CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಹಾಡು ಹಕ್ಕಿಗೆ ಬೇಕೆ ಬಿರುದು ಸಮ್ಮಾನ?

ಹಾಡಿಕೆಯ ಸೂಕ್ಷ್ಮಗಳ ಬಿಟ್ಟು ದಾರಿ ತಪ್ಪಿದ ಚರ್ಚೆ: ಯಾವುದೇ ಕಲೆ, ಸಂಗೀತ, ಸಾಹಿತ್ಯ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಲ್ಲ. ಸಂಗೀತ ಧ್ವನಿ ಆಧಾರಿತವಾದುದು. ಅಲ್ಲಿ ಸಪಸ, ಸರಿಗಮ ಎನ್ನುವುದಕ್ಕೆ ಹೆಚ್ಚು ಒತ್ತು, ಪ್ರಾಶಸ್ತ್ಯ ವಿನಾ ಅದರಲ್ಲಿರುವ ಸಾಹಿತ್ಯಕ್ಕಲ್ಲ. ಸುಹಾನಾ ಏನನ್ನು ಹಾಡಿದ್ದಾರೆ ಅನ್ನುವುದಲ್ಲ; ಹೇಗೆ ಹಾಡಿದ್ದಾರೆ ಅನ್ನುವುದಷ್ಟೇ ಮುಖ್ಯ.

"ಎದೆ ತುಂಬಿ ಹಾಡಿದೆನು ಅಂದು ನಾನು ಮನವಿಟ್ಟು ಕೇಳಿದಿರಿ ಅಲ್ಲಿ ನೀವು'' ಹೀಗಂತ ಕವಿ ಡಾ| ಜಿ.ಎಸ್‌. ಶಿವರುದ್ರಪ್ಪ ಹೇಳುವಾಗ ಹೌದಲ್ವಾ ಅನ್ನಿಸುತ್ತದೆ. ಸಂಗೀತ ಎಂದರೆ ಹಾಗೆಯೇ; ಅದು ಮೋಡಿ, ಮೋಹಿಯಾಗಿಸುತ್ತದೆ. ಅಷ್ಟೂ ರಸಗಳನ್ನು ಸ್ಪುರಿಸುವ ತಾಕತ್ತು ಸಂಗೀತಕ್ಕಿದೆ. ಭಾವನೆಗಳ ಜತೆ ಆಟ ಚೆಲ್ಲಾಟವಾಡುವ ಸಾಮರ್ಥ್ಯ ಇದೆ. ಈ ಹಾಡಿನಲ್ಲಿ ಮುಂದುವರಿದು ಅವರು ಹೇಳಿದ್ದೇ ಚೆನ್ನ, "ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು, ಕೇಳುವಿರಿ ಸಾಕೆನಗೆ ಅದುವೆ ಬಹುಮಾನ. ಹಾಡು ಹಕ್ಕಿಗೆ ಬೇಕೆ ಬಿರುದು ಸಮ್ಮಾನ?'' ಇಂದಿನ ಪರಿಸ್ಥಿತಿಗೆ ಹಿಡಿದ ನೈಜ ಕನ್ನಡಿ. ಜತೆಗೆ ಅವರೆನ್ನುತ್ತಾರೆ, "ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಹಾಡುವುದು ಅನಿವಾರ್ಯ ಕರ್ಮ ನನಗೆ''. ಹಾಡುವ ದಾರಿಯ ಆಯ್ಕೆ ಮಾಡಿಯಾಗಿದೆ. ಅದರಲ್ಲಿ ಬಹುದೂರ ಸಾಗಿಯಾಗಿದೆ. ಇನ್ನು ಹಾಡು ವಿರಹಿಯಾಗಲು ಸಾಧ್ಯವಿಲ್ಲ. ಸಂಗೀತ ನಿರ್ಮೋಹಿಯಾಗಲು ಕಷ್ಟವಿದೆ. ಇದಿಷ್ಟೇ ಸಾಕು, ಇಂದಿನ ಪರಿಸ್ಥಿತಿಯಲ್ಲಿ ಎಲ್ಲರೂ ಬಾಯಿ ಮುಚ್ಚಲು.

