CONNECT WITH US  

ಆ ಜೋರು ಮಳೆಯಲ್ಲಿ ಅಟಲ್‌ರ ಭಾಷಣ

ಈ ಸ್ವಾತಂತ್ರ್ಯ ಎಷ್ಟು ದಿನವಿರುತ್ತದೋ ಯಾರಿಗೆ ಗೊತ್ತು?

ಚಳಿಗಾಲದ ಆ ಸಂಜೆ ನಿಧಾನಕ್ಕೆ ಮಳೆ ಶುರುವಾಗಿತ್ತು. ನಾವು ರಾಮ್‌ಲೀಲಾ ಮೈದಾನ ತಲುಪಿದಾಗ ಮೊದಲ ಶಾಕ್‌ ಎದುರಾಯಿತು. ಏಕೆಂದರೆ ರಾಮ್‌ಲೀಲಾ ಮೈದಾನ ಒಂದಿಂಚೂ ಜಾಗವಿಲ್ಲದಷ್ಟು ಭರ್ತಿಯಾಗಿತ್ತು,  ಮೈದಾನದಲ್ಲಿ ನಿಲ್ಲಲು ಜಾಗ ಸಾಲದೇ ಜನ ಗೋಡೆಗಳ ಮೇಲೆ, ಕಾಂಪೌಂಡ್‌ನ‌  ಮೇಲೆ ಹತ್ತಿಕುಳಿತಿದ್ದರು, ಕೆ‌ಲವರಂತೂ ಟರ್ಕ್‌ಮೆನ್‌ ಗೇಟ್‌ಗೆ ಜೋತುಬಿದ್ದಿದ್ದರು.

ನಾನು ಮೊದಲ ಬಾರಿ ಅಟಲ್‌ಬಿಹಾರಿ ವಾಜಪೇಯಿಯವರ ಭಾಷಣ ಕೇಳಿದ ತಕ್ಷಣವೇ ಅವರೆಡೆಗೆ ಬಹಳ ಪ್ರಭಾವಿತಳಾಗಿದ್ದೆ. ಈ ವಿಷಯವನ್ನು ನಾನು ನನ್ನ ಪುಸ್ತಕ "ದರ್ಬಾರ್‌'ನಲ್ಲಿ ಬರೆದಿದ್ದೇನೆ.  ಅಟಲ್‌ಜೀ ಹೇಗೆ ಇಂದಿರಾ ಗಾಂಧಿ ವಿರುದ್ಧದ ಅಲೆ ಏಳುವಲ್ಲಿ ಪ್ರಮುಖ ಪಾತ್ರ ವಹಿಸಿದರು ಎನ್ನುವುದನ್ನು ಈಗ ನೆನಪಿಸಿಕೊಳ್ಳಲು ಬಯಸುತ್ತೇನೆ. ಇಂದಿರಾ ಗಾಂಧಿ ಜನವರಿ 1977ರಲ್ಲಿ ಚುನಾವಣೆಗಳನ್ನು ಘೋಷಿಸಿದಾಗ ಎಲ್ಲರಿಗೂ ಇಂದಿರಾ ಗೆಲ್ಲುತ್ತಾರೆ ಎನ್ನುವುದು ಖಾತ್ರಿಯಾಗಿತ್ತು. ಪ್ರತಿಪಕ್ಷಗಳ ಪ್ರಮುಖ ನಾಯಕರೆಲ್ಲ ಆಗಲೇ ಸುಮಾರು 2 ವರ್ಷದಿಂದ ಜೈಲಿನಲ್ಲಿದ್ದರು. ಪ್ರತಿಯೊಂದು ಪ್ರತಿಪಕ್ಷವೂ ಮುರಿದ ಗೂಡಾಗಿತ್ತು. ಹೀಗಾಗಿ ತುರ್ತುಪರಿಸ್ಥಿತಿಯ ಹೊರತಾಗಿಯೂ ಇಂದಿರಾರ ಗೆಲುವು ನಿಶ್ಚಿತ ಎಂಬ ಭಾವನೆಯೇ ಎಲ್ಲರಲ್ಲೂ ಇತ್ತು. ಇದೇ ಕಾರಣಕ್ಕಾಗಿಯೇ ಪ್ರತಿಪಕ್ಷದ ನಾಯಕರು ದೆಹಲಿಯಲ್ಲಿ ತಮ್ಮ ಮೊದಲ ಚುನಾವಣಾ ರ್ಯಾಲಿಯನ್ನು ಆಯೋಜಿಸಿದಾಗ ನಾನು ಮತ್ತು ನನ್ನಂಥ ಅನೇಕ ಪತ್ರಕರ್ತರು ಅಲ್ಲಿಗೆ ಹೋಗಿದ್ದೆವು. ಅಲ್ಲಿಗೆ ಹೋಗಿ ಏಕತೆ ತೋರಿಸುವುದಷ್ಟೇ ನಮ್ಮ ಉದ್ದೇಶವಾಗಿತ್ತೇ ಹೊರತು ಬೇರೇನೂ ಉದ್ದೇಶವಿರಲಿಲ್ಲ. 

