CONNECT WITH US  

ಬೇಕಿದ್ದಾರೆ ಗಾಂಧಿಯಂತೆ ಮಾತನಾಡುವವರು!

ಸದುದ್ದೇಶದ ಬದಲಾವಣೆ ಮಾಡುವಾಗ ಪ್ರಾಂಜಲ ಮನಸ್ಸು ಇರಬೇಕು, ಸ್ವಾರ್ಥವಲ್ಲ

ಶಬರಿಮಲೆ ದೇವಸ್ಥಾನಕ್ಕೆ ಸಂಬಂಧಿಸಿದ ತೀರ್ಪು ಸಮಾಜದ ಮೇಲೆ ಅನೇಕ ಬಗೆಯ ಪರಿಣಾಮಗಳನ್ನು ಬೀರುತ್ತಿದೆ. ಇದರ ಮೂಲದ ಆಳ ಮತ್ತು ಹಿಂದಿರುವ ಅನೇಕ ಶಕ್ತಿಗಳು ಶತಮಾನಗಳಷ್ಟು ಹಿಂದಕ್ಕೆ ಇರುವುದು ಮೇಲ್ನೋಟಕ್ಕೆ ಗೋಚರಿಸಲಾರವು, ಚಿಂತನೆ ಮಾಡಿದರೆ ಮಾತ್ರ ಗೋಚರವಾಗುತ್ತವೆ. ನಮ್ಮ ಸ್ಥಿತಿ ಊರು ಸೂರೆಗೊಂಡ ಬಳಿಕ ದಿಡ್ಡಿ ಬಾಗಿಲು ಹಾಕಿದಂತೆ ಆಗಿವೆ. 

ಘನವೆತ್ತ ಸರ್ವೋಚ್ಚ ನ್ಯಾಯಾಲಯ ಶಬರಿಮಲೆ ದೇವಸ್ಥಾನದ ಕುರಿತು ಐತಿಹಾಸಿಕ ತೀರ್ಪು ಪ್ರಕಟಿಸಿತು. ಶಬರಿಮಲೆಗೆ ಯಾವುದೇ ವಯೋಮಾನದ ಮಹಿಳೆಯರೂ ಭೇಟಿ ನೀಡಬಹುದು ಎಂಬುದು ತೀರ್ಪಿನ ತಾತ್ಪರ್ಯ. ಕೇರಳದ ಉಚ್ಚ ನ್ಯಾಯಾಲಯ ಇನ್ನೊಂದು ತೀರ್ಪು ನೀಡಿದೆ. ಅದೆಂದರೆ "ಪವಿತ್ರ ಇರುಮುಡಿ ಕಟ್ಟಿಕೊಂಡೇ ಹೋಗಬೇಕೆಂದಿಲ್ಲ'. 

ಸ್ಟೇಕ್‌ಹೋಲ್ಡರ್‌ 1
ಇಂತಹ ಸೋಕಾಲ್ಡ್‌ ಐತಿಹಾಸಿಕ ತೀರ್ಪು ನೀಡುವ ನ್ಯಾಯಾಧೀಶರು ಸಹಜವಾಗಿಯೇ ಮಾಧ್ಯಮಗಳಲ್ಲಿ ರಾರಾಜಿಸು ತ್ತಾರೆ. ಅವರ ಮಾನ್ಯತಾ ದರ(ಟಿಆರ್‌ಪಿ ಎನ್ನಬಹುದು) ಏರುತ್ತದೆ. ಸಾಮಾನ್ಯವಾಗಿ ಮೇಲ್ಮಟ್ಟದ ನ್ಯಾಯಾಲಯದ ನ್ಯಾಯಾಧೀಶರು ಹಿರಿಯರಾಗಿರುತ್ತ ನಿವೃತ್ತಿ ಅಂಚಿನಲ್ಲಿರುವಾಗ ಇಂತಹ ತೀರ್ಪು ಕೊಟ್ಟಿರುತ್ತಾರೆ. ಒಂದು ವೇಳೆ ಸೇವಾವಧಿ ಸಾಕಷ್ಟಿದ್ದರೂ ಇದು ಲಾಭ ತಂದುಕೊಡುತ್ತದೆ, ನಿವೃತ್ತಿಯಾದರೂ ಲಾಭ ತಂದುಕೊಡು ತ್ತದೆ. ಸೇವಾವಧಿ ಇದ್ದರೆ ಭಡ್ತಿಯಂತಹ ಸಂದರ್ಭದಲ್ಲಿ ಅವರಿಗೆ ಇಂತಹ ತೀರ್ಪುಗಳು ವೇಗವರ್ಧಕವಾಗುತ್ತದೆ. ನಿವೃತ್ತಿಯಾದರೂ ನ್ಯಾಯಾಧೀಶರಿಗೆ ಸೂಕ್ತವಾದ ಮಾನವ ಹಕ್ಕುಗಳ ಆಯೋಗದಂತಹ ಅನೇಕ ಆಯೋಗದ ಅಧ್ಯಕ್ಷ ಹುದ್ದೆಗಳು ಸುಲಭವಾಗಿ ದೊರಕುತ್ತವೆ ಮತ್ತು ಅನೇಕ ಬಗೆಯ ಪ್ರತಿಷ್ಠಿತ ಪ್ರಶಸ್ತಿಗಳು ಅರಸಿಕೊಂಡು ಬರುತ್ತವೆ ಎಂಬ ಮಾತು ಸಾರ್ವಜನಿಕ ವಲಯಗಳಲ್ಲಿ ಕೇಳಿಬರುತ್ತವೆ. ಇದೇ ಕಾರಣಕ್ಕಾಗಿಯೋ ಏನೋ ಬಹುತೇಕ ಎಲ್ಲ ಮೇಲ್‌ಸ್ತರದ ಅಧಿಕಾರ ಅನುಭವಿಸಿದವರು ನಿವೃತ್ತಿ ಬಳಿಕ ರಾಜಧಾನಿಯಲ್ಲಿ ನೆಲೆ ನಿಂತಿರುತ್ತಾರೆ, ಒಂದೋ ದಿಲ್ಲಿ ಅಥವಾ ರಾಜ್ಯದ ರಾಜಧಾನಿಗಳು. 

ಸ್ಟೇಕ್‌ಹೋಲ್ಡರ್‌ 2 
ಶಬರಿಮಲೆಯಂತಹ ಪ್ರಕರಣಗಳೇ ಏಕೆ ಸಾಮಾನ್ಯ ಪ್ರಕರಣಗಳಲ್ಲಿಯೂ ಆರೋಪಿ ಖುಲಾಸೆಗೊಂಡ ಸಂದರ್ಭ ಅವರ ಪರ ವಕಾಲತ್ತು ವಹಿಸಿದ ನ್ಯಾಯವಾದಿಗಳಿಗೆ ಬೇಡಿಕೆ ಹೆಚ್ಚುತ್ತದೆ, ಅಂದರೆ ಅವರ ವಕಾಲತ್ತು ಶುಲ್ಕ ಏರುತ್ತದೆ. ಇದೂ ಕೂಡ ಮಾನ್ಯತಾ ದರದ ಏರಿಕೆಯಿದ್ದಂತೆ. ಸರ್ವೋಚ್ಚ ನ್ಯಾಯಾಲಯದ ಯಶಸ್ವಿ ನ್ಯಾಯವಾದಿಗಳ ಶುಲ್ಕ ಗಂಟೆಗೆ ಲಕ್ಷಾಂತರ ರೂ. ಇರುತ್ತದೆ. "ಯಶಸ್ವಿ' ನ್ಯಾಯವಾದಿಗಳೆಂದರೆ ಪ್ರಕರಣಗಳಲ್ಲಿ ಗೆಲುವು ಸಾಧಿಸಿಕೊಂಡವರು. ಗೆಲುವು ಸಾಧಿಸಿದವರ "ಬೆಲೆ' ಕಟ್ಟಲಾಗದು. 

ಸ್ಟೇಕ್‌ಹೋಲ್ಡರ್‌ 3
ಇಂತಹ ಪ್ರಕರಣಗಳಲ್ಲಿ ಇನ್ನೊಂದು ಸ್ಟೇಕ್‌ ಹೋಲ್ಡರ್‌ಗಳೆಂದರೆ ರಾಜಕಾರಣಿಗಳು. ಅಧಿಕಾರಸ್ಥ ರಾಜಕಾರಣಿಗಳಿಗೆ ಇಂತಹ ತೀರ್ಪುಗಳಲ್ಲಿ ಪರ ನಿಂತರೆ ಲಾಭವೋ? ವಿರೋಧ ನಿಂತರೆ ಲಾಭವೋ ಎಂಬುದು ಮುಖ್ಯವಾಗುತ್ತದೆ. ಕೆಲವು ಬಾರಿ ಒಬ್ಬ ಪರ ನಿಂತರೆ ಇನ್ನೊಂದು ಪಕ್ಷದವರು ವಿರೋಧಕ್ಕೆ ನಿಲ್ಲುತ್ತಾರೆ. ಇವರಿಬ್ಬರ ಆತ್ಮಸಾಕ್ಷಿಯನ್ನು ಪರೀಕ್ಷಿಸಿದರೆ ಅವರಿಗೆ ಎಂದೆಂದೂ ಶಬರಿಮಲೆ ಬೇಕಾಗಿಯೇ ಇಲ್ಲ. ಉದಾಹರಣೆಗೆ ಹೇಳುವುದಾದರೆ ಉತ್ತರದ ಅಮಿತ್‌ ಶಾ/ ರಾಹುಲ್‌ ಗಾಂಧಿಯವರಿಗೆ ಶಬರಿಮಲೆ ಬೇಕೋ? ಸೈದ್ಧಾಂತಿಕವಾಗಿ ದೇವರನ್ನೇ ಒಪ್ಪದ ಸಿಪಿಐ(ಎಂ) ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರಿಗೆ ಶಬರಿಮಲೆ ಬೇಕೋ? ಆತ್ಮಸಾಕ್ಷಿಯನ್ನು ಪರೀಕ್ಷಿಸುವ ಸಾಧನಗಳಿದ್ದರೆ ಅಯೋಧ್ಯೆ ರಾಮಮಂದಿರದ ವಿಷಯ ಬಿಜೆಪಿಯವರಿಗೂ ಕಾಂಗ್ರೆಸ್‌ನವರಿಗೂ ಬೇಡ ಎನ್ನುವುದು ತಿಳಿದುಬಂದೀತು. ಆದರೆ ರಾಮಮಂದಿರದ ವಿಷಯ ಇಬ್ಬರಿಗೂ ಬೇಕು. ಅದೇ ಇಲ್ಲವಾದರೆ, ಜನರು ನೆಮ್ಮದಿಯ ಬದುಕು ಬಯಸುವವರಾದರೆ ಈ ರಾಜಕಾರಣಿಗಳು ಯಾರಿಗೆ ಬೇಕು? ಆದರೆ ಶಬರಿಮಲೆಯಿಂದ ಹೊರಹೊಮ್ಮುವ ಪರಿಣಾಮಗಳು ಮಾತ್ರ ಇವರಿಬ್ಬರಿಗೂ ಬೇಕು. ಉದಾಹರಣೆಗೆ ಶಬರಿಮಲೆ ದೇವಸ್ಥಾನಕ್ಕೆ ಭಕ್ತರು ಬಂದರೆ ಅದೆಷ್ಟೋ ವ್ಯಾಪಾರ, ಬ್ಯಾಂಕ್‌ ವ್ಯವಹಾರ, ಹೊಟೇಲ್‌ ವ್ಯವಹಾರ, ಪ್ರವಾಸೋದ್ಯಮಗಳು ನಡೆಯುತ್ತವೆ. ಇದಕ್ಕಾಗಿ ನಾಸ್ತಿಕ ಅಧಿಕಾರಸ್ಥರಿಗೂ ಶಬರಿಮಲೆ ಬೇಕು. ಓಟು ಗಳಿಸಲೂ ಬೇಕು, ನೋಟು ಗಳಿಸಲೂ ಬೇಕು. ಎಷ್ಟು ದಿನ ಬೇಕೆಂದರೆ ಅಯ್ಯಪ್ಪ ತನ್ನ ಭಕ್ತರನ್ನು ಆಕರ್ಷಿಸುವಷ್ಟು ದಿನಗಳವರೆಗೆ ಮಾತ್ರ. ಇವರಿಗೆ "ಅಯ್ಯಪ್ಪ ಒಂದು ಟೂಲ್‌', ಅವರವರ ಬದುಕಿಗೆ ಆತ ಆಧಾರ. 

