CONNECT WITH US  

"ಹೇರಿಕೆ'ಯ ಚೌಕಟ್ಟುಗಳಿಂದ ಹೊರ ಬನ್ನಿ

ಸಾಂದರ್ಭಿಕ ಚಿತ್ರ

ಹಗಲು, ರಾತ್ರಿ ಮುಖಕ್ಕೆ ಸೆರಗು ಹೊದ್ದುಕೊಂಡೇ ಓಡಾಡಬೇಕಾದ ಕಾಲಘಟ್ಟವಿತ್ತು. ಆಗಿನ ಮಹಿಳೆಯರ ಈ ದಿರಿಸಿನ ಸಂಪ್ರದಾಯದ ಪಾಲನೆಯ ಹಿಂದೆ ಪುರುಷ ಪ್ರಧಾನ ಸಮಾಜದ ಪರಾಕಾಷ್ಠೆ ಇತ್ತು. ಆದರೀಗ ಪರಿಸ್ಥಿತಿ ಸಾಕಷ್ಟು ಸುಧಾರಿಸಿದ್ದು, ಸೆರಗು ಹೊದ್ದುಕೊಂಡು ಓಡಾಡುವ ಕಾಲ ಹೋಗಿದೆ ಎಂದಂದುಕೊಂಡರೂ ಮಹಿಳೆಯರ ದಿರಿಸಿನ ಆಯ್ಕೆಯ ಹಿಂದೆ ಪುರುಷ ಪ್ರಧಾನ ಸಮಾಜದ ದವಲತ್ತು ಇಂದಿಗೂ ವಿಜೃಂಭಿಸುತ್ತಿದೆ.

ಸಂಪ್ರದಾಯವಾದಿ ರಾಷ್ಟ್ರವಾದ ಸೌದಿ ಅರೇಬಿಯಾದಲ್ಲಿ ಮಹಿಳೆಯರು ವಾಹನ ಚಾಲನೆ ಮಾಡಬಾರದು ಎಂಬ ನಿಯಮವಿತ್ತು. ಆದರೆ ಅಲ್ಲಿನ ಮಹಿಳೆಯರ ನಿರಂತರ ಹೋರಾಟದ ಫಲವಾಗಿ ಕೊನೆಗೂ ಅವರಿಗೆ ರಸ್ತೆಯಲ್ಲಿ ವಾಹನ ಕೊಂಡೊಯ್ಯುವ ಭಾಗ್ಯ ಲಭಿಸಿತು. ಇನ್ನು ಧಾರ್ಮಿಕ ಚೌಕಟ್ಟಿನೊಳಗೇ ಬದುಕುವ ಕೆಲ ರಾಷ್ಟ್ರಗಳಲ್ಲಿಯೂ ಒಂದಷ್ಟು ಮಹಿಳೆಯರು ಧಾರ್ಮಿಕ ಪರಿಧಿಯಿಂದ ಆಚೆ ಬಂದು ಯಶಸ್ವಿ ನಾಯಕತ್ವ ರೂಪಿಸಿಕೊಂಡರು ಮತ್ತು ಅಲ್ಲಿನ ವ್ಯವಸ್ಥೆ ಅವರನ್ನು ದೂರುತ್ತಾ ಕೂರದೆ ಒಪ್ಪಿ ಬೆಂಬಲಿಸಿತು.

