CONNECT WITH US  

ಬೆಂಗಳೂರು ಈಗ ಕರಾವಳಿಗರ ಮೆಚ್ಚಿನ ನಗರ 

ಹಿಂದೆ ಮುಂಬಯಿಯಲ್ಲಿ ಕೆಲಸ ಮಾಡುತ್ತಿದ್ದ ಕರಾವಳಿಯ ಯುವಕರು, ಸ್ವಂತ ಬದುಕು ನಡೆಸಲು ಒಬ್ಬೊಬ್ಬರೆ ಬೆಂಗಳೂರಿಗೆ ಹೆಜ್ಜೆ ಹಾಕಲು ಶುರು ಮಾಡಿದರು. ವೆಜ್‌,  ನಾನ್‌ವೆಜ್‌, ಕರಾವಳಿ ಶೈಲಿಯ ಅನೇಕ ಹೊಟೇಲ್‌ಗ‌ಳು ಮುಂಬಯಿಯಂತೆ ಬೆಂಗಳೂರಿನಲ್ಲಿ ಆರಂಭವಾದವು. ತುಳು, ಕುಂದಾಪುರ ಕನ್ನಡ, ಕೊಂಕಣಿ ಮಾತನಾಡುವ ಈ ಜನರನ್ನು ಮೆಜೆಸ್ಟಿಕ್‌ನಿಂದ ಹಿಡಿದು ಬೆಂಗಳೂರಿನ ಮೂಲೆ ಮೂಲೆಗಳಲ್ಲಿ ನಾವಿಂದು ಕಾಣುತ್ತಿದ್ದೇವೆ. 

ಹಿಂದೆ ಸ್ವಲ್ಪ ವಿದ್ಯೆ ಕಲಿತವರು ಉದ್ಯೋಗ ಅರಸಿ ಹೋಗುವುದು ಮುಂಬಯಿಗೆ. ಮುಂಬಯಿಯ ಹಿಂದಿನ ಹೆಸರು ಬೊಂಬಾಯಿ ಎಂದಿರುವುದರಿಂದ ಅಲ್ಲಿಗೆ ಹೋದ ದೊಡ್ಡ ದೊಡ್ಡ ಕುಳಗಳಿಗೆ ಬೊಂಬಾಯಿ ಸಾಹೇಬರು, ಇಲ್ಲವೆ ಬೊಂಬಾಯಿ ಸೇಟ್‌ ಎಂದೇ ಕರೆಯುತ್ತಿದ್ದರು. ಕೆಲವರು ಹೊಟೇಲ್‌ ಉದ್ಯಮಕ್ಕೆ ಹೋದರೆ, ಇನ್ನು ಕೆಲವರು ಬಟ್ಟೆ ಮಿಲ್‌, ದೊಡ್ಡ ದೊಡ್ಡ ಕಂಪೆನಿ, ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದರು. ಹೀಗೆ ಹೋದವರು ಕೆಲವರು ಅಲ್ಲೆ ತಮ್ಮ ಸ್ವಂತ ವ್ಯಾಪಾರ ಮಾಡಿ ಸೇಟ್‌ಗಳಾಗಿ ಬೆಳೆದರೆ ಮುಂದೆ ಮಕ್ಕಳು ಮರಿಮಕ್ಕಳಾಗುವ ಹೊತ್ತಿಗೆ ಮುಂಬಯಿಯಲ್ಲಿ ಖಾಯಂ ನೆಲೆಸಿದರು. ಇನ್ನೂ ಕೆಲವರು ಮುಂಬಯಿ ಗಲಭೆ ಬಳಿಕ ಭವಿಷ್ಯದಲ್ಲಿ ಇದು ಸುರಕ್ಷಿತ ತಾಣ ಅಲ್ಲ ಅಂತ ತಮ್ಮ ಚಿಕ್ಕಪುಟ್ಟ ಉದ್ಯೋಗ, ವ್ಯಾಪಾರ ಅಲ್ಲೇ ಬಿಟ್ಟು ಬೆಂಗಳೂರು, ಹುಬ್ಬಳ್ಳಿ, ಧಾರವಾಡ ಮತ್ತಿತರ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಬಂದು ಹೊಸ ಉದ್ಯೋಗ ಹಾಗೂ ವ್ಯಾಪಾರ ಅರಸಿಕೊಂಡರು. ಇದೆಲ್ಲಾ ಬೇಡ ಅಂತ ಊರಿಗೆ ಬಂದು ನೆಲೆಸಿದವರು ಅನೇಕರು. 

