CONNECT WITH US  

ಸ್ವಾವಲಂಬನೆಯ ಸುಖ ಬೇಡವಾಗುತ್ತಿದೆಯೇಕೆ?

"ಸಾಲ ಮನ್ನಾ ಬೇಡ, ನಾನು ಅದನ್ನು ನ್ಯಾಯವಾಗಿ ಬಡ್ಡಿ ಸಮೇತ ಕಟ್ಟಬಲ್ಲೆ' ಎನ್ನುವ ಸ್ವಾಭಿಮಾನಿ ರೈತರನ್ನು ಪ್ರತ್ಯೇಕ ಗುರುತಿಸುವುದರಿಂದ ರೈತವರ್ಗ ಮತ್ತಷ್ಟು ನೈತಿಕವಾಗಿ ಗಟ್ಟಿಯಾಗುತ್ತದೆ. ಅಂಥವರ ಸಂಖ್ಯೆ ಜಾಸ್ತಿಯಾಗಿ ಸರಕಾರಕ್ಕೆ ಪ್ರಯೋಜನವಾಗುತ್ತದೆ ಎಂಬುದಕ್ಕಿಂತ ಹೆಚ್ಚಾಗಿ ವೈಯಕ್ತಿಕವಾಗಿ ತಾನು ಬೇರೆಯವರ ಹಾಗೆ ಅಲ್ಲ ಎಂಬ ಭಿನ್ನತೆಯ ಭಾವನೆಯಾದರೂ ಮೂಡಬಹುದು.

ಸರಕಾರ ಲಕ್ಷಾಂತರ ರೈತರ ಸಾಲಮನ್ನಾ ಮಾಡಿ ಅವರ ಕೈಗೆ "ಋಣಮುಕ್ತ ಪ್ರಮಾಣ ಪತ್ರ" ನೀಡಲು ತುದಿಗಾಲಲ್ಲಿ ನಿಂತಿದೆ. ಸಂತೋಷ, ಅಭಿನಂದನೀಯ. ಜಾಹೀರಾತು ನೀಡಿ ಅದನ್ನೊಂದು ಪ್ರತ್ಯೇಕ ಕಾರ್ಯಕ್ರಮ ಮಾಡಿ ರಾಜ್ಯ ಸರಕಾರ ಸಂಭ್ರಮಿಸುತ್ತದೆ ಎಂಬುದು ಗೊತ್ತು. ಆದರೆ ಆ ದಿನ ನಮ್ಮ ರಾಜ್ಯ ಸರಕಾರ ಮಾಡಲೇ ಬೇಕಾದ ಅಗತ್ಯ ಮಹಣ್ತೀದ ಕಾರ್ಯಕ್ರಮ "ನನ್ನ ಸಾಲಮನ್ನಾ ಮಾಡಬೇಡಿ' ಎನ್ನುವ ರೈತರಿದ್ದರೆ ಅವರನ್ನು ಅದೇ ವೇದಿಕೆಗೆ ಕರೆಸಿ ಅವರಿಗೆ "ಆತ್ಮಾಭಿಮಾನಿ ಕರ್ನಾಟಕ ರೈತ' ಪ್ರಮಾಣ ಪತ್ರ ನೀಡುವುದು. ಈವರೆಗೆ ಸಾಲವೇ ಮಾಡದೆ ಕೃಷಿ ಮಾಡುತ್ತಿರುವ ಸಣ್ಣ ರೈತರಿದ್ದರೆ ಅವರಿಗೆ "ಸಾಲಮುಕ್ತ ಸ್ವಾಭಿಮಾನಿ ರೈತ' ಎಂಬ ಪ್ರಶಸ್ತಿ ನೀಡಿ ಗೌರವಿಸುವುದು.
ಸ್ವಾತಂತ್ರ ದೊರೆತು ಎಪ್ಪತ್ತು ವರ್ಷಗಳಾದ ಮೇಲೂ ನಮಗೆ ಮತ್ತೆ ಮತ್ತೆ ಸಾಲಮನ್ನಾ ಮಾಡುವ, ಉಚಿತ ಅಕ್ಕಿ, ಎಣ್ಣೆ ಕೊಡುವ, ಮಕ್ಕಳಿಗೆ ಸೈಕಲ್‌, ಚೀಲ, ಪುಸ್ತಕ, ಸಮವಸ್ತ್ರ ಕೊಡುವ, ಮದುವೆ ಹೆಣ್ಣಿಗೆ ತಾಳಿ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಕೊಡುವ ಸರಕಾರಗಳೇ ಬರುತ್ತವೆ. ಎಲ್ಲವೂ ಉಚಿತ, ಮನ್ನಾ, ಸಬ್ಸಿಡಿ ಕೊಟ್ಟು ಕೊಟ್ಟು ಈ ದೇಶದ ಕೋಟಿ ಕೋಟಿ ಜನರ ಮನಸ್ಥಿತಿಯನ್ನು ಜಡಕಟ್ಟಿಸಿದ ಕೀರ್ತಿ ಇಂಥ ಸರಕಾರಗಳದ್ದು. ಕಳೆದ ಎಪ್ಪತ್ತು ವರ್ಷಗಳಲ್ಲಿ ಈ ದೇಶದ ತಂದೆಗೆ ತಾಯಿಗೆ ತನ್ನ ಮಕ್ಕಳಿಗೆ ಬಟ್ಟೆ, ಪುಸ್ತಕ, ಒಂದು ಸೈಕಲ್‌ ಕೊಡಿಸಲು ಸಾಧ್ಯವಾಗಿಲ್ಲ ಎಂದರೆ ಅದು ಆ ಕುಟುಂಬದ ಗೌರವ, ಆತ್ಮಾಭಿಮಾನದ ಪ್ರಶ್ನೆ ಎಂಬುದಕ್ಕಿಂತ ಅವರನ್ನೊಳಗೊಂಡ ಈ ದೇಶದ ಗೌರವದ ಪ್ರಶ್ನೆ ಎಂದು ಭಾವಿಸಬೇಕು. 

