CONNECT WITH US  

ಕರ್ನಾಟಕದಲ್ಲಿ ಈಗ ಬರ ಎಂಬುದೇ ಇಲ್ಲ!

ತಾಲೂಕಿನ ಸರಾಸರಿ ಮಳೆ ಪ್ರಮಾಣ ಲೆಕ್ಕ ಹಾಕಿದರೆ, ಬೆಳೆ ನಷ್ಟ ಅಂದಾಜು ಮಾಡಿದರೆ ಆ ತಾಲೂಕು ಬರ ಪೀಡಿತ ಆಗಲಾರದು. ಬರದ ಬವಣೆಯಿಂದ ತತ್ತರಿಸಿದ ಗ್ರಾಮದ ರೈತರಿಗೆ ಅನ್ಯಾಯ ಆಗುವುದಲ್ಲದೇ ಬರಪೀಡಿತ ತಾಲೂಕು ಘೋಷಣೆಯೂ ಅವೈಜ್ಞಾನಿಕ ಆಗುತ್ತದೆ.

ಪ್ರಸಕ್ತ ವರ್ಷ ರಾಜ್ಯದಲ್ಲಿ ಬರ ಎಂಬುದೇ ಇಲ್ಲ! ಕೃಷಿ ಇಲಾ ಖೆಯು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಎಂಬ ಹೊಸ ಹೆಸರು ಹೊತ್ತ ಒಂದೆರಡು ವರ್ಷಗಳಲ್ಲಿ ರಾಜ್ಯದಲ್ಲಿ ಬರವೇ ಇಲ್ಲದಂತೆ ಮಾಡಿದೆ. ಹೊಸ ಹೆಸರಿನ ಇಲಾಖೆ ಕಾಲಕಾಲಕ್ಕೆ ಮಳೆ ಸುರಿಸಿ ಬೆಳೆಯ ಸಮೃದ್ಧಿಗೆ ಕಾರಣವಾಯಿತೇ?! ಉತ್ತರ ಭಾಗದ ಹನ್ನೆರಡೂ ತಿಂಗಳು ತುಂಬಿ ಹರಿವ ನದಿಗಳನ್ನು ರಾಜ್ಯದ ನದಿಗಳಿಗೆ ಜೋಡಿಸಿ ನೀರಾವರಿ ಮಾಡಿದ್ದರಿಂದ ಬರ ಕಣ್ಮರೆ ಆಯಿತೇ? ಇದೇನು ಭ್ರಮೆಯೋ ವಾಸ್ತವವೋ ಒಂದೂ ತಿಳಿಯದು. ಆದರೆ ವಾಸ್ತವದಲ್ಲಿ ಕಳೆದ ಐದಾರು ವರ್ಷಗಳಲ್ಲಿ ಬರಪೀಡಿತ ತಾಲೂಕು ಗಳ ಸಂಖ್ಯೆ ಹೆಚ್ಚಾಗುತ್ತಿದೆ ಹೊರತು ಕಡಿಮೆ ಆಗಿಲ್ಲ. ಒಂದು ವರ್ಷ ಮುಂಗಾರಿ ಬೆಳೆ ಬರದಿದ್ದರೆ ಹಿಂಗಾರಿ ಬೆಳೆಯಾದರೂ ಬರುತ್ತಿತ್ತು. ಒಂದೊಂದು ವರ್ಷ ಮುಂಗಾರಿ ಮತ್ತು ಹಿಂಗಾರಿ ಎರಡೂ ಹಂಗಾಮಿನಲ್ಲಿ ಬರ ಇದ್ದೇ ಇದೆ. ವಾಸ್ತವವನ್ನು ಅಲ್ಲಗಳೆಯಲಾ ಗದು ನಿಜ. ಬರ ಅನುಭವಿಸಿದ ರೈತರಿಗೆ ಮಾತ್ರ ಗೊತ್ತು ಬರದ ಬವಣೆ. ಹಾಗೆ ನೋಡಿದರೆ ರೈತರೇನು ಬರ ಬಯಸಲಾರರು. ಸರಕಾರ ಕೊಡುವ ಬರ ಪರಿಹಾರದಿಂದ ಬರ ಇಲ್ಲದಾಗದು.