ಸ್ಟೇಕ್‌ಹೋಲ್ಡರ್‌ 4
ಸಮಾಜದಲ್ಲಿ ಇಂತಹ ಘಟನೆಗಳು ನಡೆದಾಗ ಮಾಧ್ಯಮಗಳಿಗೆ ಒಂದು ಹಬ್ಬ. ಕೇವಲ ವಸ್ತುಸ್ಥಿತಿಯನ್ನು ಮಾತ್ರ ಹೇಳದೆ ಪರ/ ವಿರೋಧವೆಂದು ದಿನವಿಡೀ ಚರ್ಚೆ ನಡೆಸುವುದು ಟಿಆರ್‌ಪಿ ಮೇಲಿನ ಕಣ್ಣಿನಿಂದ ಎನ್ನುವುದೂ ಎಲ್ಲರಿಗೆ ಗೊತ್ತಿದ್ದ ವಿಷಯ. 

ಸ್ಟೇಕ್‌ ಹೋಲ್ಡರ್‌ 5
ಕೊನೆಯ ಸ್ಟೇಕ್‌ ಹೋಲ್ಡರ್‌ (ಭಾಗೀದಾರ) ಸಾಮಾನ್ಯ ವ್ಯಕ್ತಿಗಳು. ಲಕ್ಷಾಂತರ, ಕೋಟ್ಯಂತರ ಸಾಮಾನ್ಯ ಜನರು ತಮ್ಮ ಕೆಲಸಗಳನ್ನು ಬಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಮೊದಲ ನಾಲ್ಕೈದು ವರ್ಗಗಳ ಗುರಿ (ಟಾರ್ಗೆಟ್‌) ಈ ಕೊನೆಯ ಸ್ಟೇಕ್‌ಹೋಲ್ಡರ್‌ಗೆ ತಿಳಿದೇ ಇರುವುದಿಲ್ಲ. ಇವರೆಲ್ಲ ಬಡ ಅಥವಾ ಮಧ್ಯಮವರ್ಗದವರು. ಇವರು ತಮ್ಮ ಕೆಲಸಗಳನ್ನು ಬಿಟ್ಟು ಬೀದಿಗಿಳಿದರೆ ಮನೆಗೂ ನಷ್ಟ, ರಾಷ್ಟ್ರಕ್ಕೂ ನಷ್ಟ. ಪ್ರತಿಭಟನೆ ನಡೆಸಿದವರ ಮೇಲೆ ಹೇರುವ ಪ್ರಕರಣಗಳ ಪರಿಣಾಮ ಘನಘೋರ. ಕೇರಳದಲ್ಲಿ ಸಾವಿರಾರು ಸಾಮಾನ್ಯ ಜನರ ಮೇಲೆ ಕೇಸ್‌ಗಳನ್ನು ಜಡಿಯಲಾಗಿದೆ. ಈ ಪ್ರಕರಣಗಳಿಂದ ಹೊರಬರಲು ದಶಕಗಳ ಕಾಲ ಕೊಳೆಯಬೇಕು. ಇದು ಕೊನೆಯಾಗುವಾಗ ಜನಸಾಮಾನ್ಯ ಹೈರಾಣವಾಗಿರುತ್ತಾನೆ. ಇದು ಕರ್ನಾಟಕದ ಕರಾವಳಿಯಲ್ಲೂ ಆದ ಅನುಭವ. 

ಅರಾಜಕತೆಯ ಲಕ್ಷಣ
ಬಂದ್‌ ಕರೆ ಕೊಡುವುದು ಸಲ್ಲದು ಎಂದು ಇದೇ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿತ್ತಾದರೂ ಕಾಲಕಾಲಕ್ಕೆ ನಡೆಯುವ ಬಂದ್‌ಗೇನೂ ಕೊರತೆಯಾಗಿಲ್ಲ. ಈಗ ನ್ಯಾಯಾಲಯದ ತೀರ್ಪಿಗೇ ಪ್ರತಿಭಟನೆ ನಡೆಯುತ್ತಿರುವುದು ವಿಪರ್ಯಾಸ. ಇದೊಂದು ರೀತಿಯಲ್ಲಿ ಅರಾಜಕತೆಯ ಟಿಪ್‌ ಆಫ್ ದಿ ಐಸ್‌ಬರ್ಗ್‌ ಎಂದರೆ ತಪ್ಪಾಗದು. 

