CONNECT WITH US  

ಕಿಮ್‌-ಟ್ರಂಪ್‌ರ ನಂಬೀತೇ ಜಗ?

ಜಗತ್ತಿನ 21ನೇ ಶತಮಾನದ ಇತಿಹಾಸವನ್ನು ಓದುವವರಿಗೂ ವಿಶ್ಲೇಷಿಸುವವರಿಗೂ ಇಂದು ಮಹತ್ವದ ದಿನ. ಕಾರಣ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಉತ್ತರ ಕೊರಿಯಾ ಅಧ್ಯಕ್ಷ ಕಿಮ… ಜಾಂಗ್‌ ಉನ್‌ ನಡುವೆ ಇದೇ ಮೊದಲ ಬಾರಿಗೆ ಸಭೆ ನಡೆಯಲಿದೆ. ಇಡೀ ವಿಶ್ವವೇ ಸಿಂಗಾಪುರದಲ್ಲಿ ನಡೆಯಲಿರುವ ಶೃಂಗಸಭೆಯತ್ತ ಮುಖ ಮಾಡಿದೆ. ಈ ಲೇಖನ ಈ ಸಭೆಯ ಪೂರ್ವಾಪರ, ಮಹತ್ವಗಳ ಕುರಿತಾದ ಒಂದು ವಿಶ್ಲೇಷಣೆ. 

ಎರಡನೇ ವಿಶ್ವಯುದ್ಧ ಮುಗಿದ ಬೆನ್ನಲ್ಲೇ ಕೊರಿಯಾದಲ್ಲಿ ಆಂತರಿಕ ಯುದ್ಧ ಪ್ರಾರಂಭವಾಗಿತ್ತು. ರಷ್ಯಾ ಹಾಗೂ ಚೀನಾ ಸಹಾಯ ಪಡೆಯುತ್ತಿದ್ದ ಕಮ್ಯುನಿಸ್ಟರು ಉತ್ತರ ಭಾಗದಲ್ಲಿದ್ದರೆ, ಅಮೆರಿಕ ಸಹಾಯ ಪಡೆಯುತ್ತಿದ್ದವರು ದಕ್ಷಿಣದಲ್ಲಿದ್ದರು. 1950ರಿಂದ 1953ರವರೆಗೆ ನಡೆದ ಈ ಯುದ್ಧ ಯಾವುದೇ ತಾರ್ಕಿಕ ಅಂತ್ಯ ಕಾಣದೆ ಕೇವಲ ಕದನ ವಿರಾಮದಿಂದ ನಿಂತಿತ್ತು. ಆಗಿನಿಂದಲೂ ದಕ್ಷಿಣ ಕೊರಿಯಾದಲ್ಲಿ ಅಮೆರಿಕ ಸೈನಿಕರು ಭದ್ರತೆ ಕೊಡುವ ನೆಪದಲ್ಲಿ ನೆಲೆಯೂರಿ¨ªಾರೆ. ಭದ್ರತೆಯ ಜವಾಬ್ದಾರಿ ಅಮೆರಿಕ ಹೊತ್ತ ಕಾರಣ ದಕ್ಷಿಣ ಕೊರಿಯಾ ಆರ್ಥಿಕ ವ್ಯವಸ್ಥೆ ಶಿಕ್ಷಣ ಮುಂತಾದ ಇತರ ಕ್ಷೇತ್ರಗಳಲ್ಲಿ ವಿಕಾಸ ಕಂಡಿತ್ತು. ಅತ್ತ ಉತ್ತರ ಕೊರಿಯಾ ಮಾತ್ರ ಯಾರ ಜೊತೆಯೂ ಒಳ್ಳೆಯ ನಂಟು ಬೆಳೆಸಿಕೊಳ್ಳದೆ, ಅಂತಾರಾಷ್ಟ್ರೀಯ ವ್ಯವಸ್ಥೆಯಿಂದ ಬಹುತೇಕ ದೂರ ಉಳಿದಿತ್ತು. 

