CONNECT WITH US  

ವ್ಯೂಹಾತ್ಮಕ ಮಹತ್ವ ಕಳೆದುಕೊಂಡ ಪಾಕಿಸ್ಥಾನ

ಪಾಕ್‌ಗೆ ಎದುರಾಗಿದೆ ಆರ್ಥಿಕ ದುಸ್ಥಿತಿಯ ಗಂಭೀರ ಸವಾಲು

ಪಾಕಿಸ್ಥಾನದಿಂದ ಪ್ರತ್ಯೇಕಗೊಂಡ ಬಾಂಗ್ಲಾದೇಶ 2016ರಲ್ಲಿ ಶೇ. 7.1 ದಾಖಲೆಯ ಜಿಡಿಪಿ ವೃದ್ಧಿ ದರದೊಂದಿಗೆ ಪ್ರಗತಿಪಥದಲ್ಲಿ ದಾಪುಗಾಲನ್ನಿಡುತ್ತಿದ್ದರೆ, ಹಿಂದಿನ ವರ್ಷಗಳಲ್ಲಿ ಶೇ. 4.7 ಇದ್ದ ಪಾಕಿಸ್ಥಾನದ ಅರ್ಥವ್ಯವಸ್ಥೆಯ ಬೆಳವಣಿಗೆ ದರ 2018-19 ರಿಂದ 2022-23 ರವರೆಗೆ ಶೇ.2.9ಷ್ಟು ನಿಮ್ನ ಸ್ತರದಲ್ಲಿರಲಿದೆಯೆಂದು ಅಂದಾಜಿಸಲಾಗಿದೆ.

ಭಾರತದ ವಿರುದ್ಧ ದ್ವೇಷ ಸಾಧನೆಯಲ್ಲೇ ತನ್ನ ಅಸ್ತಿತ್ವವನ್ನು ಕಂಡುಕೊಂಡು ಸದಾ ಒಂದಿಲ್ಲೊಂದು ಕುಟಿಲ ತಂತ್ರ ಹೂಡುತ್ತಾ, ದ್ವೇಷ ಸಾಧಿಸುತ್ತಾ ಬಂದಿರುವ ಪಾಕಿಸ್ತಾನ ಸ್ವಾತಂತ್ರ್ಯದ ಏಳು ದಶಕಗಳ ಇತಿಹಾಸದಲ್ಲೇ ಹಿಂದೆಂದಿಗಿಂತಲೂ ಹೆಚ್ಚಿನ ವಿಷಮ ಸ್ಥಿತಿಯನ್ನು ಪ್ರಸ್ತುತ ಎದುರಿಸುತ್ತಿದೆ. ಒಬ್ಬರಾದ ಮೇಲೆ ಇನ್ನೊಬ್ಬರೆಂಬಂತೆ ಬಂದ ಮಿಲಿಟರಿ ಸರ್ವಾಧಿಕಾರಿಗಳ ಕಪಿಮುಷ್ಟಿಯಲ್ಲಿ ಹದಗೆಟ್ಟ ರಾಜಕೀಯ ವ್ಯವಸ್ಥೆ, ಭ್ರಷ್ಟ ರಾಜಕಾರಣಿಗಳ ಅದಕ್ಷತೆಯಿಂದಾಗಿ ಹಳ್ಳ ಹಿಡಿದ ಆರ್ಥಿಕತೆಯೊಂದಿಗೆ, ಮತಾಂಧ ಉಗ್ರರನ್ನು ತಯಾರಿಸುವ ಫ್ಯಾಕ್ಟರಿ ಎಂಬ ಆರೋಪದೊಂದಿಗೆ ವಿಶ್ವ ಸಮುದಾಯದ ನಡುವೆ ತಂಟೆಕೋರ (rogue state) ದೇಶವೆಂಬ ಹಣೆಪಟ್ಟಿ ಪಡೆದುಕೊಂಡಿದೆ. ಆಯಕಟ್ಟಿನ ಭೌಗೋಳಿಕ ಸ್ಥಿತಿಯಿಂದಾಗಿ ಶೀತಲ ಯುದ್ಧ ಕಾಲದಲ್ಲಿ ಅಮೆರಿಕಗೆ ಆಪ್ತವಾಗಿದ್ದ ದೇಶ ಇತ್ತೀಚಿನ ವರ್ಷಗಳಲ್ಲಿ ಅದರ ಅವಕೃಪೆಗೆ ಪಾತ್ರವಾಗಿದೆ. ಸೀಮಿತ ವಿದೇಶಿ ವಿನಿಮಯ ಬರಿದಾಗಿ ದಿವಾಳಿ ಅಂಚಿನಲ್ಲಿರುವ ರಾಷ್ಟ್ರಕ್ಕೆ ವಿಶ್ವ ಹಣಕಾಸು ಸಂಸ್ಥೆಯ ಸಹಾಯ ಕೂಡಾ ಸಿಗದೆ ಕಂಗಾಲಾಗಿದೆ. ಇತ್ತೀಚೆಗೆ ಅಧಿಕಾರಕ್ಕೆ ಬಂದ ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ಸರಕಾರ ಚೀನ ಮತ್ತು ಸೌದಿ ಅರೇಬಿಯಾದ ಬಳಿ ಅಂಗಲಾಚಿ ಒಂದಷ್ಟು ನೆರವು ಪಡೆದುಕೊಂಡು ಸದ್ಯಕ್ಕೆ ಉಸಿರಾಡುತ್ತಿದೆ.

