CONNECT WITH US  

ಮಾತೃಪೂರ್ಣ ಯೋಜನೆ ಶೀಘ್ರ ಜಾರಿ

ಶಿವಮೊಗ್ಗ: ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಮಧ್ಯಾಹ್ನ ಪೌಷ್ಟಿಕ ಊಟ ಹಾಗೂ ಕಬ್ಬಿಣಾಂಶದ ಮಾತ್ರೆಯನ್ನು ಒದಗಿಸುವ ರಾಜ್ಯ ಸರ್ಕಾರದ
ಮಾತೃಪೂರ್ಣ ಯೋಜನೆ ಜಿಲ್ಲೆಯಲ್ಲಿ ಅ. 2 ರಿಂದ ಜಾರಿಯಾಗಲಿದ್ದು, ಇದಕ್ಕಾಗಿ ಎಲ್ಲಾ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ| ಎಂ. ಲೋಕೇಶ್‌ ಸೂಚನೆ ನೀಡಿದರು.

ಸೋಮವಾರ ತಮ್ಮ ಕಚೇರಿಯಲ್ಲಿ ಮಾತೃಪೂರ್ಣ ಯೋಜನೆ ಜಾರಿ ಕುರಿತಾಗಿ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು. ರಾಜ್ಯ ಸರ್ಕಾರ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆ ಅನ್ವಯ ಗರ್ಭಿಣಿ ಹಾಗೂ ಬಾಣಂತಿಯರಿಗೆ ಅವರ ವಾಸದ ವ್ಯಾಪ್ತಿಯ ಅಂಗನವಾಡಿಗಳಲ್ಲಿ ಮಧ್ಯಾಹ್ನ ಅನ್ನ, ಸಾಂಬಾರ್‌, ಪಲ್ಯ, ಬೇಯಿಸಿದ ಮೊಟ್ಟೆ, 200 ಮಿ.ಲೀ ಹಾಲು ಹಾಗೂ ಚಿಕ್ಕಿ ನೀಡಲಾಗುವುದು. ಮೊಟ್ಟೆ ಸೇವಿಸದವರಿಗೆ ಮೊಳಕೆ ಭರಿಸಿದ ಕಾಳು ನೀಡಲಾಗುವುದು. ಊಟದ ನಂತರ ಕಬ್ಬಿಣಾಂಶದ ಮಾತ್ರೆಯನ್ನು ನೀಡಲಾಗುವುದು ಎಂದು ಹೇಳಿದರು.

ಪ್ರೋತ್ಸಾಹ ಧನ: ಈ ಯೋಜನೆ ಅನುಷ್ಠಾನಗೊಳಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಗೆ ಈಗ ನೀಡುತ್ತಿರುವ ಗೌರವಧನದ ಜೊತೆಗೆ ತಿಂಗಳಿಗೆ 500 ರೂ. ಹಾಗೂ ಅಂಗನವಾಡಿ ಸಹಾಯಕಿಗೆ 250 ರೂ. ಪ್ರೋತ್ಸಾಹ ಧನ ನೀಡಲಾಗುವುದು. ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಸೇವೆ
ಸಲ್ಲಿಸುವ ಸಹಾಯಕಿಯರಿಗೆ 200 ರೂ. ಪ್ರೋತ್ಸಾಹ ಧನ ನೀಡಲಾಗುವುದು ಎಂದರು.

