CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸರಕಾರಿ ಪರ್ಜನ್ಯ ಜಪ ಅಸಾಂವಿಧಾನಿಕ

ನಮ್ಮಲ್ಲಿ ನೂರಾರು ಮಠ ಮಂದಿರಗಳಿವೆ. ಧರ್ಮ ಸಂಸ್ಥಾಪನೆಗಾಗಿ, ಲೋಕ ಕಲ್ಯಾಣಕ್ಕಾಗಿ ಇಂಥ ಸಂಸ್ಥೆಗಳು ಪರ್ಜನ್ಯ ಜಪ ಮಾಡಿಸಬಹುದು. ಇನ್ನು ನಮ್ಮ ಸಮಾಜದಲ್ಲಿ ಅನೇಕ ಕೊಡುಗೈ ದಾನಿಗಳಿದ್ದಾರೆ. ಅವರು ಇಂಥ ಪೂಜಾ ವಿಧಿಗಳನ್ನು ಮಾಡಿಸಲು ಶಕ್ತರು. ಆದರೆ ಸರಕಾರ ಮಾಡತಕ್ಕದ್ದಲ್ಲ. ಸರಕಾರವನ್ನು ಪ್ರತಿನಿಧಿಸುವಾತ ಮಾಡಿಸುವುದು ನಿಷಿದ್ಧ.

ಭಾರತೀಯ ಸಂವಿಧಾನದ ಪ್ರಸ್ತಾವನೆಯಲ್ಲಿಯೇ ಪೌರನ ನಂಬಿಕೆ, ನಿಷ್ಠೆ, ಪೂಜಾದಿ ವ್ರತಾಚರಣೆ ಹಾಗೂ ಸ್ವತಂತ್ರ ಚಿಂತನೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಸ್ವಾತಂತ್ರ ಪರಿಪೂರ್ಣ ಅಲ್ಲ. ಅಲ್ಲಲ್ಲಿ ನಿಯಂತ್ರಕಗಳನ್ನು ಅಳವಡಿಸಲಾಗಿದೆ. ಪರಿಚ್ಛೇದ 19(1)(ಎ) ರಲ್ಲಿ ನೀಡಲಾದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಿತಿ ಇದೆ. ದೇಶದ ಭದ್ರತೆ, ಸಮಗ್ರತೆ ಹಾಗೂ ಸಾರ್ವಭೌಮತ್ವಕ್ಕೆ ಧಕ್ಕೆಯಾಗದ ಹಾಗೆ ಈ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅನುಭವಿಸಬಹುದಾಗಿದೆ. ಹಾಗೆ ಆರ್ಟಿಕಲ್‌ 25(1)ರಲ್ಲಿ ಸಾರ್ವಜನಿಕ ನೀತಿ, ನೆಮ್ಮದಿ ಹಾಗೂ ಆರೋಗ್ಯಕ್ಕೆ ಧಕ್ಕೆಯಾಗದಂತೆ ಪೌರನೋರ್ವ ತನ್ನ ಆತ್ಮಸಾಕ್ಷಿಗೆ ತಕ್ಕಂತೆ ಧರ್ಮಾವಲಂಬನೆಯನ್ನು ಮಾಡಬಹುದೆಂಬ ಸ್ವಾತಂತ್ರ್ಯ ದತ್ತವಾಗಿದೆ. ಈ ಎಲ್ಲ ನಿಯಂತ್ರಕಗಳ ಹೊರತಾಗಿ ಭಾರತೀಯ ಪ್ರಜೆಗಳು ಅವರವರ ನಂಬಿಕೆ, ನಿಷ್ಠೆ ಹಾಗೂ ವ್ರತಾಚರಣೆಗಳನ್ನು ಪಾಲಿಸಿಕೊಂಡು ಬರಲು ಸ್ವಾತಂತ್ರವುಳ್ಳವರಾಗಿದ್ದಾರೆ. ಇದು ಸಾಂವಿಧಾನಿಕ ಸಾರ. ಹಾಗಾದರೆ ಇದರಲ್ಲಿ ಸರಕಾರದ ಪಾತ್ರವೇನು ಎಂಬುದರ ಚರ್ಚೆ ಇಲ್ಲಿ ಪ್ರಸ್ತುತ.