ಅಮೆರಿಕದ ಕಣ್ಮಣಿ 
"ಕರ್‌ ಭಲಾ ತೋ, ಅಂತ್‌ ಭಲಾ' ಅರ್ಥಾತ್‌ ಒಳ್ಳೆಯದನ್ನು ಮಾಡಿದರೆ, ಒಳ್ಳೆಯದೇ ಆಗುತ್ತದೆ, ಕೆಟ್ಟದ್ದನ್ನು ಮಾಡುವವರಿಗೆ ಕೆಟ್ಟದ್ದೇ ಆಗುತ್ತದೆ. ಸದಾ ಭಾರತದ ಅಹಿತವನ್ನು ಬಯಸುವ ಸರ್ವಾಧಿಕಾರಿಗಳು ಮತ್ತು ಮಿಲಿಟರಿ ಆಡಳಿತಗಾರರ ಕೆಟ್ಟ ಆಡಳಿತದಿಂದಾಗಿ ಪಾಕಿಸ್ತಾನಕ್ಕೆ ಈ ದುರ್ಗತಿ ಬಂದಿದೆ ಎಂದರೆ ತಪ್ಪಿಲ್ಲ. ಪಾಕಿಸ್ತಾನ ಹುಟ್ಟಿಕೊಂಡ ದಿನದಿಂದ ಅಲ್ಲಿನ ಅಣು ರೇಣು ತೃಣ ಕಾಷ್ಠಗಳಲ್ಲಿಯೂ ನಿರಂಕುಶ ಆಡಳಿತಗಾರರು ಭಾರತದ ವಿರುದ್ಧ ದ್ವೇಷ ಭಾವನೆ ತುಂಬುತ್ತಲೇ ಬಂದಿದ್ದಾರೆ. ಬಡತನ ನಿವಾರಣೆಯಂತಹ ಜನರನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳ ಕುರಿತಾಗಿ ಯೋಚಿಸುವ ಬದಲು ಹುಲ್ಲು ತಿಂದಾದರೂ ಸರಿ ಭಾರತವನ್ನು ನಾಶ ಮಾಡುವಂತಹ ಅಣ್ವಸ್ತ್ರವನ್ನು ತಯಾರಿಸಿಯೇ ಸಿದ್ಧ ಎಂದ ಜುಲ್ಫಿಕರ್‌ ಅಲಿ ಭುಟ್ಟೋರಂತಹ ಪಾಕಿಸ್ತಾನದ ಸರ್ವಾಧಿಕಾರಿಗಳು ವಿಷದ ಬೀಜ ಬಿತ್ತಿದರು. 70ರ ದಶಕದ ಅಂತ್ಯದಲ್ಲಿ ಅಫ‌ಘಾನಿಸ್ಥಾನದಲ್ಲಿ ಸೋವಿಯತ್‌ ಒಕ್ಕೂಟದ ಪ್ರಭಾವವನ್ನು ಕಡಿಮೆ ಮಾಡಲು ಹಾಗೂ ಇತ್ತೀಚಿನ ವರ್ಷಗಳಲ್ಲಿ ತಾಲಿಬಾನ್‌ ಮತ್ತು ಇಸ್ಲಾಮಿಕ್‌ ಉಗ್ರವಾದಿಗಳನ್ನು ಮಟ್ಟ ಹಾಕಲು ಅಮೆರಿಕಕ್ಕೆ ಪಾಕಿಸ್ತಾನದ ಅವಶ್ಯಕತೆ ಇತ್ತು. ಈ ಅವಕಾಶವನ್ನು ಬಳಸಿಕೊಂಡು ಪಾಕಿಸ್ತಾನ ಅಮೆರಿಕದ ಅಗಾಧ ಆರ್ಥಿಕ ಮತ್ತು ಮಿಲಿಟರಿ ಸಹಾಯ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಭೌಗೋಳಿಕವಾಗಿ ಮಹತ್ವಪೂರ್ಣ ಹಾಗೂ ಆಯಕಟ್ಟಿನ ಸ್ಥಾನದಿಂದಾಗಿ ಪಾಕಿಸ್ತಾನ ಸುದೀರ್ಘ‌ ಕಾಲ ಅಮೆರಿಕಕ್ಕೆ ನಿಕಟವಾಗಿತ್ತು. 