ಆಯಾ ರಾಜ್ಯಗಳ ಬರಪೀಡಿತ ತಾಲೂಕುಗಳಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಕೇಂದ್ರ ಸರಕಾರ ನೆರವು ನೀಡುತ್ತ ಬಂದಿದೆ. ರಾಜ್ಯ ಸರಕಾರವು ಪ್ರಾಕೃತಿಕ ವಿಪತ್ತು ನಿರ್ವಹಣಾ ಕೇಂದ್ರದಿಂದ ತನ್ನ ಪಾಲಿನ ನೆರವು ಕೊಡಮಾಡಿದೆ. ಎರಡು ವರ್ಷಗಳ ಹಿಂದೆ ಕೇಂದ್ರ ಸರಕಾರ ಬರಪರಿಹಾರ ಕೊಡುವ ಮಾನದಂಡವನ್ನು ಬದಲಾಯಿಸಿತ್ತು. ಅದಕ್ಕೂ ಮೊದಲು ಇದ್ದ ಮಾನದಂಡದ ಪ್ರಕಾರ ಶೇ.50ರಷ್ಟು ಬೆಳೆಹಾನಿ ಆಗಿರುವ ತಾಲೂಕು ಬರಪೀಡಿತ ವ್ಯಾಪ್ತಿಯೊಳಗೆ ಬರುತ್ತಿತ್ತು. ಅದೇ ರೀತಿ ಬರ ಪರಿಹಾರ ಪಡೆಯುವ ಅರ್ಹತೆ ಹೊಂದುತ್ತಿತ್ತು. ಇದನ್ನು ಅಧ್ಯಯನ ಮಾಡಿದ ಕೇಂದ್ರ ಸರಕಾರ ಶೇ.33ರಷ್ಟು ಬೆಳೆಹಾನಿ ಆದರೆ ಸಾಕು. ಬರಪೀಡಿತ ತಾಲೂಕು ಆಗಲು ಅರ್ಹತೆ ಪಡೆ ಯುತ್ತಿತ್ತು ಅದೇ ರೀತಿ ಬರ ಪರಿಹಾರದ ಮೊತ್ತ ಪಡೆಯಬಹು ದಾಗಿತ್ತು. ಕೇಂದ್ರ ಸರಕಾರದ ಈ ಕ್ರಮ ಸ್ವಾಗತಾರ್ಹ ಎನಿಸಿತ್ತು. ಅಷ್ಟೇ ಉತ್ಸಾಹ ಹಾಗೂ ಹೆಮ್ಮೆಯಿಂದ ಕೇಂದ್ರ ಸರಕಾರ ಯೋಜನೆ ಜಾರಿಗೆ ತಂದಿತ್ತು. ರೈತರ ಖಾತೆಗೆ ಹಣ ಜಮೆಯಾಗುವಂತೆ ಮಾಡಿದ್ದು ಮತ್ತೂಂದು ಕ್ರಾಂತಿಕಾರಿ ಹೆಜ್ಜೆ ಆಗಿತ್ತು. ಆದರೆ ಈ ಹೆಮ್ಮೆ ಹಾಗೂ ಉತ್ಸಾಹದ ಬಲೂನಿಗೆ ಮುಳ್ಳು ಚುಚ್ಚಿ ದಂತಾಗಿರುವುದು ವಿಷಾದದ ಸಂಗತಿ.

