ನಾಡ ನಕ್ಸಲರ ನಾನಾ ಅವತಾರಗಳು 


Team Udayavani, Sep 10, 2018, 8:13 PM IST

2.jpg

ಆಗಸ್ಟ್‌ 28ರಂದು ವರವರ ರಾವ್‌ ಮತ್ತು ಆತನ ನಾಲ್ವರು ಸಹವರ್ತಿಗಳನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದರು. ಈ ಐದೂ ಜನ ನಗರದಲ್ಲಿದ್ದುಕೊಂಡು ನಕ್ಸಲ್‌ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡುತ್ತಿದ್ದರೆಂದು ಆಪಾದಿಸಲಾಯಿತು. ಅರ್ಬನ್‌ ನಕ್ಸಲರು ಎಂಬ ಪದಪುಂಜ ಎಲ್ಲೆಡೆ ಮಿಂಚಿತು. ಅದಾಗಿ ಒಂದು ವಾರದಲ್ಲಿ ಬೆಂಗಳೂರಲ್ಲಿ, ಗೌರಿ ಲಂಕೇಶ್‌ ಹತ್ಯೆಯಾಗಿ ಒಂದು ವರ್ಷವಾದ ನೆನಪಲ್ಲಿ ಒಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿ ಭಾಗವಹಿಸಿದ್ದ ಜ್ಞಾನಪೀಠಿ ಗಿರೀಶ್‌ ಕಾರ್ನಾಡರು “ನಾನೂ ಅರ್ಬನ್‌ ನಕ್ಸಲ್‌’ ಎಂಬ ಬೋರ್ಡನ್ನು ಕತ್ತಿಗೆ ನೇತುಹಾಕಿಕೊಂಡು ಮಿಂಚಿದರು. ಈ ಎಲ್ಲ ಕಾರಣದಿಂದ ಅರ್ಬನ್‌ ನಕ್ಸಲ್ಸ್‌ – ಅಥವಾ ನಾಡ ನಕ್ಸಲರ ಕುರಿತ ಚರ್ಚೆ ಮುನ್ನೆಲೆಗೆ ಬಂದಿದೆ. ಅರ್ಬನ್‌ ನಕ್ಸಲ್ಸ್‌ ಎಂಬ ಹೆಸರಿನ ಕೃತಿ ಬರೆದಿರುವ ಬಾಲಿವುಡ್‌ ಸಿನೆಮಾ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ, ಕೃತಿಯಲ್ಲಿ ಆ ವ್ಯಕ್ತಿಗಳ ಬಗ್ಗೆ ಈ ವ್ಯಾಖ್ಯಾನ ಕೊಡುತ್ತಾರೆ: Urban naxals are the ‘invisible enemies’ of India, some of them have either been caught or are under the police radar for working for the movement and spreading insurgency against the Indian state. One common thread amongst all of them is that they are all urban intellectuals, influencers or activists of importance.

ಅಂದರೆ ನಗರ/ನಾಡ ನಕ್ಸಲರು ಕಾಡಿನಲ್ಲಿರುವ ನಕ್ಸಲರ ಸೈದ್ಧಾಂತಿಕ ಸಂಗಾತಿಗಳು. ಸಹವರ್ತಿಗಳು. ಕಾಡ ನಕ್ಸಲರು ದೇಶದಲ್ಲಿರುವ ಜನವಿರೋಧಿ ಶಕ್ತಿಗಳ ವಿರುದ್ಧ ಕೆಲಸ ಮಾಡು­ತ್ತಿದ್ದಾರೆ; ಜನಸೇವೆ ಮಾಡುತ್ತಿದ್ದಾರೆ; ನಕ್ಸಲಿಸಂ ಒಳ್ಳೆಯದು- ಎಂದು ಬಿಂಬಿಸಿ ಜನರಿಗೆ ಮಂಕುಬೂದಿ ಎರಚುವ ಜವಾಬ್ದಾರಿ­ವಹಿಸಿಕೊಂಡಿರುವವರೇ ಈ ನಾಡ ನಕ್ಸಲರು. ಹೆಚ್ಚಾಗಿ ಇವರ ಕಾರ್ಯಕ್ಷೇತ್ರ ಕಾಲೇಜು, ವಿಶ್ವವಿದ್ಯಾಲಯ, ಪತ್ರಿಕಾಲಯಗಳು, ಸರಕಾರೀ ಸಂಘ ಸಂಸ್ಥೆಗಳು. ಇವರು ಜನರನ್ನು ಹೇಗೆ ಪರಿವರ್ತಿಸುತ್ತಾರೆ? ಎರಡು ಉದಾಹರಣೆ: (1) ಮೈಸೂರಿನ ಒಂದು ಗೌರವಾನ್ವಿತ ಅಯ್ಯಂಗಾರ್‌ ಕುಟುಂಬದ ಸದಸ್ಯ ಪ್ರೇಮ್‌. ತಂದೆ ನಿವೃತ್ತ ಸೈನ್ಯಾಧಿಕಾರಿ. ನಗರದ ಹೃದಯ ಭಾಗದಲ್ಲಿ ಇವರಿಗೆ ಪೆಟ್ರೋಲ್‌ ಬಂಕ್‌ ಕೂಡ ಇತ್ತು. ಹಾಗಾಗಿ ಚಿನ್ನದ ಚಮಚೆಯಲ್ಲಿ ಪುಳಿಯೋಗರೆ ತಿನ್ನುತ್ತಿದ್ದ ಹುಡುಗ, ಮೈಸೂರಿಂದ ದೇಶದ ರಾಜಧಾನಿಗೆ ಹೋಗಿ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲೆಂದು ಜೆಎನ್‌ಯು ಸೇರಿದ. 

