CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಆ ಮೂರು ದಿನದ ಚಿಂತಿ

ಅಮ್ಮ ಪರ್ರನೆ ತನ್ನ ಮೆತ್ತನ್ನ ಹಳೆ ಸೀರೆಯನ್ನು ಚೌಕುಳಿ ಆಕಾರಕ್ಕೆ ಹರಿದು, ಮಡಚಿ ತೊಡೆ ಸಂದಿ ಬೀಳದಂತೆ ಇಟ್ಟುಕೋ ಎಂದದ್ದು ಬಹುಶಃ ಮುಟ್ಟಿನ ಸ್ರಾವವನ್ನು ಹೇಗೆ ನಿಭಾಯಿಸುವುದು ಎನ್ನುವ ಕುರಿತು ಹೇಳಿಕೊಡುವ ಮೊದಲ ಮತ್ತು ಕೊನೆಯ ಪಾಠ. ಮೊದಮೊದಲ ದಿನಗಳಲ್ಲಿ ಅಮ್ಮನ ಮೇಲ್ವಿಚಾರಣೆ ಕೊಂಚ ಮಟ್ಟಿಗೆ ಇರುತ್ತದಾದರೂ ಬರಬರುತ್ತ ಅದು ಪ್ರತಿ ತಿಂಗಳ ಮಾಮೂಲಿ ರಗಳೆಯೆನಿಸಿಬಿಡುತ್ತದೆ. ಮೂರು ಪ್ಲಸ್‌ ಎರಡು ದಿನಗಳಲ್ಲಿ ತಾನು ಮೈಲಿಗೆಯವಳು ಎಂದು ಅವಳನ್ನು ನಂಬಿಸಿ ಮತ್ತಷ್ಟು ಕೀಳರಿಮೆ ಹುಟ್ಟಿಸಲಾಗುತ್ತದೆ. 

ಮನುಷ್ಯ ಸೃಷ್ಟಿ, ಹೆಣ್ತನದ ಸಕಲ ಆಗುಹೋಗುಗಳ ಮೂಲ ವಾದ ಕ್ರಿಯೆ ಋತುಸ್ರಾವ. ಆದರೆ ಆ ಮೂರು ದಿನಗಳ ಕುರಿತು ಮಾನವ ಸಮಾಜಕ್ಕಿರುವ ಅಜಾnನ, ಅಸಡ್ಡೆ ಹೇಳಲಸಾಧ್ಯ. ಆ ಕುರಿತು ಹೆಣ್ಮಕ್ಕಳೂ ಮನಬಿಚ್ಚಿ ಮಾತಾಡುವುದಿಲ್ಲ. ಮುಟ್ಟು ಎಂದು ಹೇಳುವುದೇ ಮರ್ಯಾದೆಯ ಪ್ರಶ್ನೆ, ಅದೂ ಗಂಡಸರ ಎದುರಿಗಂತೂ ಆ ಮಾತು ಎತ್ತುವುದೇ ನಿರ್ಲಜ್ಜತನ ಎಂಬ ಭಾವನೆ ಎಷ್ಟುಮಟ್ಟಿಗೆ ಬೇರೂರಿದೆಯೆಂದರೆ ಸ್ವತಃ ಮುಟ್ಟಿನ ದಿನಗಳಲ್ಲಿ ನೋಯುವ, ಬೇಯುವ, ಆ ಕಾರಣಕ್ಕಾಗೆ ನಿರ್ಲಕ್ಷ್ಯಕ್ಕೆ ಗುರಿಯಾಗಿ "ಹೊರಗಿರುವ ಹೆಣ್ಮಕ್ಕಳು' ಅದನ್ನೊಂದು ಅತ್ಯಂತ ಖಾಸಗಿ ವಿಷಯವಾಗಿಸಿಕೊಂಡಿದ್ದಾರೆ. ಸಮಸ್ಯೆಗಳನ್ನು ವೈದ್ಯರ ಬಳಿಯೂ ಹೇಳುವುದಿಲ್ಲ. ಹೀಗೆ ಮುಟ್ಟು "ಹುಶ್‌ ಹುಶ್‌' ಸಂಗತಿಯಾದ ಕಾರಣಕ್ಕೇ ಮುಟ್ಟಾದ ಮೂರು ದಿನ ಅವರಿಗೇನಾಗುತ್ತದೆ, ರಕ್ತಹರಿವನ್ನು ಹೇಗೆ ಮ್ಯಾನೇಜ್‌ ಮಾಡುತ್ತಾರೆ, ಅವರ ಸಮಸ್ಯೆಗಳೇನು ಎಂಬ ಬಗೆಗೆ ಸಮಾಜ ಇದುವರೆಗೂ ಯೋಚಿಸಿರಲಿಲ್ಲ. 

