CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸದ್ಬಳಕೆ ಮಾಡಲೆಂದು ಕೊಟ್ಟರೂ ದುರ್ಬಳಕೆಯೇ ಹೆಚ್ಚು!

ವಿವೇಕಾನಂದರು ಯುವಶಕ್ತಿಯ ಮೇಲೆ ಅಪಾರ ಭರವಸೆಯಿಟ್ಟಿದ್ದರು. ಆದರೆ ಇಂದು ಅಂತಹ ಯುವಶಕ್ತಿಯೇ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಡುವ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕದಡುವ 'ವಿಕೃತಾನಂದ'ರೆನಿಸುತ್ತಿರುವುದೊಂದು ವಿಪರ್ಯಾಸ.

ಇದೇ ಫೆಬ್ರವರಿ 7ರಿಂದ 28ರವರೆಗೆ ದಡಾರ ಮತ್ತು ರುಬೆಲ್ಲಾ ಲಸಿಕೆ ಅಭಿಯಾನದಡಿ 9 ತಿಂಗಳಿಂದ 15 ವರ್ಷದೊಳಗಣ ಮಕ್ಕಳಿಗೆ ಎಂಆರ್‌ ಲಸಿಕೆ ನೀಡುವ ಕಾರ್ಯಕ್ರಮ. ಆದರೆ ಕೆಲವು ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಲು ಹಿಂದೇಟು ಹಾಕಿದರು. ಸಾಮಾಜಿಕ ಜಾಲತಾಣಗಳಲ್ಲಿ ಲಸಿಕೆ ವಿರುದ್ಧ ಹರಿದಾಡಿದ ಅಪಪ್ರಚಾರವೇ ಇದಕ್ಕೆ ಕಾರಣ.

ಅಸಹನೆ ಹೊರಹಾಕುವವರೇ ಅಧಿಕ
ಸಂವಿಧಾನವೇ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕೊಡಮಾಡಿದೆ. ಆದರೆ ಈ ದಿನಗಳಲ್ಲಿ ಅನಿಸಿಕೆ-ಅಭಿಮತಗಳಿಗಿಂತ ಅಸಹನೆ- ಆಕ್ರೋಶಗಳನ್ನು ಹೊರಹಾಕುವವರೇ ಹೆಚ್ಚು. ಸಾರ್ವಜನಿಕ ಶೌಚಾಲಯದ ಗೋಡೆಯಾದರೂ ಸರಿ. ಹಳೆಯ ಕಟ್ಟಡದ ಗೋಡೆಯಾದರೂ ಸರಿ. ಆಗದವರ ವಿರುದ್ಧ ಧಿಕ್ಕಾರ ಇಲ್ಲವೇ ಅಸಭ್ಯ ಬರೆಹ ಗೀಚಿಬಿಡುತ್ತಾರೆ. ರಾಜಕಾರಣಿಗಳಿಗಾದರೆ ಈ ಉದ್ದೇಶಕ್ಕಾಗಿ ಸಭೆ-ಸಮಾರಂಭಗಳಿರುತ್ತವೆ. ಇಲ್ಲವೇ ಯಾವುದಾದರೂ ಚುನಾವಣಾ ಪ್ರಚಾರ ಸಭೆಯಿರುತ್ತದೆ. ಅಲ್ಲಿ ಅವರು ನಾಲಿಗೆ ಹರಿಬಿಡುತ್ತಾರೆ. ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ ಇಲ್ಲವೇ ಚಪಲ ತೀರಿಸಿಕೊಳ್ಳುತ್ತಾರೆ. ಇಂಥ ಹೇಳಿಕೆ ನೀಡಿದರೆ ಪ್ರಶ್ನಿಸುವ ನೈತಿಕತೆ ಯಾರಿಗೂ ಇದ್ದಂತಿಲ್ಲ. ನಾಲಿಗೆ ಹರಿಬಿಡುವಲ್ಲಿ ಯಾವ ಪಕ್ಷದವರೂ ಕಡಿಮೆಯಿಲ್ಲ.