ತನ್ನ ಬಳಿ ಬಂದ ಕಬ್ಬಿಣದ ರಜವನ್ನು ಸರಕ್ಕನೆ ಸೆಳೆದುಕೊಳ್ಳುವ ಅಯಸ್ಕಾಂತದಂತೆ ಜೆಎನ್‌ಯು ಒಳಗಿದ್ದ ನಕ್ಸಲ್‌ ಬುದ್ಧಿ ಜೀವಿಗಳ ಗುಂಪು ಈತನನ್ನು ಸೆಳೆದು ಕೊಂಡಿತು. ಪಾಠ ಪ್ರವಚನಗಳತ್ತ ಆಸಕ್ತಿ ಕಳೆದುಕೊಂಡ ಪ್ರೇಮ್‌ ಹಗಲಿರುಳೆನ್ನದೆ ನಕ್ಸಲ್‌ ಸಾಹಿತ್ಯ ಓದಿದ; ನಕ್ಸಲ್‌ ಚಿಂತನೆ ಬೆಳೆಸಿಕೊಂಡ. ಜೆಎನ್‌ಯುನಿಂದ ಹೊರಬಿದ್ದ ಮೇಲೆ ಆಂಧ್ರ ಪ್ರದೇಶದ ಗುಡ್ಡ ಗಾಡುಗಳಲ್ಲಿ ಎಕೆ-47ರಂಥ ಬಂದೂಕುಗಳನ್ನು ಚಲಾಯಿಸುವ ತರಬೇತಿ ಪಡೆದ. ಕರ್ನಾಟಕಕ್ಕೆ ಬಂದು, ಇಲ್ಲಿನ ಪಶ್ಚಿಮಘಟ್ಟಗಳಲ್ಲಿ ಸೇರಿಕೊಂಡು ಪೊಲೀಸರ ವಿರುದ್ಧ ನಕ್ಸಲ್‌ ಚಳವಳಿ ಪ್ರಾರಂಭಿಸಿದ. ಈತನಿಗೆ ಪತ್ರಕರ್ತೆ ಗೌರಿ ಲಂಕೇಶ್‌ ಜೊತೆ ಅತ್ಯಂತ ಆತ್ಮೀಯವಾದ ಒಡನಾಟವಿತ್ತು. ಈತನೊಬ್ಬ ಕ್ರಾಂತಿಕಾರಿ ಪುರುಷ; ಇವನಿಂದ ಜಗತ್ತು ಅಭಿವೃದ್ಧಿಯ ಹೊಸ ಎತ್ತರಕ್ಕೆ ಏರುತ್ತದೆ; ಈತನದ್ದು ಅರ್ಥಪೂರ್ಣವಾದ ಮಾನವೀಯ ಕಳಕಳಿಯುಳ್ಳ ಜೀವನ ಎಂದು ಬಿಂಬಿಸಲು ಗೌರಿ ತನ್ನ ಪತ್ರಿಕೆಯ ಆದ್ಯಂತ ಪುಟಗಳನ್ನೆಲ್ಲ ಖರ್ಚು ಮಾಡುತ್ತಿದ್ದರು. ಕೊನೆಗೊಂದು ದಿನ ಕರ್ನಾಟಕದ ಪೊಲೀಸರು ಈ ಪ್ರೇಮ್‌ ಅಲಿಯಾಸ್‌ ಸಾಕೇತ್‌ ರಾಜನ್‌ ಎಂಬ ನಕ್ಸಲನನ್ನು ಎನೌRಂಟರ್‌ ಒಂದರಲ್ಲಿ ಹೊಡೆದುರುಳಿಸಿದರು. ಈತನ ಮುಖವನ್ನೂ ನೋಡಲಾರೆವು ಎಂದು ತಂದೆ ತಾಯಿ ಹೆಣವನ್ನು ತಮ್ಮ ಸುಪರ್ದಿಗೆ ಪಡೆಯಲಿಲ್ಲ. (2) ಬಂಗಾಳದ ಸೌಮ್ಯದೀಪ್ತ ಬ್ಯಾನರ್ಜಿ, 1996ರಲ್ಲಿ ಕೋಲ್ಕತ್ತದ ನರೇಂದ್ರ ಪುರದಲ್ಲಿ ರಾಮಕೃಷ್ಣ ಮಿಷನ್‌ನವರು ನಡೆಸುವ ಹೈಸ್ಕೂಲ್‌ ವಿದ್ಯಾರ್ಥಿ ಯಾಗಿದ್ದ. ಈ ಶಾಲೆಗೆ ಪ್ರವೇಶ ಗಿಟ್ಟಿಸುವ ವಿದ್ಯಾರ್ಥಿಗಳೆಲ್ಲರೂ ಮೇಧಾವಿಗಳಲ್ಲಿ ಮೇಧಾವಿಗಳಾಗ ಬೇಕಿದ್ದುದರಿಂದ ಅಲ್ಲಿ ಅನಾಯಾಸ ಪ್ರವೇಶ ಪಡೆದ ಸೌಮ್ಯದೀಪ್ತ ಎಷ್ಟು ಬುದ್ಧಿವಂತನಿದ್ದ ಎಂದು ಅಂದಾಜಿಸಬಹುದು. 