CONNECT WITH US  

ಮೋದಿ ಕೇಂದ್ರಿತ ಚುನಾವಣೆಗೆ ವೇದಿಕೆ ಸಿದ್ಧ

ಜಾತ್ಯತೀತ ಶಕ್ತಿಗಳೆಂದು ಕರೆಸಿಕೊಳ್ಳುವ ಮೋದಿ ವಿರೋಧಿ ಪಕ್ಷ ಗಳು ಮೂಲದಲ್ಲಿ ಜಾತಿ ಆಧಾರಿತ ರಾಜಕೀಯ ಮಾಡುವಂಥ ಶಕ್ತಿಗಳು. ಬಹುತೇಕ ಪಕ್ಷಗಳು ಒಂದು ವ್ಯಕ್ತಿ ಇಲ್ಲ ಕುಟುಂಬದ ಆಸ್ತಿಗಳಾಗಿ ಪರಿವರ್ತನೆಯಾಗಿವೆ. ಅಧಿಕಾರದಾಹವಂತೂ ಇವ ರಲ್ಲಿ ದೊಡ್ಡಮಟ್ಟದಲ್ಲಿದೆ. ರಾಷ್ಟ್ರೀಯ ವಿಚಾರಧಾರೆಯೊಂದಿಗೆ ಚುನಾವಣೆಯನ್ನು ಎದುರಿಸುವುದು ಈ ವಿರೋಧ ಪಕ್ಷಗಳಿಗೆ ಅಷ್ಟೊಂದು ಸುಲಭ ಸಾಧ್ಯವಲ್ಲ. ಪ್ರಾದೇಶಿಕ ಪಕ್ಷಗಳ ಪರವಾಗಿ ವಿಧಾನಸಭಾ ಚುನಾವಣೆಯಲ್ಲಿ ಜಾತಿ ಕೆಲಸ ಮಾಡಿದಷ್ಟು ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ. ರಾಷ್ಟ್ರೀಯ ವಿಚಾರಗಳು ಮುನ್ನೆಲೆಗೆ ಬಂದಾಗ ಜನತೆ ಜಾತಿಯನ್ನು ಮೀರಿ ಮತಚಲಾಯಿಸಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯ ರಣರಂಗಕ್ಕೆ ದ್ವಿತೀಯ ಹಾಗೂ ತೃತೀಯ ರಂಗಗಳೆರಡೂ ಕರ್ನಾಟಕದಲ್ಲಿ ಮೈತ್ರಿ ಕೂಟದ ಸರಕಾರದ ರಚನೆಯೊಂದಿಗೆ ಮೊದಲ ಹೆಜ್ಜೆಯಿ ಟ್ಟಿವೆ. ಬಿಜೆಪಿ ಇದಕ್ಕೆ ಭಿನ್ನವಾಗಿ ಕಾಶ್ಮೀರದಲ್ಲಿ ಸರಕಾರದಿಂದ ಹೊರಬರುವ ಮೂಲಕ ಯುದ್ಧಭೂಮಿಗೆ ಬಲಿಪೂಜೆ ಮಾಡಿದೆ. ಕಾಶ್ಮೀರದಲ್ಲಿ ಸರಕಾರದ ಪತನವೂ ಈಗ ದೇಶಭಕ್ತಿಯ ಸಂಕೇತ ವಾಗಿದ್ದು, ಮುಂದೆ ಇದು ಚುನಾವಣೆಯ ವಿಷಯವೂ ಆಗುತ್ತದೆ. ಮುಂದಿನ ಚುನಾವಣೆಗೆ ಇನ್ನು ಹನ್ನೊಂದು ತಿಂಗಳಿದ್ದರೂ ಅದು ಇದೇ ವರ್ಷಾಂತ್ಯಕ್ಕೆ ನಡೆದರೂ ಅಚ್ಚರಿಯೇನಿಲ್ಲ. ಹೀಗಾಗಿ ನರೇಂದ್ರ ಮೋದಿ ಎಂಬ ಏಕಚಕ್ರಾಧಿಪತಿಯ ಎದುರು ಮಾಜಿ ಚಕ್ರವರ್ತಿಗಳ ಕುಟುಂಬ, ಅವರ ವಂದಿಮಾಗಧರು, ಸಾಮಂತ ರಾಜರು (ಜೆಡಿಎಸ್‌ ಇತ್ಯಾದಿ) ಸಣ್ಣಪುಟ್ಟ ಸಾಮ್ರಾಜ್ಯಗಳ (ಪ್ರಾದೇಶಿಕ ಪಕ್ಷಗಳ) ರಾಜರು ಸೇರಿದಂತೆ ಒಂದು ವಿಶಾಲವಾದ ರಣಪಡೆ ಯುದ್ಧಕ್ಕೆ ಸರ್ವಸನ್ನದ್ಧವಾಗುತ್ತಿದೆ.