ಕಾರ್ಯಕ್ರಮದ ಅಡಿ ಪ್ರತಿ ಫಲಾನುಭವಿಗೆ 21 ರೂ. ವೆಚ್ಚ ಮಾಡಲಾಗುತ್ತಿದೆ. ಪಾತ್ರೆ ಇತ್ಯಾದಿಗಳನ್ನು ಖರೀದಿಸಲು ತಾಲೂಕು ಮಟ್ಟದಲ್ಲಿ ಟೆಂಡರ್‌ ಕರೆಯಲಾಗುವುದು. ಇದಕ್ಕಾಗಿ ಪ್ರತಿ ಅಂಗನವಾಡಿಗೆ ಒಂದು ಬಾರಿಗೆ 7 ಸಾವಿರ ರೂ. ಹಾಗೂ ಮಿನಿ ಅಂಗನವಾಡಿಗೆ 5 ಸಾವಿರ ರೂ. ನೀಡಲಾಗುವುದು. ಪ್ರಸ್ತುತ ಜಿಲ್ಲೆಯಲ್ಲಿ 12403 ಗರ್ಭಿಣಿಯರು ಹಾಗೂ 12916 ಬಾಣಂತಿಯರು ಸೇರಿದಂತೆ 25319 ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಅಂಗನವಾಡಿಗಳು ದೂರ ಇರುವ ಕಡೆಗಳಲ್ಲಿ ತುಂಬು ಗರ್ಭಿಣಿಯರು ಹಾಗೂ ಬಾಣಂತಿಯರು ಅಂಗನವಾಡಿ ಕೇಂದ್ರಗಳಿಗೆ ಬಂದು ಆಹಾರ ಸೇವಿಸುವುದು ಕಷ್ಟವಾಗಬಹುದು ಎಂದು ಕೆಲವು ತಾಲೂಕು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಅರ್ಹ ಫಲಾನುಭವಿಗಳು ಆಹಾರ ಸೇವಿಸುವುದನ್ನು ಖಾತ್ರಿಪಡಿಸಲು ಈ ಯೋಜನೆ ಅಡಿ ಫಲಾನುಭವಿಗಳು ಅಂಗನವಾಡಿ ಕೇಂದ್ರಕ್ಕೆ ಬಂದು ಆಹಾರ ಸೇವಿಸಬೇಕಾಗಿದೆ ಎಂದು ಸ್ಪಷ್ಟಪಡಿಸಿದರು.

ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರಿಗೆ ಒಂದು ದಿನಕ್ಕೆ ಬೇಕಾಗಿರುವ ಪ್ರೊಟೀನ್‌ ಮತ್ತು ಕ್ಯಾಲ್ಸಿಯಂ ಮತ್ತು ಕ್ಯಾಲರಿ ಅಂಶಗಳಲ್ಲಿ ಸುಮಾರು ಶೇ. 40ರಿಂದ 45ಅಂಶಗಳಷ್ಟು ಈ ಒಂದು ಪೂರ್ಣ ಪೌಷ್ಟಿಕ ಊಟದಿಂದ ಒದಗಿಸಿದಂತಾಗುತ್ತದೆ. ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ತಾಯಿ ಮತ್ತು ಮಕ್ಕಳ  ಆರೋಗ್ಯಕ್ಕೆ ಸಂಬಂಧಿಸಿದಂತೆ ರಾಜ್ಯದ ಆರೋಗ್ಯ ಸೂಚ್ಯಾಂಕ ಕಡಿಮೆಯಿದೆ. ಮಾತೃಪೂರ್ಣ ಯೋಜನೆಯ ಸಮರ್ಪಕ ಅನುಷ್ಠಾನದಿಂದ ಇದರಲ್ಲಿ ಪ್ರಗತಿ ಸಾಧ್ಯ ಎಂದು ಹೇಳಿದರು. 

ರಕ್ತ ಹೀನತೆ ಪ್ರಕರಣಗಳು ಹೆಚ್ಚು: ಹೆರಿಗೆ ಸಂದರ್ಭದಲ್ಲಿ ಸಂಭವಿಸುವ ಬಹುತೇಕ ತಾಯಿ ಮರಣಗಳು ರಕ್ತ ಹೀನತೆಯಿಂದ ಸಂಭವಿಸಿರುತ್ತವೆ. ಜಿಲ್ಲೆಯಲ್ಲಿ ಪ್ರಸ್ತುತ 395 ಗರ್ಭಿಣಿಯರಲ್ಲಿ ಹಿಮೊಗ್ಲೋಬಿನ್‌ ಅಂಶ 7ಕ್ಕಿಂತಲೂ ಕಡಿಮೆಯಿದೆ. ಪೌಷ್ಟಿಕಾಂಶಯುತ ಆಹಾರ ಹಾಗೂ ಕಬ್ಬಿಣಾಂಶದ ಮಾತ್ರೆ ಸೇವನೆಯಿಂದ ಇದನ್ನು ಸರಿಪಡಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಜೇಶ್‌ ಸುರಗಿಹಳ್ಳಿ ತಿಳಿಸಿದರು.

ಜಿಪಂ ಸಿಇಒ ರಾಕೇಶ್‌ ಕುಮಾರ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶೇಷಪ್ಪ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. 


Trending videos

Back to Top