ಈಗ ಅಂತಹ ಕಾಲ ಬಂದಿದೆ. ಸಮಾಜ ಮುಟ್ಟಿನ ಬಗೆಗಷ್ಟೆ ಅಲ್ಲ, "ಮುಟ್ಟಿನ ಸ್ಯಾಲೆ ಕುರಿತೂ ಚಿಂತಿಸುತ್ತಿದೆ. ಏಕೆಂದರೆ 2000ನೇ ಇಸವಿಯಲ್ಲಿ ಆಸ್ಟ್ರೇಲಿಯಾ ಸರ್ಕಾರ ಮುಟ್ಟಿನ ಟ್ಯಾಂಪೂನುಗಳಿಗೆ 12% ಜಿಎಸ್ಟಿ ವಿಧಿಸಿದಾಗ; ಬ್ರಿಟನ್ನಿನಲ್ಲಿ 2014ರಲ್ಲಿ ಪ್ಯಾಡು-ಟ್ಯಾಂಪೂನುಗಳ ಮೇಲೆ ವ್ಯಾಟ್‌ ವಿಧಿಸಿ ದಾಗ ಮಹಿಳೆಯರಿಂದ "ಏಕ್ಸ್‌ ದಿ ಟ್ಯಾಂಪೂನ್‌ ಟ್ಯಾಕ್ಸ್‌', "ಸ್ಟಾಪ್‌ ಟ್ಯಾಕ್ಸಿಂಗ್‌ ಪಿರಿಯಡ್ಸ್‌' ಮುಂತಾದ ಅಭಿಯಾನಗಳು ನಡೆದವು. ಸರ್ಕಾರ, ಸಮಾಜಗಳು ಮೈ ಕೊಡವಿ ಎಚ್ಚೆತ್ತವು. ಈಗ ಭಾರತದಲ್ಲು ಸ್ಯಾನಿಟರಿ ನ್ಯಾಪಿRನ್‌ಗಳು 12.5% ಜಿಎಸ್ಟಿಗೆ ಒಳಗಾಗಿ ಇನ್ನಷ್ಟು ತುಟ್ಟಿಯಾಗಿ ವಿಸ್ತೃತ ಚರ್ಚೆ-ಹೋರಾಟ-ಅಭಿಯಾನಕ್ಕೆ ದಾರಿಯಾಗಿವೆ. 

ಏನಾದರಿರಲಿ, ಅಧಿಕ ತೆರಿಗೆ ವಿಧಿಸುವ ಮೂಲಕ ಇಂಥ ದೊಂದು ಮುಕ್ತ ಚರ್ಚೆ ಏರ್ಪಡಲು ಸಹಾಯ ಮಾಡಿದವರಿಗೆ ಧನ್ಯವಾದಗಳು.