ಹಿಂದಿನ ಯಾವ ರಾಜಕಾರಣಿಯ ವಿರುದ್ಧವೂ ಹೀಗೆ ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿದ್ದು, ಇಲ್ಲವೇ ಒಬ್ಬ ರಾಜಕೀಯ ನಾಯಕನ ಪರವಾಗಿ ಒಂದು ಬೃಹತ್‌ ಪಡೆಯೊಂದು ಸೃಷ್ಟಿಯಾ ಗಿದ್ದು ಇಲ್ಲವೇ ಇಲ್ಲ. ಇಂದಿರಾ ಯುಗದಲ್ಲೂ ಇಂತಹ ಧ್ರುವೀ ಕರಣ ನಡೆದಿರಲಿಲ್ಲ. ಈಗ ದೇಶದ ಮುಂದೆ ಇರುವುದು ಎರಡೇ ಆಯ್ಕೆ, ಒಂದು ಮೋದಿ, ಎರಡು ಇತರರು. ಇದು ಮೋದಿ ಮಾಡಿರುವ ಮೋಡಿ.

ಇನ್ನು ಜಾತ್ಯತೀತರು ಕೂಡ ಈಗ ನಿತ್ಯ ದೇವಾಲಯಗಳಿಗೆ ಹೋಗುವ ಮೂಲಕ ತಾವು ಕೂಡ ಹಿಂದೂಗಳೆಂದು, ತಮಗೆ ಹಿಂದೂ ಧರ್ಮದಲ್ಲಿ ಮೋದಿಗಿಂತ, ಜಿಜೆಪಿಗಿಂತ ಹೆಚ್ಚಿನ ವಿಶ್ವಾಸ ವಿದೆಯೆಂದು ಸಾಬೀತುಪಡಿಸಲು ಹರಸಾಹಸ ಪಡುತ್ತಿದ್ದಾರೆ. ಕೆಲವರು ತಾವು ಜನಿವಾರಧಾರಿ ಹಿಂದೂಗಳೆಂದು ಪತ್ರಿಕಾಗೋಷ್ಠಿ ಗಳಲ್ಲಿ ಹೇಳುವ ಮೂಲಕ ತಮ್ಮ ಹಿಂದುತ್ವವನ್ನು ಪ್ರದರ್ಶಿಸಿದ್ದಾರೆ.