ರಾಷ್ಟ್ರಕ್ಕೇ ನಷ್ಟ
ತಾರ್ಕಿಕವಾಗಿ ನೋಡಿದರೆ ರಾಷ್ಟ್ರಕ್ಕೆ ನಷ್ಟ ಉಂಟು ಮಾಡುವುದೆಂದರೆ ರಾಷ್ಟ್ರಕ್ಕೆ ದ್ರೋಹ ಮಾಡಿದಂತಲ್ಲವೆ? ಎಲ್ಲ ಪಕ್ಷಗಳೂ, ಅಧಿಕಾರರೂಢ ರಾಜಕಾರಣಿಗಳು, ನಾಯಕ ವರ್ಗದವರೂ ರಾಷ್ಟ್ರಭಕ್ತರೇ ಇರಬಹುದು. ಆದರೂ ಇವರೆಲ್ಲ ಗೊತ್ತಿಧ್ದೋ ಗೊತ್ತಿಲ್ಲದೆಯೋ ಅನೇಕ ಬಾರಿ ರಾಷ್ಟ್ರದ್ರೋಹದ ಕೊಡುಗೆಗಳನ್ನೂ ಇಂತಹ ಘಟನೆಗಳಲ್ಲಿ ಪರೋಕ್ಷವಾಗಿ ನೀಡುತ್ತಿದ್ದಾರೆಂದರೆ ಕಹಿಯಾದೀತು. ಪ್ರತಿಭಟನೆಗಳಿಂದ ಸರಕಾರಕ್ಕೂ ಭಾರೀ ವೆಚ್ಚ ಆಗುತ್ತದೆ. ಉದಾಹರಣೆಗೆ ಸಾವಿರಾರು ಪೊಲೀಸರು ಬಂದೋಬಸ್ತ್ ಕೆಲಸ ನಿರ್ವಹಿಸಬೇಕು. ಇದು ಯಾರ ಹಣದಿಂದ ನಡೆಯುತ್ತದೆ? ಸ್ವತಃ ಸರಕಾರವೇ ಬಂದೋಬಸ್ತ್ ಏರ್ಪಡಿಸಿ ಖರ್ಚು ಮಾಡುವುದೂ ನಡೆಯುತ್ತಿದೆ. ಇದನ್ನು ಸರಕಾರದ ದಾಷ್ಟ éìವೆನ್ನುವುದೇ? ನ್ಯಾಯಾಲಯದ ತೀರ್ಪಿನ ಮೇಲೆ ಇರುವ ಗೌರವವೆನ್ನುವುದೇ? ಇದೂ ರಾಷ್ಟ್ರಕ್ಕೆ ನಷ್ಟ. ಸರಕಾರಕ್ಕೆ ಒಂದು ತೀರ್ಪು ಬೇಡವೆಂದಾದರೆ ಅದನ್ನು ಪಾಲಿಸಲು ಹಾತೊರೆಯುತ್ತಾರೋ? 

ಗಾಂಧೀಜಿ ವಾದದ ಪ್ರಸ್ತುತತೆ
ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟ ಮಾಡುವವರೆಗೆ ಬ್ರಿಟಿಷರು ನ್ಯಾಯಾಲಯದಲ್ಲಿ ಹಾಕಿದ ಪ್ರಕರಣಗಳ ವಿರುದ್ಧ ಬ್ರಿಟಿಷರೇ ರೂಪಿಸಿದ ಕಾನೂನನ್ನು ಕಲಿತ ಭಾರತೀಯ ಬ್ಯಾರಿಸ್ಟರ್‌ಗಳು ವಾದಿಸುತ್ತಿದ್ದರು. ಕೊನೆಗೂ ಬ್ರಿಟಿಷರಿಗೆ ಪರವಾದ ತೀಪೇì ಹೊರಬರುತ್ತಿತ್ತು. ಬ್ರಿಟಿಷ್‌ ಆಧಾರಿತ ಕಾನೂನಿನಿಂದ ಇನ್ನೇನು ತೀರ್ಪು ಬರಲು ಸಾಧ್ಯ? ಇದನ್ನು ಕಂಡ ಗಾಂಧೀಜಿ ತನ್ನ ಹೋರಾಟ/ ವಾದದ ಗತಿಯನ್ನು ಬದಲಿಸಿದರು. ಈ ಕಾನೂನು ಬ್ರಿಟಿಷರು ಮಾಡಿದ್ದು. ಇದರ ಆಧಾರದಲ್ಲಿ ವಾದಿಸಿ ವ್ಯಾಜ್ಯ ಗೆಲ್ಲಲು ಪ್ರಯತ್ನಿಸುವುದೆಂದರೆ ಮೂರ್ಖತನ. ನಿಮ್ಮ ಕಾನೂನಿಗೆ ನನ್ನ ಗೌರವವಿಲ್ಲ. ನಾನು ನ್ಯಾಯವಾದಿಗಳನ್ನು ನೇಮಿಸಿಕೊಳ್ಳುವುದಿಲ್ಲ ಎಂದು ಘೋಷಿಸಿದರು. ಇದು 1921ರಲ್ಲಿ ನಡೆದ ಅಸಹಕಾರ ಚಳವಳಿಯ ಸಂದರ್ಭ. ಅದುವರೆಗೆ ಹೋರಾಟ ನಡೆಸಿದ ಪ್ರತಿಭಟನೆಗಾರರು ಬುದ್ಧಿವಂತ ವಕೀಲರನ್ನು ನೇಮಿಸಿಕೊಂಡು ತಾವು ತಪ್ಪು ಮಾಡಲಿಲ್ಲ ಎಂದು ವಾದಿಸುತ್ತಿದ್ದರು. ಗಾಂಧೀಜಿಯವರ ಪ್ರಕರಣವೂ ನ್ಯಾಯಾಲಯದ ಕಟಕಟೆಯಲ್ಲಿ ವಿಚಾರಣೆ ನಡೆಸುವಾಗ ಸರಕಾರಿ ವಕೀಲರು ಆರೋಪ ಪಟ್ಟಿ ಸಲ್ಲಿಸಿದರು. 