ಸುಹಾನಾ ಎಂಬ ಸಾಗರದ ಗಾಯಕಿ ಖಾಸಗಿ ವಾಹಿನಿಯ ಹಾಡುವ ಸ್ಪರ್ಧೆಯಲ್ಲಿ ಭಾಗವಹಿಸಿ ಹಾಡಲು ಆರಂಭಿಸಿದ್ದಾಳೆ. ಇನ್ನೂ ಒಂದು ಹಾಡಷ್ಟೇ ಹಾಡಿ ಸ್ಪರ್ಧೆಗೆ ಆಯ್ಕೆಯಷ್ಟೇ ಆದದ್ದು. ಆಗಲೇ ಧರ್ಮ ದುರಂಧರರು, ಸಂಗೀತ ಸ್ವಾಭಿಮಾನಿಗಳು, ಧಾರ್ಮಿಕ ಸಂವಿಧಾನಕಾರರು ಎದ್ದು ನಿಂತಿದ್ದಾರೆ. ದುರದೃಷ್ಟವೆಂದರೆ ಆಕೆಯ ಹಾಡು ಹೇಗಾಗಿದೆ, ಅದರಲ್ಲಿ ಲೋಪಗಳಿದ್ದರೆ ಅದೇನು, ರಾಗಾಲಾಪಗಳ ಸೌಂದರ್ಯವೇನು ಎನ್ನುವ ಕುರಿತು ಎಲ್ಲೂ ಚರ್ಚೆಯಾಗಿಲ್ಲ. ಆಕೆಯ ಜಾತಿ, ಧರ್ಮವೇ ಮುಖ್ಯವಾಗಿ ಆಕೆಯ ಸಂಗೀತ ಪ್ರತಿಭೆ ಗೌಣವಾಗಿದೆ. ಸುಹಾನಾ ಏನನ್ನು ಹಾಡಿದ್ದಾರೆ ಅನ್ನುವುದು ಮುಖ್ಯವಲ್ಲ; ಹೇಗೆ ಹಾಡಿದ್ದಾರೆ ಎನ್ನುವುದಷ್ಟೇ ಗಮನಿಸಬೇಕಾದ ವಿಚಾರ ಎನ್ನುವ ಸತ್ಯವನ್ನು ಆಕೆ ಇನ್ನೊಂದು ಧರ್ಮದ ದೇವರ ಹೆಸರನ್ನು ಉಚ್ಚರಿಸಿದ್ದಾರೆ ಎಂದು ಅಸಮಾಧಾನಗೊಂಡಿರುವ ಸ್ವಧರ್ಮೀಯರೂ, ಆಕೆ ನಮ್ಮ ದೇವರ ಸ್ತೋತ್ರವನ್ನು ಹಾಡಿದ್ದಾಳಲ್ಲ ಎಂದು ಮೆಚ್ಚಿಕೊಳ್ಳುವವರೂ ಸಮಾನವಾಗಿ ಮರೆತಿದ್ದಾರೆ. 

ಧರ್ಮದ ಕನ್ನಡಕವೇಕೆ?