2011-12ರಲ್ಲಿ ಬರಪೀಡಿತ ತಾಲೂಕುಗಳು 123. 2016- 17ರಲ್ಲಿ 139 ತಾಲೂಕುಗಳು ಬರಪೀಡಿತ ಆಗಿದ್ದವು. ಅದೇ ರೀತಿ ಕೇಂದ್ರ ಸರಕಾರ ರಾಜ್ಯಕ್ಕೆ ಬರಪರಿಹಾರ ಕೊಟ್ಟ ಮೊತ್ತ 2011- 12ರಲ್ಲಿ 127ಕೋಟಿ ಇದ್ದದ್ದು 2016-17ರಲ್ಲಿ 2510 ಕೋಟಿ ಆಗಿದೆ. ಇದಕ್ಕೆ ರಾಜ್ಯ ಸರಕಾರ ಕೊಡಮಾಡಿದ ಮೊತ್ತ ಸೇರಿಸಿದರೆ ಇನ್ನೂ ಹೆಚ್ಚಾಗಲಿದೆ. ಕೇಂದ್ರ ಸರಕಾರ ಒಂದು ಕಡೆಗೆ ಬೆಳೆ ಪರಿಹಾರದ ಮೊತ್ತ ದಾಖಲೆ ಪ್ರಮಾಣದಲ್ಲಿ ಏರಿಕೆ ಮಾಡಿದರೆ, ಇನ್ನೊಂದು ಕಡೆಗೆ ಬೆಳೆ ನಷ್ಟದ ಪ್ರಮಾಣ ಶೇಕಡಾವಾರು ಕಡಿಮೆ ಮಾಡಿತ್ತು. ನಿಜವಾಗಿಯೂ ಈ ಕ್ರಮ ಸ್ತುತ್ಯಾರ್ಹವೆನಿಸಿತ್ತು. ದಿಢೀ ರನೆ ಮಾರ್ಚ್‌ 2017ರಿಂದ ಅನ್ವಯವಾಗುವಂತೆ ಬರಪರಿ ಹಾರಕ್ಕೆ ಅರ್ಹತೆ ಪಡೆಯುವ ತಾಲೂಕಿನ ಮಾನದಂಡವನ್ನು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಪುನಃ ಬದಲು ಮಾಡಿದೆ. ಇದರಿಂದ ರಾಜ್ಯದ ಒಂದೆರಡು ತಾಲೂಕುಗಳು ಮಾತ್ರ ಬರ ಪೀಡಿತ ಎಂಬ ಅರ್ಹತೆ ಹೊಂದಬಲ್ಲವು. ಪ್ರಸಕ್ತ ವರ್ಷ ಮುಂಗಾರಿ ಹಂಗಾಮಿನಲ್ಲಿ 61 ತಾಲೂಕುಗಳು ಬರ ಪೀಡಿತ ಎಂಬ ಅರ್ಹತೆ ಪಡೆಯುತ್ತಿದ್ದವು.

ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ರೂಪಿಸಿದ ಮಾನದಂಡದ ಪ್ರಕಾರ ರಾಜ್ಯದಲ್ಲಿ ಬರ ಎಲ್ಲಿದೆ? ಎಂದು ಕೇಳುವಂತಾಗಿದೆ. ಬರವನ್ನು ರೈತರ ಹೊಲದಿಂದ ಕಲ್ಯಾಣ ಇಲಾಖೆ ಓಡಿಸಿಲ್ಲ. ಆ ಮಾತು ಬೇರೆ. ಮಳೆ ಬೆಳೆ ಮತ್ತು ಹೊಲ ಹಾಗೂ ಹವಾಮಾನವನ್ನು ನಂಬಿಕೊಂಡ ರೈತರಿಗೆ ಬರ ಅಥವಾ ಸುಬನಗಾಲದ ಪರಿಚಯ ಇದ್ದೇ ಇರುವುದು. ಲೇಖಕ ಇರುವ ತಾಲೂಕಿನ ಬಹುತೇಕ ಭಾಗದಲ್ಲಿ ಮುಂಗಾರಿಯಲ್ಲಿ ಮಳೆ ಆಗಲೇ ಇಲ್ಲ. ಮಳೆ ಆಗದಿದ್ದರೆ ಬಿತ್ತನೆ ಮಾಡಲಾಗದು. ಹೀಗಿದ್ದೂ ಬರಪೀಡಿತ ತಾಲೂಕು ಆಗಲಾರದೆಂದರೆ? ಬೆಳೆ ವಿಮೆ ಮಾಡಿಸಬೇಕೆಂದರೆ ಬೀಜ ಬಿತ್ತನೆ ಮಾಡಿ ನಾಟಿ ಆಗಿ ಒಂದು ತಿಂಗಳ ಬೆಳೆ ಇದ್ದಾಗ ಮಾತ್ರ ಬೆಳೆ ವಿಮೆ ಮಾಡಿಸಬಹುದಾಗಿದೆ. ಬಿತ್ತನೆಯನ್ನೇ ಮಾಡಿಲ್ಲ ಎಂದಾದರೆ, ಬೆಳೆ ವಿಮೆ ಮಾಡಿಸುವುದೆಂತು? ಬೆಳೆ ವಿಮೆ ಯೋಜನೆಯೂ ಹೊಸ ಹೆಸರಿನೊಂದಿಗೆ ಅಂದರೆ ಪ್ರಧಾನ ಮಂತ್ರಿ ಫ‌ಸಲ ಬಿಮಾ ಯೋಜನೆ ಎಂಬ ಖ್ಯಾತಿ ಹೊಂದಿದೆ. ಈ ಯೋಜನೆಯ ಪ್ರಕಾರ ರೈತರು ಬಿತ್ತನೆ ಮಾಡದಿದ್ದರೂ ಬೆಳೆ ವಿಮೆ ಮಾಡಿಸಲು ಮತ್ತು ಬೆಳೆ ನಷ್ಟಕ್ಕೆ ವಿಮೆ ಪರಿಹಾರವನ್ನು ಪಡೆಯಲು ಸಾದ್ಯವಿದೆ. ಹೊಸ ಹೆಸರಿನ ಬೆಳೆ ವಿಮೆ ಯೋಜನೆ. ವಿಮಾ ಕಂತಿನ ಹಣ ತುಂಬುವ ಮೊತ್ತ ಕಡಿಮೆ ಮಾಡಿದ್ದು ದಾಖಲೆ ಪ್ರಮಾಣದ ಪ್ರಚಾರ ಪಡೆದಿದ್ದು ನಿಜ. ಆದರೆ ಯೋಜನೆಯಲ್ಲಿದ್ದ ದೋಷಗಳನ್ನು ತಪ್ಪುಗಳನ್ನು ತಿದ್ದಿಕೊಳ್ಳಲೇ ಇಲ್ಲ. ರೈತರಪರ ಆಗಲಿಲ್ಲ ಎಂಬುದು ದುರಂತದ ಸಂಗತಿ.