12ನೆಯ ತರಗತಿ ಮುಗಿಸಿ ಐಐಟಿ ಪ್ರವೇಶ ಪರೀಕ್ಷೆ ಬರೆದು ಉತ್ತೀರ್ಣನಾಗಿ ಖರಗ್‌ಪುರದ ಐಐಟಿಯಲ್ಲಿ ಸೀಟನ್ನೂ ಗಿಟ್ಟಿಸಿಕೊಂಡ ಈತ 2012ರಲ್ಲಿ ಪೊಲೀಸರಿಂದ ಬಂಧಿತನಾದ. ಯಾಕೆಂದರೆ ಆ ವೇಳೆಗಾಗಲೇ ಆತ ಮೋಸ್ಟ್‌ ವಾಂಟೆಡ್‌ ನಕ್ಸಲ್‌ ಆಗಿ ಬದಲಾಗಿದ್ದ! ಕಾಮ್ರೇಡ್‌ ಬಿಕ್ರಮ್‌ ಎಂದು ಗುರುತಿಸಿಕೊಂಡಿದ್ದ ಸೌಮ್ಯದೀಪ್ತ ಪಶ್ಚಿಮ ಬಂಗಾಳದ ಇಂಟೆಲಿಜೆನ್ಸ್‌ ಬ್ರಾಂಚ್‌ನ ಉನ್ನತ ಅಧಿಕಾರಿಯಾಗಿದ್ದ ಪಾರ್ಥ ಬಿಸ್ವಾಸ್‌ರನ್ನು ಬರ್ಬರವಾಗಿ ಕೊಂದಿದ್ದ. ಮಾತ್ರವಲ್ಲ ತನ್ನ ಬಾಲ್ಯದ ಗೆಳೆಯನಾಗಿದ್ದ ಮತ್ತು ಒಂದು ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಸೌಮ್ಯಜಿತ್‌ ಬಸುವನ್ನು ಕೂಡ ಕೊಂದುಹಾಕಿದ್ದ! ದೇಶದ ಉತ್ತಮ ನಾಗರಿಕನಾಗಿ ಬೆಳೆಯಬೇಕಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಯೊಬ್ಬ ನನ್ನು ತಲೆಕೆಡಿಸಿ ಉಗ್ರಪಾತಕಿಯಾಗಿ ಬೆಳೆಸಿತ್ತು ನಕ್ಸಲಿಸಮ್‌. 

ಸರಕಾರ ಸರಿಯಿಲ್ಲ; ಪ್ರಜಾಪ್ರಭುತ್ವ ಅರ್ಥಹೀನ; ಇಲ್ಲಿ ಜನರ-ಮುಖ್ಯವಾಗಿ ಹಳ್ಳಿಗರ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ; ನಮ್ಮ ಧ್ವನಿ ಅಧಿಕಾರಶಾಹಿಯನ್ನು ಮುಟ್ಟಬೇಕಾದರೆ ಹಿಂಸಾಚಾರದ ಮಾರ್ಗ ಹಿಡಿಯಬೇಕು – ಎಂಬುದು ನಕ್ಸಲರ ವಿಚಾರಧಾರೆ. ಕಮ್ಯುನಿಸಮ್‌ನ ಉಪಉತ್ಪನ್ನವಾಗಿರುವ ನಕ್ಸಲಿಸಮ್‌ ಕೂಡ ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು ಘೋಷಣೆಗೆ ಜೈ ಎನ್ನುತ್ತದೆ. ಆದರೆ ಅದನ್ನು ಸಾಧಿಸಲು ಹಿಂಸ್ರಮಾರ್ಗವೊಂದೇ ಪರಿಹಾರ ಎಂದು ನಂಬುತ್ತದೆ. ವ್ಯಗ್ರ ಮನಸ್ಥಿತಿಯೇ ನಕ್ಸಲಿಸಮ್‌ನ ಸ್ಥಾಯಿಭಾವವಾಗಿರುವುದರಿಂದ ಸರಕಾರ ಯಾವುದೇ ಇರಲಿ, ಅದರ ವಿರುದ್ಧ ಒಂದು ಅತಿ ಭಯಂಕರವಾದ ಸಿಟ್ಟು, ಅಸಮಾಧಾನ, ಆಕ್ರೋಶ ಜನರಿಗಿರಬೇಕೆಂದು ಅದು ಆಶಿಸುತ್ತದೆ. 