ನಾವು ನಂಬಿ ಸಮರ್ಪಿಸಿಕೊಂಡ ಲಿಖೀತ ಸಂವಿಧಾನದಂತೆ ಸರಕಾರ ಪ್ರಜಾಪಾಲಕ. ಹಾಗಾಗಿ ಪ್ರಜೆಗಳು ಪಾಲಿಸುವ ನಂಬಿಕೆಗೆ ರಕ್ಷಣೆ ಕೊಡುವುದು ಸರಕಾರದ ಕರ್ತವ್ಯ. ಈ ನಂಬಿಕೆಗಳು ಸಂವಿಧಾನದಲ್ಲಿ ವಿಧಿಸಿದ ಷರತ್ತುಗಳ ಉಲ್ಲಂಘನೆಯಾಗದಿದ್ದಲ್ಲಿ ನಂಬಿ ಆಚರಿಸುವವರ ರಕ್ಷಣೆ ಸರಕಾರದ ಹೊಣೆ. ಆದರೆ ಸರಕಾರಕ್ಕೆ ಈ ನಂಬುವ ಹಾಗೂ ಆಚರಿಸುವ ಜವಾಬ್ದಾರಿ ಇಲ್ಲ. ಅದು ತಟಸ್ಥ. ಅದು ಯಾವುದೇ ನಂಬಿಕೆಗೆ ಸಂಬಂಧಿಸಿ ಆಚರಣೆ ನಡೆಸಿದರೆ ಅದು ತಪ್ಪು ಹಾಗೂ ಅಸಾಂವಿಧಾನಿಕ. ಈಗ ನಮ್ಮ ಕರ್ನಾಟಕ ಸರಕಾರದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರು ಮಳೆಗಾಗಿ ಪರ್ಜನ್ಯ ಜಪ ಮಾಡುವ ಪೂಜಾವಿಧಿಯನ್ನು ನೆರವೇರಿಸಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ವಿಚಾರ ಅಧಿವೇಶನದಲ್ಲೂ ಚರ್ಚಿಸಲ್ಪಟ್ಟಿದ್ದು, ಮುಖ್ಯಮಂತ್ರಿಗಳೂ ಸಹ ಸಮರ್ಥಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದು ಶುದ್ಧ ತಪ್ಪು. ಸಂವಿಧಾನಬಾಹಿರವಾದ ನಡೆ. ಸಮರ್ಥಿಸಿಕೊಂಡಿರುವುದು ನಮ್ಮ ಜನಪ್ರತಿನಿಧಿಗಳು ಪ್ರಜಾಸತ್ತಾತ್ಮಕವಾಗಿ ಹಾಗೂ ಸಾಂವಿಧಾನಿಕವಾಗಿ ಅಪ್ರಬುದ್ಧರು ಎಂದು ತೋರಿಸುತ್ತದೆ.

ಭಾರತೀಯರೆಲ್ಲರಿಗೂ ಮುಖ್ಯವಾಗಿ ಶೇ.80ಕ್ಕೂ ಅಧಿಕ ಸಂಖ್ಯೆಯಲ್ಲಿರುವ ಹಿಂದುಗಳಿಗೆ ಪರ್ಜನ್ಯ ಜಪ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ನಮ್ಮ ರಾಜಕಾರಣಿಗಳು ಮೂಲತಃ ನಮ್ಮ ದೇಶದ ಪ್ರಜೆಗಳಾಗಿದ್ದು, ಅವರಿಗೂ ಈ ನಂಬಿಕೆ ಇರಬಹುದು. ಆದರೆ ಚುನಾಯಿತ ಪ್ರತಿನಿಧಿಗಳು ಸಂವಿಧಾನದತ್ತವಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಅವರು ಖುದ್ದಾಗಿ ಈ ನಂಬಿಕೆಯನ್ನು ಆಚರಣೆಗೆ ತರಬಾರದು. ಮಂತ್ರಿ ಅಥವಾ ಇನ್ನಿತರ ಯಾವುದೇ ಸ್ಥಾನದಲ್ಲಿರುವ ಚುನಾಯಿತ ಪ್ರತಿನಿಧಿ ಆ ಸ್ಥಾನದಲ್ಲಿ ಮುಂದುವರಿಯುವಷ್ಟು ಕಾಲ ಇಂಥ ಜಪ ತಪಗಳನ್ನಾಚರಿಸಿದರೆ ಅದು ಸರಕಾರದ ವತಿಯಿಂದ ಎಂದೇ ಅರ್ಥ. ಆಗ ಅದು ಸಂವಿಧಾನಬಾಹಿರ ನಡೆಯಾಗುತ್ತದೆ. ತನ್ನ ಸ್ವಂತ ಖರ್ಚಿನಿಂದ ಮಾಡಿದರೂ ತಪ್ಪೇ. ಯಾಕೆಂದರೆ ಸರಕಾರದ ಮಂತ್ರಿಸ್ಥಾನದಲ್ಲಿದ್ದು ಸಂವಿಧಾನದ ಆಶಯಕ್ಕೆ ವಿರೋಧವಾಗಿ ನಡೆದುಕೊಳ್ಳುವುದು ಎಷ್ಟಕ್ಕೂ ಸಮರ್ಥನೀಯವಲ್ಲ. ಅಂದ ಮಾತ್ರಕ್ಕೆ ಪರ್ಜನ್ಯ ಜಪ ನಡೆಸಿದುದೇ ತಪ್ಪು ಎಂಬ ಪ್ರತಿಪಾದನೆಯಲ್ಲ, ಮಂತ್ರಿಗಳು ನಡೆಸಿದುದು ತಪ್ಪು. ಅದು ತನ್ನದಲ್ಲದ ಕರ್ತವ್ಯ. ಪರ್ಜನ್ಯ ಜಪ ನಡೆಸಲು ನಮ್ಮಲ್ಲಿ ಬೇರೆ ವ್ಯವಸ್ಥೆಯಿಲ್ಲವೇ? ನಮ್ಮಲ್ಲಿ ನೂರಾರು ಮಠ ಮಂದಿರಗಳಿವೆ. ಕೆಲವು ಪೂಜಾ ಸ್ಥಳಗಳಲ್ಲಿ ದ್ರವ್ಯ ತುಂಬಿ ತುಳುಕುತ್ತಿದೆ. ಇವುಗಳು ಸರಕಾರಿ ನಿಯಂತ್ರಣದಲ್ಲಿರಬಹುದು. ಆದರೆ ಅವು ಸ್ವತಂತ್ರ. ಧರ್ಮ ಸಂಸ್ಥಾಪನೆಗಾಗಿ, ಲೋಕ ಕಲ್ಯಾಣಕ್ಕಾಗಿ ಇಂಥ ಸಂಸ್ಥೆಗಳು ಪರ್ಜನ್ಯ ಜಪ ಮಾಡಿಸಬಹುದು. ಇನ್ನು ನಮ್ಮ ಸಮಾಜದಲ್ಲಿ ಅನೇಕ ಕೊಡುಗೈ ದಾನಿಗಳಿದ್ದಾರೆ. ಅವರು ಸಮಾಜ ಹಿತಕ್ಕಾಗಿ ಇಂಥ ಪೂಜಾ ವಿಧಿಗಳನ್ನು ಮಾಡಿಸಲು ಶಕ್ತರು. ಅಂತ ಕ್ರಿಯೆಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಯಾರು ಮಾಡಿದರೂ ಅದು ತಲುಪುವುದಾದರೆ ಅಲ್ಲಿಗೇ ತಲುಪಬೇಕಷ್ಟೇ. ಅದೇ ಸಾಕಾಗುತ್ತದೆ. ಆದರೆ ಸರಕಾರ ಮಾಡತಕ್ಕದ್ದಲ್ಲ. ಸರಕಾರವನ್ನು ಪ್ರತಿನಿಧಿಸುವಾತ ಮಾಡಿಸುವುದು ನಿಷಿದ್ಧ. ನಮ್ಮ ಜನ ಪ್ರತಿನಿಧಿಗಳು ತಾವು ಏನು ಮಾಡಿದರೂ ಚೆಂದ ಎಂದು ಜನ ಭಾವಿಸುತ್ತಾರೆ ಎಂಬ ಭ್ರಮಾಲೋಕದಲ್ಲಿದ್ದಾರೆ. ಪ್ರಜ್ಞಾವಂತ ಜನ ಇದನ್ನು ಪ್ರಶ್ನಿಸುವ ಕಾಲ ಈಗ ಬಂದಿದೆ. ಸ್ವಂತ ಖರ್ಚಿನಲ್ಲಿ ಎಂಬ ಬೋರ್ಡ್‌ ಹಾಕಿ ಖಜಾನೆ ಲೂಟಿ ಮಾಡುವ ಕ್ರಮದ ವಿರುದ್ಧ ಧ್ವನಿ ಎತ್ತುವ ಕಾಲ ಬಂದಿದೆ.

