ವಿಮಾನಯಾನ ನಕಾಶೆಯಲ್ಲಿ ಮಿನುಗಲು ಮಂಗಳೂರಿಗೆ ಬೇಕಿರುವುದೇನು?


Team Udayavani, Dec 23, 2018, 6:00 AM IST

mangalore.jpg

ವಿಸ್ತೀರ್ಣದಲ್ಲಿ ಕರ್ನಾಟಕಕ್ಕಿಂತಲೂ ಸಣ್ಣದಾಗಿರುವ ಕೇರಳದ ನಾಲ್ಕನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಕಣ್ಣೂರು ಡಿಸೆಂಬರ್‌ 9ರಂದು ಅಂತಾರಾಷ್ಟ್ರೀಯ ವಿಮಾನ ಯಾನ ನಕಾಶೆಯಲ್ಲಿ ಮೂಡಿದೆ. ಈ ನಿಲ್ದಾಣಕ್ಕೆ ನಿಕಟವಾಗಿರುವ ಪ್ರದೇಶಗಳಿಂದ ಪ್ರಯಾಣಿಕರನ್ನು ಪಡೆಯುತ್ತಿದ್ದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ತಪ್ಪಲಿದ್ದಾರೆಯೇ/ಕಡಿಮೆಯಾಗಲಿದ್ದಾರೆಯೇ, ಆ ಮೂಲಕ ಮಂಗಳೂರು ವಿಮಾನ ನಿಲ್ದಾಣದ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಲಿದೆಯೇ ಎನ್ನುವಂತಹ ಭಯಮಿಶ್ರಿತ ವಿಚಾರಗಳು ಮಾಧ್ಯಮದಲ್ಲಿ ಹರಿದಾಡುತ್ತಿವೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಸಕ್ತ ಸ್ಥಿತಿಗತಿಗಳನ್ನು ಕಾಣುವಾಗ ಈ ಭಯದ ಕುರಿತು ಸಾರಾಸಗಟಾಗಿ ಇಲ್ಲ ಎನ್ನುವಂತೆಯೂ ಇಲ್ಲ. ತಕ್ಕುದಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪರಿಸ್ಥಿತಿ ಕೈಮೀರಿ ಹೋಗದಂತೆ ತಡೆಯಬಹುದಾಗಿದೆ. 

2300 ಎಕರೆ ವಿಶಾಲವಾದ ಭೂಮಿಯಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ಕಣ್ಣೂರು ವಿಮಾನ ನಿಲ್ದಾಣವನ್ನು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಅತ್ಯಾಧುನಿಕವಾಗಿ ಬೆಳೆಸಬಹುದಾಗಿರುವ ಎಲ್ಲಾ ಅವಕಾಶಗಳಿವೆ. ಬಜಪೆ ಗುಡ್ಡದ ಮೇಲಿದ್ದ ಮಂಗಳೂರು ವಿಮಾನ ನಿಲ್ದಾಣವನ್ನು ಅಲ್ಲೇ ಬಿಟ್ಟು (ಈಗ ಬಿಟ್ಟಿರುವ‌ಂತೆ), ಸನಿಹದ ಕೆಂಜಾರಿನ ಇಕ್ಕಟ್ಟಿನ ಸ್ಥಳದಲ್ಲಿ ಈಗ ನಿರ್ಮಿಸಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬದಲು ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಗಳ ಅನುಕೂಲಕರ ಒಂದೆಡೆ ವಿಶಾಲವಾದ ಭೂಮಿಯಲ್ಲಿ ಹೊಸತಾಗಿ ಅತ್ಯಾಧುನಿಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಬಹುದಾಗಿತ್ತು. ಆದರೆ ಇದ್ದ ನಿಲ್ದಾಣದ ಸನಿಹದಲ್ಲೇ ಅಂತಾರಾಷ್ಟ್ರೀಯ ನಿಲ್ದಾಣವನ್ನು ಈಗಾಗಲೇ ರೂಪಿಸಿರುವುದರಿಂದ ಇನ್ನು ಹಾಗೆ ನಿರ್ಮಿಸುವುದು ಕನಸಿನ ಮಾತು. ಮಂಗಳೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಅಂತಾರಾಷ್ಟ್ರೀಯ ಸ್ಥಾನಮಾನವೇನೋ ಬಂದಿದೆ. ಆದರೆ ಈಗ ಅಭಿವೃದ್ಧಿಯ ಮಾತಿರಲಿ, ರನ್‌ವೇಯಾದರೂ ವಿಸ್ತರಣೆಗೊಳ್ಳಬಹುದೇ ಅಂದರೆ ಅದಕ್ಕೂ ಅಡಚಣೆಗಳು. 