ಕೆಲ ದಿನಗಳ ಹಿಂದೆಯೆ ಈ ವರ್ಷದ ರಂಜಾನ್‌ ಮಾಸ ಮುಗಿದೆ. ಆದರೆ ಜಾತ್ಯತೀತ ಪಕ್ಷಗಳ ಇಫ್ತಾರ್‌ ಕೂಟಗಳು ದೊಡ್ಡ ಮಟ್ಟದಲ್ಲಿ ಎಲ್ಲೂ ಸುದ್ದಿಯಾಗಿಲ್ಲ. ಕಾರಣವಿಷ್ಟೆ ಈಗ ಜಾತ್ಯತೀತರು ಹಿಂದೂ ಜಾತ್ಯತೀತರಾಗಿದ್ದಾರೆ. ಈಗ ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಬಾರದು, ಸುದ್ದಿಯಾದರೆ ತಮ್ಮ ಭವಿಷ್ಯಕ್ಕೆ ಕೊಡಲಿ ಪೆಟ್ಟು ಅಂತ ಅವರ ನಂಬಿಕೆ. ಹಾಗಂತ ಅಲ್ಪಸಂಖ್ಯಾತ ವರ್ಗವನ್ನು ಬಿಡುವುದಕ್ಕೂ ಆಗೋದಿಲ್ಲ, ಅದಕ್ಕೇ ಕಾಟಾಚಾರದ ಇಫ್ತಾರ್‌ಕೂಟಗಳನ್ನು ನಡೆಸಿ ಮುಗಿಸಿದ್ದಾರೆ. ನಾಲ್ಕು ವರ್ಷದಲ್ಲಿ ದೇಶ ಎಷ್ಟೊಂದು ಬದಲಾಗಿದೆ! ಹಿಂದೆ ಇಫ್ತಾರ್‌ಕೂಟಗಳೆಂದರೆ ರಾಷ್ಟ್ರ ರಾಜಧಾನಿಯಲ್ಲಿ ಅದೊಂದು ದೊಡ್ಡ ಇವೆಂಟಾಗಿರುತ್ತಿತ್ತು. ಅದರಲ್ಲಿ ರಾಜಕಾರಣಿಗಳು, ಸಿನಿ ತಾರೆಯರು, ಉದ್ಯಮಪತಿಗಳು, ವಿವಿಧ ದೇಶಗಳ ರಾಯಭಾರಿಗಳು ಹೀಗೆ ಗಣ್ಯಾತಿಗಣ್ಯರು ಹಾಜರಾಗುತ್ತಿದ್ದರು. (ಒಬ್ಬ ಸಾಮಾನ್ಯ ಮುಸ್ಲಿಮ್‌ನಿಗೆ ಮಾತ್ರ ಅಲ್ಲಿ ಅವಕಾಶ ಇರುತ್ತಿರಲಿಲ್ಲ) ಪೈಪೋಟಿಗೆ ಬಿದ್ದವರಂತೆ ಇಫ್ತಾರ್‌ಕೂಟಗಳನ್ನು ಆಯೋಜಿಸುತ್ತಿದ್ದರು. ಆದರೆ ಈಗ ಇವರೆಲ್ಲಾ ಜಾತ್ಯತೀತ ಹಿಂದೂಗಳಾಗಿರುವ ಕಾರಣ ಇಫ್ತಾರ್‌ ಆಯೋಜಿಸಿ ದರೂ ಅದು ಹೊರಜಗತ್ತಿನಲ್ಲಿ ಹೆಚ್ಚಿನ ಪ್ರಚಾರವಾಗಬಾರದು, ಪ್ರಚಾರವಾದರೆ ಮುಗಿದೇ ಹೋಯಿತು! ಮೋದಿ ಬೆಂಬಲಿಗರಿಂದ ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿಬಿಡುತ್ತದೆ. ಆಗ ಮತ್ತೆ ಪತ್ರಿಕಾಗೋಷ್ಠಿ ಕರೆದು ತಮ್ಮ ಹಿಂದುತ್ವವನ್ನು ಸಾಬೀತುಪಡಿಸಿಕೊಳ್ಳಬೇಕಾಗುತ್ತದೆ!

ಮುಂದಿನ ಚುನಾವಣೆಯ ಬಗ್ಗೆ ಮಾತನಾಡುವುದಾದರೆ ಎರಡು ರೀತಿಯ ಸಾಧ್ಯತೆಗಳಿವೆ. ಒಂದು ಮೋದಿಯವರು ಮತ್ತೆ ಪ್ರಧಾನಿ ಆಗುವುದು ಇಲ್ಲವೇ ಮೋದಿ ವಿರೋಧಿಪಡೆಯ ವ್ಯಕ್ತಿಯೊಬ್ಬ ಪ್ರಧಾನಿಯಾಗುವುದು. ಇದರಲ್ಲಿ ಯಾವುದೇ ಸಂಭವಿಸಿದರೂ ನರೇಂದ್ರ ಮೋದಿಯೇ ಅತ್ಯಂತ ಬಲಿಷ್ಠರಾಗಿ ಹೊರಹೊಮ್ಮುತ್ತಾರೆ. ಇದರಲ್ಲಿ ಮೊದಲನೆಯ ಸಾಧ್ಯತೆಯ ಬಗ್ಗೆ ನೋಡಿದರೆ, ಮೋದಿ ಮತ್ತೆ ಪ್ರಧಾನಿಯಾದರೆ ಅಲ್ಲಿಗೆ ಎಲ್ಲಾ ಜಾತ್ಯತೀತ ಶಕ್ತಿಗಳು ತಮ್ಮ ಅಸ್ತಿತ್ವವನ್ನು ತಾತ್ಕಾಲಿಕವಾಗಿಯಾದರೂ ಕೆಲವರ್ಷಗಳ ಮಟ್ಟಿಗೆ ಕಳೆದುಕೊಂಡುಬಿಡುತ್ತವೆ. ಎರಡನೆ ಯದಾಗಿ ಮೋದಿ ಅಧಿಕಾರ ಕಳೆದುಕೊಂಡರು ಆಗಲೂ ಮೋದಿಯೇ ಶಕ್ತಿಶಾಲಿಯಾಗಿ ಹೊರಹೊಮ್ಮುತ್ತಾರೆ.

ಏಕೆಂದರೆ ಈಗ ಚುನಾವಣೆಯಲ್ಲಿ ಮೋದಿ ವಿರುದ್ಧ ನಿಲ್ಲುತ್ತಿ ರುವ ಎಲ್ಲಾ ಶಕ್ತಿಗಳ ಒಟ್ಟು ಆಶಯವಾದರೂ ಏನು? ಅಧಿಕಾರ. ಅಧಿಕಾರ ಮಾತ್ರವೇ ಇವರನ್ನೆಲ್ಲಾ ಒಟ್ಟಿಗೆ ಸೇರಿಸುತ್ತಿದೆ. ಅಸಂಬದ್ಧ ಸ್ವಭಾವದ ಗುಂಪುಗಳು ರಾಜಕೀಯ ಅನಿವಾರ್ಯತೆಗಾಗಿ ಒಂದಾ ದರೂ ಮುಂದೆ ಇವರು ವಿಫ‌ಲವಾಗುವುದರಲ್ಲಿ ಅನುಮಾನವೇ ಇಲ್ಲ. ಹಿಂದಿನ ನಾಗರಿಕ ಸಮಾಜದ ಹೋರಾಟಗಳು, ರಾಷ್ಟ್ರೀಯ ಜನಾಂದೋಲನಗಳಿಗೆ (ಉದಾ: ತುರ್ತುಪರಿಸ್ಥಿತಿ) ಸೈದ್ಧಾಂತಿಕ ಹಿನ್ನೆಲೆ ಇತ್ತು. ಈಗ ಅದು ವ್ಯಕ್ತಿಕೇಂದ್ರಿತ (ಮೋದಿ)ವಾಗಿ ರೂಪು ಗೊಂಡಿದೆ. ಮುಂದಿನ ಚುನಾವಣೆಯಲ್ಲಿ ಒಂದೋ ಮೋದಿ ಪರ ವಾಗಿ ಮತದಾನ, ಇಲ್ಲ ವೇ ಮೋದಿ ವಿರುದ್ಧ ಮತದಾನ  ಎಂಬಂತಾ ಗಿ ದೆ. ಒಟ್ಟಿ ನ ಲ್ಲಿ ಮೋದಿಯೇ ಚುನಾವಣೆಯ ವಸ್ತುವಿಷಯ.

