CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಇರಲಿ ಜೀವನ ಶಿಕ್ಷಣ ಮತ್ತು ಶಾಲಾ ಶಿಕ್ಷಣದ ನಡುವೆ ಸಮನ್ವಯ 

ನಮ್ಮ ಸಮಾಜ ಪರೀಕ್ಷೆ ಮತ್ತು ಅಂಕಗಳಿಗೆ ಅತಿ ಹೆಚ್ಚು ಮಹತ್ವವನ್ನು ಕೊಡುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಗಳಿಸುವ ಪೈಪೋಟಿಯಲ್ಲಿ ಉಳಿದೆಲ್ಲವನ್ನೂ ನಿರ್ಲಕ್ಷಿಸುವಂತಹ ವಾತಾವರಣ ಉಂಟಾಗಿದೆ. ನಿಜಕ್ಕೂ ನಮಗೆ ಬೇಕಾದದ್ದು ಜೀವನ ಶಿಕ್ಷಣ ಮತ್ತು ಶಾಲಾ ಶಿಕ್ಷಣದ ನಡುವೆ ಸಮನ್ವಯ. 

ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಿವೆ. ಇನ್ನೇನು ಕೆಲವೇ ದಿನಗಳಲ್ಲಿ ಇನ್ನೊಂದು ಮುಖ್ಯ ಪರೀಕ್ಷೆಯಾಗಿರುವ ಎಸ್ಸೆಸ್ಸೆಲ್ಸಿ ಕೂಡ ಆರಂಭವಾಗುತ್ತದೆ. ಮೊದಲ ಪಿಯು ಪರೀಕ್ಷೆಗಳು ಮುಕ್ತಾಯ ಕಂಡಿವೆ. ಅಂದರೆ ಇದು ಪರೀಕ್ಷಾ ಪರ್ವ. ಅದರಲ್ಲೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳು ಭವಿಷ್ಯದ ದಿಕ್ಕನ್ನು ಬದಲಾಯಿಸುವ ಸಾಮರ್ಥ್ಯವುಳ್ಳ ಪರೀಕ್ಷೆಗಳು. 

ವಿದ್ಯಾರ್ಥಿಗಳಿಗೆ ಪರೀಕ್ಷೆ ಹೇಗಾಗುತ್ತದೋ ಎಂಬ ಆತಂಕ ಒಂದು ಕಡೆಯಾದರೆ ಪರೀಕ್ಷೆ, ಫ‌ಲಿತಾಂಶದ ಅನಂತರ ಮುಂದೇನು ಎಂಬ ಬೃಹದಾಕಾರವಾದ ಪ್ರಶ್ನೆ ಇನ್ನೊಂದು ಕಡೆ. ಹತ್ತನೇ ತರಗತಿ ಮುಗಿದ ಅನಂತರ ವಿಜ್ಞಾನವೋ ವಾಣಿಜ್ಯವೋ ಅಥವಾ ಕಲಾ ವಿಭಾಗವೋ ಎಂಬ ಗೊಂದಲಕ್ಕಿಂತ ಪಿಯುಸಿ ಮುಗಿದ ಅನಂತರ ಇರುವ ಅಸಂಖ್ಯ ಆಯ್ಕೆಗಳಲ್ಲಿ ಒಂದನ್ನು ಆರಿಸುವುದೇ ಬಹಳ ಕಷ್ಟವಾದದ್ದು. ಈಗಂತೂ ಹಣ ಸಂಪಾದನೆಯೇ ವಿದ್ಯಾಭ್ಯಾಸದ ಪ್ರಮುಖ ಉದ್ದೇಶವಾಗಿದೆ. ಅದು ನಿಜವೇ ಆದರೂ ಅದನ್ನು ತಪ್ಪು ಎಂದೂ ಹೇಳುವಂತಿಲ್ಲ.