ಬರ ಘೋಷಣೆಯೂ ಅವೈಜ್ಞಾನಿಕ
ಹವಾಮಾನ ವೈಪರೀತ್ಯದಿಂದಾಗಿ ಒಂದು ಊರಿಗಾದ ಮಳೆ ಪಕ್ಕದ ಊರಿಗೆ ಆಗುತ್ತಿಲ್ಲ. ಅಷ್ಟೇ ಯಾಕೆ ತಾಲೂಕಿನ ಬಹುತೇಕ ಭಾಗದಲ್ಲಿ ಮಳೆ ಆಗಿ ಬೆಳೆ ಬಂದರೆ ಅದೇ ತಾಲೂಕಿನ ಹಲವಾರು ಊರುಗಳಲ್ಲಿ ಮಳೆ ಆಗದೆ ಬೆಳೆ ಬರದೆ ಬರಗಾಲದ ಕರಿಛಾಯೆ ಇರುತ್ತದೆ. ತಾಲೂಕಿನ ಸರಾಸರಿ ಮಳೆ ಪ್ರಮಾಣ ಲೆಕ್ಕ ಹಾಕಿದರೆ, ಬೆಳೆ ನಷ್ಟ ಅಂದಾಜು ಮಾಡಿದರೆ ಆ ತಾಲೂಕು ಬರಪೀಡಿತ ಆಗಲಾರದು. ಬರದ ಬವಣೆಯಿಂದ ತತ್ತರಿಸಿದ ಗ್ರಾಮದ ರೈತರಿಗೆ ಅನ್ಯಾಯ ಆಗುವುದಲ್ಲದೇ ಬರಪೀಡಿತ ತಾಲೂಕು ಘೋಷ ಣೆಯೂ ಅವೈಜ್ಞಾನಿಕ ಆಗುತ್ತದೆ. ಬರ ಕುರಿತಂತೆ ಚರ್ಚಿಸಲು ವಿಧಾನಸಭೆಯಲ್ಲಿ ಶಾಸಕರಿಗೂ ಬರ ಬಂದಿತ್ತು! ಕೃಷಿ ಕೆಲಸ ಕಾರ್ಯಗಳಿಗೆ ಕೂಲಿಕಾರರ ಬರ ಇದ್ದೇ ಇದೆ.

