“ವೈದ್ಯೋ ನಾರಾಯಣೋ ಹರಿಃ’ ಅಂದರೆ ವೈದ್ಯ ದೇವರು ಎಂದಲ್ಲ


Team Udayavani, Apr 7, 2018, 6:00 AM IST

9.jpg

ಖನ್ನತೆಯಂತಹ ಸಂಕೀರ್ಣ ಮಾನಸಿಕ ಸಮಸ್ಯೆ ವೈದ್ಯರಲ್ಲೇ ಹೆಚ್ಚು. ವೈದ್ಯರಲ್ಲಿನ ಆತ್ಮಹತ್ಯೆ ಸರಾಸರಿ ಸಮಾಜದ ಸಾಮಾನ್ಯ ಸರಾಸರಿಗಿಂತ ಹಲವು ಪಟ್ಟು ಮೇಲಿರುತ್ತದೆ. ಇದು ವೈದ್ಯರ ಮೇಲಿನ ಮಾನಸಿಕ ಒತ್ತಡದ ದ್ಯೋತಕ. ಒಂದು ವೇಳೆ ವೈದ್ಯ ದೈವಾಂಶ  ಸಂಭೂತನೇ ಆಗಿದ್ದಲ್ಲಿ ಹೀಗಿರುವುದು ಸಾಧ್ಯವೇ?

ವೈದ್ಯ ಮತ್ತು ರೋಗಿಗಳ ನಡುವಣ ಸಂಬಂಧ ದಿನೇ ದಿನೇ ಹಳಸುತ್ತಿರುವ ಇಂದಿನ ದಿನಗಳಲ್ಲಿ, ಆಗಾಗ ಕೇಳಿಬರುವ ವಾಕ್ಯವೆಂದರೆ “ವೈದ್ಯೋ ನಾರಾಯಣೋ ಹರಿಃ’. ಇದರ ಅರ್ಥ “ವೈದ್ಯನೆಂದರೆ ದೇವರಿಗೆ ಸಮಾನ’ ಎಂದೇ ಈ ಮಾತನ್ನು ಬಳಸುವವರ ಮನಸ್ಸಿನಲ್ಲಿರುತ್ತದೆ. ದುರದೃಷ್ಟವಶಾತ್‌ ಈ ಮಾತನ್ನು ವೈದ್ಯರನ್ನು ಹೊಗಳಲು ಬಳಸುವುದಕ್ಕಿಂತ ಅವರ ಬಗ್ಗೆ ಋಣಾತ್ಮಕವಾಗಿ ವಿಮರ್ಶಿಸುವಾಗ ಬಳಸುವುದು ಹೆಚ್ಚು. “ವೈದ್ಯ ಎಂದರೆ ದೇವರ ಸಮಾನ. ಆದರೆ ಈ ವೈದ್ಯ ಹೀಗೆ ಮಾಡುವುದೇ? ಛೇ! ಛೇ! ‘ ಅಥವಾ “ಕಾಲ ಕೆಟ್ಟು ಹೋಯಿತಪ್ಪಾ, ವೈದ್ಯೋ ನಾರಾಯಣೋ ಹರಿಃ ಎಂದಿದ್ದರು ಹಿರಿಯರು. ಈಗ ನೋಡಿ! ‘ ಎಂಬಿತ್ಯಾದಿ ಚುಚ್ಚು ಮಾತುಗಳಲ್ಲಿ ವೈದ್ಯರ ಕುರಿತ ವ್ಯಂಗ್ಯ ಭರಿತ ತಿರಸ್ಕಾರ ಇಣುಕುತ್ತದೆ. ಆದರೆ “ಹಿರಿಯರು’ ವೈದ್ಯರನ್ನು ದೇವರ ಸ್ಥಾನದಲ್ಲಿ ಇರಿಸಿದ್ದು ನಿಜವೇ? ಯಾವಾಗ?ಜಿಜ್ಞಾಸೆ ಸಹಜ. 