ಚಳಿಗಾಲದ ಆ ಸಂಜೆಯಲ್ಲಿ ನಿಧಾನಕ್ಕೆ ಮಳೆ ಶುರುವಾಗಿತ್ತು. ನಾವು ರಾಮ್‌ಲೀಲಾ ಮೈದಾನ ತಲುಪಿದಾಗ ಮೊದಲ ಶಾಕ್‌ ಎದು ರಾಯಿತು. ಏಕೆಂದರೆ ರಾಮ್‌ಲೀಲಾ ಮೈದಾನ ಒಂದಿಂಚೂ ಜಾಗವಿಲ್ಲದಷ್ಟು ಭರ್ತಿಯಾಗಿತ್ತು, ಮೈದಾನದಲ್ಲಿ ನಿಲ್ಲಲು ಜಾಗ ಸಾಲದೇ ಜನ ಗೋಡೆಗಳ ಮೇಲೆ, ಕಾಂಪೌಂಡ್‌ನ‌ ಮೇಲೆ ಹತ್ತಿ ಕುಳಿತಿದ್ದರು, ಕೆ‌ಲವರಂತೂ ಟರ್ಕ್‌ಮೆನ್‌ ಗೇಟ್‌ಗೆ ಜೋತು ಬಿದ್ದಿದ್ದರು. ನಮಗೆದುರಾದ ಎರಡನೇ ಶಾಕ್‌ ಎಂದರೆ, ಮಳೆ ಜೋರಾಗಿದ್ದರೂ, ಕತ್ತಲಾಗುತ್ತಿದ್ದರೂ, ಅದಕ್ಕಿಂತ ಹೆಚ್ಚಾಗಿ ಪ್ರತಿ ಪಕ್ಷಗಳ ನಾಯಕರು ಅತ್ಯಂತ ಬೋರು ಹೊಡೆಸುವ ಭಾಷಣ ಮಾಡುತ್ತಿದ್ದರೂ ಜನ ಕುಳಿತ ಜಾಗದಿಂದ ಕದಲಲಿಲ್ಲ ಎನ್ನುವುದು. ಪ್ರತಿಪಕ್ಷದ ನಾಯಕರ ಭಾಷಣಗಳು ತೀರಾ ನೀರಸವಾಗಿದ್ದವು, ಜೈಲಿನಲ್ಲಿ ತಾವು ಕಳೆದ ದಿನಗಳ ಬಗ್ಗೆ ಗೋಳಾಟವಷ್ಟೇ ಆ ಭಾಷಣಗಳಲ್ಲಿತ್ತು. ಇತ್ತ ಪ್ರಸ್‌ ಬಾಕ್ಸ್‌ನಲ್ಲಿದ್ದ ಕೆಲವು ಪತ್ರಕರ್ತರು ಎದ್ದು ಹೊರಟುಬಿಟ್ಟರು. ನಾನೂ ಹೋಗೋಣ ಎಂದುಕೊಂಡೆ. ಆದರೆ ಸಹೋದ್ಯೋಗಿಯೊಬ್ಬಳು, "ವಾಜಪೇಯಿ ಭಾಷಣ ಕೇಳಿಹೋಗು' ಎಂದದ್ದಕ್ಕಾಗಿ ಅಲ್ಲೇ ಉಳಿದೆ. ಅದಕ್ಕೂ ಮುನ್ನ ನಾನು ಎಂದೂ ಅವರ ಭಾಷಣವನ್ನು ಕೇಳಿಸಿಕೊಂಡಿರಲಿಲ್ಲ. 