ಇವೆ ನೂರಾರು ಆಯ್ಕೆಗಳು
ಇತ್ತೀಚೆಗೆ ಕೆನೆಪದರವನ್ನು ಹೊರತುಪಡಿಸಿ ಹೆಚ್ಚಿನ ವಿದ್ಯಾರ್ಥಿಗಳ ಆಸಕ್ತಿಯ ಕ್ಷೇತ್ರ ಯಾವುದೆಂದೇ  ತಿಳಿಯಲಾಗುತ್ತಿಲ್ಲ. ಒಂದು ಇಂಜಿನಿಯರಿಂಗ್‌ ಸೀಟ್‌ ರಿಸರ್ವ್‌ ಮಾಡಿಟ್ಟುಕೊಂಡು ಕೊನೆ ಸುತ್ತಿನ ತನಕ ಮೆಡಿಕಲ್‌ ಸೀಟ್‌ ಸಿಗುತ್ತದೋ ಎಂದು ನೋಡುವುದು ಅಥವಾ ಇಂಜಿನಿಯರಿಂಗ್‌ನ ಮೊದಲ ಸುತ್ತಿನಲ್ಲಿ ಯಾವುದೋ ಬ್ರಾಂಚ್‌ ಆಯ್ಕೆ ಮಾಡಿ ಕೊನೆಯ ಸುತ್ತಿನಲ್ಲಿ ಅದಕ್ಕಿಂತ ಉತ್ತಮವಾದದ್ದು ಸಿಕ್ಕಿದರೆ ಅದಕ್ಕೆ ಹಾರುವುದು. ವಾಣಿಜ್ಯ ವಿದ್ಯಾರ್ಥಿಗಳಾದರೆ ಗೆಳೆಯ ಗೆಳತಿಯರಲ್ಲಿ ಒಬ್ಬರು ಬರೆಯುತ್ತಾರೆಂದು ಮತ್ತೂಬ್ಬರು, ಹೀಗೆ ಎಲ್ಲರೂ ಸಿಪಿಟಿ ಬರೆಯುವುದು, ಕೇಳಿದರೆ ಪ್ರತಿಯೊಬ್ಬರೂ ತಾನು ಸಿಎ ಮಾಡುತ್ತೇನೆ ಎಂದು ಹೇಳುವುದು. ಹೀಗೆ ಎಲ್ಲ ಕಡೆ ಗೊಂದಲವೋ ಗೊಂದಲ.

ಇದಕ್ಕೆ ಸರಳ ಪರಿಹಾರವೆಂದರೆ, ಭವಿಷ್ಯದ ಬಗ್ಗೆ ಹೆಚ್ಚು ಯೋಚಿಸದೆ ಪರೀಕ್ಷೆಗೆ ಕಷ್ಟಪಟ್ಟು, ಇಷ್ಟಪಟ್ಟು ಓದುವುದು. ಮುಂದೆ ಬಯಸಿದ ವಿಭಾಗ ಸಿಕ್ಕಿದರೆ ಸರಿ, ಇಲ್ಲದಿದ್ದರೆ ಯಾವ ಕೋರ್ಸ್‌ಗೆ ಸೇರುತ್ತೀರೋ ಅದನ್ನೇ ಮನಸ್ಸಿಟ್ಟು  ಕಲಿಯುವುದು. ಕಲಿತದ್ದು ಎಂದು ವ್ಯರ್ಥವಾಗುವುದಿಲ್ಲ. ಈಗ  ಇಂಜಿಯರಿಂಗ್‌ ಕಲಿತು ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿರುವ ಅಥವಾ ಸಿಎ ಮಾಡಿ ವ್ಯಾಪಾರ ಮಾಡುತ್ತಿರುವ ಅಥವಾ ಎಂಎಸ್‌ಸಿ ಮಾಡಿ ವ್ಯವಸಾಯದಲ್ಲಿ ತೊಡಗಿರುವ ಎಷ್ಟು ಜನರಿಲ್ಲ? ಆದ್ದರಿಂದ ಕಲಿಕೆಯೇ ಬೇರೆ, ಜೀವನವೇ ಬೇರೆ. ಜೀವನದ ಮುಖ್ಯ ಉದ್ದೇಶವೇ ಯಾರಿಗೂ ತೊಂದರೆ ಕೊಡದೆ ನಾಲ್ಕು ಜನರಿಗೆ ನಮ್ಮಿಂದ ಸಾಧ್ಯವಾದಷ್ಟು ಉಪಕಾರ ಮಾಡಿ ನಮ್ಮ ಪಾಡಿಗೆ ನಾವಿರುವುದು. ಉನ್ನತ ನೌಕರಿ ಸಂಪಾದನೆ, ಗರಿಷ್ಠ ವೇತನ ಪಡೆದು ಸಂಪಾದನೆ ಅಗತ್ಯವಾಗಿ ಬೇಕು. ಜೀವನ ನಡೆಸಲು ಹಣ ಅಗತ್ಯ. ಆದರೆ ಅದೇ ಎಲ್ಲವೂ ಅಲ್ಲ ಎಂಬ ಎಚ್ಚರ ಶಾಲಾಕಾಲೇಜು ಹಂತದಿಂದಲೇ ಮನಸ್ಸಿನಲ್ಲಿ ಮೂಡಬೇಕು. ಶಾಲಾಕಾಲೇಜಿನಲ್ಲಿ ಕಲಿತ ಪಾಠಕ್ಕಿಂತ ಜೀವನದ ಅನುಭವ ಕಲಿಸುವ ಪಾಠ ಅತಿ ಶ್ರೇಷ್ಠ. ಪಿಯುಸಿಯ ಫ‌ಲಿತಾಂಶ ಜೀವನದ ಅಂತ್ಯವಲ್ಲ, ಅದು ಆರಂಭ.