ಈ ಮೊದಲು ಆ ಮೂರು ದಿನ ಹೇಗೆ ನಿಭಾಯಿಸುತ್ತಿದ್ದರು? ಹೊರಗೆ ಉಳಿದು ಏಕಾಂಗಿಯಾಗಿ ಆರಾಮವಾಗಿ ಮೂರು ದಿನ ಕಳೆಯುತ್ತಿದ್ದರೋ, ಅಥವಾ ಹೊರಗೆ ಗೇಯಬೇಕಾದ ಕಷ್ಟಕುಲದ ಶ್ರಮಿಕ ಹೆಣ್ಮಕ್ಕಳು ಅದೊಂದು ಅನಿವಾರ್ಯ ಕರ್ಮವೆಂದು ಹೊರೆ ಹೊತ್ತು ತಿರುಗುತ್ತಿದ್ದರೋ? ಯಾರಿಗೂ ಗೊತ್ತಿಲ್ಲ, ಯಾಕೆಂದರೆ ಯಾವ ಅಜ್ಜಿ ಮುತ್ತಜ್ಜಿಯೂ ವಿವರವಾಗಿ ಇವನ್ನೆಲ್ಲ ಹೇಳಲೇ ಇಲ್ಲ. ಒಂದಾನೊಂದು ಕಾಲದಿಂದ ಮುಟ್ಟಿನ ಅವಧಿಯಲ್ಲಿ ಸಾಮಾನ್ಯ ಹೆಣ್ಮಕ್ಕಳ ಪರಿಸ್ಥಿತಿ ಏನಾಗಿತ್ತು ಎಂದು ಯಾವ ಸಾಹಿತ್ಯವೂ ಉಲ್ಲೇಖೀಸಿಲ್ಲ. ವರ್ಷಗಟ್ಟಲೆ ಕಾಡಿನಲ್ಲುಳಿದ, ತಿಂಗಳುಗಟ್ಟಲೆ ರಾವಣ ನಗರದಲ್ಲಿದ್ದ ಸೀತೆ ಮುಟ್ಟಾದಾಗ ಏನು ಮಾಡಿದಳ್ಳೋ ರಾಮಾಯಣ ತಿಳಿಸುವುದಿಲ್ಲ. 