ಶೀತಲ ಯುದ್ಧದ ದಿನಗಳಲ್ಲಿ ಹೆಸರಿಗೆ ಅಲಿಪ್ತ ರಾಷ್ಟ್ರವೆನಿಸಿದ್ದರೂ ರಶ್ಯಾದ ಕಡೆಗೆ ಭಾರತದ ವಾಲುವಿಕೆಯಿಂದಾಗಿ ಅಮೆರಿಕದ ಒಲವು ಸ್ವಾಭಾವಿಕವಾಗಿಯೆ ಪಾಕಿಸ್ತಾನ ಕಡೆಗಿತ್ತು. ಅಮೆರಿಕದಿಂದ ದೊರೆತ ಅತ್ಯಾಧುನಿಕ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನ ಭಾರತದ ಮೇಲೆ ಪ್ರಯೋಗಿಸುವ ಸಾಧ್ಯತೆಗಳ ಭಾರತದ ಚಿಂತೆಗಳಿಗೆ ಅಮೆರಿಕ ಕಿವಿಗೊಡುತ್ತಿರಲಿಲ್ಲ. 80ರ ದಶಕದಲ್ಲಿ ಪಂಜಾಬಿನಲ್ಲಿ ಖಲಿಸ್ಥಾನ ಸ್ಥಾಪನೆಗಾಗಿ ಹೋರಾಡುತ್ತಿದ್ದ ಸಿಖ್‌ ಭಯೋತ್ಪಾದಕರಿಗೆ ಮತ್ತು 90ರ ದಶಕದ ನಂತರ ಕಾಶ್ಮೀರಿ ಉಗ್ರಗಾಮಿಗಳಿಗೆ ಪಾಕಿಸ್ತಾನ ಬೆಂಬಲ ನೀಡುವುದರ ಕುರಿತು ಭಾರತದ ವಿರೋಧವನ್ನು ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳು ಅಲಕ್ಷ್ಯ ಮಾಡುತ್ತಲೇ ಬಂದವು. ಭಾರತ ಮತ್ತು ಪಾಕಿಸ್ತಾನದ ಭೇಟಿಗೆ ಅಮೆರಿಕ, ಬ್ರಿಟನ್‌ ರಾಷ್ಟ್ರಗಳ ಗಣ್ಯರು ಬಂದಾಗೆಲ್ಲಾ ಭಾರತದ ನೆಲದಲ್ಲಿ ಒಂದು ಮತ್ತು ಪಾಕಿಸ್ತಾನದ ನೆಲದಲ್ಲಿ ಇನ್ನೊಂದು ರೀತಿಯ ಹೇಳಿಕೆ ನೀಡುವ ಪರಿಪಾಠ ವಾಡಿಕೆಯಾಗಿತ್ತು. ಅಷ್ಟೇಕೆ, ಭಾರತಕ್ಕೆ ಬಂದ ಅಮೆರಿಕ ಮತ್ತದರ ಮಿತ್ರ ಪಾಶ್ಚಿಮಾತ್ಯ ರಾಷ್ಟ್ರಗಳು ಪಾಕಿಸ್ತಾನಕ್ಕೂ ಕಡ್ಡಾಯವಾಗಿ ಭೇಟಿ ನೀಡಿ ಎರಡೂ ದೇಶಗಳನ್ನು ಬ್ಯಾಲೆನ್ಸ್‌ ಮಾಡುವ ಯತ್ನ ನಡೆಸುತ್ತಿದ್ದರು. ಕಾಶ್ಮೀರದಲ್ಲಿ ನಡೆಯುತ್ತಿರುವ ಉಗ್ರವಾದವನ್ನು ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿರುವ ಹೋರಾಟ ಎನ್ನುವ ಪಾಕಿಸ್ತಾನದ ನಿಲುವಿಗೆ ಪಶ್ಚಿಮದ ರಾಷ್ಟ್ರಗಳ ಸಹಾನುಭೂತಿ ಗುಟ್ಟಾಗಿರಲಿಲ್ಲ. ಒಳ್ಳೆಯ ಮತ್ತು ಕೆಟ್ಟ ಉಗ್ರವಾದ ಎಂಬ ಇಬ್ಬಗೆಯ ಆಷಾಢಭೂತಿ ನೀತಿಯಿಂದಾಗಿ ಪಾಕಿಸ್ತಾನದ ಕುಮ್ಮಕ್ಕಿನಲ್ಲಿ ಭಾರತದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಪಾಶ್ಚಿಮಾತ್ಯ ದೇಶಗಳು ನಿರ್ಲಕ್ಷಿಸಿದವು. 