ಸಾಮಾನ್ಯ ಜ್ಞಾನವಿಹೀನ ಮಕ್ಕಳು
ಒಮ್ಮೆ ನಾನು ಕಾಲೇಜು ವಿದ್ಯಾರ್ಥಿಗಳ ಜತೆಯಲ್ಲಿ¨ªಾಗ ಅÇÉೇ ಇದ್ದ 1000 ಲೀಟರ್‌ ಸಾಮರ್ಥ್ಯದ ನೀರಿನ ಟ್ಯಾಂಕಿ ತೋರಿಸಿ ಅದರಲ್ಲಿ ಎಷ್ಟು ನೀರು ಹಿಡಿಯಬಹುದು? ಎಂದು ಅವರಲ್ಲಿ ಪ್ರಶ್ನಿಸಿದೆ. ಒಬ್ಟಾಕೆ 10 ಲೀಟರ್‌, ಮತ್ತೂಬ್ಬಳು 25 ಲೀಟರ್‌, ಮಗದೊಬ್ಬಳು 50 ಲೀಟರ್‌ ಎಂದರೆ, ಉಳಿದವರು ಸ್ಟೈಲಾಗಿ "ನೋ ಐಡಿಯಾ ಮ್ಯಾಡಮ್‌' ಅಂದುಬಿಟ್ಟರು. ಒಂದು ಸಾವಿರ ಲೀಟರ್‌ ಹಿಡಿಸುವ ಟ್ಯಾಂಕಿಯ ಗಾತ್ರ ನೋಡಿ ಕನಿಷ್ಟ ಅದಕ್ಕೆ ಹತ್ತಿರವಿರುವ ಉತ್ತರವನ್ನಾದರೂ ನೀಡಬಲ್ಲಷ್ಟು ಸಾಮಾನ್ಯ ಜ್ಞಾನ ಈಗಿನ ವಿದ್ಯಾರ್ಥಿಗಳಲ್ಲಿ ಇಲ್ಲ! ನಮಗೆ ಬೇಕಿರುವುದು ಇಂತಹ ಶಿಕ್ಷಣವೇ? ಪುಸ್ತಕದ ವಿದ್ಯೆ ಮತ್ತು ದಿನನಿತ್ಯದ ವಿದ್ಯೆ ಜತೆಜತೆಯಾಗಿ ನೀಡಲು ಸಾಧ್ಯವಿಲ್ಲವೇ? ಈಗಿನ ಪದವೀಧರರಿಗೆ ಸರಳವಾದ ಒಂದು ಅರ್ಜಿ ಬರೆಯಲೂ ಬರುವುದಿಲ್ಲ. ಪ್ರಾಪಂಚಿಕ ಮಾಹಿತಿ ಕಡಿಮೆ. ಇತ್ತೀಚೆಗೆ ಬಸ್‌ನಲ್ಲಿ ಪಕ್ಕದಲ್ಲಿ ಕುಳಿತಿದ್ದ ಹುಡುಗಿಯೊಡನೆ ಹೀಗೆ ಮಾತನಾಡುತ್ತ "ಜಿಎಸ್‌ಟಿ ಎಂದರೇನು?' ಎಂದು ಕೇಳಿದಾಗ "ಗೊತ್ತಿಲ್ಲ' ಎಂದಳು. "ಏನು ಕಲಿಯುತ್ತಿದ್ದಿಯಾ?' ಎಂದು ಪ್ರಶ್ನಿಸಿದರೆ, "ಎಂಕಾಮ್‌' ಎನ್ನಬೇಕೆ!