ನಕ್ಸಲರು ಹಳ್ಳಿಗರ ಹಕ್ಕುಗಳನ್ನು ಕಾಪಾಡಲು, ಸರಕಾರದ ಪಾಶವೀ ನೀತಿಗಳಿಂದ ಹಳ್ಳಿಗಳನ್ನು ರಕ್ಷಿಸಲು ಕಟಿಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಿಂಬಿಸಿ ಅವರ ಪರವಾಗಿ ಒಂದು ಧನಾತ್ಮಕ, ಅನುಕಂಪದ ಅಲೆ ಹುಟ್ಟುವಂತೆ ಮಾಡುವುದೇ ನಾಡ ನಕ್ಸಲರ ಕೆಲಸ. ಆದರೆ ನಕ್ಸಲರು ಹಳ್ಳಿಗಳ ಉದ್ಧಾರಕರಲ್ಲ, ಕಂಟಕರು ಎಂಬುದೇ ವಾಸ್ತವ. ಮಧ್ಯಪ್ರದೇಶದ ಬಸ್ತಾರ್‌ ಹಳ್ಳಿಗಳಲ್ಲಿ ಇತ್ತೀಚೆಗೆ ನಕ್ಸಲರ ವಿರುದ್ಧ ಹೋರಾಟ ತೀವ್ರತೆಯ ಸ್ವರೂಪ ಪಡೆಯಲಾರಂಭಿಸಿದೆ. ಹಳ್ಳಿಗಳಿಗೆ ಸರಕಾರಗಳು ರಸ್ತೆ, ಸೇತುವೆ ನಿರ್ಮಿಸಲು ಹೊರಟೊಡನೆ ಇಷ್ಟು ವರ್ಷ ನಕ್ಸಲರು ಅವಕ್ಕೆ ಇನ್ನಿಲ್ಲದ ತೊಂದರೆ ಕೊಟ್ಟು ಯೋಜನೆ ಪೂರ್ಣ ಗೊಳ್ಳದಂತೆ ನೋಡಿಕೊಳ್ಳುತ್ತಿದ್ದರು. ರಸ್ತೆಕಾಮಗಾರಿ ನಡೆಸುವ ಕಾರ್ಮಿಕರನ್ನು ಮತ್ತು ಅಧಿಕಾರಿಗಳನ್ನು ಅಪಹರಿಸುವುದು, ಕೊಲೆಗೈಯುವುದು ಮಾಮೂಲಾಗಿತ್ತು. ಆದರೆ ಇದೆಲ್ಲವನ್ನೂ ನಕ್ಸಲರು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವು ದಕ್ಕಷ್ಟೇ ಮಾಡುತ್ತಿದ್ದಾರೆ; ಹಳ್ಳಿ ಉದ್ಧಾರವಾದರೆ ನಕ್ಸಲ್‌ ವ್ಯವಸ್ಥೆಯೇ ಬುಡಮೇಲಾಗಿ ಕವುಚಿ ಬೀಳಬೇಕಾಗುತ್ತದೆ ಎಂಬುದು ಹಳ್ಳಿಗರಿಗೆ ಅರ್ಥವಾಗಿದೆ. ನಕ್ಸಲರ ವಿರುದ್ಧ ಹಳ್ಳಿಗರೇ ಬಂಡಾಯವೇಳುವುದು ಈಗ ಮಧ್ಯಭಾರತದ ಗ್ರಾಮಪ್ರದೇಶದಲ್ಲಿ ಸಾಮಾನ್ಯವಾಗಿದೆ. ನಮಗೆ ಅಭಿವೃದ್ಧಿ ಬೇಕು; ನಿಮ್ಮ ಕಿತ್ತುಹೋದ ಓಬೀರಾಯನ ಕಾಲದ ಅವಾಸ್ತವಿಕ ಸಿದ್ಧಾಂತಗಳು ಬೇಕಾಗಿಲ್ಲ ಎಂದು ಹಳ್ಳಿಗರೇ ನಕ್ಸಲರನ್ನು ತಮ್ಮೂರುಗಳಿಂದ ಬೆತ್ತದೇಟು ಕೊಟ್ಟು ಓಡಿಸುತ್ತಿದ್ದಾರೆ (ಈ ವರ್ಷ ಮಾರ್ಚ್‌ 28ರಂದು ಬಸ್ತಾರ್‌ ಹಳ್ಳಿಗರು ನಕ್ಸಲರನ್ನು ವಿರೋಧಿಸಿ ಬಹಿಷ್ಕಾರ ಹಾಕಿದ್ದರು). 

ಎರಡು ವರ್ಷದ ಹಿಂದೆ, 2016ರ ನವೆಂಬರ್‌ 8ರ ರಾತ್ರಿ 8ರ ಹೊತ್ತಿಗೆ, ಪ್ರಧಾನಿ ನರೇಂದ್ರ ಮೋದಿ ನೋಟು ಅಮಾನ್ಯವಾದ ಘೋಷಣೆ ಮಾಡಿದರು. ಇದರಿಂದ ಕಪ್ಪುಹಣ ಅವಿತಿಟ್ಟಿದ್ದ ರಾಜಕಾರಣಿಗಳಿಗೆ, ಉದ್ಯಮಿಗಳಿಗೆ ಎಷ್ಟು ಶಾಕ್‌ ಆಯಿತೋ ಅಷ್ಟೇ ದೊಡ್ಡ ಆಘಾತ ಕಾಡಿನ ನಕ್ಸಲರಿಗೂ ಆಯಿತು. ಕಾಡಿನಲ್ಲಿ ಹೂತಿಟ್ಟಿದ್ದ ಕೋಟಿ ಕೋಟಿ ರುಪಾಯಿ ಮೌಲ್ಯದ ನೋಟುಗಳೆಲ್ಲ, ಪ್ರಧಾನಿಗಳ ಮಹತ್ವದ ಘೋಷಣೆಯಿಂದಾಗಿ ರಾತ್ರಿಬೆಳಗಾಗುವಷ್ಟರಲ್ಲಿ ಕಾಗದದ ಚೂರುಗಳಾಗಿ ಬದಲಾಗಿದ್ದವು. ದುಡ್ಡಿನ ಬಲದಿಂದಲೇ ನಡೆಯುತ್ತಿದ್ದ ನಕ್ಸಲರ ಹಲವಾರು ಚಟುವಟಿಕೆಗಳು ತಕ್ಷಣ ಸ್ತಬ್ಧಗೊಂಡವು. ಕಾಶ್ಮೀರದ ಪ್ರತ್ಯೇಕತಾವಾದಿಗಳೂ ಚಡಪಡಿಸುವಂತಾಯಿತು. ಅಷ್ಟೂ ದಿನ ನಾಡ ನಕ್ಸಲರಿಗೆ ಕಾಡ ನಕ್ಸಲರಿಂದ ನಿರಂತರವಾಗಿ ಆರ್ಥಿಕ ಸಹಾಯ ಬರುತ್ತಿತ್ತು. ನೋಟು ಅಮಾನ್ಯಗೊಂಡ ಮೇಲೆ ಅದು ಸಾಧ್ಯವಾಗಲಿಲ್ಲ. ನಾಡ ನಕ್ಸಲರು ಈ ಎಲ್ಲ ಕ್ಷಿಪ್ರ ಬೆಳವಣಿಗೆಗಳಿಂದ ಚಡಪಡಿಸತೊಡಗಿದರು. ನಕ್ಸಲರ ಬಹುದೊಡ್ಡ ಅಡ್ಡಾ ಆಗಿರುವ ಜೆಎನ್‌ಯು ಅಂತೂ ಉಬ್ಬಸಪಡತೊಡಗಿತು. ನೋಟು ಅಮಾನ್ಯಗೊಂಡ ಕೇವಲ ನಾಲ್ಕು ತಿಂಗಳಲ್ಲೇ ಅದರ ಪರಿಣಾಮ ದೆಹಲಿಯಲ್ಲಿ ದಟ್ಟವಾಗಿ ಕಾಣತೊಡಗಿತು. ಮಿಂಚಿನ ವೇಗದಲ್ಲಿ ಗುಪ್ತಸಭೆಗಳು ಆಯೋಜನೆಯಾದವು. ಮೋದಿ ಸರಕಾರವನ್ನು ಶತಾಯ ಗತಾಯ ಕಿತ್ತೂಗೆಯಲೇಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು. ಈ ಯುದ್ಧಘೋಷಣೆಯ ಶಂಖನಾದ ಎಂಬಂತೆ 2017ರ ಫೆಬ್ರವರಿಯಲ್ಲಿ ಜೆಎನ್‌ಯುನಲ್ಲಿ ಭಾರತ್‌ ತೇರೆ ತುಕ್‌ಡೇ ಹೋಂಗೇ, ಇನಷಾಅಲ್ಲಾ ಇನ್‌ಷಾಅಲ್ಲಾ ಎಂಬ ಕ್ರಾಂತಿಗೀತೆ ಮೊಳಗಿತು!

ಕಾಡಿನ ನಕ್ಸಲರಿಗೆ ನೈತಿಕ ಬೆಂಬಲ ಕೊಡುವುದು; ಅವರದ್ದು ಸಮಾಜಕಲ್ಯಾಣ ಕಾರ್ಯ ಎಂದು ಬಿಂಬಿಸುವುದು; ನಕ್ಸಲಿಸಮ್‌ನ ಹಿಂಸಾತ್ಮಕ ಮುಖಕ್ಕೆ ನೈತಿಕತೆಯ ಮುಖವಾಡ ತೊಡಿಸುವುದು – ಇವೆಲ್ಲ ನಾಡ ನಕ್ಸಲರ ಕೆಲಸ ಎಂದು ವಿವೇಕ್‌ ಅಗ್ನಿಹೋತ್ರಿ ಸರಿಯಾಗಿಯೇ ಗುರುತಿಸುತ್ತಾರೆ. ಆದರೆ ನಾಡ ನಕ್ಸಲ್‌ ಎಂಬ ಪದಪುಂಜದ ವ್ಯಾಪ್ತಿಯು ಅವರ ಪುಸ್ತಕದಲ್ಲಿ ಚರ್ಚಿಸಿದ ವಿಷಯಗಳಿಗಷ್ಟೇ ಸೀಮಿತವಲ್ಲ. ಇಂದು ನಾಡ ನಕ್ಸಲರು ಸಿನೆಮಾ, ಸಾಹಿತ್ಯ, ರಂಗಭೂಮಿ, ಮಾಧ್ಯಮ, ನ್ಯಾಯ ವ್ಯವಸ್ಥೆ, ವೈದ್ಯಕೀಯ, ಸರಕಾರೀ ಇಲಾಖೆಗಳು, ಪರಿಸರ ವಿಜ್ಞಾನ, ಶಿಕ್ಷಣ, ಸಾಮಾಜಿಕ ಹೋರಾಟ, ಐಟಿ-ಬಿಟಿ ಕ್ಷೇತ್ರ – ಹೀಗೆ ಹಲವಾರು ವಲಯಗಳಲ್ಲಿ ಹಂಚಿಹೋಗಿದ್ದಾರೆ. ಇವರ ಸಾಮಾನ್ಯ ಗುಣಲಕ್ಷಣಗಳನ್ನು ಪಟ್ಟಿ ಮಾಡುವುದಾದರೆ: ಇವರೆಲ್ಲರೂ ಭಾರತೀಯ ಸಂಸ್ಕೃತಿ, ಪರಂಪರೆಗಳ ವಿಷಯದಲ್ಲಿ ಉದಾಸೀನರು. ಹೆಚ್ಚಿನವರು ಭಾರತದ್ವೇಷಿಗಳು. ಹಿಂದೂ ಧರ್ಮ, ಸನಾತನ ಧರ್ಮಗಳು ಇವರಿಗೆ ಆಗಿಬರುವುದಿಲ್ಲ. ಈ ದೇಶದ ಮಣ್ಣಿನ ಸಂಸ್ಕೃತಿ, ಹಬ್ಬಹರಿದಿನಗಳು ಮುಂತಾದ ವಿಷಯದಲ್ಲಿ ಇವರಿಗೆ ತಡೆಹಿಡಿಯಲಾರದಂಥ ಸಿಟ್ಟಿದೆ. ಮೋದಿ ಸರಕಾರವನ್ನು ಇವರು ದ್ವೇಷಿಸುತ್ತಾರೆಂದು ಪ್ರತ್ಯೇಕ ಹೇಳಬೇಕಾ ದ್ದೇನೂ ಇಲ್ಲ! ಸಂಘಪರಿವಾರವನ್ನೂ ಸಂಘದ ರಾಜಕೀಯ ಆಯಾಮವಾಗಿರುವ ಭಾರತೀಯ ಜನತಾ ಪಕ್ಷವನ್ನೂ ಇವರು ತಮ್ಮ ಪ್ರಥಮಶತ್ರು ಎಂದು ಭಾವಿಸಿದ್ದಾರೆ. ವ್ಯವಸ್ಥೆಯ ವಿರುದ್ಧ ಸಿಡಿದೇಳಬೇಕೆಂದು ಉಪದೇಶಿಸುತ್ತ ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಚಾಣಾಕ್ಷ ನಾಡ ನಕ್ಸಲರ ಪೈಕಿ ಹೆಚ್ಚಿನವರು ಸರಕಾರದ ಆಯಕಟ್ಟಿನ ಹುದ್ದೆಗಳನ್ನು ಕಾಲಕಾಲಕ್ಕೆ ಅಲಂಕರಿಸಿದವರು. ಸರಕಾರದ ಕಡೆಯಿಂದ ಗಿಟ್ಟಿಸಬಹುದಾದ ಫೆಲೊಶಿಪ್‌, ಪ್ರಶಸ್ತಿ, ಪಿಂಚಣಿ, ಸೈಟು ಇವೆಲ್ಲ ಕಬಳಿಸಿದವರು. ತಾನೂ ನಾಡ ನಕ್ಸಲ್‌ ಎಂದಿರುವ ಗಿರೀಶ್‌ ಕಾರ್ನಾಡ್‌, ಆ ಪದಪುಂಜದ ಅರ್ಥವ್ಯಾಪ್ತಿಯನ್ನು ನಾವು ಹಿಗ್ಗಿಸಿಕೊಳ್ಳುವ ಅನಿವಾರ್ಯತೆ ಇದೆ ಎಂಬುದನ್ನು ಸೂಚಿಸಿದ್ದಾರೆ. 

ಸದ್ಯಕ್ಕೆ ನಾಡ ನಕ್ಸಲರು 2019ರ ಚುನಾವಣೆಯಲ್ಲಿ ಮೋದಿ ಸರಕಾರವನ್ನು ಹೇಗಾದರೂ ಕೆಳಗಿಳಿಸಬೇಕೆಂದು ಕೆಲಸ ಮಾಡುವುದು ನಿಸ್ಸಂಶಯ. ಯಾಕೆಂದರೆ ಅದು ಅವರಿಗೆ ಮಾಡು ಇಲ್ಲವೇ ಮಡಿ ಚುನಾವಣೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮಸಿ ಬಳಿಯುವುದು, ದಿನನಿತ್ಯ ಒಂದಿಲ್ಲೊಂದು ವಿಷಯದಲ್ಲಿ ದೇಶದಲ್ಲಿ ಗಲಭೆ, ದೊಂಬಿ, ಬಂದ್‌ಗಳಾಗುವಂತೆ ನೋಡಿಕೊಳ್ಳುವುದು ಈ ಕಾರ್ಯತಂತ್ರದ ಒಂದು ಭಾಗ. ಈಗಿರುವ ಸರಕಾರ ಕೆಳಗಿಳಿದರೆ ಯಾರಿಗೆಲ್ಲ ಲಾಭವಿದೆಯೋ ಅವರೆಲ್ಲ ಈ ಧ್ವಂಸಾಭಿಯಾನದಲ್ಲಿ ಪಾಲ್ಗೊಳ್ಳುವುದು ಸಹಜವೇ ತಾನೆ? ಹಾಗಾಗಿ, ವಿದೇಶೀ ಅನುದಾನಗಳ ಮೇಲೆ ನಿರ್ಬಂಧ ಹೇರಿಸಿಕೊಂಡಿರುವ ಎನ್‌ಜಿಓಗಳಿಂದ ಹಿಡಿದು ಪ್ರಶಸ್ತಿ-ಸನ್ಮಾನಗಳಿಲ್ಲದೆ ಸೊರಗುತ್ತಿರುವ ಸಾಹಿತಿಗಳು ಹಾಗೂ ಉಚಿತ ಬಂಗಲೆಗಳಿಂದ ಹೊರಹಾಕಿಸಿ ಕೊಂಡಿರುವ ಬುದ್ಧಿಜೀವಿಗಳವರೆಗೆ ಎಲ್ಲರೂ ನಾಡ ನಕ್ಸಲರ ಜೊತೆ ಕೈಜೋಡಿಸುತ್ತಾರೆ. ಇವರೆಲ್ಲರಿಗೆ ಬೇಕಾದ ರಾಜಕೀಯ ಬೆಂಬಲ ಕೊಡಲು ಮೋದಿ ವಿರೋಧಿ ರಾಜಕೀಯ ಪಕ್ಷಗಳು ಸಜ್ಜಾಗಿವೆ. 