ಹೀಗೆ 1990ರ ನಂತರ ಕರಾವಳಿ ಜಿಲ್ಲೆಗಳ ಜನರಿಗೆ ಮುಂಬಯಿ ಉದ್ಯೋಗದ ಆಕರ್ಷಣೆ ಕಡಿಮೆಯಾಗುತ್ತಾ ಬಂತು. ಇದರಲ್ಲಿ ಕೆಲವರು ದುಡ್ಡಿನಾಸೆಗಾಗಿ ಅರಬ್‌ ರಾಷ್ಟ್ರಗಳಿಗೆ ಹೋಗಲು ಶುರು ಮಾಡಿದರು. ಆದರೆ ಮುಂದೆ ಐಟಿ-ಬಿಟಿ ಕೇಂದ್ರವಾಗಿ ಬೆಂಗಳೂರು ಹೆಸರುವಾಸಿಯಾದಾಗ ಮುಂಬಯಿ ಜನರ ಒಲವು ಕ್ರಮೇಣ ಬೆಂಗಳೂರು ಕಡೆಗೆ ಹೆಚ್ಚಾಗುತ್ತಾ ಬಂತು. ಎಂಜಿನಿಯರಿಂಗ್‌ ಮಾಡಿದ ಯುವ ಸಮುದಾಯದ ದಂಡು ಉದ್ಯೋಗದಾಸೆಗಾಗಿ ಬೆಂಗಳೂರಿಗೆ ಬರಲಾರಂಭಿಸಿತು.  ಆರಂಭದಲ್ಲಿ ಇನ್ಫೋಸಿಸ್‌, ವಿಪ್ರೋ, ಎಚ್‌ಸಿಎಲ್‌, ಕಿಯೋನಿಕ್ಸ್‌ ಉದ್ಯೋಗ ಸೃಷ್ಟಿಸಿದರೆ 2005ರ ನಂತರ ಮಲ್ಟಿನ್ಯಾಶನಲ್‌ ಕಾರ್ಪೋರೇಟ್‌ ಕಂಪೆನಿಗಳು ಸಿಲಿಕಾನ್‌ ಸಿಟಿಗೆ ಬರಲಾರಂಭಿಸಿದಾಗ ಗಾರ್ಡನ್‌ ಸಿಟಿಯ ಚಿತ್ರಣವೇ ಬದಲಾಯಿತು. ರಿಯಲ್‌ ಎಸ್ಟೇಟ್‌, ಹೊಟೇಲ್‌ ಉದ್ಯಮ, ಪ್ರವಾಸೋದ್ಯಮ ದೊಡ್ಡಮಟ್ಟದಲ್ಲಿ ಬೆಂಗಳೂರಿನಲ್ಲಿ ಬೆಳೆಯಿತು. 

ಎಲ್ಲಾ ವರ್ಗದ ಜನರಿಗೆ ಬೆಂಗಳೂರಿಗೆ ಹೋದರೆ ಏನಾದರೂ ಕೆಲಸ ಸಿಗಬಹುದೆಂಬ ಆಸೆ ಕುದುರತೊಡಗಿತು.  
ಅಂತಹ ಪರಿಸ್ಥಿತಿಯಲ್ಲಿ ಈ ಭಾವನೆಗಳಿಗೆ ಹೆಚ್ಚು ಸ್ಪಂದಿಸಿದವರು ನಮ್ಮ ಕರಾವಳಿ ಮಂದಿ. ಇಲ್ಲಿಯ ಜನರು ಹೋಟೆಲ್‌ ಉದ್ಯಮದಲ್ಲಿ ಮೊದಲೇ ಬೆಂಗಳೂರಿನಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದುದರಿಂದ ಮುಂದೆ ದರ್ಶಿನಿ ಮಾದರಿಯ ಹೊಟೇಲ್‌ ಆರಂಭಿಸಲು ಶುರು ಮಾಡಿದರು. ಈ ಸಮಯದಲ್ಲಿ ಹಿಂದೆ ಮುಂಬಯಿಯಲ್ಲಿ ಕೆಲಸ ಮಾಡುತ್ತಿದ್ದ ಕರಾವಳಿಯ ಯುವಕರು, ಸ್ವಂತ ಬದುಕು ನಡೆಸಲು ಒಬ್ಬೊಬ್ಬರೆ ಬೆಂಗಳೂರಿಗೆ ಹೆಜ್ಜೆ ಹಾಕಲು ಶುರು ಮಾಡಿದರು. ವೆಜ್‌, ನಾನ್‌-ವೆಜ್‌ ಕರಾವಳಿ ಶೈಲಿಯ ಅನೇಕ ಹೊಟೇಲ್‌ಗ‌ಳು ಮುಂಬಯಿಯಂತೆ ಬೆಂಗಳೂರಿನಲ್ಲಿ ಆರಂಭವಾಯಿತು. ತುಳು, ಕುಂದಾಪುರ ಕನ್ನಡ, ಕೊಂಕಣಿ ಮಾತನಾಡುವ ಈ ಜನರನ್ನು ಮೆಜೆಸ್ಟಿಕ್‌ನಿಂದ ಹಿಡಿದು ಬೆಂಗಳೂರಿನ ಮೂಲೆ ಮೂಲೆಗಳಲ್ಲಿ ನಾವಿಂದು ಕಾಣುತ್ತಿದ್ದೇವೆ. ಕರಾವಳಿಯ ಮೂರು ಜಿಲ್ಲೆಗಳ ಭಾಷೆ ಬಹಳಷ್ಟು ಹತ್ತಿರ ಮಾಡಿದೆ. 