ಜಾತ್ಯತೀತ ಶಕ್ತಿಗಳೆಂದು ಕರೆಸಿಕೊಳ್ಳುವ ಇವರೆಲ್ಲಾ ಮೂಲದಲ್ಲಿ ಜಾತಿ ಆಧಾರಿತ ರಾಜಕೀಯ ಮಾಡುವಂಥ ಶಕ್ತಿಗಳು. ಆದರೆ ರಾಷ್ಟ್ರೀಯ ವಿಚಾರಧಾರೆಯೊಂದಿಗೆ ಚುನಾವಣೆಯನ್ನು ಎದುರಿ ಸುವುದು ಈ ಶಕ್ತಿಗಳಿಗೆ ಅಷ್ಟೊಂದು ಸುಲಭ ಸಾಧ್ಯವೂ ಅಲ್ಲ. ಪ್ರಾದೇಶಿಕ ಪಕ್ಷಗಳ ಪರವಾಗಿ ವಿಧಾನಸಭಾ ಚುನಾವಣೆಯಲ್ಲಿ ಜಾತಿ ಕೆಲಸ ಮಾಡಿದಷ್ಟು ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ. ರಾಷ್ಟ್ರೀಯ ವಿಚಾರಗಳು ಮುನ್ನೆಲೆಗೆ ಬಂದಾಗ ಜನತೆ ಜಾತಿಯನ್ನು ಮೀರಿ ಮತಚಲಾಯಿಸಿದ್ದಾರೆ. ಅಟಲ್‌ ಬಿಹಾರಿ ವಾಜಪೇಯಿಯವರಿಗೆ ಕಾರ್ಗಿಲ್‌ ಯುದ್ಧದ ವಿಜಯವೇ ಚುನಾವಣೆಯಲ್ಲಿ ಗೆಲುವಿಗೆ ಕಾರಣವಾಗಿತ್ತು. ಅದಕ್ಕೂ ಹಿಂದೆ ಇಂದಿರಾಗಾಂಧಿ ಬಾಂಗ್ಲಾ ಯುದ್ಧದ ಮೂಲಕವೇ ಭಾರತೀಯ ರಾಜಕೀಯದಲ್ಲಿ ದೊಡ್ಡನಾಯಕಿಯಾಗಿ ರೂಪಗೊಂಡಿದ್ದು. ಹೀಗಾಗಿಯೇ ಮುಂದೆ ಕಾಶ್ಮೀರದಲ್ಲಿ ನಡೆಯುವ ಘಟನೆಗಳು ಕೂಡ ರಾಜಕೀಯವಾಗಿ ಮಹತ್ತರವಾದ ಪಾತ್ರವನ್ನು ವಹಿಸುತ್ತವೆ.

ಹೀಗಾಗಿ ಮೋದಿ ವಿರೋಧಿ ಕೂಟಕ್ಕೆ ಕಾಶ್ಮೀರದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬ ಅರಿವು ಕೂಡ ಇದೆ. ಇದರ ದೂರಗಾಮಿ ಪರಿಣಾಮಗಳ ಬಗ್ಗೆ ಕೂಡ ಗೊತ್ತಿದೆ. ಗುಲಾಮ್‌ ನಬಿ ಆಜಾದ್‌ ಹೇಳಿಕೆ, ಸೈಫ‌ುದ್ದೀನ್‌ ಸೋಜ್‌ ಅಭಿಪ್ರಾಯ ಇವೆಲ್ಲಾ ಪಕ್ಷದ ವಾತಾವರಣವನ್ನು ಹಾಳುಮಾಡುತ್ತಿವೆ. ಇದನ್ನು ಸಮರ್ಥಿಸಿ ಕೊಳ್ಳದೇ ಕಾಂಗ್ರೆಸ್‌ ಏನೆಲ್ಲಾ ತಿಪ್ಪರಲಾಗ ಹಾಕುತ್ತಿದೆ. ಕಾಶ್ಮೀರದ ಪರಿಸ್ಥಿತಿ ಎತ್ತ ಕಡೆಗೆ ತೆಗೆದುಕೊಂಡು ಹೋಗುತ್ತಿದೆ ಎಂಬುವುದು ಎಲ್ಲಾ ಪಕ್ಷಗಳಿಗೂ ಗೊತ್ತು. ಪಿಡಿಪಿಯೊಂದಿಗಿನ ಮೈತ್ರಿ ಯನ್ನು ಬಿಜೆಪಿ ಮುರಿದಿರುವುದು, ಆ ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಶುರುವಾಗಿರುವುದು, ಇದರ ಪರಿಣಾಮ ದೇಶದಲ್ಲಿ ದೇಶ ಭಕ್ತಿ ಹರಡುತ್ತಿರುವುದು, ಇದೆಲ್ಲಾ ವಿವಿಧ ರಾಜಕೀಯ ಪಕ್ಷಗಳ ಅನುಭವಕ್ಕೂ ಬರುತ್ತಿದೆ. ಹಾಗಂತ ಇದನ್ನು ಪ್ರಶ್ನಿಸುವುದಕ್ಕೂ ಸಾಧ್ಯವಿಲ್ಲ, ಪ್ರಶ್ನಿಸದೇ ಇರಲೂ ಸಾಧ್ಯವಿಲ್ಲ. ಇದು ಮೋದಿಯ ವ್ಯೂಹ. ಇದು ಕೇವಲ ಆರಂಭ ಮಾತ್ರ. ಇಷ್ಟರ ಮಧ್ಯೆ... ಒಂದು ವೇಳೆ ಮೋದಿ ಸೋತರು ಅಂತಲೇ ಇಟ್ಟುಕೊಳ್ಳೋಣ, ಆಗ ಏನಾಗುತ್ತದೆ?