ಅಮ್ಮ ಪರ್ರನೆ ತನ್ನ ಮೆತ್ತನ್ನ ಹಳೆ ಸೀರೆಯನ್ನು ಚೌಕುಳಿ ಆಕಾರಕ್ಕೆ ಹರಿದು, ಮಡಚಿ ತೊಡೆ ಸಂದಿ ಬೀಳದಂತೆ ಇಟ್ಟುಕೋ ಎಂದದ್ದು ಬಹುಶಃ ಮುಟ್ಟಿನ ಸ್ರಾವವನ್ನು ಹೇಗೆ ನಿಭಾಯಿಸುವುದು ಎನ್ನುವ ಕುರಿತು ಹೇಳಿಕೊಡುವ ಮೊದಲ ಮತ್ತು ಕೊನೆಯ ಪಾಠ. ಮೊದಮೊದಲ ದಿನಗಳಲ್ಲಿ ಅಮ್ಮನ ಮೇಲ್ವಿಚಾರಣೆ ಕೊಂಚ ಮಟ್ಟಿಗೆ ಇರುತ್ತದಾದರೂ ಬರಬರುತ್ತ ಅದು ಪ್ರತಿ ತಿಂಗಳ ಮಾಮೂಲಿ ರೇಜಿಗೆ, ರಗಳೆಯೆನಿಸಿಬಿಡುತ್ತದೆ. ಮೂರು ಪ್ಲಸ್‌ ಎರಡು ದಿನಗಳಲ್ಲಿ ತಾನು ಮೈಲಿಗೆಯವಳು ಎಂದು ಅವಳನ್ನು ನಂಬಿಸಿ ಮತ್ತಷ್ಟು ಕೀಳರಿಮೆ ಹುಟ್ಟಿಸಲಾಗುತ್ತದೆ. ಅಕಸ್ಮಾತ್‌ ಉಟ್ಟ ಬಟ್ಟೆ ರಕ್ತಕಲೆಯಾದರೆ ಅವಮಾನ. ಕನಿಷ್ಟ ಶುಚಿ, ಕಾಮನ್‌ಸೆನ್ಸ್‌ ಇಲ್ಲದ ಹೆಣ್ಣೆಂಬ ತಿರಸ್ಕಾರ. ಖಾಸಗಿ ಸ್ಥಳವಿರದ ಕಡೆ ಎಲ್ಲೆಲ್ಲೋ ಯಾವ್ಯಾವಾಗಲೋ ಮುಟ್ಟಾಗಿಬಿಟ್ಟರೆ ಕಂಗಾಲು. ಕಚೀìಫು, ಕೈಗೆ ಸಿಕ್ಕ ಬಟ್ಟೆ, ಕಾಗದ, ಹತ್ತಿ ಏನೇನನ್ನೆಲ್ಲ "ಪ್ಯಾಡು'ಗಳಾಗಿಸಬೇಕಾದ ಅನಿವಾರ್ಯತೆ. ಮಳೆಗಾಲದಲ್ಲಿ ಬಟ್ಟೆ ಒಣಗದೇ ಕಮಟು ನಾತ ಸೂಸುವಾಗ ಎಲ್ಲರೆದುರಿಗೆ ಅದನ್ನುಟ್ಟು ಹೋಗುವುದು ಹೇಗೆಂದು, ಅಕಸ್ಮಾತ್‌ ಬಿಸಿಲು ಮುಖ ಕಂಡಾಗ ಹೊರಗೆ ಒಣಗಿಸುವುದು ಹೇಗೆಂದು ಮುಜುಗರ. ಕುಡಿಯಲೇ ನೀರು ಸಿಗದ ಊರುಗಳಲ್ಲಿ ಮುಟ್ಟಿನ ಬಟ್ಟೆ ತೊಳೆಯಲು ಅನುಭವಿಸಬಹುದಾದ ಕಷ್ಟ ಊಹಾತೀತ. ಹೊರಗೆ ತಿರುಗಾಡಲು ಹೋಗುವಾಗ, ಶಾಲೆಕಾಲೇಜು ಕಚೇರಿಗೆ ಹೋಗುವಾಗ ಬಟ್ಟೆ ಬದಲಿಸಲು ಆಗದೇ, ಬದಲಿಸಿದರೆ ತೊಳೆಯಲಾಗದೇ, ಬಳಸಿದ್ದು ಬ್ಯಾಗಿನೊಳಗೆ ಇಟ್ಟುಕೊಳ್ಳಲಾಗದೆ, ಬಿಸಾಡಲಾಗದೇ.. ಅಯ್ಯ ಯ್ಯಯ್ಯೋ..ಯಾಕಾದರೂ ಈ ಕಾಲದಲ್ಲಿ ಹೊರಬಿದ್ದೆನೋ, ಯಾಕಾದರೂ ಹುಡುಗಿಯಾದೆನೋ ಅನಿಸುವಂಥ ಮೂರು ದಿನದ ಅಪರಂಪಾರ ಕಷ್ಟ ಪರಂಪರೆ! ಇದು ಅನಾದಿಯಿಂದ ಹೆಣ್ಣು ಎದುರಿಸಿಕೊಂಡುಬಂದ ಒಳಸಂಕಟಗಳ ಸರಮಾಲೆ.
ಹೀಗಿರುತ್ತ ಬೇಕಾದಾಗ ಬಳಸಿ ಬಿಸಾಡುವ ಸ್ಯಾನಿಟರಿ ನ್ಯಾಪಿRನ್‌ ಬಳಕೆಗೆ ಬಂದಾಗ ಸ್ವರ್ಗದಿಂದಿಳಿದು ಬಂದ ಒಂದು ವರದಂತೆ ಅದು ಹೆಣ್ಮಕ್ಕಳಿಗೆ ಕಂಡಿದ್ದರೆ ಅಚ್ಚರಿಯಿಲ್ಲ. ಶಿಕ್ಷಣ-ಉದ್ಯೋಗವೆಂದು ಹೊರಗೆ ಓಡಾಡುವವರಿಗೆ, ನೀರಿರುವವರಿಗೆ, ಇಲ್ಲದ ವರಿಗೆ, ತಿರುಗಾಟ ಅನಿವಾರ್ಯವಾದವರಿಗೆ ಬಳಸಿ ಬಿಸಾಡುವ, ಸುಲಭದಲ್ಲಿ ಹೊತ್ತೂಯ್ಯಬಲ್ಲ ನ್ಯಾಪಿRನ್‌ ತುಂಬ ಆಪ್ತವೆನಿಸಿ ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿತು. ಅಪಾಯವೋ, ನಿರಪಾಯವೋ, ಹಿಂದೆಮುಂದೆ ಯೋಚಿಸದೇ ಅದರ ಸುಲಭ ಬಳಕೆಗೆ ಎಲ್ಲರೂ ಮಾರುಹೋದರು. 