ಸಂಸದರಾಗಿದ್ದ ದಿ. ಶ್ರೀನಿವಾಸ ಮಲ್ಯರಂತಹ ಮುತ್ಸದ್ದಿಗಳೂ ಈಗಿಲ್ಲದಿರುವುದು ಮಂಗಳೂರು ವಿಮಾನ ನಿಲ್ದಾಣ ಮೇಲೆ ಹೇಳಿದಂತೆ ವಿಸ್ತಾರವಾದ ಹೊಸ ಪ್ರದೇಶದಲ್ಲಿ ನಿರ್ಮಾಣವಾಗದೆ ಇರುವುದಕ್ಕೆ ಕಾರಣವಾಗಿರಲೂಬಹುದು. ಮಂಗಳೂರಿನಂತೆ ಅಮೃತಸರವೂ ಮೆಟ್ರೋಪೊಲಿಟನ್‌ ಅಥವಾ ರಾಜ್ಯವೊಂದರ ರಾಜ್ಯಧಾನಿಯಲ್ಲ. ಮಂಗಳೂರಿಗಿಂತ ಹೆಚ್ಚು ಜನಸಂಖ್ಯೆ ಇರುವುದೇನೋ ಸರಿ. ಮಂಗಳೂರಿನಂತೆ ಅಲ್ಲಿಯದ್ದೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಮಂಗಳೂರು ಕರ್ನಾಟಕದ ಕರಾವಳಿ ಜಿಲ್ಲೆಗಳು ಮತ್ತು ಕೇರಳದ ಉತ್ತರ ಭಾಗಕ್ಕೆ ಸೇವೆ ನೀಡುವಂತೆ ಅಮೃತಸರ ಪಂಜಾಬ್‌, ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರದ ಕೆಲವು ಜಿಲ್ಲೆಗಳಿಗೆ ಪ್ರಯಾಣ ಸೇವೆ ನೀಡುತ್ತದೆ. ಆದರೆ ಅಲ್ಲಿಯ ನಿಲ್ದಾಣ ಬಹಳಷ್ಟು ದೊಡ್ಡದಾಗಿ ವಿಶಾಲವಾಗಿದೆ. ಲಂಡನ್‌ನಿಂದ ದೆಹಲಿಗೆ ಬರುವ / ಹೋಗುವ 300ಕ್ಕಿಂತಲೂ ಅಧಿಕ ಸಂಖ್ಯೆಯ ಪ್ರಯಾಣಿಕರನ್ನು ಹೊತ್ತೂಯ್ಯಬಲ್ಲ ಬೋಯಿಂಗ್‌ 787 ಡ್ರೀಮ್‌ಲೈನರ್‌ನಂತಹ ವಿಮಾನಗಳು ಅಮೃತಸರದಲ್ಲಿಳಿಯುತ್ತವೆ. ಕೆನಡಾ ಮತ್ತಿತರ ದೂರದ ದೇಶಗಳಿಗೂ ನೇರ ವಿಮಾನಯಾನವಿದೆ. ಅಮೃತಸರದಲ್ಲಿ ನಿಲುಗಡೆ ನೀಡಿ, ಪ್ರಯಾಣಿಕರನ್ನು ಇಳಿಸಿ / ಹತ್ತಿಸಿ ದೆಹಲಿ ಅಥವಾ ಇತರೆಡೆಗೆ ತೆರಳುತ್ತವೆ. ಅಲ್ಲಿಂದ ಅಮೃತಸರಕ್ಕೆ ಬಂದು ಲಂಡನ್‌ ಅಥವಾ ಇತರೆಡೆಗೆ ಸಾಗುತ್ತವೆ. ಪಂಜಾಬಿನಲ್ಲಿ ಪಕ್ಷಗಳು ಯಾವುದೇ ಇರಲಿ ಊರಿಗಾಗಿ, ಜನರಿಗಾಗಿ ಸವಲತ್ತುಗಳನ್ನು ತರಬಲ್ಲವರು ಇರುವುದರಿಂದಲೇ ಇದು ಸಾಧ್ಯವಾಗಿದೆ ಎನ್ನಬಹುದು. 