 ವಾಸ್ತವವಾಗಿ, “ವೈದ್ಯೋ ನಾರಾಯಣೋ ಹರಿಃ’ ಎಂಬ ವಾಕ್ಯವಿರುವ ಶ್ಲೋಕದ ಪೂರ್ಣ ಪಾಠ ಈ ಕೆಳಗಿನಂತಿದೆ.
“ಶರೀರೇ ಜುರ್ಜರೀ ಭೂತೇ ವ್ಯಾಧಿಗ್ರಸ್ತೇ ಕಳೇವರೇ’
ಔಷಧೀ ಜಾಹ್ನವೀ ತೋಯಂ, ವೈದ್ಯೋ ನಾರಾಯಣೋಹರಿಃ’ 

ಅರ್ಥಾತ್‌, ಶರೀರವು ವ್ಯಾಧಿಗ್ರಸ್ತವೂ ಜರ್ಜರಿತವೂ ಆಗಿ ಕಳೇಬರದಂತಾದಾಗ ಗಂಗಾಜಲವೇ ಔಷಧಿ, ಹರಿಯೇ ವೈದ್ಯ. 
ಈ ಶ್ಲೋಕವನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಇದರಲ್ಲಿ ವೈದ್ಯನನ್ನು ಹೊಗಳುವ ಬದಲಾಗಿ ವೈದ್ಯಕೀಯದ ಇತಿಮಿತಿಯನ್ನು ಸೂಚಿಸಲಾಗಿದೆ ಎಂದು ಗೋಚರಿಸದಿರದು.  

ಕಾಯಿಲೆಯಿಂದ ಮಾನವ ಶರೀರ ಜರ್ಜರಿತವಾಗಿ ರೋಗಿಯ ಸ್ಥಿತಿ ಉಲ್ಬಣಿಸಿದಾಗ ಆತ ಗುಣಮುಖನಾಗಲು ಬರಿಯ ಮಾನವ ಪ್ರಯತ್ನ ಸಾಲದು, ದೈವ ಬಲವೂ ಬೇಕಾಗುತ್ತದೆ ಎಂಬುದಾಗಿಯೂ ಇದನ್ನು ಅರ್ಥೈಸಬಹುದಾಗಿದೆ. (ಬೇರೆ ಅರ್ಥವೂ ಇರುವುದು ಶಕ್ಯ) ಆದರೆ “ವೈದ್ಯನೇ ದೇವರು’ ಎಂಬುದಂತೂ ಖಂಡಿತಾ ಇದರ ಅರ್ಥವಲ್ಲ. ಆದರೆ ಯಾರೋ ಕಿಡಿಗೇಡಿಗಳು ಇದರಲ್ಲಿ “ವೈದ್ಯನೇ ದೇವರು’ ಎಂಬ ಅರ್ಥ ಹುಡುಕಿದ್ದರಿಂದ ವೈದ್ಯಲೋಕಕ್ಕೆ ಅನ್ಯಾಯವೇ ಆಗಿದೆ. ಹೇಗೆಂದು ತಿಳಿಯೋಣ ಬನ್ನಿ.

ಮೇಲಿನ ಶ್ಲೋಕದಲ್ಲಿ “ವೈದ್ಯನೂ ಮಾನವನೇ; ಅವನ ಪ್ರಯತ್ನಕ್ಕೂ ಒಂದು ಮಿತಿ ಇದೆ. ಕಾಯಿಲೆ ಒಂದು ಹಂತಕ್ಕಿಂತ ಮೀರಿ ಉಲ್ಬಣಿಸಿದರೆ ದೇವರೇ ಕಾಪಾಡಬೇಕು’ ಎಂಬ ವಾಸ್ತವ ಪ್ರಜ್ಞೆ ಇದ್ದರೆ, “ವೈದ್ಯನೇ ದೇವರು’ ಎಂಬ ಅಪಾರ್ಥದಿಂದ ಆಗುವ ಅನಾಹುತ ನೋಡಿ – “ವೈದ್ಯ ದೇವರೇ ಆಗಿರುವುದರಿಂದ ಆತ ವಿಫ‌ಲನಾಗುವುದು ಶಕ್ಯವಿಲ್ಲ. ಒಂದು ವೇಳೆ ರೋಗಿ ಗುಣಮುಖನಾಗದಿದ್ದರೆ ಅದು ವೈದ್ಯನ ನಿರ್ಲಕ್ಷ್ಯದಿಂದಲೇ ಹೊರತು ಆತನ ಶಕ್ತಿಯ ಇತಿಮಿತಿಗಳಿಂದಲ್ಲ’ ಎಂಬ ಭಾವನೆ ಹೊರಡುವುದಿಲ್ಲವೇ? ಇನ್ನು ಆತ ಅಧಮಾಧಮ ಎಂದು ತುರ್ತು ನಿರ್ಣಯಕ್ಕೆ ಬಂದುಬಿಡುತ್ತದೆ ನಮ್ಮ ಸಮಾಜ. ಒಟ್ಟಾರೆ ಈ “ದೈವತ್ವ’ ಎಂಬುದು ಒಂದು ಚಿನ್ನದ ಪಂಜರದಂತೆ. ಅದರಲ್ಲಿರುವ “ಶ್ರೀ ವೈದ್ಯ ದೇವರಿಗೆ’ ಹಸಿವು, ನೀರಡಿಕೆ , ಆಯಾಸ, ಸಿಟ್ಟು, ಮರೆವು, ಖನ್ನತೆ ಇತ್ಯಾದಿ ಇರತಕ್ಕದ್ದಲ್ಲ. ಇನ್ನು ಆತ ತನ್ನ ಕೆಲಸದಲ್ಲಿ ವಿಫ‌ಲನಾಗುವುದೆಂತು?