ಸಂಪ್ರದಾಯ, ಧಾರ್ಮಿಕ ನಂಬಿಕೆಗಳನ್ನು ಕಾಯಾ ವಾಚಾ ಮನಸಾ ಪಾಲಿಸಿ ಮಹಿಳೆಯರನ್ನು ಅದರೊಳಗೆ ಬಂಧಿಸಿರುವ ಇಂತಹ ರಾಷ್ಟ್ರಗಳೇ ಮಹಿಳೆಯರಿಗೆ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ನಿಯಮಗಳನ್ನು ಸಡಿಲಿಕೆ ಮಾಡುತ್ತಿವೆ ಅಂದ ಮೇಲೆ ಬಹು ಸಂಸ್ಕೃತಿಯ ದೇಶ ಭಾರತದಲ್ಲಿ ಪರಿಸ್ಥಿತಿ ಸಾಕಷ್ಟು ಸುಧಾರಿಸಿರುತ್ತದೆ ಎಂದೇ ನೀವೆಲ್ಲ ಭಾವಿಸಿರಬಹುದು. ಆದರೆ ಮಹಿಳೆಯರ ಮೇಲಿರುವ ಕೆಲವೊಂದು ಹೇರಿಕೆಗಳ ಕುರಿತು ಇಲ್ಲಿನ ನಿಜಸ್ಥಿತಿ ಅವಲೋಕನ ಮಾಡಿದರೆ ಅಂತಹ ಅನಿಸಿಕೆಯೇ ಹಾಸ್ಯಾಸ್ಪದವೆನಿಸದಿರದು.

ತೊಡುವ ಬಟ್ಟೆಯಿಂದ ಹಿಡಿದು ಶಿಕ್ಷಣ, ಸಾಮಾಜಿಕವಾಗಿ ಬೆರೆಯುವಿಕೆ ಎಲ್ಲದರಿಂದಲೂ ಮಹಿಳೆಯರ ಸುತ್ತ ಪರಿಧಿ ನಿರ್ಮಿಸುವ ಮತ್ತು ಅವರನ್ನು ಕನಿಷ್ಟ ಸ್ವಾತಂತ್ರ್ಯದಿಂದಲೂ ದೂರ ಇಡುವ ಪರಿಪಾಠ ಮುಂದುವರಿಯುತ್ತಲೇ ಇದೆ. ಜೊತೆಗೆ ಆ ವಿಚಾರಗಳಲ್ಲೆಲ್ಲ ಪುರುಷ ಪೌರುಷ ತೋರಿಸುವ ಪ್ರವೃತ್ತಿಯೂ ಮುಂದುವರಿಯುತ್ತಿದೆ. ಬೆರಳೆಣಿಕೆಯ ಮಂದಿಯಷ್ಟೇ ಈ ಎಲ್ಲ ಪರಿಧಿಗಳನ್ನು ದಾಟಿ ಬಂದು ಸ್ವತಂತ್ರವಾಗಿ ಬದುಕಿದವರು ಇದ್ದಾರೆಯಾದರೂ, ಬಹುತೇಕರು ಇನ್ನೂ ಅದೇ ಚೌಕಟ್ಟಿನೊಳಗೆ ಜೀವನ ಸವೆಸುತ್ತಿರುವುದು ಸತ್ಯ. ವಿಪರ್ಯಾಸವೆಂದರೆ ತಮ್ಮ ಕನಿಷ್ಠ ಸ್ವಾತಂತ್ರ್ಯದ ಬಗ್ಗೆ ಧ್ವನಿ ಎತ್ತಲೂ ಇಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ. ಪುರುಷರ ಕಟ್ಟಾಜ್ಞೆಗೆ ತಲೆಯಾಡಿಸುತ್ತಾ ಬದುಕಿನ ಬಂಡಿಯಲ್ಲಿ ಪಯಣಿಸಬೇಕಾದ ಸ್ಥಿತಿ ಇನ್ನೂ ನಮ್ಮ ಸಮಾಜದಲ್ಲಿ ಜೀವಂತವಾಗಿಯೇ ಇದೆ.