ಮಂಗಳೂರು ವಿಮಾನ ನಿಲ್ದಾಣ ಈಗ ಅಂತಾರಾಷ್ಟ್ರೀಯವೆನಿಸಿದ್ದರೂ ಕೇವಲ ಕೊಲ್ಲಿ ರಾಷ್ಟ್ರಗಳ ವಿಮಾನಗಳ ಹಾರಾಟಕ್ಕೆ ಸೀಮಿತವಾಗಿದೆ. ಆ ವಿಮಾನಗಳೂ ವಿಮಾನಯಾನ ಸಂಸ್ಥೆಗಳ ಮರ್ಜಿಗನುಸಾರ ಆಗಮಿಸಿ – ನಿರ್ಗಮಿಸುತ್ತವೆಯೇ ಹೊರತು ಪ್ರಯಾಣಿಕರ ಹಿತದೃಷ್ಟಿಯಿಂದಲ್ಲವೆಂಬ ದೂರುಗಳಿವೆ. ಮಂಗಳೂರು ಕುವೈಟ್‌ ಯಾನ ಇದಕ್ಕೊಂದು ನಿದರ್ಶನ. ಪ್ರಯಾಣಿಕರ ಬಾಹುಳ್ಯದ ದುಬಾಯಿ ಮಾರ್ಗದಲ್ಲಿಯೂ ಮಂಗಳೂರಿನಿಂದ ನೇರ ಪ್ರಯಾಣದ ಬದಲು ಮುಂಬಾಯಿ ಮೂಲಕ ಪ್ರಯಾಣಿಸಲು ಒತ್ತಡ ಹೇರುವ ವಿಮಾನಯಾನ ಸಂಸ್ಥೆಗಳೂ ಇವೆ. ಲಂಡನ್‌ ಅಥವಾ ನ್ಯೂಯಾರ್ಕ್‌ನಿಂದ ಆಗಮಿಸಿ ಮಂಗಳೂರಲ್ಲಿ ನಿಲುಗಡೆ ನೀಡಿ ಬೆಂಗಳೂರಿಗೋ ಅಥವಾ ಚೆನ್ನೈಗೋ ಹೊರಡುವ ಮಾತು ಒತ್ತಟ್ಟಿಗಿರಲಿ, ಮಂಗಳೂರಿನಿಂದ ನೇರ ಮಲೇಷ್ಯಾ ಅಥವಾ ಸಿಂಗಾಪುರಕ್ಕೆ ತೆರಳುವ ಅವಕಾಶವಿದೆಯೇ? 

ಕೆಲವು ವಿಮಾನಯಾನ ಸಂಸ್ಥೆಗಳು ವರ್ಷದಲ್ಲಿ ಕೆಲವೊಮ್ಮೆ ದೇಶದ ಕೆಲವೊಂದು ಮಾರ್ಗಗಳಲ್ಲಿ ದರ ಇಳಿಸುತ್ತವೆ. ಆದರೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಅಥವಾ ಇಲ್ಲಿಂದ ತೆರಳುವ ಪ್ರಯಾಣಕ್ಕೆ ದರ ಕಡಿತ ಇರುವುದೇ ಇಲ್ಲ. ಕಾರಣ ಪ್ರಯಾಣಿಕರ ಅಗತ್ಯ ಮಾರ್ಗಗಳಲ್ಲಿ ಮಾತ್ರ ಮಂಗಳೂರಿನಿಂದ ದೇಶೀಯ (ಹೆಚ್ಚಾಗಿ ಬೆಂಗಳೂರು ಮತ್ತು ಮುಂಬಯಿ) ಅಥವಾ ಅಂತಾರಾಷ್ಟೀಯ(ಕೊಲ್ಲಿ ರಾಷ್ಟ್ರಗಳು) ವಿಮಾನ ಸೌಲಭ್ಯವಿದ್ದು, ಜನರು ಅದನ್ನು ಬಳಸಲೇಬೇಕಾದ ಅನಿವಾರ್ಯತೆಯನ್ನು ವಿಮಾನಯಾನ ಸಂಸ್ಥೆಗಳು ಮನಗಂಡಿವೆ. ಮಂಗಳೂರಿನಿಂದ ಬೆಂಗಳೂರಿಗೋ ಅಥವಾ ಮುಂಬಾಯಿಗೋ ಪ್ರಯಾಣಿಸ‌ಲು ತೆರುವುದಕ್ಕಿಂತ ಕಡಿಮೆ ದರದಲ್ಲಿ ಬೆಂಗಳೂರಿನಿಂದ ಅಥವಾ ಮುಂಬಾಯಿಯಿಂದ ವಿದೇಶಗಳಿಗೆ ವಿಮಾನಯಾನ ಕೈಗೊಳ್ಳಬಹುದು. ದರ ಕಡಿತವಿದ್ದರೆ ಹೆಚ್ಚೆಚ್ಚು ಜನ ವಿಮಾನಯಾನವನ್ನು ಬಳಸುವ ಸಾಧ್ಯತೆಯಿರುತ್ತದೆ. 