ಜಾಲತಾಣಗಳಲ್ಲೂ ಅಸಂಬದ್ಧ ಹೇಳಿಕೆಗಳು
ವಿಜ್ಞಾನ-ತಂತ್ರಜ್ಞಾನಗಳ ಬೆಳವಣಿಗೆ ನಾಲಿಗೆ ಹರಿಬಿಡುವ ವರಿಗೆ ಹೊಸತೊಂದು ವೇದಿಕೆಯೊದಗಿಸಿದೆ. ವಾಟ್ಸಪ್‌, ಫೇಸ್‌ಬುಕ್‌, ಟ್ವಿಟರ್‌ ಮುಂತಾದ ಸಾಮಾಜಿಕ ಜಾಲತಾಣಗಳಿವೆ. ಅನಿಸಿದ್ದನ್ನು ಜಾಲತಾಣಗಳಲ್ಲಿ ಹರಿಬಿಡುತ್ತಾರೆ. ಹರಿಬಿಡುವಾಗ ಪರಿಣಾಮದ ಅರಿವಿರುವುದಿಲ್ಲ. ಅಸಂಬದ್ಧ ಹೇಳಿಕೆಯಾಗಿದ್ದಲ್ಲಿ ಒಂದಷ್ಟು ಸುದ್ದಿಯಾಗುತ್ತದೆ. ಸಾಮಾಜಿಕ ಶಾಂತಿ ಕದಡುತ್ತದೆ. ಜಾಲತಾಣಗಳಲ್ಲಿ ಹರಿಬಿಟ್ಟ ಕಿಡಿನುಡಿ ಜಾಗತಿಕ ಮಟ್ಟದಲ್ಲಿ ಕಿಡಿಹಚ್ಚಿಬಿಡುವ ಸಾಧ್ಯತೆಯಿದೆ ಎಂಬುದನ್ನು ಮರೆಯುತ್ತಾರೆ.

ಬದುಕಿಗೆ ವರದಾನವಾಗಬಲ್ಲ ತಂತ್ರಜ್ಞಾನ
ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಲ್ಲಾದ ಪ್ರಗತಿ ಹೆಮ್ಮೆ ಪಡುವಂಥದ್ದು. ಅದರಲ್ಲೂ ಮೊಬೈಲ್‌ ಸಮಸ್ತ ವಿಶ್ವವನ್ನೇ ನಮ್ಮ ಮುಷ್ಟಿಯೊಳಕ್ಕೆ ತಂದಿದೆ. ನೋಟು ನಿಷೇಧದ ಅನಂತರದ ದಿನಗಳಲ್ಲಿ ಬಂದ ಯುಪಿಐ, ಭೀಮ್‌ ಆ್ಯಪ್‌ ಮುಂತಾದ ಮೊಬೈಲ್‌ ಆ್ಯಪ್‌ಗ್ಳಂತೂ ಹಣಕಾಸು ವ್ಯವಹಾರಕ್ಕೆ ಹೊಸ ಆಯಾಮ ತಂದುಕೊಟ್ಟವು. ಸಮರ್ಪಕವಾಗಿ ಬಳಸಿಕೊಂಡಲ್ಲಿ ಎಲ್ಲವೂ ಬದುಕಿಗೆ ವರದಾನವೇ ಸರಿ. ಶಾಲಾ ಬಾಲಕನೊಬ್ಬ ರಾಜ್ಯದ ಗೃಹಸಚಿವರಿಗೆ ಮೊಬೈಲ್‌ ಮೆಸೇಜ್‌ ಮಾಡಿ ಶಿಕ್ಷಕರ ವರ್ಗಾವಣೆಯನ್ನೇ ರದ್ದು ಮಾಡಿಸಿಕೊಂಡ ಘಟನೆಗೆ ಸಮಸ್ತ ರಾಜ್ಯ ಸಾಕ್ಷಿಯಾಗಿದೆ. ಮೋದಿ ಸಂಪುಟದಲ್ಲಿ ಟ್ವಿಟರ್‌ ಬಳಸಿ ಜನ ಸಮಸ್ಯೆಯನ್ನು ಅರಿತು ಸ್ಪಂದಿಸುವ ಸಚಿವರೂ ಇದ್ದಾರೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಟ್ವಿಟರ್‌ ಮೂಲಕ ಸತತ ಜನರ ಸಂಪರ್ಕದಲ್ಲಿದ್ದು ಚಿಂತನೆ ನಡೆಸುವ ಬಗ್ಗೆ ಫಾರಿನ್‌ ಪಾಲಿಸಿ ನಿಯತಕಾಲಿಕ ಮೆಚ್ಚುಗೆ ವ್ಯಕ್ತಪಡಿಸಿದ್ದು ಪತ್ರಿಕೆಗಳಲ್ಲಿ ವರದಿಯಾಗಿದೆ. ಅವರ ಕಾರ್ಯವೈಖರಿಯನ್ನು ನೂತನ ಟ್ವಿಟರ್‌ ರಾಜತಾಂತ್ರಿಕತೆ ಎಂದೇ ಶ್ಲಾಘಿಸಲಾಗಿದೆ. 