ಗಾಂಧೀಜಿಯ ವರು ವಕೀಲರನ್ನು ನೇಮಿಸದೆ "ಸರಕಾರಿ ವಕೀಲರು ಹೇಳಿದ್ದೆಲ್ಲ ಸರಿ. ಅನ್ಯಾಯದಿಂದ ರೂಪುಗೊಂಡ ಕಾನೂನು ಜನರಿಗೆ ಪೂರಕವಾಗಿಲ್ಲ. ಹೀಗಾಗಿ ಅನ್ಯಾಯದಿಂದ ಕೂಡಿದ ಕಾನೂನನ್ನು ಮುರಿಯುವುದೇ ಪ್ರಜೆಗಳ/ ನನ್ನ ಕರ್ತವ್ಯ. ನಿಮಗೆ ನಾನು ಮಾಡಿದ್ದು ತಪ್ಪು ಅನಿಸಿದರೆ ಶಿಕ್ಷೆ ಕೊಡಬಹುದು. ಶಿಕ್ಷೆ ಕೊಡದೆ ಬಿಟ್ಟುಬಿಟ್ಟರೆ ನಾನು ಮಾಡುವುದು ಕಾನೂನನ್ನು ಮುರಿಯುವ ಅದೇ ಕೆಲಸವನ್ನು. ನಾನು ಮಾಡಿದ್ದು ಸರಿ ಎಂದು ನಿಮಗೆ ಕಂಡರೆ ನೀವು ನಿಮ್ಮ ಹುದ್ದೆಗೆ ರಾಜೀನಾಮೆ ನೀಡಿ ನನ್ನೊಂದಿಗೆ ಸೇರಿಕೊಳ್ಳಿ' ಎಂದರು. ಇದನ್ನು ಕಂಡ ಬಿಳಿಯ ನ್ಯಾಯಾಧೀಶ ಬ್ರೂನ್‌ಫೀಲ್ಡ್‌ಗೆ ಅಚ್ಚರಿಯಾಯಿತು. ಇದುವರೆಗೆ ಬಿಳಿಯ ನ್ಯಾಯಾ ಧೀಶರು ಇಂತಹ ವಾದವನ್ನು ಕಂಡಿರಲಿಲ್ಲ. ಆಗ ಬಾಲಗಂಗಾಧರ ತಿಲಕರಿಗೆ ಬರ್ಮಾ ಜೈಲಿಗೆ ಕಳುಹಿಸಿದ ಕಲಂನ್ನೇ ಗಾಂಧೀಜಿಗೆ ವಿಧಿಸಿ ನ್ಯಾಯಾಧೀಶರು ಆರು ತಿಂಗಳ ಕಠಿಣ ಸೆರೆಮನೆ ವಾಸದ ತೀರ್ಪು ನೀಡಿದರು. "ಒಂದು ವೇಳೆ ನಿಮ್ಮ ಸನ್ನಡತೆಯಿಂದ ಬಿಡುಗಡೆಗೊಂಡರೆ ಖುಷಿಪಡುವವರಲ್ಲಿ ನಾನೇ ಮೊದಲಿಗ' ಎಂದು ನ್ಯಾಯಾಧೀಶರು ಹೇಳಿ ಅಚ್ಚರಿ ಮೂಡಿಸಿದ್ದರು ಎನ್ನುತ್ತಾರೆ ಇತಿಹಾಸ ತಜ್ಞ ಡಾ| ರಾಮದಾಸ ಪ್ರಭು. 

ಅದೇ ಕಾನೂನು, ತೀರ್ಪು ಬೇರೆ ಬೇರೆ
ಆಗಲೂ ತಿಲಕರು, ಗಾಂಧೀಜಿಯವರ ಮೇಲೆ ರಾಷ್ಟ್ರದ್ರೋಹದ ಆಪಾದನೆ ಹೊರಿಸಲಾಗಿತ್ತು. ಈಗಲೂ ಅಂತಹುದೇ ಬ್ರಿಟಿಷರ ಓಬಿರಾಯನ ಕಾನೂನು ಜಾರಿಯಲ್ಲಿದೆ. ಅದನ್ನಾಧರಿಸಿಯೇ ತೀರ್ಪು ಹೊರಬರುತ್ತಿದೆ. ಅದನ್ನೇ ಕಾನೂನು ಪಂಡಿತರು ಕಾನೂನು ಕಾಲೇಜುಗಳಲ್ಲಿ, ವಿ.ವಿ.ಗಳಲ್ಲಿ ಓದಿ ರ್‍ಯಾಂಕ್‌, ಪಿಎಚ್‌ಡಿ ಪಡೆಯುತ್ತಿದ್ದಾರೆ. ಇವರೇ ತೀರ್ಪು ಕೊಡುವವರು, ವಾದಿಸುವ ವರು, ತೀರ್ಪು ಪಾಲಿಸುವವರು, ತೀರ್ಪು ಉಲ್ಲಂ ಸಿದರೆ ನ್ಯಾಯಾಂಗ ನಿಂದನೆ ಅನುಭವಿಸುವವರು...