ರಾತ್ರಿ 9.30 ದಾಟಿತ್ತೆನಿಸುತ್ತದೆ, ಆಗ ವಾಜಪೇಯಿಯವರ ಸರದಿ ಬಂತು. ವಾಜಪೇಯಿ ಎದ್ದು ವೇದಿಕೆ ಹತ್ತುವಷ್ಟರಲ್ಲೇ, ನೆರೆದಿದ್ದ ಬೃಹತ್‌ ಜನಸಮೂಹ ಎದ್ದು ನಿಂತು ಜಯಘೋಷ ಕೂಗಲಾರಂಭಿಸಿತು. ಅಟಲ್‌ಜೀ ಜನರಿಗೆ ನಿರಾಶೆ ಮೂಡಿಸಲಿಲ್ಲ. ತುರ್ತುಪರಿಸ್ಥಿತಿಯ ನೋವು ಮತ್ತು ಭಯದ ಸಂಪೂರ್ಣ ಕಥೆಯನ್ನು ಅತಿ ಕಡಿಮೆ ಪದಗಳಲ್ಲಿ ಕವಿತೆಯ ರೂಪದಲ್ಲಿ ವಿವರಿಸುವ ಮೂಲಕ ಭಾಷಣ ಆರಂಭಿಸಿದರು ಅಟಲ್‌. ಅದು ಆಶು ಕವಿತೆಯಾಗಿತ್ತು. 

""ಬಾದ್‌ ಮುದ್ದತ್‌ ಕೇ ಮಿಲೇ ಹೇ ದೀವಾನೆ, 
ಕೆಹನೇ ಸುನ್‌ನೇಕೋ ಬಹುತ್‌ ಹೇ ಅಫಾನೆ 
ಖುಲಿ ಹವಾ ಮೆ ಝರಾ ಸಾಂಸ್‌ ತೊ ಲೇಲೇ
 ಕಬ್‌ ತಕ್‌ ರಹೇಗಿ ಆಝಾದಿ ಕೌನ್‌ ಜಾನೇ ''

""ಬಹಳ ದಿನಗಳ ನಂತರ ಜೊತೆಯಾಗಿದ್ದೇವೆ ನಾವಿವತ್ತು, ಹಂಚಿಕೊಳ್ಳಲು ಇವೆ ಕಥೆಗಳು ಹಲವು ಹತ್ತು,ಮೊದಲು ಸ್ವತ್ಛಂದ ಗಾಳಿಯಲ್ಲಿ ಉಸಿರಾದರೂ ತೆಗೆದುಕೊಂಡುಬಿಡೋಣ..ಈ ಸ್ವಾತಂತ್ರ್ಯ ಎಷ್ಟು ದಿನವಿರುತ್ತದೋ ಯಾರಿಗೆ ಗೊತ್ತು?' ಮೊದಲ ಸಾಲಿನಿಂದಲೇ ಚಪ್ಪಾಳೆಯ ಸದ್ದು ಆರಂಭವಾಗಿತ್ತು, ಕೊನೆಯ ಸಾಲು ಬರುವಷ್ಟರಲ್ಲೇ ನೆರೆದಿದ್ದ ಜನರೆಲ್ಲ ಹುಚ್ಚೆದ್ದು ಹೋಗಿದ್ದರು. ಅಟಲ್‌ಜೀಯವರ ಈ ಅದ್ಭುತ ಪ್ರತಿಕ್ರಿಯಾತ್ಮಕ ಸಾಲುಗಳನ್ನು ಕೇಳಿದ್ದೇ "ಇಂದಿರಾ ಸೋಲಬಹುದು' ಎನ್ನುವ ಸಾಧ್ಯತೆ ನನಗೆ ಕಾಣಿಸಲಾರಂಭಿಸಿತು. 