ಕಳೆದುಹೋದ ಮಹತ್ವ
ಇತ್ತೀಚಿನ ವರ್ಷಗಳಲ್ಲಿ ನಿಧಾನವಾಗಿ ಪಾಕಿಸ್ತಾನದ ವ್ಯೂಹಾತ್ಮಕ ಮಹತ್ವದ ಚಿತ್ರಣ ಬದಲಾಗುತ್ತಿದೆ. ಉಗ್ರವಾದ ನಿಗ್ರಹ ಕುರಿತು ಪಾಕಿಸ್ತಾನದ ಕಪಟತನವನ್ನು ಮನಗಂಡು ಆರ್ಥಿಕ ಮತ್ತು ಮಿಲಿಟರಿ ನೆರವನ್ನು ಆಗಾಗ ತಡೆಹಿಡಿಯುವ ಮತ್ತು ನಿಲ್ಲಿಸುವ ಎಚ್ಚರಿಕೆಯ ಕ್ರಮ  ಒಬಾಮಾ ಕಾಲದಲ್ಲೇ ಪ್ರಾರಂಭವಾಯಿತಾದರೂ ಡೊನಾಲ್ಡ್ ಟ್ರಂಪ್‌ ಅಧ್ಯಕ್ಷರಾದ ನಂತರ ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನ ಬಿಸಿ ತಟ್ಟಿತು. ಡೊನಾಲ್ಡ್ ಟ್ರಂಪ್‌ ಅಧಿಕಾರಕ್ಕೆ ಬಂದ ನಂತರ ಪಾಕಿಸ್ತಾನಕ್ಕೆ ನೀಡಲಾಗುವ ಕೋಟ್ಯಂತರ ಡಾಲರ್‌ಗಳ ಆರ್ಥಿಕ ನೆರವನ್ನು ತಡೆ ಹಿಡಿದಿದ್ದಾರೆ. ಅಫ‌ಘಾನಿಸ್ಥಾನದಲ್ಲಿ ತಾಲಿಬಾನಿಗಳ ಉಪಟಳ ಮತ್ತು ಹೆಚ್ಚುತ್ತಿರುವ ಇಸ್ಲಾಮಿಕ್‌ ಉಗ್ರವಾದಿಗಳ ಭಯೋತ್ಪಾದನೆ ನಿಯಂತ್ರಣಕ್ಕೆ ಪಾಕಿಸ್ತಾನದ ಸಹಕಾರ ಸಿಗದ ಕುರಿತು ಅಧ್ಯಕ್ಷ ಟ್ರಂಪ್‌ ಅನೇಕ ಬಾರಿ ಕಟು ಶಬ್ದಗಳಲ್ಲಿ ಜರೆದಿದ್ದಾರೆ. 1954 ರಿಂದ ಇಲ್ಲಿಯವರೆಗೆ ಪಾಕಿಸ್ತಾನಕ್ಕೆ ಅಮೆರಿಕ ಸುಮಾರು 43 ಬಿಲಿಯನ್‌ ಡಾಲರ್‌ (ಅಂದಾಜು ಸುಮಾರು 3 ಲಕ್ಷ ಕೋ.ರೂ.) ಸಹಾಯ ನೀಡುವುದರ ಮೂಲಕ ಮಿಲಿಟರಿಯನ್ನು ಬಲಪಡಿಸಿದ್ದಲ್ಲದೆ ಹಲವು ಬಾರಿ ದಿವಾಳಿ ಅಂಚಿನಲ್ಲಿದ್ದ ಪಾಕಿಸ್ತಾನದ ಆರ್ಥಿಕತೆಯನ್ನು ಉಳಿಸಿದ್ದನ್ನು ಅವರು ಬಹಿರಂಗ ಪಡಿಸಿದ್ದಾರೆ. ಹಿಂದೊಮ್ಮೆ ಇಸ್ಲಾಮಿಕ್‌ ಜಗತ್ತಿನ ನಾಯಕನಂತೆ ವರ್ತಿಸುತ್ತಿದ್ದ ಪಾಕಿಸ್ತಾನ 