ಇಷ್ಟಕ್ಕೂ ಕಲೆಯನ್ನು ಧರ್ಮದ ಕನ್ನಡಕದ ಮೂಲಕ ಏಕೆ ನೋಡಬೇಕು? ಸಾಹಿತಿಯೊಬ್ಬನ ಬರಹವನ್ನು, ಅದರಲ್ಲಿನ ತಿರುಳನ್ನು, ಸತ್ಯವನ್ನು, ಮಿಥ್ಯವನ್ನು ವಿಮರ್ಶಿಸಬೇಕು ವಿನಾ ದಲಿತ ಸಾಹಿತಿ, ಮುಸ್ಲಿಂ ಲೇಖಕ ಎಂದೇಕೆ ಪರಿಗಣಿಸಬೇಕು? ಸಂತ ಶಿಶುನಾಳ ಶರೀಫ‌ರನ್ನು ಮುಸ್ಲಿಮ್‌ ಎಂದು ಯಾರೂ ದೂರವಿಡಲಿಲ್ಲ. ವಚನಕಾರರು, ದಾಸರು ತಮ್ಮ ಸಾಹಿತ್ಯದ ಮೂಲಕ ವಿಚಾರಗಳನ್ನು ಹೊರಹಾಕಿದರು ವಿನಾ ಜಾತಿಯ ಮೂಲಕ ಅಲ್ಲ. ಜಾತಿಯೆಂಬ ವಿಷಬೀಜದಿಂದ ಅವರಿಗಾದ ನೋವು, ಅವಮಾನ ಸಾಹಿತ್ಯದ ಮೂಲಕ ಹೊರಹೊಮ್ಮಿತು.  

ವ್ಯಾಸರು ಮಹಾಭಾರತ ಬರೆದಾಗ ಅದು ಬೆಸ್ತರಿಗಷ್ಟೇ ಸೀಮಿತ ಎಂದಾಗಲಿಲ್ಲ. ವ್ಯಾಸೋಚ್ಚಿಷ್ಟಂ ಜಗತ್ಸರ್ವಂ ಎಂದೇ ಕೊಂಡಾಡಿದರು. ಕೃಷ್ಣ ಯಾದವ ಕುಲದವ ಎಂದು ಯಾರೂ ಆರಾಧಿಸದೇ ಬಿಡಲಿಲ್ಲ. ವಾಲ್ಮೀಕಿ ರಾಮಾಯಣ ಬರೆದಾಗ ಅದು ಬೇಡರಿಗೆ ಮಾತ್ರ ಎಂದು ಪರಿಭಾವಿಸಲಿಲ್ಲ. ರಾವಣ ಸಾಮವೇದ‌ಕ್ಕೆ ಭಾಷ್ಯ ಬರೆದಾಗ ಸಾಮಗಾನ ರಾಕ್ಷಸರಿಗೆ ನಿಕ್ಕಿ ಎಂದಾಗಲಿಲ್ಲ. ರಾಮನನ್ನು ಕ್ಷತ್ರಿಯರು ಮಾತ್ರ ಆರಾಧಿಸುವುದಲ್ಲ. ಕುವೆಂಪು ಅವರ ರಾಮಾಯಣ ದರ್ಶನಂ ಯಾವುದೇ ಜಾತಿಗೆ ಸೀಮಿತವಾದ ಕೃತಿಯಲ್ಲ. ಅಡಿಗ, ಬೇಂದ್ರೆ, ಮಾಸ್ತಿಯವರ ಕೃತಿಗಳು ಅಗ್ರಹಾರಕ್ಕೆ ಸೀಮಿತವಾಗಲಿಲ್ಲ. ನಿಸಾರ್‌ ಅಹಮದ್‌ ಅವರು ಜೋಗದ ಸಿರಿಯನ್ನು ಕೊಂಡಾಡಿದಾಗ ರಾಜ್ಯವೇ ನಿತ್ಯೋತ್ಸವದ ಸಂಭ್ರಮದಲ್ಲಿ ತೇಲಿದೆ. 