ಆದರೂ ಉತ್ತರ ಕೊರಿಯಾಕ್ಕೆ ತನ್ನ ಅಸ್ತಿತ್ವದ ಬಗ್ಗೆಯೇ ಭೀತಿಯಿತ್ತು. ತನ್ನಲ್ಲಿರುವ ಹಳೆ ಕಾಲದ ಶಸ್ತ್ರಾಸ್ತ್ರಗಳಿಂದ ತನ್ನನ್ನು ಕಾಪಾಡಿಕೊಳ್ಳುವುದೇ ಅದಕ್ಕಿದ್ದ ಅತಿ ದೊಡ್ಡ  ಸವಾಲಾಗಿತ್ತು. ದಕ್ಷಿಣ ಕೊರಿಯಾದಲ್ಲಿರುವ ಅಮೆರಿಕ ಸೇನೆಯ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿತ್ತಲ್ಲದೇ ಅತ್ಯಂತ ಬಲಶಾಲಿಯಾದ ನೌಕಾ ಪಡೆಯೂ ಅಮೆರಿಕದ ಬಳಿ ಇತ್ತು. ಸಾಲದ್ದಕ್ಕೆ 1983ರಲ್ಲಿ ಅಮೆರಿಕ ಗ್ರೆನಡಾ ಮೇಲೆ ದಾಳಿ ನಡೆಸಿ, ಅಲ್ಲಿ ಒಂದು ಪ್ರಜಾಪ್ರಭುತ್ವ ಸರ್ಕಾರವನ್ನು ಸ್ಥಾಪಿಸಿತ್ತು. ಇದರಿಂದ ಬೆಚ್ಚಿದ್ದ ಉತ್ತರ ಕೊರಿಯಾ ತನಗೂ ಇಂತಹದ್ದೇ ಪರಿಸ್ಥಿತಿ ಬಂದೊದಗಬಹುದು ಎಂದು ತಿಳಿದು ಅಂದಿನಿಂದ ತನ್ನದೇ ಅಣ್ವಸ್ತ್ರ ಕಾರ್ಯಕ್ರಮ ಪ್ರಾರಂಭಿಸಿತ್ತು. ಅಣ್ವಸ್ತ್ರಗಳಿರುವುದರಿಂದ ತನ್ನನ್ನು ತಾನು ಎಂತಹುದೇ ದಾಳಿಯಿಂದಾದರೂ ರಕ್ಷಿಸಿಕೊಳ್ಳಬಹುದು ಎಂದು ಅದು ನಂಬಿತ್ತು. ಈ ಅಣ್ವಸ್ತ್ರ ಕಾರ್ಯಕ್ರಮ ಅಂದಿನಿಂದ ಅವಿಚ್ಛಿನ್ನವಾಗಿ ನಡೆದು ಬಂದಿದೆ. 

2015ರಿಂದ ಉತ್ತರ ಕೊರಿಯಾ ತನ್ನ ಅಣ್ವಸ್ತ್ರ ಹಾಗೂ ಕ್ಷಿಪಣಿ ಕಾರ್ಯಕ್ರಮಗಳನ್ನು ರಭಸದಿಂದ ಮುನ್ನಡೆಸಿತ್ತು. ಇದರಿಂದ ನೆರೆಯ ದಕ್ಷಿಣ ಕೊರಿಯಾ ಹಾಗೂ ಜಪಾನ್‌ ಮೇಲೆ ಯುದ್ಧ ಭೀತಿ ಆವರಿಸಿತ್ತು. ಅಣ್ವಸ್ತ್ರಗಳ ಹಾಗೂ ಕ್ಷಿಪಣಿಗಳ ಸಂಶೋಧನೆ ಮುಂದುವರಿದಂತೆ ಈ ಭೀತಿ ಅಮೆರಿಕವನ್ನೂ ಆವರಿಸತೊಡಗಿತ್ತು. 

ಇಂತಹ ಯುದ್ಧ ಕಾರ್ಮೋಡದ ಛಾಯೆಯಲ್ಲಿಯೇ ಜನವರಿ 1ನೇ ತಾರೀಕು ಕಿಮ… ಜಾಂಗ್‌ ಉನ್‌ ತಮ್ಮ ದೇಶ ಶಾಂತಿಯನ್ನು ಬಯಸುತ್ತದೆ ಎಂದು ಹೇಳಿಬಿಟ್ಟರು ! ಆಗಷ್ಟೇ ಆಯ್ಕೆಯಾಗಿದ್ದ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್‌ ಜೆ ಇನ್‌ ಕೂಡ ಉತ್ತರ ಕೊರಿಯಾದ ಜೊತೆಗೆ ಶಾಂತಿಗಾಗಿ ಸರ್ವ ಪ್ರಯತ್ನಗಳನ್ನೂ ಮಾಡುವುದಾಗಿ ಚುನಾವಣೆಯ ಸಂದರ್ಭದಲ್ಲಿ ಹೇಳಿದ್ದರು. ಸಿಕ್ಕ ಅವಕಾಶವನ್ನು ಬಳಸಿಕೊಂಡ ಮೂನ್‌ ಸರ್ಕಾರ ಶಾಂತಿ ಮಾತುಕತೆಗಳನ್ನು ಪ್ರಾರಂಭಿಸಿಯೇಬಿಟ್ಟಿತು. ಕಿಮ… ಜಾಂಗ್‌ ಉನ್‌ರನ್ನು ಬರಮಾಡಿಕೊಂಡು ಸಭೆ ನಡೆಸಿ, ಜಂಟಿ ಹೇಳಿಕೆಯನ್ನೂ ಕೊಟ್ಟಿತು. ಉನ್‌ ಅಂತೂ ತನ್ನ ದೇಶ ಜಾಗತಿಕ ಮಟ್ಟದಲ್ಲಿ ಎಲ್ಲ ಅಣ್ವಸ್ತ್ರಗಳ ಹಾಗೂ ಅದನ್ನು ತಯಾರು ಮಾಡುವ ಕಾರ್ಯಕ್ರಮಗಳ ಸಂಪೂರ್ಣ ನಿಷೇಧಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿದ್ದರು. ಅಮೆರಿಕ ಕೂಡ ಎರಡೂ ಕೊರಿಯಾಗಳ ನಡುವೆ ನಡೆದ ಈ ಶಾಂತಿ ಸಭೆಗೆ ತನ್ನ ಅನುಮೋದನೆಯನ್ನೂ ನೀಡಿತ್ತು. 