ಇತ್ತೀಚೆಗೆ ಗೌರಿ ಲಂಕೇಶ್‌ ವರ್ಷಾಂತಿಕದ ಕಾರ್ಯ ಕ್ರಮದಲ್ಲಿ “ಮೋದಿ ಮೋದಿ ಮೋದಿ, ಯಾರದು ಮುಂದಿನ ಸರದಿ?’ ಎಂಬ ಘೋಷಣೆಯನ್ನು ಭಜನೆಯಂತೆ ನಿರಂತರವಾಗಿ ಕೂಗಲಾಯಿತು. ಗೌರಿ ಕೊಲೆ ನಡೆದುಹೋದದ್ದು ಕರ್ನಾಟಕದಲ್ಲಿ; ಕಾಂಗ್ರೆಸ್‌ ಅಧಿಕಾರದಲ್ಲಿದ್ದ ಕಾಲದಲ್ಲಿ. ತನಿಖೆ ನಡೆಸುತ್ತಿರುವುದು ರಾಜ್ಯ ಸರಕಾರ ನಿಯಮಿಸಿರುವ ತನಿಖಾ ದಳ. ತನಿಖೆ ಇನ್ನೂ ತನಿಖೆ ಹಂತದಲ್ಲಿಯೇ ಇದೆ. ಯಾರೊಬ್ಬರ ಮೇಲೆಯೂ ತೀರ್ಪು ಹೊರಬಿದ್ದಿಲ್ಲ. ಹಾಗಿರುವಾಗ ಗೌರಿ ಕೊಲೆಗೂ ಮೋದಿಗೂ ತಳುಕು ಹಾಕುವುದು ಬೌದ್ಧಿಕ ದಾರಿದ್ರÂದ ಅಂತಿಮ ಬಿಂದು ಅನ್ನಿಸಿಕೊಳ್ಳುವುದಿಲ್ಲವೆ? ಇಂಥ ಕಾರ್ಯಕ್ರಮ ದಲ್ಲಿ ಭಾಗವಹಿಸಿ ನಕ್ಸಲಿಸಂಗೆ ಬೆಂಬಲ ಸೂಚಿಸುತ್ತಿರುವ ಕಾರ್ನಾಡ್‌ರಂಥವರು ಯಾವ ಸಂದೇಶ ರವಾನಿಸುತ್ತಿದ್ದಾರೆ? ದೇಶದಲ್ಲಿ ಯಾವ ಅವಘಡವಾದರೂ, ಯಾರ ಕೊಲೆ- ಅತ್ಯಾಚಾರಗಳಾದರೂ, ಯಾವ ಮೂಲೆಯಲ್ಲಿ ಉಲ್ಕಾಪಾತವಾದರೂ, ಮನೆಯಂಗಳದಲ್ಲಿ ಬಾಳೇಸಿಪ್ಪೆಯ ಮೇಲೆ ಕಾಲಿಟ್ಟು ಯಾರೇ ಜಾರಿ ಬಿದ್ದರೂ ಅವೆಲ್ಲಕ್ಕೂ ಮೋದಿಯೇ ಕಾರಣ ಎಂಬ ಮನಸ್ಥಿತಿಯ ಎಲ್ಲರೂ ಈಗ ನಾಡ ನಕ್ಸಲರು ಎಂಬ ಹಣೆಪಟ್ಟಿ ಹಚ್ಚಿಕೊಳ್ಳಲು ಅರ್ಹರು ಎಂದು ಹೇಳಬಹುದು!

ಕಾಲೇಜು ಕ್ಯಾಂಪಸ್‌ಗಳೇ ಬ್ರಿಡಿಂಗ್‌ ತಾಣಗಳು
ದೇಶ ಸರಿಯಿಲ್ಲ, ಒಂದು ಕ್ರಾಂತಿಯಾಗಬೇಕು, ಅದಕ್ಕಾಗಿ ಬಂದೂಕು ಹಿಡಿಯಲೇಬೇಕು ಎಂಬ ಉಗ್ರಭಾಷಣ ಕೇಳಿದರೆ ಹದಿಹರೆಯದ ಮುಗ್ಧ ಮನಸ್ಸುಗಳಿಗೆ ಹೌದು ಅನ್ನಿಸುತ್ತದೆ. ಹಾಗಾಗಿ ನಗರ ನಕ್ಸಲರಿಗೆ ಕಾಲೇಜು ಕ್ಯಾಂಪಸ್‌ಗಳೇ ಬ್ರಿಡಿಂಗ್‌ ತಾಣಗಳು. ಅಲ್ಲಿ ಯಾರು ಇಂಥ ಚಿಂತನೆಗಳಿಗೆ ಬೇಗ ವಶರಾಗುತ್ತಾರೆ; ಯಾರನ್ನು ಅನಾಮತ್ತಾಗಿ ತಲೆ ಕೆಡಿಸಿ ಕಾಡೊಳಗೆ ತಳ್ಳಬಹುದು ಎಂದು ಗಮನಿಸಿ ಅಂಥವರನ್ನು ತಮ್ಮ ವಲಯದೊಳಕ್ಕೆ ಗೊತ್ತಾಗದಂತೆ ಸೇರಿಸಿಕೊಂಡು ಕೈಗೆ ಒಂದಷ್ಟು ನಕ್ಸಲ್‌ ಸಾಹಿತ್ಯ ತುರುಕಿದರೆ ಮುಗಿಯಿತು! ಆ ಹುಡುಗರು ಕೆಲವೇ ವರ್ಷಗಳಲ್ಲಿ ವಿದ್ಯಾಭ್ಯಾಸ ಬದಿಗಿಟ್ಟು ನಕ್ಸಲ್‌ ಚಳವಳಿಯ ಪ್ರವಾಹದಲ್ಲಿ ಈಜತೊಡಗುತ್ತಾರೆ. ಹೆಚ್ಚಿನವರು ಸಮಾಜದ ವಾಸ್ತವಗಳಿಗೆ ಕುರುಡರಾಗಿ, ತಾವು ಓದಿದ ಸಾಹಿತ್ಯವೇ ಪ್ರಪಂಚ ಎಂಬ ಭ್ರಮೆಯಲ್ಲಿ ವ್ಯವಸ್ಥೆ ವಿರುದ್ಧ ಹೋರಾಡಲು ಸಜ್ಜಾಗುತ್ತಾರೆ. ಇನ್ನು ಕೆಲವರಿಗೆ ಕಾಲಾಂತರದಲ್ಲಿ ತಾವು ನಡೆದದ್ದು ತಪ್ಪು ದಾರಿಯಲ್ಲಿ ಎಂಬ ಜ್ಞಾನೋದಯವಾದರೂ ಏನೂ ಮಾಡುವ ಸ್ಥಿತಿಯಲ್ಲಿರುವುದಿಲ್ಲ! ಕಾಡ ನಕ್ಸಲರನ್ನು ಕಾಡಲ್ಲೇ ಉಳಿಸಿ ನಾಡ ನಕ್ಸಲರು ಚೆಂದದ ಬದುಕು ಕಟ್ಟಿಕೊಳ್ಳುತ್ತಾರೆ! ಈ ಕಾಡ-ನಾಡ ನಕ್ಸಲಿಸಮ್ಮಿನ ಮುಖಗಳ ಪರಿಚಯ ಪಿ. ಲಂಕೇಶರ ಕ್ರಾಂತಿ ಬಂತು ಕ್ರಾಂತಿ ನಾಟಕದಲ್ಲಿ ತೆಳುವಾಗಿ ಬಂದಿತ್ತು.