ಕರಾವಳಿ ಪ್ರದೇಶದ ಜನ ಹೆಚ್ಚಾಗಿರುವ ಮುಂಬಯಿಯಂತಹ ನಗರಗಳಿಂದ/ಗಳಿಗೆ ಅಪರಾಹ್ನದೊಳಗೆ ಆಗಮಿಸುವ ಅಥವಾ ನಿರ್ಗಮಿಸುವ ಮತ್ತು ಸಾಯಂಕಾಲ / ರಾತ್ರಿಯೊಳಗೆ ನಿರ್ಗಮಿಸುವ ಅಥವಾ ಆಗಮಿಸುವ ವ್ಯವಸ್ಥೆ ಇದ್ದರೆ ವ್ಯವಹಾರ / ಮದುವೆಯಂತಹ ಕಾರ್ಯಕ್ರಮಗಳ ಸಲುವಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತದೆ. ಕೆಲವು ವರ್ಷಗಳ ಹಿಂದೆ ಈ ರೀತಿಯ ಅನುಕೂಲದ ಕಾರಣ ಮುಂಬಯಿಯಿಂದ ಅನೇಕರು ಮಂಗಳೂರಿಗೆ ಆಗಮಿಸಿ, ಅದೇ ರಾತ್ರಿ ವಾಪಸು ತೆರಳುತ್ತಿದ್ದರು. ಈಗ ಈ ರಾತ್ರಿ ಸವಲತ್ತು ಇಲ್ಲದ ಕಾರಣ ಅನೇಕರು ಪ್ರಯಾಣಿಸುವುದಿಲ್ಲ.
 
ವಿಮಾನ ನಿಲ್ದಾಣದಿಂದ ಬರುವ / ಸಾಗುವ ರಸ್ತೆಯ ಮೂಲಕ ದೂರದೂರುಗಳಿಂದ ಮೊದಲ ಬಾರಿ ಬರುವ ಪ್ರಯಾಣಿಕರು ಸಂಬಂಧಿತ ನಗರದ ಪ್ರಗತಿಯನ್ನು ಅಳೆಯುತ್ತಾರೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮಂಗಳೂರು ವಿಮಾನ ನಿಲ್ದಾಣ ನಗರದಿಂದ ಸುಮಾರು ಹದಿನೆಂಟು ಕಿ.ಮೀ.ಗಳಷ್ಟು ದೂರವಿದೆ. ನಗರದಿಂದ ವಿಮಾನ ನಿಲ್ದಾಣಕ್ಕೆ ಸಾಗುವಾಗ ಮಹಾನಗರ ಪಾಲಿಕೆ ಸರಹದ್ದುವರೆಗೇನೋ ಕಾಂಕ್ರೀಟಿಕರಣಗೊಂಡಿರುವ, ರಸ್ತೆ ನಡುವೆ ವಿಭಾಜಕವಿರುವ ಉತ್ತಮವೆನ್ನಬಹುದಾದ ರಸ್ತೆಯಿದೆ. ಆದರೆ ಅದರ ಬಳಿಕ‌ ರಸ್ತೆಯ ಅವಸ್ಥೆ ಹೇಳುವುದು ಬೇಡ. ವಿಭಾಜಕವಿಲ್ಲದ, ಗುಂಡಿಗಳಿಂದ ಕೂಡಿದ ವಿಶಾಲವಲ್ಲದ ರಸ್ತೆಯಲ್ಲಿ ಎದುರುಗಡೆಯಿಂದ ಅಪ್ಪಳಿಸಲು ಬರುತ್ತವೆಯೇ ಎನ್ನುವಂತೆ ವೇಗವಾಗಿ ಚಲಿಸುವ ವಾಹನಗಳನ್ನು ಕಾಣುವಾಗ ಎಂತಹ ಧೈರ್ಯವುಳ್ಳವರೂ ಹೆದರಲೇಬೇಕಾದ ವಿಷಯ. ಅಸ್ಸಾಮಿನ ದಿಬ್ರೂಘಡ ಮಂಗಳೂರಿಗಿಂತ ಸಣ್ಣ ನಗರ. ಒಟ್ಟಾರೆಯಾಗಿ ಆ ಊರು ಕರಾವಳಿಗಿಂತ ಹಿಂದುಳಿದಿದ್ದರೂ ವಿಮಾನ ನಿಲ್ದಾಣದಿಂದ ನಗರ ಸಂಪರ್ಕಿಸುವ ರಸ್ತೆ ಚೆನ್ನಾಗಿದೆ. 

ಮಂಗಳೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿಯ ಆರಂಭದ ಜೊತೆಯೇ ನಗರದೊಂದಿಗಿನ ಸಂಪರ್ಕ ರಸ್ತೆಯ ಅಭಿವೃದ್ಧಿ ಬಗ್ಗೆ ಬೇಡಿಕೆ ಇತ್ತು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ಪ್ರಯತ್ನ ಪಟ್ಟಿದ್ದ ಮಂಗಳೂರಿನ ಕೆನರಾ ವಾಣಿಜ್ಯೋದ್ಯಮ ಮಂಡಳಿ ರಸ್ತೆ ಬಗ್ಗೆಯೂ ಕನಿಷ್ಟ ಹತ್ತಿಪ್ಪತ್ತು ವರ್ಷಗಳಿಂದ ಮನವಿ ನೀಡಿದೆ ಮತ್ತು ಜನಪ್ರತಿನಿಧಿಗಳು / ಅಧಿಕಾರಸ್ಥರು ಅದು ಆಗಿಯೇ ಆಗುತ್ತದೆ ಎನ್ನುವ ರೀತಿ ಅಲ್ಲಿ ಭಾಷಣ ಬಿಗಿದಿದ್ದಾರೆ. ಆದರೆ ಉತ್ತಮ ರಸ್ತೆ ಎನ್ನುವುದು ಕನಸಾಗಿಯೇ ಉಳಿದಿದೆ. ಕೆಲವು ವರ್ಷಗಳ ಹಿಂದೆ ಮಂಗಳೂರು ವಿಮಾನ ನಿಲ್ದಾಣದಿಂದ ಮಣಿಪಾಲಕ್ಕೆ ರಾಷ್ಟ್ರೀಯ ಹೆದ್ದಾರಿ ಸಮಾನಾಂತರವಾಗಿ ಒಳಭಾಗದಿಂದ ಎಕ್ಸ್‌ಪ್ರೆಸ್‌ ಹೈವೇ ನಿರ್ಮಿಸುವ ಯೋಜನೆ ಸಲುವಾಗಿ ಸರಕಾರದ ವತಿಯಿಂದ ಸರ್ವೆ ನಡೆಸಲಾಯಿತು. ಈ ಹೆದ್ದಾರಿ ನಿರ್ಮಾಣವಾಗಿದ್ದರೆ ಪ್ರಯಾಣ ಸಮಯದಲ್ಲಿ ಬಹಳಷ್ಟು ಕಡಿತವಾಗುತ್ತಿತ್ತು. ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿತ್ತು. ಬಹುಶಃ ಆ ಯೋಜನೆ ಸರ್ವೆ ಹಂತದಲ್ಲೇ ಉಳಿದಿದೆ. 