ದುರ್ಬಳಕೆ ಮಾಡುವವರೇ ಹೆಚ್ಚು
ಸದ್ಬಳಕೆ ಮಾಡಲೆಂದು ಕೊಟ್ಟರೂ ನಮ್ಮಲ್ಲಿ ದುರ್ಬಳಕೆ ಮಾಡುವವರೇ ಹೆಚ್ಚು. ಡಿಜಿಟಲ್‌ ಇಂಡಿಯಾದ ಕನಸು ಹೊತ್ತ ಪ್ರಧಾನಿ ಮೋದಿಯವರು ಇಂಟರ್ನೆಟ್‌ ಬಳಕೆಗೆ ಅನುಕೂಲವಾಗಲೆಂದು ಪ್ರಮುಖ ರೈಲ್ವೇ ನಿಲ್ದಾಣಗಳಲ್ಲಿ ಉಚಿತ ವೈಫೈಗೆ ಅನುವು ಮಾಡಿಕೊಟ್ಟರು. ದುರಂತವೆಂದರೆ ಅದನ್ನು ಬಳಸಿ ಅಶ್ಲೀಲ ವೀಡಿಯೊ ಡೌನ್‌ಲೋಡ್‌ ಮಾಡಿಕೊಂಡವರೇ ಅಧಿಕ. ಅಷ್ಟೇಕೆ? ಮೊಬೈಲ್‌ ಕರೆನ್ಸಿ ರೀಚಾರ್ಜ್‌ ಮಾಡಿಸಿಕೊಳ್ಳಲು ಬರುವ ಹೆಣ್ಣುಮಕ್ಕಳ ಮೊಬೈಲ್‌ ನಂಬರನ್ನು ಕಿಡಿಗೇಡಿ ಹುಡುಗರಿಗೆ ಮಾರಾಟ ಮಾಡಿ ಹಣ ಮಾಡುವ ಮೊಬೈಲ್‌ ರೀಚಾರ್ಜ್‌ ಅಂಗಡಿಗಳ ಬೃಹತ್‌ ಜಾಲ ಉತ್ತರ ಪ್ರದೇಶದಲ್ಲಿ ಪತ್ತೆಯಾಗಿದೆ. ಸುಂದರ ಯುವತಿಯರ ಮೊಬೈಲ್‌ ನಂಬರನ್ನು ರೂ. 500ರವರೆಗೆ ಮಾರಾಟ ಮಾಡಲಾಗುತ್ತದೆ. ಅಶ್ಲೀಲ ಸಂಭಾಷಣೆ, ಎಸ್ಸೆಮ್ಮೆಸ್ಸು ಕಳುಹಲು ವಿಕೃತಾನಂದರಿಗೆ ಅನುವು ಮಾಡಿ ಕೊಡಲಾಗುತ್ತದೆ ಎಂದು ಆಂಗ್ಲ ದೈನಿಕ ವರದಿ ಮಾಡಿದೆ.