ಈಗಿನ ವಿದ್ಯಾರ್ಥಿಗಳಲ್ಲಿ ಪ್ರತಿದಿನ ಪತ್ರಿಕೆ ಓದುವವರು ವಿರಳ. ಕೈಯಲ್ಲಿ ಮೊಬೈಲ್‌ಫೋನ್‌ ಇರುವಾಗ ಪತ್ರಿಕೆ ಹಿಡಿದುಕೊಳ್ಳುವುದು ಹೇಗೆ? ಮೊಬೈಲ್‌ ಫೋನ್‌ ಆದರೂ ಸರಿಯೇ, ಸಾಮಾನ್ಯಜ್ಞಾನ ವೃದ್ಧಿಸುವ, ಮಾಹಿತಿ ಒದಗಿಸುವ ಯಾವುದಾದರೂ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆಯೇ ಎಂದರೆ ಅದೂ ಇಲ್ಲ. ಯಾವುದೇ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದಿರುವ ವಿದ್ಯಾರ್ಥಿಗಳೂ ಕಡಿಮೆ. ಈಗಿನ ಶಿಕ್ಷಣ ಮಕ್ಕಳನ್ನು ನಾಲ್ಕು ಗೋಡೆಯ ನಡುವೆ ಬಂಧಿಸಿಡುತ್ತಿದೆಯೆ ಎಂಬ ಅನುಮಾನ ಕಾಡದಿರುವುದಿಲ್ಲ. ಇದಕ್ಕೆ ಪರಿಹಾರವಿಲ್ಲವೇನು? ಖಂಡಿತ ಇದೆ. ಪಾಠದ ಜತೆಗೆ ಪಾಠೇತರ ಚಟುವಟಿಕೆಗಳಿಗೂ ಮಹತ್ವ ನೀಡುವುದು, ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು,ಜನರೊಡನೆ ಬೆರೆಯುವುದು, ಹೊಸ ಪರಿಚಯ ಮಾಡಿಕೊಳ್ಳುವುದು, ಯಾವಾಗಲೂ ಹೊಸತರ ಅನ್ವೇಷಣೆಯಲ್ಲಿರುವುದು. "ಇದು ನಮಗೆ ಯಾಕೆ ಬೇಕು, ಸಿಲೆಬಸ್‌ನಲ್ಲಿ ಇಲ್ಲವಲ್ಲ' ಎಂಬ ಯೋಚನೆಯಿಂದ ಹೊರಬಂದು ಯಾವುದೇ ವಿಷಯವಿರಲಿ, ಕಲಿತದ್ದು ಎಂದು ವ್ಯರ್ಥವಾಗುವುದಿಲ್ಲ ಎಂಬ ಮನೋಭಾವನೆಯೊಂದಿಗೆ ಮುಂದುವರಿಯುವುದು ಮಕ್ಕಳಿಗೆ ಅಗತ್ಯ.