ಅದು ಹೆಣ್ಮಕ್ಕಳನ್ನು ಬಾಧಿಸುತ್ತಿದ್ದ ಪ್ರಜನನ ಅಂಗಗಳ ಸೋಂಕು ರೋಗದ ಪ್ರಮಾಣವನ್ನು ಗಮನಾರ್ಹವಾಗಿ ಕುಗ್ಗಿಸಿತು. ಆ ಮೂರು ದಿನಗಳಲ್ಲೂ ಧೈರ್ಯವಾಗಿ ಹೊರಹೋಗಲು, ಮಾಮೂಲಿಯಾಗಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಆತ್ಮ ವಿಶ್ವಾಸ ತುಂಬಿತು. 2011ರ ಸರ್ವೇ ಪ್ರಕಾರ ಈಗ ಭಾರತದ 12% ಹೆಣ್ಮಕ್ಕಳು ಸ್ಯಾನಿಟರಿ ಪ್ಯಾಡ್‌ ಬಳಸುತ್ತಿದ್ದಾರೆ. ಈ ಆರು ವರ್ಷ ಗಳಲ್ಲಿ ಬಳಕೆದಾರರ ಸಂಖ್ಯೆ ಹೆಚ್ಚಾಗಿರಬಹುದು. ಈಗ ಒಂದಷ್ಟು ಮಹಿಳೆಯರಿಗೆ ಅದು ಅನಿವಾರ್ಯ ಅನಿಸಿರಲೂಬಹುದು. 

ಆದರೆ ನಡುನಡುವೆ ಸ್ಯಾನಿಟರಿ ನ್ಯಾಪಿRನ್‌ ಬಳಕೆಯ ಮಿತಿಗಳು, ಅದರಿಂದಾಗಬಹುದಾದ ತೊಂದರೆಗಳ ಬಗೆಗೆ ದೀರ್ಘ‌ ಚರ್ಚೆ, ವಾದವಿವಾದವೂ ನಡೆಯಿತು. ಅದು ಈಗಲೂ ನಡೆಯುತ್ತಿದೆ. ಈ ವಾದಗಳಲ್ಲಿ ಹುರುಳಿರಬಹುದು, ಇಲ್ಲದಿರ ಬಹುದು ಆದರೆ ಹೆಣ್ಮಕ್ಕಳು ತುಟ್ಟಿಯಾದರೂ ನ್ಯಾಪಿRನ್‌ ಕೊಂಡು, ಬಳಸಿ, ಹೇಗೋ ವಿಲೇವಾರಿ ಮಾಡಿ ಎಷ್ಟು ಒಗ್ಗಿದ್ದಾರೆಂದರೆ ಅವರು ಮರಳಿ  "ಬಟ್ಟೆ'ಯ ದಿನಗಳಿಗೆ ಹೋಗಲಾರದವರಾಗಿದ್ದಾರೆ. ನಾವು ದಿನೇ ದಿನೇ "ಬಳಸಿ ಬಿಸಾಡುವ' ವಸ್ತುಗಳ ದಾಸರಾಗು ತ್ತಿದ್ದೇವೆ. ಅಪಾರ ಪ್ರಮಾಣದ ಮರುಬಳಸಲಾಗದ, ಪರಿಸರಕ್ಕೆ ಅಪಾಯಕಾರಿ ಯಾದ ಕಸ ಉತ್ಪತ್ತಿ ಮಾಡುತ್ತಿದ್ದೇವೆ. ಅದರ ಒಳಿತು ಕೆಡುಕುಗಳ ಬಗೆಗೆ ಕಿಂಚಿತ್‌ ಯೋಚಿಸದೆ ಈಗ ಬಟ್ಟೆ ಯಿಂದ ಪ್ಯಾಡಿಗೆ ಬಂದಿದ್ದೇವೆ. ಆದರೂ ಮರುಚಿಂತಿಸಬೇಕಾದ ಹೊತ್ತು ಬಂದಿದೆ. 