ಜಾತ್ಯಾತೀತ ಸ್ವರೂಪದ ಪ್ರಜಾಸತ್ತೆಯ ಪರಿಕಲ್ಪನೆ ನಮ್ಮ ಈಗಿನ ಜನ ಪ್ರತಿನಿಧಿಗಳಲ್ಲಿಲ್ಲ. ಆದರೆ ಬಾಯಲ್ಲಿ ಮಾತ್ರ ಸೆಕ್ಯೂಲರ್‌ ಎಂದು ಪಠಿಸುತ್ತಲೇ ಇರುತ್ತಾರೆ. ಜಾತ್ಯಾತೀತ ನಡೆ ಇರಬೇಕಾದುದು ಸರಕಾರವನ್ನು ಪ್ರತಿನಿಧಿಸುವ ಜನ ಪ್ರತಿನಿಧಿಗಳಲ್ಲಿ. ಆದರೆ ನಮ್ಮ ಪ್ರತಿನಿಧಿಗಳು ಮಂತ್ರಿಗಳಾಗುತ್ತಲೇ ತಮಗೆ ಅಲಾಟ್‌ ಆದ ಕೋಣೆಯ ಗೋಡೆಯನ್ನು ಒಡೆಸುತ್ತಾರೆ. ವಾಸ್ತು ಪ್ರಕಾರ ಪುನಃ ಸಜ್ಜುಗೊಳಿಸುತ್ತಾರೆ. ಇವರಿಗೆ ಕಚೇರಿ ಕೆಲಸಕ್ಕಾಗಿ ಕೋಣೆ ವಹಿಸಿಕೊಡಲಾಗಿದೆ, ಇವರ ಸ್ವಂತ ಮನೆ ವ್ಯವಹಾರಕ್ಕಲ್ಲ. ಅದು ಸಾರ್ವಜನಿಕ ಕೆಲಸಕ್ಕಾಗಿ. ಸಾರ್ವಜನಿಕ ಕೆಲಸಕ್ಕಾಗಿ ನಿರ್ಮಾಣಗೊಳ್ಳುವ ಕಟ್ಟಡದ ವಿನ್ಯಾಸ ಆ ಕಟ್ಟಡದಲ್ಲಿ ಯಾವ ಕೆಲಸ ನಡೆಯುತ್ತದೆಯೋ ಆ ಆವಶ್ಯಕತೆಗನುಗುಣವಾಗಿ ರಚಿತವಾಗಿರುತ್ತದೆ. ಉದಾಹರಣೆಗೆ, ಒಂದು ಕಟ್ಟಡವನ್ನು ಆಸ್ಪತ್ರೆ ನಡೆಸುವುದಕ್ಕಾಗಿ ರಚಿಸುವಾಗ ಆಸ್ಪತ್ರೆಯ ಕಾರ್ಯ ವೈಖರಿಗೆ ಅನುಕೂಲವಾಗುವಂತೆ ನಿರ್ಮಿಸಲಾಗುತ್ತದೆ. ಅದೇ ಅದರ ವಾಸ್ತು. ವಿಧಾನಸೌಧ ಒಂದು ಆಡಳಿತ ಕಚೇರಿ. ಮಂತ್ರಿಗಳು ತಮ್ಮ ವಾಸ್ತು ಅಭಿರುಚಿಗೆ ತಕ್ಕಂತೆ ಗೋಡೆ ಒಡೆದು, ಬಾಗಿಲು ಮುರಿದು ಪುನಾರಚಿಸುವ ಪ್ರವೃತ್ತಿಗೆ ಏನೆನ್ನಬೇಕು! ಈ ಮೌಡ್ಯ ಮೊದಲು ನಿಲ್ಲಬೇಕು. ಕರ್ನಾಟಕದಲ್ಲಿ ಇದು ದಿನೇ ದಿನೇ ಹೆಚ್ಚಾಗುತ್ತಿದೆ.