ಹೇರಿಕೆಯ ಕಟ್ಟುಪಾಡು 
ಭಾರತದಂತಹ ಬಹು ಧರ್ಮ, ಬಹು ಸಂಸ್ಕೃತಿ, ಬಹು ಭಾಷಾ ಪರಂಪರೆಯನ್ನು ಹೊಂದಿರುವ ರಾಷ್ಟ್ರವು ಇಡೀ ವಿಶ್ವಕ್ಕೆ ತನ್ನ ವಿಶಿಷ್ಟ ಸಂಸ್ಕೃತಿ, ಪದ್ಧತಿಗಳಿಂದಲೇ ಮಾದರಿಯಾಗಿದೆ. ಅದೆಷ್ಟೋ ರಾಷ್ಟ್ರಗಳು ಇಲ್ಲಿನ ಸಂಸ್ಕೃತಿ, ಶಿಷ್ಟಾಚಾರವನ್ನು ಒಪ್ಪಿ ಮೆಚ್ಚುಗೆಯ ಮಾತನ್ನಾಡಿರುವುದನ್ನು ಕಾಣಬಹುದು. ಆದರೆ ಮಹಿಳಾ ಸ್ವಾತಂತ್ರ್ಯದ ವಿಷಯಕ್ಕೆ ಬಂದಾಗ ಇದೇ ಶಿಷ್ಟಾಚಾರ, ಕಟ್ಟುಪಾಡುಗಳು ಕೆಲವೊಮ್ಮೆ ಅಸಹ್ಯ ಎನಿಸುವಷ್ಟರ ಮಟ್ಟಿಗೆ ಮುಂದುವರಿದಿರುವುದು ಆಧುನಿಕ ಕಾಲಘಟ್ಟದಲ್ಲಿ ಇತರರಿಂದ ಅಪಹಾಸ್ಯಕ್ಕೆ ಎಡೆ ಮಾಡಿಕೊಡುತ್ತಿದೆ ಎಂದರೂ ತಪ್ಪಾಗದು. ಸಂಪ್ರದಾಯವಾದಿ ರಾಷ್ಟ್ರಗಳಲ್ಲಿ ಧಾರ್ಮಿಕ, ಸಾಂಪ್ರದಾಯಿಕ ಚೌಕಟ್ಟುಗಳು ನಿಧಾನಕ್ಕೆ ಸಡಿಲಿಕೆಯಾಗುತ್ತಿರುವ ಸಂದರ್ಭದಲ್ಲಿ ನಮ್ಮಲ್ಲಿ ಮಾತ್ರ ಅವು "ಹೇರಿಕೆ'ಯಾಗಿ ಮುಂದುವರಿಯುತ್ತಿರುವುದು ಬಹುಶಃ ಮಹಿಳಾ ಸಬಲೀಕರಣವೆಂಬುದು ಬಾಯಿ ಮಾತಿಗೆ ಸೀಮಿತ ಎಂಬುದನ್ನು ಹೇಳದೆ ವಿಧಿಯಿಲ್ಲ. 