ಹಾಗಾದರೆ ಪರಿಸರಸ್ನೇಹಿಯಾಗಿ ಹೇಗೆ "ಮುಟ್ಟನ್ನು ನಿಭಾಯಿಸುವುದು?
 -ಯಾರಿಗೆ ಸಮಯ, ನೀರು, ಸಹನೆ ಲಭ್ಯವೋ ಮತ್ತು ಸಾಧ್ಯವೋ ಅವರು ಹಳೆಯ ವಿಧಾನಕ್ಕೆ ಮರಳಬಹುದು. ಶುದ್ಧ, ಒಣ, ಹತ್ತಿಯ ಬಟ್ಟೆಗಳನ್ನು ಬಳಸಬಹುದು.     ಸರ್ಕಾರ ಸಹಾಯ ಧನ ನೀಡಿ ಪರಿಸರಸ್ನೇಹಿ ನ್ಯಾಪಿRನ್‌ಗಳನ್ನು ಅತಿ ಕಡಿಮೆ ದರದಲ್ಲಿ ತಯಾರಿಸಲು ಉತ್ತೇಜಿಸಬೇಕು. ಅವಶ್ಯವಾಗಿ ನ್ಯಾಪಿRನ್‌ಗಳಿಗೆ ಸೂಕ್ತ ವಿಲೇವಾರಿ ವಿಧಾನ ತಿಳಿಸಿ ಹೇಳಬೇಕು. 

-ಯೋನಿಯೊಳಗಿಟ್ಟುಕೊಳ್ಳುವ ಸಣ್ಣ ಕೊಳವೆಯಂತಹ ಟ್ಯಾಂಪೂನುಗಳು ಬಳಕೆಯಲ್ಲಿವೆ. ಆದರೆ ಅದಕ್ಕೆ ಬಳಸುವ ಕಚ್ಛಾವಸ್ತುಗಳು ಸ್ಯಾನಿಟರಿ ಪ್ಯಾಡಿನವೇ ಆಗಿದ್ದು ವಿಲೇವಾರಿ ಸವಾಲಿನದಾಗಿದೆ.

ಇದರ ಜೊತೆಗೆ ಒಂದು ಪರ್ಯಾಯವಿದೆ. ಆ ಕುರಿತು ಬರೆಯಲೇಬೇಕು. ಅದು "ಮುಟ್ಟಿನ ಬಟ್ಟಲು' ಅಥವಾ "ಮೆನ್‌ಸ್ಟ್ರೆವಲ್‌ ಕಪ್‌'. ಅಥವಾ ಶಿ ಕಪ್‌, ಸಿಲ್ಕಿ ಕಪ್‌, ಗ್ರೀನ್‌ ಕಪ್‌, ದಿವಾ ಕಪ್‌ (ಕೆನಡ), ಮೂನ್‌ ಕಪ್‌ (ಯುಕೆ)..
ಇವೆಲ್ಲ "ಮುಟ್ಟಿನ ಬಟ್ಟಲುಗಳು' ಅಥವಾ ಮೆನ್‌ಸ್ಟ್ರೆವಲ್‌ ಕಪ್ಸ್‌. ಮಕ್ಕಳಿಗೆ ಬಾಟಲಿ ಹಾಲು ಕುಡಿಸುವಾಗ ಬಳಸುವ ಸಿಲಿಕಾನ್‌ ನಿಪ್ಪಲ್‌ ನೋಡಿರುತ್ತೀರಿ. ಅಂಥದೇ ಮೆತ್ತನ್ನ ಆದರೆ ದೃಢವಾದ ಮುಟ್ಟಿನ ಬಟ್ಟಲುಗಳು ಬಂದಿವೆ. ತಿರುಗಿಸಿಟ್ಟ ಗಂಟೆಯಾಕಾರದ ಇವುಗಳ ಬುಡದಲ್ಲಿ ಒಂದು ಚೊಟ್ಟು ಇರುತ್ತದೆ. ಒಂದು ಕಾಲನ್ನು ಕುರ್ಚಿ ಅಥವಾ ಕಮೋಡಿನ ಮೇಲಿಟ್ಟು ಇನ್ನೊಂದು ಕಾಲಿನ ಮೇಲೆ ನಿಂತು ಅದನ್ನು ಹಾಕಿಕೊಳ್ಳಬಹುದು. ತುದಿ ಮಡಚಿ ಯೋನಿಯೊಳಗೆ ತುಂಬಿ ಒಮ್ಮೆ ತಿರುಪಿದಂತೆ ಸರಿಸಿದರೆ ಮುಗಿಯಿತು, ಒಳಹೋಗಿ ಸರಿಯಾಗಿ ಹಿಡಿದು ಕೂರುತ್ತದೆ. ಅವರವರ ರಕ್ತಸ್ರಾವಕ್ಕೆ ತಕ್ಕಂತೆ 4 ರಿಂದ 12 ತಾಸಿಗೊಮ್ಮೆ ಅದನ್ನು ಬದಲಿಸಬೇಕಾಗುತ್ತದೆ. ಅದರ ಬುಡದ ನಿಪ್ಪಲಿನಂತಹ ಚೊಟ್ಟು ಎಳೆದರೆ ಹೊರಬರುತ್ತದೆ. ಹೊರತೆಗೆದು, ತೊಳೆದು ಮತ್ತೆ ಬಳಸಬೇಕು. ತಿಂಗಳ ಸ್ರಾವ ಮುಗಿದ ಕೂಡಲೇ ನೀರಲ್ಲಿ ಕುದಿಸಿ, ಒಣಗಿಸಿ, ಇಟ್ಟುಕೊಂಡರೆ 10 ವರ್ಷದ ತನಕ ಬಳಸಬಹುದು. 