ಹಾಗಿದ್ದರೆ, ಈಗ ನಡೆಯುವ ಸಭೆಯ ಬಗ್ಗೆ ಚಕಾರವೇಕೆ? ಎರಡೂ ದೇಶಗಳಿಗೆ ಶಾಂತಿ ಬೇಕಾಗಿರುವುದು ಒಳ್ಳೆಯದೇ ಅಲ್ಲವೇ? ಉತ್ತರ ಕೊರಿಯಾ ತನ್ನ ಅಣ್ವಸ್ತ್ರ ಕಾರ್ಯಕ್ರಮ ಕೈ ಬಿಡಬೇಕು, ಹಾಗೆ ಮಾಡಿದಲ್ಲಿ ಉತ್ತರ ಕೊರಿಯಾದ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸುವಲ್ಲಿ, ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ತೆರವುಗೊಳಿಸುವಲ್ಲಿ ತಾನು ಸಹಾಯ ಮಾಡುವುದಾಗಿ ಅಮೆರಿಕ ಹೇಳುತ್ತಿದೆ. ಅಲ್ಲಿಗೆ ಅಣ್ವಸ್ತ್ರ ಕಾರ್ಯಕ್ರಮ ನಿಲ್ಲಿಸಬೇಕು ಎನ್ನುವುದೇ ಅಮೆರಿಕ ಹಾಕುತ್ತಿರುವ ಷರತ್ತು. ಉತ್ತರ ಕೊರಿಯಾ ಇದುವರೆಗೂ ಇಂತಹ ಯಾವುದೇ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿಲ್ಲ. ಜಾಗತಿಕ ಮಟ್ಟದಲ್ಲಿ ಅಣ್ವಸ್ತ್ರ ಕಾರ್ಯಕ್ರಮಗಳು ರದ್ದಾಗಬೇಕೆಂದು ಹೇಳಿದ್ದರೂ, ತಾನು ಎಲ್ಲರಿಗಿಂತ ಮೊದಲು ಅಣ್ವಸ್ತ್ರಗಳನ್ನು ನಾಶಪಡಿಸುವುದಾಗಿ ಎಲ್ಲಿಯೂ ಹೇಳಿಲ್ಲ. ಒಂದು ವೇಳೆ ತಾನು ಅಣ್ವಸ್ತ್ರ ಕಾರ್ಯಕ್ರಮ ನಿಲ್ಲಿಸಿದ ಮೇಲೂ ಅಮೆರಿಕ ತನ್ನ ಸೇನೆಯನ್ನು ದಕ್ಷಿಣ ಕೊರಿಯಾದಿಂದ ವಾಪಸ್‌ ಪಡೆಯದೇ ಹೋದರೆ? ಮೇಲಾಗಿ ಅಣ್ವಸ್ತ್ರಗಳಿಲ್ಲ ಎನ್ನುವ ಕಾರಣಕ್ಕೆ ಗ್ರೆನಡಾ ಮೇಲೆ ದಾಳಿ ನಡೆಸಿದಂತೆ ಭವಿಷ್ಯತ್ತಿನಲ್ಲಿ ನಮ್ಮ ಮೇಲೂ ನಡೆಸಿದರೆ? ಹೀಗೆ ಹತ್ತಾರು ಪ್ರಶ್ನೆಗಳು ಉತ್ತರ ಕೊರಿಯಾ ಅಧ್ಯಕ್ಷರನ್ನು ಕಾಡುತ್ತಿವೆ. 