ಒಂದು ದೇಶ ಆ ದೇಶದೊಳಗಡೆ ಬರುವವರನ್ನು ಆರ್ಥಿಕತೆ, ಸ್ವಾವಲಂಬಿತನ ಮತ್ತು ಸ್ವಾಭಿಮಾನದ ದಾರಿಯಲ್ಲಿಟ್ಟು ಅಳೆಯಬೇಕು. ಮನ್ನಾ,ದಾನ, ಉಚಿತ, ಸಬ್ಸಿಡಿಗಳನ್ನು ಕೊಟ್ಟರೂ ಒಂದು ಅವಧಿಗೆ ಕಾಲಕ್ಕೆ ನೀಡಿ ಮುಗಿಸಬೇಕು. ಬಡತನವನ್ನು ಶಾಶ್ವತ ವಾಗಿಡುವುದರಿಂದ ಮತಗಳು ಸಿಗಬಹುದೇ ಹೊರತು ದಾರಿದ್ರ ವೃದ್ಧಿಸುತ್ತದೆ ಎಂಬ ಅರಿವು ಬೇಕು.

ಬಡತನ ಬೇರೆ, ದಾರಿದ್ರ ಬೇರೆ. ಬಡತನಕ್ಕೆ ಮನುಷ್ಯನನ್ನು ಸೃಷ್ಟಿಸುವ ಶಕ್ತಿ ಇದೆ. ಆ ಬಡತನವನ್ನು ಇಟ್ಟುಕೊಂಡೇ ಬಡವ ಬದಲಾಗುತ್ತಾ ಬೆಳೆಯುತ್ತಾನೆ. ಪ್ರತಿ ಸಲ ಭೂಮಿಗೆ ಬೀಜ ಹರಹಾಕುವಾಗ ಅದು ಮೊಳೆಯುತ್ತದೆ, ಬೆಳೆಯುತ್ತದೆ, ಫ‌ಲ ಕೊಡುತ್ತದೆ ಎಂದು ನಂಬಿಯೇ ರೈತ ಬಿತ್ತುತ್ತಾನೆ. ಎಷ್ಟೊ ಸಲ ಬಿತ್ತಿದ ಬೀಜ ಫ‌ಲ ಕೊಡದೇ ಇರಬಹುದು. ಹಾಗಂತ ಆತ ಮತ್ತೆ ಬಿತ್ತದೇ ಇರುವುದಿಲ್ಲ. ಅವನ ಈ ಪ್ರಯತ್ನದ ಹಿಂದೆ ಎಷ್ಟೋ ಎಷ್ಟೋ ನೋವು, ಸಂಕಟ, ಹತಾಶೆ ಇದೆ. ಆದರೆ ಎಲ್ಲೋ ಒಂದು ಕಡೆ ಮತ್ತೆ ಗೆದ್ದೇ ಗೆಲ್ಲುತ್ತೇನೆ ಎಂಬ ಆಸೆ ಇರುತ್ತದೆ. ಈ ಆಸೆಯನ್ನು ಜೀವಂತವಾಗಿಡಬೇಕಾದರೆ ಸರಕಾರ ಆತನಿಗೆ ಮಾಡಬಹುದಾದ ಅವನ ಆ ಆಸೆಯೊಂದಿಗೆ ಸ್ವಾಭಿಮಾನವನ್ನು ಜೀವಂತವಾಗಿಡ ಬಹುದಾದ ಬೇರೆ ದಾರಿಗಳಿವೆ. ಆತನ ಬೆಳೆಗಳಿಗೆ ಉತ್ತಮ ಬೆಲೆ ಕೊಡಬೇಕು, ನೀರಾವರಿಗೆ ಅನುಕೂಲ ಮಾಡಿಕೊಡಬೇಕು; ಬೆಳೆಯ ರೋಗ, ಬೀಜ, ಪೋಷಣೆಯ ಬಗ್ಗೆ ತತ್‌ಕ್ಷಣ ತತ್‌ಸ್ಥಳಗಳಲ್ಲಿ ಮಾಹಿತಿ ನೀಡುವಂತೆ ಮಾಡಬೇಕು. ಉತ್ಪನ್ನಗಳಿಗೆ ಸಂಗ್ರಹಾಲಯಗಳನ್ನು ಒದಗಿಸಬೇಕು. ಈ ಎಲ್ಲಾ ದಾರಿಗಳು ರೈತನ ಮನಸ್ಸನ್ನು ಜೀವಂತ ಮತ್ತು ಹೆಚ್ಚು ಕ್ರಿಯಾಶೀಲಗೊಳಿಸುತ್ತವೆ. 