ಹರಿಯುತ್ತಿದೆ ಹಣದ ಹೊಳೆ
2018ರ ಮಾರ್ಚ್‌ 7. ಮಹಾರಾಷ್ಟ್ರದ ಸೆಷನ್ಸ್‌ ನ್ಯಾಯಾಲಯ ದೆಹಲಿ ವಿ.ವಿ.ಯ ಪ್ರಾಧ್ಯಾಪಕ ಜಿ.ಎನ್‌. ಸಾಯಿಬಾಬಗೆ ಜೀವಾವಧಿ ವಿಧಿಸಿತು. ಅವರ ಅಪರಾಧ? ಕಾಡ ನಕ್ಸಲರಿಂದ 5 ಲಕ್ಷ ರುಪಾಯಿ ಪಡೆದದ್ದು. ಕಾರಣ? ಆ ದುಡ್ಡಿನಿಂದ ನಾಡಿನಲ್ಲಿ ನಕ್ಸಲಿಸಂನ ವ್ಯಾಪಕ ಪ್ರಚಾರ ಮಾಡುವ ಹೊಣೆಗಾರಿಕೆ ವಹಿಸಿಕೊಂಡಿದ್ದರು. ಈ ದುಡ್ಡನ್ನು ಅವರಿಗೆ ಕಾಡಿಂದ ತಂದುಕೊಟ್ಟವರು ಜೆಎನ್‌ಯುನ 3 ವಿದ್ಯಾರ್ಥಿಗಳು! ಮಹೇಶ್‌ ತಿರ್ಕಿ, ಪಾಂಡು ನರೋತೆ, ಹೇಮ್‌ ಮಿಶ್ರ. ಈ ಮೂವರಿಗೂ ಸಿಪಿಐ-ಎಂ ಎಂಬ ನಿಷೇಧಿತ ಸಂಘಟನೆಯ ನಾಯಕಿಯೊಂದಿಗೆ ಒಡನಾಟವಿತ್ತು. ಇವರ ಜೊತೆ ಪ್ರಶಾಂತ್‌ ರಾಹಿ ಎಂಬ ಪತ್ರಕರ್ತನೂ ನಾಡಿನಲ್ಲಿ ನಕ್ಸಲಿಸಮ್‌ ಹಬ್ಬಿಸುವ ಕಾರ್ಯಕ್ಕೆ ಕೈ ಜೋಡಿಸಿದ್ದ. ಎಲ್ಲ ಸರಿ, ಆದರೆ ಕಾಡಿನ ನಕ್ಸಲರಿಗೆ ದುಡ್ಡು ಎಲ್ಲಿಂದ? ಇದ್ದೇ ಇದೆಯಲ್ಲ ಲೂಟಿ, ದರೋಡೆ, ಸರಕಾರೀ ಇಲಾಖೆಗಳ ಮೇಲೆ ದಾಳಿ ಎಂಬ ವಾಮಮಾರ್ಗ! ದುಡ್ಡು ಬೇಕಾದಾಗ ಧನವಂತರ ಮನೆಗೆ ನುಗ್ಗುತ್ತಾರೆ. ಹಳ್ಳಿಗಳಲ್ಲಿ ಹಫ್ತಾ ವಸೂಲಿ ಗಿಳಿಯುತ್ತಾರೆ. ಮಾತು ಕೇಳದವರನ್ನು ಕೊಲೆ ಮಾಡು ವುದಕ್ಕೂ ಹೇಸುವುದಿಲ್ಲ. ಹೀಗೆ ಸಂಗ್ರಹವಾದ ದುಡ್ಡನ್ನು ಜೇಬಿಗಿಳಿಸುವ ನಾಡ ನಕ್ಸಲರು, ನಕ್ಸಲಿಸಮ್‌ ಎಂಬುದು ದೀನದಲಿತರ ಪರವಾಗುಳ್ಳ ಚಳವಳಿ ಎಂಬ ಕತೆ ಕಟ್ಟುತ್ತಾರೆ! ನಕ್ಸಲಿಸಮ್‌ನದು ತಾತ್ತಿಕ ಹಿಂಸೆ; ಅದು ತಪ್ಪಲ್ಲ – ಎಂಬ ಹೊಸ ಸಿದ್ಧಾಂತವೂ ಈಚೆಗೆ ನಾಡ ನಕ್ಸಲರ ಪಾಳಯದಲ್ಲಿ ಹುಟ್ಟಿಕೊಂಡಿದೆ.

ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.