ಎಷ್ಟೇ ನುರಿತ ವೈದ್ಯನಾದರೂ ಮಾನವ ಸಹಜ ದೌರ್ಬಲ್ಯಗಳಿಂದ ಬಳಲುತ್ತಿರುತ್ತಾನೆ ಎಂಬುದನ್ನು ಅರಿಯುವಲ್ಲಿ ಇಂದಿನ ಸಮಾಜ ವಿಫ‌ಲವಾಗುತ್ತಿದೆಯೇನೋ ಅನ್ನಿಸದಿರದು. ವೈದ್ಯಕೀಯ ಎಂಬುದು ಹೆಚ್ಚಿನ ವೈದ್ಯರ ಮಟ್ಟಿಗೆ ಒಂದು ವೃತ್ತಿ, ಕಾಯಕವಷ್ಟೆ. ಓರ್ವ ಶಿಕ್ಷಕ ಮಕ್ಕಳಿಗೆ ಪಾಠ ಹೇಳುವಂತೆ ವೈದ್ಯ ರೋಗಿಗೆ ಚಿಕಿತ್ಸೆ ಮಾಡುತ್ತಾನೆ. ತನ್ನಿಂದ ಶಿಕ್ಷಣ ಪಡೆದ ಮಗು ಪರೀಕ್ಷೆಯಲ್ಲಿ ಉತ್ತೀರ್ಣನಾಗಿಯೇ ಆಗುತ್ತಾನೆ ಎಂಬ ಭರವಸೆಯನ್ನು ಹೇಗೆ ಯಾವನೇ ಶಿಕ್ಷಕ ಕೊಡಲಾರನೋ ಅದೇ ರೀತಿ ತನ್ನಿಂದ ಚಿಕಿತ್ಸೆ ಪಡೆದ ಪ್ರತಿಯೊಬ್ಬ ರೋಗಿಯೂ ಗುಣಮುಖನಾಗಿಯೇ ಆಗುತ್ತಾನೆ ಎಂಬ ಭರವಸೆಯನ್ನು ಯಾವನೇ ಪ್ರಾಮಾಣಿಕ ವೈದ್ಯ ಕೊಡುವುದು ಅಸಾಧ್ಯ. ದುರಾದೃಷ್ಟವಶಾತ್‌ ಪರೀಕ್ಷೆಯಲ್ಲಿ ಅನುತ್ತೀರ್ಣನಾಗುವ ವಿದ್ಯಾರ್ಥಿಗೆ ಸಿಗುವ ಇನ್ನೊಂದು ಅವಕಾಶ (ಮರು ಪರೀಕ್ಷೆ) ಚಿಕಿತ್ಸೆ ಫ‌ಲಕಾರಿಯಾಗದೇ ಮೃತಪಟ್ಟ ರೋಗಿಗೆ ಇಲ್ಲ. ಈ ಅಂಶ ವೈದ್ಯನಾದವನಿಗೆ ತಿಳಿದೇ ಇರುತ್ತದೆ. ಆದ್ದರಿಂದ ಯಾವನೇ ವೈದ್ಯ ತನ್ನಿಂದ ಸಾಧ್ಯವಾದಷ್ಟು ರೋಗಿಯ ಹಿತವನ್ನೇ ಬಯಸಿ ಚಿಕಿತ್ಸೆ ನೀಡುತ್ತಾನೆ. ಇದರಲ್ಲಿ ವೈದ್ಯನ ಸ್ವಂತ ಹಿತವೂ ಅಡಗಿರುತ್ತದೆ ಎಂಬುದನ್ನು ಗಮನಿಸಬೇಕು. ತಾನು ಚಿಕಿತ್ಸೆ ನೀಡಿದ ರೋಗಿಗಳಾರೂ ಗುಣಮುಖರಾಗದಿದ್ದರೆ ಅಂತಹಾ ವೈದ್ಯನ ಜೀವನೋಪಾಯ ಕಷ್ಟವಾಗುತ್ತದೆ.