ಬೆಳೆ ವಿಮೆಯೂ ಅವೈಜ್ಞಾನಿಕ
 ಇದು ತಿರಸ್ಕಾರದ ಮಾತಲ್ಲ. ವಿರೋಧ ಪಕ್ಷದವರ ಅಭಿಪ್ರಾಯ ಅಲ್ಲ. ರೈತರ ಅಭಿಪ್ರಾಯ. ರೈತರಿಂದ ವಿಮಾ ಕಂಪನಿ ಪ್ರೀಮಿಯಂ ಹಣ ಪಡೆಯುತ್ತದೆ. ವಿಮೆಯ ಪರಿಹಾರದ ಮೊತ್ತ ನಿರ್ಧರಿ ಸುವಾಗ ಸರಾಸರಿ ಮಳೆ ಬೆಳೆಯ ವರದಿಯನ್ನು ಪರಿಗಣಿಸುತ್ತದೆ. ಮೊದಲು ತಾಲೂಕು ಅಥವಾ ಹೋಬಳಿ ಒಂದು ಘಟಕ ಎಂದು ನಿಗದಿಪಡಿಸಲಾಗಿತ್ತು. ಇತ್ತೀಚೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಯನ್ನು ಒಂದು ಘಟಕ ಎಂದು ನಿಗದಿಪಡಿಸಲಾಗಿದೆ. ಇದ್ದುದರಲ್ಲಿ ಇದು ಸಮಾಧಾನದ ಸಂಗತಿ. ಒಂದು ಊರಿಗಾದ ಮಳೆ ಪಕ್ಕದ ಊರಿಗೆ ಆಗದು. ಒಂದೇ ಊರಿನ ಪೂರ್ವಭಾಗದಲ್ಲಿ ಮಳೆ ಆದರೆ ಪಶ್ಚಿಮ ಭಾಗದಲ್ಲಿ ಮಳೆ ಆಗಲಾರದು. ಅದೇ ರೀತಿ ಒಂದು ಹೊಲದ (ಮಳೆ ಆಗಿರುವ) ಬೆಳೆಯಂತೆ ಮಳೆ ಆಗಿರದ ಹೊಲದ ಬೆಳೆ ಇರಲಾರದು. ಇಳುವರಿಯೂ ಬರಲಾಗದು. ಇದು ಒಂದು ರೀತಿಯ ಅನ್ಯಾಯ ಮತ್ತು ಅವೈಜ್ಞಾನಿಕ. ಆದರೆ ಇನ್ನೊಂದು ರೀತಿಯ ಅನ್ಯಾಯ ಮತ್ತು ಅವೈಜ್ಞಾನಿಕ ಕ್ರಮವನ್ನು ಗಮನಿಸ ಬೇಕು. ಆಯಾ ಘಟಕದ ಏಳು ವರ್ಷಗಳ ಸರಾಸರಿ ಮಳೆ ಬೆಳೆ ಹಾಗೂ ಇಳುವರಿಯ ಆಧಾರದ ಮೂಲಕ ಬೆಳೆ ನಷ್ಟದ ಅಂದಾಜು ಮಾಡಲಾಗುತ್ತಿದೆ ಮತ್ತು ವಿಮೆ ಪರಿಹಾರದ ಮೊತ್ತ ನಿಗದಿಪಡಿ ಸಲಾಗುತ್ತಿದೆ. ಒಂದು ಘಟಕದಲ್ಲಿಯ ಸರಾಸರಿ ಮಳೆ ಬೆಳೆಯ ಇಳುವರಿ ಏಳು ವರ್ಷಗಳ ಸರಾಸರಿ ಗಣನೆಗೆ ತೆಗೆದುಕೊಳ್ಳು ವುದು ಯಾವ ನ್ಯಾಯ? ಆಯಾ ವರ್ಷದ ಮಳೆ ಬೆಳೆ ಮತ್ತು ಇಳುವರಿ ಪ್ರಸಕ್ತ ವರ್ಷದ ಸರಾಸರಿಗೆ ತಾಳೆ ಹಾಕುವುದು ಹಾಸ್ಯಾಸ್ಪದ.