ತದನಂತರದ ದಿನಗಳಲ್ಲಿ ನಾನು ಅಟಲ್‌ಜೀ ಅವರನ್ನು ಆಗಾಗ ಭೇಟಿ ಮಾಡುತ್ತಲೇ ಇದ್ದೆ. 1984ರಲ್ಲಿ ಗ್ವಾಲಿಯರ್‌ನಲ್ಲಿ ಅವರನ್ನು ಭೇಟಿ ಮಾಡಿದ್ದಾಗ "ಮಾಧವರಾವ್‌ ಸಿಂಧಿಯಾ ಪರ ಅಲೆ ಇದೆ. ನೀವು ಸೋಲಬಹುದು' ಎಂದು ಎಚ್ಚರಿಸಲು ಪ್ರಯತ್ನಿಸಿದ್ದೆ. ಬಾಬ್ರಿ ಮಸೀದಿ ಧ್ವಂಸವಾದಾಗ ನಾನವರನ್ನು "ಬಾಬ್ರಿ ಮಸೀದಿ ಧ್ವಂಸದ ಬಗ್ಗೆ ನಿಮಗೆ ಅಷ್ಟು ಬೇಸರವಿದ್ದರೆ ಇನ್ನೂ ಏಕೆ ಬಿಜೆಪಿಯನ್ನು ಬಿಡುತ್ತಿಲ್ಲ?' ಎಂದು ಕೇಳಿದ್ದೆ. ಆಗ ಅವರು ತಮ್ಮ ಪ್ರಖ್ಯಾತ ಕವನದ ಸಾಲುಗಳ ಮೂಲಕ ಉತ್ತರಿಸಿದ್ದರು: "ಜಾಯೇಂ, ತೋ ಜಾಯೇ ಕಹಾಂ?' (ಹೋಗುವುದಾದರೂ ಎಲ್ಲಿಗೆ?). 

1997ರಲ್ಲಿ ಲಕೌ°ನಲ್ಲಿ ನಾನು ಟೆಲಿವಿಷನ್‌ ಕಾರ್ಯಕ್ರಮ ರೂಪಿಸಲು ಅವರೊಂದಿಗೆ ಒಂದು ದಿನ ಕಳೆದು, ಸಂದರ್ಶನ ನಡೆಸಿದ್ದೆ. ತಮಗೆ ನೆಹರೂ ಬಗ್ಗೆ ಅಭಿಮಾನವಿರುವುದಾಗಿ, ಆದರೆ ಸೋವಿಯತ್‌ ಒಕ್ಕೂಟದ ಆರ್ಥಿಕ ಮಾದರಿಯನ್ನು ಅನುಸರಿಸಿ ನೆಹರೂ ದೊಡ್ಡ ತಪ್ಪು ಮಾಡಿದ್ದಾಗಿ ಅಟಲ್‌ ಹೇಳಿದರು. ಭಾರತದ ಜನರಿಗೆ ಮೂಲಭೂತ ಅಗತ್ಯಗಳು ದಕ್ಕದೇ ಹೋದದ್ದಕ್ಕೆ ಸೋವಿಯತ್‌ ಮಾದರಿಯ ಆರ್ಥಿಕ ನೀತಿಗಳೇ ಕಾರಣ ಎಂದಿದ್ದರವರು. 

ಈ ಕಾರಣಕ್ಕಾಗಿಯೇ ಅಟಲ್‌ ಬಿಹಾರಿ ವಾಜಪೇಯಿಯವರು ಪ್ರಧಾನ ಮಂತ್ರಿಯಾದಾಗ ನಾನು ಅವರ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೆ. ಭಾರತದ ಆರ್ಥಿಕ ದಿಕ್ಕನ್ನೇ ಬದಲಿಸುವಂಥ ನಿರ್ಧಾರಗಳನ್ನು ಅವರು ತೆಗೆದುಕೊಳ್ಳಬಹುದು ಎಂದು ಆಶಿಸಿದ್ದೆ. ಆದರೆ ಇದೆಲ್ಲ ಆಗಲಿಲ್ಲ. ಅಲ್ಲದೇ ವಾಜಪೇಯಿಯವರು ದೆಹಲಿ ರಾಜಕೀಯದ ಸುತ್ತ ಗಿರಕಿ ಹೊಡೆಯುತ್ತಿದ್ದ "ದರ್ಬಾರಿ' ಸಂಸ್ಕೃತಿಯನ್ನು ಕಿತ್ತೆಸೆಯುವುದಕ್ಕೂ ಪ್ರಯತ್ನಿಸಲಿಲ್ಲ. ದೆಹಲಿಯ ಆಸ್ಥಾನಿಕರೆಲ್ಲ ವಾಜಪೇಯಿಯವರ ಆಸ್ಥಾನಕ್ಕೆ ಹೋದರು, ಯಾವಾಗ ವಾಜಪೇಯಿ 2004ರಲ್ಲಿ ಸೋತರೋ ಈ ವಂಧಿಮಾಗಧರೆಲ್ಲ ಮತ್ತೆ ಸೋನಿಯಾ ಅವರ ಆಸ್ಥಾನಕ್ಕೆ ಹೊರಟುನಿಂತರು. ಭ್ರಷ್ಟಾಚಾರ, ಸ್ವಹಿತಾಸಕ್ತಿ ಯಥಾ ರೀತಿಯೇ ಇತ್ತು. ವಾಜಪೇಯಿ ತಂಡದಲ್ಲಿದ್ದ ಕೆಲವು ಅಧಿಕಾರಿಗಳಂತೂ ಎಷ್ಟು ಅಹಂಕಾರಿಗಳಾಗಿದ್ದರೆಂದರೆ, ಅಂಥವರನ್ನು ನಾನು ಮತ್ತೆಂದೂ ನೋಡಿಲ್ಲ.  ನನಗೆ ಅನ್ನಿಸುವುದೇವೆಂದರೆ, ಈ ಅಧಿಕಾರಿಗಳಿಂದಾಗಿಯೇ ಕಂದಹಾರ್‌ ವಿಮಾನ ಅಪಹರಣದ ಪ್ರಕರಣದಲ್ಲಿ ಭಾರತ ದೊಡ್ಡ ತಪ್ಪುಗಳನ್ನು ಮಾಡಿಬಿಟ್ಟಿತು. 
ಆದರೆ ಇದು ವಾಜಪೇಯಿಯವರ ಒಳ್ಳೆಯ ಗುಣಗಳನ್ನು ನೆನಪಿಸಿಕೊಳ್ಳುವ ಸಮಯವೇ ಹೊರತು, ಅವರ ತಪ್ಪುಗಳನ್ನಲ್ಲ. 