ಮನುಜಕುಲಂ ಒಂದೇ ವಲಂ ಎನ್ನುವ ಮಾತು ಪಂಪನ ಜತೆಗೆ ಮರೆಯಾಗಿದೆ. ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂದು ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಒಂದೇ ಜಾತಿಗೆ ಸೀಮಿತ ಮಾಡಲಾಗಿದೆ. ಜಾತಿಗಳ ನಡುವಿನ ತಾರತಮ್ಯ ಹೋಗಬೇಕೆಂದು ಸಾರಿದ ಮಹಾತ್ಮಾ ಗಾಂಧೀಜಿಯವರಂತೆಯೇ ಅವರ ವಿಚಾರಗಳೂ ಹತ್ಯೆಯಾಗಿವೆ. ಮನುಜಮತ ವಿಶ್ವಪಥ ಎನ್ನುವುದು ಕುವೆಂಪು ಅವರ ಜತೆಗೆ ಮಣ್ಣಾಗಿದೆ. ಅಸಮಾನತೆ, ಜಾತೀಯತೆಯ ಬೇರು ಬೇರೆಯದೇ ರೀತಿಯಲ್ಲಿ ಸಮಾಜದಲ್ಲಿ ಮೇಳೈಸಿದೆ. 

ಸಂಗೀತ ಧ್ವನಿ ಆಧಾರಿತ
ಇಷ್ಟಕ್ಕೂ ಯಾವುದೇ ಕಲೆ, ಸಂಗೀತ, ಸಾಹಿತ್ಯ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಲ್ಲ. ಏಕೆಂದರೆ ಸಂಗೀತ ಧ್ವನಿ ಆಧಾರಿತವಾದುದು. ಅಲ್ಲಿ ಸಪಸ, ಸರಿಗಮ ಎನ್ನುವುದಕ್ಕೆ ಹೆಚ್ಚು ಒತ್ತು, ಪ್ರಾಶಸ್ತ್ಯ ವಿನಾ ಅದರಲ್ಲಿರುವ ಸಾಹಿತ್ಯಕ್ಕಲ್ಲ. ಗಾಯಕಿ ಹಾಡಿದ್ದಷ್ಟೇ. ಅದು ಅಪರಾಧವಾಗುವುದು ಹೇಗೆ? ಹಾಗೊಂದು ಕನ್ನಡಕದಲ್ಲಿ ನೋಡುವುದೇ ಆದರೆ, ಆಯುರ್ವೇದವನ್ನು ಹಿಂದೂಗಳಿಗೆ, ಅಲೋಪತಿಯನ್ನು ಕ್ರೈಸ್ತರಿಗೆ ಮೀಸಲಿಡಬೇಕಾದೀತು. ಪ್ಯಾರಾಸಿಟಮಾಲ್‌ ಮಾತ್ರೆಯನ್ನು ವಿದೇಶೀಯರು ಕಂಡುಹಿಡಿದರು, ನಾನದನ್ನು ಉಪಯೋಗಿಸಲಾರೆ ಎಂದು ಯಾವ ಕರ್ಮಠನೂ ಹೇಳಿಕೊಳ್ಳುವುದಿಲ್ಲ. ಹೀಗೆ ಜಾತಿ, ಧರ್ಮದ ಆಧಾರದಲ್ಲಿ ವಿಂಗಡಿಸುವುದು ನಮ್ಮ ಸಾಮಾಜಿಕ ದೌರ್ಬಲ್ಯವನ್ನು ಸೂಚಿಸುತ್ತದೆ. ಕಲೆಗೆ ಜಾತಿಯಿಲ್ಲ ಎಂದು ಸಾರುತ್ತಲೇ ಕಲಾವಿದರನ್ನು ಜಾತಿಯ ಮೂಲಕ ಗುರುತಿಸುವ ಅಸಡ್ಡಾಳ ಪರಂಪರೆ ಬೆಳೆದುಬಂದಿದೆ. ಕಲೆಗೆ ಧರ್ಮವಿಲ್ಲ ಎಂದು ಬೋಧಿಸುತ್ತಲೇ ಯಾವ ಧರ್ಮದ ಕಲಾವಿದ ಎಂದು ಹದ್ದುಗಣ್ಣಿನಿಂದ ನೋಡುತ್ತೇವೆ. ಸುಹಾನಾ ಎಂಬ ಗಾಯಕಿ ಚೆನ್ನಾಗಿ ಹಾಡುತ್ತಿದ್ದಾರೆ ಎನ್ನುವ ಬದಲು ಬೇರೇನೇನೋ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ. 