ಪುರುಷ ಸಮಾಜದ ಪರಾಕಾಷ್ಠೆ
ಸಭ್ಯ ಉಡುಗೆ  ಧರಿಸಬೇಕೆಂಬುದು ನಮ್ಮ ಸಂಸ್ಕೃತಿ ನಮಗೆ ಹೇಳಿಕೊಟ್ಟಿರುವ ಪಾಠ. ಹಾಗೆಂದು ಎಲ್ಲಿಯೂ ಉಡುಪಿಗೆ ಕಟ್ಟುನಿಟ್ಟಿನ ಕಟ್ಟುಪಾಡು ವಿಧಿಸಿಲ್ಲ. ಹಿಂದಿನಿಂದಲೂ ಜನರು ಅವರವರ ಅಂತಸ್ತು, ಅಭಿರುಚಿಗೆ ತಕ್ಕಂತೆ ಉಡುಪು ಧರಿಸುವ ಪರಿಪಾಠವನ್ನು ಪಾಲಿಸಿಕೊಂಡು ಬಂದಿದ್ದಾರೆ. ಇದರಲ್ಲಿ  ಕಾಲಕ್ಕೆ ತಕ್ಕಂತೆ ಅದರಲ್ಲಿ ಬದಲಾವಣೆ ಮಾಡಿಕೊಳ್ಳುವುದು ಬಹುದೊಡ್ಡ ಅಪರಾಧವೇನೂ ಅಲ್ಲ. ಹಿಂದೆ ಮಹಿಳೆಯರು ತಲೆ, ಮುಖ ಹೊರಗಿನವರಿಗೆ ಕಾಣಬಾರದು ಎಂಬುದಕ್ಕಾಗಿ ಹಗಲು, ರಾತ್ರಿ ಮುಖಕ್ಕೆ ಸೆರಗು ಹೊದ್ದುಕೊಂಡೇ ಓಡಾಡಬೇಕಾದ ಕಾಲಘಟ್ಟವಿತ್ತು. ಆಗಿನ ಮಹಿಳೆಯರ ಈ ದಿರಿಸಿನ ಸಂಪ್ರದಾಯದ ಪಾಲನೆಯ ಹಿಂದೆ ಪುರುಷ ಪ್ರಧಾನ ಸಮಾಜದ ಪರಾಕಾಷ್ಠೆ ಇತ್ತು. ಆದರೀಗ ಪರಿಸ್ಥಿತಿ ಸಾಕಷ್ಟು ಸುಧಾರಿಸಿದ್ದು, ಸೆರಗು ಹೊದ್ದುಕೊಂಡು ಓಡಾಡುವ ಕಾಲ ಹೋಗಿದೆ ಎಂದಂದುಕೊಂಡರೂ ಮಹಿಳೆಯರ ಧಿರಿಸಿನ ಆಯ್ಕೆಯ ಹಿಂದೆ ಪುರುಷ ಪ್ರಧಾನ ಸಮಾಜದ ದವಲತ್ತು ಇಂದಿಗೂ ವಿಜೃಂಭಿಸುತ್ತಿದೆ.

ಕಾಲ ಬದಲಾಗಿದೆ, ಮಹಿಳೆ ಸ್ವತಂತ್ರಳು, ನಮ್ಮಲ್ಲಿ ತೊಡುವ ಬಟ್ಟೆಗಳಿಗೂ ಇನ್ನೊಬ್ಬರ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದಂದುಕೊಂಡರೆ ಖಂಡಿತಾ ತಪ್ಪು. ಏಕೆಂದರೆ ಕೆಲವು ಕಡೆ ಅತಿರೇಕ ಎನಿಸುವಷ್ಟು ಈ ಸಂಪ್ರದಾಯಗಳು ಮಹಿಳೆಯರನ್ನು ಬಂಧಿಸಿದೆ ಎಂಬುದನ್ನು ಒಪ್ಪಬೇಕಾದುದೇ. ಹಾಗಂತ ಅಶ್ಲೀಲ ದಿರಿಸು ತೊಡುವುದು ಮಹಿಳಾ ಸ್ವಾತಂತ್ರ್ಯವಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. 

ಗಂಡಿಗಿಲ್ಲದ ಚೌಕಟ್ಟು ಹೆಣ್ಣಿಗೇಕೆ?
ಹೆಣ್ಣು ಮಕ್ಕಳು ತಮ್ಮ ಸಂಪ್ರದಾಯದ ಪ್ರಕಾರ ಬಟ್ಟೆ ಧರಿಸಲಿಲ್ಲವೆಂದಾದರೆ, ಸಹಪಾಠಿ ಹುಡುಗರು, ಸ್ನೇಹಿತರೊಂದಿಗೆ ಮಾತನಾಡಿದಳೆಂದರೆ ಸಾರ್ವಜನಿಕ ಸ್ಥಳಗಳಲ್ಲಿಯೇ ಆಕೆಯ ಮೇಲೆ ಹಲ್ಲೆ ನಡೆಸುವ ಘಟನೆಗಳನ್ನು ಆಗಾಗ ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಇವರೆಲ್ಲ ಸ್ತ್ರೀಯರನ್ನು ತಮ್ಮ ಅಧೀನದಲ್ಲಿ ಇಟ್ಟುಕೊಂಡು ನೋಡಲು ಬಯಸುತ್ತಾರೆಯೇ ಹೊರತು ಆಕೆಯ ಅಭ್ಯುದಯ ಅವರಿಗೆ ಬೇಕಿಲ್ಲ. ಈಗಿನ ಫ್ಯಾಷನ್‌ ಯುಗಕ್ಕೆ ತಕ್ಕಂತೆ ತಾನೂ ಬದಲಾಗಬೇಕು ಎಂಬುದು ಪ್ರತಿ ಹುಡುಗಿಯರ ಸಹಜ ಬಯಕೆಯೂ ಆಗಿರುತ್ತದೆ. ಅಶ್ಲೀಲವಲ್ಲದ ಆಕೆಯ ಸೌಂದರ್ಯ ಇಮ್ಮಡಿಸುವ ಇಂತಹ ಬಟ್ಟೆಗಳನ್ನು ಧರಿಸಲೂ ಆಕೆಗೆ ಅವಕಾಶವನ್ನೇಕೆ ನಿರಾಕರಿಸುವಿರಿ?