ಅಂತಾರಾಷ್ಟ್ರೀಯ ನಿರ್ಬಂಧಗಳ ಹೊರತಾಗಿಯೂ ಅಣ್ವಸ್ತ್ರ ಪರೀಕ್ಷೆ ಮಾಡುವ ಧೈರ್ಯ ತೋರಿಸಿದ್ದಕ್ಕಾಗಿ ವಾಜಪೇಯಿಯವರನ್ನು ಭಾರತ ನೆನಪಿಡಲಿದೆ. ನಾವು ಇತ್ತ ಅಣ್ವಸ್ತ್ರ ಪರೀಕ್ಷೆ ಮಾಡಿದ್ದೇ ಅತ್ತ ಪಾಕಿಸ್ತಾನ ಕೂಡಲೇ ತನ್ನ ನೆಲಮಾಳಿಗೆಯಿಂದ ಅಣ್ವಸ್ತ್ರಗಳನ್ನು ಹೊರತೆಗೆದುಬಿಟ್ಟಿತು. ಆಗ ಇಡೀ ಪ್ರಪಂಚಕ್ಕೆ ಯಾರು ಜವಾಬ್ದಾರಿಯುತ ಅಣ್ವಸ್ತ್ರ ರಾಷ್ಟ್ರ ಮತ್ತು ಯಾವ ರಾಷ್ಟ್ರ ಗೂಂಡಾಗಿರಿ ಮಾಡುತ್ತಿದೆ ಎಂದು ಅರಿವಾಯಿತು. ವಾಜಪೇಯಿಯವರು ಬಸ್ಸು ಹತ್ತಿ ನೇರವಾಗಿ ಲಾಹೋರಿಗೆ ಹೋದರಲ್ಲ, ನನ್ನ ಪ್ರಕಾರ ಅದು ಅವರ ರಾಜಕೀಯ ಜೀವನದ ಅತ್ಯಂತ ಅದ್ಭುತ ಕ್ಷಣಗಳಲ್ಲಿ ಒಂದು. ಅಲ್ಲದೇ ಅವರು ಪಾಕ್‌ನ ಗವರ್ನರ್‌ ಗಾರ್ಡನ್‌ನಲ್ಲಿ ಮಾಡಿದ ಭಾಷಣವೂ ಸಹ: "ನಾನು ಇಲ್ಲಿಗೆ ನಿನ್ನೆ ಬಂದೆ, ನಾಳೆ ಹೊರಟುಹೋಗುತ್ತೇನೆ. ಎಲ್ಲಾ ಪ್ರವಾಸಿಗರ ಕಥೆಯಿದು. ಆದರೆ ಒಂದು ವಿಷಯ ಮಾತ್ರ ಬದಲಾಗುವುದಿಲ್ಲ ಎನ್ನುವುದನ್ನು ನಿಮಗೆ ನೆನಪಿಸುತ್ತೇನೆ. ನಾವು ಯಾವಾಗಲೂ ನೆರೆಹೊರೆಯವರಾಗಿಯೇ ಇರುತ್ತೇವೆ... ಏಕೆಂದರೆ ನಮ್ಮನ್ನು ಈ ಭೂಗೋಳ ಬೆಸೆದುಬಿಟ್ಟಿದೆ'! 

ಇದಕ್ಕೆಲ್ಲ ಪಾಕಿಸ್ತಾನಿ ಸೇನೆ ಕಾರ್ಗಿಲ್‌ ಯುದ್ಧದ ಮೂಲಕ ನಮಗೆ ಪ್ರತಿಕ್ರಿಯಿಸಿತು! ಆದರೆ ವಾಜಪೇಯಿಯವರು ಮಾತ್ರ ಜನರಲ್‌ ಪರ್ವೇಜ್‌ ಮುಷರ್ರಫ್ರನ್ನು ಶಾಂತಿಮಾತುಕತೆಗಾಗಿ ಆಗ್ರಾಕ್ಕೆ ಆಹ್ವಾನಿಸಲು ಹಿಂಜರಿಯಲಿಲ್ಲ.  ಅಟಲ್‌ಜೀ, ಬಹುತೇಕ ಜನರಿಗೆ ಕನಸುಮನಸಿನಲ್ಲಿ ಎಣಿಸಲಾಗದಷ್ಟು ಸಾಧನೆಯನ್ನು ನೀವು ಒಂದೇ ಜನ್ಮದಲ್ಲಿ ಮಾಡಿಹೋಗಿದ್ದೀರಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.

ತವಲಿನ್ ಸಿಂಗ್‌


Trending videos

Back to Top