ಭೌಗೋಳಿಕವಾಗಿ ಬೆಂಗಳೂರು ರಾಜ್ಯದ ಕೇಂದ್ರ ಸ್ಥಾನದಲ್ಲಿದೆ. ಒಳ್ಳೆಯ ಹವೆಯಿರುವುದರಿಂದ ಜನರು ಹೆಚ್ಚು ಇಷ್ಟಪಡುವ ನಗರ. ಇದಲ್ಲದೆ ಉತ್ತಮ ಶೈಕ್ಷಣಿಕ ಸೌಲಭ್ಯಗಳು, ಶಾಪಿಂಗ್‌ ಮಾಲ್‌ಗ‌ಳು, ಅನ್ಯ ವಲಸಿಗರಂತೆ ಕರಾವಳಿಯ ಜನರನ್ನು ಆಕರ್ಷಿಸಿದೆ. ಅಲ್ಲೇ ಮನೆ ಕಟ್ಟಿಕೊಂಡು, ಸ್ವಂತ ಬದುಕನ್ನು ಕಟ್ಟಿಕೊಂಡು ವಾಸಿಸತೊಡಗಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದ ಜನರು ತಮ್ಮ ಸಂಘಟನೆಗಳನ್ನು ಕಟ್ಟಿಕೊಂಡು ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆ ನಡೆಸುತ್ತಿದ್ದಾರೆ ಎನ್ನುವುದು ಇಲ್ಲಿ ಉಲ್ಲೇಖನೀಯ. 

ಹಾಗೆಯೇ ಕರಾವಳಿಯ ಜನರಿಗೆ ಮುಂಬಯಿಗಿಂತ ಬೆಂಗಳೂರು  ಹೋಗಿಬರಲು ಹತ್ತಿರ ಎಂಬ ಭಾವನೆ ಇದೆ. ಒಂದು ರಾತ್ರಿ ಪ್ರಯಾಣ, ಅರ್ಜಂಟ್‌ ಹೋಗಿ ಬರಲು ಬೆಂಗಳೂರು ಅನುಕೂಲ ಎಂಬ ಭಾವನೆ ಉದ್ಯೋಗಸ್ತರದಲ್ಲಿದೆ. ಮುಂಬಯಿಯಂತೆ ಪರಕೀಯರ ನಗರ ಎಂಬ ಭಾವನೆ ಬೆಂಗಳೂರಿನಲ್ಲಿ ಉಂಟಾಗುವುದಿಲ್ಲ. ಹಾಗೆಯೇ ವಿವಾಹ ಸಂಬಂಧಕ್ಕೂ ಬೆಂಗಳೂರಿನಲ್ಲಿದ್ದರೆ ನೆಂಟಸ್ತಿಕೆಗೆ ಒಪ್ಪುತ್ತಾರೆ.  ಬೆಂಗಳೂರು ಈಗ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿದೆ. ವಿದೇಶಗಳಲ್ಲಿರುವ ಭಾರತೀಯರಿಗೆ ಇದು ಅಚ್ಚುಮೆಚ್ಚಿನ ನಗರ.

ಕರಾವಳಿ ಜಿಲ್ಲೆಗಳು ಪ್ರತಿಭಾವಂತರ ನಾಡಾದುದರಿಂದ ಯುವಕ-ಯುವತಿಯರು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಉದ್ಯೋಗ ಹುಡುಕಿಕೊಂಡು ಬರುವುದೇ ಇಲ್ಲಿಗೆ. ಅದರ ಪರಿಣಾಮವೆ ನಾವಿಂದು ಬೆಂಗಳೂರಿನಲ್ಲಿ ಕರಾವಳಿ ಜಿಲ್ಲೆಗಳ ಅನೇಕ ನುರಿತ ವೈದ್ಯರು, ಇಂಜಿನಿಯರುಗಳು, ಹೊಟೇಲ್‌ ಉದ್ಯಮಿಗಳನ್ನು ಕಾಣುತ್ತಿದ್ದೇವೆ. ಶ್ರಮಜೀವಿಗಳಾದ ಕರಾವಳಿ ಜನರಿಗೆ ಬೆಂಗಳೂರು ಈಗ ಮುಂಬಯಿಗಿಂತ ಹೆಚ್ಚು ಅಚ್ಚುಮೆಚ್ಚಿನದ್ದಾಗಿದೆ. ಆದರೆ ಮುಂಬಯಿಯನ್ನು ನೆಚ್ಚಿಕೊಂಡ ಹಳೆ ತಲೆಮಾರಿನವರು ಈಗಲೂ ಆ ನಗರವನ್ನು ಬಿಟ್ಟು ಬರಲು ತಯಾರಿಲ್ಲವೆನ್ನುವುದು ಅಷ್ಟೇ ಸತ್ಯ.

- ನಾಗ ಶಿರೂರು


Trending videos

Back to Top