ನಗರದಿಂದ ದೂರವಿರುವ ವಿಮಾನ ನಿಲ್ದಾಣಕ್ಕೆ ತೆರಳಲು/ವಿಮಾನ ನಿಲ್ದಾಣದಿಂದ ಆಗಮಿಸಲು ರೈಲ್ವೆ ನಿಲ್ದಾಣ ಸವಲತ್ತು ಇದ್ದರೆ ವಿಮಾನ ನಿಲ್ದಾಣದ ಅಭಿವೃದ್ಧಿಗೆ ತುಂಬಾ ಅನುಕೂಲ. ಮಂಗಳೂರು ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ ಸಿಗಲಿದೆ ಎನ್ನಲಾಗಿದೆ. ಆದರೆ ಅದಕ್ಕಾಗಿ ಇನ್ನೆಷ್ಟು ವರ್ಷ ಕಾಯಬೇಕೋ? ಕನಿಷ್ಟ ಪಕ್ಷ ಸಾರ್ವಜನಿಕ ಸಾರಿಗೆಯ ಉತ್ತಮ ಬಸ್‌ ವ್ಯವಸ್ಥೆಯನ್ನಾದರೂ ಏರ್ಪಡಿಸಿದರೆ ಪ್ರಯಾಣಿಕರಿಗೆ ಅನುಕೂಲ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ರೀತಿಯ ವ್ಯವಸ್ಥೆ ಇದೆ. ಟ್ಯಾಕ್ಸಿ ವ್ಯವಸ್ಥೆಯಲ್ಲಿಯೂ ಮಂಗಳೂರು ವಿಮಾನ ನಿಲ್ದಾಣ ಪ್ರಯಾಣಿಕರ ಆಯ್ಕೆಗೆ ಒತ್ತು ನೀಡಿಲ್ಲ. ಪರಂಪರಾಗತ ಟ್ಯಾಕ್ಸಿ ವ್ಯವಸ್ಥೆಯನ್ನೇ ನೆಚ್ಚಿಕೊಂಡಿದೆ. ಹೊಸ ಹೊಸ ಸಂಗತಿಗಳು ಘಟಿಸುತ್ತಾ ಇರುವ ಈಗಿನ ಕಾಲದಲ್ಲಿ ಹೆಚ್ಚಿನ ವಿಚಾರಗಳು ಆ್ಯಪ್‌ ಆಧಾರಿತವಾಗಿ ನಡೆಯುತ್ತವೆ. ಆದರೆ ಟ್ಯಾಕ್ಸಿ ವಿಚಾರದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದಕ್ಕೆ ಅಪವಾದ. ಆ್ಯಪ್‌ ಆಧಾರಿತ ಟ್ಯಾಕ್ಸಿ ವ್ಯವಸ್ಥೆಗೆ ಬಲ ನೀಡದ ಕಾರಣ ನಿಲ್ದಾಣದ ಪರಂಪರಾಗತ ಟ್ಯಾಕ್ಸಿ ಚಾಲಕರು ಮತ್ತು ಆ್ಯಪ್‌ ಆಧಾರಿತ ಟ್ಯಾಕ್ಸಿ ವ್ಯವಸ್ಥೆಯ ನಡುವೆ ಆಗಾಗ ಘರ್ಷಣೆಗಳು ನಡೆಯುತ್ತವೆ. ಪರಂಪರಾಗತ ಟ್ಯಾಕ್ಸಿ ಚಾಲಕರ ಹಿತಕ್ಕಾಗಿ ವಿಮಾನ ನಿಲ್ದಾಣ ಅಭಿವೃದ್ಧಿಯನ್ನು ಬಲಿಕೊಡುವುದು ಸರಿಯಲ್ಲ. ಅವರ ಹಿತಕ್ಕಾಗಿ ವಿಮಾನ ನಿಲ್ದಾಣ ಪ್ರಾಧಿಕಾರ / ಸರಕಾರ ಬದಲಿ ವ್ಯವಸ್ಥೆ ಕೈಗೊಳ್ಳಲಿ ಮತ್ತು ವಿಮಾನ ನಿಲ್ದಾಣದ ಬೆಳವಣಿಗೆ ದೃಷ್ಟಿಯಿಂದ ಇತರೆಡೆ ಇರುವಂತೆ ಮಂಗಳೂರು ವಿಮಾನ ನಿಲ್ದಾಣದಲ್ಲಿಯೂ ಆ್ಯಪ್‌ ಆಧಾರಿತ ಟ್ಯಾಕ್ಸಿ ವ್ಯವಸ್ಥೆಗೆ ಅನುವು ಮಾಡಿಕೊಡಲಿ.