ಅವರವರ ಎತ್ತರ, ಗಾತ್ರ, ಸ್ರಾವದ ಪ್ರಮಾಣದ ಮೇಲೆ ಭಿನ್ನ ಅಳತೆಯ ಕಪ್‌ಗ್ಳು ಲಭ್ಯವಿವೆ. ಶಿ ಕಪ್‌ 28 ಎಂಎಲ್‌ ಹಿಡಿಯುತ್ತದೆ. ದಿವಾ ಕಪ್‌ 30 ಎಂಎಲ್‌. ಸಾಧಾರಣವಾಗಿ ತಿಂಗಳ ಸ್ರಾವ 35 ಎಂಎಲ್‌ ಇರುತ್ತದೆ. ಅದು 10-80 ಎಂಎಲ್‌ ತನಕವೂ ಇರಬಹುದು. ಏನಾದರೂ ಸ್ರಾವದ ಸಮಯದಲ್ಲಿ ಪ್ರತಿದಿನ ಬೆಳಿಗ್ಗೆ ಒಮ್ಮೆ, ರಾತ್ರಿ ಒಮ್ಮೆ ಕಪ್‌ ಬರಿದುಮಾಡಿ ತೊಟ್ಟುಕೊಂಡರೆ ಸಾಕಾಗುತ್ತದೆ. 

ಒಬ್ಬ ಮಹಿಳೆ ಸರಾಸರಿ 30-40 ವರ್ಷ ಮುಟ್ಟಿನ ಸ್ರಾವ ಕ್ಕೊಳಗಾಗುತ್ತಾಳೆ. ಇಡಿಯ ಜೀವಮಾನಕ್ಕೆ 4 ಕಪ್‌ ಸಾಕು. ಒಂದರ ಬೆಲೆ 500 ರೂಪಾಯಿ. 10 ವರ್ಷಕ್ಕೆ 500 ರೂಪಾಯಿ, ಒಂದು ವರ್ಷಕ್ಕೆ 50 ರೂಪಾಯಿ, ತಿಂಗಳಿಗೆ 4 ರೂಪಾಯಿ ಖರ್ಚು!