ಬಾಬರಿ ಮಸೀದಿಯ ಅನಂತರ ಬದಲಾಗಿರುವುದು ದೇಶದ ರಾಜಕೀಯ ಕ್ಷೇತ್ರ ಮಾತ್ರವಲ್ಲ. ಅದರ ಅಡ್ಡಪರಿಣಾಮಗಳಿಂದಾಗಿ ನಮ್ಮ ಸಾಹಿತ್ಯ, ಕಲೆ, ಸಂಗೀತ ಸೇರಿದಂತೆ ಒಟ್ಟು ಸಾಂಸ್ಕೃತಿಕ ಲೋಕ ಕೂಡ ಕೋಮುಬಣ್ಣ ಬಳಿದುಕೊಂಡದ್ದನ್ನು ಕಾಣಬಹುದು. ಈ ಬದಲಾವಣೆಗೆ ಕನ್ನಡ ಸಾಹಿತ್ಯ ಕ್ಷೇತ್ರ ಹೊರತಾಗಿರಲಿಲ್ಲ. ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಮುಸ್ಲಿಮ್‌ ಸಮುದಾಯದ ಲೇಖಕರ ಬೆನ್ನು ತಟ್ಟಿದವರು, ಅದೇ ಲೇಖಕರು ಕೋಮುವಾದದ ವಿರುದ್ಧ ಬರೆದಾಗ ಧರ್ಮದ ಕನ್ನಡಕ ಹಾಕಿಕೊಂಡು ತೀರ್ಪು ನೀಡಲು ಶುರುಮಾಡಿದರು. ಇದರಿಂದಾಗಿ ಮುಸ್ಲಿಮ್‌ ಮೂಲಭೂತವಾದದ ವಿರುದ್ಧ ಗಟ್ಟಿದನಿಯಲ್ಲಿ ಮಾತನಾಡುತ್ತಿದ್ದ ಬರೆಯುತ್ತಿದ್ದ ಅದೇ ಸಮುದಾಯದ ಲೇಖಕ - ಲೇಖಕಿಯರ ದನಿ ಕ್ಷೀಣವಾಗುತ್ತಾ ಹೋಯಿತು. ಹಿಂದೂ ಕೋಮುವಾದದ ಅಬ್ಬರ ಮತ್ತು ಅದನ್ನು ಎದುರಿಸಲು ಮುಸ್ಲಿಮ್‌ ಮೂಲಭೂತವಾದ ಅನಿವಾರ್ಯ ಎಂಬಂತಹ ಸ್ಥಿತಿ ನಿರ್ಮಾಣದ ನಡುವೆ ಸಿಕ್ಕ ಪ್ರಗತಿಪರ ಲೇಖಕರು ಈ ಗೊಂದಲದಲ್ಲಿಯೇ ತುಸು ಅಂಚಿಗೆ ಸರಿದು ನಿಲ್ಲುವಂತಾಯಿತು. ಇಸ್ಲಾಂ ಧರ್ಮದೊಳಗಿನ ಸಂಪ್ರದಾಯವಾದದ ಬಗ್ಗೆ ಪ್ರಗತಿಪರ ಮುಸ್ಲಿಮರು ಎತ್ತಿದ ಪ್ರಶ್ನೆಗಳನ್ನು ಹಿಂದೂ ಮೂಲಭೂತವಾದಿಗಳು ಮುಸ್ಲಿಮರ ವಿರುದ್ಧ ಜನಾಭಿಪ್ರಾಯ ರೂಪಿಸಲು ಮತ್ತು ಹಿಂದೂಗಳನ್ನು ಎತ್ತಿಕಟ್ಟುವ ಹುನ್ನಾರಕ್ಕೆ ದುರ್ಬಳಕೆ ಮಾಡುವಂತಹ ಪ್ರಸಂಗಗಳು ಕೂಡ ನಡೆಯುತ್ತಿವೆ ಎಂದು ಹಿರಿಯ ಮಾಜಿ ಪತ್ರಕರ್ತರೊಬ್ಬರು ಹೇಳಿದ್ದು ಸರಿಯಾಗಿಯೇ ಇದೆ.  