ಗಂಡಿಗಿಲ್ಲದ ಈ ಚೌಕಟ್ಟುಗಳು ಹೆಣ್ಣಿಗೇಕೆ ಎಂಬ ಪ್ರಶ್ನೆ ಮಹಿಳೆಯರ ಒಡಲಲ್ಲಿ ಬೆಂಕಿಯಂತೆ ಜ್ವಲಿಸುತ್ತಿದೆಯೇ ಹೊರತು, ಧ್ವನಿಯಾಗಿ ಹೊರ ಬರುತ್ತಿಲ್ಲ. ಹಾಗೆ ನೋಡಿದರೆ ಹಿಂದಿನ ಕಾಲದಲ್ಲಿ ಸಂಪ್ರದಾಯ ಪ್ರಕಾರ ಸುತ್ತಿಕೊಳ್ಳುತ್ತಿದ್ದ ಪಂಚೆಯ ಜಾಗವನ್ನು ಜೀನ್ಸ್‌ಪ್ಯಾಂಟ್‌ ಆಕ್ರಮಿಸಿಕೊಂಡಂತೆಯೇ ಮಹಿಳೆಯರ ಉಡುಗೆ ತೊಡುಗೆ ಬದಲಾಗಿದೆಯಷ್ಟೆ. 

ಹೆಣ್ಣು ಹಾಳಾಗುತ್ತಾಳೆಂದರು
ಕಟ್ಟರ್‌ ಸಂಪ್ರದಾಯವಾದಿ ರಾಷ್ಟ್ರಗಳಲ್ಲಿಯೂ ಮಹಿಳೆಯೋರ್ವಳು ಧಾರ್ಮಿಕ ಚೌಕಟ್ಟಿನ ಹೊರಗಿದ್ದು, ಸಾಧನೆಯನ್ನು ಪ್ರಮುಖ ಧ್ಯೇಯವಾಗಿಸಿಕೊಳ್ಳಬಹುದು ಎಂದಾದ ಮೇಲೆ ನಮ್ಮಲ್ಲಿ ಹೆಣ್ಣು ಮಕ್ಕಳಿಗೆ ಆ ಸ್ವಾತಂತ್ರ್ಯ ಏಕಿಲ್ಲ? ಹಾಗಂತ ಇದು ಒಂದು ಧರ್ಮ, ಒಂದು ಪಂಗಡ, ಒಂದು ವರ್ಗದ ಮಹಿಳೆಯರ ಪರಿಸ್ಥಿತಿಯಲ್ಲ. 

ಅತೀ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಶಿಕ್ಷಣದ ಬಗ್ಗೆ ಇಂದಿಗೂ ವೈರುಧ್ಯಗಳಿರುವುದನ್ನು ಕಾಣಬಹುದು. ಹತ್ತು ವರ್ಷಗಳ ಹಿಂದೆ ತೀರಾ ಗ್ರಾಮೀಣ ಭಾಗದಿಂದ ನಾನು ಉಜಿರೆಯತ್ತ ವಿದ್ಯಾಭ್ಯಾಸಕ್ಕಾಗಿ ಹೊರಟು ನಿಂತಾಗ "ಹೆಣ್ಣು ಮಕ್ಕಳು ಜಾಸ್ತಿ ಕಲಿತರೆ ಹಾಳಾಗುತ್ತಾರೆ' ಎಂದು ನಮ್ಮೂರಿನ ಹಿರಿಯರೊಬ್ಬರು ಹೇಳಿದ್ದರು. ಉತ್ತಮ ಅಂಕ ಗಳಿಸಿದ್ದಕ್ಕಾಗಿ ದೊರೆತ ವಿದ್ಯಾರ್ಥಿವೇತನದಲ್ಲಿ ಸಣ್ಣ ದೊಂದು ಮೊಬೈಲ್‌ ಖರೀದಿಸಿ ಖುಷಿ ಪಟ್ಟಾಗ "ಹೆಣ್ಣು ಮಕ್ಕಳಿಗೆ ಮೊಬೈಲ್‌ ನೀಡಿದರೆ ಹಾಳಾಗುತ್ತಾರೆ' ಎಂದು ಊರಿನ "ಮಹನೀ ಯ'ರೊಬ್ಬರು ಉಲಿದಿದ್ದರು. ಇವೆಲ್ಲ ಅನುಭವಗಳು ನನ್ನ ಮನಸ್ಸಿನ ಒಳಗೆ ಹೊಕ್ಕು ದಶಕ ಕಳೆದಿರಬಹುದು. ಆದರೆ ಇಂದಿಗೂ ಕಾಡುತ್ತಿರುವ ವಾಸ್ತವಾಂಶವಾಗಿ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದು ಹೋಗಿದೆ. ಇವರೆಲ್ಲರ ಮನಸ್ಸಿನಲ್ಲಿ ಅಚ್ಚೊತ್ತಿರುವ ವಿಷಯವೆಂದರೆ ಹಾಳಾಗು ವುದು ಹುಡುಗಿ ಮಾತ್ರ ಎಂಬುದಾಗಿ. ಹುಡುಗ-ಹುಡುಗಿ ಓಡಿ ಹೋದರೆ "ಅವಳು' ಓಡಿ ಹೋದಳು ಎನ್ನುತ್ತಾರೆ, ಪ್ರೀತಿಸಿ ಮದುವೆ ಯಾದರೆ, ಹುಡುಗರೊಂದಿಗೆ ಮಾತನಾಡಿದರೆ "ಆಕೆಯ' ಗುಣನಡತೆ ಸರಿ ಇಲ್ಲ ಎನ್ನುತ್ತಾರೆ. ಈ ಹೇಳುವಿಕೆಗಳ ಭರದಲ್ಲಿ ಎರಡು ಕೈ ಸೇರಿದರೆ ಚಪ್ಪಾಳೆ ಎನ್ನುವುದನ್ನು ಸಮಾಜ, ವ್ಯಕ್ತಿಗಳು ಮರೆತು ಬಿಡುತ್ತಾರೆ. ಏಕೆಂದರೆ ಇಲ್ಲಿ ಹೆಣ್ಣಿನ ಮೇಲಿರುವ ಸ್ಥಾಪಿತ ಭಾವನೆಯು, ಆಕೆ ಎಷ್ಟೇ ದಿಟ್ಟತನದಿಂದ ನಿಂತರೂ ನಿರಂತರವಾಗಿ ಆಕೆಯ ಬೆನ್ನ ಹಿಂದೆ ಬೆಂಬಿಡದ ಭೂತದಂತೆ ಕಾಡುತ್ತಿರುತ್ತದೆ ಎಂಬುದು ಅಷ್ಟೇ ಸತ್ಯ.