ಈಗ ಸೌದಿ ಅರೇಬಿಯಾದ ದೊರೆಯ ಮುಂದೆ ಆರ್ಥಿಕ ಸಹಾಯಕ್ಕಾಗಿ ಯಾಚಕನಾಗಿ ನಿಂತು ದೊರೆ ನೀಡಿದ 3 ಬಿಲಿಯನ್‌ ಡಾಲರ್‌ ನೆರವು ಪಡೆದು ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ ಸಮಸ್ಯೆಯನ್ನು ಒಂದಷ್ಟು ದಿನ ಮುಂದಕ್ಕೆ ಹಾಕುವ ಯತ್ನದಲ್ಲಿದೆ. ಆಪ್ತಮಿತ್ರ ಚೀನದ ಕಡೆಯಿಂದ ಸಿಗಬಹುದಾದ ನೆರವಿನಿಂದ ಮತ್ತಷ್ಟು ದಿನ ಹೇಗಾದರೂ ತಳ್ಳಬಹುದು ಎಂಬಂತಿದೆ ಅದರ ಸ್ಥಿತಿ. 
ಆರ್ಥಿಕ ಮತ್ತು ಮಿಲಿಟರಿ ದೈತ್ಯ ಶಕ್ತಿಯಾಗಿ ಚೀನದ ಹೊರಹೊಮ್ಮವಿಕೆ ದೊಡ್ಡಣ್ಣ ಅಮೆರಿಕದ ಪಾಲಿಗೆ ನುಂಗಲಾಗದ ತುತ್ತಾಗಿದೆ. ಹಿಂದೂ ಮಹಾಸಾಗರದಲ್ಲಿ ಮಿಲಿಟರಿ ಚಟುವಟಿಕೆಯನ್ನು ಹೆಚ್ಚಿಸಿಕೊಂಡು ಮುಕ್ತ ಸಂಚಾರಕ್ಕೆ ಅಡ್ಡಿಯಾಗಿರುವ ಚೀನದ ಸವಾಲನ್ನು ಎದುರಿಸಲು ಅಮೆರಿಕ, ಜಪಾನ್‌, ಆಸ್ಟ್ರೇಲಿಯಾದಂತಹ ರಾಷ್ಟ್ರಗಳು ಭಾರತದತ್ತ ದೃಷ್ಟಿ ನೆಟ್ಟಿವೆ. ತೀವ್ರ ಗತಿಯ ಆರ್ಥಿಕ ಅಭಿವೃದ್ಧಿಯೊಂದಿಗೆ ವಿಶ್ವದ ಆರನೇ ದೊಡ್ಡ ಆರ್ಥಿಕತೆಯನ್ನು ಹೊಂದಿದ ಭಾರತ ಸೈನ್ಯ ಶಕ್ತಿಯಾಗಿಯೂ ರೂಪುಗೊಳ್ಳುತ್ತಿರುವುದರಿಂದ ಏಶ್ಯಾದಲ್ಲಿ ಪಾಕಿಸ್ತಾನಕ್ಕಿಂತ ಭಾರತದ ವ್ಯೂಹಾತ್ಮಕ ಮಹತ್ವವನ್ನು ಹೆಚ್ಚಿಸಿದೆ. ನರೇಂದ್ರ ಮೋದಿಯಂತಹ ದೃಢ ಇಚ್ಛಾಶಕ್ತಿಯ ಪ್ರಬಲ ಪ್ರಧಾನಿಯ ನೇತ್ರತ್ವದಲ್ಲಿ ಆತ್ಮ ವಿಶ್ವಾಸದಿಂದ ಪುಟಿಯುತ್ತಿರುವ ಭಾರತದ ಸೈನ್ಯ ಮತ್ತು ಆರ್ಥಿಕ ಶಕ್ತಿಗೆ ಸರಿಗಟ್ಟಲಾಗದೆ ಪಾಕಿಸ್ತಾನ ಕಳೆಗುಂದುತ್ತಿದೆ. ಡೊನಾಲ್ಡ… ಟ್ರಂಪ್‌ ಅವರ ವ್ಯಂಗ್ಯ ಭರಿತ ಕಟು ಟೀಕೆಗಳು ಆರ್ಥಿಕ ಅಧೋಗತಿಯಲ್ಲಿರುವ ಪಾಕಿಸ್ತಾನಕ್ಕೆ ಗಾಯದ ಮೇಲೆ ಉಪ್ಪು ಸವರಿದಂತಾಗುತ್ತಿದೆ.