ಕೆಂಗಲ್‌ ಹನುಮಂತಯ್ಯನವರ ಕಾಲದಲ್ಲಿ ಸಚಿವಾಲಯದ ಗೋಡೆ ಒಡೆಯುವ ಕ್ರಮ ಇರಲಿಲ್ಲ. ಕರ್ನಾಟಕಕ್ಕೆ ಆಗ ಅಪಸ್ಮಾರ ಬಡಿಯಲೂ ಇಲ್ಲ. ತದನಂತರ ಬಂದ ಅನೇಕ ಮುಖ್ಯಮಂತ್ರಿಗಳ ಕಾಲದಲ್ಲಿಯೂ ಸಚಿವಾಲಯದ ಗೋಡೆಗಳು ಸುಸ್ಥಿತವಾಗಿಯೇ ಇದ್ದವು. ಅದ್ಯಾಕೋ ಇತ್ತೀಚೆಗೆ ಸಚಿವಾಲಯದ ಕಚೇರಿಗಳನ್ನು ವಾಸ್ತು ಪ್ರಕಾರ ಎಂಬ ಹೆಸರಿನಲ್ಲಿ ಪುನರ್‌ ನಿರ್ಮಾಣ ಮಾಡುವ ಪ್ರವೃತ್ತಿ ಆರಂಭವಾಗಿದೆ. ಇದಕ್ಕಿಂತ ಮೌಡ್ಯ ಇನ್ನೊಂದಿಲ್ಲ. ಈಗ ಪ್ರಸಕ್ತ ಕರ್ನಾಟಕ ಸರಕಾರ ಮೌಡ್ಯ ನಿಷೇಧ ಕಾಯಿದೆ ರೂಪಿಸಲು ತಯಾರಿ ನಡೆಸುತ್ತಿದೆ. ಇದರಿಂದ ಸರಕಾರ ಜೇನುಗೂಡಿಗೆ ಕೈಯಿಕ್ಕುವ ಕಾರ್ಯದಲ್ಲಿ ತೊಡಗಿದೆಯೇ ಎಂಬ ಅನುಮಾನ ಬರುತ್ತದೆ. ಯಾಕೆಂದರೆ ನಮ್ಮ ನಂಬಿಕೆ ಸಂವಿಧಾನ ದತ್ತವಾದುದು, ಅಬಾಧಿತ. ಈಶ್ವರ ದೇವಸ್ಥಾನಕ್ಕೆ ಹೋಗಿ ಶಿವಲಿಂಗಕ್ಕೆ ಕೈ ಮುಗಿಯುವುದು ಹಾಗೂ ಮಾಂತ್ರಿಕನಲ್ಲಿಗೆ ಹೋಗಿ ಕಣಿ ಕೇಳುವುದು ಈ ಎರಡು ಕೂಡ ನಂಬಿಕೆಯ ತಳಹದಿಯ ಮೇಲೆ. ಮಾಂತ್ರಿಕ ಅಮಾಯಕರನ್ನು ಮರುಳುಗೊಳಿಸಿ ದೌರ್ಜನ್ಯ ಎಸಗುತ್ತಾನಾದರೆ ಹಾಲಿ ಭಾರತೀಯ ದಂಡ ಸಂಹಿತೆ ಮತ್ತು ಅಪರಾಧ ಸಂಹಿತೆಗಳ ಮೂಲಕ ಅದನ್ನು ನಿಯಂತ್ರಿಸಬಹುದಾಗಿದೆ. ಈ ಆಡಳಿತಗಾರರು ಅನೇಕ ಆಡಳಿತಾತ್ಮಕ ಗಂಭೀರ ಸಮಸ್ಯೆಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು ನಂಬಿಕೆಯಂಥ ಸೂಕ್ಷ್ಮ ವಿಚಾರಗಳ ಬಗ್ಗೆ ಸಮಯ ವ್ಯರ್ಥಗೊಳಿಸುತ್ತಿರುವುದು ಪ್ರಜಾಸತ್ತೆಯ ದುರಂತವೇ ಸರಿ.