ವಿಕೃತ ಮನಸ್ಕರು
ವರದಾನವಾಗಬಲ್ಲ ಸಾಧನವೊಂದು ಶಾಪವಾಗಿ ಪರಿಣಮಿಸಿ ತೆಂದಾದಲ್ಲಿ ಅದರ ದುರ್ಬಳಕೆಯೇ ಕಾರಣ. ದುರುಪಯೋಗ ಮಾಡುವವರ ವಿಕೃತ ಮನಸ್ಸೇ ಕಾರಣ. ಎಷ್ಟೇ ಅಂದದ ಚಿತ್ರವಾದರೂ ಅಂದಗೆಡಿಸಿ ಆನಂದಿಸುವವರೂ ಇದ್ದಾರೆ. ಆ ಉದ್ದೇಶಕ್ಕಾಗಿಯೇ ಕೆಲವೊಂದು ಮೊಬೈಲ್‌ ಆ್ಯಪ್‌ಗ್ಳನ್ನು ಸಿದ್ಧ ಪಡಿಸಿರುವುದು ವಿಕೃತ ಮನಸ್ಸಿಗೆ ಸಾಕ್ಷಿ. ತಾನು ಕೆಟ್ಟು ವನವನ್ನೂ ಕೆಡಿಸುವ ಕೋತಿಗಳಂತೆ ಈ ವಿಕೃತ ಮನಸ್ಕರು. ನೋಟಿನ ಮೇಲಿನ ಮಹಾತ್ಮನ ಹಣೆಯನ್ನಾದರೂ ಬಿಡುವವರಲ್ಲ ಇವರು. ಜುಟ್ಟು ತೊಡಿಸಿ ಸೀರೆ ಉಡಿಸಿ ವಿರೂಪಗೊಳಿಸಿ ವಾಟ್ಸಪ್‌ನಲ್ಲೋ ಫೇಸ್‌ಬುಕ್ಕಿನಲ್ಲೋ ಹಾಕಿಬಿಟ್ಟು ಬೇರೆಯವರಿಂದ ಬರುವ ಲೈಕ್‌ ಎಣಿಸಿ ಖುಶಿ ಪಡುವ ಇಂಥವರ ಬಗ್ಗೆ ಏನೆನ್ನಲಿ? ಯಾವುದೇ ಸಾಧನ ಕಂಡುಹುಡುಕುವ ವಿಜ್ಞಾನಿಗಳಲ್ಲಿ ವಿಕೃತ ಮನಸ್ಸಿರದು. ಮೊಬೈಲ್‌ ಕಂಡುಹಿಡಿದ ಮಾರ್ಟಿನ್‌ ಕೂಪರ್‌ ಮುಂದೆ ಅದು ಮಕ್ಕಳ ಕೈಗೂ ಬರುವ ಆಟಿಕೆಯಂತಾಗಬಹುದೆಂದು ಅಂದು ಕೊಂಡಿರಲಾರ. ಅಣುಶಕ್ತಿ ಕಂಡುಹಿಡಿದಾತ ಮುಂದೊಂದು ದಿನ ಅದು ಅಣು ಬಾಂಬಾಗಿ ಹಿರೋಶಿಮಾ-ನಾಗಸಾಕಿ ನಗರಗಳನ್ನು ಬಲಿ ತೆಗೆದುಬಿಡಬಹುದು ಎಂದು ಕನಸಿನಲ್ಲೂ ಊಹಿಸಿರಲಿಲ್ಲವಂತೆ. ದುರ್ಬಳಕೆಗೆ ಯಾರು ಹೊಣೆ?