ಶಿಕ್ಷಣ ನೀಡುವಲ್ಲೂ ಅನ್ಯ ಯೋಚನೆ
ಎಸೆಸ್ಸೆಲ್ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ ನಮ್ಮೂರಿನ ಪ್ರತಿಭಾವಂತ ಹುಡುಗಿಯೋರ್ವಳ ಕಾಲೇಜು ಸೇರುವ ಬಯಕೆ ಯನ್ನು ಅವಳಮ್ಮ ಚಿವುಟಿದ್ದರು. ಕಾರಣ ಹೆಣ್ಣು ಮಕ್ಕಳಿಗೆ ಹೆಚ್ಚು ಓದಿಸಿದರೆ ನಮಗೇನು ಫಲ ಎಂಬ ಯೋಚನೆ. ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಬಗೆಗಿನ ಸಮಾಜದ ಆಲೋಚನಾ ಕ್ರಮ ಬದಲಾ ಗಿರುವ ಈ ಕಾಲಘಟ್ಟದಲ್ಲಿದ್ದರೂ, ಇಂತಹ ಯೋಚನೆ ಮಾಡುವವರು ಇನ್ನೂ ಇದ್ದಾರೆ ಎಂದಾಗ ಹೆಣ್ಣಿನ ಬಗೆಗಿರುವ ಸಮಾಜದ ಮನಸ್ಥಿತಿ ಸುಧಾರಿಸಿಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. 

ಹೆಣ್ಣಿನ ಕನಿಷ್ಟ ಸ್ವಾತಂತ್ರ್ಯವನ್ನೂ ಪುರುಷ ಪ್ರಧಾನ ಸಮಾಜವೇ ನಿರ್ಧರಿಸುತ್ತದೆ ಎಂದಾದರೆ ಈ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಬೆಲೆ ಎಲ್ಲಿದೆ?ಶಿಕ್ಷಣ, ಸಾಮಾಜಿಕವಾಗಿ ತೊಡಗಿಸಿಕೊಳ್ಳುವಿಕೆ ಮತ್ತು ಉನ್ನತ ಹುದ್ದೆಗಳನ್ನು ಅಲಂಕರಿಸಿ ಯಶಸ್ವಿಯೆನಿಸಿಕೊಂಡ ಅನೇಕ ಮಹಿಳೆಯರು ನಮ್ಮಲ್ಲಿದ್ದಾರೆ. ಅವರೆಲ್ಲರ ಬದುಕು-ಬರಹಗಳನ್ನು ಆದರ್ಶವಾಗಿ ರೂಪಿಸಿಕೊಂಡು ಸ್ವತಂತ್ರ ಬದುಕಿನತ್ತ ದಾಪುಗಾಲು ಹಾಕುವುದು ಮಹಿಳೆಯರ ಮುಂದಿರುವ ಸವಾಲು. ಪುರುಷ ಪ್ರಧಾನ ಸಮಾಜದ ತಾಳಕ್ಕೆ ತಕ್ಕಂತೆ ಕುಣಿಯದೆ ತಮ್ಮಿಷ್ಟದ ಬದುಕು ರೂಪಿಸಿಕೊಳ್ಳುವುದೊಂದೇ ಆಕೆಯ ಮುಂದಿರುವ ಆಯ್ಕೆ. ಆದರೆ ಹೇಗೆ? ಇಪ್ಪತ್ತೂಂದನೇ ಶತಮಾನದಲ್ಲಿರುವ ನಾವು ಮೊದಲಾಗಿ "ಹೇರಿಕೆ'ಯ ಸಂಪ್ರದಾಯಗಳಿಂದ ಆಚೆ ಬರಬೇಕು. ಇಲ್ಲವಾದಲ್ಲಿ ಅದೆಷ್ಟೇ ಸುಶಿಕ್ಷಿತರಾದರೂ, ಸ್ಥಾನಮಾನ ಪಡೆದರೂ, ಹೇರಿಕೆಗಳಿಂದ ಹೊರ ಬಾರದೇ ಇದ್ದಲ್ಲಿ ನಮ್ಮ ಬದುಕಿಗೆ ನಾವೇ ಉಳಿಪೆಟ್ಟು ಹೊಡೆದುಕೊಂಡಂತೆ. 

ಧನ್ಯಾ ಬಾಳೆಕಜೆ 

Trending videos

Back to Top