ವೈಜ್ಞಾನಿಕತೆಯ ವ್ಯಾಖ್ಯೆ ಏನು?
ನಮ್ಮ ರೈತರ ಕಲ್ಯಾಣಕಾರರು ರೈತರು ವೈಜ್ಞಾನಿಕ ಕೃಷಿ ಮಾಡ ಬೇಕು, ಹೊಸ ತಾಂತ್ರಿಕತೆ ಅಳವಡಿಸಿಕೊಳ್ಳಬೇಕೆಂದು ಹೇಳುತ್ತಲೇ ಇದ್ದಾರೆ. ಆದರೆ ರೈತಪರ ನೀತಿ ನಿರೂಪಣೆ ಮಾಡುವಾಗ ವೈಜ್ಞಾನಿಕತೆ ಮತ್ತು ನೂತನ ತಂತ್ರಜ್ಞಾನ ಮರೆತು ಹೋಗಿರುತ್ತದೆ. ಮುಖ್ಯ ವಾಗಿ ನಮ್ಮ ಬೆಳೆಗಳು ಮಳೆಯನ್ನು ಅವಲಂಬಿಸಿವೆ. ಆರೋಗ್ಯ ಪೂರ್ಣ ವಾಗಿ ಬೆಳೆಗಳು ಬೆಳೆಯಲು ಉತ್ತಮ ಹವಾ ಮಾನವೂ ಅವಶ್ಯಕ ಎನಿಸಿದೆ. ಮಳೆ ಆಗಿ ಬಿತ್ತನೆ ಮಾಡಿದರೆನ್ನಿ ಕಾಯಿ ಕಾಳು ಗಟ್ಟುವಾಗ ಮಳೆ ಆಗದಿದ್ದರೆ ಬೆಳೆ ವಿಫ‌ಲ ಆಗುವುದು. ಕಾಲಕಾಲಕ್ಕೆ ಮಳೆ ಆದರೂ, ಬೆಳೆಗೆ ಬೇಕಾದ ವಾತಾವರಣ ಇರದಿದ್ದರೆ ಬೆಳೆಗಳು ಸೊರಗುತ್ತವೆ. ರೋಗ ಕೀಟದ ಬಾಧೆ ಹೆಚ್ಚಾಗುವುದು. ಇದರಿಂದ ಇಳುವರಿ ಕುಂಠಿತವಾಗುತ್ತದೆ. ಇದು ಕೃಷಿರಂಗದ ಸಾಮಾನ್ಯ ಜ್ಞಾನ. ಕೊನೆಯದಾಗಿ, ಬರಪೀಡಿತ ಪ್ರದೇಶದ ಮಾನದಂಡಕ್ಕೆ ಬರೋಣ. ಹಿಂದಿನ ಬರಪೀಡಿತ ಪ್ರದೇಶದ (ತಾಲೂಕಿನ) ಮಾನ ದಂಡ ಅವೈಜ್ಞಾನಿಕ ಆಗಿತ್ತು. ರೈತರಿಗೆ ಅನ್ಯಾಯ ಮಾಡಿತ್ತು ಎಂದು ತಾನು ರೈತರ ಕಲ್ಯಾಣವನ್ನು ಮುಖ್ಯವಾಗಿಟ್ಟುಕೊಂಡು ರೈತರಿಗೆ ನ್ಯಾಯ ಒದಗಿಸಲು, ವೈಜ್ಞಾನಿಕ ಮಾನದಂಡ ರೂಪಿಸಿ ದ್ದೇನೆಂದು ಹೆಮ್ಮೆಯಿಂದ ಹೇಳಿಕೊಂಡಿತ್ತೋ ಅದೇ ಹೊಸ ಹೆಸರಿನ ಇಲಾಖೆ ಈ ರೀತಿ ಮೊದಲಿದ್ದ ಮಾನದಂಡ ರೂಪಿಸಿದೆ. ಇದರ ಪ್ರಕಾರ ಶೇ.60ಕ್ಕಿಂತ ಹೆಚ್ಚು ಮಳೆ ಕೊರತೆ ಶೇ.50ರಷ್ಟು ಬೆಳೆ ನಷ್ಟ ಮೂರ ಕ್ಕಿಂತ ಹೆಚ್ಚು ವಾರ ಒಣ ಹವೆ, ಶೇ.25ಕ್ಕಿಂತ ಕಡಿಮೆ ತೇವಾಂಶ ಇರುವ ತಾಲೂಕು ಬರಪೀಡಿತ ಎಂದು ಚೌಕಟ್ಟು ಬದಲಾಯಿಸ ಲಾಗಿದೆ. ಬೆಳೆ ವಿಮೆಯ ಪರಿಹಾರದ ಮೊತ್ತ ನಿಗದಿಯಲ್ಲೂ ಇಂಥ ಮಾನದಂಡ ರೂಪಿಸುವ ಹುನ್ನಾರ ಇರಲಾರದೆಂದು ಅನುಮಾನಪಡುವಂತಾಗಿದೆ.

ಈರಯ್ಯ ಕಿಲ್ಲೇದಾರ


Trending videos

Back to Top