ಚಿಕ್ಕಮಗಳೂರಿನ ಕರಡಗೋಡಿನ ರೈತ ಅಮರನಾಥ ಅವರು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೊಂದು ಪತ್ರ ಬರೆದಿ ದ್ದಾರೆ. "ಈ ದೇಶದ ಒಬ್ಬ ರೈತನಾಗಿ ಉಳಿದವರಂತೆ ಯಾವ ಋಣವೂ ಇಲ್ಲದೆ ಸ್ವಾಭಿಮಾನದಿಂದ ಬದುಕಬೇಕೆಂದು ನನ್ನಾಸೆ. ಅದು ಸರಕಾರದ ಪಾಲು ಇರಬಹುದು, ಬೇರೆ ಕೈಸಾಲ ಇರಬಹುದು. ನನ್ನಲ್ಲೀಗ ದುಡಿಯುವ ಶಕ್ತಿ ಇದೆ. ನನ್ನೊಂದಿಗೆ ನನ್ನ ಮನೆಯವರು ದುಡಿಯುತ್ತಾರೆ. ಕಷ್ಟಪಟ್ಟು ದುಡಿಯುವ ನಮಗೆ ಸ್ವಾಭಿಮಾನ, ನೆಮ್ಮದಿ ಮುಖ್ಯವೇ ಹೊರತು ಸರಕಾರ ನೀಡುವ ಭಿಕ್ಷೆಯಲ್ಲ'.ಇದು ಆ ಪತ್ರದಲ್ಲಿರುವ ಮಾತುಗಳು.
ಭಾರತದ ರೈತ ಬೇರೆ ದೇಶದ ರೈತರಿಗಿಂತ ಹೆಚ್ಚು ಮಾನವಂತ ಎಂಬುದು ಸರ್ವವಿದಿತ. ಬ್ಯಾಂಕಿನಿಂದ ತೆಗೆದ ಹತ್ತು ಸಾವಿರ ಸಾಲವನ್ನು ನೀನಿನ್ನೂ ಯಾಕೆ ಕಟ್ಟಿಲ್ಲ ಎಂದು ತನ್ನ ಮನೆಯಂಗಳದಲ್ಲೇ ಮ್ಯಾನೇಜರ್‌ ದಬಾಯಿಸಿದ್ದಕ್ಕೆ ಮತ್ತು ಅದನ್ನು ಪಕ್ಕದ ಮನೆಯ ಹೆಂಗಸು ನೋಡಿ ನಕ್ಕಿದ್ದಕ್ಕೆ ಅವಮಾನಗೊಂಡು ಆ ರೈತ ಸಂಜೆ ಹೊಲದಲ್ಲಿ ವಿಷ ಕುಡಿದು ಸತ್ತದ್ದೂ ಗೊತ್ತಿದೆ. ಬರೀ ಹತ್ತು ಸಾವಿರ ಸಾಲ! ಬ್ಯಾಂಕು ಮ್ಯಾನೇಜರ್‌ ಅದನ್ನು ಹೇಳಲು ರೈತನ ಮನೆಯಂಗಳಕ್ಕೇ ಹೋಗಬೇಕಾಗಿರಲಿಲ್ಲ. ರೈತನನ್ನೇ ಬ್ಯಾಂಕಿಗೆ ಕರೆಸಿಕೊಂಡು ಆಪ್ತವಾಗಿ ಒಬ್ಬರನ್ನೇ ಕೂರಿಸಿಕೊಂಡು ಮಾತನಾಡಬಹುದಿತ್ತು. ಈ ದೇಶದಲ್ಲಿ ಹತ್ತು ಸಾವಿರವಲ್ಲ ನೂರಾರು ಕೋಟಿ ಸಾಲ ಮಾಡಿ ಕಟ್ಟದೆ ರಾಜಾರೋಷವಾಗಿ ಮೆರೆಯುವವರು ಇರುವಾಗ ನಮ್ಮ ಬ್ಯಾಂಕುಗಳಿಗೆ ಬರೀ ರೈತರೇ ಯಾಕೆ ಕಾಣುತ್ತಾರೋ ಗೊತ್ತಿಲ್ಲ .