ಅದೇನಿದ್ದರೂ ರೋಗಿಯು ಗುಣಮುಖವಾಗದೇ ಇದ್ದಾಗ ನಿಕಟ ಸಂಬಂಧಿಗಳ ದುಗುಡ ಅರ್ಥವಾಗುವಂತದ್ದೇ. ಮಾನಸಿಕ ಕ್ಷೋಭೆಯಿಂದ “ಇದಮಿತ್ಥಂ’ (ಇದು ಹೀಗೆಯೇ) ಎಂದು ವಿವೇಚಿಸುವ ಶಕ್ತಿ ಅವರಲ್ಲಿ ಇಲ್ಲದಾಗುವುದು ಮಾನವ ಸಹಜ. ಆದರೆ ರೋಗಿ ಮೃತಪಟ್ಟ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಆಸ್ಪತ್ರೆಯಲ್ಲಿ ಪ್ರತ್ಯಕ್ಷವಾಗುವ “ಹಿತೈಷಿಗಳ’ ಗುಂಪಿನ ವರ್ತನೆ ಮಾತ್ರ ಅರ್ಥೈಸಿಕೊಳ್ಳುವುದು ಕಷ್ಟ. ಈ ಗುಂಪಿನಲ್ಲಿನ ಹೆಚ್ಚಿನವರು ಸ್ವಭಾವತಃ ದುರುಳರಲ್ಲ. ಆದರೆ ತಮ್ಮದೇ ಆದ ಯಾವುದೋ ಕಾರಣಕ್ಕಾಗಿ ವೈದ್ಯ ಸಮುದಾಯದ ಮೇಲೆ ಕಹಿ ಭಾವನೆ ಹೊಂದಿದವರಾಗಿರುತ್ತಾರೆ. ಇವರು ಮೃತ ರೋಗಿಯ ಸಂಬಂಧಿಕರನ್ನು ಸಂತೈಸುವ ಬದಲಾಗಿ, ರೊಚ್ಚಿಗೆಬ್ಬಿಸುವ ಕೆಲಸ ಮಾಡಿ ತಿಳಿದೋ, ತಿಳಿಯದೆಯೋ ವೈದ್ಯರನ್ನು ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸುವಂತೆ ಮಾಡುತ್ತಾರೆ. ಇದು ಇಂದಿನ ಸಮಾಜ ದುರಂತಗಳಲ್ಲಿ ಒಂದು.