ಈಗ ಶಬರಿಮಲೆಗೆ ಸಂಬಂಧಿಸಿದ ತೀರ್ಪಿನ ಬಗೆಗೆ ಅದೇ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ನಿವೃತ್ತರಾದ ನ್ಯಾ|ಮೂ| ಸಂತೋಷ್‌ ಹೆಗ್ಡೆಯವರು ಏನು ಹೇಳುತ್ತಾರೆಂದು ನೋಡಿ: "ನ್ಯಾಯಾಂಗಕ್ಕೂ ಧರ್ಮಕ್ಕೆ ಸಂಬಂಧಿಸಿ ತೀರ್ಪು ಕೊಡುವ ಹಕ್ಕಿಲ್ಲ. ಅದನ್ನು ಸಮಾಜ ನೋಡಿಕೊಳ್ಳಲಿ, ಧಾರ್ಮಿಕ ನೇತಾರರು ನೋಡಿಕೊಳ್ಳಲಿ. ಶಬರಿಮಲೆಯಾಗಲೀ, ಅಯೋಧ್ಯೆಯಾಗಲೀ ನ್ಯಾಯಾಂಗ ತನ್ನ ವ್ಯಾಪ್ತಿ ಮೀರಿ ವರ್ತಿಸುವುದು ತರವಲ್ಲ. ಆಯಾ ದೇವಸ್ಥಾನಗಳ ಮಂಡಳಿ ಭಕ್ತರೊಂದಿಗೆ ಚರ್ಚಿಸಿ ನಿರ್ಣಯ ತಳೆಯಲು ಸರಕಾರಕ್ಕೆ ನ್ಯಾಯಾಲಯ ಸೂಚನೆ ನೀಡಿದರೆ ಸಾಕಿತ್ತು. ನ್ಯಾಯಾಂಗದ ಇಂದಿನ ಸ್ಥಿತಿ ನೋಡಿ ಮನಸ್ಸಿಗೆ ನೋವಾಗುತ್ತದೆ'. 

ತೀರ್ಪು ನೀಡಿದ ಸಾಂವಿಧಾನಿಕ ಪೀಠದಲ್ಲಿದ್ದ ನ್ಯಾಯಾಧೀಶೆ ನ್ಯಾ|ಮೂ| ಇಂದೂ ಮಲ್ಹೋತ್ರಾ ಅವರೂ ಇದೇ ಅಭಿಪ್ರಾಯ ನೀಡಿರುವುದು ಇತರ ನಾಲ್ವರು ಪುರುಷ ನ್ಯಾಯಾಧೀಶರಿಗೆ ಏನೂ ಪರಿಣಾಮ ಬೀರಲಿಲ್ಲ ಎಂದು ಕಾಣುತ್ತದೆ. ಮುಖ್ಯವಾಗಿ ಮಹಿಳೆಯರಿಗೆ ಸಂಬಂಧಿಸಿದ ತೀರ್ಪಾದ ಕಾರಣ ಮಹಿಳಾ ನ್ಯಾಯಾಧೀಶರ ಅಭಿಪ್ರಾಯಕ್ಕೆ ಮನ್ನಣೆ ಬೇಕಿತ್ತಲ್ಲವೆ? 

ಪ್ರಾಯಶಃ ನ್ಯಾ| ಸಂತೋಷ್‌ ಹೆಗ್ಡೆಯವರ ಅಭಿಪ್ರಾಯವನ್ನು ಬಹುತೇಕ ಎಲ್ಲ ಪಕ್ಷದವರು, ಪಕ್ಷಾತೀತರು, ಸರ್ವ ಸಿದ್ಧಾಂತಿಗಳು ಒಪ್ಪಬಹುದು. ಬಹುತೇಕ ಲೌಕಿಕ ವ್ಯವಹಾರಗಳು, ಘರ್ಷಣೆ, ಕಾನೂನು ತಿಕ್ಕಾಟಗಳು ನಡೆದಾಗ ಸಾಕ್ಷಿಗಳ ಆಧಾರವನ್ನು ಪ್ರಧಾನವಾಗಿಟ್ಟುಕೊಂಡು, ವಾದ ವಿವಾದಗಳನ್ನು ಆಲಿಸಿ "ನ್ಯಾಯತೀರ್ಮಾನ' ಕಲಿಯುವ ಕಾನೂನು ಪಂಡಿತರು ಧಾರ್ಮಿಕ ವಿಷಯಗಳಲ್ಲಿ ಹೇಗೆ ತೀರ್ಪು ಕೊಡಲು ಸಾಧ್ಯ? 

ಗೋಸುಂಬೆ ನೀತಿ ಅಪಾಯ
ಪಾಶ್ಚಾತ್ಯ ಕಾನೂನನ್ನು ಆಧರಿಸಿ ಬಂದ ಒಂದು ತೀರ್ಪು ನಮಗೆ ಬೇಕೆನಿಸಿದರೆ ಅದನ್ನು ಸ್ವಾಗತಿಸುವ, ಒಂದು ವೇಳೆ ಬೇಡವೆನಿಸಿದರೆ ಅದನ್ನು ತಿರಸ್ಕರಿಸುವ ಪರಿಪಾಠವೂ ನಿಲ್ಲಬೇಕು. ಸ್ವಾಗತಿಸುವುದಾದರೆ ಎಲ್ಲವನ್ನೂ ಸ್ವಾಗತಿಸಿ, ತಿರಸ್ಕರಿಸುವುದಾದರೆ ಎಲ್ಲವನ್ನೂ ತಿರಸ್ಕರಿಸಿ. ಇಂದು ಸ್ವಾಗತ, ನಾಳೆ ತಿರಸ್ಕಾರ ಎಂದು ದಿನಕ್ಕೊಂದು ಗೋಸುಂಬೆ ನೀತಿ ಬಹು ಅಪಾಯಕಾರಿ. ಈಗ ಅನುಭವಿಸುತ್ತಿರುವುದು ಇದರ ಪರಿಣಾಮವನ್ನು. 