ಅಮರನಾಥರ ಬ್ಯಾಂಕಿನ ಸಾಲ ಖಾತೆಯಿಂದ ಯಾವುದೇ ಸುಳಿವೂ ಕೊಡದೆ ಏಳು ಸಾವಿರ ರೂಪಾಯಿ ಕಡಿತ ಮಾಡಿದ್ದಾರೆ. ಕೇಳಲು ಹೋದಾಗ ಅದನ್ನು ಬೆಳೆವಿಮೆಗೆ ಕಡಿತಗೊಳಿಸಿದ್ದು ಎಂದಿದ್ದಾರೆ. ಕಳೆದ ವರ್ಷ ಮಳೆ ಹೆಚ್ಚಾಗಿ ಇವರ ಬೆಳೆ ಹಾಳಾಗಿತ್ತು. ವಿಮೆಗಾಗಿ ಕಡಿತ ಮಾಡಿದವರು ಪರಿಹಾರ ಕೊಡಬೇಕಾಗಿತ್ತು. ಇಡೀ ಜಿಲ್ಲೆಗೆ 69 ಲಕ್ಷ ಬೆಳೆ ಪರಿಹಾರ ವಿಮೆ ಬಿಡುಗಡೆಯಾದರೂ ಅಮರನಾಥ್‌ ಸೇರಿ ಯಾರಿಗೂ ಪರಿಹಾರ ವಿಮೆ ಕೈಸೇರಿಲ್ಲ . ವಿಚಾರಿಸಿದರೆ ಬ್ಯಾಂಕು ಅಧಿಕಾರಿಗಳಿಗೂ ಕೃಷಿ ಅಧಿಕಾರಿಗಳಿಗೂ ಯಾವುದೇ ಮಾಹಿತಿಯಿಲ್ಲ. ಮಾಡಬೇಕಾದ, ಕೊಡಬೇಕಾದ ಕೆಲಸ - ಪರಿಹಾರಗಳನ್ನು ಸರಕಾರ ಸರಿಯಾಗಿ ಮಾಡದೆ ಸಾಲ ಮನ್ನಾ ಮಾಡಿ ಋಣಮುಕ್ತ ಪ್ರಮಾಣಪತ್ರ ಕೊಡುವುದರಲ್ಲಿ ಅರ್ಥವೇನು ಎಂಬುದು ಅಮರನಾಥರ ಪ್ರಶ್ನೆ.

ನಮ್ಮಲ್ಲಿಂದು ಎರಡು ರೀತಿಯ ರೈತರಿದ್ದಾರೆ. ನಿಜವಾಗಿಯೂ ಹಣದ ತುರ್ತು ಅಗತ್ಯವಿದ್ದು , ಸಾಲ ಮಾಡಿದವರು. ಕೃಷಿ ವಿಸ್ತರಣೆ, ಹೊಸ ಬೆಳೆಗೆ, ನೀರಾವರಿಗೆ, ಕೃಷಿಯಂತ್ರ ಇತ್ಯಾದಿಗಳಿಗೆ. ಇನ್ನೊಂದು ವರ್ಗ ಇವರಿಗೆ ಖರ್ಚಿಗಿಂತ ಆದಾಯ ಹೆಚ್ಚಿರುತ್ತದೆ. ಕೃಷಿ ಸೆಟ್ಟಾಗಿದ್ದು ಅಕಾಲಿಕ ಪ್ರಾಕೃತಿಕ ವೈಪರೀತ್ಯಗಳು ಇಲ್ಲದಿದ್ದರೆ, ವಾಣಿಜ್ಯ ಕೃಷಿಯನ್ನು ಹೊಂದಿದ್ದರೆ ನಿಯತವಾಗಿ ಆದಾಯ ಬಂದೇ ಬರುತ್ತದೆ. ಬಹುಪಾಲು ಇಂಥವರು ಮೊನ್ನೆ ಮೊನೆಯ ವರೆಗೆ ಸಾಲಗಾರರಾಗಿರಲಿಲ್ಲ. ಯಾವಾಗ ಸಾಲದ ಬಡ್ಡಿ ಕಡಿಮೆ ಯಾಯಿತೋ ಅಥವಾ ಸಾಲಮನ್ನಾದ ಕಾಯಿಲೆ ಆರಂಭ ವಾಯಿತೋ ಇಂಥವರೂ ಸಾಲದ ಮೂಲಕ ಲಾಭ ಪಡೆಯಲು ಆರಂಭಿಸಿದರು. ಮೊನ್ನೆ ಇಲ್ಲೇ ಸ್ಥಳೀಯ ಕೃಷಿಕ ಗೆಳೆಯ ಕಲಾವಿದ ನೂಜಾಜೆಯ ನಾಗರಾಜ ನಿಡ್ವಣ್ಣಾಯ ಒಂದು ಮಾತು ಹೇಳಿದ್ರು. "ನನ್ನ ಕೃಷಿ ಇಷ್ಟೇ. ಬದುಕುವುದಕ್ಕೆ ಬೇರೆ ದಾರಿ ಇಲ್ಲ . ನನ್ನಪ್ಪ ನಯಾ ಪೈಸೆ ಸಾಲ ಮಾಡಲು ಒಪ್ಪುವುದಿಲ್ಲ . ಕೃಷಿಯ ಆದಾಯ ನಮ್ಮ ಬದುಕಿಗೆ ಮತ್ತು ಅದರ ಪೋಷಣೆಗೆ. ಇಷ್ಟೇ ನಮ್ಮ ಕೃಷಿ.'
ಈ ಇತಿಮಿತಿಯ ಕೃಷಿಯೊಳಗಡೆ ರೈತನಿಗಿರುವ ಸ್ವಾಭಿಮಾನ ವನ್ನು ಗಮನಿಸಿ. ನನಗೆ ಬೇರೆ ಯಾವುದೇ ಹಣ, ಸಹಾಯ, ಹಂಗು, ಋಣ ಯಾವುದೂ ಬೇಡ. ನಾನು ನಾನಾಗಿಯೇ ಬದುಕಬಲ್ಲೆ . ಇದು ನಮ್ಮ ದೇಶದಲ್ಲಿ ಬೇರೆಲ್ಲಾ ವರ್ಗದ ಜನರ ಪೈಕಿ ರೈತನಲ್ಲಿ ಹೆಚ್ಚಿತ್ತು. ಮಾನ - ಸ್ವಾಭಿಮಾನ, ಸ್ವಾವಲಂಬನೆಯ ಸುಖ, ಹಣವನ್ನು ಖರ್ಚು ಮಾಡುವ ಕ್ರಮ, ಉಳಿಕೆಯ ರೀತಿ ಎಲ್ಲದರಲ್ಲೂ ಸೂಕ್ಷ್ಮತೆ ಇತ್ತು. ಸಾಲದ ಸುಖ, ಮನ್ನಾದ ಆಸೆ ಅವನ ಜೀವನ ಕ್ರಮವನ್ನೇ ಬದಲಾಯಿಸುತ್ತಿದೆ.

ಈ ಹಿನ್ನೆಲೆಯಲ್ಲಿ ರೈತ ಈ "ಸ್ವಾಭಿಮಾನತನ'ವನ್ನು ಮರು ಸ್ಥಾಪಿಸುವ ಅಗತ್ಯವಿದೆ. ಪ್ರಧಾನಿ ನರೇಂದ್ರ ಮೋದಿಯವರು ಗ್ಯಾಸ್‌ ಸಬ್ಸಿಡಿ ಬೇಕಾದವರು ಬಿಡಿ, ಬೇರೆಯವರಿಗೆ ಅನುಕೂಲ ವಾಗುತ್ತದೆ ಎಂದರಲ್ಲ ಹಾಗೆಯೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರೈತಾಪಿಗಳಿಗೀಗ ಕರೆ ಕೊಡಬೇಕು. ರಾಜ್ಯದೆಲ್ಲೆಡೆ ಜಾಹೀರಾತು ಕೊಡಬೇಕು. ನೀವು ಬೇಡ ಎನ್ನುವ ಹಣ ಅತಿವೃಷ್ಠಿಗೆ ಮಣ್ಣಾದ ಕೊಡಗಿಗೆ ಸೇರುತ್ತದೆ ಎನ್ನಬೇಕು. ಬರೀ ಅಷ್ಟೇ ಅಲ್ಲ ಮನ್ನಾದಿಂದ ಹೊರಬರುವ ರೈತರನ್ನು ವಿಶಿಷ್ಟವಾಗಿ, ಪ್ರತ್ಯೇಕವಾಗಿ ಗುರುತಿಸುವಂತಾಗಬೇಕು. 
"ಸಾಲ ಮನ್ನಾ ಬೇಡ, ನಾನು ಅದನ್ನು ನ್ಯಾಯವಾಗಿ ಬಡ್ಡಿ ಸಮೇತ ಕಟ್ಟಬಲ್ಲೆ' ಎನ್ನುವ ಸ್ವಾಭಿಮಾನಿ ರೈತರನ್ನು ಪ್ರತ್ಯೇಕ ಗುರುತಿಸುವುದರಿಂದ ರೈತವರ್ಗ ಮತ್ತಷ್ಟು ನೈತಿಕವಾಗಿ ಗಟ್ಟಿಯಾಗುತ್ತದೆ. ಅಂಥವರ ಸಂಖ್ಯೆ ಜಾಸ್ತಿಯಾಗಿ ಸರಕಾರಕ್ಕೆ ಪ್ರಯೋಜನವಾಗುತ್ತದೆ ಎಂಬುದಕ್ಕಿಂತ ಹೆಚ್ಚಾಗಿ ವೈಯಕ್ತಿಕವಾಗಿ ತಾನು ಬೇರೆಯವರ ಹಾಗೆ ಅಲ್ಲ ಎಂಬ ಭಿನ್ನತೆಯ ಭಾವನೆಯಾದರೂ ಮೂಡಬಹುದು.