“ವೈದ್ಯ ದೇವರಲ್ಲ’ ಎಂಬುದನ್ನು ಅರಿತು ಯೋಚಿಸುವುದಾದರೆ, ರೋಗಿಯು ಗುಣಮುಖನಾಗದೇ ಇರಲು ಇರಬಹುದಾದ ಇತರೆ ಹಲವಾರು ಕಾರಣಗಳು ಗೋಚರಿಸುತ್ತವೆ. ಅವೆಂದರೆ ರೋಗಿಯ ಕಾಯಿಲೆಯು ಉಲ್ಬಣ ಸ್ಥಿತಿಗೆ ತಲುಪಿದ್ದು ಆತ ಚಿಕಿತ್ಸೆಗೆ ಸ್ಪಂದಿಸದೇ ಇರುವುದು, ರೋಗಿಯ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಕುಂಠಿತವಾಗಿರುವುದು (ಉದಾ: ಡಯಾಬಿಟಿಸ್‌) ರೋಗಿಯ ದೇಹದಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರ ಅರಿವಿಗೆ ಬರದೇ ಇರುವ ಇನ್ನಾವುದೋ ವೈದ್ಯಕೀಯ ಸಂಕೀರ್ಣತೆ ಇರುವುದು, ರೋಗಿಗಿರುವ ಕಾಯಿಲೆಗೆ ಆಧುನಿಕ ವೈದ್ಯ ಶಾಸ್ತ್ರದಲ್ಲೇ ಸಮರ್ಪಕ ಚಿಕಿತ್ಸೆ ಇಲ್ಲದಿರುವುದು (ಉದಾ: ಡೆಂಗ್ಯೂ), ಸಮರ್ಪಕ ಚಿಕಿತ್ಸೆ ನೀಡುವಲ್ಲಿ ಉಪಕರಣ ಯಾ ಸಿಬ್ಬಂದಿಯ ಕೊರತೆ (ಉದಾ: ಡಯಾಲಿಸಿಸ್‌ ಬೇಕಾದಾಗ) ಇತ್ಯಾದಿ. ಬಿಡಿಸಿ ಜೋಡಿಸ ಬಹುದಾದಂತಹ ಮೋಟಾರ್‌ ವಾಹನಗಳ ಸಮಸ್ಯೆಯನ್ನೇ ಅರಿಯುವುದು ಕೆಲವೊಮ್ಮೆ ದುಸ್ತರವಾಗಿರುವಾಗ ವಿಜ್ಞಾನಕ್ಕೇ ಇನ್ನೂ ಸರಿಯಾಗಿ ಅರ್ಥವಾಗದ, ಸಂಕೀರ್ಣ ಮಾನವ ದೇಹದ ಆರೋಗ್ಯ ವೈಫ‌ಲ್ಯವನ್ನು ಔಷಧಿಗಳ ಮುಖಾಂತರ ಪ್ರತಿಬಾರಿಯೂ ಸರಿಪಡಿಸಬಹುದು ಎಂಬ ಕಲ್ಪನೆಯೇ ಬಾಲಿಶ.

ವೈದ್ಯ ವಿಜ್ಞಾನದ ಇತಿಮಿತಿಗಳಲ್ಲದೆ ವೈದ್ಯರಲ್ಲಿ ಮಾನವ ಸಹಜ ಇತಿಮಿತಿಗಳೂ ಇರುತ್ತವೆ. ಉದಾಹರಣೆಗೆ ಅಪರೂಪದ ಕಾಯಿಲೆಗಳ ಬಗ್ಗೆ ಕೆಲವೊಮ್ಮೆ ವೈದ್ಯರಿಗೂ ಅಷ್ಟೊಂದು ಅರಿವಿಲ್ಲದೇ ಇರಬಹುದು. ಮೇಲ್ನೋಟಕ್ಕೆ ಒಂದು ಕಾಯಿಲೆ ಎಂದು ಕಂಡು ಬಂದದ್ದು ಅದಲ್ಲ ಎಂದು ಅರಿವಾಗುವಷ್ಟರಲ್ಲಿ ವಿಳಂಬ ಆಗಬಹುದು. ಅದಲ್ಲದೆ ಸಮರ್ಪಕ ಚಿಕಿತ್ಸೆಗೆ ಪೂರಕವಾಗುವ ವ್ಯವಸ್ಥೆ ಎಲ್ಲ ವೈದ್ಯರಿಗೂ ಎಲ್ಲ ಕಾಲಕ್ಕೂ ಲಭ್ಯವಿರುವುದಿಲ್ಲ. ಹೀಗೆ ಹಲವು, ಹತ್ತು ಕಾರಣಗಳಿಂದ ರೋಗಿಗೆ ಸಿಕ್ಕ ಚಿಕಿತ್ಸೆ “ಅಸಮರ್ಪಕ’ ಎನ್ನಿಸಿಕೊಳ್ಳಬಹುದು. ಆದರೆ ಇವ್ಯಾವವೂ “ವೈದ್ಯಕೀಯ ನಿರ್ಲಕ್ಷ್ಯ’ ಎಂಬುದರ ಅರ್ಥವ್ಯಾಪ್ತಿಯೊಳಗೆ ಬರಲಾರವು. ವೈದ್ಯರಿಗೂ ಕೌಟುಂಬಿಕ ಜೀವನವೊಂದಿರುತ್ತದೆ. ಅವರಿಗೂ ಅವರದ್ದೇ ಆದ ಸಮಸ್ಯೆಗಳೂ, ತಾಪತ್ರಯಗಳೂ ಇರುತ್ತವೆ. ಎಲ್ಲರಂತೆ ವೈದ್ಯರ ಆರೋಗ್ಯವೂ ಕೆಡುವುದುಂಟು. ಖನ್ನತೆಯಂತಹ ಸಂಕೀರ್ಣ ಮಾನಸಿಕ ಸಮಸ್ಯೆ ವೈದ್ಯರಲ್ಲೇ ಹೆಚ್ಚು. ವೈದ್ಯರಲ್ಲಿನ ಆತ್ಮಹತ್ಯೆಯ ಸರಾಸರಿ ಸಮಾಜದ ಸಾಮಾನ್ಯ ಸರಾಸರಿಗಿಂತ ಹಲವು ಪಟ್ಟು ಮೇಲಿರುತ್ತದೆ. ಇದು ವೈದ್ಯರ ಮೇಲಿನ ಮಾನಸಿಕ ಒತ್ತಡದ ದ್ಯೋತಕವಾಗಿದೆ. ಒಂದು ವೇಳೆ ವೈದ್ಯ ದೈವಾಂಶ ಸಂಭೂತನೇ ಆಗಿದ್ದಲ್ಲಿ ಹೀಗಿರುವುದು ಸಾಧ್ಯವೇ?