ಡಿಜಿಟಲ್‌ ಇಂಡಿಯಾಕ್ಕೂ ಆತಂಕ ತಪ್ಪಿದ್ದಲ್ಲ
ಹುಡುಗಾಟಕ್ಕೋ ಕಿಡಿಗೇಡಿತನಕ್ಕೋ ತಂತ್ರಜ್ಞಾನದ ದುರ್ಬಳಕೆ ಯಾದರೆ ಸಾಮಾಜಿಕ ಹಿತಕ್ಕೆ ಧಕ್ಕೆಯಾಗುತ್ತದೆ. ಅಸಂಬದ್ಧ ಹೇಳಿಕೆ ಗಳನ್ನೋ ವಿಕೃತ ಚಿತ್ರಗಳನ್ನೋ ಜಾಲತಾಣಗಳಲ್ಲಿ ಹರಿಬಿಟ್ಟಾಗ ಅದು ಯಾರದೋ ಭಾವನೆಗಳನ್ನು ನೋಯಿಸಿಬಿಡುತ್ತದೆ. ಇಲ್ಲವೇ ಒಂದು ವರ್ಗದ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಬಿಡುತ್ತದೆ. ಪ್ರತಿಭಟನೆ ನಡೆಯುತ್ತದೆ. ಇಂತಹ ವಿಕೃತ ಮನಸ್ಕರಿಂದ ಡಿಜಿಟಲ್‌ ಇಂಡಿಯಾ ವ್ಯವಸ್ಥೆಗೂ ಆತಂಕ ತಪ್ಪಿದ್ದಲ್ಲ. ಅಂಥವರಿಂದ ಬ್ಯಾಂಕ್‌ ಅಕೌಂಟ್‌ ಹ್ಯಾಕ್‌ ಆಗುವ ಸಾಧ್ಯತೆಯಿದೆ. ಸೈಬರ್‌ ಅಪರಾಧ ಹೆಚ್ಚುವ ಅಪಾಯವಿದೆ. ನೋಟು ನಿಷೇಧ ಜಾರಿಗೊಂಡು ಮೂರು ತಿಂಗಳಾಗಿಲ್ಲ. ಅಷ್ಟರಲ್ಲೇ ವಿಕೃತ ಮನಸ್ಕರಾದ ಪಾಕ್‌ ದಂಧೆಕೋರರು 2000 ರೂ. ನಕಲಿ ನೋಟುಗಳನ್ನು ಮುದ್ರಿಸಿ ಬಾಂಗ್ಲಾ ಗಡಿ ಮೂಲಕ ಭಾರತದೊಳಗೆ ಹರಿಬಿಟ್ಟಾಗಿದೆ. ವಿಕೃತ ಮನಸ್ಸುಳ್ಳವರು ಎಂತಹ ಉದ್ದೇಶವನ್ನಾದರೂ ಹಾಳುಗೆಡಹಿಬಿಡುತ್ತಾರೆ ಎಂಬುದಕ್ಕೆ ಇತ್ತೀಚೆಗೆ ಮದರಾಸಿನಲ್ಲಿ ಜಲ್ಲಿಕಟ್ಟು ಪರ ನಡೆದ ಹೋರಾಟವೇ ಸಾಕ್ಷಿ. ಒಂದು ಹಂತದವರೆಗೆ ಆರೋಗ್ಯಕರವಾಗಿ ನಡೆಯುತ್ತಿದ್ದ ಹೋರಾಟ ಕಿಡಿಗೇಡಿಗಳ ನುಸುಳುವಿಕೆಯಿಂದಾಗಿ ಕಿಡಿಹಚ್ಚಿ ಸಾಮಾಜಿಕ ಶಾಂತಿ ಕದಡಿತು. ವಿಘ್ನಸಂತೋಷಿಗಳೆನಿಸಿದ ಇಂಥವರ ಬಗ್ಗೆ ಕಣ್ಣಿಡಬೇಕಿದೆ. ಸಾಮಾಜಿಕ ಶಾಂತಿ ಕದಡುವ ವಿಕೃತ ಮನಸ್ಕರ ಬಗ್ಗೆ ಎಚ್ಚರವಹಿಸಬೇಕಿದೆ. ಕಾನೂನು ಬಿಗಿಗೊಳ್ಳಬೇಕಿದೆ.

- ರಾಂ ಎಲ್ಲಂಗಳ

Back to Top