ಗಾಂಧೀಜಿಯವರ ಹಿಂದ್‌ ಸ್ವರಾಜ್‌ನಲ್ಲಿ  ಸಂಪಾದಕರಿಗೆ ಓದುಗರೊಬ್ಬರು ಒಂದು ಪ್ರಶ್ನೆ ಕೇಳುತ್ತಾರೆ, ನಿಮ್ಮ ಮನೆಗೆ ಕಳ್ಳನೊಬ್ಬ ಬಂದರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಎಂದು. ಅದಕ್ಕೆ ಸಂಪಾದಕನ ಸ್ಥಾನದಲ್ಲಿದ್ದ ಗಾಂಧೀಜಿಯವರು ಹೀಗೆ ಉತ್ತರಿಸುತ್ತಾರೆ, ಕದಿಯಲು ಬಂದವನು ನನ್ನ ಅಣ್ಣನೋ ತಮ್ಮನೋ, ತಂದೆಯೋಅಥವಾ ಇವರ್ಯಾರೂ ಅಲ್ಲದೆ ಬೇರೆ ವಯಯಕ್ತಿಯೋ ಗೊತ್ತಿಲ್ಲ. ನನ್ನ ಉತ್ತರ ವ್ಯಕ್ತಿ ಮತ್ತು ನನ್ನ ಸಂಬಂಧದ ಆಧಾರದಲ್ಲಿ ನಿಂತಿರುತ್ತದೆ ಎಂದು. 
ಸರಕಾರ ಸಾಲಮನ್ನಾ ಮಾಡಬಾರದು ಎಂಬುದು ನನ್ನ ಉದ್ದೇಶ ಅಲ್ಲವೇ ಅಲ್ಲ. ಆದರೆ ಮನ್ನಾದ ಪ್ರಯೋಜನ ಪಡೆಯುವವರಲ್ಲಿ ಎಷ್ಟು ಜನ ನಿಜವಾದ ಬಡವರು, ಹಣದ ಅಗತ್ಯ ಇರುವವರು , ಸೋತವರು ಎಂದು ಪತ್ತೆ ಮಾಡುವ ವಿಧಾನದ ಬಗ್ಗೆ ಸರಕಾರ ಮತ್ತಷ್ಟು ಸೂಕ್ಷ್ಮವಾಗಬೇಕು. ಬರುವ ಪ್ರತಿ ಹೊಸ ಸರಕಾರ ಮತ್ತು ಪ್ರತಿ ವಾರ್ಷಿಕ ಬಜೆಟ್‌ ಸಾಲಮನ್ನಾವನ್ನೇ ಪ್ರಮುಖ ಆದ್ಯತೆಯನ್ನಾಗಿಸಿಕೊಂಡರೆ ಪ್ರಭುತ್ವ, ರಾಷ್ಟ್ರ, ಸರಕಾರ ಆರ್ಥಿಕ ಮತ್ತು ನೈತಿಕವಾಗಿ ಬಲಹೀನವಾಗುವುದು ಗ್ಯಾರಂಟಿ.

ನರೇಂದ್ರ ರೈ ದೇರ್ಲ


Trending videos

Back to Top