ಕಾಲು ಜಾರಿದ್ದ ದೇವಸ್ಥಾನಗಳು
ದೇವಸ್ಥಾನಗಳು ಬಹು ಹಿಂದೆಯೇ ಕಾಲು ಜಾರಿ ಬಿದ್ದಿವೆ. ಈಗ ಜೀವವೇ ಇಲ್ಲವಾದರೂ ಕೇವಲ ರೋಮಗಳಿಗಾಗಿ ಹೋರಾಟ ಮಾಡುವ ಸ್ಥಿತಿ ಇದೆ. "ಊರು ಕೊಳ್ಳೆ ಹೊಡೆದ ಬಳಿಕ ದಿಡ್ಡಿ ಬಾಗಿಲು ಹಾಕಿದಂತೆ' ಎಂಬ ಗಾದೆ ಇದಕ್ಕೆ ಒಪ್ಪುತ್ತದೆ. ಹಿಂದೆ ಬ್ರಿಟಿಷರ ಕಾಲದಲ್ಲಿ ತಸ್ತೀಕು ಸಿಗುತ್ತದೆ ಎಂಬ ಕಾರಣಕ್ಕೆ ಬಹುತೇಕ ದೇವಸ್ಥಾನದ ಆಡಳಿತಗಾರರು ಸರಕಾರದ ನೋಂದಣಿ ಮಾಡಿದರು. ಆಗ ಸರಕಾರದೊಂದಿಗೆ ಗುರುತಿಸಿಕೊಳ್ಳುವುದು ಸೋಕಾಲ್ಡ್‌ ಪ್ರತಿಷ್ಠಿತ ವರ್ಗಕ್ಕೆ ಬೇಕಾಗಿದ್ದರೆ, ಬಡವರ್ಗದ ಆಡಳಿತದಾರರಿಗೆ ಖರ್ಚಿಗೆ ಒಂದಿಷ್ಟು ಸಹಾಯವಾಗುತ್ತದೆ ಎಂಬ ಭಾವವಿತ್ತು. ಆಗ ಧಾರ್ಮಿಕ ದತ್ತಿ ಇಲಾಖೆಗೆ ತಮ್ಮ ದೇವಸ್ಥಾನಗಳನ್ನು ಸೇರಿಸಲೂ ಈಗ ಕಾಣುತ್ತಿರುವಂತೆ ಅಧಿಕಾರಿವರ್ಗಕ್ಕೆ ದುಂಬಾಲು ಬಿದ್ದಿದ್ದರು. ಈಗಲೂ ನಮ್ಮ ಕೆಲಸ ಆಗಬೇಕಾದರೆ ಅದನ್ನೇ ಮಾಡುವುದು. ಮುಂದೊಂದು ದಿನ ಇದು "ಮಹಾ ಮಾರಿ' ಆಗುತ್ತದೆ ಎಂದು ಆಗ ಊಹಿಸಿರಲಿಲ್ಲ. ಆಗ ಬಿಟ್ಟು ಕೊಟ್ಟ ದೇವಸ್ಥಾನಗಳನ್ನು ಈಗ ವಾಪಸು ಪಡೆಯಲು ಸಾಧ್ಯವಾಗುತ್ತದೆಯೆ? ಈಗಲೂ ದೇವಸ್ಥಾನಗಳಿಗೆ ಬರುವ ಸರಕಾರಿ ಅಧಿಕಾರಿಗಳು ಇತರ ಇಲಾಖೆಯ ಅಧಿಕಾರಿಗಳ ಲಕ್ಷಣಗಳನ್ನೇ ಹೊಂದಿರುತ್ತಾರೆ. ಇದು ಸಹಜ. ಅವರಿಗೆ ದೇವಸ್ಥಾನವಾದರೇನು? ಇಲಾಖೆಗಳಾದರೇನು? ಎಷ್ಟೋ ಅಧಿಕಾರಿಗಳು ದೇವಸ್ಥಾನದ ಅಧಿಕಾರಿಗಳಾಗಿಯೂ ಕುಡಿದುಕೊಂಡು ಬರುವುದಿದೆ. ಅವರು ಇತರ ಇಲಾಖೆಗಳಲ್ಲಿ ತೋರಿಸಿದ ಗುಣವನ್ನು ದೇವಸ್ಥಾನಗಳಲ್ಲಿಯೂ ತೋರಿಸುತ್ತಾರೆ. ಭಕ್ತರಿಂದ, ಸಿಬ್ಬಂದಿಗಳಿಂದ ಇವರನ್ನು ವಿರೋಧಿಸಲು ಸಾಧ್ಯವೆ? ಇವರ ಬಳಿ ಅಧಿಕಾರವಿರುತ್ತದೆ. ಇದೇ ರೀತಿ ಧಾರ್ಮಿಕ ವಿಷಯದಲ್ಲಿ ನ್ಯಾಯಾಲಯದ ತೀರ್ಪನ್ನು ಈ ಸಮಾಜ ಗೊತ್ತಿಧ್ದೋ ಗೊತ್ತಿಲ್ಲದೆಯೋ ಶತಮಾನಗಳಿಂದ ಒಪ್ಪಿಕೊಂಡು ಬಂದದ್ದೇ ತಪ್ಪು. ಈಗ ನಮಗೆ ಒಂದು ತೀರ್ಪು ಬೇಡವೆಂದ ಮಾತ್ರಕ್ಕೆ ನ್ಯಾಯಾಂಗದ ಸುಪರ್ದಿಯಿಂದ ಹೊರಬರಲು ಸಾಧ್ಯವೆ? ಈಗ ಬೇಕಾದದ್ದು ಗಾಂಧಿಯಂತೆ ಮಾತನಾಡು ವವರು. ನ್ಯಾ| ಸಂತೋಷ್‌ ಹೆಗ್ಡೆಯವರು ಈ ನಿಟ್ಟಿನಲ್ಲಿ ಒಂದು ಪುಟ್ಟ ಹೆಜ್ಜೆ ಇಟ್ಟಿದ್ದಾರೆ, ಅಧಿಕಾರ ಸ್ಥಾನದಲ್ಲಿದ್ದೂ ನ್ಯಾ|ಮೂ| ಇಂದೂ ಮಲ್ಹೋತ್ರಾ ಕೊಟ್ಟ ಅಭಿಪ್ರಾಯವೂ ದಿಟ್ಟತನದ್ದು. 