ಈ ಪಕ್ಷಗಳೆಲ್ಲಾ ಮೂಲದಲ್ಲಿ ಜಾತಿಗಳಿಂದಲೇ ರೂಪುಗೊಂಡಿವೆ. ಬಹುತೇಕ ಪಕ್ಷಗಳು ಒಂದು ವ್ಯಕ್ತಿ ಇಲ್ಲ ಕುಟುಂಬದ ಆಸ್ತಿಗಳಾಗಿ ಪರಿವರ್ತನೆಯಾಗಿವೆ. ಅಧಿಕಾರದಾಹವಂತೂ ಇವ ರಲ್ಲಿ ದೊಡ್ಡಮಟ್ಟದಲ್ಲಿದೆ. ಇವರೆಲ್ಲಾ ಸೇರಿ ರಚನೆ ಮಾಡುವ ಸರಕಾರದಿಂದ ಜನಸಾಮಾನ್ಯರಿಗೆ ಏನು ದಕ್ಕಬಹುದು? ಒಬ್ಬ ದುರ್ಬಲ ವ್ಯಕ್ತಿಯನ್ನು ಮಾತ್ರ ಇವರೆಲ್ಲಾ ಸೇರಿ ಪ್ರಧಾನಿಯಾಗಿ ಆಯ್ಕೆ ಮಾಡಿಕೊಳ್ಳಬಹುದು. ಆಗ ಎದುರಿಗೆ ಅತಿದೊಡ್ಡ ಪಕ್ಷದ (ಬಿಜೆಪಿ ಒಂದು ವೇಳೆ ಅಧಿಕಾರ ಕಳೆದುಕೊಂಡರೂ ಅತಿದೊಡ್ಡ ಪಕ್ಷವಾಗಿ ಉಳಿಯುತ್ತದೆ) ಮೋದಿ ಎಂಬ ಬಲವಾದ ಪ್ರತಿಪಕ್ಷ ನಾಯಕ ನಿಂತಿರುತ್ತಾನೆ.

ರಾಜ್ಯದಲ್ಲಿ ಎರಡು ಪಕ್ಷಗಳು ಸೇರಿ ಅಧಿಕಾರ ನಡೆಸಲೂ ಹೆಣಗಾಡುತ್ತಿರುವಾಗ ಇಪ್ಪತ್ತೆ„ದು- ಮೂವತ್ತು ಪಕ್ಷಗಳು ಸೇರಿ ಒಕ್ಕೂಟವಾಗಿ ರಚನೆ ಮಾಡುವ ಸರಕಾರದ ಬಗ್ಗೆ ಏನು ಹೇಳುವುದು? ಅದರಿಂದ ಏನನ್ನು ನಿರೀಕ್ಷಿಸಬಹುದು? ತೆಳುವಾದ ಕೊಂಬೆಯೆಂಬ ಅಧಿಕಾರದ ಮೇಲೆ ಎಷ್ಟು ಕಾಲ ಇವರೆಲ್ಲಾ ನಿಲ್ಲಬಹುದು? ಆಗ ಮತ್ತೆ ಅಧಿಕಾರದ ತಕ್ಕಡಿ ಮೋದಿಯ ಕಡೆಗೆ ವಾಲುತ್ತದೆ.

- ರವೀಂದ್ರ ಕೊಟಕಿ

Trending videos

Back to Top