CONNECT WITH US  

ಮಳೆಹಾನಿ ವರದಿ ಸರ್ಕಾರಕ್ಕೆ ಸಲ್ಲಿಸಿ

ಸೊರಬ: ತಾಲೂಕಿನಲ್ಲಿ ಮಳೆಹಾನಿಯಿಂದ ಉಂಟಾಗಿರುವ ಬೆಳೆ ನಷ್ಟದ ಬಗ್ಗೆ ರೈತರಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ರೈತರ ಸಂಕಷ್ಟಗಳಿಗೆ ನೆರವಾಗುವ ಜೊತೆಗೆ ಸೂಕ್ತ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕೆಂದು ವಿಧಾನಸಭೆ ವಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಶುಕ್ರವಾರ ತಾಲೂಕಿನಲ್ಲಿ ಮಳೆಯಿಂದಾಗಿ ವರದಾ ನದಿಯಿಂದ ಜಲಾವೃತವಾದ ಬೆಳೆ ಹಾನಿ ಪ್ರದೇಶಗಳಾದ ಜೋಳದಗುಡ್ಡೆ, ಚಂದ್ರಗುತ್ತಿ, ಅಂದವಳ್ಳಿ, ಕಡಸೂರು, ಕತವಾಯಿ, ತಟ್ಟಿಕೆರೆ ಗ್ರಾಮಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು. 

ತಾಲೂಕಿನಲ್ಲಿ ವರದಾ ನದಿ ಪ್ರವಾಹದಿಂದ ಸುಮಾರು 2ಸಾವಿರ ಎಕರೆ ರೈತರ ಜಮೀನುಗಳಿಗೆ ಹಾನಿಯಾಗಿದ್ದು, ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿ, ಪ್ರತಿ ವರ್ಷ ಅತಿವೃಷ್ಟಿ, ಅನಾವೃಷ್ಟಿಯಿಂದ ಈ ಭಾಗದ ರೈತರು ಬೆಳೆ ಕಳೆದುಕೊಳ್ಳುವ ಜೊತೆಗೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಶಾಶ್ವತ ಪರಿಹಾರ ಕಂಡು ಹಿಡಿಯುವಲ್ಲಿ
ಚಿಂತಿಸಲಾಗಿದೆ ಎಂದರು.

ತಾಲೂಕಿನ ಜನರು ಕುಮಾರ್‌ ಬಂಗಾರಪ್ಪ ಅವರ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದ್ದಾರೆ. ಜನರ ನಂಬಿಕೆಗೆ ಅನುಗುಣವಾಗಿ ತಾಲೂಕಿನ ಅಭಿವೃದ್ಧಿಗೆ ಸರ್ಕಾರದಿಂದ ಆಗುವ ಯೋಜನೆಗಳಿಗೆ ಹಾಗೂ ಆಗಬೇಕಾದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಶ್ರಮಿಸಲಿದ್ದಾರೆ. ದಂಡಾವತಿ ಯೋಜನೆ ಜೊತೆಗೆ ನದಿಗಳಿಗೆ ಅಡ್ಡಲಾಗಿ ಚೆಕ್‌ ಡ್ಯಾಂ ನಿರ್ಮಿಸಿ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದರು.

ಸರ್ಕಾರ ಜನಹಿತ ಕಾಯುವ ಬದಲು ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಲ್ಲಿ ಮೀನಮೇಷ ಎಣಿಸುತ್ತಿದೆ. ರೈತರಿಗೆ ಪೂರಕವಾದ ಯೋಜನೆಗಳ ಬಗ್ಗೆ ಸರ್ಕಾರ ಘೋಷಣೆ ಮಾಡಿಲ್ಲ. ಹದಿನೈದು ದಿನದೊಳಗೆ ರೈತರ ಎಲ್ಲಾ ರೀತಿಯ ಸಾಲವನ್ನು ಮನ್ನಾ ಮಾಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಶಾಸಕ ಕುಮಾರ್‌ ಬಂಗಾರಪ್ಪ, ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ತಾಲೂಕು ಅಧ್ಯಕ್ಷ ಎ.ಎಲ್‌. ಅರವಿಂದ, ತಾಪಂ ಅಧ್ಯಕ್ಷೆ ನಯನಾ, ದತ್ತಾತ್ರಿ, ಶ್ರೀಪಾದ ಹೆಗಡೆ, ತಬಲಿ ಬಂಗಾರಪ್ಪ, ಎಂ.ಡಿ. ಉಮೇಶ್‌, ತಹಶೀಲ್ದಾರ್‌ ಎಲ್‌.ಬಿ. ಚಂದ್ರಶೇಖರ್‌, ತಾಪಂ ಇಒ ಬಸವರಾಜ್‌, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್‌, ದಿವಾಕರ್‌ ಮತ್ತಿತರರು ಇದ್ದರು. 

ಪ್ರಧಾನಿ ನರೇಂದ್ರ ಮೋದಿಯವರ ನಾಲ್ಕು ವರ್ಷಗಳ ಆಡಳಿತ ದೇಶಕ್ಕೆ ಮಾದರಿಯಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೂಮ್ಮೆ ಸ್ಪಷ್ಟ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ.
 ಬಿ.ಎಸ್‌.ಯಡಿಯೂರಪ್ಪ 


Trending videos

Back to Top