ನಮ್ಮ ಸಂವಿಧಾನದ ಪರಿಚ್ಛೇದ 51ಎ(ಎಚ್‌)ರಲ್ಲಿ ಪೌರನು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವುದು ಆತನ ಬಾಧ್ಯತೆ ಅಥವಾ ಜವಾಬ್ದಾರಿ ಎಂಬ ಉಲ್ಲೇಖವಿದೆ. ಇದರಲ್ಲಿ ಸರಕಾರದ ಜವಾಬ್ದಾರಿಯೂ ಇದೆ. ಯಾಕೆಂದರೆ ಈ ಅಂಶ ಸಂವಿಧಾನದ ನಿರ್ದೇಶಕ ತತ್ವದಡಿಯಲ್ಲಿಯೇ ಬರುತ್ತದೆ. ಅದಕ್ಕೆ ಚಾಲನೆ ನೀಡಬೇಕಾದುದು ಸರಕಾರದ ಜವಾಬ್ದಾರಿ. ತನ್ನ ಅಧೀನದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸಮಾಜ ಶಿಕ್ಷಣ ನೀಡುವ ವ್ಯವಸ್ಥೆ ಮಾಡಬೇಕಾದುದು ಸರಕಾರದ ಜವಾಬ್ದಾರಿ. ತನ್ಮೂಲಕ ಸಾರ್ವಜನಿಕರು ಮೂಢ ನಂಬಿಕೆಗೆ ಬಲಿಯಾಗದೆ ತಾತ್ವಿಕವಾಗಿ ಚಿಂತಿಸುವ ಮನೋವೃತ್ತಿ ಬೆಳೆಸಿಕೊಳ್ಳುವ ಸಾಧ್ಯತೆಯುಂಟು. ದುರದೃಷ್ಟವೇನೆಂದರೆ ನಮ್ಮ ಜನಪ್ರತಿನಿಧಿಗಳು ದಿನ ಬೆಳಗಾದರೆ ತಾವೇ ಜೋತಿಷ್ಯರಲ್ಲಿಗೆ ಹೋಗುವವರಾದರೆ ಸಂವಿಧಾನದಲ್ಲಿ ಅಡಕವಾದ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಕರೆಗೆ ಚಾಲನೆ ಕೊಡುವವರ್ಯಾರು? ಇದು ನಮ್ಮ ಪ್ರಜಾಸತ್ತೆಯ ದುರವಸ್ಥೆ. ಜಾತ್ಯಾತೀತ ಸ್ವರೂಪದ ಪ್ರಜಾಸತ್ತೆಯಲ್ಲಿ ಸರಕಾರ ನಂಬಿಕೆಗೆ ಸಂಬಂಧಿಸಿದ ವಿಚಾರಗಳಿಗೆ ಹೆಚ್ಚು ಪ್ರಾಶಸ್ತ ನೀಡದೆ ಸಂವಿಧಾನದಲ್ಲಿ ನಿರೂಪಿಸಿದಂತೆ ಸಮಾನತೆಯ ನೆಲೆಯಲ್ಲಿ ಆಡಳಿತ ನಡೆಸುವ ಪರಿಯ ಬಗ್ಗೆ ಗಮನ ಹರಿಸಬೇಕಾದುದು ಇಂದಿನ ಅಗತ್ಯ.

ಮೊದಲಾಗಿ ಸರಕಾರ ದೈನಂದಿನ ಆಡಳಿತ ಸ್ವತ್ಛ ಹಾಗೂ ಚುರುಕುಗೊಳಿಸುವ ಕ್ರಮಕ್ಕೆ ಮುಂದಾಗಬೇಕಾಗಿದೆ. ಸಕಾಲದಂತ ಕಾನೂನು ರೂಪಿಸಿದೊಡನೆ ಆಡಳಿತದ ದಕ್ಷತೆ ಹೆಚ್ಚುವುದಿಲ್ಲ. ಸರಕಾರಿ ಯಂತ್ರ ಒಂದು ಕೆಲಸದ ಸಂಸ್ಕೃತಿ ಬೆಳೆಸಿಕೊಳ್ಳುವ ಪ್ರೇರಣೆಗೆ ಆಡಳಿತಗಾರರು ಮಾದರಿಯಾಗಬೇಕು. ಒಬ್ಬ ಅರ್ಹ ಫ‌ಲಾನುಭವಿ ಯಾವ ಪ್ರಭಾವ ಹಾಗೂ ಯಾರ ಸಹಾಯವಿಲ್ಲದೆ ತನ್ನ ಬೇಡಿಕೆ ಈಡೇರಿಸಿಕೊಳ್ಳುವಂಥ‌ ಸ್ಥಿತಿ ಪ್ರಾಪ್ತವಾದರೆ ಅದು ಉತ್ತಮ ಆಡಳಿತ. ಕರ್ನಾಟಕ ಸರಕಾರ ಇನ್ನು ಮುಂದಾದರೂ ಇಂಥ ಪ್ರಗತಿ ಪರ ಚಿಂತನೆಗೆ ಒತ್ತು ನೀಡಲಿ ಎಂದು ಹಾರೈಸುವ.

ಬೇಳೂರು ರಾಘವ ಶೆಟ್ಟಿ

Back to Top