ಆರ್ಥಿಕ ದುಸ್ಥಿತಿ
ಪಾಕಿಸ್ತಾನದಿಂದ ಪ್ರತ್ಯೇಕಗೊಂಡ ಬಾಂಗ್ಲಾದೇಶ 2016ರಲ್ಲಿ ಶೇ. 7.1 ದಾಖಲೆಯ ಜಿಡಿಪಿ ವೃದ್ಧಿ ದರದೊಂದಿಗೆ ಪ್ರಗತಿಪಥದಲ್ಲಿ ದಾಪುಗಾಲನ್ನಿಡುತ್ತಿದ್ದರೆ, ಹಿಂದಿನ ವರ್ಷಗಳಲ್ಲಿ ಶೇ. 4.7 ಇದ್ದ ಪಾಕಿಸ್ತಾನದ ಅರ್ಥವ್ಯವಸ್ಥೆಯ ಬೆಳವಣಿಗೆ ದರ 2018-19 ರಿಂದ 2022-23 ರವರೆಗೆ ಶೇ.2.9ಷ್ಟು ನಿಮ್ನ ಸ್ತರದಲ್ಲಿರಲಿದೆಯೆಂದು ಅಂದಾಜಿಸಲಾಗಿದೆ. ಅದಕ್ಷ ಮತ್ತು ಭ್ರಷ್ಟ ಸರ್ಕಾರಗಳ ಇತಿಹಾಸವಿರುವ ಪಾಕಿಸ್ತಾನ ತನ್ನ ಅರ್ಥ ವ್ಯವಸ್ಥೆಯನ್ನು ಸುಧಾರಿಸಲು ಕ್ರಮ ಕೈಗೊಳ್ಳುವ ಬದಲಾಗಿ ಭಾರತದ ಅರ್ಥವ್ಯವಸ್ಥೆಯನ್ನು ಹಾಳುಗೆಡವಲು ನಕಲಿ ಕರೆನ್ಸಿ ಉತ್ಪಾದಿಸಿ ಕಳುಹಿಸುವ, ಉಗ್ರವಾದ ಪ್ರಾಯೋಜಿಸುವಂತಹ ಕುಕೃತ್ಯಗಳಲ್ಲಿ ತೊಡಗಿಸಿಕೊಂಡಿದೆ. ಮೂಲ ಸೌಕರ್ಯ, ಶಿಕ್ಷಣ, ಮಾನವ ಸಂಪನ್ಮೂಲ ಅಭಿವೃದ್ಧಿಯಂತಹ ಜನಹಿತ ಕ್ರಮ ಕೈಗೊಳ್ಳುವ ಬದಲಾಗಿ ಧಾರ್ಮಿಕ ಮಂತಾಂಧತೆ ಬೆಳೆಸುವ ಮದರಸಾಗಳಿಗೆ ಉತ್ತೇಜನ ನೀಡುವುದರಿಂದಾಗಿ ಪಾಕಿಸ್ತಾನ ಇಂದು ಇಸ್ಲಾಮಿಕ್‌ ಉಗ್ರವಾದದ "ಹಾಟ್‌ ಬೆಡ್‌' ಆಗಿ ಪರಿವರ್ತಿತವಾಗುತ್ತಿದೆ. ಜಲವಿದ್ಯುತ್‌ ಮತ್ತು ಕೃಷಿ ಕಾರ್ಯಗಳಿಗೆ ಉಪಯೋಗವಾಗಬಹುದಾದ ಅಣೆಕಟ್ಟುಗಳನ್ನು ಕಟ್ಟುವುದರ ಮೂಲಕ ತನ್ನ ಪಾಲಿಗೆ ಲಭ್ಯವಿರುವ ನದಿ ನೀರಿನ ಸದುಪಯೋಗ ಮಾಡುವ ಅಭಿವೃದ್ಧಿ ಕಾರ್ಯಕ್ಕೆ ಪ್ರಾಮುಖ್ಯತೆ ನೀಡುವಲ್ಲಿ ಅಲ್ಲಿನ ಸರಕಾರಗಳು ವಿಫ‌ಲವಾಗಿವೆ. 