ಏಕೆಂದರೆ ದಕ್ಷಿಣಕನ್ನಡ ಕೋಮುವಾದದ ಪ್ರಯೋಗಶಾಲೆಯಾಗುತ್ತಿದೆ ಎಂಬ ಆತಂಕವಿದ್ದಾಗಲೇ ಇಡಿಯ ಕರ್ನಾಟಕವೇ ಇದಕ್ಕೆ ಮುನ್ನುಡಿಯಾಗುತ್ತಿದೆ ಎನ್ನುವುದು ಆತಂಕಕಾರಿ. ಶಾಲೆಗೆ ಮುಖಗವಸು ಧರಿಸಿ ಹೋಗುವುದು, ಅದಕ್ಕೆ ಪ್ರತಿಯಾಗಿ ಕೇಸರಿ ಶಾಲು ಧಾರಣೆ, ಶಾಲೆಗಳಲ್ಲಿ ಮುಸ್ಲಿಮ್‌ ಬಾಲಕಿಯರು ನೃತ್ಯ ಮಾಡಿದರೆ ಸ್ವಧರ್ಮೀಯರು ಅದನ್ನು ವಿರೋಧಿಸುವುದು ಸಮಾಜದ ಹಿತದೃಷ್ಟಿಯಿಂದ ಒಳಿತಲ್ಲ. ರಾಜಕಾರಣಿಗಳಿಗೆ ಇದರಿಂದ ಖಂಡಿತ ಲಾಭ ಇದೆ. ಹಾಗಂತ ಜನರಿಗೆ ನೆಮ್ಮದಿ ಇಲ್ಲವೇ ಇಲ್ಲ. 

ಸಂಗೀತ ಸಂಸ್ಕೃತಿಯ ಭಾಗ
ಭಾರತದಲ್ಲಿ ಇಸ್ಲಾಂನ ಜತೆ ಜತೆಗೆ ಸಂಗೀತ ಹಾಸುಹೊಕ್ಕಾಗಿದೆ. ಖವ್ವಾಲಿ, ಕೇರಳದ ಮಾಪಿಳ್ಳೆ ಪಾಟ್‌ (ನಫೀಸತ್‌ ಮಾಲೆ, ಮುಹಿಯದ್ದೀನ್‌ ಮಾಲೆಗಳು ಸೇರಿದಂತೆ) ಮುಸ್ಲಿಂ ಸಂಸ್ಕೃತಿಯ ಭಾಗವೇ ಆಗಿವೆ. ದಾಯಿರಾ ಬಾರಿಸುತ್ತಾ ಪೈಗಂಬರರನ್ನು ಕೀರ್ತಿಸುವ ಹಾಡು ಹೇಳುತ್ತಾ ರಂಜಾನಿನ ನಿಶ್ಶಬ್ದ ರಾತ್ರಿಗಳಲ್ಲಿ ಉಪವಾಸ ಹಿಡಿಯಲು ಅತ್ತಾಳ (ಶ‌ಹರಿ) ಊಟಕ್ಕೆ ಎಬ್ಬಿಸುತ್ತಿದ್ದ ಫಕೀರರಿಲ್ಲವೇ. "ನಟವರ ಗಂಗಾಧರ ಉಮಾಶಂಕರ ಈ ಲೀಲಾ ವಿನೋದ ವಿಹಾರಾ' ಎಂಬ ಸಿನೆಮಾ ಗೀತೆಯಿದೆ. ಇದನ್ನು ಬಾಲಮುರಳೀಕೃಷ್ಣ ಅವರು ಹಾಡಿದ್ದು. "ಸ್ವರ್ಣಗೌರಿ' ಚಿತ್ರದ ಈ ಹಾಡಿನ ಮೂಲ ಆಶಯ ಶಿವ ಎಂಬ ವ್ಯಕ್ತಿತ್ವಕ್ಕೆ ಜ್ಞಾನವೇ ಮೂಲ ಎಂದು. ಈ ಅರಿವು ಉಂಟಾಗಲು ಹಿಂದೂ ಧರ್ಮದ ಆಳ ತಿಳಿದಿರಬೇಕು. ಕಲೆ, ವ್ಯಾಕರಣ, ಸಂಗೀತ, ಸಾಹಿತ್ಯ ಎಲ್ಲವೂ ಶಿವನ ಸೃಷ್ಟಿ ಎಂಬ ಹಿಂದೂ ಧರ್ಮದ ಪರಿಕಲ್ಪನೆ ಅನೇಕ ಬ್ರಾಹ್ಮಣರಿಗೂ ತಿಳಿದಿರಲಿಕ್ಕಿಲ್ಲ. ಇದನ್ನು ಅರ್ಥೈಸಿಕೊಂಡು ಬರೆದವರು ಎಸ್‌. ಕೆ. ಕರೀಂಖಾನ್‌ ಅವರು. ಹರಿಣಿ ನಿರ್ಮಾಣದ, ರಾಜನ್‌ ನಾಗೇಂದ್ರ ಸಂಗೀತ ನಿರ್ದೇಶನದ "ನವಜೀವನ' ಸಿನೆಮಾದಲ್ಲಿ ಸೋರಟ್‌ ಅಶ್ವತ್ಥ್ ಅವರು ಬರೆದು, ಪಿ.ಬಿ. ಶ್ರೀನಿವಾಸ್‌ ಕಂಠದಿಂದ ಹರಿದುಬಂದ ಹಾಡಿನಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರ ಹಾಡಿನ ಧಾಟಿ, ಸಾಹಿತ್ಯ ಇದೆ. ಹಾಗಾದರೆ ಪಿಬಿಎಸ್‌ ಸೇರಿದಂತೆ ಎಲ್ಲರನ್ನೂ ಬಹಿಷ್ಕರಿಸುವುದೇ? ಸ್ವಲ್ಪ ಸಂಕುಚಿತ ಯೋಚನೆ ಬಿಟ್ಟು ವಿಶಾಲವಾಗಿ ಚಿಂತಿಸಿದರೆ ಎಲ್ಲದಕ್ಕೂ ಸಮಾಧಾನ, ಪರಿಹಾರ ಸಿಗುತ್ತದೆ. ಸಾಮಾಜಿಕ ಮಾಧ್ಯಮಗಳು ಇರುವುದು ಅಂಕುಶವಿಲ್ಲದ ಮನಸ್ಸಿನಲ್ಲಿ ಬರುವಂಥದ್ದನ್ನೆಲ್ಲ ಗೀಚಲು ಅಲ್ಲ. ಇಂತಹ ವಿಚಾರಗಳಿಗೆ ಆಕ್ಷೇಪ ಎತ್ತುವುದು ಹಾಗೆ ಮಾಡುವವರ ಬೌದ್ಧಿಕ ದಿವಾಳಿತನ ಎನ್ನುವುದಕ್ಕಿಂತ ಬೌದ್ಧಿಕ ದುರುಳತನ ಎನ್ನದೇ ವಿಧಿಯಿಲ್ಲ.

- ಲಕ್ಷ್ಮೀ ಮಚ್ಚಿನ

Back to Top