ಅಗ್ನಿ ಪರೀಕ್ಷೆಯಲ್ಲ
ಆದರೆ ಈಗಿನ ಶಿಕ್ಷಣ ಪದ್ಧತಿ ಪರೀಕ್ಷೆಗಳಿಗೆ ಇನ್ನಿಲ್ಲದಷ್ಟು ಮಹತ್ವವನ್ನು ಕೊಡುತ್ತಿವೆ. ಮಾಧ್ಯಮಗಳೂ ಈ ವಿಷಯದಲ್ಲಿ ಸ್ಪರ್ಧೆಗೆ ನಿಂತಿವೆ. ಪರೀಕ್ಷೆಗಳಿಗೆ ಅನಗತ್ಯ ಪ್ರಚಾರ ಕೊಡುತ್ತಿವೆ. ಈಗಂತೂ ಮನೆಯಲ್ಲಿ 10 ಅಥವಾ 12ರ ಪರೀಕ್ಷೆ ಬರೆಯುವ ಮಕ್ಕಳಿದ್ದರೆ ಮನೆಯೊಳಗೆ ಕರ್ಫ್ಯೂ ವಿಧಿಸಿದಂಥ ವಾತಾವರಣ. ಯಾರೂ ಟಿವಿ ನೋಡುವಂತಿಲ್ಲ,ಮನೆಯೊಳಗೆ ನೆಂಟರಂತೂ ಬರುವಂತೆಯೇ ಇಲ್ಲ. ಇದು ಮಕ್ಕಳನ್ನು ಇನ್ನೂ ಭಯಭೀತರನ್ನಾಗಿಸುತ್ತದೆ. ಹಿಂದೊಮ್ಮೆ ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದಂತೆ ಮಕ್ಕಳು ಪರೀಕ್ಷೆಗೆ ಖುಶಿ ಖುಶಿಯಾಗಿ ಹೋಗಬೇಕು. ಆದರೆ ಇಂದು ಇಂತಹ ಸ್ಥಿತಿ ಇದೆಯೇ? ಪರೀಕ್ಷೆಗೆ ಬೆದರಿ ಪ್ರತಿಭಾವಂತ ಪಿಯು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಇತ್ತೀಚೆಗಷ್ಟೇ ಉಡುಪಿಯಿಂದ ಬಂದಿದೆ.  

ಒಮ್ಮೆ ಹೀಗೇ ಯೋಚನೆ ಮಾಡಿ: ಎಲ್ಲರೂ ಇಂಜಿನಿಯರ್‌, ಸಿಎ ಆದರೆ ಇತರ ಅನೇಕ ಕೆಲಸಗಳನ್ನು ಮಾಡುವವರು ಯಾರು? ಯಾವುದೇ ಕೆಲಸ ಸಣ್ಣದೂ ಅಲ್ಲ, ದೊಡ್ಡದೂ ಅಲ್ಲ. ಯಶಸ್ವೀ ಜೀವನಕ್ಕಿಂತ ತೃಪ್ತ ಜೀವನ ಉತ್ತಮ. ನನ್ನ ಗೆಳತಿಯೊಬ್ಬಳು ಅತ್ಯುನ್ನತ ವೇತನದ ನೌಕರಿಯನ್ನು ಇತ್ತೀಚೆಗೆ ತ್ಯಜಿಸಿ ಇಷ್ಟಪಟ್ಟು ಗೃಹಿಣಿಯಾಗಿದಾಳೆ.
 
ಮುಖ್ಯವಾಗಿ  ಬೇಕಾಗಿರುವುದು, ಎಷ್ಟೇ ದೊಡ್ಡ ಪರೀಕ್ಷೆಯಾದರೂ ಅದೇನೂ ಮಹಾ ಸಂಗತಿ ಅಲ್ಲ ಎಂಬಂತೆ ನಿರುಮ್ಮಳವಾಗಿ, ಧೈರ್ಯದಿಂದ ತಯಾರಾಗಿ ಎದುರಿಸುವ ಮಕ್ಕಳು ಮತ್ತು ಜೀವನ ಶಿಕ್ಷಣ ಮತ್ತು ಶಾಲಾ ಶಿಕ್ಷಣದ ನಡುವೆ ಸಮನ್ವಯ. 

- ಶಾಂತಲಾ ಹೆಗ್ಡೆ, ಸಾಲಿಗ್ರಾಮ

Back to Top