ಇದು ಐದಾರು ದಶಕಗಳಿಂದ ಅಮೆರಿಕ, ಕೆನಡ, ಯುಕೆ ಮತ್ತಿತರ ಕಡೆ ಬಳಕೆಯಲ್ಲಿದೆ. ಭಾರತದಲ್ಲೂ ಬಳಸಲ್ಪಡುತ್ತಿದೆ. ಆದರೆ ವೈದ್ಯಕೀಯವಾಗಿ ಸುರಕ್ಷಿತವೆಂದು ಸೂಚಿಸಲ್ಪಟ್ಟರೂ ಕನ್ಯತ್ವ ಹೋದೀತು ಎಂದು ಹೆದರಿ, ಮತ್ತಿನ್ನೇನೇನೋ ಆದೀತು ಎಂದು ಹೆದರಿ, ತನ್ನ ಅಂಗದೊಳಗೆ ತಾನೇ ಏನನ್ನೋ ತೂರಿಸಿ ಇಟ್ಟುಕೊಳ್ಳಲು ಹೆದರಿ ಮಹಿಳೆಯರು ಪ್ಯಾಡಿನಷ್ಟು ಸುಲಭವಾಗಿ ಅದಕ್ಕೆ ಒಗ್ಗಿಕೊಂಡಿಲ್ಲ. ಜೊತೆಗೆ ಪ್ರತಿ ತಿಂಗಳು ಸ್ಯಾನಿಟರಿ ಪ್ಯಾಡ್‌ ಮಾರಿದರೆ ಬರುವಷ್ಟು ಲಾಭ 10 ವರ್ಷ ಬಾಳಿಕೆ ಬರುವ ಕಪ್‌ ಮಾರಿದರೆ ಬರುವುದಿಲ್ಲವಾದ್ದರಿಂದ ಕಂಪನಿಗಳು ತಯಾರಿಗೆ ಮುಂದೆ ಬರುತ್ತಿಲ್ಲ. 

ಆದರೆ ಇದು ನಮ್ಮ ಭವಿಷ್ಯದ ಪರಿಣಾಮಕಾರಿ, ಸುರಕ್ಷಿತ, ಪರಿಸರ ಸ್ನೇಹಿ, ಕಾಸ್ಟ್‌ ಎಫೆಕ್ಟಿವ್‌ ಪರ್ಯಾಯ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಎಂದೇ ಸರ್ಕಾರ ಈ ಮುಂಚೆ ನಿರೋಧ್‌ ತಯಾರಿಸಿ ಪುಕ್ಕಟೆ ವಿತರಿಸಿದಂತೆ ಈ ಕಪ್‌ಗ್ಳನ್ನೂ ತಯಾರಿಸಿ ಬಳಸಲು ಕೊಡುವುದು ಅವಶ್ಯವಾಗಿದೆ.

ಮುಟ್ಟು ಎನಲು ಹಿಂಜರಿಕೆ. ಮುಟ್ಟಿನ ಬಟ್ಟೆ ತೊಳೆದು ಬಿಸಿಲಿಗೆ ಒಣಗಿಸಲು ಹಿಂಜರಿಕೆ. ನಮ್ಮ ಅಂಗಾಂಗಗಳ ಮುಟ್ಟಿಕೊಳಲೂ ಹಿಂಜರಿಕೆ. ಅದರ ಬಗೆಗೆ ಮಾತನಾಡಲೂ ಹಿಂಜರಿಕೆ. ಏನು ಮಾಡುವುದೆಂದು ಕೇಳಲೂ ಹಿಂಜರಿಕೆ. ಹೇಳಿದ್ದನ್ನು ಕೇಳಿಸಿಕೊ ಳ್ಳಲೂ ಹಿಂಜರಿಕೆ. ಅನುಸರಿಸಲೂ ಅನುಮಾನ ಭರಿತ ಹಿಂಜರಿಕೆ. 
ಅವನ್ನೆಲ್ಲ ದಾಟಿ ಅಂಥ ಒಂದು ದಿನ ಬಂದೀತು, ಆಗ ಹೆಣ್ಮಕ್ಕಳೆಲ್ಲ ತಮ್ಮ ದೇಹವನ್ನು ಸ್ನೇಹಭಾವದಿಂದ ನೋಡಿಯಾರು. ಪ್ಯಾಡು, ಟ್ಯಾಂಪೂನ್‌, ಕಪ್ಪುಗಳು ಅವರಿಗೆ ಮಾತ್ರ ಅಲ್ಲ, ಅವರನ್ನು ಹೆತ್ತ ಭೂಮಿಗೂ ಸ್ನೇಹಿಯಾಗುವಂತಾದೀತು.

- ಡಾ. ಎಚ್‌.ಎಸ್‌. ಅನುಪಮಾ, ಕವಲಕ್ಕಿ

Back to Top