ಯಾವುದೇ ನಗರದಲ್ಲಿರುವ ವಿಮಾನ ನಿಲ್ದಾಣ ಬೆಳೆಯಬೇಕಾದರೆ ನಗರವೂ ಬೆಳೆದಿರಬೇಕು / ಬೆಳೆಯುತ್ತಾ ಇರಬೇಕು. ಕೈಗಾರಿಕೆಗಳು / ವ್ಯಾಪಾರ ಉದ್ದಿಮೆ ಸಾಕಷ್ಟು ಪ್ರಮಾಣದಲ್ಲಿದ್ದು ಇನ್ನೂ ಹೆಚ್ಚುತ್ತಿರಬೇಕು. ಇದು ಆಗಬೇಕಾದರೆ ಆಳುವವರು ಮೂಲಭೂತ ಸವಲತ್ತುಗಳನ್ನು ಒದಗಿಸಿಕೊಡಬೇಕು. ಕೇಂದ್ರ / ರಾಜ್ಯಗಳ ಜನಪ್ರತಿನಿಧಿಗಳು ಇಂತಹ ಸವಲತ್ತುಗಳಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಆದರೆ ಇವುಗಳನ್ನು ಒದಗಿಸಿಕೊಡುವಲ್ಲಿ ನಮ್ಮನ್ನಾಳಿದವರು /ನಮ್ಮನ್ನಾಳುವವರು ಸಫ‌ಲರಾಗಿದ್ದಾರೆಯೇ?
 
ಅಭಿವೃದ್ಧಿಯಲ್ಲಿ ನಮ್ಮ ರಾಜ್ಯದಲ್ಲಿ ಬೆಂಗಳೂರು ಬಳಿಕ ಮಂಗಳೂರು ಎನ್ನಲಾಗುತ್ತದೆ. ಆದರೆ ಬೆಂಗಳೂರಿನ ಅಭಿವೃದ್ಧಿಯೊಂದಿಗೆ ಮಂಗಳೂರನ್ನು ಹೋಲಿಸಲಾದಿತೇ? ಹಾಗೆ ಅಭಿವೃದ್ಧಿಯಾಗಿದ್ದರೆ ಇನ್ನಷ್ಟು ವ್ಯಾಪಾರ ವ್ಯವಹಾರಗಳು, ಕೈಗಾರಿಕೆಗಳು ಮಂಗಳೂರಿನೆಡೆಗೆ ಮುಖ ಮಾಡುತ್ತಿದ್ದವು. ಆದರೆ ಈಗೇನಾಗಿದೆ? ಇಲ್ಲೇ ಹುಟ್ಟಿ ಬೆಳೆದ ಬ್ಯಾಂಕ್‌ನಂತಹ ಆರ್ಥಿಕ ಸಂಸ್ಥೆಗಳು / ಮಂಗಳೂರಿನ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟು ಆರಂಭವಾದ ಸಾಫ್ಟ್ವೇರ್‌ ಕಂಪೆನಿಗಳು ಮಂಗಳೂರನ್ನು ಬಿಟ್ಟು ಬೇರೆಡೆ ತೆರಳಬಹುದು ಎನ್ನಲಾಗುತ್ತಿದೆ. ಕರಾವಳಿಯಲ್ಲಿ ಶಿಕ್ಷಣಾವಕಾಶಗಳೇನೋ ವಿಪುಲವಾಗಿವೆ. ಆದರೆ ಕರಾವಳಿಯ ಯುವಜನರು ಉದ್ಯೋಗಗಳನ್ನರಸಿ ಬೆಂಗಳೂರು ಮತ್ತಿತರ ಭಾರತದ ನಗರಗಳಿಗೆ ಮತ್ತು ವಿದೇಶಗಳಿಗೆ ತೆರಳುತ್ತಿರುವುದನ್ನು ಕಾಣುವಾಗ ಮಂಗಳೂರು ನರೆತ ಕೂದಲ ಜನರ ನಗರವಾಗಲು ಹೆಚ್ಚಿನ ವರ್ಷಗಳು ಬೇಕಿಲ್ಲ ಅನಿಸುತ್ತದೆ. 