ಎಚ್ಚೆತ್ತುಕೊಳ್ಳಬೇಕಾದ ಸಮಾಜ
ನ್ಯಾಯಾಲಯ, ರಾಜಕೀಯ ಪಕ್ಷಗಳು, ಸರಕಾರದಂತಹ ಶಕ್ತಿಗಳು ಹಸ್ತಕ್ಷೇಪ ನಡೆಸುವ ಮುನ್ನವೇ ಸಮಾಜ ಅಂದರೆ ಆಡಳಿತ ಮಂಡಳಿ/ ಭಕ್ತ ವರ್ಗ ಸಮಾಜದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿ ಕಾಲಕಾಲಕ್ಕೆ ಅಗತ್ಯದ ನೀತಿಗಳಿಗೆ ತಿದ್ದುಪಡಿ ತರಬೇಕು. ಎಷ್ಟೋ ವಿಷಯಗಳಲ್ಲಿ ತಿದ್ದುಪಡಿಯಾಗಿದೆ. ನಮ್ಮ ನಿಜ ಜೀವನದಲ್ಲಿ, ನಮ್ಮ ಮನೆಗಳಲ್ಲಿ ಇಂತಹ ಸಾಕಷ್ಟು ತಿದ್ದುಪಡಿಗಳಾಗಿವೆ. ಕೆಟ್ಟ ಪರಿಣಾಮ ಕೊಡುವ ಎಷ್ಟೋ ಪದ್ಧತಿಗಳು ನಮ್ಮ ಜೀವನಶೈಲಿಯನ್ನೇ ಬದಲಿಸಿವೆ. ಇದರಿಂದ ನಮ್ಮ ಆರೋಗ್ಯ ಹಾಳಾಗುತ್ತಿದ್ದರೂ ನಾವು ತುಟಿ ಪಿಟಕ್ಕೆನ್ನುತ್ತಿಲ್ಲ. ಇದರ ಹಿಂದೆ ಹಣವಂತರ ಕೈವಾಡವೂ ಇರುತ್ತದೆ. ಯಾವುದೇ ಸಾಮಾಜಿಕ ನೀತಿ / ರಿವಾಜುಗಳು ಆದಿಯೂ ಅಲ್ಲ, ಅಂತ್ಯವೂ ಅಲ್ಲ. ಎಲ್ಲವೂ ಆಯಾ ಕಾಲಘಟ್ಟದ ಅಗತ್ಯಗಳಿಗೆ ಹುಟ್ಟಿಕೊಂಡವು. ಈ ಯಥಾರ್ಥತೆ/ ವಾಸ್ತವಿಕತೆಯನ್ನು ಅರಿತು ಸಮಾಜ ಕಾಲಕಾಲಕ್ಕೆ ಅಗತ್ಯದ ತಿದ್ದುಪಡಿ ಮಾಡಬೇಕು. ಎಷ್ಟೋ ತಿದ್ದುಪಡಿಗಳು ಕಾನೂನು ಇಲ್ಲದೆ ಆಗಿವೆ, ಇದರಲ್ಲಿ ಕೆಟ್ಟ ಬದಲಾವಣೆಗಳೂ ದೊಡ್ಡ ಪ್ರಮಾಣದಲ್ಲಿವೆ. ಸದುದ್ದೇಶದ ಬದಲಾವಣೆ ಮಾಡುವಾಗ ಪ್ರಾಂಜಲ ಮನಸ್ಸು ಇರಬೇಕು, ಸ್ವಾರ್ಥವಿರಬಾರದು. ಇಲ್ಲವಾದರೆ ನ್ಯಾಯಾಂಗ, ರಾಜಕಾರಣಿಗಳು, ನಾಯಕ ವರ್ಗ, ವಿವಿಧ ಧರ್ಮೀಯರು ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಇದುವರೆಗೆ ಆದದ್ದೆಲ್ಲವೂ ಹೀಗೆಯೇ. ಇದು ಮನೆಗಳಿಂದ ಹಿಡಿದು ಎಲ್ಲ ಕ್ಷೇತ್ರಗಳಿಗೂ ಅನ್ವಯ... ಇಲ್ಲವಾದರೆ ಬಂದೂಕು ಹಿಡಿದು ದೈನಂದಿನ ಬದುಕು ಸವೆಸುವ ಕಾಲ ಬಂದೀತು, ಇದರ ಮೇಲ್ನೋಟ ಕೇರಳದಲ್ಲಿ ಕಂಡುಬರುತ್ತಿದೆ. 

- ಮಟಪಾಡಿ ಕುಮಾರಸ್ವಾಮಿ

Trending videos

Back to Top