪರಿಮಿತಿ, ಸ್ವಾಭಿಮಾನ, ಸಮಯದ ಪರಿಮಿತಿಯಲ್ಲಿ ತಮಗೆ ದೊರಕಬೇಕಾದ ವೇತನ ಮತ್ತು ಪಿಂಚಣಿ ಪರಿಷ್ಕರಣೆ . ಈ ನ್ಯಾಯಬದ್ಧ ಬೇಡಿಕೆಗಳನ್ನು ಸರ್ಕಾರ ಅರ್ಥಮಾಡಿಕೊಂಡು ಈಡೇರಿಸುತ್ತದೆ ಎಂಬ ಆಶಾಭಾವನೆಯಲ್ಲಿದ್ದಾರೆ. 

ಮುಂದಿನ ದಿನಗಳಲ್ಲಿ ನಗದುರಹಿತ ವಹಿವಾಟಿಗೆ ಹೆಚ್ಚಿನ ಜನರು ಬರುವುದರಿಂದ ಅದರ ಪರಿಣಾಮ ಬ್ಯಾಂಕ್‌ ಸಿಬ್ಬಂದಿಯ ಮೇಲೂ ಬೀಳುತ್ತದೆ. ಕೆಲಸವೂ ಹೆಚ್ಚಾಗಲಿದೆ. ಇದೆಲ್ಲವೂ ಸರ್ಕಾರಕ್ಕೆ ತಿಳಿದಿದೆ. ಆದರೆ, ವಿಲೀನ ಪ್ರಕ್ರಿಯೆಗೆ ಕೇವಲ ಸರ್ಕಾರಿ ಬ್ಯಾಂಕ್‌ಗಳನ್ನೇ ಗುರಿ ಮಾಡಿಕೊಂಡಿರುವುದರಿಂದ, ವಿಲೀನ ಕಾರ್ಯ ಮುಗಿದ ನಂತರ ಸಹವರ್ತಿ ಬ್ಯಾಂಕ್‌ ಸಿಬ್ಬಂದಿ ಒಂದು ಕಡೆ ಉದ್ಯೋಗ ಕಳೆದುಕೊಳ್ಳುವ, ಇನ್ನೊಂದು ಕಡೆ ಯಾವಾಗ ಯಾವ ಊರಿಗೆ ಹಾಕಿಬಿಡುತ್ತಾರೋ ಎಂಬ ಆತಂಕದಲ್ಲಿದ್ದಾರೆ. ಇದಕ್ಕೆ ಮುಖ್ಯ ಕಾರಣ ಎಂದರೆ ಈಗಾಗಲೇ ಸಹವರ್ತಿ ಬ್ಯಾಂಕ್‌ಗಳು ವಿಆರ್‌ಎಸ್‌ ಯೋಜನೆಯನ್ನು ಪ್ರಕಟ ಮಾಡಿರುವುದು ಸಿಬ್ಬಂದಿಯ ಎದೆ ಬಡಿತವನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಎಂಬುದು ಸುಳ್ಳಲ್ಲ.

ಎಲ್ಲಕ್ಕಿಂತ ನೋವಿನ ವಿಚಾರ ಎಂದರೆ ಕಪ್ಪುಹಣವನ್ನು ಹೊರತೆಗೆಯಲು ಪ್ರಧಾನಿ ಮತ್ತು ಸರ್ಕಾರ ಪ್ರಯತ್ನ ಮಾಡುತ್ತಿರುವಾಗ ಕೋಟಿ, ಕೋಟಿ ಅಕ್ರಮ ಹಣ ವರ್ಗಾವಣೆಯಲ್ಲಿ ಬ್ಯಾಂಕ್‌ ಸಿಬ್ಬಂದಿಯೇ ಸಿಕ್ಕಿಬೀಳುತ್ತಿರುವುದು. ಕೆಲವರು ಮಾಡುವ ತಪ್ಪಿಗೆ ಜನರು ಬ್ಯಾಂಕಿಂಗ್‌ ವ್ಯವಸ್ಥೆ ಮೇಲೆ ಇಟ್ಟ ನಂಬಿಕೆಯನ್ನೇ ಕಳೆದುಕೊಳ್ಳುವಂತಾಗಿದೆ. ಬ್ಯಾಂಕಿಂಗ್‌ ಎಂಬುದು ನಂಬಿಕೆಯ ಮೇಲೆ ನಿಂತಿರುವ ವ್ಯವಹಾರವಾಗಿರುವುದರಿಂದ ಜನರು ನಂಬಿಕೆ ಕಳೆದುಕೊಳ್ಳದಂತೆ ಕೆಲಸ ಮಾಡುವ ಜವಾಬ್ದಾರಿ ಸಿಬ್ಬಂದಿಯ ಮೇಲಿದೆ.

- ಎ.ಬಿ. ಶೆಟ್ಟಿ, ಬ್ಯಾಂಕಿಂಗ್‌ ತಜ್ಞ ; abshetty202@yahoo.com 

Trending videos

Back to Top