ವಿಮಾನ ನಿಲ್ದಾಣ ಬೆಳವಣಿಗೆಯಲ್ಲಿ ಪ್ರವಾಸೋದ್ಯಮದ ಪಾಲು ಬಹಳಷ್ಟಿದೆ. ಪ್ರವಾಸೋದ್ಯಮದ ಬಗ್ಗೆ ಅದರಲ್ಲಿಯೂ ಬೀಚ್‌, ಮೆಡಿಕಲ್‌ ಪ್ರವಾಸೋದ್ಯಮದ ಬಗ್ಗೆ ಕಳೆದ ವರ್ಷಗಳಲ್ಲಿ ದ.ಕ., ಉಡುಪಿ ಜಿಲ್ಲೆಗಳಲ್ಲಿ ಬಹಳಷ್ಟು ಮಾತಾಡಲಾಗಿದೆ. ಆದರೆ ನೆರೆಯ ಕೇರಳಕ್ಕೆ ಹೋಲಿಸುವಾಗ ಪ್ರವಾಸೋದ್ಯಮ ಮಾತ್ರ ಬೆಳೆದಿಲ್ಲ. ಸದ್ಯ ಈ ಬೆಳವಣಿಗೆಯ ಆಶಾಕಿರಣವೂ ಕಾಣುತ್ತಿಲ್ಲ. ಮಂಗಳೂರಿನಲ್ಲಿ ಪಂಚತಾರಾ ಸ್ಥಾನಮಾನದ ಯಾವುದೇ ಹೋಟೆಲ್‌ / ರಿಸೋರ್ಟ್‌ ಇಲ್ಲ. ಇದಕ್ಕಾಗಿ ಕಾಸರಗೋಡು ಜಿಲ್ಲೆಯ ಬೇಕಲಕ್ಕೆ ತೆರಳುವವರೂ ಇದ್ದಾರೆ. ಸರಕಾರದ ಪ್ರವಾಸೋದ್ಯಮ ಇಲಾಖೆಯ ಮೂಲಕವಾದರೂ ಮಂಗಳೂರು ಸುತ್ತಮುತ್ತ ಪಂಚತಾರಾ ಹೋಟೇಲೊಂದನ್ನು ಆರಂಭಿಸಬೇಕಾದ ಅನಿವಾರ್ಯತೆಯಿದೆ. ವಿಮಾನ ನಿಲ್ದಾಣ ಪ್ರವೇಶಾವಧಿಯ ಮುಂಚಿತವಾಗಿ ತಮ್ಮ ಅನುಕೂಲಕ್ಕೆ ತಕ್ಕಂತೆ ಆಗಮಿಸುವ ದೂರದೂರುಗಳ ಪ್ರಯಾಣಿಕರ ಹಿತದೃಷ್ಟಿಯಿಂದ ವಿಮಾನ ನಿಲ್ದಾಣದಲ್ಲಿ ಅಥವಾ ಸನಿಹದಲ್ಲಿ ಡೇ ಹೋಟೆಲ್‌ ಅಥವಾ ಕನಿಷ್ಟ ಯಾತ್ರಿ ನಿವಾಸ್‌ ಮಾದರಿಯ ವ್ಯವಸ್ಥೆ ನೀಡಬೇಕಾದ ಅಗತ್ಯವೂ ಇದೆ.

ಮಂಗಳೂರು ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಸ್ಥಾನಮಾನಕ್ಕೇರಿದ ಬಳಿಕ ಕಳೆದ ವರ್ಷಗಳಲ್ಲಿ ಬೆಳೆದಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ಯೋಗ್ಯ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಮುಂದಕ್ಕೂ ಇದೇ ಪರಿಸ್ಥಿತಿ ಇರಬೇಕೆಂದೇನೂ ಇಲ್ಲ. ಕಣ್ಣೂರು ವಿಮಾನ ನಿಲ್ದಾಣ ಮಂಗಳೂರಿನ ವಿಮಾನ ನಿಲ್ದಾಣದ ಅಭಿವೃದ್ಧಿಯ ಕುಂಠಿತಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾರಣವಾಗಲೂಬಹುದು ಎನ್ನುವ ವಿಚಾರವನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ. 

– ಎಚ್‌.ಆರ್‌.ಆಳ್ವ 

ಟಾಪ್ ನ್ಯೂಸ್

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.