ಇಂದಿನ ವೈದ್ಯನಿಗೆ “ತಾನು ದೇವರಲ್ಲ’ ಎಂದು ಗೊತ್ತು. ತಾನು ಕಷ್ಟಪಟ್ಟು ಗಳಿಸಿದ ವಿದ್ಯೆಯ ಪ್ರಾಮಾಣಿಕ ಬಳಕೆಯಿಂದ ಸಮಾಜ ದಲ್ಲಿ ಗೌರವಯುತವಾಗಿ ಬಾಳಬೇಕು ಎಂಬುದಷ್ಟೇ ಆತನ ಇಚ್ಚೆ. ತಮ್ಮ ಸಂಸಾರ ನೌಕೆ ಸಾಗಿಸಲು ವೈದ್ಯ ವೃತ್ತಿ ಒಂದೇ ಹೆಚ್ಚಿನ ವೈದ್ಯರಿಗೆ ತಿಳಿದಿರುವ ಜೀವನೋಪಾಯ ಸಮಾಜ ತನ್ನನ್ನು ದೇವರೆಂದು ಹೊಗಳುವುದು ಆತನಿಗೆ/ಆಕೆಗೆ ಬೇಕಿಲ್ಲ. ಸಮಾಜ ತನ್ನನ್ನು ದೆವ್ವವೆಂದು ತೆಗಳದೆ “ಓರ್ವ ಪ್ರಾಮಾಣಿಕ ವೃತ್ತಿಪರ’ (an honest professional) ಎಂದು ಪರಿಗಣಿಸಿದರೆ ಅವನಿಗದೇ ಸಾಕು.

ಸಮಾಜದ ಇತರೆಡೆ ಇರುವಂತೆ ವೈದ್ಯರಂಗದಲ್ಲಿಯೂ ಹುಳುಕು ಇದೆ. ಅಪ್ರಾಮಾಣಿಕರೂ ಧನದಾಹಿಗಳೂ ಇದ್ದಾರೆ. ಆದರೆ ಅದಕ್ಕಾಗಿ ಇಡೀ ವೈದ್ಯ ಕುಲವನ್ನೇ ಹಳಿಯುವುದರಿಂದ ಇನ್ನೂ ಬಹುಸಂಖ್ಯೆಯಲ್ಲಿರುವ ಪ್ರಾಮಾಣಿಕ ವೈದ್ಯರ ಮನೋಬಲ ಕುಗ್ಗುತ್ತದೆ. ಅದಾಗಲೇ ಇಂದಿನ ಪ್ರತಿಭಾವಂತ ಮಕ್ಕಳು ವೈದ್ಯರಂಗ ಪ್ರವೇಶಿಸಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಹೀಗೆಯೇ ಮುಂದುವರಿದಲ್ಲಿ ಮುಂದೊಂದು ದಿನ ಇಡೀ ಸಮಾಜ ಇದಕ್ಕಾಗಿ ಭಾರೀ ಬೆಲೆ ತೆರಬೇಕಾಗುವುದರಲ್ಲಿ ಸಂಶಯವಿಲ್ಲ.

 ಡಾ| ಶಿವಾನಂದ ಪ್ರಭು 

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.