ಇತ್ತ ಪ್ರಪಂಚದ ಬೇರೆ ರಾಷ್ಟ್ರಗಳಿಗೆ ಟ್ರಂಪ್‌ ಮೇಲೆ ನಂಬಿಕೆ ಇಲ್ಲದಿರುವುದಕ್ಕೆ ಬಲವಾದ ಕಾರಣಗಳಿವೆ. ಒಬಾಮ ಅವರು ಅಧ್ಯಕ್ಷರಾಗಿ¨ªಾಗ ಅಣ್ವಸ್ತ್ರ ಕಾರ್ಯಕ್ರಮಗಳ ನಿಲುಗಡೆ ಒಪ್ಪಂದಕ್ಕೆ ಇರಾನ್‌ ಸಹಿ ಹಾಕಿತ್ತು. ಹಾಗಾಗಿ, ಇರಾನ್‌ನ ಮೇಲಿದ್ದ ಅಂತಾರಾಷ್ಟ್ರೀಯ ನಿರ್ಬಂಧ ಸಡಿಲವಾಗಲಾರಂಭಿಸಿದ್ದವು. ಅನೇಕ ರಾಷ್ಟ್ರಗಳು ಇರಾನ್‌ನ ಆರ್ಥಿಕ ವ್ಯವಸ್ಥೆಯಲ್ಲಿ ಹೂಡಿಕೆ ಮಾಡಲು ಮುಂದಾದವು. ಉದಾಹರಣೆಗೆ ಫ್ರಾನ್ಸ್‌ "ಏರ್‌ಬಸ್‌' ಕಂಪನಿ ಇರಾನ್‌ಗೆ 40 ಬಿಲಿಯನ್‌ ಡಾಲರ್‌ ಮೊತ್ತದ ಹೊಸ ವಿಮಾನಗಳನ್ನು ಕೊಡುವುದಾಗಿ ಒಪ್ಪಂದ ಮಾಡಿಕೊಂಡು, ತಯಾರಿಯೂ ಪ್ರಾರಂಭಿಸಿತ್ತು. ಈಗ ಟ್ರಂಪ್‌ ಇರಾನ್‌ನೊಂದಿಗಿನ ಒಪ್ಪಂದ ಮುರಿದಿರುವುದರಿಂದ ಏರ್‌ಬಸ್‌ಗಲ್ಲದೆ ಫ್ರಾನ್ಸ್‌ಗೂ ನಷ್ಟವಾಗುತ್ತದೆ.  

ಇನ್ನು ಭಾರತ ಕೂಡ ಇರಾನ್‌ನ ಚಾಬಹಾರ್‌ ಬಂದರಿನಲ್ಲಿ ಹಣ ಹೂಡಿದೆ, ಒಂದು ರೀತಿಯಲ್ಲಿ ಈಗ ಈ ಯೋಜನೆ ಅಡಕತ್ತರಿಯಲ್ಲಿ ಸಿಲುಕಿದೆ. ಭಾರತಕ್ಕೆ ಅತ್ತ ಇರಾನ್‌ನೊಂದಿಗೆ ಒಪ್ಪಂದದನ್ವಯ 

ಕಾರ್ಯ ಮುಂದುವರಿಸಿದರೆ ಇತ್ತ ಅಮೆರಿಕವನ್ನು ಎದುರುಹಾಕಿ ಕೊಳ್ಳಬೇಕಾದ ಪರಿಸ್ಥಿತಿ! ಇದನ್ನೆಲ್ಲ ಗಮನಿಸಿರುವ ವಿಶ್ವ ರಾಷ್ಟ್ರಗಳು ಹೇಗೆ ಅಮೆರಿಕವನ್ನು ನಂಬುತ್ತವೆಯೋ ಕಾದು ನೋಡಬೇಕು. ಒಟ್ಟಿನಲ್ಲಿ ಜೂನ್‌ 12ರ ಸಭೆಯಿಂದ ಶಾಶ್ವತ ಶಾಂತಿ ನೆಲೆಸುತ್ತದೆ ಎನ್ನುವ ವಿಶ್ವಾಸ ಯಾರಿಗಾದರೂ ಇರದಿದ್ದರೆ ಅದಕ್ಕೆ ಅವರನ್ನು ದೂಷಿಸಲಾಗುವುದಿಲ್ಲ.

ಕಿಶೋರ್‌ ನಾರಾಯಣ್‌

Trending videos

Back to Top