ಅಮೆರಿಕದಿಂದ ಅತ್ಯಾಧುನಿಕ ಅಪಾಚೆ ಹೆಲಿಕಾಪ್ಟರ್‌ಗಳನ್ನು, ಫ್ರಾನ್ಸ್‌ನಿಂದ ರಾಫೆಲ್‌ ಯುದ್ಧ ವಿಮಾನಗಳನ್ನು ಮತ್ತು ರಷ್ಯಾದಿಂದ ಅಭೇದ್ಯ ಎನಿಸಿರುವ ಎಸ್‌-400 ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸುತ್ತಿರುವ ಭಾರತದ ಆರ್ಥಿಕ ಸಾಮರ್ಥ್ಯಕ್ಕೆ ಸರಿಗಟ್ಟಲಾಗದ ಪಾಕಿಸ್ತಾನಕ್ಕೆ ಇತ್ತೀಚಿನ ವರ್ಷಗಳಲ್ಲಿ ಅಮೆರಿಕದಿಂದ ಕೊಡುಗೆಯಾಗಿ ಪಡೆದ ಎಫ್-16 ಯುದ್ಧ ವಿಮಾನಗಳನ್ನು ಹೊರತು ಪಡಿಸಿ ಯಾವುದೇ ದೊಡ್ಡ ಪ್ರಮಾಣದ ಅತ್ಯಾಧುನಿಕ ಮಿಲಿಟರಿ ಶಸ್ತ್ರಾಸ್ತ್ರ ಖರೀದಿಸಲು ಸಾಧ್ಯವಾಗಿಲ್ಲ. ಅಫ‌ಘಾನಿಸ್ಥಾನದಲ್ಲಿ ಸುದೀರ್ಘ‌ ಕಾಲದಿಂದ ಶಕ್ತ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಶಕ್ತಿ ಸಂಘರ್ಷ ಕಾರಣದಿಂದಾಗಿ ವ್ಯೂಹಾತ್ಮಕ ಮಹತ್ವ ಪಡೆದಿದ್ದ ಪಾಕಿಸ್ತಾನ ಬದಲಾದ ಸನ್ನಿವೇಶದಲ್ಲಿ ಸೈನಿಕ ಮಹತ್ವವನ್ನು ಕಳೆದುಕೊಂಡಿದ್ದಲ್ಲದೆ ಆರ್ಥಿಕ ದುಸ್ಥಿತಿಯ ಗಂಭೀರ ಸವಾಲನ್ನು ಎದುರಿಸುತ್ತಿದೆ. 

ಬೈಂದೂರು ಚಂದ್ರಶೇಖರ ನಾವಡ 


Trending videos

Back to Top